Monday, October 5, 2009

ಪ್ರಾಮೀಸ್ ಮಾಡು..ಖುಷಿಯಾಗಿರ್ತಿ ಅಲ್ವಾ?

ಮುನ್ನಿ....

ಬಹಾರೋ ಫೂಲ್ ಬರ್ಸಾ ಹೋ

ಮೇರಾ ಮೆಹಬೂಬ್ ಆಯಾ ಹೇ...

ರಫೀ ಹಾಡಿದ ಹಾಡನ್ನು ಕೇಳುತ್ತಾ ಪತ್ರ ಬರೀತಾ ಇದ್ದೀನಿ ಮುನ್ನಿ.


ಹೇಗಿದ್ಯಾ? ಇಂದು ನಮ್ಮೂರಲ್ಲಿ ಮಳೆ ಬಂದಿದೆ ಕಣೇ. ನಿಮ್ ಕಡೆ ಹೊಲ, ಗದ್ದೆ, ಕೆರೆ-ತೊರೆಗಳು ತುಂಬಿ ಹರಿಯುತ್ತಿದ್ದರೂ ನಮ್ಮೂರಲ್ಲಿ ಅದೇಕೋ ವರುಣನಿಗೆ ನಮ್ ಮೇಲೆ ಮುನಿಸು. ಆದರೆ ಇಂದು ಮಳೆ ಬಂದಿದೆ. ಮನೆಯಂಗಳ ದೊಡ್ಡ ತೊರೆಯಾಗಿದೆ. ತುಂಬಿ ಹರಿಯೋ ಕೆರೆ-ತೊರೆಗಳನ್ನು ನೋಡುವಾಗ ತುಂಬಾ ಖುಷಿಯಾಗುತ್ತಿದೆ. ನಮ್ಮೂರ ತೋಟಗಳಲ್ಲಿ ಹಸಿರು ಮೈ ತುಂಬಿ ನಿಂತಿದೆ. ಬಾಲ್ಯದ ತುಂಟಾಟಗಳು ನೆನಪಾಗುತ್ತಿವೆ. ಸಣ್ಣವನಿರುವಾಗ ಜೋರು ಮಳೆಗೆ ಆಲಿಕಲ್ಲು ಹೆಕ್ಕಕೆ ಹೋಗಿ ಜಾರಿ ಬಿದ್ದಿದ್ದು ನೆನಪಾಗಿ ನಗು ಬಂತು ಕಣೇ. ಆವಾಗ ನೀನಿನ್ನೂ ಚಡ್ಡಿ ಹಾಕದೆ ಮನೆತುಂಬಾ ಓಡಾಡಿ ಬೊಕ್ಕು ಬಾಯಿ ಅಗಲಿಸಿ ಎಲ್ಲರನ್ನೂ ನಗಿಸುತ್ತಿದ್ದೆ!!

ಮಳೆ ಬಂದಾಗ ಅದೇಕೆ ನಿನಗೆ ಪತ್ರ ಬರೆದೆ ಅಂತ ಅಚ್ಚರಿಯಾಯಿತೇ? ಅಮ್ಮ ಮಾಡಿಟ್ಟ ಹಪ್ಪಳ ಸಂಡಿಗೆ ಮೆಲ್ಲುತ್ತಾ ನಿನ್ನದೇ ನೆನಪಿನ ಮಳೆಯಲ್ಲಿ ತೋಯ್ತಾ ಇದ್ದೀನಿ ಕಣೇ ಮುನ್ನಿ. ನಿಂಗೆ ನೆನಪಿದೆಯಾ ನಾನು-ನೀನು ಭೇಟಿಯಾದ ಮೊದಲ ದಿನ ಧಾರಾಕಾರ ಮಳೆ ಸುರಿದು, ನಾನೂ ನಿನ್ನ ಛತ್ರಿಯೊಳಗೆ ಹುದುಗಿಹೋಗಿದ್ದು! ಅಷ್ಟೇ ಅಲ್ಲ, ಮಳೆಯಲ್ಲಿಯೇ ನಿನ್ನದೆಯಲ್ಲಿ ನಾನು ಕರಗಿಹೋಗಿದ್ದು, ನಿನ್ನ ಹೆಗಲ ಮೇಲೆ ಕೈಹಾಕಿದಾಗ ನಾಚಿಕೆಯಿಂದ ನನ್ನ ಕೈಯನ್ನು ಸರಿಸಿದ್ದು..! ಕೊನೆಗೂ ಮಳೆ ಎಡಬಿಡದೆ ಸುರಿದಾಗ ನೆನೆಯುತ್ತಲೇ ಮನೆ ಸೇರಿಕೊಂಡಿದ್ದು. ಮತ್ತೆ ಸುಂದರ ನೆನಪುಗಳೊಂದಿಗೆ ನಿದ್ದೆಯ ಮಂಪರಿಗೆ ಜಾರಿದ್ದು..ಎಲ್ಲವೂ ನೆನಪಾಗುತ್ತಿದೆ ಕಣೇ. ಅಮ್ಮನ ಕೈತುತ್ತ ಮೆಲ್ಲುವಾಗ ನಿನ್ನದೇ ನೆನಪಾಗುತ್ತೆ ಮುನ್ನಿ. ಅಮ್ಮನ ಬಿಟ್ಟರೆ ನಾನು ಕೈತುತ್ತು ಉಂಡಿದ್ದು ನಿನ್ನ ಕೈಯಿಂದ ಕಣೇ.

ಮುನ್ನಿ...

ಜೋರು ಮಳೆಗೆ ನಮ್ಮೂರ ಜೋಗವನ್ನು ನಿಂಗೆ ತೋರಿಸಬೇಕು...ಮುಂಗಾರು ಮಳೆಯಂತೆ ಪ್ರೀತಿಯ ಮಳೆಯಲ್ಲಿ ನೆನೆಯಬೇಕು. ಮನತುಂಬಾ ಪ್ರೀತಿಯ ಕಚಗುಳಿಯಲ್ಲಿ ಖುಷಿಪಡಬೇಕು. ಹಸಿರು ಜರತಾರಿ ಉಟ್ಟ ಸಹ್ಯಾದ್ರಿಯನ್ನು ನಿಂಗೆ ತೋರಿಸಿ, ನಿನ್ನ ಕಣ್ಮನ ಖುಷಿಗೊಳಿಸಬೇಕು. ಪ್ರಕೃತಿಯನ್ನು ಪ್ರೀತಿಸುವ ನನ್ ಮುನ್ನಿಗೆ ನಮ್ಮೂರ ಮಳೆ, ಇಳೆ, ಹಸಿರು...ಎಲ್ಲವನ್ನೂ ತೋರಿಸಬೇಕು. ನನ್ನಮ್ಮನಿಗೆ ನೋಡು ಮುನ್ನೀನ ತಂದಿದ್ದೀನಿ ಅಂತ ಪರಿಚಯ ಮಾಡಿಸಬೇಕು. ಅಮ್ಮನಿಂದ ಭಲೇ ಅಂತ ಬೆನ್ನು ತಟ್ಟಿಸಿಕೊಳ್ಳಬೇಕು. ಹೀಗೇ ಏನೇನೋ ಅಂದುಕೊಳ್ತಾ ಮನೆಯೊಳಗೆ ನಿನ್ನ ಬೆಚ್ಚನೆಯ ನೆನಪುಗಳ ಜೊತೆ ಕುಳಿತಿದ್ದೀನಿ ಕಣೇ ಮುನ್ನಿ.

ಹೌದು ಮುನ್ನಿ, ಊರಿಗೆ ಹಬ್ಬಕ್ಕೆ ಹೋದವನು ಫೋನ್ ಮಾಡಿಲ್ಲ, ಮೆಸೇಜ್ ಮಾಡಿಲ್ಲ ಅಂತ ಮುನಿಸಿಕೋಬೇಡ್ವೇ? ಮಳೆ ನೋಡುತ್ತಾ ಬೆಚ್ಚಗೆ ಹಪ್ಪಳ ತಿಂದು ಕಾಲ ಕಳೆಯುತ್ತಿದ್ದಾನೆ ಅಂತ ಬೈಕೋಬೇಡ್ವೆ. ಇಲ್ಲ ಕಣೇ, ನಿನ್ ನೆನಪು, ನಿನ್ನ ಪ್ರೀತಿ, ಒಂದು ಬಿಂದು ಪ್ರೀತಿಯ ಹನಿ...ಎಲ್ಲವನ್ನೂ ಹೃದಯತುಂಬಾ ಹರಡಿಕೊಂಡು ಖುಷಿಪಡ್ತಾ ಇದ್ದೀನಿ ಕಣೇ. ಕನಸುಗಳಿಗೆ ಜೀವ ಕೊಟ್ಟು ಪೋಷಿಸ್ತಾ ಇದ್ದೀನಿ ಕಣೇ. ರಾತ್ರಿ ಒಬ್ಬನೇ ನಿದ್ದೆಗೆ ಜಾರಿದಾಗ ಕತ್ತಲೂ ಕವಿದ ನನ್ನ ಕೋಣೆಯಲ್ಲಿ ಪುಟ್ಟ ಹಣತೆ ಹಚ್ಚಿ ನಿನ್ನ ನೆನಪುಗಳನ್ನು ಗಟ್ಟಿಯಾಗಿ ತಬ್ಬಿಕೊಂಡು ನಿನ್ನ ಮಡಿಲ ನೆನಪಲ್ಲಿ ನಿದ್ದೆಹೋಗುತ್ತಿದ್ದೇನೆ ಮುನ್ನಿ.

ಮುನ್ನಿ,

ಇನ್ನೆರಡು ದಿನ. ಮಳೆ ನಿಲ್ಲಲ್ಲಿ. ಊರೆಲ್ಲ ಪ್ರವಾಹ ಬಂದುಬಿಟ್ಟಿದೆ. ತಕ್ಷಣ ನಿನ್ನ ಹತ್ತಿರ ಬಂದುಬಿಡ್ತೀನಿ ಕಣೇ. ಪ್ಲೀಸ್ ಮುನಿಸಿಕೋಬೇಡ್ವೇ ಮಳೇ ಥರ...! ಪ್ರಾಮೀಸ್ ಮಾಡು..ಖುಷಿಯಾಗಿರ್ತಿ ಅಲ್ವಾ?


ನಿನ್ನವನೇ

ಮುನ್ನಾ...

6 comments:

Laxman (ಲಕ್ಷ್ಮಣ ಬಿರಾದಾರ) said...

ಚೆನ್ನಾಗಿದೆ ಪತ್ರ ಲೇಖನ.

ಜಲನಯನ said...

ಮುನ್ನಾ-ಮುನ್ನಿ ಸಂಭಾಷಣೆ...ಬಾಲ್ಯದ್ ದಿನಗಳ ನೆನಪಿನ ಗೊಂಚಲನ್ನು ಹೊತ್ತು ತಂದಿದೆ. ಚಿತ್ರಾ, ನಿಮ್ಮ ಊರಿನಲ್ಲಿ ಮಳೆ ಬಂದು ಮಳೆ ಮುನಿಸಿಕೊಂಡಿರುವದನ್ನು ಮುನ್ನಿ -ಮುನ್ನಾನ ಮೇಲೆ ಮುನಿಸಿಕೊಂಡ ಬಗ್ಗೆ ಹೋಲಿಕೆ ತೋರಿ ಬರೆದಿರುವುದು ಚನ್ನಾಗಿದೆ. ಅಂದಹಾಗೆ ಮುನ್ನಾಗೆ ಮುನ್ನಿ ಬಹಳ ಮೆಚ್ಚುಗೆಯಾದ ಗೆಳತಿ ಅನ್ನೋದರಲ್ಲಿ ಸಂಶಯವಿಲ್ಲ.

PARAANJAPE K.N. said...

ತಂಗಿ, ಬರಹ ಮುದ್ದಾಗಿದೆ, ಆಪ್ತವೆನಿಸುವ ಶೈಲಿ

Damodar said...

ಪತ್ರ ಚೆನ್ನಾಗಿದೆ ಚಿತ್ರಾವರೆ... ಮನದ ಭಾವನೆಗಳನ್ನು ಬಾಲ್ಯದ ನೆನಪುಗಳೊಂದಿಗೆ ಕಲ್ಪಿಸಿಕೊಂಡು ಬರೆಯುವ ನಿಮ್ಮ ಬರಹಗಳು ನನಗೆ ತುಂಬಾ ಇಷ್ಟ. ಅದೆಷ್ಟು ಬಾರಿ ನಿಮ್ಮ ಬರಹಗಳನ್ನು ಓದಿದ್ದೇನೋ....ಹೀಗೆ ಬರೆಯುತ್ತಿರಿ.

ಹರೀಶ ಮಾಂಬಾಡಿ said...

ಖುಷಿ,, ಖುಷಿ ! :)

deeshu said...

hi, nice letter