ನಿನಗೆ ಪತ್ರ ಬರೆಯದೆ ತುಂಬಾ ದಿನಗಳಾಯ್ತು. ಇವತ್ತು ಬರೀಲೇಬೇಕು ಅಂದುಕೊಂಡು ಬರೀತಾ ಇದ್ದೀನಿ. ಹಾಗಂತ ಅಮ್ಮನ ದಿನ ಬಂದಾಗ ಪತ್ರ ಬರೀತಾಳೆ ಅಂದ್ಕೋಬೇಡ, ನನಗೆ ಅನುದಿನವೂ ಅಮ್ಮನ ದಿನವೇ. ಮದುವೆಯಾದ ಮೇಲೆ ಮನೆಗೆ ಬಂದಿಲ್ಲ ಅಂತ ನೀ ಮುನಿಸಿಕೊಂಡಿದ್ದೀಯಾ, ನೀನೆಷ್ಟು ಬೈದ್ರೂ, ಮುನಿಸಿಕೊಂಡ್ರೂ ನಾ ನಿತ್ಯ ನಿನ್ನದೆಯಲ್ಲಿ ಪಿಸುಗುಟ್ಟುವ ಪುಟ್ಟ ಮಗುನೇ ಅಮ್ಮಾ. ನಿನ್ನ ಸಿಟ್ಟು, ಕೋಪ, ಕಣ್ಣಿನಿಂದ ದುರುಗಟ್ಟಿ ನೋಡುವುದು, ಎತ್ತರದ ದನಿಯಲ್ಲಿ ಬೈದುಬಿಡೋದು ಇದೆಲ್ಲಾ ನನ್ನ ನಗು ನೋಡೋ ತನಕ ಅಂತ ನನಗೆ ಚೆನ್ನಾಗಿ ಗೊತ್ತಮ್ಮಾ.
ಮತ್ತೆ, ಹೇಗಿದ್ಯಾ? ಈ ಬೆಂಗಳೂರಲ್ಲಿ ದಿನಾ ಸಂಜೆ ಮಳೆರಾಯನ ಅಬ್ಬರ. ರಸ್ತೆಗಳೆಲ್ಲಾ ಸಮುದ್ರಗಳಾಗಿಬಿಡ್ತವೆ. ಅಂದ ಹಾಗೆ, ನಮ್ಮೂರಲ್ಲೂ ಮಳೆ ಬರುವುದೇ? ನಮ್ಮ ತೋಟದ ಕೆರೆ, ತೋಟದಾಚೆಗಿನ ಹೊಳೆ ತುಂಬಿ ಹರಿಯೋದೇ? ನೀ ಅಂಗಳದಲ್ಲಿ ನೆಟ್ಟು ಮಕ್ಕಳಂತೆ ಬೆಳೆಸಿದ ಬಣ್ಣದ ಹೂಗಿಡಗಳು ಹಸಿರಾಗಿವೆಯೇ? ನಾನು-ನಿನ್ನ ಅಳಿಯ ಇದೇ ಮಳೆಗಾಲದಲ್ಲಿ ನಿನ್ನನ್ನು, ನಮ್ಮೂರ ಹಸಿರ ತೋಟವನ್ನು, ತುಂಬಿ ಹರಿಯೋ ನದಿಯನ್ನು, ಮನೆಯಂಗಳದ ಕನಕಾಂಬರ ಸೊಬಗು, ಕಥೆ ಹೇಳುವ ಅಜ್ಜಿ, ಕಳ್ಳು ತೆಗೆಯೋ ಅಜ್ಜ...ಎಲ್ಲರನ್ನೂ ನೋಡೋಕೆ ಬರ್ತಾ ಇದ್ದಿವಿ. ಒಂದಿಷ್ಟು ಹಲಸಿನ ಹಪ್ಪಳ, ಸಂಡಿಗೆ, ಮಾವಿನ ಮಿಡಿ ಉಪ್ಪಿನ ಕಾಯಿ ಎಲ್ಲವನ್ನೂ ರೆಡಿಮಾಡಿಬಿಡು.
ನಾನಿಲ್ಲಿ ತುಂಬಾ ಚೆನ್ನಾಗಿದ್ದೀನಿ, ಗುಂಡು-ಗುಂಡಾಗಿ ಬೆಳೆದಿದ್ದೀನಿ. ನೀನು ನೋಡಿದ್ರೆ ಇನ್ನೂ ಖುಷಿಪಡ್ತಿಯಾ. ಅತ್ತೆ-ಮಾವ ನನ್ನ ಪುಟ್ಟಿ ಅಂತಾರೆ. ಅವರು ಪ್ರೀತಿಯಿಂದ ಕರೆದಾಗಲೆಲ್ಲಾ ನೀನೇ ನೆನಪಾಗ್ತಿಯಾ. ಥೇಟ್ ನಿನ್ನ ತರನೇ ನೋಡ್ಕೋತಾರೆ. ನಿನ್ನ ತರನೇ ತಲೆಗೆ ಎಣ್ಣೆ-ಸೀಗೆ ಕಾಯಿ ಸ್ನಾನ ಮಾಡಿಸ್ತಾರೆ. ಹೂವು ತಂದು ಮುಡಿಸ್ತಾರೆ, ಚೆಂದದ ಡ್ರೆಸ್ ಕೊಡಿಸ್ತಾರೆ. ತಪ್ಪು ಮಾಡಿದಾಗ, ಪ್ರೀತಿಯಿಂದ ಬೈತಾರೆ. ಅವರಲ್ಲಿ ನಿನ್ನನೇ ನಾ ಕಾಣ್ತೀನಿ, ಅದಕ್ಕೆ ಖುಷಿಯಾಗಿದ್ದೀನಿ ಕಣಮ್ಮಾ. ನಂಗೊತ್ತು ಅಕ್ಷರ ಕಲಿಯದ ನೀನು ನನಗೆ ಅಕ್ಷರ ಕಲಿಸಿದ್ದಿ, ಬದುಕು ಕಲಿಸಿದ್ದಿ, ಭವಿಷ್ಯ ಕಟ್ಟಿಕೊಟ್ಟಿದ್ದಿ. ನೀನು ಖಂಡಿತಾ ಈ ಪತ್ರನಾ ಪಕ್ಕದ್ಮನೆ ಪುಟ್ಟಿ ಬಳಿ ಓದಿಸ್ತೀ ಅಂತ. ಸಧ್ಯದಲ್ಲೇ ಬಂದುಬಿಡ್ತೀನಿ. ನಾ ಸಣ್ಣ ಮಗುವಾಗಿದ್ದಾಗ ನಿನ್ನ ಕೈಯಿಂದ ಆ ಬೆಳದಿಂಗಳ ತಂಪಿನಲ್ಲಿ ಕುಳಿತು ತುತ್ತು ತಿಂದ ಅದೇ ಕಲ್ಲುಬೆಂಚಿನ ಮೇಲೆ ಕುಳಿತು ಮತ್ತೊಮ್ಮೆ ನಿನ್ನ ಸವಿತುತ್ತು ಮೆಲ್ಲುವಾಸೆ.
ಇಂತೀ
ಪ್ರೀತಿಯ ಮಗಳು
(ಹೊಸದಿಗಂತ ಪತ್ರಿಕೇಲಿ ಪ್ರತಿ ಗುರುವಾರದ ಧರಿತ್ರಿ ಮಹಿಳಾ ಪುಟದಲ್ಲಿ ಪ್ರಕಟವಾಗುವ ಭಾವಬಿಂದು ಅಂಕಣಕ್ಕೆ ಬರೆದ ಪುಟ್ಟ ಬರಹ
http://hosadigantha.in/epaper.php?date=05-06-2010&name=05-06-2010-೧೭
Tuesday, May 11, 2010
Subscribe to:
Post Comments (Atom)
8 comments:
ಮಗು ಎಷ್ಟೇ ಬೆಳೆದರೂ ತಾಯಿ ಎದುರಿಗೆ ಮಗುವೇ. ಈ ಮಗುವಿನ ಭಾವನೆ ನಿಮ್ಮ ಪತ್ರ-ಲೇಖನದಲ್ಲಿ ಸಮರ್ಥವಾಗಿ ಮೂಡಿದೆ.
ಚಿತ್ರಾ ಅವರೇ,
ನಾವೆಷ್ಟೇ ದೊಡ್ಡವರಾದರೂ ತಾಯಿಗೆ ಮಗುವೇ ಅಲ್ಲವೇ? ನಾವು ಸಣ್ಣವರಿದ್ದಾಗ ತಾಯಿ ನಮ್ಮನ್ನು ನೋಡಿಕೊಂಡ ರೀತಿ, ಆಕೆಯ ಪ್ರೀತಿ ಸಾವಿರ ಜನ್ಮಗಳೇ ಕಳೆದರೂ ಮರೆಯಲು ಸಾಧ್ಯವಿಲ್ಲ! ಹಾಗೊಮ್ಮೆ ಮರೆತರೆ ಮಕ್ಕಳು ಹೇಗಾಗುತ್ತೇವೆ?
ಊರಲ್ಲಿರುವ ನನ್ನಮ್ಮನ ನೆನಪಾಯಿತು. ತಾಯಿಯ ಮಮತೆಯ ವೈಕರಿಯನ್ನು ಸುಂದರವಾಗಿ ವರ್ಣಿಸಿದ್ದೀರಾ.
ಧನ್ಯವಾದಗಳು.
ಯಾಕೋ ಓದಿ ಕಣ್ಣಲ್ಲಿ ನೀರು ಜಿನುಗಿತು, ಅಕ್ಷರ ಕಲಿಯದೇ, ನಮಗೆ ಅಕ್ಷರ ಕಳಿಸಿದ ಎಲ್ಲಾ ಅಮ್ಮನಿಗೂ ಈ ಪತ್ರ ಸಲ್ಲುತ್ತದೆ....... ತುಂಬಾ ತುಂಬಾ ಧನ್ಯವಾದ......
:) very nice :)
ಇದನ್ನು ಹೊಸದಿಗಂತ ದಲ್ಲಿ ಓದಿದ್ದೆ. ತು೦ಬ ಆಪ್ತ,ಆರ್ದ್ರ ಶೈಲಿ ಇಷ್ಟವಾಯಿತು. ಅಮ್ಮ ಅ೦ದರೆ ಹಾಗೇನೇ, ಮಗು ಎಷ್ಟು ಎತ್ತರಕ್ಕೆ ಬೆಳೆದರೂ ಅಮ್ಮನಿಗೆ ಮಗುವೇ. ಚೆನ್ನಾಗಿದೆ.
ಇದನ್ನು ಹೊಸದಿಗಂತ ದಲ್ಲಿ ಓದಿದ್ದೆ. ತು೦ಬ ಆಪ್ತ,ಆರ್ದ್ರ ಶೈಲಿ ಇಷ್ಟವಾಯಿತು. ಅಮ್ಮ ಅ೦ದರೆ ಹಾಗೇನೇ, ಮಗು ಎಷ್ಟು ಎತ್ತರಕ್ಕೆ ಬೆಳೆದರೂ ಅಮ್ಮನಿಗೆ ಮಗುವೇ. ಚೆನ್ನಾಗಿದೆ.
ಅಕ್ಷರ ಕಲಿಯದ ಅಮ್ಮ ಮದುವೆಯಾದ ನ೦ತರ ಅಪ್ಪಯ್ಯನ ಮುಖಾ೦ತರ ಒತ್ತಕ್ಷರಗಳಿಲ್ಲದೇ ಮನದಲ್ಲಿ ಓದಿ, ಒತ್ತಕ್ಷರಗಳನ್ನು ಊಹಿಸಿ, ಸ್ವಲ್ಪ ಕ್ಷಣಗಳ ನ೦ತರ ಜೋರಾಗಿ ಓದುತಿದ್ದ ಅಮ್ಮ ನನಗೆ ನೆನಪಾದಳು. ನಾನು ೭-೮ನೇ ಕ್ಲಾಸಲ್ಲಿದ್ದಾಗ ನನ್ನ ಚುಟುಕುಗಳು ಅಪರ೦ಜಿ ಪತ್ರಿಕೆಯಲ್ಲಿ ಪ್ರಕಟವಾದಾಗ, ತನ್ನ ಅಕ್ಕಿ ಆರಿಸುವ ಕನ್ನಡಕ ಏರಿಸಿ ಮನದಲ್ಲಿ ಮೊದಲು ಓದಿ ಊಹಿಸಿ, ಅಮೇಲೆ ನನಗೆ ಜೋರಾಗಿ ಓದಿ ಹೇಳಿ ಆನ೦ದಪಟ್ಟ ಅಮ್ಮನ ನೆನಪಾಗಿ ಕಣ್ಣು ತೇವವಾದವು ತಮ್ಮ ಲೇಖನ ಓದಿ.
ಆಪ್ತತೆಯ ಬರಹ.
ಚಿತ್ರಾ, ಅಮ್ಮ-ಅತ್ತೆ ಇಬ್ಬರ ನೆನಪಾಗಿ ಕಣ್ಣಲ್ಲಿ ನೀರು ಬಂತು..ನಿಮ್ಮ ಬರಹಗಳು ಹೀಗೆ ಆಪ್ತತೆಯಿಂದ ಬಲು ಇಷ್ಟವಾಗುತ್ತದೆ..:)
Post a Comment