Wednesday, June 3, 2009

ಬದುಕಿನ ಸತ್ಯ-ಮಿಥ್ಯಗಳ ನಡುವೆ ಒಂದಷ್ಟು ಹೊತ್ತು..!!

**ನಿನ್ನೆ ಆಸ್ಪತ್ರೆ ಕಡೆಗೆ ಸಾಗಿದ್ದೆ. ಸೂರ್ಯ ನೆತ್ತಿಗೇರಿದ್ದ..ನನ್ನ ನೆತ್ತಿಯನ್ನೂ ಬಿಸಿಮಾಡಿದ್ದ! ಕಾಲುಗಳು ಭಾರವೆನಿಸಿದರೂ, ನಡೆಯುತ್ತಿದ್ದವು. ಕುಳ್ಳಗಿನ ದೇಹ, ತಲೆಯಲ್ಲಿ ಒಂಚೂರು ಕೂದಲು ಇಲ್ಲದ ಆ ಯುವಕ ಕಣ್ಣುಮುಚ್ಚಿ ಬೀದಿ ಬದಿಯಲ್ಲಿ ಕುಳಿತು ಕೈಯೊಡ್ಡುತ್ತಿದ್ದ. ಆತನ ತಲೆ ಬಿಸಿಲಿಗೆ ಸುಡುವಂತೆ ಕಂಡುಬರಲಿಲ್ಲ..ಕನಸುಗಳಿದ್ದರೂ ಬದುಕನ್ನೇ ಮರೆತುಕೂತಿದ್ದ. ನನಗಿಂತ ಅನಾರೋಗ್ಯನಾದರೂ ಆತ ಆರೋಗ್ಯವಂತ. ಹೊಟ್ಟೆಯ ಹಸಿವು ಸುಡುವ ಬಿಸಿಲನ್ನೂ ಲೆಕ್ಕಿಸಲಿಲ್ಲ. ಆತನಿಗೆ ವೈದ್ಯರ ಅಗತ್ಯವಿರಲಿಲ್ಲ!

**ಮುಂದೆ ಸಾಗಿದಾಗ ಹಣ್ಣು ಮಾರುವವ. ಬಿರುಬಿಸಲನ್ನೂ ಲೆಕ್ಕಿಸದೆ ತರಕಾರಿ, ಹಣ್ಣುಗಳನ್ನು ತನ್ನ ಗಾಡಿ ಮೇಲೆ ಹಾಕೊಂಡು ದೂಡುತ್ತಾ ಸಾಗುತ್ತಿದ್ದ. ಚೌಕಾಸಿಯವರ ಚೌಕಾಸಿಗೆ ಮಣಿದು, ತಕೋಳ್ಳಿ ಅನ್ನುತ್ತಿದ್ದ ಆತನದೂ ಹೊಟ್ಟೆಪಾಡು.
**ಈ ಬೆಂಗಳೂರಿನಲ್ಲಿ ಸಿಗ್ನಲ್ ನಲ್ಲಿ ಒಂದಷ್ಟು ಹೊತ್ತು ನಿಮ್ಮ ವಾಹನಗಳು ನಿಂತಿರಲಿ..ನಿಮ್ಮನ್ನು ಹಿಂದೆ-ಮುಂದಿನಿಂದ ಪೀಡಿಸುವ ಹಿಜಡಾಗಳು ಕಣ್ಣಿಗೆ ಬೀಳುತ್ತಾರೆ. ಚಿಲ್ಲರೆ ನೀಡದಿದ್ರೆ ನಿಮ್ಮನ್ನು ಅವರು ಸುಮ್ಮನೆ ಬಿಡಲಾರರು..ನೀವು ಅಂಜಿ ನೀಡೇ ನೀಡುತ್ತೀರ. ಬೆಳಿಗ್ಗೆಯಿಂದ ಸಂಜೆತನಕ ಬದುಕು ಹೊರುವ ಕೆಲಸ..ನಿತ್ಯಪಾಡಿದು. ನಾನು ಬಸ್ಸಲ್ಲಿ ಬರುವಾಗ ಯಾವಾಗಲೂ ಕಣ್ಣಿಗೆ ಬೀಳೋ ಬದುಕಿನ ಸತ್ಯಗಳು!
**ಅಲ್ಲಿ ಬೀದಿ ಬದಿಯಲ್ಲಿ ಸುಲಭ ಶೌಚಾಲಯ, ಪಕ್ಕದಲ್ಲೇ ದೇವಸ್ಥಾನ. ಪುಟ್ಟ ಕಂಚಿನ ಪ್ರತಿಮೆ. ನಿತ್ಯ ನಡೆಯುವ ಪೂಜೆ-ಪುರಸ್ಕಾರಗಳು, ಜಾಗಟೆಯ ಸದ್ದು, ಮಂತ್ರಘೋಷ. ಟೂ ವೀಲರ್, ಕಾರಿನಲ್ಲಿ ಬರೋ ಮಂದಿ ಅಲ್ಲೇ ತಮ್ಮ ವಾಹನಗಳು ನಿಲ್ಲಿಸುತ್ತಾರೆ. ಒಂದಿಷ್ಟು ನೋಟುಗಳನ್ನು ಹುಂಡಿಗೆ ಹಾಕಿ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಬಿಎಂಟಿಸಿ ಬಸ್ಸಿನ ಕಿಟಕಿ ಬದಿಯಲ್ಲಿ ಕುಳಿತು ಹೊರಗೆ ಇಣುಕಿದ್ದ ನನ್ನ ಕಣ್ಣುಗಳಿಗೆ ಇದು ನಿತ್ಯದ ಸಂಗತಿ.

**ಆ ಪ್ರತಿಷ್ಠಿತ ಸ್ಕೂಲ್ ಎದುರಿನ ಬಸ್ ನಿಲ್ದಾಣದಲ್ಲಿ ನನ್ನ ಬಸ್ಸಿಗಾಗಿ ಕಾಯುತ್ತಿದ್ದೆ. ತಮ್ಮ ಮಕ್ಕಳನ್ನು ಕಾರಿನಲ್ಲಿ ತಂದು ಬಿಡುವ ಹೆತ್ತವರು ಮಗುವಿನ ಕೆನ್ನೆಗೆ ಮುತ್ತನಿಟ್ಟು, ಕ್ಲಾಸ್ ರೂಂಗೆ ಕಳಿಸುತ್ತಿದ್ದರು. ನೆನಪಾಯಿತು..ನನ್ನ ಯಜಮಾನ್ರಿಗೆ ಸಂಬಳ ಆಗಿಲ್ಲವೆಂದು..ಮಕ್ಕಳಿಗೆ ಪುಸ್ತಕ ತೆಗೆದುಕೊಟ್ಟಿಲ್ಲ. ಹಾಗಾಗಿ ಮಕ್ಕಳನ್ನು ಮುಂದಿನ ವಾರ ಶಾಲೆಗೆ ಕಳಿಸಬೇಕು ಎಂದಿರುವ ಆ ಅಮ್ಮ!
**ಹೊಟೇಲ್ ಎದುರುಗಡೆ ಇರುವ ಆ ಮೆಟ್ಟಿಲ ಮೇಲೆ ನಿಂತು ಆ ಕಪ್ಪು ಕನ್ನಡದ ಹುಡುಗಿ ಸಿಗರೇಟು ಸೇದುತ್ತಿದ್ದಳು, ಗ್ಲಾಸು ತೊಳೆಯುವ ಹುಡುಗ ಪಿಳಿಪಿಳಿಂತ ಆಕೆಯನ್ನೇ ದಿಟ್ಟಿಸುತ್ತಿದ್ದ..ಅವಳ ಕಾರು ಮರೆಯಾಗುವವರೆಗೂ!

**ರಾಶಿ ಹಾಕಿದ ಗೋಣಿಚೀಲಗಳ ಪಕ್ಕ ಕುಳಿತ ಆ ಪುಟ್ಟ ಕಂದಮ್ಮ ಸಿಕ್ಕಿದ್ದನ್ನು ಮೆಲ್ಲುತ್ತಾ, ಎದುರಿಗೆ ಬ್ಯಾಟ್ ಹಿಡಿದು ಕ್ರಿಕೆಟ್ ಆಡೋ ಮಕ್ಕಳನ್ನು ಆಸೆ ಕಂಗಳಿಂದ ನೋಡುತ್ತಾ!

**ನೆನಪಾಯಿತು..ಪ್ರೀತಿಯ ಗೆಳೆಯ ಹೇಳಿದ ಕಥೆ ...'ಅವಳು ಮದುವೆಯಾಗಿದ್ದಳಂತೆ ಹುಡುಗನ ಸಂಬಳವನ್ನು ಪ್ರೀತಿಸಿ! 'ಸಂಬಳ ಪ್ರೀತಿಸಿದವಳಿಗೆ ' ಬದುಕಿನ ಒಲವು ಅರ್ಥವಾಗಲೇ ಇಲ್ಲವಂತೆ..ಆತನಿನ್ನೂ ಕೊರಗುತ್ತಿದ್ದನಂತೆ ಖಿನ್ನತೆಯಿಂದ....ಸಂಬಳ ಪ್ರೀತಿಗೆ ಬಲಿಯಾಗಿ'!

ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿಳಿದಿದ್ದೆ. ಮೆಜೆಸ್ಟಿಕ್ ಜನಜಂಗುಳಿ, ಕತ್ತಲಾಗುವಾಗ ಕಿತ್ತು ತಿನ್ನೋ ಕಣ್ಣುಗಳು, ಬದುಕೋ ದಾರಿಗಳು, ನಾನು ಬನಶಂಕರಿಯಲ್ಲಿ ರಸ್ತೆ ದಾಟಕ್ಕೆ ಪರದಾಡಿದ್ದು, ಪಾರ್ಕಲ್ಲಿ ಕುಳಿತು ಒಬ್ಬಳೇ ಅತ್ತಿದ್ದು, ಅಮ್ಮನ ನೆನಪಾಗಿ ದಿಂಬು ಒದ್ದೆಯಾಗಿಸಿದ್ದು, ಮನೆಗೆ ಹೋಗ್ತೀನಂತ ಅಣ್ಣ ಜೊತೆ ಜಗಳ ಆಡಿದ್ದು, ಅತ್ತಾಗ ಅವನು ಐಸ್ ಕ್ರೀಂ ಕೊಡಿಸಿದ್ದು, ಬೆಂಗಳೂರಿನ ಇಂಚಿಂಚನ್ನು ಪರಿಚಯ ಮಾಡಿಸಿದ್ದು, ಮೊದಲ ಬಾರಿಗೆ ಸಾನಿಯಾ ಮಿರ್ಜಾನ ಪ್ರೆಸ್ ಮೀಟ್ ಗೆ ಹೋಗಿ ಅರೆಬರೆ ಇಂಗ್ಲೀಷ್ ಬಾರದ ನಾನು ಅವಳ ಇಂಗ್ಲೀಷ್ ಅರ್ಥವಾಗದೆ..ಎಡಿಟರ್ ಜೊತೆ ಬೈಸಿಕೊಂಡಿದ್ದು....ಎಲ್ಲವೂ ನೆನಪಿನ ಪರದೆ ಮೇಲೆ ಸಾಗುತ್ತಲೇ ಇವೆ. ಬದುಕು ಸಾಗುತ್ತಲೇ ಇದೆ..ಮುಂದಕ್ಕೆ. ಬದುಕಿನ ಸತ್ಯ-ಮಿಥ್ಯಗಳನ್ನು ಕಣ್ಣಾರೆ ಕಾಣುತ್ತಾ, ಕೆಲವೊಮ್ಮೆ ಕಂಗಳು ಒದ್ದೆಯಾಗಿಸುತ್ತಾ, ಕೆಲವೊಮ್ಮೆ ಖುಷಿ ಖುಷಿಯಾಗುತ್ತಾ....!!
ಫೋಟೋ: ಎನ್.ಕೆ. ಸುಪ್ರಭಾ

16 comments:

ಬಾಲು said...

same experience chitra... nanu first time nagara sabhe meeting ge hogidde, alli sariyagi grahisalagade editor kaiyalli ugisi kondidde!!!

but meeting nalli press navarige olle thindi, coffee arrange madidru. nanu heavy batting madidde.

Nice article... nanu swalpa flashback ge hogi bitte!!

ದಿವ್ಯಾ ಮಲ್ಯ ಕಾಮತ್ said...

ಚಿತ್ರಾ,
ಬದುಕಿನ ಸತ್ಯ - ಮಿಥ್ಯಗಳನ್ನೂ ಮನ ಮುಟ್ಟುವಂತೆ ತೆರೆದಿಟ್ಟಿದ್ದೀರಾ.. ಶೀರ್ಷಿಕೆ "..... ಒಂದಷ್ಟು ಹೊತ್ತು" ಅಂತ ಕೊಟ್ಟಿರುವಿರಿ.. ನಿಜ! ನಮಗೆ ಅದನ್ನು ನೋಡಿದ "ಒಂದಷ್ಟು ಹೊತ್ತು" ಅದರ ಬಗ್ಗೆ ಯೋಚಿಸುವುದನ್ನು ಬಿಟ್ಟರೆ, ಮತ್ತೆ ಏನೂ ಮಾಡಲಾಗದ ಅಸಹಾಯಕತೆ.. ಅಲ್ಲವೇ?
-ದಿವ್ಯಾ

Mohan Hegade said...

ನಿತ್ಯ ಸತ್ಯಗಳು ಅಲ್ಲವಾ?!!
ಎಷ್ಟೇ ಬೆಂಗಳೂರ ಬಗ್ಗೆ ಬೇಸರದಿಂದ ಬೈದುಕೊಂಡರು ಅದು ಅನ್ನ ಕೊಡುವ ಜಾಗ ಅಲ್ಲವಾ.
ಫೋಟೋಕ್ಕೂ ಬರಹಕ್ಕೂ ಸ್ವಲ್ಪ ದೊರದಂತೆ ಕಾಣುತ್ತೆ ಅಲ್ಲವಾ!!!!!

sunaath said...

ಚಿತ್ರಾ,
ಜೀವನ ಇರೋದೇ ಹೀಗೆ! ಸೂರ್ಯ ನೆತ್ತಿಯನ್ನು ಸುಡುತ್ತಿರುವಾಗಲೂ ಸಹ, ಇದೇ ಬೆಳದಿಂಗಳು ಅಂತ ತಿಳ್ಕೊಂಡು
ನಡೀಬೇಕು!

shivu.k said...

ಚಿತ್ರಾ,

ನೀನು ಫೋಟೋಗ್ರಫಿ ಯಾವಾಗ ಕಲಿತೆ..

ಫೋಟೋಗಳನ್ನು ಕ್ಲಿಕ್ಕಿಸಿದ ನಂತರ ತೆರೆದುಕೊಳ್ಳುವ ಚಿತ್ರಗಳ ಹಾಗೆ ವಾಸ್ತವ ಚಿತ್ರಗಳು ಕಣ್ಣ ಮುಂದೆ ಹರಡಿಕೊಳ್ಳುತ್ತವೆ ಈ ಲೇಖನದಲ್ಲಿ. ಸತ್ಯ-ಮಿಥ್ಯದ ವಿಚಾರದಲ್ಲಿ ಸತ್ಯದ ಚಿತ್ರಗಳ ಬಗೆಗೆ ನನಗೆ ಹೆಚ್ಚು ಒಲವು. ಅವು ಬದುಕಿನ ಪಾಠ ಕಲಿಸುತ್ತವೆ ಅಲ್ವಾ...

ಬರಹ ಚೆನ್ನಾಗಿದೆ ಅಂತ ಹೇಳಬೇಕಾಗಿಲ್ಲವಲ್ಲ...

ಮಲ್ಲಿಕಾರ್ಜುನ.ಡಿ.ಜಿ. said...

ಬದುಕು- ಅನುಭವಿಸಿದ ನೋವನ್ನು , ಕಲಿಸಿದ ಪಾಠ, ಲೆಕ್ಕ ಜವೆ ತಾಳೆಯೇ ಆಗದು. ನಿಮ್ಮ ಬರಹದಿಂದಾಗಿ ನನ್ನ ಕೆಲ ಘಟನೆಗಳು ನೆನಪಾಯ್ತು. ಆದರೆ ನನಗೆ ಈ ರೀತಿ ಬರೆಯಲಾಗದೇ ಎಂಬ ಹೊಟ್ಟೆ ಕಿಚ್ಚಿದೆ.

Rajesh Manjunath - ರಾಜೇಶ್ ಮಂಜುನಾಥ್ said...

ಚಿತ್ರಾ,
ಅಬ್ಬಾ ಬದುಕೇ ಎಂಬ ದೀರ್ಘ ನಿಟ್ಟುಸಿರಿನೊಂದಿಗೆ ಓದಿ ಮುಗಿಸಿದೆ. ಬರಹ ಚೆನ್ನಾಗಿದೆ ಅನ್ನುವುದನ್ನು ವಿಶೇಷವಾಗಿ ಹೇಳುವುದೇನು ಬೇಡ ಅಲ್ವ, ಎಂದಿನಂತೆ ನಿನ್ನದೇ ಶೈಲಿ. ಫೋಟೋ ಚೆನ್ನಾಗಿದೆ, ಸುಪ್ರಭಾರವರಿಗೂ ನನ್ನ ಅಭಿನಂದನೆಗಳನ್ನು ತಿಳಿಸಿ ಬಿಡು.

ವಿ.ರಾ.ಹೆ. said...

hmm.. idE baduku annabahudo athava idEna baduku ? antha kELabahudO!

Guruprasad said...

ಚಿತ್ರ.
ಬದುಕಿನ ಸತ್ಯ ಮಿತ್ಯಗಳ ಚಿತ್ರಣವನ್ನು ತುಂಬ ಚೆನ್ನಾಗಿ ಕೊಟ್ಟಿದ್ದಿರಿ... ಲೇಖನ ತುಂಬ effective ಆಗಿ ಇದೆ .. ಎಸ್ಟೋ ಸರಿ ನಾನು ಟ್ರಾಫಿಕ್ ಸಿಗ್ನಲ್ಲಿ ಕಾರಿನಲ್ಲಿ ಕುಲಿತಿರಬೇಕಾದರೆ ಇವರನ್ನೆಲ್ಲಾ ನೋಡಿ ಸ್ವಲ್ಪ ಹೊತ್ತು ಯೋಚಿಸಿರುತ್ತೇನೆ.....ಜೀವನ ಎನ್ನೋದು ತುಂಬ ಕಷ್ಟ.... ಇದೆಲ್ಲ ನಾವೇ ಮಾಡಿರುವ ಸಮಾಜ....ಅಲ್ವ......ಎಷ್ಟು ಸತ್ಯ......
ಗುರು

Shivashankara Vishnu Yalavathi said...

neevu baredirodu..

kevala katheyalla//

nithya noduttiruva sathya gatanegalu..

kelavomme baduku annodara bagge e ghatanegalu nenapaagi asahya huttisutte.........

yav lofer ge beku ee haalu baduku antha......


inti nimma pritiya,

www.shivagadag.blogspot.com

PARAANJAPE K.N. said...

ಚಿತ್ರಾ,
ನಿತ್ಯ ನಮ್ಮೆಲ್ಲರ ಕಣ್ಮು೦ದೆ ಸುಳಿಯುವ ಇ೦ತಹ ಅನೇಕ ವಿಚಾರಗಳನ್ನು ಗ್ರಹಿಸಲು ಬೇಕಾದ ಒಳಗಣ್ಣು ನಿನಗಿದೆ. ಅದು ಜೀವನ ವನ್ನು ಅರಿಯಲು ಅಗತ್ಯ ಬೇಕು. ನೀನು ಬರೆದಿದ್ದು ನಿತ್ಯಸತ್ಯ, ನಗ್ನಸತ್ಯ, ಏನೆ೦ದರೂ ಸರಿಯೇ ? ಜೀವನದ ವೈರುಧ್ಯಗಳ ಚಿತ್ರಣವನ್ನು ಪುಟ್ಟ ಲೇಖನದಲ್ಲಿ ಕೊಟ್ಟಿದ್ದಿಯಾ ?

ಅಂತರ್ವಾಣಿ said...

ಚಿತ್ರಾ,
ಇವೆಲ್ಲಾ ಮಿಥ್ಯ ಎಂದು ಹೇಗೆ ಹೇಳುತ್ತೀರ. ಎಲ್ಲವೂ ಸತ್ಯವೆ.

ಭಾಶೇ said...

Nirantaravagi bareva nimma blognalli, nirantara badukina bagge, naija baraha.

Yavagladru nanna blog go blog goo bheti kodi.

ಚಿತ್ರಾ ಸಂತೋಷ್ said...

ಪ್ರತಿಕ್ರಿಯಿಸಿ ಬೆನ್ನುತಟ್ಟಿದ ಎಲ್ಲರಿಗೂ ನನ್ನ ಧನ್ಯವಾದಗಳು.
-ಚಿತ್ರಾ

Chevar said...

ತಣ್ಣನೆಯ, ವಾಸ್ತವ ತೆರೆದಿಟ್ಟ ಬರಹ.

Chevar said...

ತಣ್ಣನೆಯ, ವಾಸ್ತವ ತೆರೆದಿಟ್ಟ ಬರಹ.