
ಕನಸುಗಳೇ ಬತ್ತಿ, ಗುಳಿಬಿದ್ದ ಕಂಗಳು, ಬಿಳಿಕೂದಲು, ಕೃಶಕಾಯ, ಶಕ್ತಿಹೀನ ಕೈ-ಕಾಲುಗಳು..ಆತನಿಗೆ ವಯಸ್ಸು 80 ಮೀರಿರಬಹುದು ಎಂಬುದನ್ನು ಸೂಚಿಸುತ್ತಿದ್ದವು. ಅದೇ ಜೀವನದಲ್ಲಿ ಮೊದಲ ಬಾರಿಗೆ ಶವಾಗಾರಕ್ಕೆ ಹೊಕ್ಕು ಶವಗಳನ್ನು ನೋಡಿದ್ದು ನನ್ನ ಕನಸು ತುಂಬಿರುವ ಕಣ್ಣುಗಳು. ಹೃದಯದಲ್ಲಿ ಒಂದಿಷ್ಟು ಭಾವಗಳು, ಜಗವನ್ನರಿತ ಮನ, ಯೋಚನೆಯ ಲಹರಿ ಹತ್ತಿರುವ ನನ್ನ ಮಿದುಳು..ಅಲ್ಲಿ ನಿಶ್ಯಬ್ಧವಾಗಿ ಮಲಗಿರುವ ಕೃಶಕಾಯದತ್ತ ದೃಷ್ಟಿ ನೆಟ್ಟಿದ್ದವು. ಆತನಿಗೆ ಕಣ್ಣುಗಳಿದ್ದವು, ಆದರೆ ಕನಸುಗಳಿದ್ದಂತೆ ಕಂಡುಬರುತ್ತಿರಲಿಲ್ಲ. ಹೃದಯ ಇತ್ತೇನೋ..ಲಬ್ ಡಬ್ ಬಡಿತ ಕೇಳಿಬರುತ್ತಿರಲಿಲ್ಲ. ನಾನು ನಗುವನ್ನು ಬಲ್ಲವಳಾಗಿದ್ದೆ..ಆದರೆ ಆತನ ತುಟಿ ನಗುತ್ತಿರಲಿಲ್ಲ..ಪ್ರಪಂಚವನ್ನೇ ಮರೆತು ಮಲಗಿತ್ತು ಆ ದೇಹ..ಯಾರಿಗೂ ಬೇಡವಾದವನಂತೆ!
ನನ್ನ ಹೃದಯ ಚಿರ್ರನೆ ಚೀರಿತ್ತು..ಮತ್ತೆ ಮತ್ತೆ ಬದುಕು ಇಷ್ಟೇನಾ...ಮನ ರೋಧಿಸುತ್ತಿತ್ತು. ಮನುಷ್ಯನ ಸಂಬಂಧಗಳು, ಭಾವನೆಗಳು, ಕನಸು-ಕಲ್ಪನೆಗಳಿಗೆ ಮೂರ್ತರೂಪವನ್ನಿಟ್ಟಂತೆ ಕಾಣುತ್ತಿದ್ದ ಆತ ಅಂದು ಇವೆಲ್ಲವುಗಳಿಂದ ದೂರವಾಗಿ, ಯಾರಿಗೂ ಬೇಡವಾದ ನಿಷ್ಪ್ರಯೋಜಕ ವ್ಯಕ್ತಿಯಂತೆ ಶವಾಗರದಲ್ಲಿ ಮಲಗಿದ್ದ. ಪಕ್ಕದಲ್ಲೇ ಆತನ ಸಂಬಂಧಿಕರ ಒಂದು ಗುಂಪು..ಕೆಲವರ ಕಣ್ಣುಗಳು ಅಳುತ್ತಿದ್ದವು..ಇನ್ನು ಕೆಲವರ ಹೃದಯ ರೋಧಿಸುತ್ತಿತ್ತು. ನನ್ನ ಕಣ್ಣು-ಕಿವಿಗಳು ಅವರನ್ನೇ ನೋಡುತ್ತಿದ್ದವು. ಆತನ ಆಸ್ತಿ ನಾಲ್ಕು ಎಕರೆ..ಐದು ಜನರು ಹೆಣ್ಣುಮಕ್ಕಳು. ಎಲ್ಲರಿಗೂ ಮದುವೆಯಾಗಿದೆ. ದೊಡ್ಡ ಮಗಳಿಗೆ 50 ವರ್ಷ ದಾಟಿರಬಹುದು..ಸತ್ತು ಮಲಗಿದ್ದ ವ್ಯಕ್ತಿಯ ಆಸ್ತಿ, ಹಂಚಿಕೆಯ ಮಾತುಗಳು ಶವಾಗಾರದ ಪಕ್ಕದಲ್ಲಿದ್ದ ಪಾಳುಕಟ್ಟೆಯ ಮೇಲೆ ಚರ್ಚೆಯಾಗುತ್ತಿದ್ದವು...ಇವೆಲ್ಲವೂ ನನ್ನ ಕಿವಿಗೆ ಬೀಳುತ್ತಲೇ ಇದ್ದವು....ಮನಸ್ಸು ಏನೇನೋ ಅಂದುಕೊಂಡಿತ್ತು. ಭೂತ-ವರ್ತಮಾನ-ಭವಿಷ್ಯದ ಮೂರು ಕಾಲಗಳನ್ನು ತೂಗಿನೋಡಿತ್ತು ನನ್ನ ಎಳೆಮನಸ್ಸು. ಅಷ್ಟೊತ್ತಿಗೆ ಕಿರಿಯ ಮಗಳು ಬಂದಳು..ಬರುವಾಗ ತಡವಾಗಿತ್ತು. ಅದೇನು ಪಾಲೋ ಅಲ್ಲಿದ್ದವರು ಮೊದಲೇ ಮಾತಾಡಿಕೊಂಡಿದ್ದರು. ಹಾಗಾಗಿ ಕಿರಿಮಗಳ ಸಿಟ್ಟು ನೆತ್ತಿಗೇರಿತ್ತು..ಆಮೇಲೆ ಏನೇನೋ ಸಮಾಧಾನದ ಮಾತುಗಳು..ಆದರೆ ಕೃಶಕಾಯ ಇದೆಲ್ಲವನ್ನೂ ಕೇಳಿಸಿಕೊಳ್ಳುವನೋ ಎಂದು ಅತ್ತ ತಿರುಗಿದೆ..ಆದರೆ ಆತನ ಕಣ್ಣುರೆಪ್ಪೆಗಳೂ ಮಿಸುಕಾಡುತ್ತಿರಲಿಲ್ಲ...ತಣ್ಣಗೆ ಮಲಗಿದ್ದ...ಯಾರಿಗೂ ಬೇಡದವನಂತೆ! ಆತ ಹುಟ್ಟಿದಾಗ..ಗಂಡುಮಗುವೆಂದು ಆರತಿ ಬೆಳಗಿದವರೂ ಅಲ್ಲಿ ಯಾರೂ ಇದ್ದಂತೆ ಕಂಡುಬರಲಿಲ್ಲ..ನನ್ನ ಕನಸುತುಂಬಿರುವ ಕಣ್ಣುಗಳಿಗೆ!! ನನ್ನವರು ಯಾರೂ ಇಲ್ಲ...ರೋಧಿಸುತ್ತಿತ್ತು ಆ ಜೀವ...!
9 comments:
ಹ್ಮ್...
ಒಂದು ನಿಟ್ಟುಸಿರಿನ ಹೊರತು ಬೇರೇನೂ ತೋಚ್ತಾ ಇಲ್ಲ. :(
chennagide...
-rohi
ಸ್ಯಾಡ್ ಫೀಲ್.. .. :(
ಸ್ಮಶಾನ ವೈರಾಗ್ಯ ಎಂಬ ಮಾತಿದೆ. ಸಾವಿನ ಮನೆ ನೋಡಿದಾಗ ಇಂಥ ವಿಷಾದ ಆಗುವುದುಂಟು. ಬದುಕು ನಮ್ಮದು, ಸಾವು ನಮ್ಮದಲ್ಲ ...ಹಾಗಾಗಿ ಹುಟ್ಟಿದವರು ಅಲ್ಲರೂ ಬದುಕಲೇ ಬೇಕು..
ಛೆ. ಇಷ್ಟೇನಾ ಬದುಕು?
ಬರಹ ಚೆನ್ನಾಗಿತ್ತು.ಓದಿಸಿಕೊಂಡುಹೋಯಿತು. ಬದುಕು "ಇಷ್ಟೇನಾ" ಅಂತ ಅರಿವಾದಗಲೇ ಮುಂದಿನ ಯೋಚನೆ ವಿಶಾಲವಾಗುವುದು...
ಮನುಷ್ಯ ಜೀವನದ ಬಗೆಗಿನ ಈ ಬರಹ ಚೆನ್ನಾಗಿತ್ತು.
@ವಿಕಾಸ್, ರೋಹಿ, ಶುಶ್ರುತಣ್ಣ..ಪ್ರತಿಕ್ರಿಯೆಗೆ ಧನ್ಯವಾದಗಳು.
@ಮಾಂಬಾಡಿ..ಹೌದು! ಹುಟ್ಟಿದವರು ಬದುಕಲೇಬೇಕು. ಸಾವಿನ ಮನೆ ಅದೇಕೋ ನನ್ನ ಮನಸ್ಸನ್ನು ತೀರ ಕೆಡಿಸಿತ್ತು.
ಚೇವಾರ್, ಶ್ರೀದೇವಿ. ಆಗಾಗ ಬರುತ್ತಿರಿ ನನ್ನ ಬ್ಲಾಗ್ ಬುಟ್ಟಿಗೆ
@ಪುಣ್ಣಪ್ಪಾಡಿ..ನೀವಂದಿದ್ದು ನಿಜ
-ಚಿತ್ರಾ
Post a Comment