Saturday, June 12, 2010

ಅಜ್ಜಿಗೊಂದು ಪತ್ರ


ಅಜ್ಜಿ,

ಇಲ್ಲಿ ತುಂಬಾ ಮಳೆ. ಕಿಟಕಿಯಾಚೆ ಇಣುಕಿದರೆ ದೂರದಲ್ಲಿ ಕಾಣುವ ಖಾಲಿ ಮೈದಾನ ತುಂಬಾ ಆಲಿಕಲ್ಲುಗಳ ಓಕುಳಿಯಾಟ. ಮಕ್ಕಳ ಕಲರವಗಳಿಲ್ಲ. ಇಲ್ಲಿ ನಮ್ಮೂರಿನ ತರ ಹಸಿರು ಮರಗಿಡಗಳು ಕಾಣಸಿಗೊಲ್ಲ, ಬರೇ ಬಿಲ್ಡಿಂಗ್‌ಗಳು. ಆ ಬಿಲ್ಡಿಂಗ್ ಮೇಲೆ ಬಿದ್ದ ಮಳೆ ಹಾಗೇ ರಸ್ತೆಗಿಳಿಯುತ್ತೆ. ಆಗ ಆ ರಸ್ತೆಯೇ ನಮ್ಮೂರಿನ ದೊಡ್ಡ ಹೊಳೆಯಾಗುತ್ತೆ. ಎಂಥ ವಿಚಿತ್ರ ಅಂತೀಯಾ? ಈ ಬೆಂಗ್ಳೂರೇ ಹಾಗೇ ಅಜ್ಜಿ.

ಅಂದ ಹಾಗೇ, ಮಳೆ ಬಂದ ತಕ್ಷಣ ನಂಗೆ ನೀನೇ ನೆನಪಾಗ್ತಿಯಾ. ಮಳೆ ಬಂದಾಗಲೆಲ್ಲಾ ನಿನ್ನ ಸೆರಗ ಹಿಡಿದು ಹಲಸಿನ ಬೀಜ, ಹಪ್ಪಳ ಉರಿದು ಕೊಡು ಎಂದು ಬೆನ್ನಿಗೆ ಬಿದ್ದಾಗ ಬೈಯುತ್ತಲೇ ಪ್ರೀತಿಯಿಂದ ಮಾಡಿಕೊಡುತ್ತಿದ್ದಿ ಅಲ್ವಾ? ನಿನ್ನ ಬೈಗುಳ ಕೇಳೋದೇ ಒಂಥರಾ ಚೆಂದ ಅಜ್ಜಿ. ಅಮ್ಮ ಕೆಲ್ಸದಿಂದ ಬರೋದು ತಡವಾದಾಗ ನಿನ್ನ ತೊಡೆ ಮೇಲೆ ಕುಳಿತು ಜೋರಾಗಿ ಅಳುತ್ತಿದ್ದಾಗ ನೀನು ರಾಮಾಯಣ, ಮಹಾಭಾರತ ಕಥೆ ಹೇಳಿಯೇ ನನ್ನ ಸಮಧಾನಿಸುತ್ತಿದ್ದೆ.

ನೊಡು. ಅಜ್ಜಿ, ಈಗ ಯಾರು ಹೇಳ್ತಾರೆ ಕಥೆ? ಅಜ್ಜಿ ಕಥೆ ಅಂತ ಹೇಳಿದ್ರೆ ಈಗಿನ ಮಕ್ಕಳು ಅದೇನು ಅಜ್ಜಿ ಕಥೆ? ಅದು ಹೇಗಿರುತ್ತೆ? ಅಂಥ ಹೇಳೋ ಸ್ಥಿತಿ ಇದೆ ಗೊತ್ತಾ?

ರಜೆ ಬಂದ್ರೆ ಸಾಕು ಅಜ್ಜ-ಅಜ್ಜಿ ಮನೆಗೆ ಓಡಿಹೋಗುವ, ಒಂದು ತಿಂಗಳ ರಜಾದಲ್ಲಿ ಅಜ್ಜಿ ಜೊತೆ ಕಾಲ ಕಳೆಯುವ ಮಕ್ಕಳು ಎಲ್ಲಿ ಸಿಗ್ತಾರಲ್ವಾ? ಈ ಮಳೆಗೆ ತೊಡೆ ಮೇಲೆ ಕುಳ್ಳಿರಿಸಿಕೊಂಡು ಹಪ್ಪಳ ಸಂಡಿಗೆ ತಿನ್ನಿಸುತ್ತಾ, ಅತ್ತಾಗ ಮೆಲ್ಲಗೆ ಪ್ರೀತಿಯಿಂದ ಗದರುತ್ತಾ, ಲಾಲಿ ಹಾಡೋ ‘ಅಜ್ಜಿ ’ ನೀನು ನಮ್ಮ ದೇಶದಲ್ಲೇ ಇತಿಹಾಸದ ಪುಟ ಆಗ್ತಿದ್ದಿಯಲ್ಲಾ ಅದಕ್ಕಿಂತ ದುರಂತ ಇನ್ನೇನಿದೆ ಹೇಳು?

ಆದರೆ, ನಮ್ಮೂರ ಹಸಿರು ಹಳ್ಳಿಯಲ್ಲಿ ಹುಟ್ಟಿದ ನನಗೆ ನಿನ್ನಂಥ ಒಳ್ಳೆ ಅಜ್ಜಿ ಸಿಕ್ಕಿದ್ದಾಳೆ. ಅವಳ ಬಾಯಿಂದ ಉದುರುವ ಮುತ್ತಿನ ಕಥೆಗಳನ್ನು ಕೇಳೋ ಭಾಗ್ಯ ನನಗೂ ಸಿಕ್ತು. ರಜೆ ಸಿಕ್ಕಾಗಲೆಲ್ಲಾ ನಿನ್ನ ಮಡಿಲಲ್ಲಿ ಮುಖ ಹುದುಗಿಸಿ ಯಕ್ಷಗಾನ ನೋಡೋ ಅವಕಾಶ ನಂಗೆ ಸಿಕ್ತು ಅನ್ನೋದನ್ನು ನೆನೆಸಿಕೊಂಡಾಗಲೆಲ್ಲಾ ನಾನು ಪುಳಕಿತಳಾಗುತ್ತೇನೆ.

ನೋಡಜ್ಜಿ, ಈ ಮಳೆ ಎಷ್ಟೆಲ್ಲಾ ನೆನಪಿಸ್ತು ಅಂತ. ಆ ಮಳೆನೇ ಹಾಗೇ ನೆನಪುಗಳ ಮೆರವಣಿಗೆ...

(ಪ್ರಕಟ: http://hosadigantha.in/epaper.php?date=06-10-2010&name=06-10-2010-೧೭)

15 comments:

ಮನದಾಳದಿಂದ............ said...

ನಿಜ.........
ಅಜ್ಜಿಯ ಪ್ರೀತಿ ಮರೆಯಲು ಸಾಧ್ಯಾನೇ ಇಲ್ಲ. ಸೊಂಟದ ಮೇಲೆ ಹೊತ್ತು ಹೊಲವೆಲ್ಲ ತಿರುಗುವ ಪ್ರೀತಿಯ ಅಜ್ಜಿ, ಬಗಲಲ್ಲೇ ಮಲಗಿಸಿಕೊಂಡು ಕತೆ ಹೇಳುವ ನಲ್ಮೆಯ ಅಜ್ಜಿ............
ಯಾಕೋ ನನ್ನಜ್ಜಿ ತುಂಬಾ ನೆನಪಿಗೆ ಬದುಬಿಟ್ಟರು ಕಣ್ರೀ...........

ಧರಿತ್ರಿ said...

ಧನ್ಯವಾದಗಳು.....
ನಿಮ್ಮಜ್ಜಿನೂ ನೆನಪಿಗೆ ಬಂದಿದ್ದು ಖುಷಿಯಾಯ್ತು.

ಬಾಲು said...

ಈಗಿನ ಬೆಂಗಳೂರಿನ ಹೈ ಫೈ ಜನ ಜೀವನದಲ್ಲಿ ಮಳೆ ಬಂದಿದ್ದು ಹೋಗಿದ್ದು ಗೊತ್ತೇ ಆಗೋಲ್ಲ, ಎ ಸಿ ರೂಮಲ್ಲಿ ಕೂತೊರಿಗೆ ಹೊರಗಿನ ವಾತಾವರಣ ಗೊತ್ತ್ಕಗೊದು ಟ್ರಾಫಿಕ್ ಜಾಮ್ ಸಿಕ್ಕಿ ಹಾಕಿ ಕೊಂಡಾಗ ಮಾತ್ರ. ಇಗಿನ ಮಕ್ಕಳೆಲ್ಲಿ ಅಜ್ಜಿ ಮನೆಗೆ ಹೋಗ್ತಾರೆ? ಇಗ ಅವರಿಗೆ ಕಥೆ ಹೇಳೋರು ಯಾರು?

ನಾವೇ ಅದೃಷ್ಟ ಶಾಲಿಗಳು. :) :)

ನಮ್ಮೂರಲ್ಲಿ ಒಳ್ಳೆ ಮಳೆ ಅಂತೆ, ನಾನು ಅದನ್ನು ಮಿಸ್ ಮಾಡ್ಕೋತಾ ಇದ್ದೀನಿ. :(

Anonymous said...

ಅಜ್ಜಿಯ ಮಡಿಲಲ್ಲಿ ಮುಖ ಹುದುಗಿಸಿದ ಮೇಲೆ ಯಕ್ಷಗಾನ ನೋಡೋದು ಹೇಗೆ

ಶಿವಪ್ರಕಾಶ್ said...

Sweet memories :)
Nice one

ಸೀತಾರಾಮ. ಕೆ. / SITARAM.K said...

ಮಳೆಯೊ೦ದಿಗೆ ಅನಾವರಣಗೊಳ್ಳುವ ಸ೦ಭ೦ಧಗಳ ಭಾವಪೂರ್ಣ ಅಪೂರ್ವ ಲೇಖನ. ನಾ ಹುಟ್ಟಿದಾಗ ತೀರಿದ್ದ ಅಜ್ಜಿ ಅಮೇಲೆ ಕೈಗೂಸಿದ್ದಾಗ ತೀರಿದ ಇನ್ನೊಬ್ಬ ಅಜ್ಜಿಯರ ನೆನಪು ಮನದಾಳದಲ್ಲಿರದಿದ್ದರೂ ತಮ್ಮ ಲೇಖನ ಓದಿ ಇದ್ದಿದ್ದರೆ ಎ೦ಬುದನ್ನು ನೆನೆದು ಕಳೆದುಕೊ೦ಡದ್ದನ್ನು ಮನ ನೆನೆದು ಮರುಗಿತು.

ವನಿತಾ / Vanitha said...

very sweet article:))..

© ಹರೀಶ್ said...

ಅಜ್ಜಿಯ ಪ್ರೀತಿಯನ್ನ ಮತ್ತೆ ಮತ್ತೆ ನೆನೆಯುವಂತೆ ಮಾಡಿತು ನಿಮ್ಮ ಲೇಖನ

ಹೊನ್ನ ಹನಿ
http://www.honnahani.blogspot.com

ashwath said...

ಚಿತ್ರಾ,
ಮಳೆ ಅಂದ್ರೆ" ಧೋ" ಅಂತಲೇ ಸುರಿಬೇಕು. ಆಗಲೆ ಚಂದ."ಮಳೆ" ಅನ್ನೊ ನೆನಪೆ ಒದ್ದೆ, ಒದ್ದೆ. ಇಲ್ಲಿ(ಜರ್ಮನಿ)ಮಳೆ ಅಂದ್ರೆ ಮೈಯಿರಲಿ, ತಲೆ ಕೂಡಾ ಒದ್ದೆಯಾಗಲ್ಲ.
ಕುಸುಮಾ ಸಾಯಿಮನೆ

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

ನಿಜ ಈ ಮಳೆ ಕೆಲವು ನೆನಪನ್ನ ಮತ್ತೆ ತರ್ತವೆ...ಹಲ್ಲು ಇದ್ದವರಿಗೆ ಕಡಲೆ ಇಲ್ಲ ಕಡಲೆ ಇದ್ದವರಿಗೆ ಹಲ್ಲು ಇಲ್ಲ ಹಾಗೆ ನಮ್ಮ ಸಿಟಿ ಲೈಫ್,ಆದರೆ ಅಲ್ಲು ಇದ್ದಾಗ ಕಡಲೆ ತಿಂದಿದ್ವಿ ಅಂತ ಹಳೆ ನೆನಪುಗಳ ಮೆಲುಕು ಹಾಕ್ತ ಸಮಾದಾನ ಮಾಡ್ಕೊಬೇಕು ....ಚನ್ನಾಗಿದೆ ಬರಹ

Anonymous said...

akasmikavagi nimma blog olage bande. akkareya barhagala kande. beretiri

ಜಲನಯನ said...

ಚಿತ್ರಾ...ಮಳೆ...ಮಳೆಯೇ...ಧೋ ಎಂದರೂ, ಜಿಗಿ-ಜಿಗಿ ಜಡಿಯಾದರೂ, ತುಂತುರಾದರೂ ..ಅದರ ಸೊಗಸೇ ಒಂದು ಬಣ್ಣನಾತೀತ ಅನುಭವ...ಅದನ್ನು ಭಾವನೆಯ ದಿಶೆಕೊಟ್ಟು ಒಳ್ಳೆಯ ಕವನರೂಪೀ ಕಥನ..ಮೂಡಿಬಂದಿದೆ....ಧನ್ಯವಾದ

Ravi sathvick said...

Accidentally, I surfed across your blog. Ajji vaatsalyada bagge barediddu the way you have described and picturised is awesome. Good writing keep it up.

Ravindra Sathvick
Sathvick Infotech Pvt Ltd

Ravi sathvick said...

Accidentally, I surfed across your blog. Ajji vaatsalyada bagge barediddu the way you have described and picturised is awesome. Good writing keep it up.

Ravindra Sathvick
Sathvick Infotech Pvt Ltd

ಅನಂತ್ ರಾಜ್ said...

ಅಜ್ಜಿಗೆ ಬರೆದ ನಲ್ಮೆಯ ಪತ್ರ ಇಷ್ಟವಾಯ್ತು.

ಅನ೦ತ್