Wednesday, December 5, 2007

ಸೌಹಾರ್ದ ಸಾಹಿತ್ಯ ಸಮ್ಮೇಳನ?!

ಕನ್ನಡ ಸಾಹಿತ್ಯ ಸಮ್ಮೇಳನ. ಕನ್ನಡದ ಹಬ್ಬ. ಕನ್ನಡಿಗರಿಗೆ ಹಬ್ಬ. ಉಡುಪಿಯಲ್ಲಿ ನಡೆಯುವ 74ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನೇನೋ ಕೆಲದಿನಗಳಿರಬಹುದು. ಕನ್ನಡ ಹಬ್ಬದ ಸಂಭ್ರಮ ಸವಿಯಲು ನಾವೆಲ್ಲ ಕಾತುರದಿಂದ ಕಾಯುತ್ತಿದ್ದೇವೆ. ಹೌದು! ಕಾಯುತ್ತಿದ್ದೇವೆ. ಇದರ ಜೊತೆ ನಿನ್ನೆ ನನ್ನ ಕಿವಿಗೆ ಬಿದ್ದ ಸುದ್ದಿಯೊಂದು ಅಚ್ಚರಿ ಮೂಡಿಸಿತು. ಅದೇನೆಂದು ಹೇಳುವ ಮೊದಲು ಶಿವಮೊಗ್ಗ ಸಾಹಿತ್ಯ ಸಮ್ಮೇಳನದ ಬಗ್ಗೆ ಹೇಳಬೇಕು.

ಶಿವಮೊಗ್ಗ ಸಾಹಿತ್ಯ ಸಮ್ಮೇಳನದಲ್ಲಿ ವಿಠಲ ಹೆಗಡೆ ಮತ್ತು ಗೌರಿ ಲಂಕೇಶ್ ಅವರನ್ನು ಸಮ್ಮೇಳನಕ್ಕೆ ಆಹ್ವಾನಿಸಿದ ಕಾರಣ, ಸಂಘಪರಿವಾರದವರು ವೇದಿಕೆಯೇರಿ ಗಲಾಟೆ ಎಬ್ಬಿಸಿದ್ದು ಎಲ್ಲರಿಗೂ ತಿಳಿದಿದೆ. ಇಂಥದ್ದೇ ಸನ್ನಿವೇಶವನ್ನು ಇದೀಗ ಕೋಮು ಸೌಹಾರ್ದ ವೇದಿಕೆ ಉಡುಪಿಯಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೋರಿಸಲಿದೆ. ಕಾರಣ? ಸಮ್ಮೇಳನದ ಅಧ್ಯಕ್ಷ ಎಲ್.ಎಸ್. ಶೇಷಗಿರಿರಾಯರು ಸಂಘ ಪರಿವಾರದವರಂತೆ, ಈ ಸಮ್ಮೇಳನದಲ್ಲಿ ಮುಂಚೂಣಿಯಲ್ಲಿರುವವರೆಲ್ಲಾ ಸಂಘಪರಿವಾರದವರಂತೆ. ಆದ್ದರಿಂದ ಕೋಮುಸೌಹಾರ್ದ ವೇದಿಕೆ ಸಾಹಿತ್ಯ ಸಮ್ಮೇಳನಕ್ಕೆ ಮುಂಚೆ ಉಡುಪಿಯಲ್ಲಿಯೇ 'ಸೌಹಾರ್ದ ಸಾಹಿತ್ಯ ಸಮ್ಮೇಳನ' ಹಮ್ಮಿಕೊಂಡಿದೆ ಎಂಬುದು ಸುದ್ದಿ.

ಅಂದು ಸಂಘಪರಿವಾರದವರು ಗಲಾಟೆ ಮಾಡಿದ್ರು, ಅದಕ್ಕೆ ಪ್ರತಿಯಾಗಿ ಈಗ ಕೋಮು ಸೌಹಾರ್ದ ವೇದಿಕೆ ಈ 'ಸೌಹಾರ್ದ ಸಮ್ಮೇಳನ' ಹಮ್ಮಿಕೊಂಡಿದೆ. ವಿವಾದವೇಳಲು ಇಷ್ಟು ಸಾಕು. ಇದು ನಮ್ಮ ಬುದ್ದಿ(ಕನ್ನಡದ ಬಗ್ಗೆ ಅಭಿಮಾನವಿದ್ದವರೂ ಸಾಕಷ್ಟು ಮಂದಿ ಇದ್ದಾರೆ). ಕನ್ನಡದ ಹಬ್ಬ ಅಂದರೆ, ಅದು 5 ಕೋಟಿ ಕನ್ನಡಿಗರಿಗೂ ಸಂತಸ-ಸಂಭ್ರಮದ ದಿನ. ಆದರೆ ಖುಷಿ ಪಡಬೇಕಾದ ನಾವು ನಾವೇ ಕಚ್ಚಾಡಿಕೊಂಡರೆ ಕನ್ನಡದ ಗತಿಯೇನು? ಕನ್ನಡದ ಗತಿಯೇನು ಎಂದು ಕೇಳುವ ಅಗತ್ಯವೇ ಇಲ್ಲ. ಯಾಕೆಂದ್ರೆ ಕನ್ನಡ ಈಗಾಗಲೇ 'ನಿರ್ಗತಿ' ಯಾಗಿದೆ ಎಂಬುದು ನಾವು ನೀವು ಕಾಣುತ್ತಿರುವ ನಗ್ನ ಸತ್ಯ.

ಕನ್ನಡಕ್ಕಾಗಿ ಕೈಯೆತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ
ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ ಪಾಂಚಜನ್ಯ ಮೊಳಗುತ್ತದೆ
ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು, ಅದು ಗೋವರ್ಧನಗಿರಿಯಾಗುತ್ತದೆ

ಒಂದೆಡೆ ಹೀಗೆಂದ ಕುವೆಂಪು ಇನ್ನೊಂದೆಡೆ 'ಬಾರಿಸು ಕನ್ನಡ ಡಿಂಡಿಮ' ಅಂದು ಕನ್ನಡಿಗರ ನರನಾಡಿಗಳಲ್ಲಿ ಕನ್ನಡವನ್ನು ಮಿಡಿಸಿದರು. ಆದರೆ ಈಗಿನ ನಮ್ಮ ಕವಿಗಳು, ಸಾಹಿತಿಗಳು, ಬುದ್ದಿಜೀವಿಗಳೆನಿಸಿಕೊಂಡವರು ಸಿದ್ಧಾಂತಗಳನ್ನು ಮುಂದಿಟ್ಟುಕೊಂಡು ಕನ್ನಡಕ್ಕಾಗಿ ಕೈಯೆತ್ತುವ ಬದಲು, ಕತ್ತಿ ಹಿಡಿದು ಯುದ್ಧಕ್ಕಿಳಿಯುತ್ತಾರೆ. ಯಾರದ್ದೋ ಮೇಲಿನ ಕೋಪವನ್ನು ಯಾರ್ಯಾರ ಮೇಲೋ ತೋರಿಸುತ್ತಾರೆ. ಕೊನೆಗೆ ಎಂಥ ನೀಚಮಟ್ಟಕ್ಕಿಳಿಯುತ್ತಾರೆಂದರೆ ತಮಗೆ ಎದೆ ಹಾಲು ನೀಡಿದ ಭಾರತಮಾತೆಯ ಪೋಟೋ ಇಟ್ಟು 'ಚಪ್ಪಲಿ' ಹಾರ ಹಾಕಿದ 'ನೀಚರೂ' ನಮ್ಮಲ್ಲಿದ್ದಾರೆ. ಒಂದು ವರ್ಷದ ಹಿಂದೆ ಭಾರತಮಾತೆಗೆ ಚಪ್ಪಲಿ ಹಾರ ಹಾಕಿದ್ದು ಭಾರೀ ಸುದ್ದಿಯಾಗಿತ್ತು(ಯಾರು ಅನ್ನೋದು ನೀವೇ ತಿಳಿದುಕೊಳ್ಳಿ). ವಿಲ್ಸನ್ ಗಾರ್ಡನ್ ನಲ್ಲಿ ನಡೆದಿದ್ದು. ಕಣ್ಣಾರೆ ನೋಡುವ ದೌರ್ಭಾಗ್ಯ ನನಗೂ ಬಂದಿತ್ತು. ಆ ನೋವು ನನ್ನ ಜೀವನದಲ್ಲಿ ಎಂದೂ ಮರೆಯಲಿಕ್ಕಿಲ್ಲ. ಇಂದು ಕನ್ನಡಕ್ಕೂ ಆಗುತ್ತಿರುವ ಗತಿ ಅದೇ. ಕನ್ನಡದ ರಾಷ್ಟ್ರಕವಿ ಕುವೆಂಪು ರಚಿಸಿರುವ ನಾಡಗೀತೆ ಈಗ ವಿವಾದಸ್ಪದವಾಗಿರುವುದು ದುರಾದೃಷ್ಟ. ಸಾಹಿತಿ ಎಂ.ಎಂ. ಕಲ್ಬುರ್ಗಿ ಅವರು ಮೊನ್ನೆ ಮೊನ್ನೆ ಭಾಷಣದಲ್ಲಿ ಕುವೆಂಪು ನಾಡಗೀತೆಯ ಬಗ್ಗೆ ಅಪಸ್ವರ ಎಬ್ಬಿಸಿದ್ರು. ಸಾಕಿಷ್ಟು ಬೆಂಕಿ ಧಗಧಗನೇ ಉರಿಯಲು. ಈಗ ಅದರ ವಿರುದ್ಧ ನಾಡಿನೆಲ್ಲಡೆ ವಿರೋಧ ವ್ಯಕ್ತವಾಗುತ್ತಿದೆ. ಇಂದು ಜನಸಾಮಾನ್ಯ ಕನ್ನಡಿಗರಿಂದ ಹೆಚ್ಚಾಗಿ ಕನ್ನಡ ಸಾಹಿತಿಗಳಿಂದಲೇ ಕನ್ನಡಕ್ಕೆ ಧಕ್ಕೆಯಾಗುತ್ತಿದೆ ಎಂಬುದು ಸುಳ್ಳಲ್ಲ. ಯಾಕೆಂದ್ರೆ ಈಗಿನವರಿಗೆ ಒಂದು ಬುದ್ದಿಯಿದೆ. ಕುವೆಂಪು, ಕಾರಂತ, ಬೇಂದ್ರೆ ಮುಂತಾದ 'ಕನ್ನಡ ರತ್ನ'ಗಳ ಹೆಸರನ್ನು ತಮ್ಮ ಭಾಷಣದಲ್ಲಿ ತೂರಿಬಿಟ್ಟು, ಮಾತಾಡುತ್ತಾ ಮಾತಾಡುತ್ತಾ ಏನೋ ನಿರ್ಣಾಯ ಕೊಟ್ಟುಬಿಡೋದು. ಇವರಿಗೆ ಭಾಷಣದಲ್ಲಿ ವಿಷಯ ಸಿಗಬೇಕು, ಜೊತೆಗೆ ಪ್ರಚಾರನೂ ಬರುತ್ತೆ. ತಮ್ಮದೂ ಇರಲೆಂದು ತೂರಿಬಿಡುತ್ತಾರೆ. ಇಲ್ಲಿ ಅವರದ್ದೇನೂ ಇರುವುದಿಲ್ಲ. ತನಗೇನೂ ಕೊಡಲು ಸಾಧ್ಯವಿಲ್ಲವಾದ್ರೂ ವಿವಾದವಾದ್ರೂ ಎಬ್ಬಿಸಿ ಬಿಡೋಣ ಅಂತ. ಅವರ ಸಿದ್ದಾಂತವನ್ನು ಮುಂದಿಟ್ಟುಕೊಂಡು ಇವರು ಮಾತಾಡೋದು. ಎಷ್ಟೋ ಬಾರಿ ಹೀಗೆ ಆಗಿದೆ, ಆಗುತ್ತಿದೆ.

ಈಗ 'ಸೌಹಾರ್ದ ಸಮ್ಮೇಳನ' ನಡೆದ್ರೆ ಏನು ಪ್ರಯೋಜನ? ಬರೇ ವಿವಾದ. ಸಂಘ ಪರಿವಾರದವರು ವೇದಿಕೆಗೆ ನುಗ್ಗಿ ಗಲಾಟೆ ಮಾಡಿ ಏನು ಸಾಧಿಸಿದ್ರು? ಏನೂ ಇಲ್ಲ. ಅದು ಇವರಿಗರ್ಥವಾಗುತ್ತಾ? ಅದೂ ಇಲ್ಲ. ಇದು ಯಾರಿಗಾದ್ರೂ ಅರ್ಥವಾಗುತ್ತಾ? ಯಾರಿಗೂ ಇಲ್ಲ. ಅರ್ಥವಾಗಬೇಕಾದವರು ಇವರೊಳಗೆಯೇ 'ಇಬ್ಭಾಗ'ವಾಗಿದ್ದಾರೆ. ಮತ್ತೇ? ಜನಸಾಮಾನ್ಯರ ಮಾತಿಗೆ ಬೆಲೆಯಿದೆಯೇ? ನಮ್ಮ ಸಾಹಿತ್ಯ, ರಾಜಕೀಯ, ಶಿಕ್ಷಣ ಯಾವುದರಲ್ಲೂ 'ಜನಸಾಮಾನ್ಯ'ನ ಮಾತಿಗೇ ಬೆಲೆನೇ ಇಲ್ಲ. ಕನ್ನಡದ ಅಭಿವೃದ್ದಿಗಾಗಿ ಇರುವ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಹಂಪಿ ಕನ್ನಡ ವಿವಿ, ಕನ್ನಡಪರ ಸಂಘಟನೆಗಳು ಯಾವುದೋ ಒಂದು ಸಿದ್ದಾಂತಕ್ಕೆ ಕಟ್ಟುಬಿದ್ದು ತಮ್ಮದೇ ಸರಿ ವಾದಿಸುತ್ತವೆ. ಕನ್ನಡ ಸಾಹಿತ್ಯ ಪರಿಷತ್ತಿನ ಕತೆ ಕೇಳೋದೇ ಬೇಡ. ಅಲ್ಲಿ ಹೋಗಿ ನೋಡಿದ್ರೆ ಅಲ್ಲಿನ ವ್ಯವಸ್ಥೆ ಬಗ್ಗೆ ಮರುಕ ಹುಟ್ಟುತ್ತೆ. ನಮ್ಮ ಭಾಷೆಯ ಬಗ್ಗೆ ಮಾತಾಡಬೇಕಾದ ನಮ್ಮ ಕರ್ನಾಟಕ ಸರ್ಕಾರದ ಬಗ್ಗೆ ಹೇಳಿ ಪ್ರಯೋಜನವಿಲ್ಲ. ಶಾಲೆಗಳಲ್ಲಿ ಕನ್ನಡದ ಬಗ್ಗೆ ಗಂಟೆ ಗಟ್ಟಲೆ ಕೊರೆಯುವ 'ಕನ್ನಡ ಮೇಷ್ಟ್ರು', ಕನ್ನಡದ ಬಗ್ಗೆಯೇ ಬೀದಿ ಬೀದಿ ಧರಣಿ ಮಾಡುವ ಕೆಲವು ಕನ್ನಡ ಸಾಹಿತಿಗಳು, ದೆಹಲಿಯಲ್ಲಿ ಸಂಸತ್ತು ಕಲಾಪದಲ್ಲಿ 'ಕನ್ನಡ'ದಲ್ಲೇ ಪ್ರಶ್ನೆಗಳನ್ನು ಎತ್ತಿ ಎತ್ತಿ ಎಸೆಯುವ ರಾಜಕಾರಣಿಗಳು ಯಾರಾದ್ರೂ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿಯೇ ಓದಿಸಿ, ಕನ್ನಡ ಉಳಿಸುವ ಕೆಲಸ ಮಾಡಿದ್ದಾರಾ? ಖಂಡಿತ ಇಲ್ಲ. ಕನ್ನಡ ನಿಜವಾಗಿಯೂ ಬೆಳೆಯುತ್ತಾ ಇದೆ ಎಂದಾದರೆ ಅದು ಜನಸಾಮಾನ್ಯನಿಂದ.


ಇತ್ತೇಚೆಗೆ ಬೆಂಗಳೂರಿನ ಸಮಾಜ ಸೇವಕರ ಸಮಿತಿ ಎಂಬ ಯುವಕರ ತಂಡವೊಂದು ಸ್ವಂತ ಹಣದಲ್ಲಿ ಟೀ-ಶರ್ಟ್ ತಯಾರಿಸಿ, ಅದ್ರ ಮೇಲೆ ಡಿ.ವಿ.ಜಿ. ಅವರ ಕಗ್ಗದ ನುಡಿಗಳು, ಜಿ.ಪಿ. ರಾಜರತ್ನಂ ಅವರ ಕವನಗಳನ್ನು ಬರೆಸಿ ಅತ್ಯಂತ ಕಡಿಮೆ ಬೆಲೆಗೆ ಮಾರಿದ್ದಾರೆ. ಯಾಕೆ? ಕನ್ನಡಕ್ಕಾಗಿ! ಅವರೆಲ್ಲಾ ಬೀದಿಗಿಳಿದು 'ಕನ್ನಡ, ಕನ್ನಡ' ಎಂದು ಬೊಬ್ಬೆ ಹಾಕಿಲ್ಲ, ಕೃತಿಯ ಮೂಲಕ ಮಾಡಿ ತೋರಿಸಿದ್ದಾರೆ. ಇಂಥ ಉತ್ತಮ ಕೆಲಸ ಮಾಡೋದು ಬಿಟ್ಟು, ಇಂದಿನವರು ಏನ್ ಮಾಡ್ತಾರೆ ಗೊತ್ತೆ? ಕನ್ನಡಕ್ಕಾಗಿ ದುಡಿದು, ಮಡಿದ ಅದೆಷ್ಟು ಸಾಹಿತಿಗಳು, ವಿದ್ವಾಂಸರ ಗೋರಿಗಳನ್ನು ಕಟ್ಟಲು ಸರ್ಕಾರದ ಹಣಕ್ಕಾಗಿ ನಾಲಗೆ ಚಾಚಿ ಕುಳಿತಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಿದ್ರೆ ಎಂದೋ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗುತ್ತಿತ್ತು. ಆದರೆ ನಮ್ಮೊಳಗೆಯೇ ವಿಷಕಾರಿದರೆ ಒಗ್ಗಟ್ಟಿನ ಮಾತು ಎಲ್ಲಿಂದ? ಇವರಿಗೆಲ್ಲಾ ಯಾಕನಿಸಲ್ಲ 'ಕರ್ನಾಟಕ ಬಹುಭಾಷೆ ಯ ನಾಡು. ಇಲ್ಲಿ ಎಲ್ಲರೂ ಇದ್ದಾರೆ. ನಾವೇ ಹಾವು-ಮುಂಗುಸಿ ಥರ ಕಚ್ಚಾಡಿದ್ರೆ ಬೇರೇಯವರು ನಗ್ತಾರೆ' ಅಂತ? ನಾನು ಹೇಳಿದ್ದೇ ವೇದವಾಕ್ಯ ಅನ್ನುವ ನಮ್ಮ 'ಅತೀ ಬುದ್ದಿವಂತಿಕೆ' ಎಂದು ಮರೆಯಾಗುತ್ತೋ ಅಂದು ನಮ್ಮಲ್ಲೊಂದು ಒಗ್ಗಟ್ಟು ಮೂಡಬಹುದು. ಮೊದಲು ಈ ವಿವೇಕ ಬೆಳೆಯಲಿ.

4 comments:

Melka Miyar said...

Chitra avare, kannadada bagge nimage iruva abhimana mechatakkadu. adare komu souharda vedikeyavadu summane pracharakkagi e sammelana ayojisilla. adakku karana ide. kaleda sumaru 5 sahasra varshagalinda ondu varga bahu sankhyata vargavannu shoshisutta bandide. indu saha alpasankhyataru mattu hindulidavara naduve nirantara odaku srushtisi tamma hiditavannu e samajada mele bigigolisutta ide ennuvudannu komu souharda vedikeyavadu pratipadisuttiruvudu tappenu?
Billava samudayakke devastanada olagoo pravesha nirakarisiddaga Narayana Guru swamiyavaru tanna samudayakke bereye devasthana kattisi kranti geete hadiddannu navu mareyalikke aguttadeye?
sahasraru varshagalinda akshara jnanavannu tammolageye ittu itara bahusankhyata vargavannu kattaleyalli itta ivaru e bariya kannada sammelanavannu 'Hijack' madiruvudannu hege sahisalikkaguttde. sahiti anda mele intaha anyayada viruddha dhvani ebbisade iddare ata atma vanchane madidantaguvudillave?
Nijavagiyu idondu 'Meenu saru' mattu 'Tili saru' siddhantada naduvina gharshane. bahusankhatarada 'Meenu sari'navaru alpasankhyatarada 'Tili Sarinavarige' adda beelabekenu?
Nenapidi: Kannada Sahitya kevala alpasankhyatarada 'Tilisarinavara' sottalla. adu ella vargada, ella dharmada astiyagabeku. aga matra kannadambe hasanaguttale...

-Melvin Mangaluru

ಚಿತ್ರಾ ಸಂತೋಷ್ said...

ನಿಮ್ಮ ಪ್ರತಿಕ್ರಿಯೆಗೆ ಸದಾ ಸ್ವಾಗತ ಕೋರುತ್ತಾ ನನ್ನ ಅಭಿಪ್ರಾಯ ತಿಳಿಸುತ್ತೇನೆ. ಕೃತಜ್ಞತೆಗಳು ತಮಗೆ. ಕೋಮುಸೌಹಾರ್ದ ವೇದಿಕೆ ಪ್ರತಿಭಟಿಸುವುದು ತಪ್ಪು/ ಅಥವ ಸಂಘಪರಿವಾರದವರು ಮಾಡಿದ್ದು ಸರಿ ಅನ್ನೋದನ್ನು ನಾನು ಎಲ್ಲೂ ಹೇಳಿಲ್ಲ. ನಾನು ಹೇಳಿದ್ದು 'ಈ ಪ್ರತಿಭಟನಕಾರ'ರಿಗೆ ಸಾಹಿತ್ಯ ಸಮ್ಮೇಳನವೇ ವೇದಿಕೆಯೇ ಎಂಬ ಅರ್ಥದಲ್ಲಿ. ಕನ್ನಡ ಸಾಹಿತ್ಯವನ್ನು ತಿಳಿಸಾರು ಮತ್ತು ಮೀನುಸಾರುಗಳ ಘರ್ಷಣೆ ಎಂದು ಯಾವ 'ಬುದ್ದಿವಂತರು' ವ್ಯಾಖ್ಯಾನಿಸಿದ್ದಾರೆ ಅನ್ನೋದು ನಂಗೆ ತಿಳಿದಿಲ್ಲ. ಇದು ಅವರವರ ಬುದ್ದಿಮತ್ತೆಗೆ ಬಿಟ್ಟಿದ್ದು..ಇರಲಿ ಬಿಡಿ. ಒಳ್ಳೆಯ ವಿಷಯಗಳನ್ನು ಹೇಳಿದ್ದಿರಿ. ಹೀಗೆ ನನ್ ಬ್ಲಾಗ್ ಬುಟ್ಟಿಗೆ ನಿಮ್ ನಿಮ್ ಮಾತುಗಳು ಬೀಳ್ತಾ ಇರಲಿ

ಹೆಸರು ರಾಜೇಶ್, said...

Hrudayalada Bhavaveshada Nudigalu Arthagarbitavagi Lekanadalli Vyaktavagide. Adare Ellarigu Galate Madade Tamma Pratibhatisuva Hakku Ede. Difference of Openion yavagalu Healthyyada Charchege Avakasha Madikoduvudadare "Savhardha Sahitya Sammelana" Nadesuvudu Tappalla endu Nanna Bhavane. Nene Nadeda Karyakramadalli Tahamat Tarikere Hagu Sara Abubakarravara matugalu tumba arthagarbitavagiddavu. SHARADIYA PAYANA INNU BHUDUUURA SAGALI ENDU HARAISUVA GELEYA.
rajesh

ಚಿತ್ರಾ ಸಂತೋಷ್ said...

ರಾಜೇಶ್ ಅವರೇ,
ಪ್ರತಿಯೊಬ್ಬ ಪ್ರಜೆಗೂ ಪ್ರತಿಭಟಿಸುವ, ಮಾತಾಡುವ ಹಕ್ಕು ಇರೋದ್ರರಿಂದಲೇ ಹೀಗಾಗಿರೋದು. ಆರೋಗ್ಯಕರ ಚರ್ಚೆಗೆ ಯಾರು ಅವಕಾಶ ಮಾಡ್ತಾರೆ ಹೇಳಿ?