Thursday, September 17, 2009

ದೇವರೇ, ಮಾನವನಿಗೇ ಮಾನವನ ಕಣ್ಣೀರ ನಿಲ್ಲಿಸೋಕೆ ಯಾಕೆ ಸಾಧ್ಯವಿಲ್ಲ?'

ಕಳೆದ ರಾತ್ರಿ ಇಡೀ ನಿದ್ದೆಗೆಟ್ಟು ಕೆಲಸ ಮಾಡಿದ್ದರಿಂದ ಕಣ್ಣಲ್ಲಿ ನಿದ್ದೆಯ ಮಂಪರಿನ್ನೂ ಇಳಿದಿಲ್ಲ. ತಮ್ಮ ತಂದುಕೊಟ್ಟ ಟೀ ಪಕ್ಕದಲ್ಲೇ ಆರುತ್ತಿತ್ತು. ಆದರೂ, ತಲೆಯೊಳಗೆ ಅದೇನೋ ಯೋಚನೆ. ನಡೆದ ದಾರೀಲಿ, ಕಣ್ಣಾರೆ ಕಂಡ, ಕಿವಿಯಾರೆ ಕೇಳಿದ, ನಾ ಪಡೆದ ಅನುಭವಗಳು ಮತ್ತೆ ಮತ್ತೆ ನನ್ನ ಕಾಡಿದವು. ನನ್ನೊಳಗೇ ಅಸಹಾಯಕತೆಯನ್ನು ಸಾರಿ ಸಾರಿ ಹೇಳಿದವು. ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಎದ್ದುಬಿಟ್ಟು ಟೀ ಕುಡಿದು, ಸ್ನಾನಕ್ಕೆ ಹೋದೆ. ಅಲ್ಲಿಯೂ ಕಾಡತೊಡಗಿತ್ತು. ದೇವರಿಗೆ ದೀಪ ಹಚ್ಚಿದೆ, ಅಲ್ಲಿಯೂ ಕಾಡಿತ್ತು..ನನ್ನ ಅಸಹಾಯಕತೆ, ಮಾತ್ರವಲ್ಲ ನನ್ನಂತ ಬಹಳಷ್ಟು ಮಂದಿಯ ಅಸಹಾಯಕತೆ. 'ದೇವರೇ, ಮಾನವನಿಗೇ ಮಾನವನ ಕಣ್ಣೀರ ನಿಲ್ಲಿಸೋಕೆ ಯಾಕೆ ಸಾಧ್ಯವಿಲ್ಲ?' ಎಂದು ಕೇಳಿದರೂ ನನ್ನೆದುರು ಹಚ್ಚಿಟ್ಟ ಹಣತೆಯ ಎದುರು ಕುಳಿತ ದೇವರು ಉತ್ತರವನ್ನು ಹೇಳಲಿಲ್ಲ. ಮೌನವಾಗಿಬಿಟ್ಟ...ಬಹುಶಃ ಮನುಷ್ಯ , ಚರಾಚರಾ ವಸ್ತುಗಳನ್ನೂ ಸೃಷ್ಟಿಸಿದ ಆ ಸೃಷ್ಟಿಕರ್ತನಿಗೂ ಈ ಪ್ರಶ್ನೆಗೆ ಉತ್ತರ ದೊರೆಯಲಿಲ್ಲ ಅನಿಸುತ್ತೆ.

ಪುಟ್ಟ ಮನೆಯೊಳಗೆ ಪೆನ್ನು ಹಿಡಿದು ಒಬ್ಬಳೇ ಕುಳಿತು, ಇದೀಗ ನನ್ನೊಳಗೆ ಕಾಡಿದ ಅಸಹಾಯಕತೆಯನ್ನು ನಿಮ್ಮೆದು ಬಿಚ್ಚಿಡುತ್ತಿದ್ದೇನೆ. ಹೌದು, ನಾನು ಹೇಳಹೊರಟಿರುವುದು ದುಃಖದ ಬಗ್ಗೆ. ನಾವೂ ಕಣ್ಣೀರಾಗ್ಥೀವಿ, ಮನತುಂಬಾ ನೋವು ಪಡ್ತೀವಿ, ಛೇ! ಹೀಗಾಗಬಾರದಿತ್ತು ಅಂದುಕೊಳ್ತೀವಿ, ಅದರ ಬಗ್ಗೆನೇ ದಿನಗಟ್ಟಲೆ ಯೋಚನೆ ಮಾಡ್ತೀವಿ, ನಮ್ಮೋಳಗೆಯೇ ನೋವಾಗಿ ಕರಗಿಬಿಡ್ತೀವಿ. ಆದರೆ ಅವರ ದುಃಖವನ್ನು ನಮಗೆ ಕಡಿಮೆಗೊಳಿಸಲಾಗಲಿಲ್ಲ. ಮುಗಿಲುಮುಟ್ಟಿದ ಆ ಅಳುವನ್ನು ನಮ್ಮಿಂದ ನಿಯಂತ್ರಿಸಲೂ ನಮ್ಮಿಂದ ಆಗುವುದಿಲ್ಲ. ಅವರು ಅಳುತ್ತಲೇ ಇರುತ್ತಾರೆ...ನಾವೂ ಅವರ ಜೊತೆ ಕಣ್ಣೀರಾಗ್ತಲೇ ಇರ್ತೀವಿ ...!!!
ನಮ್ಮಜ್ಜ ಕರಿಮೆಣಸು ಕೊಯ್ಯಲು ಮರಕ್ಕೆ ಹತ್ತಿ ಕಾಲು ಜಾರಿ ಧೊಪ್ಪನೆ ಬಿದ್ದು ಸ್ಥಳದಲ್ಲೇ ಮೃತಪಟ್ಟರು. ಅದನ್ನು ನೋಡಿದ ನಮ್ಮಜ್ಜಿ, ಅಮ್ಮ, ಚಿಕ್ಕಮ್ಮ, ದೊಡ್ಡಮ್ಮನವರೆಲ್ಲಾ ದುಃಖ ಸಹಿಸಲಾಗದೆ ಅಳುತ್ತಾ ಎದೆಬಡಿದುಕೊಂಡು ಅಂಗಳವಿಡೀ ಹೊರಳಾಡುತ್ತಿದ್ದರು. ನನ್ನ ತಮ್ಮ ಪುಟ್ಟ ಮಗು, ನಾನಿನ್ನೂ ಒಂದನೇ ಕ್ಲಾಸು. ನನ್ನ ತೊಡೆಯ ಮೇಲೆ ಕುಳಿತ ನನ್ನ ತಮ್ಮ 'ಅಕ್ಕಾ ಅಮ್ಮ ಅಳುತ್ತಾಳೆ..ಅಳಬೇಡ ಅನ್ನುಎನ್ನುತ್ತಿದ್ದ. ನಾನೂ ಕಣ್ಣೀರಾದೆ. ಅವನೂ ಕಣ್ನೀರಾದ. ಕಣ್ಣೀರ ಹರಿಸೋ ಅಷ್ಟೂ ಮಂದಿ ಕಣ್ಣೀರಾದರು. ಅಮ್ಮ ಅಳಬೇಡ ಅಂದ್ರೂ ಅಳೋದನ್ನು ನಿಲ್ಲಿಸಲಿಲ್ಲ.
ಅಂದು ನನ್ನ ಆತ್ಮೀಯರೊಬ್ಬರಿಗೆ ಪೋನಾಯಿಸಿದೆ. ಅವರೂ ನಂಗೆ ಫೋನ್ ಮಾಡಲಿಲ್ಲ, ನಾನೂ ಮಾಡಿರಲಿಲ್ಲ. ಹಾಗಾಗಿ ತುಂಬಾ ದಿನಗಳ ಬಳಿಕ ನಾನವರನ್ನು ಮಾತಾಡಿಸಿದ್ದೆ. ನನ್ನದೊಂದು ಕೆಟ್ಟ ಅಭ್ಯಾಸ ಎಂದರೆ ತೀರಾ ತಮಾಷೆಯಾಗಿ ಮಾತಿಗಿಳಿಯೋದು. ಹಾಗೇ ಮಾತನಾಡಿಸಿದರೂ ಆತ ಮೌನವಾಗೇ ಇದ್ದು, 'ನನ್ನಪ್ಪ ನಮ್ಮನ್ನೆಲ್ಲಾ ಬಿಟ್ಟುಹೋದರು' ಎಂದಾಗ ನನ್ನದೆ ಒಡೆದುಹೋಗಿತ್ತು. ನಿತ್ಯ ನಗು ನಗುತ್ತಾ ನನ್ನ ಪೋಲಿ ಜೋಕುಗಳ ಜೊತೆಗೆ ನಗುವಾಗಿದ್ದ ಅವರು ಅಂದು ಅಳುವಾಗಿದ್ದರು. ಮನದೊಳಗೆ ಅಳುತ್ತಿದ್ದರು. ನಂಗೆನು ಹೇಳಬೇಕೋ ತೋಚಲಿಲ್ಲ. 'ಎಲ್ಲವೂ ದೇವರಿಚ್ಚೆ' ಎಂದು ಹೇಳಿ ಪೋನಿಟ್ಟೆ. ನಂಗೆ ಅವರ ದುಃಖವನ್ನು ಶಮನ ಮಾಡೋಕೆ ಆಗಲಿಲ್ಲ. ನನ್ನ ಕಂಗಳಿಂದ ಉದುರಿದ ಪುಟ್ಟ ಬಿಂದು ಅವರನ್ನು ಸಮಾಧಾನಿಸಲಿಲ್ಲ.
ನಾನು ಹೈಸ್ಕೂಲು ಓದುತ್ತಿದ್ದಾಗ ನನಗೊಬ್ಬ ಪ್ರೀತಿಯ ತಮ್ಮ ಇದ್ದ. ಇತ್ತೀಚೆಗೆ ಅವನ ಅಮ್ಮ ತೀರಿಕೊಂಡುಬಿಟ್ರು. ಅಮ್ಮನ ಕಳೆದುಕೊಂಡ ಆ ದುಃಖದಲ್ಲಿ 'ಅಕ್ಕಾ ಅಮ್ಮನಿಗೆ ಮೋಕ್ಷ ಸಿಗಲೆಂದು ನಿತ್ಯ ನೀನು ಬೇಡಿಕೋ' ಎಂದು ಕಣ್ನೀರು ಹಾಕಿದಾಗ ನನಗೆ ದುಃಖ ಸಹಿಸಲಾಗದೆ ಅತ್ತುಬಿಟ್ಟಿದ್ದೆ. ಅವನ ದುಃಖವನ್ನು ನಿಯಂತ್ರಿಸೋಕೆ ನನ್ನಿಂದಾಗಲಿಲ್ಲ. ಛೇ! ಯಾಕೆ ನಾನೂ ಓರ್ವ ಮನುಷ್ಯಳಾಗಿ ಇನ್ನೊಬ್ರ ದುಃಖವನ್ನು ಕಡಿಮೆಗೊಳಿಸಕೆ ಆಗಲಿಲ್ಲವಲ್ಲಾ ಎಂಬ ಅಸಹಾಯಕತೆಯ ಮಡುವಿನಲ್ಲಿ ನಾನೂ ಕಣ್ಣೀರಾದೆ.
ಹೌದು, ತುಂಬಾ ಸಲ ಹೀಗೇ ಆಗುತ್ತೆ. ನಮ್ಮೆದುರಿಗೆ ಒಬ್ಬರು ಅಳುತ್ತಿದ್ದರೆ ಅವರ ದುಃಖಕ್ಕೆ ನಮ್ಮಲ್ಲಿ ಪರಿಹಾರ ಇರೊಲ್ಲ. ಬೇಕಾದ್ರೆ ನಾವೂ ಅವರ ಜೊತೆ ಅಳ್ತೀವಿ ಹೊರತು ಅವರ ಕಣ್ಣೀರನ್ನು ನಿಯಂತ್ರಿಸೋಕೆ ಆಗೋಲ್ಲ. ಅದಕ್ಕೆ ಹೇಳೋದು ಅನಿಸುತ್ತೆ: 'ಅಳೋರನ್ನು ಹಾಗೇ ಬಿಟ್ಟುಬಿಡಿ, ಅತ್ತು ದುಃಖ ಶಮನ ಮಾಡಿಕೊಳ್ಳಲಿ' ಅಂತ.
ಹೌದು, ಹುಟ್ಟಿದ ಮನುಷ್ಯ ಬದುಕೋಕೆ, ಹೇಗೆ ಹಾಗೇ ಬದುಕೋಕೆ, ಪ್ರೀತಿಸೋಕೆ, ದ್ವೇಷಿಸೋಕೆ, ನಗಿಸೋಕೆ, ಮೋಸ ಮಾಡಕೆ, ವಂಚಿಸೋಕೆ. ಕೊಲೆ ಮಾಡೋದಕೆ ಎಲ್ಲವನ್ನೂ ಕಲಿತಿದ್ದಾನೆ. ಆದರೆ ಇನ್ನೊಬ್ರು ಅಳುತ್ತಿರೋಬೇಕಾದ್ರೆ ಅವನ ದುಃಖವನ್ನು ನಿಯಂತ್ರಿಸೋ ಬದಲು ಅದೇಕೇ ತಾನೂ ಕಣ್ಣೀರಾಗ್ತಾನೆ...???


12 comments:

Anonymous said...

baduku andre heegene allave?

-Mel

ಹರೀಶ ಮಾಂಬಾಡಿ said...

ಮನಸ್ಸಿದ್ದರೂ ಒಬ್ಬರ ನೋವನ್ನು ಇನ್ನೊಬ್ಬರು ಸಂಪೂರ್ಣವಾಗಿ ಹಂಚಿಕೊಳ್ಳಲು ಸಾಧ್ಯವೇ ಇಲ್ಲ. ನೋವಿನ ಅನುಭವ ಒಂದೇ ಇರಬಹುದು. ನಾಲಗೆಯ ರುಚಿಯಂತೆ.
ಆದರೆ ಇನ್ನೊಬ್ಬರಲ್ಲೂ ನಮ್ಮಂತೆ ಒಬ್ಬ ಮನುಷ್ಯ ಇದ್ದಾನೆ ಎಂಬ ಅರ್ಥ ಮಾಡಿಕೊಳ್ಳುವ ಮನಸ್ಸು ನಮ್ಮಲ್ಲಿದ್ದರೆ ಸಾಕು. ಹಲವಾರು ಬಾರಿ ಇನ್ನೊಬ್ಬನಿಗೆ ನೋವಾಗುತ್ತದೆ ಎಂದು ಗೊತ್ತಿದ್ದರೂ ಚುಚ್ಹಿ ಮಾತನಾಡುವುದಿಲ್ಲವೇ? ಆಗ ಆತನ ಮನಸ್ಸಿನಲ್ಲಿ ಏನಾಗಬಹುದು ಎಂಬ ಬಗ್ಗೆ ಚಿಂತೆ ಮಾಡ್ತೀವಾ?
ಎಸ್ಟೇ ಜತೆಯಿದ್ದರೂ ಪ್ರತಿಯೊಬ್ಬ ಮನುಷ್ಯನಿಗೂ ತನ್ನದೊಂದು ಐಡೆಂಟಿಟಿ ಇದೆ. ತನ್ನದೇ ಸ್ವಂತ ಭಾವನೆಗಳಿದೆ ಎಂಬುದನ್ನೂ ನಿಮ್ಮ ಬರೆಹ ತೋರಿಸಿಕೊಟ್ಟಿದೆ
-ಹರೀಶ ಮಾಂಬಾಡಿ

PARAANJAPE K.N. said...

ತ೦ಗೀ
ಅದೇ ಕಣಮ್ಮಾ ಜೀವನ, ನಿನ್ನೆ ಮಾತನಾಡಿದವರು ಇ೦ದು ನಮ್ಮೊಡನಿರುವುದಿಲ್ಲ. ಎಲ್ಲವೂ ನಶ್ವರ, ಕ್ಷಣಿಕ. ಎಲ್ಲ ಗೊತ್ತಿದ್ದೂ ನಾವು ಬಡಿದಾಡುತ್ತೇವೆ. ನಿನ್ನ ಬರಹ ಎಂದಿನಂತೆ ಚೆನ್ನಾಗಿದೆ.ಯಾವಾಗಲು ಕಣ್ಣೀರ ಚಿತ್ರ ಹಾಕಿ ಲೇಖನ ಬರೀತಿಯಲ್ಲ, ನಿನಗೆ "ಅಳುಮುಂಜಿ ಚಿತ್ರಾ" ಅ೦ತ ಹೆಸರಿಸಬೇಕೆನಿಸುತ್ತದೆ.

ESSKAY said...

ಜೀವನ ಅಂದ್ರೆ ಇದೇ ಅನ್ಸುತ್ತೆ.
ನಮಗೆ ಬೇರೆಯವರ ನೋವು ಅರ್ಥ ಮಾಡಿಕೊಳ್ಳುವ ಶಕ್ತಿ ಕೊಟ್ಟಿದ್ದನೆ ಆದ್ರೆ ಅವರ ಅಳುವನ್ನ ನಿಲ್ಲಿಸುವ ಮುಖ್ಯವಾದ ಶಕ್ತಿ ಕೊಡಲಿಲ್ಲ. ಈ ಶಕ್ತಿ ಇಲ್ಲದಿದ್ದರೂ ಪರ್ವಾಗಿಲ್ಲ, ಆದ್ರೆ ಹರೀಶ್ ಅವರು ಹೇಳುವಂತೆ "ಇನ್ನೊಬ್ಬರಲ್ಲೂ ನಮ್ಮಂತೆ ಒಬ್ಬ ಮನುಷ್ಯ ಇದ್ದಾನೆ ಎಂಬ ಅರ್ಥ ಮಾಡಿಕೊಳ್ಳುವ ಮನಸ್ಸು ನಮ್ಮಲ್ಲಿದ್ದರೆ ಸಾಕು".
ಲೇಖನ ತುಂಬಾ ಚೆನ್ನಾಗಿ ಬರೆದಿದ್ದೀರ.
ಸುನೀಲ್ ಕೇಳ್ಕರ್

ಬಾಲು said...

ಕಣ್ಣಿರು ಅತ್ಯ೦ತ ಒಳ್ಳೆಯದು, ದುಖದಲ್ಲಿ ಇದ್ದಾಗ ಹೆಗಲಿಗೆ ಜೊತೆಯಾಗುವರು ಇದ್ದರೆ, ಮನಸ್ಸಿಗೆ ಸಮಧಾನ ಅಲ್ವ?

ಎಲ್ಲ ಒಕೆ, ಆದ್ರೆ ಪದೆ ಪದೆ ಕಣ್ಣೀರ ಮಾಲಿಕೆ ಯಾಕೆ?

shridhar said...

ಚಿತ್ರಾ ಅವರೇ,
ಕಣ್ಣೀರು ಎಂಬುದು ಮನದ ಭಾವನೆಯನ್ನು ವ್ಯಕ್ತ ಪಡಿಸುವ ಒಂದು ಸಾಧನ ಅಥವ ವಿಧಾನ. ಮತ್ತೂಬ್ಬರ ಕಣ್ಣೀರಿಗೆ ನಾವು ಕಣ್ಣೀರಾಗಿವುದುರಿಂದಾ ಆತ್ಮೀಯತೆ ಬೆಳೆಯುತ್ತೆ ಹಾಗು ಅವರಲ್ಲಿ ಒಂದು ರೀತೀಯ ಸೇಪ್ ಫೀಲೀಂಗ್ಸ ಬರುತ್ತೆ.
ತುಂಬಾ ಸಂತೋಷವಾದಾಗಲು ಎರಡು ಹನಿ ಕಣ್ಣೀರು ಬರುತ್ತೆ ಆವಾಗಲು ನೀವು ಆ ಕಣ್ಣೀರನ್ನು ಒರೆಸ ಬಯಸುವಿರಾ ?
ಸುಖಃ , ದುಖಃ ಎರಡರಲ್ಲು ಕಣ್ಣೀರು ಸಮ ಭಾಗಿ.
ಲೇಖನ ಎಂದಿನಂತೆ ಸೂಪರ್ .. ಉತ್ತಮ ಬರಹ .. ಆಲೋಚಿಸುವಂತ ವಿಚಾರ .. ನಿಮ್ಮದು ಕಣ್ಣೀರ ಮಾಲಿಕೆಯೆ ಆಗಿರಬಹುದು ,
ಆದರೆ ನೀವೆ ಹೆಳುವಂತೆ " ಬದುಕಂದ್ರೆ ಪ್ರೀತಿ ಜಾಸ್ತಿ. ಭಾವಗಳನ್ನು ಬಚ್ಚಿಡಲ್ಲ, ಬಿಚ್ಚಿಡ್ತೀನಿ " ಅಂದ ಮೇಲೆ ಬದುಕಿನ ಪ್ರತಿಕ್ಷಣವನ್ನು ನೋಡುವ ಆ ನಯನಕ್ಕೆ ಅರಿಯದ ವಿಚರವಿಲ್ಲವೆಂದಾಯ್ತು. ಕಣ್ಣು ಮನಸ್ಸಿನ ಭಾವವನ್ನು ತಿಳಿಸುತ್ತದೆ.

ನಿಮ್ಮ ಲೇಖನಕ್ಕೆ ನನ್ನ ಮಾತುಗಳು ಜಾಸ್ತಿ ಆಯ್ತು ಅನ್ನಿಸುತ್ತೆ ..ಆದರೆ ಏನು ಮಾಡಲಿ ..ನಾನೊಬ್ಬ ಭಾವುಕ ಜೀವಿ ,
ಈ ವಿಚಾರಗಳೂ ಬಂದರೆ ನಾನು ಕಳೆದು ಹೋಗುತ್ತೆನೆ.

ಹೀಗೆಯೆ ಹತ್ತು ಹಲವು ವಿಚಾರಗಳುಲ್ಲ ಲೆಖನಗಳು ಹೊರ ಹೊಮ್ಮಲಿ.

ಶ್ರೀಧರ ಭಟ್ಟ

ಸಂದೀಪ್ ಕಾಮತ್ said...

ಚಿತ್ರಾ ಕೆಲವೊಮ್ಮೆ ದುಃಖವೂ ಸುಖ ಕೊಡುತ್ತೆ !

Anonymous said...

ಕಣ್ಣೀರು cleans the eye..it is biological system..

ದಿವ್ಯಾ ಮಲ್ಯ ಕಾಮತ್ said...

ಚಿತ್ರಾ,
ನಲ್ಮೆಯ ಆತ್ಮೀಯರು ಅಳುತ್ತಿರಬೇಕಾದ್ರೆ,ಇತರರು ಕಣ್ಣೀರಾಗುವುದು, ನಾವು ಅವರೊಂದಿಗಿದ್ದೇವೆ ಎಂಬ ಭಾವವನ್ನೀಯುವ, ಅವರ ಕಣ್ಣೀರನ್ನು ಕಡಿಮೆಗೊಳಿಸುವ, ದುಃಖವನ್ನು ನಿಯಂತ್ರಿಸುವ ಪರಿಯೇ ತಾನೇ?

ಜಲನಯನ said...

ಚಿತ್ರಾಗೆ ಏನು ಹೇಳಬೇಕು ತಿಳೀತಿಲ್ಲ,,...
ದುಃಖ ಹಂಚಿಕೊಂಡರೆ ಕಡಿಮೆಯಾಗುತ್ತೆ ಮನದ ಮೇಲಿನ ಮಣಭಾರ ಇಳಿಯುತ್ತೆ
ಸಂತೋಷ ಹಂಚಿಕೊಂಡರೆ ಇಮ್ಮಡಿ ಮುಮ್ಮಡಿಯಾಗುತ್ತೆ ಮನ ಹರುಷದಿ ಕುಣಿಯುತ್ತೆ
ನೀನು ದುಃಖ ಹಂಚಿಕೊಂಡು ನಿನ್ನ ದುಃಖವನ್ನು ಕಡಿಮೆಮಾಡಿಕೊಂಡೆ..
ಇನ್ನು ಸರದಿ ಸಂತೋಷದ್ದು...ಓಕೆ...

ಶರಶ್ಚಂದ್ರ ಕಲ್ಮನೆ said...

ದುಃಖವನ್ನು ತಡೆಯಬಾರದು... ಯಾರೂ ಯಾರ ದುಃಖವನ್ನೂ ಶಮನ ಮಾಡಲು ಸಾಧ್ಯವಿಲ್ಲ... ನಮಗೆ ನಾವೇ... ದುಃಖವನ್ನು ದಾಟಿ ಮುನ್ನಡೆಯುವ ಹೃದಯ ಬೆಳೆಸಿಕೊಳ್ಳಬೇಕು.

Damodar said...

ಇದೇ ಜೀವನ... ನಾವೆಲ್ಲರೂ ಸರಪಳಿಯ ಕೊಂಡಿಯಿದ್ದಂತೆ.
ಒಂದು ಕೊಂಡಿ ಕಳೆದುಹೋದರೂ...ಸರಪಳಿ ಆಗಲ್ಲ.
ಒಂದೂ ಬಿಡದೆ ನಿಮ್ಮ ಲೇಖನಗಳನ್ನು ಈ ವೀಕೆಂಡ್ನಲ್ಲಿ ಓದಿ ಮುಗಿಸಿದ್ದೇನೆ.
ನಿಮ್ಮ ಬರವಣಿಗೆ ಸ್ಟೈಲ್ ನನ್ನನ್ನ ಮತ್ತೆ ಮತ್ತೆ ಓದುವಂತೆ ಮಾಡಿತು
ಹೀಗೆ ಬರೆಯುತ್ತಿರಿ ...