Saturday, December 25, 2010
ನನ್ನ ಜಡೆ
ಭಾನುವಾರ ಬಂತೆಂದರೆ ಸಾಕು, ಕೊಬ್ಬರಿ ಎಣ್ಣೆಯ ದೊಡ್ಡ ಬಾಟಲನ್ನೇ ಹಿಡಿದು ಅಮ್ಮ ಜಗುಲಿ ಮೇಲೆ ಕೂರುವಳು. ನನಗಿನ್ನೂ ಏಳೆಂಟು ವರ್ಷ. ತಲೆಗೆ ಹಾಗೇ ಎಣ್ಣೆಯನ್ನು ಸುರಿದು, ತಲೆತುಂಬಾ ಎಣ್ಣೆಯ ಓಕುಳಿ. ದಪ್ಪವಾದ, ಗುಂಗುರು ಕೂದಲು. ಜಡೆ ಹಾಕಿದರೆ ಸೊಂಟದಿಂದ ಕೆಳಗೆ. ಅಮ್ಮನಿಗೆ ಜಡೆ ಹಾಕುವ ಖುಷಿ, ನನಗೆ ಅಮ್ಮನ ಕೈಯಿಂದ ಬಿಡಿಸಿಕೊಳ್ಳುವ ಆತುರ.
ಆ ಲೀಟರ್ಗಟ್ಟಗಲೆ ಎಣ್ಣೆ ಹಾಕಿ ಕೂದಲು ಬಾಚತೊಡಗಿದರೆ, ಸಿಕ್ಕು ಬಿಡಿಸಲು ಒಂದು ಗಂಟೆ. ಅದನ್ನು ಬಾಚಿ ಜಡೆ ಹೆಣೆಯಲು ಇನ್ನರ್ಧ ಗಂಟೆ. ಅಲ್ಲಿಗೇ ಅಮ್ಮನಿಗೆ ಸಮಾಧಾನವಿಲ್ಲ. ಮನೆಯಂಗಳದಲ್ಲಿ ಬೆಳೆದ ಆ ಕನಕಾಂಬರವನ್ನು ಕೊಯ್ದು ಮಾಲೆ ಕಟ್ಟುವಳು. ಜಡೆಯ ತುಂಬಾ ಕನಕಾಂಬರದ ಚೆಲುವು. ಮಗಳ ಜಡೆಗೆ ಹೂವು ಮುಡಿಸಿ ಅದನ್ನು ನೋಡುವುದೇ ಅಮ್ಮನಿಗೆ ಖುಷಿ. ಜಡೆ ಹಾಕಿಬಿಟ್ಟರೆ ಅವಳ ದೊಡ್ಡ ಕೆಲಸ ಮುಗಿದಂತೆ.
ಶಾಲೆಗೆ ಹೋಗುವಾಗಲೂ ಅಷ್ಟೇ, ಎರಡು ಜಡೆ ಹೆಣೆದು ಅದನ್ನು ಮಡಿಚಿ ಕಟ್ಟಬೇಕು. ಆ ತುರುಬಿಗೆ ಪುಟ್ಟದೊಂದು ಕೆಂಪು ಗುಲಾಬಿ ಇಡೋಳು. ಆದರೆ, ಭಾನುವಾರ ಬಂತೆಂದರೆ ವೈವಿಧ್ಯಮಯ ಜಡೆ ಹೆಣೆಯೋಳು. ಅದನ್ನು ನೋಡುವುದೇ ಚೆಂದ. ನನ್ನ ಜಡೆಯ ಮೇಲೆ ತಮ್ಮನಿಗೆ ಕಣ್ಣು. ಅದನ್ನು ಕದ್ದು ಹಿಡಿದೆಳೆದರೆನೇ ಅವನಿಗೆ ಸಮಾಧಾನ.
ಆ ಉದ್ದ ಜಡೆಯನ್ನು ಎದುರುಗಡೆ ಹಾಕೊಳ್ಳುವುದೇ ಸಂಭ್ರಮ. ಅಮ್ಮ ನನ್ನ ಜಡೆಯನ್ನು ಎಷ್ಟು ಜೋಪಾನವಾಗಿಡುತ್ತಿದ್ದಳೆಂದರೆ, ನನ್ನ ಸ್ನಾನ ಮಾಡುವಾಗಲೂ ಹೆಚ್ಚು ಬಿಸಿಯಾದ ನೀರು ಉಪಯೋಗಿಸಲ್ಲ. ಏನಿದ್ರೂ ಅರೆಬಿಸಿ ನೀರು. ಪ್ರತಿದಿನ ಎಣ್ಣೆ ಹಾಕಿ ಸಿಕ್ಕು ಬಿಡಿಸಿ ಬಾಚೋಳು. ಒಂದು ದಿನ ಅದಕ್ಕೆ ಕತ್ತರಿ ತಾಗಿಸಿದ್ದಿಲ್ಲ. ಯಾರಾದ್ರೂ ತಲೆಕೂದಲು ಕತ್ತರಿಸುವ ಬಗ್ಗೆ ಮಾತೆತ್ತಿದ್ದರೆ ನನ್ನ ಮಗಳ ತಲೆಕೂದಲು ಉದ್ದ ಬರಬೇಕು. ಹೆಣ್ಮಕ್ಕಳಿಗೆ ಜಡೆಯೇ ಸೌಂದರ್ಯ ಎಂದು ಉದ್ದುದ್ದ ಜಡೆ ಪುರಾಣ ತೆಗೆಯೋಳು.
ಪ್ರತಿ ಭಾನುವಾರ ನಮ್ಮೂರಲ್ಲಿ ಸಂತೆ ನಡೆಯೋದು. ಆ ಸಂತೆಗೆ ಅಮ್ಮ ತಪ್ಪದೆ ಹಾಜರ್. ಅಲ್ಲಿಗೆ ಹೊರಟಾಗ ಮಂಗಳೂರ ಮಲ್ಲಿಗೆ ತನ್ನಿಯೆಂದು ಅಮ್ಮನಿಗೆ ನನ್ನ ವಾರ್ನಿಂಗ್. ಜೊತೆಗೊಂದು ಕೆಂಪು ಗುಲಾಬಿ. ಉದ್ದವಾಗ ಜಡೆ ಹೆಣೆದು, ಜಡೆಯ ಬುಡಕ್ಕೊಂದು ಗುಲಾಬಿ ಇಟ್ಟರೆ ಸಾಕು. ಸಾವಿರ ಕಣ್ಣುಗಳು ಜಡೆಯ ಮೇಲೆ!
ಇಂದು ಜಡೆಯಿಲ್ಲ, ತುರುಬಲ್ಲಿ ಹೂವಿಲ್ಲ. ಜಡೆ ಹೆಣೆಯುವ ಅಮ್ಮನಿಲ್ಲ!
ಕೆ.ಎಸ್.ನ. ಹಾಡೊಂದು ನೆನಪಾಗುತ್ತಿದೆ.
ಅಡಿಯ ಮುಟ್ಟ ನೀಳ ಜಡೆ
ಮುಡಿಯ ತುಂಬಾ ಹೂವ ಹೆಡೆ
ಇವಳು ಅಡಿಯನಿಟ್ಟ ಕಡೆ
ಹೆಜ್ಜೆಹೆಜ್ಜೆಗೆ ಒಂದು ದೊಡ್ಡ ಮಲ್ಲಿಗೆ
ಇವಳು ಯಾರು ಬಲ್ಲೆಯೇನು
ಇವಳ ಹೆಸರ ಹೇಳಲೇನು
ಇವಳ ದನಿಗೆ ತಿರುಗಲೇನು
ಇವಳು ಏತಕೋ ಬಂದು ನನ್ನ ಸೆಳೆದಳು...!!
ಪ್ರಕಟ: http://www.hosadigantha.in/epaper.php?date=12-23-2010&name=12-23-2010-13
Subscribe to:
Post Comments (Atom)
7 comments:
chennagi barediddiraa
jade ittichina dinagalalli chikkadaagta iruvaaga neevinnoo neela jade itkondidira andre tumba santhosha
ಮಕ್ಕಳ ಜಡೆಗಳು ಅಮ್ಮನ ನಿಗಾ ತಪ್ಪಿದ ಮೇಲೆ ಕುದುರೆ ಜುಟ್ಟು ಆಗುವುದು ಈಗೀಗ ಸಾಮಾನ್ಯ..:(
ಮಕ್ಕಳ ಜವಾಬ್ಧಾರಿ ತಪ್ಪಿದ೦ತೆ ಅಮ್ಮನಿಗೆ ಅವರ ಜಡೆಯ ಮೇಲಿನ ಹಕ್ಕೂ ತಪ್ಪಿಹೋಗುತ್ತದೆ...!!!
ಫೋಟೋದ ಜಡೆ ಚೆನ್ನಾಗಿದೆ.
Touching nostalgia!
ಫೋಟೋ ನೋಡಿದ ತಕ್ಷಣ "ನಿಲ್ಲು ನೀ ನಿಲ್ಲು ನೀ ನೀಲವೇಣಿ" ಹಾಡು ಬಾಯಿಗೆ ಬಂತು.
ಚಿಕ್ಕವನಿದ್ದಾಗ, ಅಜ್ಜಿ ಎಣ್ಣೆ ಹಚ್ಚೋದಿಕ್ಕೆ ಬಂದ್ರೆ ಮನೆ ತುಂಬಾ ಓಡಾಡ್ತಿದ್ದೆ. ಅದೆಲ್ಲಾ ನೆನಪಾಯ್ತು.
ಸವಿ ಸವಿ ನೆನಪು ... ನಿಮ್ಮ ನೆನಪಿನಂಗಳದ ಬತ್ತಳಿಕೆಯಿಂದ ಇನ್ನಷ್ಟು ಮನ ಮುಟ್ಟುವ ಬರಹಗಳು ಬರಲಿ ..
ಚಿತ್ರಾ,
ಜಡೆ ಸೂಪರ್. ಹಾಗೇ ನಿಮ್ಮ ಬರಹನೂ.
nimma jade tumba chennagide kanri.g.s.s.avar jade kaviteyannomme odi nodi.k.s.n. avar kaviteya salugalannu melaku haki" avalomme kappu kurulannu hegala melella haradidare duradali giriya mele ilidante irula male" shridhar nayak
Post a Comment