Thursday, May 14, 2009

'ಪಿಂಕು, ಇವತ್ತು ನನ್ನ ಹುಟ್ಟುಹಬ್ಬನಾ?'

ಐದು ವರುಷಗಳ ಹಿಂದಿನ ಘಟನೆ. ನಾನಾಗ ಪ್ರಥಮ ಬಿಎ. ತೋಚಿದ್ದನ್ನು ಗೀಚೋ ಗೀಳು. ಹೆಚ್ಚು-ಕಡಿಮೆ ಎಲ್ಲಾ ಕನ್ನಡ ಪತ್ರಿಕೆಗಳು, ವಾರಪತ್ರಿಕೆಗಳಲ್ಲೂ ನಾನು ಬರೆದ ಪುಟ್ಟ ಬರಹಗಳು ಪ್ರಕಟವಾಗುತ್ತಿದ್ದವು. ಈ ಗೀಚಾಟಕ್ಕೆ ಬಲಿಯಾಗಿ ನನ್ನ ಮೊದಲ ಚುಟುಕು ಕವನ ಪತ್ರಿಕೆಯೊಂದರಲ್ಲಿ ಪ್ರಕಟವಾದಾಗ ಮೆಚ್ಚಿ ಪತ್ರ ಬರೆದವರಲ್ಲಿ ಮೊದಲಿಗರು ಜಗ್ಗಣ್ಣ. ಪುಟ್ಟ ಪೋಸ್ಟ್ ಕಾರ್ಡೊಂದರಲ್ಲಿ ನನಗೆ ಬರೆದ ನಾಲ್ಕು ಸಾಲಿನ ಪತ್ರ ಭಾಳ ಇಷ್ಟವಾಗಿಬಿಡ್ತು. ಆಮೇಲೆ ನನ್ನ ಪ್ರತಿ ಬರಹಗಳು ಪ್ರಕಟವಾದಗಲೂ ಅವರು ಪತ್ರ ಬರೆಯುತ್ತಿದ್ದರು.

ಆಗ ನನಗೆ ಪತ್ರದ ಗೀಳು ಕೂಡ ಜಾಸ್ತಿ. ಯಾರೇ ಪತ್ರ ಬರೆದ್ರೂ ಅದಕ್ಕೆ ಪುಟ್ಟ ಕಾರ್ಡೊಂದರಲ್ಲಿ ಕೃತಜ್ಞತೆ ಹೇಳಿಬಿಡೋದು. ಜಗ್ಗಣ್ಣನಿಗೂ ಹಾಗೇ ಮಾಡುತ್ತಿದ್ದೆ. ನಾನು ಅವರಿಗೆ ಬರೆದ ಕಾರ್ಡು ಅವರ ಮನೆಯಲ್ಲಿ ಸಾರ್ವಜನಿಕ ಪ್ರದರ್ಶನ ಆದ ಮೇಲೆ ಜಗ್ಗಣ್ಣನ ಕೈಗೆ ಸೇರುತ್ತಿತ್ತು. ಆಗ ಜಗ್ಗಣ್ಣ ನಂಗಿಟ್ಟ ಹೆಸರು 'ಪಿಂಕು'. ಪರಸ್ಪರ ಮುಖ ಪರಿಚಯವಿಲ್ಲದ ಪತ್ರ ಮೈತ್ರಿ ಒಂದೂವರೆ ವರ್ಷ ಸಾಗಿತು. ನಮ್ಮ ಹಾಸ್ಟೇಲಿನ ಅಡುಗೆಕೋಣೆಯಿಂದ ಹಿಡಿದು ಕಾಲೇಜಿನ ಕಾರಿಡಾರ್ ತನಕವೂ ಜಗ್ಗಣ್ಣ ಯಾರೂಂತ ಕುತೂಹಲ! ಆದ್ರೂ ನಾ ಫೋನಲ್ಲಿ ಕೂಡ ಮಾತನಾಡಿರಲಿಲ್ಲ. ಫೋನ್ ನಂಬರು ಎಷ್ಟೇ ಕೇಳಿದ್ರೂ ಕೊಡಲಿಲ್ಲ. ನನಗೆ ಸಂಶಯ ಬರತೊಡಗಿತ್ತು..ಯಾವಾಗ ಪತ್ರ ಬರೆದ್ರೂ ಅದರಲ್ಲಿ ಉಜಿರೆ ಪೋಸ್ಟ್ ಆಫೀಸ್ ನ ಸೀಲ್ ಬೀಳ್ತಾ ಇತ್ತು. ಹಾಗಿರುವಾಗ ಈತ ನಮ್ಮ ಕಾರಿಡಾರಲ್ಲೇ ಇದ್ದಾನೆ ಅನಿಸಿತು. ಆದ್ರೂ ಪತ್ರದಲ್ಲಿ ಬಿಡದೆ ಕಾಡುತ್ತಿದ್ದ ನನಗೆ, ಪಿಂಕು ನನ್ನ ಗೆಳೆಯನ ಜೊತೆ ಪತ್ರ ಕೊಟ್ಟು ಕಳಿಸ್ತೀನಿ..ಅದಕ್ಕೆ ಅದ್ರಲ್ಲಿ ಉಜಿರೆಯ ಸೀಲ್ ಬೀಳೋದು ಅಂತ ತಪ್ಪಿಸಿಕೊಳ್ಳುತ್ತಿದ್ರು.

ಕೊನೆಗೆ ಪೀಡಿಸಿ, ಕಾಡಿ, ಬೇಡಿ ನಂಬರು ಕೊಟ್ರು. ಮೊದಲೇ ರಚ್ಚೆ ಹಿಡಿದ್ರೆ ಬಿಡೋಳು ನಾನಲ್ಲ. ಸೆಂಟಿಮೆಂಟಲ್ಲಾಗಿ ಬರೆದು ಮೊಬೈಲ್ ನಂಬರು ಗಿಟ್ಟಿಸಿಕೊಂಡೆ. ಸಿಕ್ಕ ತಕ್ಷಣ ಫೋನ್ ಮಾಡಿದ್ರೆ , 'ಧ್ವನಿ ಎಲ್ಲೊ ಕೇಳಿದಂಗೆ ಇದೆ'!! ಆದ್ರೂ ಗೊತ್ತಾಗಲಿಲ್ಲ. ಕೊನೆಗೆ ಒಂದು ದಿನ ಪತ್ರ ಬರೆದು 'ಜಗ್ಗಣ್ಣ ನಿಂಗೆ ನಿಜವಾಗ್ಲೂ ತಂಗಿ ಮೇಲೆ ಪ್ರೀತಿಯಿದ್ರೆ ನನ್ನ ಮುಖತಃ ಭೇಟಿಯಾಗು. ಇಲ್ಲಾಂದ್ರೆ ಇಂದಿಗೆ ಪತ್ರ ಕೊನೆ" ಅಂತ ಹೇಳಿದೆ. ಏನೂ ಮಾಡಿದ್ರೂ ನನ್ನ ಹಠ ಬಿಡಲಿಲ್ಲ..ಕೊನೆಗೆ ಸೋತು ಒಪ್ಪಿಕೊಂಡ ಮಹಾಶಯ. ಕಾಲೇಜು ಪಕ್ಕ ಇರುವ ಪೋಸ್ಟ್ ಆಫೀಸು ಪಕ್ಕ ಬಾ. ನಾನು ಆಕಾಶ ನೀಲಿ ಶರ್ಟ್ ಧರಿಸಿದ್ದೇನೆ. ನಿನ್ನನ್ನು ನಾನೇ ಪತ್ತೆ ಹಚ್ಚುತ್ತೇನೆ ಎಂದಿದ್ದರು! ಆವಾಗಲೇ ಒಂದು ರೌಂಡ್ ಬೆವರು ಇಳಿದಿತ್ತು. ಛೇ! ದಿನಾ ಮಾತನಾಡುವವರೇ ಜಗ್ಗಣ್ಣ ಆದ್ರೆ? ಅಂತ ಅಂಜಿಕೆ ಬೇರೆ.

ಅಂದು ಮಧ್ಯಾಹ್ನ ಹನ್ನೆರಡೂವರೆ ಗಂಟೆ. ಹಾಸ್ಟೇಲಿನಿಂದ ಹಿಡಿದು ಕ್ಲಾಸ್ ತನಕವೂ ಎಲ್ಲರ ಜೊತೆ ಹೇಳಿದ್ದೆ ಜಗ್ಗಣ್ಣ ಸಿಗ್ತಾರೆ ಅಂತ. ಹಾಗೇ ಎಲ್ರಿಗೂ ಕುತೂಹಲ. ಒಂದೇ ಒಂದು ಕನ್ನಡ ಕ್ಲಾಸಿಗೆ ಚಕ್ಕರ್ ಹಾಕಿದವಳಲ್ಲ. ಅಂದು ನಾಗಣ್ಣ ಸರ್ ಕ್ಲಾಸಿಗೆ ಬಂಕ್ ಹೊಡೆದೆ. ಸರ್ ಬಂದವ್ರೆ ಚಿತ್ರಾ ಕಾಣ್ತಿಲ್ಲ ಎಂದಾಗ ಹುಡುಗೀರು ಗೊಳ್ಳೆಂದು ನಕ್ಕಿದ್ರಂತೆ. ಜಗ್ಗಣ್ಣನ್ನು ನೋಡಬೇಕೆಂದು ಕುತೂಹಲದಿಂದ ಪೋಸ್ಟ ಆಫೀಸು ಬಳಿ ಹೋಗಿ ಕಾದು ನಿಂತಾಗ..ಆಕಾಶನೀಲಿ ಶರ್ಟ್ ಹಾಕಿದ ವ್ಯಕ್ತಿಯನ್ನು ನೋಡಿ ಭೂಮಿ ಬಾಯಿಬಿಟ್ಟು ನನ್ನ ನುಂಗಬಾರದೆ ಅನಿಸ್ತು. ಮುಖಕ್ಕೆ ಬಾರಿಸಿದ ಹಾಗೆ...ನನ್ನ ಸಿಟ್ಟನ್ನೆಲ್ಲಾ ಹೊರತೆಗೆದು ಬೈದುಬಿಟ್ಟು ವಾಪಾಸ್ ಬಂದೆ!

ಜಗ್ಗಣ್ಣ ಬೇರೆ ಯಾರೂ ಆಗಿರಲಿಲ್ಲ..ಅದೇ ಪೋಸ್ಟ ಆಫೀಸ್ ನಲ್ಲಿದ್ರು. ನಿತ್ಯ ನಾನು ಅವರಿಗೆ ಲೆಟರ್ ಬರೆದು ಅವರ ಕೈಯಲ್ಲೇ ಪೋಸ್ಟ ಮಾಡಕೆ ಕೊಡುತ್ತಿದ್ದೆ. ಕಾರ್ಡು ತೆಗೆದುಕೊಳ್ಳುವಾಗಲೆಲ್ಲಾ ಸುಮ್ಮನೆ ನಕ್ಕು ನನ್ನ ಕೈಯಿಂದ ಕಾರ್ಡ್ ತಕೋತಾ ಇದ್ರು. ಆದ್ರೂ ಅವ್ರ ಮೇಲೆ ನಂಗೆ ಡೌಟು ಬರಲಿಲ್ಲ. ನಾನು ಅವರಿಗೆ ಪೋಸ್ಟ ಮಾಡುತ್ತಿದ್ದ ಕಾರ್ಡನ್ನು ಅವರೇ ಕಿಸೆಗೆ ತುಂಬಿಕೊಂಡು ಮನೆಯಲ್ಲಿ ಎಲ್ಲರೆದುರು ಓದಿ ಮಜಾ ಮಾಡುತ್ತಿದ್ರಂತೆ!

ಮತ್ತೆ ಮರುದಿನ ಹೋಗಿ ಜಗ್ಗಣ್ಣ ಕ್ಷಮಿಸಿ ಅಂತ ಹೇಳಿದೆ. ಆಮೇಲೆ ಒಂದೂವರೆ ವರ್ಷ ಜಗ್ಗಣ್ನನ ಜತೆಗಿದ್ದೆ. ಕೇವಲ ನನಗೆ ಮಾತ್ರವಲ್ಲ ನಮ್ಮ ಹಾಸ್ಟೇಲ್ ಹುಡುಗಿಯರಿಗೆಲ್ಲ ಜಗ್ಗಣ್ಣನೇ ಆಗಿದ್ರು. ಅವರು ಮೊದಲ ಬಾರಿ ನನ್ನ ಹುಟ್ಟುಹಬ್ಬಕ್ಕೆ ಕೊಟ್ಟ ಸಿಲ್ವರ್ ಕಲರ್ ವಾಚ್ ಈಗಲೂ ನನ್ನ ಕೈಯಲ್ಲಿದೆ. ಕೊನೆಗೆ ಬೆಂಗಳೂರಿಗೆ ಬರುವಾಗಲೂ ನನ್ನ ಕರೆದುಕೊಂಡು ಬಂದಿದ್ದು ಜಗ್ಗಣ್ಣನೇ! ಈಗ ಜಗ್ಗಣ್ಣ ನಮ್ಮಮ್ಮಂಗೂ ಮಗ ಆಗಿಬಿಟ್ಟಿದ್ದಾರೆ. ಎನಿಸಿಕೊಂಡಾಗ ತುಂಬಾ ಖುಷಿ ಆಗುತ್ತೆ. ಹಳೆಯದನ್ನೆಲ್ಲಾ ನೆನೆಸಿಕೊಂಡು ದಿನಾ ನಗುತ್ತಿರುತ್ತಾರೆ. ಮೊನ್ನೆಮೊನ್ನೆ ಬೆಂಗಳೂರಿಗೆ ಬಂದು ಒಂದು ವಾರ ಇದ್ದು ಹೋಗಿದ್ರು.

ಈ ಘಟನೆ ಬರೆದಿದ್ದು ಯಾಕಂದ್ರೆ ಮೇ.13ಕ್ಕೆ ಜಗ್ಗಣ್ಣನ ಹುಟ್ಟುಹಬ್ಬ.ತಮಾಷೆ ಅಂದ್ರೆ ಅವರ ಹುಟ್ಟುಹಬ್ಬ ಅವರಿಗೆ ನೆನಪೇ ಇರಕ್ಕಿಲ್ಲ. ನಿನ್ನೇ ಹಾರೈಕೆ ಹೇಳೋಣ ಅಂತ ಫೋನು ಮಾಡಿದ್ರೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ ಸ್ಟಾಂಡಿನಲ್ಲಿ ನಿಂತುಕೊಂಡು , 'ಪಿಂಕು ನನ್ನ ಹುಟ್ಟಿದ ದಿನ ಮರೆತೇಹೋಗಿತ್ತು ಮಾರಾಯ್ತಿ' ಅಂತ ಜೋರಾಗಿ ನಗುತ್ತಿದ್ದಾರೆ! ಆಶ್ಚರ್ಯ ಎಂದ್ರೆ ನನ್ನ ಪರಿಚಯ ಆದಾಗಿನಿಂದ ಅವರ ಹುಟ್ಟಿದ ದಿನವನ್ನು ನಾನೇ ನೆನಪಿಸುತ್ತಿದ್ದೇನೆ. ಯಾವಾಗ ನೋಡಿದ್ರೂ ಅಣ್ಣಂದಿರ ಬಗ್ಗೆನೇ ಹೇಳ್ತಾಳೆ ಅಂತ ಬೋರ್ ಅನಿಸ್ತಾ..??ಸಾರೀ..ನಂಗೆ ಹೇಳದೆ ಇರಕ್ಕಾಗದು..ಅಣ್ಣಂದಿರು ಅಂದ್ರೆ ನಂಗೆ ಅಮ್ಮ ಥರ!
ಪ್ರೀತಿಯ ಜಗ್ಗಣ್ಣ..ನಿನಗೆ ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು.
ಹುಲ್ಲಾಗು ಬೆಟ್ಟದಡಿ..ಮನೆಗೆ ಮಲ್ಲಿಗೆಯಾಗು...
ಪಿಂಕಿಗೆ ಯಾವಾಗಲೂ ಪ್ರೀತಿಯ ಅಣ್ಣನಾಗು..
ಸವಿಹಾರೈಕೆಗಳು..

10 comments:

Ittigecement said...

ಶರಧಿ.....

ಚಂದದ ಲೇಖನ....
ಹುಟ್ಟಿದ ದಿನ ಆಚರಿಸಿ ಕೊಳ್ಳುವ ಸಂಭ್ರಮದ ಮಜವೇ ಬೇರೆ...

ಜಗ್ಗಣ್ಣ ತುಂಬಾ ಒಳ್ಳೆಯವರು...
ಇಷ್ಟವಾಗಿಬಿಟ್ಟರು...

ಅವರಿಗೆ ನಮ್ಮ ಕಡೆಯಿಂದಲೂ ಹುಟ್ಟಿದ ಹಬ್ಬದ ಶುಭಾಶಯ ತಿಳಿಸಿ ಬಿಡಿ...

ಹರೀಶ ಮಾಂಬಾಡಿ said...

ಸಸ್ಪೆನ್ಸ್ ಕಥೆಯಂತೆ ಓದಿಸಿಕೊಂಡು ಹೋಯಿತಾದರೂ ಸೆಂಟಿಮೆಂಟ್ಸ್ ಕಲಕುವಂತೆ ಮಾಡಿತು

PARAANJAPE K.N. said...

ಚೆನ್ನಾಗಿದೆ ಜಗ್ಗಣ್ಣನ ಸಸ್ಪೆನ್ಸ್ ಥ್ರಿಲ್ಲರ್ ಕಥೆ. ಅ೦ದ ಹಾಗೆ ಎಷ್ಟು ಅಣ್ಣ೦ದಿರು ಮಾರಾಯ್ತಿ ನಿನಗೆ ? ನಿನ್ನ ಅಣ್ಣ೦ದಿರ ಪ್ರೀತಿ ನಿನಗೆ ನೂರ್ಕಾಲ ಇರಲಿ ಎ೦ಬುದೇ ನನ್ನ ಹಾರೈಕೆ.

sunaath said...

ನನ್ನಿಂದಲೂ ಶುಭಾಶಯಗಳು!

sunaath said...

ನನ್ನಿಂದಲೂ ಶುಭಾಶಯಗಳು!

ಶಿವಪ್ರಕಾಶ್ said...

ಜಗ್ಗಣ್ಣನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು...

Guruprasad said...

ತುಂಬ ಬೇಕಾಗಿರುವವರ ಹುಟ್ಟಿದ ಹಬ್ಬವನ್ನು ನೆನಪಿಸಿ. ಇ ರೀತಿ ಒಳ್ಳೆ ಲೇಖನದ ಮೂಲಕ ತಿಳಿಸುವ ಪರಿ ಚೆನ್ನಾಗಿ ಇದೆ...
ಒಳ್ಳೆ ಲೇಖನ ಮುಂದುವರಿಸಿ..
ಗುರು

shivu.k said...

ಚಿತ್ರ ಮರಿ,
'ಜಗ್ಗಣ್ಣನಿಗೆ ನನ್ನಿಂದಲೂ ಶುಭಾಶಯಗಳು..

ಲೇಖನ ತುಂಬಾ ಚೆನ್ನಾಗಿದೆ...

NADIPREETI said...

ಪ್ರಿಯ ಜಗ್ಗಣ್ಣ ಹುಟ್ಟು ಹಬ್ಬದ ಶುಭಾಶಯಗಳು.
ಪ್ರಿಯ ಚಿತ್ರಾ ಜಗ್ಗಣ್ಣನನ್ನ ಪರಿಚಯಿಸಿದ್ದಕ್ಕೆ ವಂದನೆಗಳು.
ಪುಟ್ಟದಾದರೂ ಬರಹ ಇಷ್ಟ ಆಯ್ತು. ಜಗ್ಗಣ್ಣ ಸಿಗೋವರೆಗೂ ಪರಮ ಕುತೂಹಲವಿತ್ತು.ನಿಮ್ಮ ನೀಟ್ ಶೈಲಿ ಚೆನ್ನಾಗಿದೆ.
ಬರಹ ಮುಂದುವರೆಯಲಿ. ಪ್ರೀತಿಯೂ.

ರವಿ ಅಜ್ಜೀಪುರ

ಚಿತ್ರಾ ಸಂತೋಷ್ said...

ಪ್ರೀತಿಯಿಂದ ಪ್ರತಿಕ್ರಿಯಿಸಿ, ಜಗ್ಗಣ್ಣನಿಗೆ ಶುಭಾಶಯ ಹೇಳಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಹಾರೈಕೆಯನ್ನು ಅವರಿಗೆ ತಲುಪಿಸುವೆ. ಧನ್ಯವಾದಗಳು.
-ಚಿತ್ರಾ