Monday, February 22, 2010

ಮದುವೆಯ ಈ ಬಂಧ...



ತುಂಬಾ ದಿನಗಳಾಯ್ತು ಬ್ಲಾಗ್ ಕಡೆ ಮುಖ ಹಾಕದೆ. ಕೆಲವೊಂದು ಕಾರಣಗಳಿಂದ ನನಗೆ ಬ್ಲಾಗ್ ಬರೆಯಲಾಗಲಿಲ್ಲ. ಇದೀಗ ಮದುವೆ ಕರೆಯೋಲೆಯೊಂದಿಗೆ ಮತ್ತೆ ಮರಳಿ ಬಂದಿದ್ದೇನೆ. ನಮ್ಮ ಮದುವೆಗೆ ನೀವು ಬಂದರೇನೇ ಚೆಂದ. ಖಂಡಿತಾ ಬರಬೇಕು.

ಬದುಕಿನ ಹೊತ್ತಗೆಯಲ್ಲಿ
ಒಲವಿನ ಕುಂಚ ಹಿಡಿದು
ದಾಂಪತ್ಯ ಕಾವ್ಯಕಲೆ ರೂಪಿಸಲು ಹೊರಟಿದ್ದೇವೆ.

ಈ ಶುಭಗಳಿಗೆಗೆ

ಹೊಸೆದ ಭಾವ ಕನಸುಗಳಿಗೆ

ನಿಮ್ಮ ಪ್ರೀತಿಯ ಹಾರೈಕೆ ಬೇಕು.


ನಮ್ಮ ಮದುವೆ: ಮಾರ್ಚ್ 07, 2010; ವಸಂತ ಮಹಲ್, ಶ್ರೀ ಕ್ಷೇತ್ರ ಧರ್ಮಸ್ಥಳ

ಆರತಕ್ಷತೆ: ಮಾರ್ಚ್ 10, 2010; ನಂ.125/126, 9ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಆರ್ಎಂವಿ ಬಡಾವಣೆ, ಸದಾಶಿವನಗರ, ಬೆಂಗಳೂರು-80.
ಪ್ರೀತಿಯಿಂದ
ಸಂತೋಷ್-ಚಿತ್ರಾ

Wednesday, December 16, 2009

ದೇವರೇ ನೀನೇಕೆ ಕಲ್ಲಾಗಿಬಿಟ್ಟೆ?


ಈ ಹೆಣ್ಣು ಮಕ್ಕಳ ಬದುಕೇ ಹೀಗೇನಾ?
ಇಂಥದ್ದೊಂದು ಮಿಲಿಯನ್ ಡಾಲರ್ ಪ್ರಶ್ನೆ ಹುಟ್ಟಿಕೊಂಡಿದ್ದು ವೊನ್ನೆ ವೊನ್ನೆ ಆ ಹುಡುಗನ ಮನೆಯಲ್ಲಿ ಮುತ್ತೈದೆಯರು ನನ್ನ ಗುಳಿಬಿದ್ದ ಕೆನ್ನೆಗಳಿಗೆ ಅರಶಿನ ಕುಂಕುಮ ಹಚ್ಚಿದಾಗ, ನಮ್ಮನೆಯವರು ಮತ್ತು ಆ ಹುಡುಗನ ಮನೆಯವರು ತಾಂಬೂಲ ಬದಲಾಯಿಸಿಕೊಂಡಾಗ, ಆ ಹುಡುಗ ನನ್ನ ಬೆರಳಿಗೆ ಉಂಗುರ ತೊಡಿಸಿದಾಗ, ನನ್ನ ತಮ್ಮ ನನ್ನ ಕೆನ್ನೆ ಚಿವುಟಿ ‘ಅಕ್ಕಾ ಇನ್ನು ನೀನು ಈ ಮನೆಯ ಹುಡುಗಿ’ ಎಂದು ಖುಷಿಯಿಂದ ಹೇಳಿದಾಗ, ನನ್ನಮ್ಮ ನನ್ನ ನೋಡುತ್ತಲೇ ಗಳಗಳನೇ ಅತ್ತಾಗ!
ಥತ್, ನಾ ಹುಟ್ಟಿದ ಊರು, ನನ್ನ ಪ್ರೀತಿಯ ಅಮ್ಮ, ನನ್ನ ತಮ್ಮ, ಬದುಕಲು ಕಲಿಸಿದ ಅಮ್ಮನಂಥ ಅಣ್ಣ, ನನ್ನ ಕೈಯಾರೆ ಅಮ್ಮ ನೆಡಿಸಿದ ಆ ಗೆಂದಾಲೆ ತೆಂಗಿನ ಮರ, ನಾನು ಸ್ಕೂಲಿಗೆ ಹೋಗುವಾಗ ವೊಸರು ಕೊಂಡೋಗಲು ಕಾರಣಳಾದ ಪ್ರೀತಿಯ ಹಸು ಅಕ್ಕತ್ತಿ, ಅಮ್ಮನ ಜೊತೆ ಬಟ್ಟೆ ಒಗೆಯಲು ಹೋಗುತ್ತಿದ್ದ ನಮ್ಮೂರ ಕೆರೆ, ಅಜ್ಜ ಉಳುತ್ತಿದ್ದ ಗದ್ದೆ, ನಮ್ಮನೆ ತೋಟ, ನನ್ನ ನಿತ್ಯ ಆಟ ಆಡಿಸುತ್ತಿದ್ದ ಕುಸುಮಜ್ಜಿ, ನನ್ನಮ್ಮನ ಜೊತೆ ಬೀಡಿ ಕಟ್ಟಲು ಸಾಥ್ ನೀಡುತ್ತಿದ್ದ ಪಕ್ಕದ್ಮನೆ ಸೀತಕ್ಕ, ನಾನು ಓದಿದ ಸ್ಕೂಲ್, ಪ್ರೀತಿಯ ಟೀಚರ್ರು....! ಒಮ್ಮೆಲೆ ಎಲ್ಲರೂ ನೆನಪಾದರು.
ಕಣ್ಣಿಂದ ಸುರಿದ ಅಶ್ರುಬಿಂದುಗಳು ನನ್ನ ಪಾದವನ್ನು ತೋಯುತ್ತಿದ್ದಂತೆ, ಮುತ್ತೈದೆಯರೆಲ್ಲಾ ’ತವರಿನ ನೆನಪು ಇರಲಿ ಬಿಡಿ’ ಎಂದು ಅವರವರೊಳಗೆ ಮಾತನಾಡಿಕೊಳ್ಳುತ್ತಿದ್ದರು. ನಂಗೂ ಅನಿಸಿತ್ತು: ಇವರೂ ನನ್ನ ತರಾನೇ ಅತ್ತಿರಬಹುದೇನೋ!
ನಾನ್ಯಾಕೆ ಹುಡುಗಿಯಾಗಿ ಹುಟ್ಟಿದೆ? ಹುಡುಗನಾಗಿ ಹುಟ್ಟುತ್ತಾ ಇದ್ದರೆ, ಮದುವೆಯಾಗಿ ಬೇರೆ ಮನೆಗೆ ಹೋಗುವ ಅಗತ್ಯವೇನಿತ್ತು? ಅಮ್ಮನ ಜೊತೆ ಇರಬಹುದಿತ್ತಲ್ಲಾ?ಅಮ್ಮನ ಕೈಯಡಿಗೆ, ಅಮ್ಮನ ಹಿತನುಡಿಗಳು, ಅಮ್ಮ ಮಾಡಿಕೊಡುವ ಹಪ್ಪಳ-ಸಂಡಿಗೆ ಮೆಲ್ಲುತ್ತಾ, ಅಣ್ಣ-ತಮಂದಿರ ಜೊತೆ ನಿತ್ಯ ಮುನಿಸಿಕೊಳ್ಳುತ್ತಾ, ಮತ್ತೆ ರಾಜಿಯಾಗುತ್ತಾ, ಮನೆ ಹತ್ತಿರವಿರುವ ಮೈದಾನದಲ್ಲಿ ಲಗೋರಿಯಾಟ ಆಡುತ್ತಾ ಖುಷಿ ಖುಷಿಯಾಗಿ ಹಾಗೇ ಇರಬಹುದಿತ್ತಲ್ಲಾ...ಹೀಗೆ ನೂರಾರು ಯೋಚನೆಗಳ ಸಂತೆ ಮನದಲ್ಲಿ ಪಿಸುಗುಟ್ಟಿ, ‘ಅಮ್ಮ ನಾ ಬಿಡಲಾರೆ ನಿನ್ನ ಸೆರಗಾ’ ಎಂದುಕೊಳ್ಳುತ್ತಿದ್ದೆ.

ಹೌದು, ಆ ಹುಡುಗ ‘ನೀ ನನ್ನ ಮದುವೆ ಆಗ್ತೀಯಾ’ ಎಂದು ಕೇಳಿದಾಗ ಅಮ್ಮನ ಜೊತೆ ಕೇಳು ಅಂದಿದ್ದೆ. ‘ಅಯ್ಯೋ ಹುಚ್ಚು ಹುಡುಗಿ ನಾ ನಿನ್ನ ಮದುವೆ ಆಗ್ತಿರೋದು, ಅಮ್ಮನನ್ನು ಅಲ್ಲ ಕಣೇ’ ಎಂದು ರೇಗಿಸಿದಾಗಲೂ ಅವನು ನೀ ನಮ್ಮನೆಯಲ್ಲೇ ಶಾಶ್ವತವಾಗಿ ಇದ್ದುಬಿಡ್ತಿಯಾ ಅಂತ ಹೇಳಲೇ ಇಲ್ಲ! ಬದಲಾಗಿ ‘ನೀ ನನ್ನ ಮನದರಮನೆಗೆ ಬರ್ತಾ ಇದೀಯಾ’ ಅಂತ ಅಷ್ಟೇ ಹೇಳಿದ್ದ. ಛೆ! ದೇವರು ಯಾಕೆ ಇಷ್ಟೊಂದು ಮೋಸ ಮಾಡಿದ? ಹೆಣ್ಣು ಅವನಿಗೇನು ತಪ್ಪು ಮಾಡಿದ್ದಾಳೆ? ಯಾಕೆ ಅವಳನ್ನು ಹೆತ್ತಮ್ಮನ ಮಡಿಲಿಂದ ಮತ್ತೊಂದು ಮಡಿಲಿಗೆ ಹಾಕುವ ವಿಚಿತ್ರ ನಿಯಮ ಸೃಷ್ಟಿಸಿದ? ಅಂತ ದೇವರನ್ನು ಬೈಯುತ್ತಾ ಇದ್ದೀನಿ, ಅದೇನು ಅವನಿಗೆ ನನ್ನ ಮೇಲೆ ಸಿಟ್ಟೇ? ನನ್ನ ಪ್ರಶ್ನೆಗಳಿಗೆ ಉತ್ತರಿಸದೆ ಕಲ್ಲಾಗಿಬಿಟ್ಟಿದ್ದಾನೆ. ಬಹುಶಃ ಎಲ್ಲಾ ಹೆಣ್ಣುಮಕ್ಕಳಿಗೂ ಈ ರೀತಿ ಅನಿಸಿರಬಹುದಲ್ವಾ? ಹೇಳಿ, ನಿಮಗೂ ಹೀಗೇ ಅನಿಸಿದೆಯೇ?
ಇಲ್ಲಿ ಪ್ರಕಟವಾಗಿದೆ:

Thursday, December 3, 2009

'ಹುಡುಗಿ’ಯಾದ ನನ್ ತಮ್ಮಾ..!.

ಆವಾಗ ನಾನಿನ್ನೂ ಅಂಗನವಾಡಿಗೆ ಹೋಗುತ್ತಿದ್ದ ಪುಟ್ಟ ಹುಡುಗಿ. ನನ್ನ ತಮ್ಮನಿಗೆ ಇನ್ನೂ ನಾಲ್ಕು ವರ್ಷ ಮೀರಿರಲಿಲ್ಲ. ಇನ್ನೂ ಎದೆಹಾಲನ್ನು ಬಿಡದ ಪೋರ. ದಿನದದಲ್ಲಿ ಅರ್ಧದಿನವನ್ನು ಅಳುತ್ತಲೇ ಕಳೆಯುತ್ತಿದ್ದ. ಅವನ ಹಠಕ್ಕೆ ಮಣಿದ ಅಮ್ಮ ನನಗೆ ಏನೇ ಕೊಡಿಸಬೇಕಾದರೂ ಅವನಿಗೆ ವೊದಲು ಕೊಡಿಸಿ ಆಮೇಲೆ ನನಗೆ ಕೊಡಿಸುತ್ತಿದ್ದರು. ಅವನು ಗಂಡು ಮಗುವೆಂಬ ಮಮಕಾರ ಬೇರೆ.

ನನಗೆ ತಂದ ಬಟ್ಟೆಗಳನ್ನೆಲ್ಲಾ ಅವನು ಹಾಕುತ್ತಿದ್ದ. ಅದು ಹುಡುಗಿಯರ ಉಡುಪುಗಳೆಂಬ ಪರಿಜ್ಞಾನವೇ ಆತನಿಗಿಲ್ಲ. ಒಟ್ಟಾರೆ ಅಕ್ಕನಿಗೆ ಕೊಡಿಸಿದ್ದೆಲ್ಲಾ ಅವನಿಗೆ ಬೇಕು, ಅವನು ವೊದಲು ಅದನ್ನು ತೊಡಬೇಕು, ಅವನು ಖುಷಿಪಡಬೇಕು, ಆಮೇಲೆ ಏನಿದ್ದರೂ ನನಗೆ.

ಹಾಗೇ ಒಂದು ದಿನ ನನಗೆ ಅಮ್ಮ ಚೆಂದದ ಫ್ರಾಕ್ ತಂದರು. ಅವನು ನೋಡಿದ್ದೇ ತಡ, ನನಗೆ ಅದೇ ಬೇಕೆಂದು ಹಠ ಹಿಡಿದ. ಅದು ಹುಡುಗಿಯರು ಹಾಕುವ ಉಡುಪು ಎಂದು ಎಷ್ಟೇ ಕೇಳಿದರೂ ಹಠ ಬಿಡಲಿಲ್ಲ. ಅದನ್ನೇ ಹಾಕಿಕೊಂಡ. ಅವನಿಗೆ ತಂದ ಟೀಶರ್ಟ್ ಬೇಡವೇ ಬೇಡವೆಂದು ಹಠ ಹಿಡಿದ. ಮರುದಿನ ಅಮ್ಮ ಪೇಟೆಗೆ ಹೋಗಿ ನನಗೆ ಇನ್ನೊಂದು ಫ್ರಾಕ್ ತಂದರು.
ಇಬ್ಬರೂ ಫ್ರಾಕ್ ಧರಿಸಿ ಅಮ್ಮನ ಜೊತೆ ತೋಟಕ್ಕೆ ಹೋಗಿದ್ದೆವು. ಇಬ್ಬರೂ ಒಂದೇ ಬಣ್ಣದ ಫ್ರಾಕ್ ಹಾಕಿದ್ದು ಹೆಮ್ಮೆಯಾದರೆ, ತಮ್ಮನಿಗೆ ನಾನು ಹುಡುಗಿಯರ ಉಡುಪು ತೊಟ್ಟಎಂಬ ಖುಷಿ ಬೇರೆ.

ತೋಟದಲ್ಲಿ ಕೆಲಸ ಮಾಡಬೇಕಾದರೆ ನಮ್ಮೂರಿನ ಬಾಲಣ್ಣ ಬಂದು ನಮ್ಮ ಅಮ್ಮನ ಜೊತೆ, ’ಅಕ್ಕಾ, ನಿಮಗೆ ಇಬ್ಬರೂ ಹೆಣ್ಣುಮಕ್ಕಳು ಅಂತ ಗೊತ್ತೇ ಇರಲಿಲ್ಲ’ ಎನ್ನಬೇಕೆ? ಅಮ್ಮನಿಗೆ ಆಶ್ಚರ್ಯ. ನಾನು ಮತ್ತು ತಮ್ಮ ಬಿಟ್ಟ ಕಣ್ಣುಗಳಿಂದ ಆಶ್ಚರ್ಯಭರಿತ ಅಮ್ಮನ ಮುಖ ನೋಡುತ್ತಾ ನಿಂತೆವು. ನೋಡಲೂ ಥೇಟ್ ಹುಡುಗಿ ತರ ಕಾಣುತ್ತಿದ್ದ ನನ್ನ ತಮ್ಮನನ್ನು ಎತ್ತಿ ಮುದ್ದಿಸಿದ ಬಾಲಣ್ಣನಿಗೆ ನನ ತಮ್ಮ ಹುಡುಗನೆಂದು ತಿಳಿದಿದ್ದು ಮಾತ್ರ ನಮ್ಮೂರಿನ ವಾರ್ಷಿಕ ಜಾತ್ರೆಯಲ್ಲೇ!

ಇಪ್ಪತ್ತು ವರ್ಷದ ಹಿಂದಿನ ಘಟನೆಯನ್ನು ನೆನೆದು ಈಗಲೂ ತಮ್ಮನ ಚುಡಾಯಿಸುವಾಗ ಅದೇಕೋ ಬಾಲ್ಯ ಮತ್ತೆ ಮರುಕಳಿಸಲಿ ಎಂದನಿಸುತ್ತದೆ!

Monday, November 16, 2009

ಭರವಸೆಯ ಭಾವಗಳು...!

ಎಷ್ಟು ಬಗೆದರೂ ತೀರದ
ತಾತ್ಸಾರ, ಸಿಟ್ಟು-ಸೆಡವುಗಳನ್ನು
ನಿರುಮ್ಮಳವಾಗಿ ಸ್ವಚ್ಛಗೊಳಿಸಿದ
ಪ್ರೀತಿಯ ಒದ್ದೆ ಕಣ್ಣುಗಳು,
ಎಷ್ಟೇ ಅಡಗಿಸಿಟ್ಟರೂ ಮತ್ತೆಲ್ಲೋ
ಗಕ್ಕನೆ ಎಲ್ಲವನ್ನೂ ಆವಾಹಿಸಿಕೊಂಡು
ಭಾವುಕತೆಗೊಡ್ಡಿ ಯಾವುದೋ
ಸಂಜೆಗಳಲ್ಲಿ ಆವರಿಸಿಬಿಡುವ ನಿನ್ನ ಮೌನ,
ಎಲ್ಲವನ್ನು ಮೌನದಲ್ಲಿ ಪಿಸುಗುಟ್ಟಿ...
ಮಗುವಿನಂತ ನಿಷ್ಕಲ್ಮಶ ನಗೆ ನಕ್ಕು,
ನನ್ನ ಕೆನೆಹಳದಿ ಹಾಳೆಯಲ್ಲಿ ಬರೆದ ಕವಿತೆ
ನೀ ಕೂಡಿಟ್ಟು ಹಸನುಗೊಳಿಸಿದ
ಭರವಸೆಯ ಭಾವಗಳೇ ...!!

Thursday, October 29, 2009

ಶರಧಿಗೆ ಎರಡು ವರ್ಷ. ನಿಮ್ಮ ಹಾರೈಕೆ ಹೀಗೇ ಇರಲಿ...


ಪ್ರೀತಿಯ ಸ್ನೇಹಿತರೇ,

ನಿಮಗಿದೋ ಪ್ರೀತಿಯ ನಮನಗಳು.

ನಿಮಗೊಂದು ಶುಭಸುದ್ದಿ ತಿಳಿಸಬೇಕಿದೆ. ನನಗೆ ಖುಷಿ, ಮನದಳೊಗೆ ಸಂಭ್ರಮ. ಏಕೆ ಗೊತ್ತೆ ನನ್ನ ಶರಧಿಗೆ ನವೆಂಬರ್ 3ನೇ ತಾರೀಕಿಗೆ ಭರ್ತಿ ಎರಡು ವರ್ಷ. ಶರಧಿ ಎರಡು ವರ್ಷ ನಿರಂತರವಾಗಿ ಹರಿದಿದ್ದಾಳೆ. ಇದೀಗ ಮೂರನೇ ವರ್ಷಕ್ಕೆ ಕಾಲಿಡುತ್ತಿದ್ದಾಳೆ. ಅವಳು ದೊಡ್ಡವಳಾಗಿದ್ದಾಳೆ. ಜೊತೆಗೆ ನನ್ನನ್ನು ಸಾಕಷ್ಟು ಬೆಳೆಸಿದ್ದಾಳೆ. ಅಪಾರ ಸ್ನೇಹಿತರನ್ನು ನೀಡಿದ್ದಾಳೆ. ಬೆನ್ನು ತಟ್ಟೋರು, ತಪ್ಪಾಗ ತಿದ್ದಿ ತಿಡೋರು ಎಲ್ಲಾರೂ ಸಿಕ್ಕಿದ್ದಾರೆ. ನಂಗದು ಖುಷಿ. ಎರಡು ವರ್ಷದಲ್ಲಿ ಶರಧಿ ಕಂಡಿದ್ದು 146 ಬರಹಗಳನ್ನು. ಆಫೀಸ್ ಕೆಲಸ, ನಿತ್ಯ ಕಾಡುವ ಅನಗತ್ಯ ಕಿರಿಕಿರಿ ನಡುವೆ 200 ಬರಹಗಳನ್ನು ದಾಟುವ ಕನಸು ನನಸಾಗಲಿಲ್ಲ. ಆದರೂ ಬರಹಪ್ರೀತಿ ಕುಂದಿಲ್ಲ. ನನ್ನೊಳಗಿನ ಕನಸುಗಳು ಆಗಾಗ ಮೂರ್ತ ರೂಪ ಪಡೆಯುತ್ತಲೇ ಇವೆ.
ನನ್ನ ಪ್ರೋತ್ಸಾಹಿಸಿದ ಎಲ್ಲಾ ಸ್ನೇಹಿತರಿಗೂ ಕೃತಜ್ಞತೆಗಳು. ಇನ್ನು ಮುಂದೆಯೂ ನನ್ನ ಶರಧಿ ನಿರಂತರವಾಗಿ ಹರಿಯುತ್ತಾಳೆ ಅನ್ನೋ ಪುಟ್ಟ ನಂಬಿಕೆ. ನಿಮ್ಮ ಪ್ರೀತಿ, ಪ್ರೋತ್ಸಾಹ ಇದ್ದೇ ಇರುತ್ತೆ ಅನ್ನೋ ಅಚಲ ನಂಬಿಕೆ ನನ್ನದು. ನಿಮ್ಮ ಪ್ರೋತ್ಸಾಹಕ್ಕೆ ನನ್ನ ಪ್ರೀತಿಯ ಸಲಾಂ.

ಈ ನಡುವೆ ಇನ್ನೊಂದು ಸತ್ಯ ಹೇಳಲೇಬೇಕಿದೆ. ಬಹುಶಃ ಬಹುತೇಕರಿಗೆ ಗೊತ್ತೇ ಇದೆ. ಕಳೆದ ಮಾರ್ಚ್ ನಲ್ಲಿ 'ಧರಿತ್ರಿ' ಅನ್ನೋ ಹೆಸರಲ್ಲಿ ಬ್ಲಾಗ್ ಆರಂಭಿಸಿದ್ದೆ. ಅದೇಕೆ ಅನಾಮಧೇಯ ಹೆಸರು? ಅಂದುಕೊಳ್ಳಬಹುದು. ವೃತ್ತಿಯಲ್ಲಿರುವಾಗ ಕೆಲವೊಂದು ನಿಯಮಗಳಿಗೆ ನಾವು ನಿಷ್ಠರಾಗಿರಬೇಕಾಗುತ್ತೆ. ಹಾಗಾಗಿ, ಅನಿವಾರ್ಯವಾಗಿ ಶರಧಿ ಜೊತೆಗೆ ಧರಿತ್ರಿಯನ್ನೂ ಆರಂಭಿಸಿದ್ದೆ. ಧರಿತ್ರಿನೂ 33 ಬರಹಗಳನ್ನು ಕಂಡಿದ್ದಾಳೆ. ಶರಧಿಯಂತೆ ಅವಳನ್ನೂ ಪ್ರೀತಿಯಿಂದ ಸಲಹುತ್ತಿದ್ದೇನೆ. ನೀವೆಲ್ಲರೂ ಪ್ರೋತ್ಸಾಹಿಸುತ್ತಲೇ ಇದ್ದೀರಿ. ಇದು ನನ್ನ ಅದೃಷ್ಟ ಎಂದುಕೊಳ್ಳುತ್ತೇನೆ. ಇವತ್ತು ಈ ವಿಚಾರವನ್ನು ಅಧಿಕೃತವಾಗಿ ಹೇಳಿಬಿಟ್ಟಿದ್ದೀನಿ. ಇನ್ನು ಮುಂದೆನೂ ಧರಿತ್ರಿ ಧರಿತ್ರಿಯಾಗೇ, ಶರಧಿ ಶರಧಿಯಾಗೇ ಮುಂದುವರಿಯುತ್ತಿದ್ದಾರೆ. ಶರಧಿಗೆ ಅಣ್ಣ ರೋಹಿ ಚೆಂದದ ವಿನ್ಯಾಸ ಮಾಡಿಕೊಟ್ಟರೆ, ಧರಿತ್ರಿಗೆ ನನ್ನ ಸೀನಿಯರ್ ಹಾಗೂ ಗೆಳೆಯ ಲಕ್ಷ್ಮಿಕಾಂತ್ ವಿನ್ಯಾಸ ಮಾಡಿದ್ದಾರೆ. ಅವರಿಗೆ ತುಂಬಾ ಥ್ಯಾಂಕ್ಸ್. ಯಾರಿಗೂ ನೋವು ಕೊಡದ ರೀತಿಯಲ್ಲಿ ಭಾವನೆಗಳನ್ನು ಬಿಚ್ಚುತ್ತಾ ಹೋಗುವುದು ನನ್ನ ಇಷ್ಟ. ಎಲ್ಲೋ ನೋಡಿದ್ದು, ಹೃದಯವನ್ನು ತಟ್ಟಿದ್ದು ಎಲ್ಲವೂ ಬರಹಗಳಾಗಿವೆ. ಮುಂದೆಯೂ ಹೊಸ ಕೆಲಸದೊತ್ತಡ, ನಿತ್ಯ ಕಾಡುವ ಸಮಸ್ಯೆಗಳು, ಚಿಂತೆಗಳು ಅಥವಾ ಒಂಟಿಯಾಗಿದ್ದ ನಾನು ಜಂಟಿಯಾದರೂ ಧರಿತ್ರಿ ಮತ್ತು ಶರಧಿ ಎರಡೂ ಬ್ಲಾಗ್ ಗಳನ್ನು ಅಷ್ಟೇ ಪ್ರೀತಿಯಿಂದ ಸಲಹುತ್ತೇನೆ. ನಿಮ್ಮ ಪ್ರೋತ್ಸಾಹ ಇದ್ದೇ ಇರುತ್ತದೆ ಎಂದುಕೊಂಡಿದ್ದೀನಿ. ನಿಮ್ಮ ಪ್ರೀತಿ, ಪ್ರೋತ್ಸಾಹಕ್ಕೆ ನಾ ಋಣಿ.

ಪ್ರೀತಿಯಿಂದ,
ಚಿತ್ರಾ ಕರ್ಕೇರಾ

Tuesday, October 27, 2009

ಮೌನದಲ್ಲೇ ಮಾತಾಡ್ತೀನಿ, ಕವನ ಬರಿ...!

ಯಾಕೋ ಪತ್ರ ಬರೀಬೇಕು ಅನಿಸುತ್ತೆ ಕಣೋ..ಅದು ನಿನ್ನ ಪತ್ರ ನೋಡಿದ ಮೇಲೆ. ಇದೇ ಮೊದಲ ಪತ್ರ, ಬಹುಶಃ ಇದೇ ಕೊನೆಯ ಪತ್ರ ಆಗಿರಬಹುದು. ತುಂಬಾ ಜನ ಹೇಳ್ತಾರೆ ಪ್ರೀತಿಯ ಪತ್ರ ತುಂಬಾ ಮಾತಾಡುತ್ತೆ ಅಂತ. ಹೌದು ಕೂಡ, ನಿನ್ನ ಮಾತುಗಳಿಂದ ನೀ ಬರೆದ ಪತ್ರಾನೇ ಇಷ್ಟ ಆಯಿತು. ಆದರೆ, ನಿನ್ ಥರ ಚೆನ್ನಾಗಿ ಪತ್ರ ಬರೆಯೋಕೆ, ನಿನ್ ಥರ ಭಾವನೆಗಳನ್ನು ಪದಗಳಲ್ಲಿ ಪೋಣಿಸೋಕೆ, ನಿನ್ ಥರ ಸುಂದರ ಭಾವಗೀತೆಗಳನ್ನು ಬರೆಯೋಕೆ, ನಿನ್ ಥರ ಪ್ರಕೃತಿ ಮಧ್ಯೆ ಕುಳಿತು ಕತೆ-ಕವನ, ಲೇಖನ ಗೀಚೋಕೆ ಬರೊಲ್ಲ ಕಣೋ. ಅದಕ್ಕೆ ನೋಡು ನೀನು ಇಷ್ಟು ದಿನ ಬಚ್ಚಿಟ್ಟ ಪ್ರೀತಿ, ನೀ ಗೀಚಿದ ಕವನ, ನೀ ಮೂಡಿಸಿದ ಸುಂದರ ಕಲೆ..ಎಲ್ಲವನ್ನೂ ಮೌನವಾಗೇ ನೋಡುತ್ತಾ ಕಣ್ಣಲ್ಲೇ ಸವಿದೆ, ವಿನಃ ಅಕ್ಷರಗಳಲ್ಲಿ ಪೋಣಿಸಲು ಸಾಧ್ಯವಾಗಲಿಲ್ಲ. ಮಾತಿನಲ್ಲಿ ಹೇಳಲೂ ಆಗಲಿಲ್ಲ. ಬಹುಶಃ ನನ್ನ ಮೌನವನ್ನೂ ಅರ್ಥಮಾಡಿಕೊಳ್ಳೋ ಅಗಾಧ ಕಲೆಯನ್ನು ದೇವರು ನಿಂಗೆ ನೀಡಿದ್ದನಲ್ಲಾ ಅದಕ್ಕೆ ದೇವರಿಗೇ ಥ್ಯಾಂಕ್ಸ್ ಹೇಳಿದ್ದೀನಿ ಕಣೋ.

ಹೌದು, ನೀನಂದ್ರೆ ನಂಗಿಷ್ಟ, ಆದ್ರೆ ನಾ ಹೇಳಲ್ಲಿಲ್ಲ..ನೀನಿಷ್ಟ, ನಿನ್ನ ನಗು ಇಷ್ಟ, ನಿನ್ನ ಪ್ರೀತಿ ಇಷ್ಟ ಅಂತ! ನೀನೇ ಹೇಳಿಬಿಟ್ಟಿಯಲ್ಲಾ...ಅದು ನಂಗೆ ಖುಷಿ, ನಿನ್ನ ಧೈರ್ಯಕ್ಕೆ ನನ್ನ ಪುಟ್ಟ ಸಲಾಂ.

ಎಷ್ಟು ಕೆಟ್ಟದ್ದಾಗಿ ಪತ್ರ ಬರೆದಿದ್ದಾಳೆ ಅಂತ ಬೈಕೋಬೇಡ. ಮುಖ ಊದಿಸಿಕೋಬೇಡ. ನಿನ್ನ ಸುಂದರ ಮೂಗಿನ ಮೇಲೆ ಸಿಟ್ಟನ್ನು ನೋಡೋದು ನಂಗೆ ಇಷ್ಟವಿಲ್ಲ. ನಿನ್ನ ಸುಂದರ ಕಣ್ಣುಗಳ ದುರುಗುಟ್ಟುವಿಕೆಯನ್ನು, ಸಿಟ್ಟಿನಿಂದ ನೀನು ಬಡಬಡಿಸೋದನ್ನು ನನ್ನ ಕಣ್ಣಿಂದ ನೋಡಕ್ಕಾಗಲ್ಲ ಕಣೋ. ಅದಕ್ಕೆ ಯಾವತ್ತೂ ಸಿಟ್ ಮಾತ್ರ ಮಾಡಿಕೊಳ್ಳಬೇಡ.

ತುಂಬಾ ಹೇಳಬೇಕನಿಸುತ್ತೆ..ಆದರೆ ಬರೆಯೋಕ್ಕಾಗಲ್ಲ. ನಿನ್ನ ಥರ ನೀ ಬಿತ್ತಿದ ಬೀಜಗಳಿಗೆ ನಾ ರೈತ ಆಗ್ತೀನಿ ಅನ್ನೋಕೆ ಬರಲ್ಲ. ಜೀವನವಿಡೀ ನಿನಗೆ ಮೊಗೆದಷ್ಟು ಬತ್ತದ ಪ್ರೀತಿ ನೀಡ್ತೀನಿ. ನಿನ್ನ ಕನಸು, ನಿರೀಕ್ಷೆಗಳಿಗೆ ನೀರೆರೆದು ಪೋಷಿಸ್ತೀನಿ. ನನ್ನ ಹೃದಯ ತುಂಬಾನು ಕನಸುಗಳಿದೆ ಕಣೋ...ಪುಟ್ಟ ಪುಟ್ಟ ಕನಸುಗಳು. ಅದಕ್ಕೆ ಜೀವ ತುಂಬ್ತೀಯಾ ಅಂತ ಗೊತ್ತು ನಂಗೆ. ಜೀವನವನ್ನು ಪ್ರೀತಿ, ಖುಷಿ, ನೆಮ್ಮದಿಗಳಿಂದ ಸಿಂಗರಿಸಿಬಿಡು..ಅದಕ್ಕೆ ನನ್ನದೂ ಸಾಥ್ ಇದೆ.ಅಷ್ಟೇ ಸಾಕಲ್ವಾ? ನಮ್ಮ ಬದುಕಿಗೆ.....? ಇನ್ನೇನು ಹೇಳಕ್ಕೆ ಬರಲ್ಲ...ಮೌನದಲ್ಲೇ ಮಾತಾಡ್ತೀನಿ. ನೀನು ಕವನ ಬರೆ...!
ಅದಿರಲಿ, ಯಾವಾಗ ನನ್ನನ್ನು ನಿನ್ನೂರಿಗೆ ಕರೆದುಕೊಂಡು ಹೋಗ್ತಿಯಾ? ನಿಮ್ಮಮ್ಮನಿಗೆ ನಿಮ್ಮಪ್ಪನಿಗೆ ಪರಿಚಯ ಮಾಡಿಸ್ತೀಯಾ ಹೇಳು.

Monday, October 5, 2009

ಪ್ರಾಮೀಸ್ ಮಾಡು..ಖುಷಿಯಾಗಿರ್ತಿ ಅಲ್ವಾ?

ಮುನ್ನಿ....

ಬಹಾರೋ ಫೂಲ್ ಬರ್ಸಾ ಹೋ

ಮೇರಾ ಮೆಹಬೂಬ್ ಆಯಾ ಹೇ...

ರಫೀ ಹಾಡಿದ ಹಾಡನ್ನು ಕೇಳುತ್ತಾ ಪತ್ರ ಬರೀತಾ ಇದ್ದೀನಿ ಮುನ್ನಿ.


ಹೇಗಿದ್ಯಾ? ಇಂದು ನಮ್ಮೂರಲ್ಲಿ ಮಳೆ ಬಂದಿದೆ ಕಣೇ. ನಿಮ್ ಕಡೆ ಹೊಲ, ಗದ್ದೆ, ಕೆರೆ-ತೊರೆಗಳು ತುಂಬಿ ಹರಿಯುತ್ತಿದ್ದರೂ ನಮ್ಮೂರಲ್ಲಿ ಅದೇಕೋ ವರುಣನಿಗೆ ನಮ್ ಮೇಲೆ ಮುನಿಸು. ಆದರೆ ಇಂದು ಮಳೆ ಬಂದಿದೆ. ಮನೆಯಂಗಳ ದೊಡ್ಡ ತೊರೆಯಾಗಿದೆ. ತುಂಬಿ ಹರಿಯೋ ಕೆರೆ-ತೊರೆಗಳನ್ನು ನೋಡುವಾಗ ತುಂಬಾ ಖುಷಿಯಾಗುತ್ತಿದೆ. ನಮ್ಮೂರ ತೋಟಗಳಲ್ಲಿ ಹಸಿರು ಮೈ ತುಂಬಿ ನಿಂತಿದೆ. ಬಾಲ್ಯದ ತುಂಟಾಟಗಳು ನೆನಪಾಗುತ್ತಿವೆ. ಸಣ್ಣವನಿರುವಾಗ ಜೋರು ಮಳೆಗೆ ಆಲಿಕಲ್ಲು ಹೆಕ್ಕಕೆ ಹೋಗಿ ಜಾರಿ ಬಿದ್ದಿದ್ದು ನೆನಪಾಗಿ ನಗು ಬಂತು ಕಣೇ. ಆವಾಗ ನೀನಿನ್ನೂ ಚಡ್ಡಿ ಹಾಕದೆ ಮನೆತುಂಬಾ ಓಡಾಡಿ ಬೊಕ್ಕು ಬಾಯಿ ಅಗಲಿಸಿ ಎಲ್ಲರನ್ನೂ ನಗಿಸುತ್ತಿದ್ದೆ!!

ಮಳೆ ಬಂದಾಗ ಅದೇಕೆ ನಿನಗೆ ಪತ್ರ ಬರೆದೆ ಅಂತ ಅಚ್ಚರಿಯಾಯಿತೇ? ಅಮ್ಮ ಮಾಡಿಟ್ಟ ಹಪ್ಪಳ ಸಂಡಿಗೆ ಮೆಲ್ಲುತ್ತಾ ನಿನ್ನದೇ ನೆನಪಿನ ಮಳೆಯಲ್ಲಿ ತೋಯ್ತಾ ಇದ್ದೀನಿ ಕಣೇ ಮುನ್ನಿ. ನಿಂಗೆ ನೆನಪಿದೆಯಾ ನಾನು-ನೀನು ಭೇಟಿಯಾದ ಮೊದಲ ದಿನ ಧಾರಾಕಾರ ಮಳೆ ಸುರಿದು, ನಾನೂ ನಿನ್ನ ಛತ್ರಿಯೊಳಗೆ ಹುದುಗಿಹೋಗಿದ್ದು! ಅಷ್ಟೇ ಅಲ್ಲ, ಮಳೆಯಲ್ಲಿಯೇ ನಿನ್ನದೆಯಲ್ಲಿ ನಾನು ಕರಗಿಹೋಗಿದ್ದು, ನಿನ್ನ ಹೆಗಲ ಮೇಲೆ ಕೈಹಾಕಿದಾಗ ನಾಚಿಕೆಯಿಂದ ನನ್ನ ಕೈಯನ್ನು ಸರಿಸಿದ್ದು..! ಕೊನೆಗೂ ಮಳೆ ಎಡಬಿಡದೆ ಸುರಿದಾಗ ನೆನೆಯುತ್ತಲೇ ಮನೆ ಸೇರಿಕೊಂಡಿದ್ದು. ಮತ್ತೆ ಸುಂದರ ನೆನಪುಗಳೊಂದಿಗೆ ನಿದ್ದೆಯ ಮಂಪರಿಗೆ ಜಾರಿದ್ದು..ಎಲ್ಲವೂ ನೆನಪಾಗುತ್ತಿದೆ ಕಣೇ. ಅಮ್ಮನ ಕೈತುತ್ತ ಮೆಲ್ಲುವಾಗ ನಿನ್ನದೇ ನೆನಪಾಗುತ್ತೆ ಮುನ್ನಿ. ಅಮ್ಮನ ಬಿಟ್ಟರೆ ನಾನು ಕೈತುತ್ತು ಉಂಡಿದ್ದು ನಿನ್ನ ಕೈಯಿಂದ ಕಣೇ.

ಮುನ್ನಿ...

ಜೋರು ಮಳೆಗೆ ನಮ್ಮೂರ ಜೋಗವನ್ನು ನಿಂಗೆ ತೋರಿಸಬೇಕು...ಮುಂಗಾರು ಮಳೆಯಂತೆ ಪ್ರೀತಿಯ ಮಳೆಯಲ್ಲಿ ನೆನೆಯಬೇಕು. ಮನತುಂಬಾ ಪ್ರೀತಿಯ ಕಚಗುಳಿಯಲ್ಲಿ ಖುಷಿಪಡಬೇಕು. ಹಸಿರು ಜರತಾರಿ ಉಟ್ಟ ಸಹ್ಯಾದ್ರಿಯನ್ನು ನಿಂಗೆ ತೋರಿಸಿ, ನಿನ್ನ ಕಣ್ಮನ ಖುಷಿಗೊಳಿಸಬೇಕು. ಪ್ರಕೃತಿಯನ್ನು ಪ್ರೀತಿಸುವ ನನ್ ಮುನ್ನಿಗೆ ನಮ್ಮೂರ ಮಳೆ, ಇಳೆ, ಹಸಿರು...ಎಲ್ಲವನ್ನೂ ತೋರಿಸಬೇಕು. ನನ್ನಮ್ಮನಿಗೆ ನೋಡು ಮುನ್ನೀನ ತಂದಿದ್ದೀನಿ ಅಂತ ಪರಿಚಯ ಮಾಡಿಸಬೇಕು. ಅಮ್ಮನಿಂದ ಭಲೇ ಅಂತ ಬೆನ್ನು ತಟ್ಟಿಸಿಕೊಳ್ಳಬೇಕು. ಹೀಗೇ ಏನೇನೋ ಅಂದುಕೊಳ್ತಾ ಮನೆಯೊಳಗೆ ನಿನ್ನ ಬೆಚ್ಚನೆಯ ನೆನಪುಗಳ ಜೊತೆ ಕುಳಿತಿದ್ದೀನಿ ಕಣೇ ಮುನ್ನಿ.

ಹೌದು ಮುನ್ನಿ, ಊರಿಗೆ ಹಬ್ಬಕ್ಕೆ ಹೋದವನು ಫೋನ್ ಮಾಡಿಲ್ಲ, ಮೆಸೇಜ್ ಮಾಡಿಲ್ಲ ಅಂತ ಮುನಿಸಿಕೋಬೇಡ್ವೇ? ಮಳೆ ನೋಡುತ್ತಾ ಬೆಚ್ಚಗೆ ಹಪ್ಪಳ ತಿಂದು ಕಾಲ ಕಳೆಯುತ್ತಿದ್ದಾನೆ ಅಂತ ಬೈಕೋಬೇಡ್ವೆ. ಇಲ್ಲ ಕಣೇ, ನಿನ್ ನೆನಪು, ನಿನ್ನ ಪ್ರೀತಿ, ಒಂದು ಬಿಂದು ಪ್ರೀತಿಯ ಹನಿ...ಎಲ್ಲವನ್ನೂ ಹೃದಯತುಂಬಾ ಹರಡಿಕೊಂಡು ಖುಷಿಪಡ್ತಾ ಇದ್ದೀನಿ ಕಣೇ. ಕನಸುಗಳಿಗೆ ಜೀವ ಕೊಟ್ಟು ಪೋಷಿಸ್ತಾ ಇದ್ದೀನಿ ಕಣೇ. ರಾತ್ರಿ ಒಬ್ಬನೇ ನಿದ್ದೆಗೆ ಜಾರಿದಾಗ ಕತ್ತಲೂ ಕವಿದ ನನ್ನ ಕೋಣೆಯಲ್ಲಿ ಪುಟ್ಟ ಹಣತೆ ಹಚ್ಚಿ ನಿನ್ನ ನೆನಪುಗಳನ್ನು ಗಟ್ಟಿಯಾಗಿ ತಬ್ಬಿಕೊಂಡು ನಿನ್ನ ಮಡಿಲ ನೆನಪಲ್ಲಿ ನಿದ್ದೆಹೋಗುತ್ತಿದ್ದೇನೆ ಮುನ್ನಿ.

ಮುನ್ನಿ,

ಇನ್ನೆರಡು ದಿನ. ಮಳೆ ನಿಲ್ಲಲ್ಲಿ. ಊರೆಲ್ಲ ಪ್ರವಾಹ ಬಂದುಬಿಟ್ಟಿದೆ. ತಕ್ಷಣ ನಿನ್ನ ಹತ್ತಿರ ಬಂದುಬಿಡ್ತೀನಿ ಕಣೇ. ಪ್ಲೀಸ್ ಮುನಿಸಿಕೋಬೇಡ್ವೇ ಮಳೇ ಥರ...! ಪ್ರಾಮೀಸ್ ಮಾಡು..ಖುಷಿಯಾಗಿರ್ತಿ ಅಲ್ವಾ?


ನಿನ್ನವನೇ

ಮುನ್ನಾ...