Friday, September 26, 2008

ಕಥೆ ಹೇಳುವ ಅಮ್ಮ..

ದಶಕಗಳ ಹಿಂದೆ ತಿರುಗಿ ಕಣ್ಣಾಯಿಸಿ. ಮನೆಯಲ್ಲಿ ಅಜ್ಜಿ ಇದ್ದರೆ ಕಥೆ ಹೇಳುತ್ತಿದ್ದರು. ಒಂದು ಕಾಲದಲ್ಲಿ ಅಜ್ಹಿ ಕತೆ ತುಂಬಾ ಫೇಮಸ್ಸು. ಅಷ್ಟೇ ಅಲ್ಲ, ಅಜ್ಜಿ ಕಥೆ ಹೇಳುವುದನ್ನು ಕೇಳಲೂ ಅಷ್ಟೇ ಹುಮ್ಮಸ್ಸು. ಆದರೆ ನಮ್ಮನೆಯಲ್ಲಿ ಅಮ್ಮ ಕತೆ ಹೇಳುತ್ತಿದ್ದ ನೆನಪು. ನಮ್ಮಮ್ಮನಿಗೆ ಮದುವೆ ಆದ ನಂತರ ಬೇರೆ ಮನೆ ಮಾಡಿಕೊಡಲಾಗಿತ್ತು. ಹಾಗಾಗಿ ದಿನಾ ಕತೆ ಹೇಳಕೆ ಅಜ್ಜಿ ನಮ್ಮ ಜೊತೆ ಇರುತ್ತಿರಲಿಲ್ಲ. ಅಮ್ಮನೇ ಕತೆ ಹೇಳುತ್ತಿದ್ದರು.

ಕಿಟ್ಟ-ಕಿಟ್ಟಿ ಕತೆ, ರಾಮ-ರಾವಣ ಕತೆ, ಪಾಂಡವರ ಕತೆ, ಮೊಲ-ಆಮೆಯ ಕತೆ, ಪುಣ್ಯಕೋಟಿಯ ಕತೆ. ಕೋಟಿ-ಚೆನ್ನಯ ಕಥೆ, ಗಣಪತಿ ಹುಟ್ಟಿದ ಕತೆ..ಹೀಗೆ ಎಷ್ಟೋ ಕತೆಗಳನ್ನು ಅಮ್ಮ ರಾತ್ರಿ ಹೊತ್ತು ನನ್ನ-ತಮ್ಮನ ತಲೆಗೆ ತುಂಬುತ್ತಿದ್ದರು.ಎಲ್ಲವೂ ಅಮ್ಮನಿಗೆ ನೀರು ಕುಡಿದಷ್ಟು ಸುಲಭ. ರಾತ್ರಿ ಹೊತ್ತು ನಾವು ನಿದ್ದೆ ಮಾಡಬೇಕಾದರೆ ಅಮ್ಮ ಕತೆ ಹೇಳಲೇಬೇಕು..ಅಮ್ಮ ಕತೆ ಹೇಳಕ್ಕೆ ಶುರು ಮಾಡಿದರೆ ಅದು ಎಕ್ಸ್ ಪ್ರೆಸ್ ಬಸ್ಸು ತರ..ನಿಲ್ಲಲು ತುಂಬಾ ಹೊತ್ತು ಬೇಕು.
ನಾನು , ತಮ್ಮ ಕಿವಿ-ಕಣ್ಣುಗಳನ್ನು ನೆಟ್ಟಗೆ ಮಾಡಿ ಅಮ್ಮನ ಬಾಯಿ ನೋಡುತ್ತಾ ಕುಳಿತರೆ, ಅಲ್ಲೇ ಬಾಕಿ. ಕಥೆ ಮುಗಿದ ಮೇಲೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ಅಮ್ಮನಿಗೆ ತಲೆನೋವು ಬರಿಸುತ್ತಿದ್ದೇವು. ಆದರೆ ಅಮ್ಮನ ತಾಳ್ಮೆ ತಪ್ಪುತ್ತಿರಲಿಲ್ಲ..ತಾಳ್ಮೆಯಿಂದ ಕಥೆ ಹೇಳುತ್ತಿದ್ದರು. ನಾವು ಹಾಗೇ ಕೇಳುತ್ತಾ ನಿದ್ದೆ ಹೋಗುತ್ತಿದ್ದೇವು.

ಮರುದಿನ ರಾತ್ರಿ ಮತ್ತೆ ಕಥೆಯ ಆರಂಭ. ಆವಾಗ ಅಮ್ಮ ಹೇಳಿದ ಕಥೆಯನ್ನು ನಾವು ಮತ್ತೆ ಹೇಳುವುದು. ಆಗ ನನಗೂ-ತಮ್ಮಂಗೂ ಪೆಟ್ಟೇ ಪೆಟ್ಟು. ಆದರೂ ಅವನದೇ ಮೇಲುಗೈ..ಅವನೇ ಮೊದಲು ಕತೆ ಹೇಳುವುದು..ಆಮೇಲೆ ನನ್ನ ಸರದಿ. ಎಷ್ಟೋ ಬಾರಿ ನಮಗೆ ಕಥೆ ಅರ್ಥವಾಗದಿದ್ದರೆ ಅಮ್ಮ ಕಥಾಚಿತ್ರಗಳಿರುವ ಪುಸ್ತಕಗಳನ್ನು ತರುತ್ತಿದ್ದರು. ರಾಮಾಯಣ ಕಥೆ ಹೇಳಬೇಕಾದರೆ ಅಮ್ಮ ಕಥಾ ಪುಸ್ತಕಗಳನ್ನು ತಂದು ವಿವರಿಸುತ್ತಿದ್ದರು. ಅದರಲ್ಲಿ ರಾಮನ ವನವಾಸದಿಂದ ಹಿಡಿದು, ಸೀತಾ ಅಪಹರಣ, ರಾವಣನ ವಧೆ, ಹನುಮಂತ ಕಥೆ ಎಲ್ಲವನ್ನೂ ಘಟನಾವಳಿಗೆ ಸಂಬಂಧಪಟ್ಟಂತೆ ಚಿತ್ರಗಳಲ್ಲಿ ತೋರಿಸಲಾಗುತ್ತಿತ್ತು. ಆವಾಗ ಕಥೆ ಬೇಗನೆ ಅರ್ಥವಾಗುತ್ತಿತ್ತು. ಏಕೆಂದರೆ ಅಮ್ಮನಿಗೆ ಓದಲು ಬರುತ್ತಿರಲಿಲ್ಲ!

ನಮಗೆ ಅಮ್ಮ ಕಥೆ ಹೇಳುವುದು ಎಷ್ಟು ಅಭ್ಯಾಸವಾಗಿಬಿಟ್ಟಿತೆಂದರೆ ಅಮ್ಮ ಕಥೆ ಹೇಳದೆ ನಾವು ಮಲಗುತ್ತಿರಲೇ ಇಲ್ಲ. ಕಥೆಯಷ್ಟೇ ಅಲ್ಲ, ಅಮ್ಮ ಭಜನೆ, ಪಾಡ್ದನ, ಸಂದಿಗಳನ್ನೂ ಹೇಳಿಕೊಡುತ್ತಿದ್ದರು. ಅಮ್ಮ ಹೇಳುತ್ತಿದ್ದ "ಸೀತಾಪತಿ..ದಾಸರತೆ..ದಶರಥ ನಂದನ ದಯಾನಿಧಿ.." ಭಜನೆ ಈಗಲೂ ನೆನಪಿದೆ. ತುಂಬಾ ಚೆನ್ನಾಗಿ ಅಮ್ಮ ಹಾಡುತ್ತಿದುದನ್ನು ಕೇಳಿ, ನಮ್ಮ ಶಾಲೆಯಲ್ಲಿ ಶನಿವಾರ ನಡೆಯುವ ಭಜನೆಯಲ್ಲಿ ನಾನು ಹಾಡುತ್ತಿದ್ದೆ.

ಆದರೆ ಈಗ..
ಕೂತಲ್ಲಿ ಕೂರಲಾಗದ, ನಿಂತಲ್ಲಿ ನಿಲ್ಲಲಾಗದ ಕಥೆಹೇಳುವ ಅಜ್ಜಿ ಇದ್ದಾರೆಯೇ? ಗಡಿಬಿಡಿ ಕೆಲಸಗಳ ನಡುವೆ ಅಮ್ಮಂದಿರು ಕಥೆ ಹೇಳುತ್ತಾರೆಯೇ? ಹಲ್ಲು ಬರದ ಪುಟ್ಟ ಮಗುನೂ ಕಂಪ್ಯೂಟರ್ ಮೌಸ್ ಹಿಡಿದರೆ, ನಮ್ಮ ಮಕ್ಕಳು ಟಾಟಾ, ಅಂಬಾನಿ, ನಾರಾಯಣಮೂರ್ತಿ ಆಗ್ತಾರೆ ಅನೋ ಕನಸು ಹೆತ್ತವರದ್ದು. ಬೆಳಿಗೆದ್ದು ಬಾಟಲ್ ಹಾಲು, ಒಂದಿಷ್ಟು ಹರಕಲು ಬಿಸ್ಕೀಟು, ತಿಂಡಿ ಜೊತೆ ಬೇಬಿ ಸಿಟ್ಟಿಂಗ್ ನಲ್ಲಿ ಮಗುವನ್ನು ಹಾಕಿಬಿಟ್ರೆ ಮುಗೀತು..ಅಮ್ಮಂದಿರ ಜವಾಬ್ದಾರಿ. ಮಗು ಅಲ್ಲೇ ಆಟವಾಡುತ್ತಾ, ಹೇಳಿದ್ದನ್ನೇ ಹೇಳಿಕೊಡುವ ಟೀಚರ್ ಮುಖ ನೋಡುತ್ತಾ, ಸಂಜೆ ತನಕ ಆಟಿಕೆಗಳ ಜೊತೆ ಆಟವಾಡುತ್ತಾ..ಸಂಜೆ ಅಮ್ಮ ಆಫೀಸಿನಿಂದ ಬರುವ ಹೊತ್ತಿಗೆ ಮತ್ತೆ ಮನೆಗೆ ಬರುತ್ತೆ ಮಗು.
ಸಂಜೆ ಮನೆಗೆ ಬಂದ ಅಮ್ಮನಿಗೆ ರಾಶಿ ರಾಶಿ ಕೆಲಸಗಳು, ಅಷ್ಟೊತ್ತಿಗೆ ಗಂಡ ಆಫೀಸಿನಿಂದ ಬರ್ತಾನೆ..ಅವನಿಗೆ ಕುಳಿತಲ್ಲಿಗೇ ಎಲ್ಲ ರೆಡಿ ಮಾಡ್ಬೇಕು..ಆಮೇಲೆ ಊಟ ಮಾಡ್ಬೇಕು. ಊಟ ಆದ ಬಳಿಕ ಗಂಡ ರಿಮೋಟ್ ಹಿಡಿದು ಚಾನೆಲ್ ಬದಲಾಯಿಸುತ್ತಾ ಇರ್ತಾನೆ...ಹೆಂಡತಿನೂ ಅಲ್ಲೇ ಕುಳಿತುಬಿಟ್ಟರೆ ಮಾತು..ಮಾತು..ಮಗುವಿಗೆ ನಿದ್ದೆ ಬರುತ್ತದೆ..ಆಕಳಿಸುತ್ತೆ..ಅಲ್ಲೇ ಉಚ್ಚೆ ಒಯ್ಯುತ್ತೆ..ಕೊನೆಗೆ ನಿದ್ದೆ ಹೋಗುತ್ತೆ. ನಂತರ ತೊಟ್ಟಿಲಿಗೆ ಹಾಕಿದ್ರೆ ಮುಗೀತು..ಮಗು ತೆಪ್ಪಗೆ ನಿದ್ದೆ ಮಾಡುತ್ತೆ.
ಮರುದಿನ ಬೆಳಗಾಗುತ್ತದೆ..
ಅದೇ ಬೇಬಿಸಿಟ್ಟಿಂಗು, ಅದೇ ಆಟಿಕೆ, ಅದೇ ಹಾಲಿನ ಬಾಟಲು, ಅದೇ ಪ್ರಾಕ್ಟೀಸು...ಅದೇ ಡ್ಯಾನ್ಸು.....!!

2 comments:

Pramod said...

ಜೀವನ ನಿ೦ತ ನೀರಾಗಿದೆ.ಸೂರ್ಯ ಹುಟ್ಟಿ ಮುಳುಗುವುದು ಮಾತ್ರ ಗೊತ್ತಗ್ತಾ ಇದೆ.ಏಕತಾನತೆ ಹಾಗೂ ಯಾ೦ತ್ರಿಕತೆ ಉಸಿರುಕಟ್ಟಿಸ್ತಾ ಇದೆ.
ಬರಹ ಚೆನ್ನಾಗಿದೆ :)

shivu.k said...

ಕತೆ ಹೇಳುವ ಅಜ್ಜಿ ನನಗೆ ಸಿಕ್ಕಿದ್ದರು ಅದೇ ಕಾರಣಕ್ಕೆ ಈ ರೀತಿ ಬ್ಲಾಗಿನಲ್ಲಿ ಬರೆಯುತ್ತಿದ್ದೇನೇನೋ ! ನೆನಪಿಸಿದ್ದಕ್ಕೆ ಧನ್ಯವಾದಗಳು.
ನನ್ನ ಬ್ಲಾಗಿನಲ್ಲೊಂದು ನಾಚಿಕೆಯಿಲ್ಲದ ಪಾರಿವಾಳ ಕುಟುಂಬ ಬಂದಿದೆ. ಬನ್ನಿ. ಓದಿ. ಕಾಮೆಂಟಿಸಿ.

ಮತ್ತೊಂದು ಬ್ಲಾಗ್ ಕ್ಯಾಮೆರಾ ಹಿಂದೆ" ನಲ್ಲಿ ಮತ್ತೊಂದು ಹೊಸ ಲೇಖನ ಬರೆದಿದ್ದೇನೆ ಓದಿ ದಯವಿಟ್ಟು ಕಾಮೆಂಟಿಸಿ.
ಶಿವು.ಕೆ