Thursday, September 4, 2008

ಬೇಕೇ ಬೇಕಾ? 'ಮದ್ಯ' ರಾತ್ರಿ..?

'ಇದೇನ ಸಭ್ಯತೆ? ಇದೇನ ಸಂಸ್ಕೃತಿ?
ಇದೇನ ಇಂದು ಸತ್ಯತೆ? ಇದೇನ ನಮ್ಮ ಜಾಗೃತಿ?'
ಎಂದು ನೊಂದು ಕೇಳುತಿಹಳು ನಮ್ಮ ತಾಯಿ ಭಾರತಿ.

ರಾಜ್‌ಕುಮಾರ್, ಕಲ್ಪನಾ ಅಭಿನಯದ 'ಮಣ್ಣಿನ ಮಗ' ಚಿತ್ರಕ್ಕಾಗಿ 'ಗೀತಪ್ರಿಯ' ಬರೆದ ಹಾಡು ಅದೇಕೋ ತಲೆಯಲ್ಲಿ ಗುನುಗುಟ್ಟುತ್ತಿದೆ. ಮೊನ್ನೆ ಮೊನ್ನೆ ಗಿರೀಶ್ ಕಾರ್ನಾಡ್ ಬಿದ್ದಪ್ಪ ಜೊತೆ ಬೀದಿಗಿಳಿದು, ಬೆಂಗಳೂರು ಇಮೇಜ್ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹರಡಿಸುವ ಉದ್ದೇಶದಿಂದ ಬೇಕೇ ಬೇಕು..ಬೆಂಗಳೂರು ಜನರು ರಾತ್ರಿಯಡೀ ಸಂಗೀತ ಪಾರ್ಟಿಗಳಲ್ಲಿ ಮೋಜು-ಮಸ್ತಿ ಮಾಡಲು ಅವಕಾಶ ಕೊಡಿ ಎಂದು ಪ್ರತಿಭಟನೆ ಮಾಡಿದ್ದಾರೆ. ಆದಾದ ಬಳಿಕ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಬೀದಿಗಿಳಿದಿಲ್ಲ..ನೇರವಾಗಿ ಮುಖ್ಯಮಂತ್ರಿಗಳಿಗೇ ಪತ್ರ ಬರೆದಿದ್ದಾರಂತೆ. ಮುಂಬೈನಲ್ಲಿ ಮಧ್ಯರಾತ್ರಿ 1 ಗಂಟೆ ಮತ್ತು ದೆಹಲಿಯಲ್ಲಿ 12 ಗಂಟೆ ತನಕ ವಿನೋದಕ್ಕೆ ಅವಕಾಶ ಮಾಡಿಕೊಡುತ್ತಾರೆ. ನಾವೇನು ಕಡಿಮೆ? ನಮಗೂ ಅವಕಾಶ ಕೊಡಿ..ಮನುಷ್ಯ ಕಾಲಕ್ಕೆ ತಕ್ಕಂತೆ ಕೋಲ ಕಟ್ಟಬೇಕು ಎನ್ನುವ ಅರ್ಥದಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರಂತೆ. ಇದೀಗ ಕಿಂಗ್ ಫಿಶರ್ ದೊರೆ ವಿಜಯ್ ಮಲ್ಯ ಅವರು ಪತ್ರ ಬರೆದು ಸಮಯ ವ್ಯರ್ಥ ಮಾಡುವ ಬದಲು ಪೊಲೀಸರ ಕ್ರ,ಮದ ವಿರುದ್ಧ ಧರಣೆ ಕೂರುತ್ತೇನೆ ಎಂದಿದ್ದಾರೆ. 'ಬೆಂಗಳೂರು ಕಾಸ್ಮೋಪಾಲಿಟನ್ ನಗರ, ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ನೈಟ್ ಕ್ಲಬ್ ಮತ್ತು ಡಿಸ್ಕೋಥೆಕ್ ಗಳ ತಡರಾತ್ರಿ ಕಾರ್ಯನಿರ್ವಹಿಸಲು ತಡೆ ಹೇರಿರುವ ಪೊಲೀಸರ ಕ್ರಮದ ವಿರುದ್ಧ ಧರಣಿ ಕೂರುತ್ತೇನೆ" ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಬಿಟ್ಟಿದ್ದಾರೆ. ಇನ್ನೂ ಧರಣಿಗೆ ದಿನಾಂಕ ನಿಗದಿಯಾಗಿಲ್ಲ. ಏನ್ ಸ್ವಾಮಿ? ಈ 'ಮದ್ಯ' ರಾತ್ರಿಯ ವಿಷಯವನ್ನಿಟ್ಟುಕೊಂಡು ಎಷ್ಟು ಜನರು ಪ್ರತಿಭಟನೆ ಮಾಡ್ತಾರೆ? ಮನೆಯಲ್ಲಿ ತೆಪ್ಪಗೆ ಕುಳಿತವರೂ ಕೂಡ ಎದ್ದು ಬಂದು ಬೇಕೇ ಬೇಕು 'ಮದ್ಯ' ರಾತ್ರಿ ಎನ್ನುತ್ತಿದ್ದಾರೆ. ಏನ್ ಕಾಲ ಬಂತು ಸ್ವಾಮಿ? ಇದಕ್ಕೆಲ್ಲ ಕಾರಣ ಬೆಂಗಳೂರು ನಂ. 1. ಯಾವುದರಲ್ಲಿ..? ಐಟಿ-ಬಿಟಿಯಲ್ಲೇ? ಆಗಿರಬಹುದು ಜೊತೆಗೆ ಭ್ರಷ್ಟಾಚಾರ, ಭಯೋತ್ಪಾದನೆ, ಅತ್ಯಾಚಾರ. ಕೊಲೆ, ದರೋಡೆ, ಅಪಘಾತ, ಅಪರಾಧ, ಆತ್ಮಹತ್ಯೆ..ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಐಟಿ-ಬಿಟಿ ಬಿಟ್ಟರೆ ಈ ಪಟ್ಟಿಯಲ್ಲಿರುವ ಯಾವುದನ್ನೂ ಯಾವ ಮಹಾನುಭಾವರು ಪ್ರಸ್ತಾಪಿಸುವುದಿಲ್ಲ.

ಇತ್ತೀಚೆಗೆ ನವದೆಹಲಿಯ ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆ ನಡೆಸಿದ್ದ ಸಮೀಕ್ಷೆಯ ಪ್ರಕಾರ, ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶ ಗಳ 'ಲಂಚವತಾರ'ಗಳ ಜೊತೆ ಕರ್ನಾಟಕವೂ ನಂ. 1 ಆಗಿದೆ. 2005ರಲ್ಲಿ ಭ್ರಷ್ಟಾಚಾರದಲ್ಲಿ 20 ರಾಷ್ಟ್ರಗಳ ಪೈಕಿ ಕರ್ನಾಟಕ 17ನೇ ಸ್ಥಾನ ಪಡೆದರೆ, ಈಗ ಅತೀ ಭ್ರಷ್ಟ ರಾಷ್ಟ್ರಗಳ ಪೈಕಿ ಕನ್ನಡ ನಾಡೂ ಒಂದು. ಮಧ್ಯರಾತ್ರಿ ವರೆಗೂ ಮೋಜು-ಮಸ್ತಿ ಬೇಕೆಂದು ಧರಣಿ ಕೂರುವವರು 'ಅಯ್ಯೋ ನಮ್ ಕರ್ನಾಟಕ ಕೆಟ್ಟು ಹೋಯ್ತಪ್ಪ..ಭ್ರಷ್ಟಾಚಾರ, ಭಯೋತ್ಪಾದನೆಯನ್ನು ತೊಲಗಿಸಬೇಕು. ಇದಕ್ಕಾಗಿ ಎಂ.ಜಿ. ರೋಡ್ ನ ಮಹಾತ್ಮಾಗಾಂಧಿ ಪ್ರತಿಮೆ ಬಳಿ ಅಮರಣಾಂತ ಉಪವಾಸ ಕೂರುತ್ತೇನೆ' ಎಂದವರು ಯಾರಾದ್ರೂ ಇದ್ದರೆಯೇ? ಇದ್ದರೆ ಹೇಳಿ. ಏನಪ್ಪಾ ಈ ಹುಡ್ಗಿ..ಸಂಸ್ಕೃತಿ, ಸಭ್ಯತೆ, ಸತ್ಯ, ಜಾಗೃತಿ ಬಗ್ಗೆ ಮಾತನಾಡುತ್ತಿದ್ದಾಳೆ ಅನಿಸ್ತಾ..?! ಹೌದು! ಬೆಂಗಳೂರು ಬೆಂಗಳೂರಾಗಿ ಉಳಿದಿಲ್ಲ..ಆದರೆ ಇಂಥ ವಿಚಾರಕ್ಕೆಲ್ಲಾ ಧರಣಿ ಕೂರುವ "ಧಣಿ'ಗಳನ್ನು ಕಂಡಾಗ, ಒಳ್ಳೆಯ ವಿಚಾರಕ್ಕೆ ಬೀದಿಗೆ ಬರಲಿ ಎನ್ನುವುದು ತಪ್ಪಲ್ಲವಲ್ಲ. ಇರ್ಲಿ ಬೆಂಗಳೂರಿನಲ್ಲಿ ಹಗಲು-ರಾತ್ರಿ ಎರಡೂ ಒಂದೇ..ಮಧ್ಯರಾತ್ರಿ ವರೆಗೂ ಸಂಗೀತ ಪಾರ್ಟಿಗಳಿಗೆ ಅವಕಾಶ ಕೊಡಲಿ..ಆದ್ರೆ ಈ ಸಂಗೀತದೊಂದಿಗೆ ಬಾಟಲಿಗಳೂ ಸರಬರಾಜಾಗುತ್ತವೆ...ಮಾದಕ ವಸ್ತುಗಳು ಮಾದಕತೆಗೆ ಇನ್ನಷ್ಟು ಹುರುಪು ತುಂಬುತ್ತವೆ. ತಡರಾತ್ರಿ ವರೆಗೂ ಸಂಗೀತ ಕೇಳಿದವರು ಅಡ್ಡಾದಿಡ್ಡಿಯಾಗಿ ವಾಯಹನ ಚಲಾಯಿಸಿ..ಯಾವುದೋ ಕರೆಂಟು ಕಂಬಕ್ಕೋ ಅಥವಾ ಇನ್ಯಾವುದೋ ವಾಹನಕ್ಕೋ ಢಿಕ್ಕಿ ಹೊಡಿತಾರೇ..ಇವರನ್ನು ನೋಡಿಕೊಳ್ಳೋರು ಯಾರು ಸ್ವಾಮಿ? ಪಾಪ ಪೊಲೀಸರಿಗೂ ನಿದ್ದೆ ಯಿಲ್ಲ..ಇಂಥದ್ದೆಕ್ಕೆಲ್ಲ ಅವಕಾಶ ನೀಡಬಾರದು ಎನ್ನುವುದೇ ಸಭ್ಯ ನಾಗರಿಕರ ಮತ್ತು ಪೊಲೀಸರ ಇಚ್ಚೆಯಷ್ಟೇ, ರಾತ್ರಿ ಪಬ್. ಬಾರ್, ಡಿಸ್ಕೋಥೆಕ್ ಗಳು ಕಾರ್ಯನಿರ್ವಹಿಸಿದರೆ ನಮ್ಮ ಇಮೇಜು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುವುದಲ್ಲ. ಯಾವುದೇ ಕಟ್ಟುನಿಟ್ಟಿನ ಕಾನೂನು ಇಲ್ಲದ ನಮ್ಮ ರಾಜ್ಯದ ಮಾನ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತದೆಯಷ್ಟೇ.

6 comments:

ವಿ.ರಾ.ಹೆ. said...

ಆ ಧರಣಿ ಕೂಡುವವರ ವ್ಯವಹಾರ ಜೋರಾಗಿ ನೆಡೆಯುವುದೇ ಆ ರಾತ್ರಿ ಹೊತ್ತುಗಳಲ್ಲಿ. ಅವರಿಗೆ ಯಾವ ಕಲಾವಿದರ, ಸಮಾಜ ಬಗ್ಗೆ ಕಾಳಜಿಯೂ ಇಲ್ಲ ಅಥವಾ ಇನ್ನೇನಿಲ್ಲ. ಅವರಿಗೆ ಅವರ ಬಿಸಿನೆಸ್ಸಿನ ಚಿಂತೆಯಷ್ಟೆ. ’ಮದ್ಯ’ರಾತ್ರಿಗಳಿಗೆ ಅವಕಾಶ ಕೊಟ್ಟರೆ ಅವರ ಬಿಸಿನೆಸ್ಸು ಜೋರಾಗಿ ನೆಡೆಯುತ್ತದೆ ಎಂಬುದು ಅವರ ಆಶಯ. ಮಲ್ಯನ ಹೆಂಡ, ಬಿದ್ದಪ್ಪನ ಹುಡುಗಿಯರು, ತಲೆಹಿಡುಕರು, ಬೆಲೆವೆಣ್ಣುಗಳು ಚಲಾವಣೆಯಾಗುವುದೇ ರಾತ್ರಿಯಲ್ಲಿ. ಅದನ್ನೇ ಇವರು ಟೈಮ್ಸಾಫಿಂಡಿಯಾ ರೀತಿಯಲ್ಲಿ ಅಂತಾರಾಷ್ಟ್ರೀಯ ಇಮೇಜ್ ಎಂಬ ಹೆಸರು ಕೊಟ್ಟು ದುರ್ಬಳಕೆ ಮಾಡಿಕೊಳ್ಳಲು ನೋಡುತ್ತಿದ್ದಾರೆ. ಜೊತೆಗೆ ನಮ್ಮ ನಂಬರ್ ೬ ಕೂಡ ಸೇರಿಕೊಂಡಿರುವ ಕಾರಣ ರಾತ್ರಿಯೂ ತಮ್ಮ ನಾಟಕಗಳನ್ನಾಡಿಸಿ ಕಲಾವಿದರಿಗೆ ಪ್ರೋತ್ಸಾಹ ಕೊಡುವುದಿರಬಹುದಾ!! :)

Chevar said...

chennagide baraha...

ಚಿತ್ರಾ ಸಂತೋಷ್ said...

ವಿಕಾಸ್ ನಿಜವನ್ನೇ ಹೇಳಿದ್ದೀರಿ..ಅದೂ ನೇರವಾಗಿ ಹೇಳಿದ್ದಕ್ಕೆ ಥ್ಯಾಂಕ್ಸ್.
ಚೇವಾರ್..ಆಗಾಗ ಬರುತ್ತೀರಿ 'ಶರಧಿ'ಗೆ..

Pramod said...

ಮಧ್ಯ ರಾತ್ರಿ ಕೂತು ಕುಡಿದು ಹಾಡಿದರೆ ಸ೦ಗೀತದಲ್ಲಿ ಏನೋ ಸಾಧನೆ ಆಗುತ್ತೆ ಎನ್ನೋ ಮನೋಭಾವ.
ಈ ಮಾಧ್ಯಮದವ್ರು ಇ೦ತಹ ಬುಧ್ದಿಜೀವಿಗಳೆ೦ಬ ನಾಯಿಗಳ ಹಿ೦ದೆ ಜೊಲ್ಲು ಸುರಿಸಿಕೊ೦ಡು ತಿರುಗುವವರು.
ಅಲ್ಲಿಗೆ ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.

ಚಿತ್ರಾಕರ್ಕೇರಾ, ದೋಳ್ಪಾಡಿ said...

ಪ್ರತಿಕ್ರಿಯೆಗೆ ವಂದನೆಗಳು..ಆಗಾಗ ಬರುತ್ತೀರಿ ಬ್ಲಾಗಿಗೆ..ಆದರೆ "ಈ ಮಾಧ್ಯಮದವ್ರು ಇ೦ತಹ ಬುಧ್ದಿಜೀವಿಗಳೆ೦ಬ ನಾಯಿಗಳ ಹಿ೦ದೆ ಜೊಲ್ಲು ಸುರಿಸಿಕೊ೦ಡು ತಿರುಗುವವರು"-ನಿಮ್ಮ ವಾಕ್ಯ ಅರ್ಥ ಆಗಿಲ್ಲ..ವಿವರಿಸಿ ಹೆಳ್ತೀರಾ?

Pramod said...

@Chitra,
'ಬುಧ್ದಿಜೀವಿಗಳು' ಎ೦ದು ಕರೆಯಲ್ಪಡುವ ವ್ಯಕ್ತಿಗಳ ಹಿ೦ದೆ ಕ್ಯಾಮೆರ,ರೆಕಾರ್ಡರ್ ಹಿಡ್ಕೊ೦ಡು ಓಡುವ Media ಜನರಿಗೆ ಮಾತ್ರ ಮೇಲಿನ ಲೈನು ಮೀಸಲು.