Tuesday, September 22, 2009

ನೀನು ನನ್ನವಳು ಅನ್ನೋದಕ್ಕಿಂತ ಸಂತೋಷ ಇನ್ನೇನಿದೆ?

೧೭೮೮ರಲ್ಲಿ ಜನಿಸಿದ ಲಾರ್ಡ್ ಬೈರನ್ ತನ್ನ ತಲೆಮಾರಿನ ಅತಿ ಜನಪ್ರಿಯ ಹಾಗೂ ಅಷ್ಟೇ ವಿವಾದಾಸ್ಪದ ಲೇಖಕ. ಆತನ ಬದುಕು ಗ್ರಹಿಕೆಗೆ ದಕ್ಕುವುದು ಒಂದು ಬಗೆಯ ವಿರೋಧಾಭಾಸದ ನೆಲೆಯಲ್ಲಿ. ಅಗಾಧ ಹಾಸ್ಯಪ್ರಜ್ಞೆಯಿದ್ದೂ ದುಃಖತಪ್ತ. ಕುಲೀನ ವರ್ಗಕ್ಕೆ ಸೇರಿದವರಾಗಿದ್ದೂ ಸಾಮಾನ್ಯ ಜನರ ಪ್ರಾಮಾಣಿಕ ಬೆಂಬಲಿಗನಾಗಿದ್ದವ. ಸ್ಫುರದ್ರೂಪಿ, ಜನಪ್ರಿಯ ಆದರೆ ವೈಯಕ್ತಿಕ ಬದುಕನ್ನೇ ಅಷ್ಟೇ ಹದಗೆಡಿಸಿಕೊಂಡವ. ಅಕಾಲಿಕವಾಗಿ ಕೊನೆಗೊಂಡ ವೈವಾಹಿಕ ಬದುಕು ತಂದಿಟ್ಟ ವೇದನೆ ಹಾಗೂ ಅವಮಾನದಿಂದ ತಪ್ಪಿಸಿಕೊಳ್ಳಲು ದೇಶಭ್ರಷ್ಟರಾಗಿ ಅಲೆದ ಬೈರನ್ ಜ್ವರಪೀಡಿತನಾಗಿ ೧೮೨೪ರಲ್ಲಿ ಮೃತಪಟ್ಟ. ಆತನ ವಿಪ್ಲವ ಬದುಕಿಗೆ ತಕ್ಕಮಟ್ಟಿಗೆ ತಂಪು ನೀಡಿದ್ದು ಜನ್ಮದತ್ತವಾಗಿ ಬಂದಿದ್ದ ಕಾವ್ಯಪ್ರತಿಭೆ. ಜೀವಿತಾವಧಿಯಲ್ಲಿಯೇ ವೈಯಕ್ತಿಕ ಬದುಕಿನ ದುರಂತ ಆತನ ಕಾವ್ಯ ಪ್ರತಿಭೆಯನ್ನು ಮಸುಕಾಗಿಸಿತ್ತು. ಇದು ಬೈರನ್ ತನ್ನ ಪ್ರೇಯಸಿಗೆ ಬರೆದ ಪತ್ರ.

ನನ್ನ ಪ್ರೀತಿಯ ಕೆರೊಲಿನ್ ,
ನೀನು ನನ್ನನ್ನು ಅಗಲುವ ಸಮಯದವರೆಗೂ ನಾನು ಕಣ್ಣೀರು ಸುರಿಸಿರಲಿಲ್ಲ. ಕಣ್ಣೀರು ಹಾಕುವುದು ನನಗೂ ಇಷ್ಟವಿಲ್ಲ ಎಂಬುದು ನಿನಗೂ ಗೊತ್ತು. ನಿನ್ನನ್ನು ನನ್ನಿಂದ ಅಗಲಿಸಿದ ಕಲಹವನ್ನು, ಮನಸ್ತಾಪವನ್ನು ಈ ಎಲ್ಲಾ ತಲ್ಲಣಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕು. ನಾನು ಇಲ್ಲಿಯವರೆಗೆ ಆಡಿದ ಮಾತುಗಳು, ಮಾಡಿದ ಕಾರ್ಯಗಳು ನನಗೆ ನಿನ್ನ ಕುರಿತು ಇರುವ ಭಾವನೆಯನ್ನು ಸಮಗ್ರವಾಗಿ ಹಿಡಿದಿಡಲು ಅಶಕ್ಯ. ನಿನ್ನೆಡೆಗಿನ ನನ್ನ ಪ್ರೀತಿಯನ್ನು ಸಾಬೀತುಪಡಿಸಲು ನನಲ್ಲಿ ಇನ್ನಾವುದೇ ಪುರಾವೆಗಳೂ ಇಲ್ಲ.

ನಾನು ಸದಾ ಬಯಸಿದ್ದು ನಿನ್ನ ಸಂತೋಷವನ್ನೇ ಎಂಬುದಕ್ಕೆ ಆ ಪರಮಾತ್ಮನೇ ಸಾಕ್ಷಿ. ನಾನು ನಿನ್ನನ್ನು ತೊರೆಯುವಾಗ ಅಥವಾ ನಿನ್ನ ತಾಯಿ ಹಾಗೂ ಪತಿಯೆಡೆಗಿನ ಕರ್ತವ್ಯನಿಷ್ಠೆಯಿಂದ ನೀನೇ ನನ್ನಿಂದ ದೂರವಾಗುವಾಗ ನಾನು ನೀಡಿದ ಭಾಷೆ, ವಾಗ್ದಾನಗಳಲ್ಲಿನ ಸತ್ಯವನ್ನು ನೀನು ಗುರುತಿಸಬೇಕು. ನಿನಗೆ ಪವಿತ್ರ ಎನಿಸುವ ಯಾವುದೇ ವಿಚಾರಕ್ಕಿಂತ ಹೆಚ್ಚಿನ ಸಂಗತಿ ಯಾವ ರೀತಿಯಿಂದಲೂ ನನ್ನ ಹೃದಯದಲ್ಲಿ ಸ್ಥಾನ ಪಡೆಯುವುದು ಅಸಾಧ್ಯ.

ಆತ್ಮೀಯ ಹಾಗೂ ಅತ್ಯಂತ ಪ್ರೀತಿಯ ಗೆಳತಿ, ನನ್ನೊಳಗಿನ ಎಲ್ಲಾ ಭಾವನೆಗೂ ಮಾತಿನ ನ್ಯಾಯ ಒದಗಿಸಲು ನನಗೆ ಸಾಧ್ಯವಾಗುತ್ತಿಲ್ಲ. ಮಾತಿಗೆ ಇದು ಸಮಯವೂ ಅಲ್ಲ. ನನ್ನ ವೇದನೆ ನಿನ್ನ ಕಲ್ಪನೆಯನ್ನೂ ಮೀರಿದ್ದು. ಆದರೆ ಅದನ್ನು ಅನುಭವಿಸುತ್ತಲೇ ಒಂದು ರೀತಿಯ ಧನ್ಯತೆ ಹಾಗೂ ವಿಷಾದನೀಯ ಸಂತಸವನ್ನು ನಾನು ಕಾಣುತ್ತಿದ್ದೇನೆ. ನಾನೀಗ ಭಾರವಾದ ಹೃದಯದೊಂದಿಗೆ ನಿನ್ನನ್ನು ಅಗಲುತ್ತಿದ್ದೇನೆ. ಈ ಮುಸ್ಸಂಜೆಯಲ್ಲಿನ ನನ್ನ ಸಾರ್ವಜನಿಕ ಉಪಸ್ಥಿತಿ ಇಂದಿನ ಘಟನೆಗಳಿಂದ ಉದ್ಭವವಾಗಬಹುದಾದ ಗಾಳಿಮಾತುಗಳಿಗೆ ಮಂಗಳ ಹಾಡಬಹುದು.

ನಿನ್ನ ಪಾಲಿಗೆ ನಾನು ಇಂದು ನಿರ್ಲಿಪ್ತನಂತೆ, ತಣ್ಣನೆಯ ವ್ಯಕ್ತಿಯಂತೆ ಕಂಡುಬಂದರೆ ಉಳಿದವರಿಗೂ ನಾನು ಹಾಗೆಯೇ ಕಾಣಬಹುದು. ನಿನ್ನ ತಾಯಿಗೆ ಕೂಡ. ಆ ಮಹಾತಾಯಿಗೆ ಅಲ್ಲವೇ ನಾವು ಇಷ್ಟೊಂದು ತ್ಯಾಗಕ್ಕೆ, ಬಲಿದಾನಕ್ಕೆ ಸಿದ್ಧವಾಗಿರುವುದು? ನನ್ನ ಪಾಲಿಗಂತೂ ಈ ತ್ಯಾಗಕ್ಕೆ ಸಾಟಿಯೇ ಇಲ್ಲ. ನಮ್ಮ ತ್ಯಾಗದ ಆಳ-ಅಗಲ ಅವರ ಗ್ರಹಿಕೆಗೆ ಅಷ್ಟು ಸುಲಭಕ್ಕೆ ನಿಲುಕುವುದಿಲ್ಲ ಬಿಡು.

ನಿನ್ನನ್ನು ಪ್ರೀತಿಸುವುದಿಲ್ಲ ಎಂದು ಭಾಷೆ ಕೊಡುತ್ತೇನೆ ಎಂಬುದು ತುಂಬಾ ಹಳೆಯ ವಾಗ್ದಾನ ಕೆರೊಲಿನ್. ಆದರೆ, ಒಂದು ಉತ್ತಮ ಉದ್ದೇಶಕ್ಕೆ ಕೆಲವೊಂದು ರಿಯಾಯಿತಿಗಳು ಬೇಕು. ಹಾಗೆಯೇ, ನಿನ್ನ ಸಮ್ಮುಖದಲ್ಲಿ ನಡೆಯುವ ಪ್ರತಿಯೊಂದಕ್ಕೂ- ಅದು ನನ್ನ ಹೃದಯದ ತಳಮಳವಿರಬಹುದು, ನಿನ್ನೊಳಗಿನ ನೋವಿರಬಹುದು- ಸ್ಪಂದಿಸುವ ಗುಣವನ್ನು ಕಾಯ್ದಿಟ್ಟುಕೊಳ್ಳುವುದು ಅವಶ್ಯಕ. ನಿನ್ನ ಮೇಲಿನ ಆ ಪರಮಾತ್ಮನ ಕೃಪೆ ಎಂದಿಗೂ ಬತ್ತದಿರಲಿ.

ಈ ವ್ಯಂಗ್ಯದ ಮಾತುಗಳು ಕೇವಲ ನನ್ನ ಅತ್ಯಂತ ಆತ್ಮೀಯ ಕೆರೊಲಿನ್‌ಗೆ ಮಾತ್ರ. ಅವುಗಳ ಗುರಿ ನಿನ್ನ ತಾಯಿಯಲ್ಲ ಮತ್ತು ಈ ಜಗತ್ತಿನಲ್ಲಿ ನಿನಗಿರುವ ಇನ್ನಿತರ ಸಂಬಂಧಗಳಿಗಲ್ಲ. ಒಂದು ಕಾಲದಲ್ಲಿ ನೀನು ನನ್ನವಳಾಗಿದ್ದೆ ಎಂಬ ಸವಿನೆನಪಿಗಿಂತ ಹೆಚ್ಚಿನ ಸಂತೋಷ, ಸಮಾಧಾನವನ್ನು ನನ್ನ ಈ ಜೀವಕ್ಕೆ ಜಗತ್ತಿನ ಬೇರೆ ಯಾವ ಸಂಗತಿ ತಾನೆ ತಂದೀತು? ನಿನಗೋಸ್ಕರ ನನ್ನೆಲ್ಲಾ ಸಂತಸಗಳನ್ನೂ ತ್ಯಾಗ ಮಾಡಲು ಮೊದಲೆಂದಿಗಿಂತ ಈಗಲೇ ಹೆಚ್ಚು ನಾನು ಸಿದ್ಧನಿದ್ದೇನೆ. ನಿನಗಿಂತ ಹೆಚ್ಚು ಮುಖ್ಯವಾದ ಸಂಗತಿ ನನಗೆ ಬೇರೊಂದಿಲ್ಲ. ಇದೆಲ್ಲದರಿಂದ ದೂರವಿರಬೇಕೆಂಬ ನನ್ನ ಉದ್ದೇಶವೇ ಈಗ ಅಪಾರ್ಥಕ್ಕೀಡಾಗುತ್ತಿದೆಯೇ? ಇವುಗಳನ್ನೆಲ್ಲಾ ಮುಂಚಿತವಾಗಿಯೇ ತಿಳಿದ ವ್ಯಕ್ತಿಯೊಬ್ಬರಿದ್ದರೆ ನನಗೆ ಅದೊಂದು ಸಂಗತಿಯೇ ಅಲ್ಲ. ನಿನಗೆ, ಕೇವಲ ನಿನಗೆ ಮಾತ್ರ ಅವು ಋಣಿಯಾಗಿವೆ. ನಾನು ಈ ಹಿಂದೆ ಮಾತ್ರವಲ್ಲ ಈಗಲೂ ನಿನ್ನವನು, ಸಂಪೂರ್ಣವಾಗಿ ನಿನ್ನವನು. ನಿನ್ನಿಷ್ಟದಂತೆ ಎಲ್ಲಿಯಾದರೂ, ಯಾವಾಗಲಾದರೂ, ಹಾಗೂ ಹೇಗಾದರೂ ನಿನ್ನ ಮಾತುಗಳನ್ನು ಪರಿಪಾಲಿಸಲು, ಗೌರವಿಸಲು, ಪ್ರೇಮಿಸಲು ಹಾಗೂ ನಿನ್ನೊಂದಿಗೆ ರೆಕ್ಕೆ ಬಿಚ್ಚಿಕೊಂಡು ಹಾರಲು ನಾನು ಸಿದ್ಧನಿದ್ದೇನೆ.
ನಿನ್ನದೇ ಕನವರಿಕೆಯಲ್ಲಿ
ಬೈರನ್

(ಇತ್ತೀಚೆಗೆ ದ ಸಂಡೆ ಇಂಡಿಯನ್ ಪತ್ರಿಕೆಯಲ್ಲಿ ಬಂದ ಈ ಸುಂದರ ಪತ್ರ ತುಂಬಾ ಇಷ್ಟವಾಗಿತ್ತು. ನೀವೂ ಓದುತ್ತೀರೆಂಬ ಭಾವನೆಯಿಂದ ಇಲ್ಲಿ ಹಾಕೊಂಡೆ. ಲಿಂಕ್ ಇಲ್ಲಿದೆ: http://www.thesundayindian.com/kannada/20090830/history_mail.asp

11 comments:

PARAANJAPE K.N. said...

ಚೆನ್ನಾಗಿದೆ.

sunaath said...

ಬೈರನ್ನನ ಈ ಪತ್ರವೇ ಒಂದು ಸುಂದರವಾದ ಕವನದಂತಿದೆ. ನಮ್ಮೊಡನೆ ಹಂಚಿಕೊಂಡ ನಿಮಗೆ ಧನ್ಯವಾದಗಳು.

ದಿನಕರ ಮೊಗೇರ said...

ಇಲ್ಲಿ ಪ್ರಕಟಿಸಿದ್ದಕ್ಕೆ ದನ್ಯವಾದಗಳು...

ಬಾಲು said...

ಭೈರನ್ ಪತ್ರ ಇಷ್ಟವಾಯಿತು. :)

ಅ೦ತು ಕೊನೆಗೆ "ಕಣ್ಣೀರ ಕೋಡಿ" ಬರಹ ಗಳಿ೦ದ ಹೊರ ಬ೦ದಿದ್ದು, ನಾನು ಬ್ಲಾಗ್ ಇಣುಕಿದ್ದಕ್ಕು ಸಾರ್ಥಕವಾಯಿತು. :) :) :)

shivu.k said...

ಚಿತ್ರ,

ಪತ್ರ ತುಂಬಾ ಚೆನ್ನಾಗಿದೆ....

ಮನಸಿನ ಮಾತುಗಳು said...

Hi Chaitra..
tumba chennagide..
really a very emotional and touching letter!!!
thanks for the writing..

ಮನಸಿನ ಮಾತುಗಳು said...

Hi Chaitra..
tumba chennagide..
really a very emotional and touching letter!!!
thanks for the writing..

ಚಕೋರ said...

ನಿಜಕ್ಕೂ ಪತ್ರ ಭಿನ್ನ, ಮತ್ತು ಸೊಗಸಾಗಿದೆ.

ಜಲನಯನ said...

ಬೈರೆನ್ ಮನದಾಳದ ಮಾತು ಅವನು ತನ್ನ ಪ್ರೇಯಸಿ, ಮುದ್ದಿನ ಮಡದಿಯ ಮೇಲಿನ ಅವನ ಅಮಿತ ಪ್ರೇಮವನ್ನು ಪ್ರಚುರಪಡಿಸುತ್ತದೆ. ಚಿತ್ರಾ ಆ ಪತ್ರದ ಉತ್ತಮ ಭಾಷಾ ಮತ್ತು ಭಾವಾನುವಾದ ನಿನ್ನ ಛಾಪನ್ನು ತೋರಿದೆ. ಒಂದಂತೂ ಸತ್ಯ ಲೌಕಿಕ ಮತ್ತು ತೋರಿಕೆ ಪ್ರೀತಿ ಪ್ರೇಮಗಳಿಗಿಂತ ಅವ್ಯಕ್ತ ಮತ್ತು ಹುದುಗಿದ ನಿಜ ಪ್ರೀತಿ ಮನಸ್ಸಿಗೆ ಸಂತೋಷ ನೀಡುತ್ತೆ ಎನ್ನುವುದನ್ನು ಬೈರೆನ್ ತನ್ನ ಪತ್ರದಲ್ಲಿ ತಿಳಿಸಿದ್ದಾನೆ.
ಅದು ಅವನ ಕೆಳಗಿನ ಸಾಲುಗಳಲ್ಲಿ ಯಥೇಚ್ಛವಾಗಿ ಕಾಣಸಿಗುತ್ತದೆ. ಒಳ್ಳೆಯ ಪೋಸ್ಟ್...ಅಭಿನಂದನೆಗಳು

ನೀನು ನನ್ನವಳಾಗಿದ್ದೆ ಎಂಬ ಸವಿನೆನಪಿಗಿಂತ ಹೆಚ್ಚಿನ ಸಂತೋಷ, ಸಮಾಧಾನವನ್ನು ನನ್ನ ಈ ಜೀವಕ್ಕೆ ಜಗತ್ತಿನ ಬೇರೆ ಯಾವ ಸಂಗತಿ ತಾನೆ ತಂದೀತು? ನಿನಗೋಸ್ಕರ ನನ್ನೆಲ್ಲಾ ಸಂತಸಗಳನ್ನೂ ತ್ಯಾಗ ಮಾಡಲು ಮೊದಲೆಂದಿಗಿಂತ ಈಗಲೇ ಹೆಚ್ಚು ನಾನು ಸಿದ್ಧನಿದ್ದೇನೆ.

LAxman said...

Tumba chennagide patra. bavunuvada chennagide kuda

ಮನಸು said...

tumba chennagide... istavaayitu