Wednesday, December 31, 2008

ನಿಮ್ಮ ಪ್ರೀತಿಗಾಗಿ..ಖುಷಿ ಖುಷಿ ಸಾಲುಗಳು!

ಬೆಳ್ಳಂಬೆಳಗ್ಗಿನ ಚುಮು ಚುಮು ಚಳಿಗೆ ಮುಂಜಾವು ಊರಿಂದ ಬೆಂಗಳೂರಿಗೆ ಬಂದು ಇಳಿದವಳಿಗೆ ಬಸ್ಸ್ಟಾಂಡ್, ಬಸ್ಸುಗಳಲ್ಲಿ ಏನೋ ಹೊಸವರ್ಷದ ಗುಂಗಿತ್ತು. ಯುಗಾದಿ ನಮಗೆ ಹೊಸವರ್ಷ ಆದ್ರೂ ಜನವರಿ 1 ಅಂದ್ರೆ ಅದೇ ಸಡಗರದ ಹೊಸವರ್ಷವಾಗಿಬಿಟ್ಟಿದೆ.. .ಇರಲಿ ಬಿಡಿ, ಈಗ ಮತ್ತೊಂದು ಜನವರಿ 1 ಬಂದಿದೆ..ಡುಂಡಿರಾಜ್ ಹೇಳಿದಂತೆ ಅದೇ ಹಳೆಯ ಮೊಳೆಗೆ ಹೊಸ ಕ್ಯಾಲೆಂಡರ್ ನೇತುಹಾಕುವುದು. ಏನೇ ಇರಲಿ..ಹೆಚ್ಚೇನೂ ಬರೆಯಲ್ಲ...ಒಂದಿಷ್ಟು ಖುಷಿ ಖುಷಿ ಸಾಲುಗಳನ್ನು ನಿಮಗಾಗಿ...ನಿಮ್ಮ ಪ್ರೀತಿಗಾಗಿ ಇಲ್ಲಿ ಚೆಲ್ಲಿ ಬಿಟ್ಟಿದ್ದೀನಿ..ಎಲ್ಲೋ ಓದಿದ್ದು,...ಯಾರೋ ಹೇಳಿದ್ದು..ಯಾರೋ ಬರೆದಿದ್ದು..ನನ್ನ ಕಿವಿಗೆ ಕೇಳಿದ್ದು ಎಲ್ಲವೂ ಇಲ್ಲಿದೆ...ಪುರುಸೋತ್ತು ಇದ್ರೆ ಓದಿಕೊಳ್ಳಬಹುದು.

"ಗೆದ್ದ ಕಲಿಗಳು ಬಾಳನ್ನು ಆಳಿ ಇತಿಹಾಸಕ್ಕೆ ವಸ್ತುವಾಗುತ್ತಾರೆ. ಸೋತ ವೀರರು ತಮ್ಮ ಬಾಳಿನ ಇತಿಹಾಸ ತಾವೇ ಬರೆಯುತ್ತಾರೆ"

"ನಿಟ್ಟುಸಿರಿನ ಬಿರುಗಾಳಿಯೊಡನೆ ಸುರಿಸುವ ಕಣ್ಣೀರಿನ ಜಡಿಮಳೆಯಲ್ಲಿ ಗಂಡಿನ ಸಿಡಿಗುಂಡುಗಳೆಲ್ಲ ತೊಯ್ದು ಹಾಳಾಗುವುವು. ಅವನ ಗಂಡೆದೆಯೂ ಕರಗಿ ತಣ್ಣಗಾಗುವುದು. ಕಣ್ಣೀರಿನ ಈ ಪರ್ಜನ್ಯಾಸ್ತ್ರದ ಪ್ರಯೋಗ ತಂತ್ರ ಹೆಣ್ಣಿಗೆ ಚೆನ್ನಾಗಿ ಗೊತ್ತು"

"ಒಳಗೊಳಗೆ ಕುದಿವ ಭೂಕಂಪವಿದ್ದರೂ ಮೇಲೆ ಹುಲ್ಲಿನ ಹಸಿರು ತಂಪನ್ನೂ ಹೂವಿನ ನರುಗಂಪನ್ನೂ ಹಬ್ಬಿಸುವ ಭೂತಾಯಂತೆ ಹೆಣ್ಣಿನ ಹೃದಯ"

"ಒಲವೆಂಬ ಹೊತ್ತಗೆಯ ಓದಬಯಸುವ ನೀನು
ಬೆಲೆಯೆಷ್ಟು ಎಂದು ಕೇಳುವಿಯೋ ಹುಚ್ಚ?
ಹಗಲಿರುಳು ದುಡಿದರೂ ಹಲಜನುಮ ಕಳೆದರೂ
ನೀ ತೆತ್ತಲಾರೆ ಬರಿ ಅಂಚೆ ವೆಚ್ಚ"

"ತಾರುಣ್ಯದ ಉನ್ಮಾದದಲ್ಲಿ ಜಗತ್ತೆಲ್ಲ ಸುಂದರಕಾಂಡ ವೆನಿಸುತ್ತದೆ. ಜೀವನವೆಲ್ಲ ಉದ್ಯೋಗಪರ್ವ ವೆನಿಸುತ್ತದೆ. ಪ್ರತಿಯೋರ್ವ ಗರ್ದಭನೂ ಗಂಧರ್ವನಾಗುತ್ತಾನೆ. ಅಪಸ್ಮಾರಿಯೂ ಅಪ್ಸರೆಯೆನಿಸುತ್ತಾಳೆ"

"ತನ್ನ ಕಿರಣ ತನಗೆ ಹಗಲು ಉಳಿದ ಬೆಳಕು ಕತ್ತಲು"

"ಧರ್ಮ ಎಂದರೆ ಆತ್ಮಸಾಕ್ಷಾತ್ಕಾರ, ಆತ್ಮಜ್ಞಾನ"

"ಪೆಟ್ಟಾಗಿರುವ ಕಡೆಗೆ ಏಟು ಬೀಳುವುದು, ಒಂಟಿ ಮರಕ್ಕೆ ಸಿಡಿಲು ಬಡಿಯೋದು ಪ್ರಕೃತಿ ನಿಯಮ"

"ಮನುಷ್ಯರನ್ನು ಪ್ರೀತಿಸುವುದಕ್ಕಿಂತ ನಿಸರ್ಗವನ್ನು ಪ್ರೀತಿಸುವುದರಲ್ಲೇ ನಿರಾಶೆಗೊಳಗಾಗುವ ಭೀತಿ ಕಡಿಮೆ"

"ಭಾವನೆ ಅಳಿದ ಮೇಲೆ ಉಳಿಯೋದು ಕೊಳೆತು ನಾರುವ ಶವ ಮಾತ್ರ"

"ನಿಜವಾದ ಅಪ್ಪ ಹೇಗಿರಬೇಕೆಂದರೆ ಯಾವ ಕಾರಣಕ್ಕೂ ಅನಾಥ ಮಕ್ಕಳೆದುರು ತಮ್ಮ ಮಕ್ಕಳನ್ನು ಮುದ್ದು ಮಾಡಬಾರದು"

"ಪುಟವಿಟ್ಟ ಚಿನ್ನದಂತಹ ಪಾರದರ್ಶಕರ ಸಾಲಿನಲ್ಲಿ ಇಂದಿನ ಅಧಿಕಾರಶಾಹಿಗಳ ನಂಬಿಕೆ, ನಡವಳಿಕೆಗಳು ಫ್ರಟ್ ಸಲಾಡ್ ನಲ್ಲಿ ಸಿಕ್ಕ ಸಿಕ್ಕೆ"

"ಒಬ್ಬ ಲಕ್ಷಾಧೀಶನ ಜೀವನ ಒಂದು ಕತೆಯಾಗಬಹುದಾದರೆ, ಭಿಕ್ಷುಕನ ಬಾಳು ಇನ್ನೂ ಸ್ವಾರಸ್ಯಕರವಾದ ಕತೆಯಾಗುವುದರಲ್ಲಿ ಸಂಶಯವಿಲ್ಲ. ಕತ್ತೆ ಜೀವನವೂ ಒಂದು ಸುಂದರವಾದ ಜೀವನಚರಿತ್ರೆಯಾಗಲಾರದೇ?"

"ರಾಜಬೀದಿಯಾಗಲು ಸಾಧ್ಯವಿಲ್ಲದಿದ್ದರೂ, ಕಾಲುದಾರಿಯಾಗಲು ಸಾಧ್ಯವಿದೆ. ಸೂರ್ಯನಾಗಲು ಸಾಧ್ಯವಾಗದಿದ್ದರೂ ಪುಟ್ಟ ನಕ್ಷತ್ರವಾಗಿ ಹೊಳೆಯುವುದು ಕಷ್ಟವೇನಲ್ಲ"

"ಕೆಲವೊಮ್ಮೆ ಸಮಸ್ಯೆಗಳಿಗೂ ನಮ್ಮನ್ನು ಸೋಲಿಸಲು ಧೈರ್ಯವಿರುವುದಿಲ್ಲ"

"ಮನುಷ್ಯನಲ್ಲಿರುವ ದೌರ್ಬಲ್ಯಕ್ಕೆ ದೌರ್ಬಲ್ಯವನ್ನು ಕುರಿತು ಚಿಂತಿಸುವುದೇ ಔಷಧವಲ್ಲ. ಶಕ್ತಿಯನ್ನು ಕುರಿತು ಚಿಂತಿಸುವುದೇ ಪರಿಹಾರೋಪಾಯ"

"ಮಾಡದಿರು ಬಾಳನ್ನು ಬೇಳೆಯಂತೆ..ಮಾಡು ಬಾಳನ್ನು ಇಡಿಗಾಳಿನಂತೆ"

"ಕಣ್ಣೀರು ತುಂಬಾ ಬೆಲೆಬಾಳಿವಂತದ್ದು. ಕಣ್ಣೀರಿನ ಬೆಲೆ ಅರಿಯದವರೆದುರು ಕಣ್ಣೀರು ಹಾಕಬಾರದು"

"ನಿನ್ನ ಕಣ್ಣು ಮತ್ತು ನಗುವನ್ನು ನಾ ಪ್ರೀತಿಸುವೆ..ನೀ ಖುಷಿಯಲ್ಲಿದ್ದಾಗ ಬೆಳಕು ನೀಡು"

"ಪ್ರೀತಿಯ ಸ್ಪರ್ಶವಿಲ್ಲದವನು ಕತ್ತಲಲ್ಲಿ ನಡೆಯುತ್ತಾನೆ"

17 comments:

Sushrutha Dodderi said...

ಹೇ ಚಂದ ಸಾಲುಗಳು ತಂಗಮ್ಮಾ..
ನನ್ ಕಡೆಯಿಂದ ನಿಂಗೊಂದಷ್ಟು ಪ್ರೀತಿ ಮತ್ತೆ ಶುಭಾಶಯ..

sunaath said...

ಚಿತ್ರಾ,
ಹೊಸ ವರ್ಷದ ಶುಭಾಶಯಗಳು.
-ಸುನಾಥ ಕಾಕಾ

ಬಾನಾಡಿ said...

ಅಲ್ಲಿಂದ ಇಲ್ಲಿಂದ ಸೇರಿದ ಅಕ್ಷರಗಳು ಪದಗಳಾಗಿ, ಪದಗಳು ಕಾವ್ಯವಾದಂತೆ ಆವೊಂದು ಈವೊಂದು ಕ್ಷಣಗಳು ಸೇರಿ ದಿನಗಳಾಗಿ, ದಿನಗಳು ವರ್ಷವಾಗಲಿ. ಹೊಸ ವರ್ಷವಿಡೀ ಅಕ್ಷರಲೋಕದಲ್ಲಿ ಈಜಾಡಿ. ಬದುಕು ಬೆಳಗಲಿ. ಶುಭ ಹಾರೈಕೆಗಳು.
ಒಲವಿನಿಂದ
ಬಾನಾಡಿ

ಅಂತರ್ವಾಣಿ said...

ಈ ಸಾಲುಗಳ ಬಗ್ಗೆ ಹೇಳೋಕೆ ಬೇರೆ ಮಾತಿಲ್ಲ.

ಹೊಸ ವರ್ಷದ ಶುಭಾಶಯಗಳು

ರಾಘವೇಂದ್ರ ಕೆಸವಿನಮನೆ. said...

ಸಾಲುಗಳು ಬುದ್ಧಿ, ಭಾವ -ಎರಡಕ್ಕೂ ಖುಷಿ ಕೊಟ್ಟವು. ಥ್ಯಾಂಕ್ಸ್.
ಹೊಸ ವರ್ಷದ ಶುಭಾಷಯಗಳು.
-ರಾಘವೇಂದ್ರ ಕೆಸವಿನಮನೆ.

ತೇಜಸ್ವಿನಿ ಹೆಗಡೆ said...

ಶರಧಿ,

ಹೊಸವರುಷವನ್ನು ಮುತ್ತಿನಂತಹ ಸಾಲುಗಳೊಂದಿಗೆ ಸ್ವಾಗತಿಸಿದ್ದೀಯ. ತುಂಬಾ ಸಂತೋಷ. ಎಲ್ಲಾ ಸಾಲುಗಳೂ ತುಂಬಾ ಇಷ್ಟವಾದವು.

"ಹೊಸ ವರುಷ ತರಲಿ ಹರುಷ ಪ್ರತಿ ನಿಮಿಷ" ಎಂದು ಹಾರೈಸುವೆ. :)

www.kumararaitha.com said...

ಸಂಗ್ರಹ ಚೆನ್ನ.ಹೊಸವರುಷದ ಶುಭಾಶಯ

ಚಿತ್ರಾ ಸಂತೋಷ್ said...

"ತೂರಿಬರುತಲಿದೆ ನೋಡಿ..ಹೊಸಬೆಳಕಿನ ಕಿರಣಗಳು..
ಕದಸರಿಸಿ ಕುಳಿತುಬಿಡೋಣ..
ಬೆಳಕು ನಮ್ಮೊಳಗೆ ಇಳಿದುಬಿಡಲಿ...
ಅಂತರಂಗದ ತಮವು ಅಳಿಯಲಿ...
ರಕ್ತಪಾತಗಳು ನಿಲ್ಲಲಿ...
ಸಮಸ್ತ ಬದುಕು ಬೆಳದಿಂಗಳಾಗಲಿ..."
ಸುಶ್ರುತಣ್ಣ, ಸುನಾಥ್ ಸರ್, ಬಾನಾಡಿ ಸರ್, ಜಯಶಂಕರ್, ರಾಘವೇಂದ್ರ, ತೇಜಕ್ಕ, ಕುಮಾರ್..ಎಲ್ಲರಿಗೂ ನವವರುಷದ ಶುಭಾಶಯಗಳು...
-ತುಂಬುಪ್ರೀತಿಯಿಂದ,
ಚಿತ್ರಾ

Anonymous said...

ಚಿತ್ರಾ,
ಹೊಸ ವರ್ಷದ ಶುಭಾಶಯಗಳು.

Anonymous said...

ಸ೦ಗ್ರಹಯೊಗ್ಯ ನುಡಿಮುತ್ತುಗಳು. ತು೦ಬಾ ಚೆನ್ನಾಗಿವೆ.
ನಿಮಗೆ ಹೊಸ ವರುಷ ಹೊಸ ಹುರುಪನ್ನು ತರಲಿ.
ಪರಾ೦ಜಪೆ

ಚಿತ್ರಾ ಸಂತೋಷ್ said...

ಪರಾಂಜಪೆ..ತಮಗೂ ಶುಭಾಶಯಗಳು.
-ಚಿತ್ರಾ

shivu.k said...

ಚಿತ್ರಾ ಪುಟ್ಟಿ,

ನನಗೆ ಬಿಡುವಾಗದೆ ನಿನ್ನ ಬ್ಲಾಗಿಗೆ ಬಂದಿರಲಿಲ್ಲ...ಹೊಸ ವರ್ಷದ ಸ್ವಾಗತಕ್ಕಾಗಿ ನಿನ್ನ ಅಕ್ಷರಗಳು, ಪದಗಳು ಹೂವಿನ ತೋರಣ ಕಟ್ಟಿ ನಮ್ಮನ್ನು ಸ್ವಾಗತಿಸುವಂತಿವೆ...

ಒಂದಕ್ಕಿಂತ ಒಂದು ಮುತ್ತುಗಳು ಜೋಡಿಸಿದಂತ ಸಾಲುಗಳು......
ಹೊಸವರ್ಷದಲ್ಲಿ ಅಣ್ಣನ ಕಡೆಯಿಂದ ನಿನಗೆ ಪ್ರತಿಕ್ಷಣದ ಪ್ರೀತಿ ಮತ್ತು ಶುಭ ಆರೈಕೆಗಳು......

ಚಿತ್ರಾ ಸಂತೋಷ್ said...

ಶಿವಣ್ಣ..ಧನ್ಯವಾದಗಳು. ಪ್ರೀತಿಯಿದ್ರೆ ಅಷ್ಟೇ ಸಾಕು..ಇನ್ನೇನೂ ಬೇಡ. ಪ್ರೀತಿಯ ತೋರಣ..ಬದುಕನ್ನೇ ರೂಪಿಸುತ್ತಲ್ಲವೇ?
-ತುಂಬುಪ್ರೀತಿ,
ಚಿತ್ರಾ

ಹೆಸರು ರಾಜೇಶ್, said...

ತುಂಬ ಓಳ್ಳೆಯ ಸಾಲುಗಳು ಚಿತ್ರ
ಧನ್ಯವಾದಗಳು
ಗೆಳೆಯ
ರಾಜೇಶ್

ಚಿತ್ರಾ ಸಂತೋಷ್ said...

@ರಾಜೇಶ್..ತುಂಬಾ ಧನ್ಯವಾದಗಳು.
-ಚಿತ್ರಾ

Anonymous said...

ಪ್ರತಿಯೊಂದು ಸಾಲುಗಳೂ ಅದ್ಭುತ..:) ತುಂಬಾ ತುಂಬಾ ಥ್ಯಾಂಕ್ಸ್ ನಿಮಗೆ..:) ಎಲ್ಲಾನು ಒಂದು ಸಲ ಹಾಳೆಯಲ್ಲಿ ಬರೆದುಕೊಂಡುಬಿಟ್ಟೆ:)

ಚಿತ್ರಾ ಸಂತೋಷ್ said...

ನವಿಲುಗರಿ...ಧನ್ಯವಾದಗಳು ಸರ್..
-ಚಿತ್ರಾ