Thursday, October 29, 2009

ಶರಧಿಗೆ ಎರಡು ವರ್ಷ. ನಿಮ್ಮ ಹಾರೈಕೆ ಹೀಗೇ ಇರಲಿ...


ಪ್ರೀತಿಯ ಸ್ನೇಹಿತರೇ,

ನಿಮಗಿದೋ ಪ್ರೀತಿಯ ನಮನಗಳು.

ನಿಮಗೊಂದು ಶುಭಸುದ್ದಿ ತಿಳಿಸಬೇಕಿದೆ. ನನಗೆ ಖುಷಿ, ಮನದಳೊಗೆ ಸಂಭ್ರಮ. ಏಕೆ ಗೊತ್ತೆ ನನ್ನ ಶರಧಿಗೆ ನವೆಂಬರ್ 3ನೇ ತಾರೀಕಿಗೆ ಭರ್ತಿ ಎರಡು ವರ್ಷ. ಶರಧಿ ಎರಡು ವರ್ಷ ನಿರಂತರವಾಗಿ ಹರಿದಿದ್ದಾಳೆ. ಇದೀಗ ಮೂರನೇ ವರ್ಷಕ್ಕೆ ಕಾಲಿಡುತ್ತಿದ್ದಾಳೆ. ಅವಳು ದೊಡ್ಡವಳಾಗಿದ್ದಾಳೆ. ಜೊತೆಗೆ ನನ್ನನ್ನು ಸಾಕಷ್ಟು ಬೆಳೆಸಿದ್ದಾಳೆ. ಅಪಾರ ಸ್ನೇಹಿತರನ್ನು ನೀಡಿದ್ದಾಳೆ. ಬೆನ್ನು ತಟ್ಟೋರು, ತಪ್ಪಾಗ ತಿದ್ದಿ ತಿಡೋರು ಎಲ್ಲಾರೂ ಸಿಕ್ಕಿದ್ದಾರೆ. ನಂಗದು ಖುಷಿ. ಎರಡು ವರ್ಷದಲ್ಲಿ ಶರಧಿ ಕಂಡಿದ್ದು 146 ಬರಹಗಳನ್ನು. ಆಫೀಸ್ ಕೆಲಸ, ನಿತ್ಯ ಕಾಡುವ ಅನಗತ್ಯ ಕಿರಿಕಿರಿ ನಡುವೆ 200 ಬರಹಗಳನ್ನು ದಾಟುವ ಕನಸು ನನಸಾಗಲಿಲ್ಲ. ಆದರೂ ಬರಹಪ್ರೀತಿ ಕುಂದಿಲ್ಲ. ನನ್ನೊಳಗಿನ ಕನಸುಗಳು ಆಗಾಗ ಮೂರ್ತ ರೂಪ ಪಡೆಯುತ್ತಲೇ ಇವೆ.
ನನ್ನ ಪ್ರೋತ್ಸಾಹಿಸಿದ ಎಲ್ಲಾ ಸ್ನೇಹಿತರಿಗೂ ಕೃತಜ್ಞತೆಗಳು. ಇನ್ನು ಮುಂದೆಯೂ ನನ್ನ ಶರಧಿ ನಿರಂತರವಾಗಿ ಹರಿಯುತ್ತಾಳೆ ಅನ್ನೋ ಪುಟ್ಟ ನಂಬಿಕೆ. ನಿಮ್ಮ ಪ್ರೀತಿ, ಪ್ರೋತ್ಸಾಹ ಇದ್ದೇ ಇರುತ್ತೆ ಅನ್ನೋ ಅಚಲ ನಂಬಿಕೆ ನನ್ನದು. ನಿಮ್ಮ ಪ್ರೋತ್ಸಾಹಕ್ಕೆ ನನ್ನ ಪ್ರೀತಿಯ ಸಲಾಂ.

ಈ ನಡುವೆ ಇನ್ನೊಂದು ಸತ್ಯ ಹೇಳಲೇಬೇಕಿದೆ. ಬಹುಶಃ ಬಹುತೇಕರಿಗೆ ಗೊತ್ತೇ ಇದೆ. ಕಳೆದ ಮಾರ್ಚ್ ನಲ್ಲಿ 'ಧರಿತ್ರಿ' ಅನ್ನೋ ಹೆಸರಲ್ಲಿ ಬ್ಲಾಗ್ ಆರಂಭಿಸಿದ್ದೆ. ಅದೇಕೆ ಅನಾಮಧೇಯ ಹೆಸರು? ಅಂದುಕೊಳ್ಳಬಹುದು. ವೃತ್ತಿಯಲ್ಲಿರುವಾಗ ಕೆಲವೊಂದು ನಿಯಮಗಳಿಗೆ ನಾವು ನಿಷ್ಠರಾಗಿರಬೇಕಾಗುತ್ತೆ. ಹಾಗಾಗಿ, ಅನಿವಾರ್ಯವಾಗಿ ಶರಧಿ ಜೊತೆಗೆ ಧರಿತ್ರಿಯನ್ನೂ ಆರಂಭಿಸಿದ್ದೆ. ಧರಿತ್ರಿನೂ 33 ಬರಹಗಳನ್ನು ಕಂಡಿದ್ದಾಳೆ. ಶರಧಿಯಂತೆ ಅವಳನ್ನೂ ಪ್ರೀತಿಯಿಂದ ಸಲಹುತ್ತಿದ್ದೇನೆ. ನೀವೆಲ್ಲರೂ ಪ್ರೋತ್ಸಾಹಿಸುತ್ತಲೇ ಇದ್ದೀರಿ. ಇದು ನನ್ನ ಅದೃಷ್ಟ ಎಂದುಕೊಳ್ಳುತ್ತೇನೆ. ಇವತ್ತು ಈ ವಿಚಾರವನ್ನು ಅಧಿಕೃತವಾಗಿ ಹೇಳಿಬಿಟ್ಟಿದ್ದೀನಿ. ಇನ್ನು ಮುಂದೆನೂ ಧರಿತ್ರಿ ಧರಿತ್ರಿಯಾಗೇ, ಶರಧಿ ಶರಧಿಯಾಗೇ ಮುಂದುವರಿಯುತ್ತಿದ್ದಾರೆ. ಶರಧಿಗೆ ಅಣ್ಣ ರೋಹಿ ಚೆಂದದ ವಿನ್ಯಾಸ ಮಾಡಿಕೊಟ್ಟರೆ, ಧರಿತ್ರಿಗೆ ನನ್ನ ಸೀನಿಯರ್ ಹಾಗೂ ಗೆಳೆಯ ಲಕ್ಷ್ಮಿಕಾಂತ್ ವಿನ್ಯಾಸ ಮಾಡಿದ್ದಾರೆ. ಅವರಿಗೆ ತುಂಬಾ ಥ್ಯಾಂಕ್ಸ್. ಯಾರಿಗೂ ನೋವು ಕೊಡದ ರೀತಿಯಲ್ಲಿ ಭಾವನೆಗಳನ್ನು ಬಿಚ್ಚುತ್ತಾ ಹೋಗುವುದು ನನ್ನ ಇಷ್ಟ. ಎಲ್ಲೋ ನೋಡಿದ್ದು, ಹೃದಯವನ್ನು ತಟ್ಟಿದ್ದು ಎಲ್ಲವೂ ಬರಹಗಳಾಗಿವೆ. ಮುಂದೆಯೂ ಹೊಸ ಕೆಲಸದೊತ್ತಡ, ನಿತ್ಯ ಕಾಡುವ ಸಮಸ್ಯೆಗಳು, ಚಿಂತೆಗಳು ಅಥವಾ ಒಂಟಿಯಾಗಿದ್ದ ನಾನು ಜಂಟಿಯಾದರೂ ಧರಿತ್ರಿ ಮತ್ತು ಶರಧಿ ಎರಡೂ ಬ್ಲಾಗ್ ಗಳನ್ನು ಅಷ್ಟೇ ಪ್ರೀತಿಯಿಂದ ಸಲಹುತ್ತೇನೆ. ನಿಮ್ಮ ಪ್ರೋತ್ಸಾಹ ಇದ್ದೇ ಇರುತ್ತದೆ ಎಂದುಕೊಂಡಿದ್ದೀನಿ. ನಿಮ್ಮ ಪ್ರೀತಿ, ಪ್ರೋತ್ಸಾಹಕ್ಕೆ ನಾ ಋಣಿ.

ಪ್ರೀತಿಯಿಂದ,
ಚಿತ್ರಾ ಕರ್ಕೇರಾ

Tuesday, October 27, 2009

ಮೌನದಲ್ಲೇ ಮಾತಾಡ್ತೀನಿ, ಕವನ ಬರಿ...!

ಯಾಕೋ ಪತ್ರ ಬರೀಬೇಕು ಅನಿಸುತ್ತೆ ಕಣೋ..ಅದು ನಿನ್ನ ಪತ್ರ ನೋಡಿದ ಮೇಲೆ. ಇದೇ ಮೊದಲ ಪತ್ರ, ಬಹುಶಃ ಇದೇ ಕೊನೆಯ ಪತ್ರ ಆಗಿರಬಹುದು. ತುಂಬಾ ಜನ ಹೇಳ್ತಾರೆ ಪ್ರೀತಿಯ ಪತ್ರ ತುಂಬಾ ಮಾತಾಡುತ್ತೆ ಅಂತ. ಹೌದು ಕೂಡ, ನಿನ್ನ ಮಾತುಗಳಿಂದ ನೀ ಬರೆದ ಪತ್ರಾನೇ ಇಷ್ಟ ಆಯಿತು. ಆದರೆ, ನಿನ್ ಥರ ಚೆನ್ನಾಗಿ ಪತ್ರ ಬರೆಯೋಕೆ, ನಿನ್ ಥರ ಭಾವನೆಗಳನ್ನು ಪದಗಳಲ್ಲಿ ಪೋಣಿಸೋಕೆ, ನಿನ್ ಥರ ಸುಂದರ ಭಾವಗೀತೆಗಳನ್ನು ಬರೆಯೋಕೆ, ನಿನ್ ಥರ ಪ್ರಕೃತಿ ಮಧ್ಯೆ ಕುಳಿತು ಕತೆ-ಕವನ, ಲೇಖನ ಗೀಚೋಕೆ ಬರೊಲ್ಲ ಕಣೋ. ಅದಕ್ಕೆ ನೋಡು ನೀನು ಇಷ್ಟು ದಿನ ಬಚ್ಚಿಟ್ಟ ಪ್ರೀತಿ, ನೀ ಗೀಚಿದ ಕವನ, ನೀ ಮೂಡಿಸಿದ ಸುಂದರ ಕಲೆ..ಎಲ್ಲವನ್ನೂ ಮೌನವಾಗೇ ನೋಡುತ್ತಾ ಕಣ್ಣಲ್ಲೇ ಸವಿದೆ, ವಿನಃ ಅಕ್ಷರಗಳಲ್ಲಿ ಪೋಣಿಸಲು ಸಾಧ್ಯವಾಗಲಿಲ್ಲ. ಮಾತಿನಲ್ಲಿ ಹೇಳಲೂ ಆಗಲಿಲ್ಲ. ಬಹುಶಃ ನನ್ನ ಮೌನವನ್ನೂ ಅರ್ಥಮಾಡಿಕೊಳ್ಳೋ ಅಗಾಧ ಕಲೆಯನ್ನು ದೇವರು ನಿಂಗೆ ನೀಡಿದ್ದನಲ್ಲಾ ಅದಕ್ಕೆ ದೇವರಿಗೇ ಥ್ಯಾಂಕ್ಸ್ ಹೇಳಿದ್ದೀನಿ ಕಣೋ.

ಹೌದು, ನೀನಂದ್ರೆ ನಂಗಿಷ್ಟ, ಆದ್ರೆ ನಾ ಹೇಳಲ್ಲಿಲ್ಲ..ನೀನಿಷ್ಟ, ನಿನ್ನ ನಗು ಇಷ್ಟ, ನಿನ್ನ ಪ್ರೀತಿ ಇಷ್ಟ ಅಂತ! ನೀನೇ ಹೇಳಿಬಿಟ್ಟಿಯಲ್ಲಾ...ಅದು ನಂಗೆ ಖುಷಿ, ನಿನ್ನ ಧೈರ್ಯಕ್ಕೆ ನನ್ನ ಪುಟ್ಟ ಸಲಾಂ.

ಎಷ್ಟು ಕೆಟ್ಟದ್ದಾಗಿ ಪತ್ರ ಬರೆದಿದ್ದಾಳೆ ಅಂತ ಬೈಕೋಬೇಡ. ಮುಖ ಊದಿಸಿಕೋಬೇಡ. ನಿನ್ನ ಸುಂದರ ಮೂಗಿನ ಮೇಲೆ ಸಿಟ್ಟನ್ನು ನೋಡೋದು ನಂಗೆ ಇಷ್ಟವಿಲ್ಲ. ನಿನ್ನ ಸುಂದರ ಕಣ್ಣುಗಳ ದುರುಗುಟ್ಟುವಿಕೆಯನ್ನು, ಸಿಟ್ಟಿನಿಂದ ನೀನು ಬಡಬಡಿಸೋದನ್ನು ನನ್ನ ಕಣ್ಣಿಂದ ನೋಡಕ್ಕಾಗಲ್ಲ ಕಣೋ. ಅದಕ್ಕೆ ಯಾವತ್ತೂ ಸಿಟ್ ಮಾತ್ರ ಮಾಡಿಕೊಳ್ಳಬೇಡ.

ತುಂಬಾ ಹೇಳಬೇಕನಿಸುತ್ತೆ..ಆದರೆ ಬರೆಯೋಕ್ಕಾಗಲ್ಲ. ನಿನ್ನ ಥರ ನೀ ಬಿತ್ತಿದ ಬೀಜಗಳಿಗೆ ನಾ ರೈತ ಆಗ್ತೀನಿ ಅನ್ನೋಕೆ ಬರಲ್ಲ. ಜೀವನವಿಡೀ ನಿನಗೆ ಮೊಗೆದಷ್ಟು ಬತ್ತದ ಪ್ರೀತಿ ನೀಡ್ತೀನಿ. ನಿನ್ನ ಕನಸು, ನಿರೀಕ್ಷೆಗಳಿಗೆ ನೀರೆರೆದು ಪೋಷಿಸ್ತೀನಿ. ನನ್ನ ಹೃದಯ ತುಂಬಾನು ಕನಸುಗಳಿದೆ ಕಣೋ...ಪುಟ್ಟ ಪುಟ್ಟ ಕನಸುಗಳು. ಅದಕ್ಕೆ ಜೀವ ತುಂಬ್ತೀಯಾ ಅಂತ ಗೊತ್ತು ನಂಗೆ. ಜೀವನವನ್ನು ಪ್ರೀತಿ, ಖುಷಿ, ನೆಮ್ಮದಿಗಳಿಂದ ಸಿಂಗರಿಸಿಬಿಡು..ಅದಕ್ಕೆ ನನ್ನದೂ ಸಾಥ್ ಇದೆ.ಅಷ್ಟೇ ಸಾಕಲ್ವಾ? ನಮ್ಮ ಬದುಕಿಗೆ.....? ಇನ್ನೇನು ಹೇಳಕ್ಕೆ ಬರಲ್ಲ...ಮೌನದಲ್ಲೇ ಮಾತಾಡ್ತೀನಿ. ನೀನು ಕವನ ಬರೆ...!
ಅದಿರಲಿ, ಯಾವಾಗ ನನ್ನನ್ನು ನಿನ್ನೂರಿಗೆ ಕರೆದುಕೊಂಡು ಹೋಗ್ತಿಯಾ? ನಿಮ್ಮಮ್ಮನಿಗೆ ನಿಮ್ಮಪ್ಪನಿಗೆ ಪರಿಚಯ ಮಾಡಿಸ್ತೀಯಾ ಹೇಳು.

Monday, October 5, 2009

ಪ್ರಾಮೀಸ್ ಮಾಡು..ಖುಷಿಯಾಗಿರ್ತಿ ಅಲ್ವಾ?

ಮುನ್ನಿ....

ಬಹಾರೋ ಫೂಲ್ ಬರ್ಸಾ ಹೋ

ಮೇರಾ ಮೆಹಬೂಬ್ ಆಯಾ ಹೇ...

ರಫೀ ಹಾಡಿದ ಹಾಡನ್ನು ಕೇಳುತ್ತಾ ಪತ್ರ ಬರೀತಾ ಇದ್ದೀನಿ ಮುನ್ನಿ.


ಹೇಗಿದ್ಯಾ? ಇಂದು ನಮ್ಮೂರಲ್ಲಿ ಮಳೆ ಬಂದಿದೆ ಕಣೇ. ನಿಮ್ ಕಡೆ ಹೊಲ, ಗದ್ದೆ, ಕೆರೆ-ತೊರೆಗಳು ತುಂಬಿ ಹರಿಯುತ್ತಿದ್ದರೂ ನಮ್ಮೂರಲ್ಲಿ ಅದೇಕೋ ವರುಣನಿಗೆ ನಮ್ ಮೇಲೆ ಮುನಿಸು. ಆದರೆ ಇಂದು ಮಳೆ ಬಂದಿದೆ. ಮನೆಯಂಗಳ ದೊಡ್ಡ ತೊರೆಯಾಗಿದೆ. ತುಂಬಿ ಹರಿಯೋ ಕೆರೆ-ತೊರೆಗಳನ್ನು ನೋಡುವಾಗ ತುಂಬಾ ಖುಷಿಯಾಗುತ್ತಿದೆ. ನಮ್ಮೂರ ತೋಟಗಳಲ್ಲಿ ಹಸಿರು ಮೈ ತುಂಬಿ ನಿಂತಿದೆ. ಬಾಲ್ಯದ ತುಂಟಾಟಗಳು ನೆನಪಾಗುತ್ತಿವೆ. ಸಣ್ಣವನಿರುವಾಗ ಜೋರು ಮಳೆಗೆ ಆಲಿಕಲ್ಲು ಹೆಕ್ಕಕೆ ಹೋಗಿ ಜಾರಿ ಬಿದ್ದಿದ್ದು ನೆನಪಾಗಿ ನಗು ಬಂತು ಕಣೇ. ಆವಾಗ ನೀನಿನ್ನೂ ಚಡ್ಡಿ ಹಾಕದೆ ಮನೆತುಂಬಾ ಓಡಾಡಿ ಬೊಕ್ಕು ಬಾಯಿ ಅಗಲಿಸಿ ಎಲ್ಲರನ್ನೂ ನಗಿಸುತ್ತಿದ್ದೆ!!

ಮಳೆ ಬಂದಾಗ ಅದೇಕೆ ನಿನಗೆ ಪತ್ರ ಬರೆದೆ ಅಂತ ಅಚ್ಚರಿಯಾಯಿತೇ? ಅಮ್ಮ ಮಾಡಿಟ್ಟ ಹಪ್ಪಳ ಸಂಡಿಗೆ ಮೆಲ್ಲುತ್ತಾ ನಿನ್ನದೇ ನೆನಪಿನ ಮಳೆಯಲ್ಲಿ ತೋಯ್ತಾ ಇದ್ದೀನಿ ಕಣೇ ಮುನ್ನಿ. ನಿಂಗೆ ನೆನಪಿದೆಯಾ ನಾನು-ನೀನು ಭೇಟಿಯಾದ ಮೊದಲ ದಿನ ಧಾರಾಕಾರ ಮಳೆ ಸುರಿದು, ನಾನೂ ನಿನ್ನ ಛತ್ರಿಯೊಳಗೆ ಹುದುಗಿಹೋಗಿದ್ದು! ಅಷ್ಟೇ ಅಲ್ಲ, ಮಳೆಯಲ್ಲಿಯೇ ನಿನ್ನದೆಯಲ್ಲಿ ನಾನು ಕರಗಿಹೋಗಿದ್ದು, ನಿನ್ನ ಹೆಗಲ ಮೇಲೆ ಕೈಹಾಕಿದಾಗ ನಾಚಿಕೆಯಿಂದ ನನ್ನ ಕೈಯನ್ನು ಸರಿಸಿದ್ದು..! ಕೊನೆಗೂ ಮಳೆ ಎಡಬಿಡದೆ ಸುರಿದಾಗ ನೆನೆಯುತ್ತಲೇ ಮನೆ ಸೇರಿಕೊಂಡಿದ್ದು. ಮತ್ತೆ ಸುಂದರ ನೆನಪುಗಳೊಂದಿಗೆ ನಿದ್ದೆಯ ಮಂಪರಿಗೆ ಜಾರಿದ್ದು..ಎಲ್ಲವೂ ನೆನಪಾಗುತ್ತಿದೆ ಕಣೇ. ಅಮ್ಮನ ಕೈತುತ್ತ ಮೆಲ್ಲುವಾಗ ನಿನ್ನದೇ ನೆನಪಾಗುತ್ತೆ ಮುನ್ನಿ. ಅಮ್ಮನ ಬಿಟ್ಟರೆ ನಾನು ಕೈತುತ್ತು ಉಂಡಿದ್ದು ನಿನ್ನ ಕೈಯಿಂದ ಕಣೇ.

ಮುನ್ನಿ...

ಜೋರು ಮಳೆಗೆ ನಮ್ಮೂರ ಜೋಗವನ್ನು ನಿಂಗೆ ತೋರಿಸಬೇಕು...ಮುಂಗಾರು ಮಳೆಯಂತೆ ಪ್ರೀತಿಯ ಮಳೆಯಲ್ಲಿ ನೆನೆಯಬೇಕು. ಮನತುಂಬಾ ಪ್ರೀತಿಯ ಕಚಗುಳಿಯಲ್ಲಿ ಖುಷಿಪಡಬೇಕು. ಹಸಿರು ಜರತಾರಿ ಉಟ್ಟ ಸಹ್ಯಾದ್ರಿಯನ್ನು ನಿಂಗೆ ತೋರಿಸಿ, ನಿನ್ನ ಕಣ್ಮನ ಖುಷಿಗೊಳಿಸಬೇಕು. ಪ್ರಕೃತಿಯನ್ನು ಪ್ರೀತಿಸುವ ನನ್ ಮುನ್ನಿಗೆ ನಮ್ಮೂರ ಮಳೆ, ಇಳೆ, ಹಸಿರು...ಎಲ್ಲವನ್ನೂ ತೋರಿಸಬೇಕು. ನನ್ನಮ್ಮನಿಗೆ ನೋಡು ಮುನ್ನೀನ ತಂದಿದ್ದೀನಿ ಅಂತ ಪರಿಚಯ ಮಾಡಿಸಬೇಕು. ಅಮ್ಮನಿಂದ ಭಲೇ ಅಂತ ಬೆನ್ನು ತಟ್ಟಿಸಿಕೊಳ್ಳಬೇಕು. ಹೀಗೇ ಏನೇನೋ ಅಂದುಕೊಳ್ತಾ ಮನೆಯೊಳಗೆ ನಿನ್ನ ಬೆಚ್ಚನೆಯ ನೆನಪುಗಳ ಜೊತೆ ಕುಳಿತಿದ್ದೀನಿ ಕಣೇ ಮುನ್ನಿ.

ಹೌದು ಮುನ್ನಿ, ಊರಿಗೆ ಹಬ್ಬಕ್ಕೆ ಹೋದವನು ಫೋನ್ ಮಾಡಿಲ್ಲ, ಮೆಸೇಜ್ ಮಾಡಿಲ್ಲ ಅಂತ ಮುನಿಸಿಕೋಬೇಡ್ವೇ? ಮಳೆ ನೋಡುತ್ತಾ ಬೆಚ್ಚಗೆ ಹಪ್ಪಳ ತಿಂದು ಕಾಲ ಕಳೆಯುತ್ತಿದ್ದಾನೆ ಅಂತ ಬೈಕೋಬೇಡ್ವೆ. ಇಲ್ಲ ಕಣೇ, ನಿನ್ ನೆನಪು, ನಿನ್ನ ಪ್ರೀತಿ, ಒಂದು ಬಿಂದು ಪ್ರೀತಿಯ ಹನಿ...ಎಲ್ಲವನ್ನೂ ಹೃದಯತುಂಬಾ ಹರಡಿಕೊಂಡು ಖುಷಿಪಡ್ತಾ ಇದ್ದೀನಿ ಕಣೇ. ಕನಸುಗಳಿಗೆ ಜೀವ ಕೊಟ್ಟು ಪೋಷಿಸ್ತಾ ಇದ್ದೀನಿ ಕಣೇ. ರಾತ್ರಿ ಒಬ್ಬನೇ ನಿದ್ದೆಗೆ ಜಾರಿದಾಗ ಕತ್ತಲೂ ಕವಿದ ನನ್ನ ಕೋಣೆಯಲ್ಲಿ ಪುಟ್ಟ ಹಣತೆ ಹಚ್ಚಿ ನಿನ್ನ ನೆನಪುಗಳನ್ನು ಗಟ್ಟಿಯಾಗಿ ತಬ್ಬಿಕೊಂಡು ನಿನ್ನ ಮಡಿಲ ನೆನಪಲ್ಲಿ ನಿದ್ದೆಹೋಗುತ್ತಿದ್ದೇನೆ ಮುನ್ನಿ.

ಮುನ್ನಿ,

ಇನ್ನೆರಡು ದಿನ. ಮಳೆ ನಿಲ್ಲಲ್ಲಿ. ಊರೆಲ್ಲ ಪ್ರವಾಹ ಬಂದುಬಿಟ್ಟಿದೆ. ತಕ್ಷಣ ನಿನ್ನ ಹತ್ತಿರ ಬಂದುಬಿಡ್ತೀನಿ ಕಣೇ. ಪ್ಲೀಸ್ ಮುನಿಸಿಕೋಬೇಡ್ವೇ ಮಳೇ ಥರ...! ಪ್ರಾಮೀಸ್ ಮಾಡು..ಖುಷಿಯಾಗಿರ್ತಿ ಅಲ್ವಾ?


ನಿನ್ನವನೇ

ಮುನ್ನಾ...

Sunday, September 27, 2009

ಬದುಕಿಗೆ ಪರಿಧಿ ಹಾಕೋಳ್ತಾ ಇದ್ದೀವಿ ಅನಿಸ್ತಾ ಇದೆ...

ಹಂಚಿ ಉಂಡರೆ ಹಸಿವಿಲ್ಲ...!! ಹತ್ತನೇ ತರಗತಿಯಲ್ಲಿ ನಾನು ಓದುತ್ತಿದ್ದಾಗ ಬಾಗೇವಾಡಿ ಅನ್ನೋ ಹೆಸರಿನ ಮೇಷ್ಟ್ರು ಇದ್ದರು. ತುಂಬಾ ಒಳ್ಳೆಯ ಮೇಷ್ಟ್ರು.ಮೂರು ವರ್ಷ ನಮ್ಮ ಜೊತೆಗಿದ್ದ ಆ ಮೇಷ್ಟ್ರು ಆಗಾಗ ಹೇಳುತ್ತಿದ್ದ ಮಾತು ಹಂಚಿ ಉಂಡರೆ ಹಸಿವಿಲ್ಲ. ಈಗಲೂ ಆ ಮಾತು ಆಗಾಗ ನೆನಪಾಗುತ್ತಿದೆ. ಮಾಮೂಲಿ ನಮ್ಮನೆಯಲ್ಲಿ ನಾನು-ತಮ್ಮ ಇಬ್ಬರೇ ಇರ್ತೀವಿ. ಆಗ ಒಂದು ಥರ ಬೋರ್. ನನಗೆ ರಜೆ ಇದ್ದ ದಿನ ಅವನಿಗರಲ್ಲ, ಅವನಿಗೆ ರಜೆ ಇದ್ದ ದಿನ ನಂಗೆ ರಜೆ ಇರೊಲ್ಲ. ಅದಕ್ಕೆ ಅವನಿಗೆ ರಜೆ ಇದ್ದ ನಾನು ಆಫೀಸ್ ನಿಂದ ಬೇಗ ಹೊರಡೋದು, ನಂಗೆ ರಜೆ ಇದ್ದ ದಿನ ಅವನು ಆಫೀಸ್ ನಿಂದ ಬೇಗ ಹೊರಟುಬರೋದು. ನಮಗೆ ರಜೆ ಇದ್ದ ದಿನ ಮಾವ, ಅಣ್ಣ ಬೇಗನೆ ಮನೆಮುಂದೆ ಹಾಜರಾಗೋದು. ಏನಾದ್ರೂ ಸ್ಪೆಷಲ್ ಅಡುಗೆ ಮಾಡೋದು, ದೇವಸ್ಥಾನಕ್ಕೆ ಹೋಗೋದು...ಅದೊಂದು ಥರಾ ನಮಗೆ ತುಂಬಾ ಖುಷಿಕೊಡೋದು. ನಂಗೆ ಎಲ್ಲಕ್ಕಿಂತ ಖುಷಿಕೊಡೋದು ಎಲ್ಲರೂ ಜೊತೆಗೆ ಊಟ ಮಾಡೋದು. ನಾವೇನದ್ರೂ ಮಾಡಿದ್ರೆ ಪಕ್ಕದ್ಮನೆ ಅಡುಗೆ ತಜ್ಞೆ ಆಂಟಿ ಅಲ್ಲಿ ಹಾಜರಾಗಿ..ನಾವು ಮಾಡೋ ಡಬ್ಬ ಅಡುಗೇನ ಇನ್ನಷ್ಟು ರುಚಿಯಾಗಿಸ್ತಾರೆ. ಆಮೇಲೆ ಅವರ ಮನೆ ಸಾರು ನಮ್ಮನೆಗೆ, ನಮ್ಮನೆ ಸಾರು ಅವರ ಮನೆಗೆ ಹೋಗುತ್ತೆ. ಒಟ್ಟಿನಲ್ಲಿ ಮನೆತುಂಬಾ ಜನರು ಓಡಾಡ್ತಾ ಇದ್ರೆ ಸಕತ್ ಖುಷಿ ಆಗೋದು.

ಪಕ್ಕದ್ಮನೆ ತಾತನೂ ಚಿತ್ರಾನಿಗೆ ಸಾರು ಕೊಟ್ಟೆಯೇನು? ಅಂತ ರಾತ್ರಿ ಮಲಗೋಕೆ ಮುಂಚೆ ಮೊಮ್ಮಕ್ಕಳನ್ನು ಗದರಿಸಿ ಅವರ ಕೈಯಲ್ಲಿ ಕೊಟ್ಟು ಕಳಿಸ್ತಾರೆ. ಸ್ವಲ್ಪನೇ ಆಗಲೀ ಮತ್ತೊಬ್ಬರಿಗೆ ಕೊಟ್ಟು ತಿನ್ನೋದ್ರಲ್ಲಿ ತುಂಬಾ ಖುಷಿ ಇರುತ್ತೆ ಅಲ್ವಾ? ಊರಲ್ಲಿ ಆದ್ರೆ ಮನೆಗೆ ಯಾರಾದ್ರೂ ನೆಂಟರು ಬರ್ತಾರೆ, ಖುಷಿ-ಖುಷಿಯಾಗಿ ಸಂಭ್ರಮಿಸೋ ಅವಕಾಶಗಳಿರ್ತವೆ. ಆದರೆ, ಬೆಂಗಳೂರಿನಲ್ಲಿದ್ರೆ ನೆಂಟರಿಲ್ಲ, ತುಂಬಾ ಆಪ್ತರಿಲ್ಲ, ಆಪ್ತರಿದ್ರೂ ಅವರಿಗೆ ಅವರದೇ ಆಗ ಕೆಲಸಗಳಿರ್ತವೆ. ನಮ್ಮನೆಯಲ್ಲಿ ಬಂದು ಅವರಿಗೆ ಹರಟೆ ಹೊಡೆಯೋಕೆ ಸಮಯವೆಲ್ಲಿ ಇರುತ್ತೆ?

ಒಂದು ಕಾಲದಲ್ಲಿ ಎಲ್ಲರೂ ಜೊತೆಯಾಗೇ ಬಾಳೋ ಅವಿಭಕ್ತ ಕುಟುಂಬ ಪರಂಪರೆ ಇತ್ತು. ಕುಟುಂಬದ ಹತ್ತು-ಹದಿನೈದು ಮಂದಿ ಜೊತೆಗೆ ಬಾಳೋ ಸುಂದರ ಕುಟುಂಬ. ನನ್ನ ಗೆಳತಿ ಯೊಬ್ಬಳು ಗೌರಿ ಅಂತ ಬಳ್ಳಾರಿಯವಳು, ಅವರ ಮನೆಯಲ್ಲಿ ಈಗಲೂ 32 ಮಂದಿ ಇದ್ದಾರೆ. ಇನ್ನೂ ಆ ಕುಟುಂಬದಲ್ಲಿ ಜಮೀನಿಗೆ ಕಿರಿಕಿರಿ ಇಲ್ಲ. ತಾತ-ಮುತ್ತಾತರ ಕಾಲದಿಂದಲೂ ಆಸ್ತಿ ಪಾಲಾಗಿಲ್ಲ. ದೊಡ್ಡ ಮನೆಯಲ್ಲಿ ಮನೆ ತುಂಬಾ ಓಡಾಡುವ ಮಕ್ಕಳು, ಅಜ್ಜಿ, ತಾತಂದಿರು, ಹೆಂಗಳೆಯರು. ದಿನಾ ಮನೆಯೇ ಹಬ್ಬದಂತಿರುತ್ತೆ. ಇಂಥ ಕುಟುಂಬಗಳು ಹಳ್ಳಿ ಕಡೆ ಇದ್ರೂ ಕ್ರಮೇಣ ಮರೆಯಾಗುತ್ತವೆ. ಆರತಿಗೊಂದು ಕೀರುತಿಗೊಂದು ಮಗು. ಅವರಿಗೆ ಮದುವೆಯಾಗೋ ಸಮಯದಲ್ಲಿ ಆಸ್ತಿಯನ್ನು ಪಾಲು ಮಾಡಿ ಕೊಟ್ಟುಬಿಡುತ್ತಾರೆ. ಅದರ ಜೊತೆ ಅವರ ಮನಸ್ಸು ಕೂಡ ಇಬ್ಭಾಗ ಆಗಿ ಬಿಡುತ್ತೆ.

ನಂಗನಿಸೋದು ಅಂಥ ಸುಂದರ ಕುಟುಂಬ ಇರಬೇಕಿತ್ತು ಅಂತ. ಈ ಆಧುನಿಕತೆ, ವೇಗದ ಬದುಕು, ಒಂಜಾಟದ ನಡುವೆ ನಮ್ಮ ಆ ಸುಂದರ ಬದುಕಿನ ಕಲ್ಪನೆ ಮರೆಯಾಗುತ್ತಿದೆಯಲ್ಲಾ ಎಂದನಿಸುತ್ತೆ. ಅತ್ತೆ, ಮಾವ ಜೊತೆಗಿರುವ ಬದಲು ತಾನು ತನ್ನ ಗಂಡ ಮಾತ್ರ ಆರಾಮವಾಗಿ ಇದ್ದುಬಿಡಬೇಕು ಅನ್ನೋ ಸೊಸೆ, ಅಮ್ಮ-ಅಪ್ಪನಿಗೆ ವಯಸ್ಸಾದ ಹಾಗೇ ವೃದ್ಧಾಶ್ರಮದ ಬೇಲಿಯೊಳಗೆ ಅವರ ಕನಸನ್ನೇ ಕೊಲ್ಲುವ ಮಗ ಅಥವಾ ಮಗಳು,...ಥತ್! ಹೀಗೇ ಆಗಬಾರದಿತ್ತು ಅನಿಸುತ್ತೆ. ಜೊತೆಯಾಗಿ ಕಲೆದು, ಜೊತೆಯಾಗಿ ಖುಷಿಪಟ್ಟು, ಜೊತೆಯಾಗಿ ಬದುಕು ನಡೆಸುವ ಆ ಸುಂದರ ಜೀವನ ಯಾಕೆ ಮರೆಯಾಗುತ್ತಿದೆ? ಅಲ್ವಾ?

ಹಂಚಿ ಉಂಡರೆ ಹಸಿವಿಲ್ಲ ಅಂದ ಹುಡುಗಿ ಏನೋನೋ ಬರೀತಾ ಹೋದ್ಳು ಅನಿಸಿಬಿಡ್ತಾ? ಹೌದು, ಒಮ್ಮೊಮ್ಮೆ ಹೀಗೇ ಈ ಯೋಚನೆಗಳು...ಆಫಿಸ್ನಲ್ಲಿ ಕೂತಿರ್ತೀನಿ..ಹಂಗೆ ನೆಟ್ಟಗೆ ಮನೆಯ ಅಡುಗೆ ಮನೆಗೆ ಹೋಗಿ ಬರ್ತೀನಿ. .ಲಂಗು ಲಗಾಮಿಲ್ಲದ ಕುದುರೆಯಂತೆ ಯೋಚನೆಗಳು ಅಲ್ವಾ?

ಯಾಕೋ ಬದುಕಿಗೆ ಒಂದು ಪರಿಧಿ ಹಾಕ್ಕೊಂಡು ಮನುಷ್ಯ ಜೀವಿಸ್ತಾ ಇದ್ದಾನೆ ಅನಿಸ್ತಾ ಇದೆ..ಬದುಕು ಹರಿದು ಹಂಚಿ ಹೋಗುತ್ತಿದೆಯೇ ಎಂದನಿಸ್ತಾ ಇದೆ...

Tuesday, September 22, 2009

ನೀನು ನನ್ನವಳು ಅನ್ನೋದಕ್ಕಿಂತ ಸಂತೋಷ ಇನ್ನೇನಿದೆ?

೧೭೮೮ರಲ್ಲಿ ಜನಿಸಿದ ಲಾರ್ಡ್ ಬೈರನ್ ತನ್ನ ತಲೆಮಾರಿನ ಅತಿ ಜನಪ್ರಿಯ ಹಾಗೂ ಅಷ್ಟೇ ವಿವಾದಾಸ್ಪದ ಲೇಖಕ. ಆತನ ಬದುಕು ಗ್ರಹಿಕೆಗೆ ದಕ್ಕುವುದು ಒಂದು ಬಗೆಯ ವಿರೋಧಾಭಾಸದ ನೆಲೆಯಲ್ಲಿ. ಅಗಾಧ ಹಾಸ್ಯಪ್ರಜ್ಞೆಯಿದ್ದೂ ದುಃಖತಪ್ತ. ಕುಲೀನ ವರ್ಗಕ್ಕೆ ಸೇರಿದವರಾಗಿದ್ದೂ ಸಾಮಾನ್ಯ ಜನರ ಪ್ರಾಮಾಣಿಕ ಬೆಂಬಲಿಗನಾಗಿದ್ದವ. ಸ್ಫುರದ್ರೂಪಿ, ಜನಪ್ರಿಯ ಆದರೆ ವೈಯಕ್ತಿಕ ಬದುಕನ್ನೇ ಅಷ್ಟೇ ಹದಗೆಡಿಸಿಕೊಂಡವ. ಅಕಾಲಿಕವಾಗಿ ಕೊನೆಗೊಂಡ ವೈವಾಹಿಕ ಬದುಕು ತಂದಿಟ್ಟ ವೇದನೆ ಹಾಗೂ ಅವಮಾನದಿಂದ ತಪ್ಪಿಸಿಕೊಳ್ಳಲು ದೇಶಭ್ರಷ್ಟರಾಗಿ ಅಲೆದ ಬೈರನ್ ಜ್ವರಪೀಡಿತನಾಗಿ ೧೮೨೪ರಲ್ಲಿ ಮೃತಪಟ್ಟ. ಆತನ ವಿಪ್ಲವ ಬದುಕಿಗೆ ತಕ್ಕಮಟ್ಟಿಗೆ ತಂಪು ನೀಡಿದ್ದು ಜನ್ಮದತ್ತವಾಗಿ ಬಂದಿದ್ದ ಕಾವ್ಯಪ್ರತಿಭೆ. ಜೀವಿತಾವಧಿಯಲ್ಲಿಯೇ ವೈಯಕ್ತಿಕ ಬದುಕಿನ ದುರಂತ ಆತನ ಕಾವ್ಯ ಪ್ರತಿಭೆಯನ್ನು ಮಸುಕಾಗಿಸಿತ್ತು. ಇದು ಬೈರನ್ ತನ್ನ ಪ್ರೇಯಸಿಗೆ ಬರೆದ ಪತ್ರ.

ನನ್ನ ಪ್ರೀತಿಯ ಕೆರೊಲಿನ್ ,
ನೀನು ನನ್ನನ್ನು ಅಗಲುವ ಸಮಯದವರೆಗೂ ನಾನು ಕಣ್ಣೀರು ಸುರಿಸಿರಲಿಲ್ಲ. ಕಣ್ಣೀರು ಹಾಕುವುದು ನನಗೂ ಇಷ್ಟವಿಲ್ಲ ಎಂಬುದು ನಿನಗೂ ಗೊತ್ತು. ನಿನ್ನನ್ನು ನನ್ನಿಂದ ಅಗಲಿಸಿದ ಕಲಹವನ್ನು, ಮನಸ್ತಾಪವನ್ನು ಈ ಎಲ್ಲಾ ತಲ್ಲಣಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕು. ನಾನು ಇಲ್ಲಿಯವರೆಗೆ ಆಡಿದ ಮಾತುಗಳು, ಮಾಡಿದ ಕಾರ್ಯಗಳು ನನಗೆ ನಿನ್ನ ಕುರಿತು ಇರುವ ಭಾವನೆಯನ್ನು ಸಮಗ್ರವಾಗಿ ಹಿಡಿದಿಡಲು ಅಶಕ್ಯ. ನಿನ್ನೆಡೆಗಿನ ನನ್ನ ಪ್ರೀತಿಯನ್ನು ಸಾಬೀತುಪಡಿಸಲು ನನಲ್ಲಿ ಇನ್ನಾವುದೇ ಪುರಾವೆಗಳೂ ಇಲ್ಲ.

ನಾನು ಸದಾ ಬಯಸಿದ್ದು ನಿನ್ನ ಸಂತೋಷವನ್ನೇ ಎಂಬುದಕ್ಕೆ ಆ ಪರಮಾತ್ಮನೇ ಸಾಕ್ಷಿ. ನಾನು ನಿನ್ನನ್ನು ತೊರೆಯುವಾಗ ಅಥವಾ ನಿನ್ನ ತಾಯಿ ಹಾಗೂ ಪತಿಯೆಡೆಗಿನ ಕರ್ತವ್ಯನಿಷ್ಠೆಯಿಂದ ನೀನೇ ನನ್ನಿಂದ ದೂರವಾಗುವಾಗ ನಾನು ನೀಡಿದ ಭಾಷೆ, ವಾಗ್ದಾನಗಳಲ್ಲಿನ ಸತ್ಯವನ್ನು ನೀನು ಗುರುತಿಸಬೇಕು. ನಿನಗೆ ಪವಿತ್ರ ಎನಿಸುವ ಯಾವುದೇ ವಿಚಾರಕ್ಕಿಂತ ಹೆಚ್ಚಿನ ಸಂಗತಿ ಯಾವ ರೀತಿಯಿಂದಲೂ ನನ್ನ ಹೃದಯದಲ್ಲಿ ಸ್ಥಾನ ಪಡೆಯುವುದು ಅಸಾಧ್ಯ.

ಆತ್ಮೀಯ ಹಾಗೂ ಅತ್ಯಂತ ಪ್ರೀತಿಯ ಗೆಳತಿ, ನನ್ನೊಳಗಿನ ಎಲ್ಲಾ ಭಾವನೆಗೂ ಮಾತಿನ ನ್ಯಾಯ ಒದಗಿಸಲು ನನಗೆ ಸಾಧ್ಯವಾಗುತ್ತಿಲ್ಲ. ಮಾತಿಗೆ ಇದು ಸಮಯವೂ ಅಲ್ಲ. ನನ್ನ ವೇದನೆ ನಿನ್ನ ಕಲ್ಪನೆಯನ್ನೂ ಮೀರಿದ್ದು. ಆದರೆ ಅದನ್ನು ಅನುಭವಿಸುತ್ತಲೇ ಒಂದು ರೀತಿಯ ಧನ್ಯತೆ ಹಾಗೂ ವಿಷಾದನೀಯ ಸಂತಸವನ್ನು ನಾನು ಕಾಣುತ್ತಿದ್ದೇನೆ. ನಾನೀಗ ಭಾರವಾದ ಹೃದಯದೊಂದಿಗೆ ನಿನ್ನನ್ನು ಅಗಲುತ್ತಿದ್ದೇನೆ. ಈ ಮುಸ್ಸಂಜೆಯಲ್ಲಿನ ನನ್ನ ಸಾರ್ವಜನಿಕ ಉಪಸ್ಥಿತಿ ಇಂದಿನ ಘಟನೆಗಳಿಂದ ಉದ್ಭವವಾಗಬಹುದಾದ ಗಾಳಿಮಾತುಗಳಿಗೆ ಮಂಗಳ ಹಾಡಬಹುದು.

ನಿನ್ನ ಪಾಲಿಗೆ ನಾನು ಇಂದು ನಿರ್ಲಿಪ್ತನಂತೆ, ತಣ್ಣನೆಯ ವ್ಯಕ್ತಿಯಂತೆ ಕಂಡುಬಂದರೆ ಉಳಿದವರಿಗೂ ನಾನು ಹಾಗೆಯೇ ಕಾಣಬಹುದು. ನಿನ್ನ ತಾಯಿಗೆ ಕೂಡ. ಆ ಮಹಾತಾಯಿಗೆ ಅಲ್ಲವೇ ನಾವು ಇಷ್ಟೊಂದು ತ್ಯಾಗಕ್ಕೆ, ಬಲಿದಾನಕ್ಕೆ ಸಿದ್ಧವಾಗಿರುವುದು? ನನ್ನ ಪಾಲಿಗಂತೂ ಈ ತ್ಯಾಗಕ್ಕೆ ಸಾಟಿಯೇ ಇಲ್ಲ. ನಮ್ಮ ತ್ಯಾಗದ ಆಳ-ಅಗಲ ಅವರ ಗ್ರಹಿಕೆಗೆ ಅಷ್ಟು ಸುಲಭಕ್ಕೆ ನಿಲುಕುವುದಿಲ್ಲ ಬಿಡು.

ನಿನ್ನನ್ನು ಪ್ರೀತಿಸುವುದಿಲ್ಲ ಎಂದು ಭಾಷೆ ಕೊಡುತ್ತೇನೆ ಎಂಬುದು ತುಂಬಾ ಹಳೆಯ ವಾಗ್ದಾನ ಕೆರೊಲಿನ್. ಆದರೆ, ಒಂದು ಉತ್ತಮ ಉದ್ದೇಶಕ್ಕೆ ಕೆಲವೊಂದು ರಿಯಾಯಿತಿಗಳು ಬೇಕು. ಹಾಗೆಯೇ, ನಿನ್ನ ಸಮ್ಮುಖದಲ್ಲಿ ನಡೆಯುವ ಪ್ರತಿಯೊಂದಕ್ಕೂ- ಅದು ನನ್ನ ಹೃದಯದ ತಳಮಳವಿರಬಹುದು, ನಿನ್ನೊಳಗಿನ ನೋವಿರಬಹುದು- ಸ್ಪಂದಿಸುವ ಗುಣವನ್ನು ಕಾಯ್ದಿಟ್ಟುಕೊಳ್ಳುವುದು ಅವಶ್ಯಕ. ನಿನ್ನ ಮೇಲಿನ ಆ ಪರಮಾತ್ಮನ ಕೃಪೆ ಎಂದಿಗೂ ಬತ್ತದಿರಲಿ.

ಈ ವ್ಯಂಗ್ಯದ ಮಾತುಗಳು ಕೇವಲ ನನ್ನ ಅತ್ಯಂತ ಆತ್ಮೀಯ ಕೆರೊಲಿನ್‌ಗೆ ಮಾತ್ರ. ಅವುಗಳ ಗುರಿ ನಿನ್ನ ತಾಯಿಯಲ್ಲ ಮತ್ತು ಈ ಜಗತ್ತಿನಲ್ಲಿ ನಿನಗಿರುವ ಇನ್ನಿತರ ಸಂಬಂಧಗಳಿಗಲ್ಲ. ಒಂದು ಕಾಲದಲ್ಲಿ ನೀನು ನನ್ನವಳಾಗಿದ್ದೆ ಎಂಬ ಸವಿನೆನಪಿಗಿಂತ ಹೆಚ್ಚಿನ ಸಂತೋಷ, ಸಮಾಧಾನವನ್ನು ನನ್ನ ಈ ಜೀವಕ್ಕೆ ಜಗತ್ತಿನ ಬೇರೆ ಯಾವ ಸಂಗತಿ ತಾನೆ ತಂದೀತು? ನಿನಗೋಸ್ಕರ ನನ್ನೆಲ್ಲಾ ಸಂತಸಗಳನ್ನೂ ತ್ಯಾಗ ಮಾಡಲು ಮೊದಲೆಂದಿಗಿಂತ ಈಗಲೇ ಹೆಚ್ಚು ನಾನು ಸಿದ್ಧನಿದ್ದೇನೆ. ನಿನಗಿಂತ ಹೆಚ್ಚು ಮುಖ್ಯವಾದ ಸಂಗತಿ ನನಗೆ ಬೇರೊಂದಿಲ್ಲ. ಇದೆಲ್ಲದರಿಂದ ದೂರವಿರಬೇಕೆಂಬ ನನ್ನ ಉದ್ದೇಶವೇ ಈಗ ಅಪಾರ್ಥಕ್ಕೀಡಾಗುತ್ತಿದೆಯೇ? ಇವುಗಳನ್ನೆಲ್ಲಾ ಮುಂಚಿತವಾಗಿಯೇ ತಿಳಿದ ವ್ಯಕ್ತಿಯೊಬ್ಬರಿದ್ದರೆ ನನಗೆ ಅದೊಂದು ಸಂಗತಿಯೇ ಅಲ್ಲ. ನಿನಗೆ, ಕೇವಲ ನಿನಗೆ ಮಾತ್ರ ಅವು ಋಣಿಯಾಗಿವೆ. ನಾನು ಈ ಹಿಂದೆ ಮಾತ್ರವಲ್ಲ ಈಗಲೂ ನಿನ್ನವನು, ಸಂಪೂರ್ಣವಾಗಿ ನಿನ್ನವನು. ನಿನ್ನಿಷ್ಟದಂತೆ ಎಲ್ಲಿಯಾದರೂ, ಯಾವಾಗಲಾದರೂ, ಹಾಗೂ ಹೇಗಾದರೂ ನಿನ್ನ ಮಾತುಗಳನ್ನು ಪರಿಪಾಲಿಸಲು, ಗೌರವಿಸಲು, ಪ್ರೇಮಿಸಲು ಹಾಗೂ ನಿನ್ನೊಂದಿಗೆ ರೆಕ್ಕೆ ಬಿಚ್ಚಿಕೊಂಡು ಹಾರಲು ನಾನು ಸಿದ್ಧನಿದ್ದೇನೆ.
ನಿನ್ನದೇ ಕನವರಿಕೆಯಲ್ಲಿ
ಬೈರನ್

(ಇತ್ತೀಚೆಗೆ ದ ಸಂಡೆ ಇಂಡಿಯನ್ ಪತ್ರಿಕೆಯಲ್ಲಿ ಬಂದ ಈ ಸುಂದರ ಪತ್ರ ತುಂಬಾ ಇಷ್ಟವಾಗಿತ್ತು. ನೀವೂ ಓದುತ್ತೀರೆಂಬ ಭಾವನೆಯಿಂದ ಇಲ್ಲಿ ಹಾಕೊಂಡೆ. ಲಿಂಕ್ ಇಲ್ಲಿದೆ: http://www.thesundayindian.com/kannada/20090830/history_mail.asp

Thursday, September 17, 2009

ದೇವರೇ, ಮಾನವನಿಗೇ ಮಾನವನ ಕಣ್ಣೀರ ನಿಲ್ಲಿಸೋಕೆ ಯಾಕೆ ಸಾಧ್ಯವಿಲ್ಲ?'

ಕಳೆದ ರಾತ್ರಿ ಇಡೀ ನಿದ್ದೆಗೆಟ್ಟು ಕೆಲಸ ಮಾಡಿದ್ದರಿಂದ ಕಣ್ಣಲ್ಲಿ ನಿದ್ದೆಯ ಮಂಪರಿನ್ನೂ ಇಳಿದಿಲ್ಲ. ತಮ್ಮ ತಂದುಕೊಟ್ಟ ಟೀ ಪಕ್ಕದಲ್ಲೇ ಆರುತ್ತಿತ್ತು. ಆದರೂ, ತಲೆಯೊಳಗೆ ಅದೇನೋ ಯೋಚನೆ. ನಡೆದ ದಾರೀಲಿ, ಕಣ್ಣಾರೆ ಕಂಡ, ಕಿವಿಯಾರೆ ಕೇಳಿದ, ನಾ ಪಡೆದ ಅನುಭವಗಳು ಮತ್ತೆ ಮತ್ತೆ ನನ್ನ ಕಾಡಿದವು. ನನ್ನೊಳಗೇ ಅಸಹಾಯಕತೆಯನ್ನು ಸಾರಿ ಸಾರಿ ಹೇಳಿದವು. ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಎದ್ದುಬಿಟ್ಟು ಟೀ ಕುಡಿದು, ಸ್ನಾನಕ್ಕೆ ಹೋದೆ. ಅಲ್ಲಿಯೂ ಕಾಡತೊಡಗಿತ್ತು. ದೇವರಿಗೆ ದೀಪ ಹಚ್ಚಿದೆ, ಅಲ್ಲಿಯೂ ಕಾಡಿತ್ತು..ನನ್ನ ಅಸಹಾಯಕತೆ, ಮಾತ್ರವಲ್ಲ ನನ್ನಂತ ಬಹಳಷ್ಟು ಮಂದಿಯ ಅಸಹಾಯಕತೆ. 'ದೇವರೇ, ಮಾನವನಿಗೇ ಮಾನವನ ಕಣ್ಣೀರ ನಿಲ್ಲಿಸೋಕೆ ಯಾಕೆ ಸಾಧ್ಯವಿಲ್ಲ?' ಎಂದು ಕೇಳಿದರೂ ನನ್ನೆದುರು ಹಚ್ಚಿಟ್ಟ ಹಣತೆಯ ಎದುರು ಕುಳಿತ ದೇವರು ಉತ್ತರವನ್ನು ಹೇಳಲಿಲ್ಲ. ಮೌನವಾಗಿಬಿಟ್ಟ...ಬಹುಶಃ ಮನುಷ್ಯ , ಚರಾಚರಾ ವಸ್ತುಗಳನ್ನೂ ಸೃಷ್ಟಿಸಿದ ಆ ಸೃಷ್ಟಿಕರ್ತನಿಗೂ ಈ ಪ್ರಶ್ನೆಗೆ ಉತ್ತರ ದೊರೆಯಲಿಲ್ಲ ಅನಿಸುತ್ತೆ.

ಪುಟ್ಟ ಮನೆಯೊಳಗೆ ಪೆನ್ನು ಹಿಡಿದು ಒಬ್ಬಳೇ ಕುಳಿತು, ಇದೀಗ ನನ್ನೊಳಗೆ ಕಾಡಿದ ಅಸಹಾಯಕತೆಯನ್ನು ನಿಮ್ಮೆದು ಬಿಚ್ಚಿಡುತ್ತಿದ್ದೇನೆ. ಹೌದು, ನಾನು ಹೇಳಹೊರಟಿರುವುದು ದುಃಖದ ಬಗ್ಗೆ. ನಾವೂ ಕಣ್ಣೀರಾಗ್ಥೀವಿ, ಮನತುಂಬಾ ನೋವು ಪಡ್ತೀವಿ, ಛೇ! ಹೀಗಾಗಬಾರದಿತ್ತು ಅಂದುಕೊಳ್ತೀವಿ, ಅದರ ಬಗ್ಗೆನೇ ದಿನಗಟ್ಟಲೆ ಯೋಚನೆ ಮಾಡ್ತೀವಿ, ನಮ್ಮೋಳಗೆಯೇ ನೋವಾಗಿ ಕರಗಿಬಿಡ್ತೀವಿ. ಆದರೆ ಅವರ ದುಃಖವನ್ನು ನಮಗೆ ಕಡಿಮೆಗೊಳಿಸಲಾಗಲಿಲ್ಲ. ಮುಗಿಲುಮುಟ್ಟಿದ ಆ ಅಳುವನ್ನು ನಮ್ಮಿಂದ ನಿಯಂತ್ರಿಸಲೂ ನಮ್ಮಿಂದ ಆಗುವುದಿಲ್ಲ. ಅವರು ಅಳುತ್ತಲೇ ಇರುತ್ತಾರೆ...ನಾವೂ ಅವರ ಜೊತೆ ಕಣ್ಣೀರಾಗ್ತಲೇ ಇರ್ತೀವಿ ...!!!
ನಮ್ಮಜ್ಜ ಕರಿಮೆಣಸು ಕೊಯ್ಯಲು ಮರಕ್ಕೆ ಹತ್ತಿ ಕಾಲು ಜಾರಿ ಧೊಪ್ಪನೆ ಬಿದ್ದು ಸ್ಥಳದಲ್ಲೇ ಮೃತಪಟ್ಟರು. ಅದನ್ನು ನೋಡಿದ ನಮ್ಮಜ್ಜಿ, ಅಮ್ಮ, ಚಿಕ್ಕಮ್ಮ, ದೊಡ್ಡಮ್ಮನವರೆಲ್ಲಾ ದುಃಖ ಸಹಿಸಲಾಗದೆ ಅಳುತ್ತಾ ಎದೆಬಡಿದುಕೊಂಡು ಅಂಗಳವಿಡೀ ಹೊರಳಾಡುತ್ತಿದ್ದರು. ನನ್ನ ತಮ್ಮ ಪುಟ್ಟ ಮಗು, ನಾನಿನ್ನೂ ಒಂದನೇ ಕ್ಲಾಸು. ನನ್ನ ತೊಡೆಯ ಮೇಲೆ ಕುಳಿತ ನನ್ನ ತಮ್ಮ 'ಅಕ್ಕಾ ಅಮ್ಮ ಅಳುತ್ತಾಳೆ..ಅಳಬೇಡ ಅನ್ನುಎನ್ನುತ್ತಿದ್ದ. ನಾನೂ ಕಣ್ಣೀರಾದೆ. ಅವನೂ ಕಣ್ನೀರಾದ. ಕಣ್ಣೀರ ಹರಿಸೋ ಅಷ್ಟೂ ಮಂದಿ ಕಣ್ಣೀರಾದರು. ಅಮ್ಮ ಅಳಬೇಡ ಅಂದ್ರೂ ಅಳೋದನ್ನು ನಿಲ್ಲಿಸಲಿಲ್ಲ.
ಅಂದು ನನ್ನ ಆತ್ಮೀಯರೊಬ್ಬರಿಗೆ ಪೋನಾಯಿಸಿದೆ. ಅವರೂ ನಂಗೆ ಫೋನ್ ಮಾಡಲಿಲ್ಲ, ನಾನೂ ಮಾಡಿರಲಿಲ್ಲ. ಹಾಗಾಗಿ ತುಂಬಾ ದಿನಗಳ ಬಳಿಕ ನಾನವರನ್ನು ಮಾತಾಡಿಸಿದ್ದೆ. ನನ್ನದೊಂದು ಕೆಟ್ಟ ಅಭ್ಯಾಸ ಎಂದರೆ ತೀರಾ ತಮಾಷೆಯಾಗಿ ಮಾತಿಗಿಳಿಯೋದು. ಹಾಗೇ ಮಾತನಾಡಿಸಿದರೂ ಆತ ಮೌನವಾಗೇ ಇದ್ದು, 'ನನ್ನಪ್ಪ ನಮ್ಮನ್ನೆಲ್ಲಾ ಬಿಟ್ಟುಹೋದರು' ಎಂದಾಗ ನನ್ನದೆ ಒಡೆದುಹೋಗಿತ್ತು. ನಿತ್ಯ ನಗು ನಗುತ್ತಾ ನನ್ನ ಪೋಲಿ ಜೋಕುಗಳ ಜೊತೆಗೆ ನಗುವಾಗಿದ್ದ ಅವರು ಅಂದು ಅಳುವಾಗಿದ್ದರು. ಮನದೊಳಗೆ ಅಳುತ್ತಿದ್ದರು. ನಂಗೆನು ಹೇಳಬೇಕೋ ತೋಚಲಿಲ್ಲ. 'ಎಲ್ಲವೂ ದೇವರಿಚ್ಚೆ' ಎಂದು ಹೇಳಿ ಪೋನಿಟ್ಟೆ. ನಂಗೆ ಅವರ ದುಃಖವನ್ನು ಶಮನ ಮಾಡೋಕೆ ಆಗಲಿಲ್ಲ. ನನ್ನ ಕಂಗಳಿಂದ ಉದುರಿದ ಪುಟ್ಟ ಬಿಂದು ಅವರನ್ನು ಸಮಾಧಾನಿಸಲಿಲ್ಲ.
ನಾನು ಹೈಸ್ಕೂಲು ಓದುತ್ತಿದ್ದಾಗ ನನಗೊಬ್ಬ ಪ್ರೀತಿಯ ತಮ್ಮ ಇದ್ದ. ಇತ್ತೀಚೆಗೆ ಅವನ ಅಮ್ಮ ತೀರಿಕೊಂಡುಬಿಟ್ರು. ಅಮ್ಮನ ಕಳೆದುಕೊಂಡ ಆ ದುಃಖದಲ್ಲಿ 'ಅಕ್ಕಾ ಅಮ್ಮನಿಗೆ ಮೋಕ್ಷ ಸಿಗಲೆಂದು ನಿತ್ಯ ನೀನು ಬೇಡಿಕೋ' ಎಂದು ಕಣ್ನೀರು ಹಾಕಿದಾಗ ನನಗೆ ದುಃಖ ಸಹಿಸಲಾಗದೆ ಅತ್ತುಬಿಟ್ಟಿದ್ದೆ. ಅವನ ದುಃಖವನ್ನು ನಿಯಂತ್ರಿಸೋಕೆ ನನ್ನಿಂದಾಗಲಿಲ್ಲ. ಛೇ! ಯಾಕೆ ನಾನೂ ಓರ್ವ ಮನುಷ್ಯಳಾಗಿ ಇನ್ನೊಬ್ರ ದುಃಖವನ್ನು ಕಡಿಮೆಗೊಳಿಸಕೆ ಆಗಲಿಲ್ಲವಲ್ಲಾ ಎಂಬ ಅಸಹಾಯಕತೆಯ ಮಡುವಿನಲ್ಲಿ ನಾನೂ ಕಣ್ಣೀರಾದೆ.
ಹೌದು, ತುಂಬಾ ಸಲ ಹೀಗೇ ಆಗುತ್ತೆ. ನಮ್ಮೆದುರಿಗೆ ಒಬ್ಬರು ಅಳುತ್ತಿದ್ದರೆ ಅವರ ದುಃಖಕ್ಕೆ ನಮ್ಮಲ್ಲಿ ಪರಿಹಾರ ಇರೊಲ್ಲ. ಬೇಕಾದ್ರೆ ನಾವೂ ಅವರ ಜೊತೆ ಅಳ್ತೀವಿ ಹೊರತು ಅವರ ಕಣ್ಣೀರನ್ನು ನಿಯಂತ್ರಿಸೋಕೆ ಆಗೋಲ್ಲ. ಅದಕ್ಕೆ ಹೇಳೋದು ಅನಿಸುತ್ತೆ: 'ಅಳೋರನ್ನು ಹಾಗೇ ಬಿಟ್ಟುಬಿಡಿ, ಅತ್ತು ದುಃಖ ಶಮನ ಮಾಡಿಕೊಳ್ಳಲಿ' ಅಂತ.
ಹೌದು, ಹುಟ್ಟಿದ ಮನುಷ್ಯ ಬದುಕೋಕೆ, ಹೇಗೆ ಹಾಗೇ ಬದುಕೋಕೆ, ಪ್ರೀತಿಸೋಕೆ, ದ್ವೇಷಿಸೋಕೆ, ನಗಿಸೋಕೆ, ಮೋಸ ಮಾಡಕೆ, ವಂಚಿಸೋಕೆ. ಕೊಲೆ ಮಾಡೋದಕೆ ಎಲ್ಲವನ್ನೂ ಕಲಿತಿದ್ದಾನೆ. ಆದರೆ ಇನ್ನೊಬ್ರು ಅಳುತ್ತಿರೋಬೇಕಾದ್ರೆ ಅವನ ದುಃಖವನ್ನು ನಿಯಂತ್ರಿಸೋ ಬದಲು ಅದೇಕೇ ತಾನೂ ಕಣ್ಣೀರಾಗ್ತಾನೆ...???


Monday, September 7, 2009

ಬಸ್ಸು ಸಾಗುತ್ತಿತ್ತು...ಬದುಕಿನ ಜೊತೆಗೆ...

ಹೌದು...ಮೊನ್ನೆ ನಾನೂ ನನ್ನೂರಿಗೆ ಹೊರಟಿದ್ದೆ. ಶಿರಾಡಿ ಘಾಟ್ ನಲ್ಲಿ ವರ್ಷವಿಡೀ 'ಕಾಮಗಾರಿ ಪ್ರಗತಿಯಲ್ಲಿರಿವುದರಿಂದ' ಚಾರ್ಮಾಡಿ ಘಾಟ್ ನಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಾ ನನ್ನನ್ನು ಹೊತ್ತ ಬಸ್ಸು ಸಾಗಿತ್ತು. ಧಾರಕಾರವಾಗಿ ಸುರಿವ ಮಳೆ, ಗಾಳಿ, ಚಳಿ, ಸುತ್ತೆಲ್ಲಾ ಮುಸುಕಿಕೊಂಡಿದ್ದ ಮಂಜು.. ನಡುವೆ ಬಸ್ಸು ನುಗ್ಗುತ್ತಾ ಸಾಗುತ್ತಿದ್ದಂತೆ ಹಸಿರ ಚೆಲುವು ಕಣ್ಣು ತುಂಬುತ್ತಿತ್ತು. ಆದರೆ, ನನ್ನ ಪ್ರೀತಿಯ ಉಜಿರೆಯಲ್ಲಿ ಬಸ್ಸಿನಿಂದ ಇಳಿಯುತ್ತಿದ್ದಂತೆ ಚಳಿಗೆ ಮೈಯೆಲ್ಲಾ ಮರಗಟ್ಟಿ ಮೂಗು, ಕಿವಿ ಎಲ್ಲಾ ಬಂದ್ ಆಗಿತ್ತು.

ಹೌದು, ನನಗೆ ಬದುಕಿನ ಪಾಠ ಕಲಿಸಿದ ಪ್ರೀತಿಯ ಉಜಿರೆಯಲ್ಲಿ ಇಳಿದು ಎದುರುಗಡೆ ಕಾಣುತ್ತಿದ್ದ ಆ ನನ್ನ ವಿದ್ಯಾದೇಗುಲಕ್ಕೆ ಪ್ರೀತಿಯಿಂದ ವಂದಿಸಿದ್ದೆ. ಐದು ವರ್ಷಗಳ ಕಾಲ ಓಡಾಡಿದ್ದ ಉಜಿರೆ ಬದಲಾವಣೆಯತ್ತ ಮುಖಮಾಡಿದೆ. ನೂರಾರು ಜನರಿಗೆ ನೆರಳು ನೀಡುತ್ತಿದ್ದ ಸಕರ್ಲ್ ನಲ್ಲಿದ್ದ ದೊಡ್ಡ ಮರ ಕಾಣೆಯಾಗಿ ಸರ್ಕಲ್ ಸುತ್ತ ಜನರು ಬಿರುಬಿಸಿಲಿಗೂ, ಜಡಿಮಳೆಗೂ ಕೊಡೆ ಹಿಡಿದು ಬಸ್ಸಿಗೆ ಕಾಯೋ ಸ್ಥಿತಿ. ಕಾಲೇಜು ನೋಡಿದರೆ ಸುತ್ತಲೆಲ್ಲಾ ಕಟ್ಟಡಗಳೇ ತುಂಬಿಕೊಂಡು ಕಾಲೇಜು ಇನ್ನಷ್ಟು ವಿಸ್ತಾರಗೊಂಡಿದೆ. ನನ್ನ ಪ್ರೀತಿಯ ಲೈಬ್ರೇರಿ ಅದೇ ಪ್ರೀತಿಯಿಂದ ಮಾತನಾಡಿಸುತ್ತಿದ್ದೆ. ಮೊಬೈಲ್ ಇಲ್ಲದ ಪಿಯು-ಡಿಗ್ರಿ ಸಮಯದಲ್ಲಿ ನಿತ್ಯ ಅಮ್ಮನ ಜೊತೆ ಮಾತನಾಡೋಕೆ ನೇತಾಡುತ್ತಿದ್ದ ಆ ಇಂದ್ರಣ್ಣನ ಅಂಗಡಿ ಯ ಎರಡು ಕೆಂಪು ಕಾಯಿನ್ ಬೂತ್ ಗಳು ಹಾಗೇ ಇವೆ. ಇಂದ್ರಣ್ಣ ಅದೇ ಮುಖತುಂಬಾ ಗಡ್ಡ, ಖುಷಿ ಖುಷಿಯ ನಗುವಿನಿಂದ ಸ್ವಾಗತಿಸಿದರು.

ಅಲ್ಲಿಂದ ಮುಂದೆ ನನಗೆ ಐದು ವರ್ಷ ಅಮ್ಮನಂತೆ ಸಾಕಿ ಸಲಹಿದ ಬಿಸಿಎಂ ಹಾಸ್ಟೇಲ್ ನತ್ತ ಸಾಗಿದರೆ, ನನಗೆ ದಿನಕ್ಕೆರಡು ಬಾರಿ ಟೀ ಇಟ್ಟು ಕೊಟ್ಟು, ರಾತ್ರಿ ಮಲಗುವಾಗಲೂ ತಟ್ಟಿ ಮಲಗಿಸುತ್ತಿದ್ದ, ಮಗಳಂತೆ ನನ್ನ ಪ್ರೀತಿಯಿಂದ ಕಂಡ ಹೇಮಾ ಆಂಟಿಗೆ ಒಂದು ಕ್ಷಣ ನನ್ನ ಪರಿಚಯ ಸಿಗದೆ ಒಂದು ಕ್ಷಣ ಅವಕ್ಕಾಗಿ ಬಂದು ಗಟ್ಟಿಯಾಗಿ ಅಪ್ಪಿಕೊಂಡಾಗ ನಾನೇ ಕರಗಿಹೋಗಿದ್ದೆ. ಅದೇ ನಗು, ಅದೇ ಖುಷಿ, ಅದೇ ಪ್ರೀತಿಯ ಮಾತು....ಗಳಿಂದ ಮನಸ್ಸೆಲ್ಲಾ ತುಂಬಿಕೊಂಡುಬಿಟ್ಟರು. ಡಿಗ್ರಿಯಲ್ಲಿರುವಾಗ ನನ್ನ ರೂಮ್ ಬಿಟ್ಟು ಆಂಟಿ ಜೊತೆ ಮಲಗೋದು ನನ್ನ ಅಭ್ಯಾಸ. ಏಕಂದ್ರೆ ನನ್ನ ರೂಮ್ ನಲ್ಲಿರುವಾಗ ಹುಡುಗಿರೆಲ್ಲಾ ಮಧ್ಯರಾತ್ರಿ ತನಕ ಹರಟೆ ಹೊಡೆಯೊರು..ಪಕ್ಕಾ 10.30ಗೆ ನಿದ್ದೆಯ ಮಂಪರಿಗೆ ಜಾರಿ, ಬೆಳಿಗ್ಗೆ 5.30ಗೆ ಏಳೋ ನನಗೆ ಅದು ಹಿಂಸೆ ಅನಿಸುತ್ತಿತ್ತು. ಅದಕ್ಕೆ ಆಂಟಿ ಜೊತೆ ಮಲಗಿಬಿಡುತ್ತಿದ್ದೆ. ಅವರು ಏಳುವಾಗ ನನ್ನನ್ನೂ ಎಬ್ಬಿಸುತ್ತಿದ್ದರು. ಹಾಗೇ ಮತ್ತೊಬ್ರು ರತ್ನ ಆಂಟಿಯ ಪುಟ್ಟ ಮಗು ವರುಣ ಕೂಡ ನನ್ನ ಜೊತೆಗೇ ಮಲಗುತ್ತಿದ್ದ. ಹಾಗೇ ಓದುತ್ತಾ, ಆಡುತ್ತಾ ಅಲ್ಲೆ ಮಲಗುತ್ತಿದ್ದೆ. ನನ್ನ ನೋಡಿದವರೇ ಆಂಟಿ, ಚಿತ್ರಾ ಮಲಗೋಕೆ ಹೊರಟಾಗ ಯಾವಾಗಲೂ ನೀನು ನೆನಪಾಗ್ತೀ ಅಂದ್ರು. ನಾನು ನೀಡಿದ ಒಂದು ಪುಟ್ಟ ಸ್ವೀಟ್ ಬಾಕ್ಸ್ ಅನ್ನು ಆಂಟಿ ಕಣ್ಣರಳಸಿ ನೋಡಿ ತೆಗೆದುಕೊಂಡರು. ಅವರು ಮಾಡಿ ಕೊಟ್ಟ ಟೀ ಮಾತ್ರ ಮತ್ತೊಮ್ಮೆ ಆಂಟಿ ಮಾಡಿಕೊಡುತ್ತಿದ್ದ ಟೀಯನ್ನು ನೆನೆಪಿಸಿ ಕಣ್ತುಂಬಿಸಿತ್ತು. ರತ್ನ ಆಂಟಿನೂ ಹಾಗೇ ಇದ್ದಾರೆ..ಬಾಯಿ ತುಂಬಾ ನಗುತ್ತಾ.

ಆದರೆ ಹಾಸ್ಟೇಲ್ ನಾವು ಇರುವಾಗ ಇದ್ದಕ್ಕಿಂತಲೂ ಈಗ ತುಂಬಾ ಚೆನ್ನಾಗಿದೆ. ಎದುರುಗಡೆ ಮೂರು ರೂಮ್ ಗಳು ಮತ್ತೆ ನಿರ್ಮಾಣವಾಗಿವೆ. ಹೊತ್ತು ಹೊತ್ತಿಗೆ ಬೋರ್ ವೆಲ್ ನೀರು ಸೌಲಭ್ಯ, ಫೋನ್, ಬೇಕಾದಷ್ಟು ಡೆಸ್ಕುಗಳು, ಸೋಲಾರ್...ಏನು ಬೇಕೋ ಅದೆಲ್ಲಾ ಇದೆ. ನೋಡಿ ನಾನುನೂ ಈಗಲೂ ಇರಬೇಕಿತ್ತು ಅನಿಸಿದ್ದು ಸುಳ್ಳಲ್ಲ. ಇನ್ನೊಂದು ತುಂಬಾ ಖುಷಿಯಾಗಿದ್ದು ಅಂದ್ರೆ ನಾನೇ ಹೆಸರಿಟ್ಟು ಮಾಡಿದ ವಾಲ್ ಮ್ಯಾಗಜಿನ್ 'ಸ್ಫೂರ್ತಿ'ಯನ್ನು ನನ್ನ ತಂಗಿಯರು ಹಾಗೇ ಕಾಪಾಡಿಕೊಂಡು ಬಂದಿದ್ಧಾರೆ. ನೋಡಿ ಭಾಳ ಖುಷಿ ಪಟ್ಟೆ.

ಸಂಜೆಯ ಹೊತ್ತಿಗೆ ಡೈರಿ ಬರೆಯಲು ಕೂರುತ್ತಿದ್ದ ಆ ವಿಶಾಲವಾದ ಗಾಳಿ ಮರ ಹಾಗೇ ಇದೆ. ನಮಗೆ ವಾರ್ಷಿಕ ಆದಾಯ ತರುತ್ತಿದ್ದ ಆ ಗೇರುಬೀಜದ ಮರ ಇನ್ನೂ ಹಾಗೇ ಉಳಿದಿದೆ. ಅದಕ್ಕೆ ಅದೆಷ್ಟು ಸಲ ನಾವು ಹತ್ತಿ ಗೇರು ಬೀಜ ಕೊಯ್ಯುತ್ತಿದ್ದೇವೋ..ಗೆಳತಿ ಶ್ರದ್ಧಾ ಅದೆಷ್ಟು ಬಾರಿ ಮರದಿಂದ ಕೆಳಗೆ ಜಾರಿದಳೋ...ಆ ಮರ ನೋಡುತ್ತಿದ್ದಂತೆ ಹಿಂದಿನ ನೆನಪುಗಳು ಮನದ ಪರದೆ ಮೇಲೆ ಸುತ್ತಾಡಿದವು. ಅಕ್ಕಾ..ಅಕ್ಕಾ...ಎನ್ನುತ್ತಾ ಅಕ್ಕರೆ, ಅಚ್ಚರಿಯಿಂದ ಕಾಣುತ್ತಿದ್ದ ನನ್ನ ತಂಗಿಯರ ಮಾತುಗಳು ಮನತುಂಬಿಸಿದವು.

ಅಲ್ಲಿಂದ ಧರ್ಮಸ್ಥಳದತ್ತ ಹೊರಟರೆ, ಮೂರು ವರ್ಷ ಜೊತೆಗೇ ಕಲಿತ ರಾಜೇಂದ್ರ, ರೋಹನ್ ಅಚಾನಕ್ ಆಗಿ ಕಣ್ಣಿಗೆ ಬಿದ್ದರು. ಕ್ಲಾಸಿನಲ್ಲಿ ನಂ.1 ತರಲೆ ಪಟ್ಟ ಗಿಟ್ಟಿಸಿಕೊಂಡಿದ್ದ ರಾಜೇಂದ್ರ ಈಗ ಮೌನಮೂರ್ತಿ ಆಗಿದ್ದಾನೆ. ಒಂದೇ ಒಂದು ನೋಟ್ಸ್ ಬರೆಯದೆ ನನ್ನ ನೋಟ್ಸ್ ಜೆರಾಕ್ಸ್ ನಲ್ಲಿ ಪಾಸ್ ಮಾಡಿಕೊಳ್ಳುತ್ತಿದ್ದ ಆತ ಕಾಲೇಜಿಗೆ ಅಧ್ಯಕ್ಷನೂ ಆಗಿಬಿಟ್ಟಿದ್ದ. ಅವನ ತರಲೆ, ಕೀಟಲೆಗಳನ್ನು ಕಂಡ ಮೇಷ್ಟ್ರುಗಳೇ ರೋಸಿಹೋಗಿದ್ದರು. ಅವನಿದ್ದರೆ ನಮ್ಮ ಕ್ಲಾಸ್ ರೂಮ್ ಮನೋರಂಜನಾ ಹಾಲ್ ಆಗುತ್ತಿತ್ತು, ಸಿಕ್ಕಿದವನೇ ಹಿಂದಿನದನೆಲ್ಲಾ ಬಿಚ್ಚುಡುತ್ತಾ ಹೋದ..ಈಗ ಒಳ್ಳೆಯ ಕೆಲಸದಲ್ಲಿದ್ದಾನೆ. ಹಿಂದಿನ ತರಲೆ ಬುದ್ಧಿ ಬಿಟ್ಟು ಸಾದಾ ಸೀದಾ ಮನುಷ್ಯ ಆಗಿಬಿಟ್ಟಿದ್ದಕ್ಕೆ ಹೀಗೇ ಇರು ಮಾರಾಯ ಅಂದೆ.

ಎರಡು ದಿನ ಉಜಿರೆಯಲ್ಲಿ ಕಳೆದೆ. ಮತ್ತೊಮ್ಮೆ ಕಳೆದ ದಿನಗಳನ್ನು ಮೆಲುಕು ಹಾಕಿದೆ. ನನ್ನ ಬದುಕು ರೂಪಿಸಿದ ಪ್ರೀತಿಯ ಕಾಲೇಜಿಗೆ, ಹಾಸ್ಟೇಲಿಗೆ ಮನತುಂಬಾ ಮತ್ತೊಮ್ಮೆ ನಮಿಸುತ್ತಾ ಮತ್ತೆ ಬೆಂಗಳೂ ರು ಬಸ್ಸು ಹಿಡಿದೆ. ಬಸ್ಸು ಸಾಗುತ್ತಿತ್ತು...ಬದುಕಿನ ಜೊತೆಗೆ...!