Sunday, September 27, 2009

ಬದುಕಿಗೆ ಪರಿಧಿ ಹಾಕೋಳ್ತಾ ಇದ್ದೀವಿ ಅನಿಸ್ತಾ ಇದೆ...

ಹಂಚಿ ಉಂಡರೆ ಹಸಿವಿಲ್ಲ...!! ಹತ್ತನೇ ತರಗತಿಯಲ್ಲಿ ನಾನು ಓದುತ್ತಿದ್ದಾಗ ಬಾಗೇವಾಡಿ ಅನ್ನೋ ಹೆಸರಿನ ಮೇಷ್ಟ್ರು ಇದ್ದರು. ತುಂಬಾ ಒಳ್ಳೆಯ ಮೇಷ್ಟ್ರು.ಮೂರು ವರ್ಷ ನಮ್ಮ ಜೊತೆಗಿದ್ದ ಆ ಮೇಷ್ಟ್ರು ಆಗಾಗ ಹೇಳುತ್ತಿದ್ದ ಮಾತು ಹಂಚಿ ಉಂಡರೆ ಹಸಿವಿಲ್ಲ. ಈಗಲೂ ಆ ಮಾತು ಆಗಾಗ ನೆನಪಾಗುತ್ತಿದೆ. ಮಾಮೂಲಿ ನಮ್ಮನೆಯಲ್ಲಿ ನಾನು-ತಮ್ಮ ಇಬ್ಬರೇ ಇರ್ತೀವಿ. ಆಗ ಒಂದು ಥರ ಬೋರ್. ನನಗೆ ರಜೆ ಇದ್ದ ದಿನ ಅವನಿಗರಲ್ಲ, ಅವನಿಗೆ ರಜೆ ಇದ್ದ ದಿನ ನಂಗೆ ರಜೆ ಇರೊಲ್ಲ. ಅದಕ್ಕೆ ಅವನಿಗೆ ರಜೆ ಇದ್ದ ನಾನು ಆಫೀಸ್ ನಿಂದ ಬೇಗ ಹೊರಡೋದು, ನಂಗೆ ರಜೆ ಇದ್ದ ದಿನ ಅವನು ಆಫೀಸ್ ನಿಂದ ಬೇಗ ಹೊರಟುಬರೋದು. ನಮಗೆ ರಜೆ ಇದ್ದ ದಿನ ಮಾವ, ಅಣ್ಣ ಬೇಗನೆ ಮನೆಮುಂದೆ ಹಾಜರಾಗೋದು. ಏನಾದ್ರೂ ಸ್ಪೆಷಲ್ ಅಡುಗೆ ಮಾಡೋದು, ದೇವಸ್ಥಾನಕ್ಕೆ ಹೋಗೋದು...ಅದೊಂದು ಥರಾ ನಮಗೆ ತುಂಬಾ ಖುಷಿಕೊಡೋದು. ನಂಗೆ ಎಲ್ಲಕ್ಕಿಂತ ಖುಷಿಕೊಡೋದು ಎಲ್ಲರೂ ಜೊತೆಗೆ ಊಟ ಮಾಡೋದು. ನಾವೇನದ್ರೂ ಮಾಡಿದ್ರೆ ಪಕ್ಕದ್ಮನೆ ಅಡುಗೆ ತಜ್ಞೆ ಆಂಟಿ ಅಲ್ಲಿ ಹಾಜರಾಗಿ..ನಾವು ಮಾಡೋ ಡಬ್ಬ ಅಡುಗೇನ ಇನ್ನಷ್ಟು ರುಚಿಯಾಗಿಸ್ತಾರೆ. ಆಮೇಲೆ ಅವರ ಮನೆ ಸಾರು ನಮ್ಮನೆಗೆ, ನಮ್ಮನೆ ಸಾರು ಅವರ ಮನೆಗೆ ಹೋಗುತ್ತೆ. ಒಟ್ಟಿನಲ್ಲಿ ಮನೆತುಂಬಾ ಜನರು ಓಡಾಡ್ತಾ ಇದ್ರೆ ಸಕತ್ ಖುಷಿ ಆಗೋದು.

ಪಕ್ಕದ್ಮನೆ ತಾತನೂ ಚಿತ್ರಾನಿಗೆ ಸಾರು ಕೊಟ್ಟೆಯೇನು? ಅಂತ ರಾತ್ರಿ ಮಲಗೋಕೆ ಮುಂಚೆ ಮೊಮ್ಮಕ್ಕಳನ್ನು ಗದರಿಸಿ ಅವರ ಕೈಯಲ್ಲಿ ಕೊಟ್ಟು ಕಳಿಸ್ತಾರೆ. ಸ್ವಲ್ಪನೇ ಆಗಲೀ ಮತ್ತೊಬ್ಬರಿಗೆ ಕೊಟ್ಟು ತಿನ್ನೋದ್ರಲ್ಲಿ ತುಂಬಾ ಖುಷಿ ಇರುತ್ತೆ ಅಲ್ವಾ? ಊರಲ್ಲಿ ಆದ್ರೆ ಮನೆಗೆ ಯಾರಾದ್ರೂ ನೆಂಟರು ಬರ್ತಾರೆ, ಖುಷಿ-ಖುಷಿಯಾಗಿ ಸಂಭ್ರಮಿಸೋ ಅವಕಾಶಗಳಿರ್ತವೆ. ಆದರೆ, ಬೆಂಗಳೂರಿನಲ್ಲಿದ್ರೆ ನೆಂಟರಿಲ್ಲ, ತುಂಬಾ ಆಪ್ತರಿಲ್ಲ, ಆಪ್ತರಿದ್ರೂ ಅವರಿಗೆ ಅವರದೇ ಆಗ ಕೆಲಸಗಳಿರ್ತವೆ. ನಮ್ಮನೆಯಲ್ಲಿ ಬಂದು ಅವರಿಗೆ ಹರಟೆ ಹೊಡೆಯೋಕೆ ಸಮಯವೆಲ್ಲಿ ಇರುತ್ತೆ?

ಒಂದು ಕಾಲದಲ್ಲಿ ಎಲ್ಲರೂ ಜೊತೆಯಾಗೇ ಬಾಳೋ ಅವಿಭಕ್ತ ಕುಟುಂಬ ಪರಂಪರೆ ಇತ್ತು. ಕುಟುಂಬದ ಹತ್ತು-ಹದಿನೈದು ಮಂದಿ ಜೊತೆಗೆ ಬಾಳೋ ಸುಂದರ ಕುಟುಂಬ. ನನ್ನ ಗೆಳತಿ ಯೊಬ್ಬಳು ಗೌರಿ ಅಂತ ಬಳ್ಳಾರಿಯವಳು, ಅವರ ಮನೆಯಲ್ಲಿ ಈಗಲೂ 32 ಮಂದಿ ಇದ್ದಾರೆ. ಇನ್ನೂ ಆ ಕುಟುಂಬದಲ್ಲಿ ಜಮೀನಿಗೆ ಕಿರಿಕಿರಿ ಇಲ್ಲ. ತಾತ-ಮುತ್ತಾತರ ಕಾಲದಿಂದಲೂ ಆಸ್ತಿ ಪಾಲಾಗಿಲ್ಲ. ದೊಡ್ಡ ಮನೆಯಲ್ಲಿ ಮನೆ ತುಂಬಾ ಓಡಾಡುವ ಮಕ್ಕಳು, ಅಜ್ಜಿ, ತಾತಂದಿರು, ಹೆಂಗಳೆಯರು. ದಿನಾ ಮನೆಯೇ ಹಬ್ಬದಂತಿರುತ್ತೆ. ಇಂಥ ಕುಟುಂಬಗಳು ಹಳ್ಳಿ ಕಡೆ ಇದ್ರೂ ಕ್ರಮೇಣ ಮರೆಯಾಗುತ್ತವೆ. ಆರತಿಗೊಂದು ಕೀರುತಿಗೊಂದು ಮಗು. ಅವರಿಗೆ ಮದುವೆಯಾಗೋ ಸಮಯದಲ್ಲಿ ಆಸ್ತಿಯನ್ನು ಪಾಲು ಮಾಡಿ ಕೊಟ್ಟುಬಿಡುತ್ತಾರೆ. ಅದರ ಜೊತೆ ಅವರ ಮನಸ್ಸು ಕೂಡ ಇಬ್ಭಾಗ ಆಗಿ ಬಿಡುತ್ತೆ.

ನಂಗನಿಸೋದು ಅಂಥ ಸುಂದರ ಕುಟುಂಬ ಇರಬೇಕಿತ್ತು ಅಂತ. ಈ ಆಧುನಿಕತೆ, ವೇಗದ ಬದುಕು, ಒಂಜಾಟದ ನಡುವೆ ನಮ್ಮ ಆ ಸುಂದರ ಬದುಕಿನ ಕಲ್ಪನೆ ಮರೆಯಾಗುತ್ತಿದೆಯಲ್ಲಾ ಎಂದನಿಸುತ್ತೆ. ಅತ್ತೆ, ಮಾವ ಜೊತೆಗಿರುವ ಬದಲು ತಾನು ತನ್ನ ಗಂಡ ಮಾತ್ರ ಆರಾಮವಾಗಿ ಇದ್ದುಬಿಡಬೇಕು ಅನ್ನೋ ಸೊಸೆ, ಅಮ್ಮ-ಅಪ್ಪನಿಗೆ ವಯಸ್ಸಾದ ಹಾಗೇ ವೃದ್ಧಾಶ್ರಮದ ಬೇಲಿಯೊಳಗೆ ಅವರ ಕನಸನ್ನೇ ಕೊಲ್ಲುವ ಮಗ ಅಥವಾ ಮಗಳು,...ಥತ್! ಹೀಗೇ ಆಗಬಾರದಿತ್ತು ಅನಿಸುತ್ತೆ. ಜೊತೆಯಾಗಿ ಕಲೆದು, ಜೊತೆಯಾಗಿ ಖುಷಿಪಟ್ಟು, ಜೊತೆಯಾಗಿ ಬದುಕು ನಡೆಸುವ ಆ ಸುಂದರ ಜೀವನ ಯಾಕೆ ಮರೆಯಾಗುತ್ತಿದೆ? ಅಲ್ವಾ?

ಹಂಚಿ ಉಂಡರೆ ಹಸಿವಿಲ್ಲ ಅಂದ ಹುಡುಗಿ ಏನೋನೋ ಬರೀತಾ ಹೋದ್ಳು ಅನಿಸಿಬಿಡ್ತಾ? ಹೌದು, ಒಮ್ಮೊಮ್ಮೆ ಹೀಗೇ ಈ ಯೋಚನೆಗಳು...ಆಫಿಸ್ನಲ್ಲಿ ಕೂತಿರ್ತೀನಿ..ಹಂಗೆ ನೆಟ್ಟಗೆ ಮನೆಯ ಅಡುಗೆ ಮನೆಗೆ ಹೋಗಿ ಬರ್ತೀನಿ. .ಲಂಗು ಲಗಾಮಿಲ್ಲದ ಕುದುರೆಯಂತೆ ಯೋಚನೆಗಳು ಅಲ್ವಾ?

ಯಾಕೋ ಬದುಕಿಗೆ ಒಂದು ಪರಿಧಿ ಹಾಕ್ಕೊಂಡು ಮನುಷ್ಯ ಜೀವಿಸ್ತಾ ಇದ್ದಾನೆ ಅನಿಸ್ತಾ ಇದೆ..ಬದುಕು ಹರಿದು ಹಂಚಿ ಹೋಗುತ್ತಿದೆಯೇ ಎಂದನಿಸ್ತಾ ಇದೆ...

12 comments:

ಚಕೋರ said...

ಬೀಚಿಯವರ ಆತ್ಮಕಥೆಯಲ್ಲಿ ಒಂದು ಘಟನೆ ಬರುತ್ತದೆ.

ಬೆಂಗಳೂರಿನ ಒಂದು ಮನೆಯಲ್ಲಿ ಒಬ್ಬ ವ್ಯಕ್ತಿ ಸತ್ತ ಶೋಕವಿದ್ದರೂ, ಪಕ್ಕದ ಮನೆಯಲ್ಲಿ ಹಾಡು, ನೃತ್ಯ, ಪಾರ್ಟಿ ನಡೆಯುತ್ತಿತ್ತಂತೆ.

ಬಳ್ಳಾರಿಯಲ್ಲಿ, ತಮ್ಮ ಹಳ್ಳಿಯಲ್ಲಿ ಒಬ್ಬರಿಗೆ ಜ್ವರ ಬಂದರೆ ಇಡೀ ಊರಿಗೆ ತಿಳಿದು ಆಗಾಗ ವಿಚಾರಿಸುತ್ತಿದ್ದರಂತೆ.

ನಾವು ಕಳೆದುಹೋಗುತ್ತಿರುವುದೇನು ಎಂದು ಗೊತ್ತಾಗದಂತೆ ಬದುಕುತ್ತಿದ್ದೇವೆ.

ಬದಲಾವಣೆಯ ಪರಿಣಾಮಗಳನ್ನು ಲೆಕ್ಕಿಸದೇ ಓಡುತ್ತಿದ್ದೇವಷ್ಟೇ ಅನ್ನಿಸುತ್ತಿದೆ.

ನಿಮ್ಮ ಬರಹ ನನ್ನನ್ನು ಯಾವುದೋ ನಾಸ್ಟಾಲ್ಜಿಕ್ ಲೋಕಕ್ಕೆ ತಳ್ಳಿದೆ.

ಜಲನಯನ said...

ಚಿತ್ರಾ, ಅದು ಆನಂದ ಮಾತ್ರ ಅಲ್ಲ ..ಪರಮಾನಂದ...ಹಹಹ...ಆಣ್ಣಾವ್ರ ಚಿತ್ರದ ಡೈಲಾಗು ಅನ್ನಿಸ್ತಾ ಇದ್ಯ..ನಿಮಗೆ..? ಅಲ್ಲ...ನಿಜ ನೀವು ಹೇಳೋದು.. ನನ್ನ ತಾತ ಹೇಳ್ತಿದ್ದರು...ಬುತ್ತಿ-ಗಿತ್ತಿ ತೋಟದ ಕಡೆ ಮನೆಯಿಂದ ಯರದರೂ ತಂದಾಗ..ಅಲ್ಲಿ ಇನ್ನೊಂದಿಬ್ಬರು ಇದ್ದಾಗ...ಬನ್ನೀಪ್ಪ..ಎಲ್ಲಾ ಹಂಚಿ ತಿನ್ನೋಣ...ಅದೇ..ಮೂವರ ತಿಂಡಿ ಒಬ್ಬನೇ ತಿನ್ನೋಕೆ ಆದದಾ? ಒಟ್ಟಿಗೆ ತಿನ್ನೋದರಲ್ಲೇ ಸುಖ ಜಾಸ್ತಿ...ಅದಕ್ಕೇ ಇರಬೇಕು..ಅವಿಭಕ್ತ ಕುಟುಂಬದಲ್ಲಿ ಊಟದ ರುಚೀನೇ ಡಿಫರೆಂಟು..ನಾನು ಊರಿಗೆ ಹೋದಾಗ ನನ್ನ ನಾಲ್ವರು ತಮ್ಮಂದಿರು ಇಬ್ಬರು ತಂಗೀರು ಅವರ ಮಕ್ಕಳು..ನಮ್ಮ ಅಪ್ಪ-ಅಮ್ಮ..ಅದೇ ಒಂದು ಸಂಭ್ರಮ....ಚನ್ನಾಗಿದೆ ಚಿತ್ರಾ..ಲೇಖನ...ಮುಂದುವರೀಲಿ..ಹಂಚಿತಿನ್ನೋ ಹಬ್ಬ...

Guruprasad said...

ಹೌದು ಚಿತ್ರ...
ಬದಲಾಗುತ್ತಿರುವ ಕಾಲ ಆ ರೀತಿ ಪರಿದಿ ಹಾಕಿ ಬಿಟ್ಟು ಇದೆ..... ಮನುಷ್ಯ ಎಲ್ಲ ಮೌಲ್ಯಗಳನ್ನು ಕಳೆದುಕೊಳ್ಳುತ್ತಾ ಇದ್ದಾನೆ.....ಇದು ಎಲ್ಲಿಗೆ ಹೋಗಿ ತಲುಪುತ್ತೋ ಗೊತ್ತಿಲ್ಲ

ಬಿಸಿಲ ಹನಿ said...

superb chitraavare

Laxman (ಲಕ್ಷ್ಮಣ ಬಿರಾದಾರ) said...

Hi chitra,
Nimma anisike tumba satyavadadu, tumbu kutumbavannu navu kansinalli kuda nodalarevenu antha anisutte. Munde yaro obbaru "AJJI MANE" antha madi maneyyalii eradu muru hiriya jivagalanna irisi. Entrance fee kottu namma makkalige ajji mane torisuva kaal barabahudeno?. Iga habbada utakke malleswaramda "HALLIMANE" hagu rajajinagarda "NALAPAK"kke hogtivalla hage.

with regards
Laxman

PARAANJAPE K.N. said...

ಶರಧಿಯ ಚಿತ್ರ
ಜೀವನದಲ್ಲಿ ಪರಿಧಿ ಹಾಕಿಕೊ೦ಡು ಬಾಳ್ವೆ ನಡೆಸುತ್ತಿರುವವರ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದಿ, ಅ೦ತೆಯೇ ಒಟ್ಟು ಕುಟು೦ಬದಲ್ಲಿನ ಬಾಳ್ವೆಯ ಸ೦ತಸ ಅದೆಷ್ಟು ಅದಮ್ಯ ಎ೦ಬ ಬಗ್ಗೆ ಕೂಡ ಬರೆದಿದ್ದಿ. ಹೌದು, ಈಗಲೇ ಇದು ಕಣ್ಮರೆಯಾಗುತ್ತಿದೆ, ಇನ್ನು ಕೆಲ ವರ್ಷ ಕಳೆದರೆ ಇದೆಲ್ಲ ಆಗಿನ ತಲೆಮಾರಿಗೆ ವಿಸ್ಮಯ, ಸೋಜಿಗ, ಅಚ್ಚರಿ ಉ೦ಟು ಮಾಡೀತು, ಹೀಗೂ ಉ೦ಟೇ ಅಥವಾ ಹೀಗೂ ಇತ್ತೇ ? ಅ೦ತ ಹೇಳುವ ಕಾಲ ಬರುತ್ತದೆ. ಚೆನ್ನಾಗಿದೆ ಬರಹ.

Laxman (ಲಕ್ಷ್ಮಣ ಬಿರಾದಾರ) said...

ಪ್ರಿತಿಯ ಸಹೋದರಿ ಚಿತ್ರಾ, ನೀವು ನನ್ನ ಬ್ಲಾಗಿಗೆ ಬಂದು ಪ್ರಥಮವಾಗಿ ಪ್ರತಿಕ್ರಯಿಸಿ ಏನದರೂ ಬರಿರಿ ಎಂದು ಹೇಳಿದ್ದಿರಿ ನೆನಪಿದೆಯಾ. ಅವತ್ತಿನದಿಂದ ನನ್ನದೆ ಸ್ವಂತ ಬರಹ ಬರೆಯಬೇಕೆಂದು ಪ್ರಯತ್ನಿಸಿ ಇವತ್ತು ನಾನೋಂದು ಮೊಟ್ಟ ಮೊದಲ ಬಾರಿಗೆ ಒಂದು ಕಥೆ ಬರೆದಿದ್ದೆನೆ. ನೋಡಿ ನಿಮ್ಮ ಆಭಿಪ್ರಾಯ ತಿಳಿಸಿ

ಚಿತ್ರಾ said...

ಚಿತ್ರಾ,
ನಿಜ , ನಿಮ್ಮ ಬರಹ ನಮ್ಮಂಥಾ ಎಷ್ಟೋ ಜನರ ಭಾವನೆಗಳನ್ನು ಪ್ರತಿಬಿಂಬಿಸುತ್ತಿದೆ ಎನಿಸುತ್ತದೆ. ಇತ್ತೀಚೆ ಹಳ್ಳಿಗಳಲ್ಲೂ ಅವಿಭಕ್ತ ಕುಟುಂಬಗಳು ಮಾಯವಾಗುತ್ತಿವೆ . ಹಳ್ಳಿಯಲ್ಲಿ ಮನೆಯಲ್ಲಿ ವಯಸ್ಸಾದ ಅಪ್ಪ -ಅಮ್ಮಂದಿರು ಮಾತ್ರ , ಪೇಟೆ / ವಿದೇಶ ಸೇರಿದ ಮಕ್ಕಳು ತಮ್ಮದೇ ಆದ ಪುಟ್ಟ ಪ್ರಪಂಚ ಸೃಷ್ಟಿಸಿಕೊಂಡು ವರ್ಷಕ್ಕೆ ಒಂದೋ -ಎರಡೋ ಸಲ ಊರಿಗೆ ಬರುತ್ತಾರೆ. ಇನ್ನು ಅವರ ಪುಟಾಣಿ ಮಕ್ಕಳು ಅವಿಭಕ್ತ ಕುಟುಂಬದ ಅನುಭವವೇ ಇಲ್ಲದೆ ನೆಂಟರು -ಇಷ್ಟರು ಗಳ ಬಳಕೆ ಅಷ್ಟಾಗಿ ಇಲ್ಲದೆ ತಮ್ಮಷ್ಟಕ್ಕೆ ತಾವು ಇದ್ದುಬಿಡುತ್ತಾರೆ ! " ಹಂಚಿಕೊಂಡು ಉಣ್ಣುವ" ಅಭ್ಯಾಸ ಇವರಲ್ಲಿ ಕಮ್ಮಿಯಾಗುತ್ತಿದೆ .
ಮನೆಯಲ್ಲಿ , ಹತ್ತಾರು ಜನರೊಂದಿಗೆ ಕೂಡಿ ಆಡಿ , ತಿಂದುಂಡು ಬೆಳೆದ ನಮ್ಮಂಥವರಿಗೆ ದೂರದ ಊರಲ್ಲಿ , ಕುಟುಂಬದವರಿಂದ ದೂರ ಇರುವುದು ಒಂಥರಾ ಕಸಿವಿಸಿಯಾದರೂ ಅನಿವಾರ್ಯ !
ದೊಡ್ಡ ಪಟ್ಟಣಗಳಲ್ಲಿ ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎನ್ನುವುದೂ ಎಷ್ಟೋ ಸಲ ಗೊತ್ತಿರುವುದಿಲ್ಲ . ಬೆಳಗ್ಗೆ ಒಮ್ಮೆ ಮನೆ ಬಿಟ್ಟರೆ , ಪುನಃ ಸಂಜೆಯೋ ರಾತ್ರಿಯೋ ಸುಸ್ತಾಗಿ ಮನೆ ಸೇರುವವರಿಗೆ ಪಕ್ಕದ ಮನೆಯವರೊಡನೆ ಮಾತನಾಡಲು ಪುರಸೊತ್ತೆಲ್ಲಿ? ಹಾಗೆ ನೋಡಿದರೆ , ನಮ್ಮಂಥಾ ಮಧ್ಯಮ ವರ್ಗದವರು ಎಷ್ಟೋ ಬೇಕು ಎದುರು ಸಿಕ್ಕಾಗ ಒಮ್ಮೆ ' ಹಲೋ , ಹೇಗಿದ್ದೀರಿ? " ಎನ್ನುವಷ್ಟಾದರೂ ಬಳಕೆಯಿಟ್ಟು ಕೊಳ್ಳುತ್ತೇವೆ.
ಒಟ್ಟಿನಲ್ಲಿ , ನಾವು ಹಾಕಿಕೊಳ್ಳುತ್ತಿರುವ ಪರಿಧಿ ದಿನ ದಿನಕ್ಕೂ ಚಿಕ್ಕದಾಗುತ್ತಾ .. ಉಸಿರು ಕಟ್ಟಿಸುತ್ತಿದೆಯಾ?

ಶಿವಪ್ರಕಾಶ್ said...

ನಿಜ ರೀ..
ಕೂಡಿ ಬಾಳಿದರೆ ಸ್ವರ್ಗಸುಖ...

Santhosh Rao said...

chennagide...

www.kumararaitha.com said...

ನಿಮ್ಮ ಭಾವನೆಗಳು ತುಂಬ ಸುಂದರ.'ಕೂಡಿ ಬಾಳಿದರೆ ಸ್ವರ್ಗ ಸುಖ'ಅನ್ನೋದು ಹಿರಿಯರ ಭಾವನೆಯಾಗಿತ್ತು.ಈಗ ವಿಭಕ್ತ ಕುಟುಂಬ ಬಯಸುವವರೇ ಹೆಚ್ಚು.ಆದ್ರೆ ಇದರಿಂದ ಖಿನ್ನತೆಯ ತೊಂದರೆಗಳು ಪ್ರಾರಂಭವಾಗಿದೆ.ಬಹುಶಃ ಚಕ್ರ ತಿರುಗಬಹುದು.ಅವಿಭಕ್ತ ಕುಟುಂಬ ಪರಂಪರೆ ಯುಗ ಮತ್ತೆ ಪ್ರಾರಂಭವಾಗಲೂ ಬಹುದು

Anonymous said...

where is Bagewadi now ? He is my teacher also..