Sunday, August 23, 2009

ಅವಳಿನ್ನೂ ಬದುಕಿದ್ದಾಳೆ, ಭರವಸೆಯ ಹೊಂಗಿರಣದಂತೆ...

ಅಂದು ರಜಾದಿನ. ಮನೆಯಂಗಳವನ್ನು ತುಂತುರು ಮಳೆಹನಿಗಳು ಮುತ್ತಿಕ್ಕುತ್ತಿದ್ದವು. ಮೋಡ ಕವಿದ ಬಾನಂಗಳದಿ ಸೂರ್ಯನೂ ಮಸುಕಾಗಿದ್ದ. ಸಂಜೆಯ ಹೊತ್ತು ಒಬ್ಬಳೇ ಟಿವಿ ಎದುರು ಕುಳಿತು ಅದಾವುದೋ ಸಿನಿಮಾ ನೋಡುತ್ತಿದ್ದಂತೆ ಆ ಪುಟ್ಟ ಹುಡುಗಿ ನೆನಪಾದಳು. ಹಸಿರು ಲಂಗಧಾವಣಿ ಉಟ್ಟ ಆ ಮುಗ್ಧ ಹುಡುಗಿಯ ಮುಖ ಕಣ್ಣೆದುರು ಬಂತು. ಬೆಟ್ಟದಷ್ಟು ಕನಸುಗಳನ್ನು ಕಂಗಳಲ್ಲಿ ತುಂಬಿಕೊಂಡ, ಆಗತಾನೇ ಭವಿಷ್ಯ ಬದುಕಿನ ಕುರಿತು ಯೋಚಿಸುತ್ತಿದ್ದ ಆ ಚೆಂದದ ಹುಡುಗಿ ನೆನಪಾಗುತ್ತಿದ್ದಂತೆ ಅದೇಕೋ ನನ್ನ ಕಣ್ಣುಗಳೂ ಮಂಜಾದವು. ಹೃದಯ ಚಿರ್ರನೆ ಚೀರಿತ್ತು.

ಹೌದು,ಆಗ ನಾನು ಒಂಬತ್ತನೇ ತರಗತಿ. ಮಂಗಳ ವಾರಪತ್ರಿಕೆಯನ್ನು ಎಡೆಬಿಡದೆ ಓದಿ ಪರೀಕ್ಷೆಗಿಂತಲೂ ಧಾರವಾಹಿಗಳಿಗೆ ತಲೆಕೆಡಿಸಿಕೊಳ್ಳುತ್ತಿದ್ದ ದಿನಗಳು. ಮೇಷ್ಟ್ರು ಪಾಠ ಮಾಡುತ್ತಿರುವಾಗಲೇ ಡೆಸ್ಕಿನ ಸಂದಿಯಲ್ಲಿ ಮಂಗಳವಾರಪತ್ರಿಕೆ ಓದಿ ಎಷ್ಟೋ ಸಲ ಮೇಷ್ಟ್ರ ಕೆಂಗಣ್ಣಿಗೆ ಗುರಿಯಾಗಿ, ಹೆಡ್ ಮಾಸ್ತರ ಚೇಂಬರ್ ಗೆ ಬೈಗುಳ ತಿಂದ ದಿನಗಳು.

ಅದೊಂದು ಶನಿವಾರ ಮಂಗಳ ತಂದಂತೆ ಆ ಹುಡುಗಿಯ ಬಗ್ಗೆ ಯಾರೋ ಒಂದು ಪುಟ ಗೀಚಿದ್ದರು. ಅವಳು ಕಾಲೇಜು ಹುಡುಗಿ. ತನ್ನ ಓರಗೆಯ ಹುಡುಗನ್ನೊಬ್ಬ ಆ ಹುಡುಗಿಗೆ ಆಸೀಡ್ ಎಸೆದು ಮುಖವೆಲ್ಲಾ ಸುಟ್ಟು ಕರಲಾಗಿತ್ತು. ಪ್ರೀತಿಯನ್ನು ನಿರಾಕರಿಸಿದ್ದೇ ಇದಕ್ಕೆ ಕಾರಣ. ಆಸೀಡ್ ಎಸೆದ ನಂತರ ಅವಳ ಮುಖ ಹಾಗೂ ಇದಕ್ಕೂ ಮೊದಲು ಅವಳು ಆಡಿನಲಿಯುತ್ತಿದ್ದ ಪೋಟೋಗಳನ್ನು ನೀಡಲಾಗಿತ್ತು.ಆ ಪುಟ್ಟ ಹುಡುಗಿಯ ಮೇಲೆ ಕನಿಕರ ತೋರಿ ಅದೆಷ್ಟೋ ದಾನಿಗಳು ನೋಟುಗಳನ್ನು ಅವಳ ಮುಂದೆ ಚೆಲ್ಲಿದ್ದರು. ಭೂಗತದೊರೆಯೊಬ್ಬ 50 ಸಾವಿರ ಘೋಷಿಸಿ ಜನರಿಂದ ಸೈ ಎನಿಸಿಕೊಂಡಿದ್ದು ಈಗಲೂ ನೆನಪಿದೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ದೇಹವಷ್ಟೇ ಉಳಿದಿತ್ತು. ಸುತ್ತಲಿನ ಜಗತ್ತನ್ನು ಕಾಣೋಕೆ, ನಮ್ಮಂತೆ ಸುತ್ತಲಿನ ಜಗತ್ತಿನ ಜೊತೆ ಆಟವಾಡೋಕೆ, ಖುಷಿಪಡೋಕೆ ಅವಳ ಕನಸು ತುಂಬಿದ ಕಣ್ಣುಗಳು ಉಳಿಯಲಿಲ್ಲ. ಭಾವನೆಗಳಿದ್ದರೂ, ಕನಸುಗಳಿದ್ದರೂ, ಜೀವನ ಪ್ರೀತಿ ಉಕ್ಕಿ ಹರಿಯುತ್ತಿದ್ದರೂ ಅವಳ ಸುತ್ತಲಿನ ಜಗತ್ತು ಮಾತ್ರ ಅವಳನ್ನು ಕುರುಡಿಯಂತೆ ಒಪ್ಪಿಕೊಂಡುಬಿಟ್ಟಿದೆ.ತನ್ನದಲ್ಲದ ತಪ್ಪುಗಳಿಗೆ ಆಕೆ ಬಲಿಯಾದಳು.

ಆ ಮಹಾಪಾಪಿ ಏನಾದ..ಗೊತ್ತಿಲ್ಲ. ಅವನ ಬದುಕಿಗೆ ಪೆಟ್ಟಾಗಿಲ್ಲ. ಅವನನ್ನು ಬಂಧಿಸುವ ಕೈಗಳಿಲ್ಲ, ಆತನಿಗೆ ಶಿಕ್ಷೆಯಾಗಲಿಲ್ಲ. ಅಂಥವರಿಗೆ ಶಿಕ್ಷೆಯಾಗಬೇಕು ಎಂದು ಒಕ್ಕೋರಲಿನಿಂದ ಕೂಗುವ, ಬೀದಿಯಲ್ಲಿ ನಿಂತು ಕೂಗಿ ಹೇಳುವ ದನಿಗಳು ನಮ್ಮಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅವಳೆದುರು, ಅವಳ ಭಾವನೆಗಳೆದುರು, ಅವಳ ಕನಸುಗಳೆದುರು ಕನಿಕರದಿಂದ ನೋಟುಗಳನ್ನು ಚೆಲ್ಲೋರು ಜಾಸ್ತಿ ಇದ್ರು.

ಬದುಕಬೇಕು ಅನ್ನೋ ಹಂಬಲ, ಬದುಕಿನ ಕುರಿತಾದ ಆಕೆಯ ಪ್ರೀತಿ, ಭವಿಷ್ಯದ ಕುರಿತಾದ ಆಕೆಯ ಭರವಸೆ ಅವಳನ್ನು ಇನ್ನೂ ಜೀವಂತವಾಗಿರಿಸಿದೆ. ಇನ್ನೂ ಬದುಕಿದ್ದಾಳೆ..ಸಮಾಜದ ಪಾಲಿಗೆ ಕುರುಡಿಯಂತೆ..ಆಕೆಯ ಪಾಲಿಗೆ 'ಭರವಸೆಯ ಕಿರಣ'ದಂತೆ!

ಬರೆದು ಮುಗಿಸುತ್ತಿದ್ದಂತೆ...
ಕರುಣಾಳು ಬಾ ಬೆಳಕೇ
ಮಸುಕಿದೀ ಮಬ್ಬಿನಲಿ...
ಕೈ ಹಿಡಿದು ನಡೆಸೆನ್ನನು
...
ಎಂ.ಡಿ. ಪಲ್ಲವಿ ಧ್ವನಿಯಲ್ಲಿ ಇಂಪಾಗಿ ಕೇಳಿಬರುತ್ತಿತ್ತು.

Monday, August 17, 2009

ನಮ್ಮೂರ ಮಲ್ಲಿಗೆ ಚೆನ್ನಾ...

ನನಗೆ ಮಲ್ಲಿಗೆ ಅಂದ್ರೆ ಭಾಳ ಪ್ರೀತಿ. ಅದರಲ್ಲೂ ನಮ್ಮೂರ ಮಲ್ಲಿಗೆ ಅಂದ್ರೆ ಅಕ್ಕರೆ ಜಾಸ್ತಿ. ಅದೇ 'ಮಂಗ್ಳೂರ ಮಲ್ಲಿಗೆ' ಅಂತಾರಲ್ಲಾ ಅದೇ ಮಲ್ಲಿಗೆ. ಒಂದು ಮಲ್ಲಿಗೆ ಎಸಳು ಕೂಡ ನಮ್ಮನೆ-ಮನವನ್ನು ಘಮ್ಮೆನಿಸಬಲ್ಲುದು.ನಾನು ಊರಿಗೆ ಹೋಗುವಾಗ ತಪ್ಪದೆ ತಲೆತುಂಬಾ ಮಲ್ಲಿಗೆ ಮುಡಿತೀನಿ. ಯಾಕಂದ್ರೆ ಈ ಬೆಂಗ್ಲೂರಲ್ಲಿ ಅಂಥ ಸುಂದರ ಮಲ್ಲಿಗೆನೇ ಸಿಗೊಲ್ಲ. ಅದನ್ನು ಏನಿದ್ರೂ ನೀವು ಮಂಗಳೂರಲ್ಲೇ ನೋಡಬೇಕು. ಮೊನ್ನೆ ಮೊನ್ನೆ ಊರಿಗೆ ಹೋದೆ. ಹೋಗುವಾಗಲೇ ಪೇಟೆಯಲ್ಲಿ ಇಳಿದು ಮಲ್ಲಿಗೆ ತಕೊಂಡು ಹೊರಟೆ.

ನಾನು ಶಾಲೆಗೆ ಹೋಗುತ್ತಿದ್ದಾಗಲೂ ಅಷ್ಟೇ ತುಂಬಾ ಹೂವು ಮುಡಿಯೋ ಹುಚ್ಚು. ಅದರಲ್ಲೂ ಮಲ್ಲಿಗೆ ಅಂದ್ರೆ ಜಡೆಗಿಂತಲೂ ಜಾಸ್ತಿ ಮಲ್ಲಿಗೆ ಮುಡಿಯುತ್ತಿದ್ದೆ. ಆವಾಗ ನಮ್ಮ ಹೆಡ್ ಮಾಸ್ತರು ಯಾವಾಗಲೂ ಹೂವು ಮುಡಿದಿದ್ದಕ್ಕೆ ರೇಗಿಸುತ್ತಿದ್ದು ಈಗಲೂ ನೆನಪಿದೆ. ಹೈಸ್ಕೂಲು-ಕಾಲೇಜಿನಲ್ಲೂ ಅಷ್ಟೇ. ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಅಮ್ಮ ಎರಡು ಜಡೆ ಕಟ್ಟಿ. ಎರಡೂ ಜಡೆಗೂ ಮಲ್ಲಿಗೆ ಮುಡಿಸಿ ಕಳುಹಿಸುತ್ತಿದ್ದರು. ಆ ಮಲ್ಲಿಗೆ ಮುಡಿದು ಕ್ಲಾಸಿನಲ್ಲಿದ್ದವರಿಗೆಲ್ಲ ಅಸೂಯೆ ಬರಿಸೋದು ನನ್ ಕೆಲಸ. ಅದೆಷ್ಟೋ ಹುಡುಗಿಯರು ನನ್ ಮಲ್ಲಿಗೆ ಮೇಲೆ ಕಣ್ಣು ಹಾಕಿದ್ದಾರೋ? ಕಡಲವರಂರೂ ಸ್ವಲ್ಪ ಕೊಡೇ ಅನ್ನುತ್ತಾ ತೆಗೆದುಕೊಂಡು ಬಿಡೋರು.
ನಮ್ಮೂರಿನ ಪ್ರತಿ ಹಬ್ಬ ಅಥವಾ ಯಾವುದೇ ಸಮಾರಂಭಗಳಲ್ಲಿ ಮಲ್ಲಿಗೆ ತಂದೇ ತರುತ್ತಾರೆ. ವಧುವಿಗೆ ಮಲ್ಲಿಗೆ ಮುಡಿಸಿದರೇನೇ ಚೆನ್ನ ಕಾಣೋದು. ಅಷ್ಟೇ ಅಲ್ಲ, ತಲೆಯಲ್ಲಿ ಆ ಮಲ್ಲಿಗೇನ ನೋಡೋದು ಕಣ್ಣಿಗೆ ಒಂಥರಾ ಹಬ್ಬ.

ಅದೇ ಮೊನ್ನೆ ನಾನು ಊರಿಗೆ ಹೋದನ್ನಲ್ಲಾ..ಬೆಂಗಳೂರಿಗೆ ವಾಪಾಸು ಬರುವಾಗಲೂ ಮಲ್ಲಿಗೆ ತಕೋ ಬಂದೆ. ಇತರ ಮಲ್ಲಿಗೆಗಳಿಗಿಂತ ಇದು ದುಬಾರಿ. ಮನೆಯಿಂದ ಹೊರಟು 10 ಗಂಟೆ ಪ್ರಯಾಣಿಸಿದವಳು ಮಲ್ಲಿಗೇನ ಜೋಪಾನವಾಗಿ ತಕೊಂಡು ಬಂದೆ. ಇಡೀ ಬಸ್ಸೇ ಘಮ್ಮೆನ್ನುತ್ತಿತ್ತು.
ಮಲ್ಲಿಗೆ ತಂದ್ರೆ ಬೆಂಗಳೂರಿನ ನಮ್ಮನೆ ಬಿಡೀ ಇಡೀ ಬಿಲ್ಡಿಂಗೇ ಘಮ್ ಅನ್ನಬೇಕೇ? ಪಕ್ಕದ ಮನೆ ಆಂಟಿ ಬಂದು ಕೇಳಿದ್ರು...ತುಂಡು ಮಾಡಿ ಕೊಟ್ಟೆ. ಅವರ ಮಕ್ಜಳು, ಮರಿಗಳೆಲ್ಲಾ ಮುಡಿದ್ರು. ನಾಲ್ಕು ಮನೆಗೆ ಹಂಚಿದೆ. ಎಲ್ರ ಬಾಯಲ್ಲೂ ಮಂಗ್ಳೂರ ಮಲ್ಲಿಗೆ. ನಮ್ಮನೆ ಓನರ್ ಆಂಟಿಯ ಖುಷಿಗಂತೂ ಸರಿಸಾಟಿ ಏನೂ ಇರಲಿಲ್ಲ. ಅಷ್ಟು ಖುಷಿಯಾಗಿಬಿಟ್ರು. ಎಲ್ಲರಿಗೆ ಹಂಚಿ ಪುಟ್ಟದೊಂದು ತುಂಡು ಉಳಿಯಿತು. ದೇವರ ಫೋಟೋಗೆ ಹಾಕಿ ಮಲಗುವಾಗ ಮುಡಿದುಕೊಂಡೇ ಮಲಗಿದೆ.

ಹಂಗೇ ನಮ್ಮೂರ ಮಲ್ಲಿಗೆ ಅಂದ್ರೆ ತುಂಬಾ ಚಂದ..ನೋಡಕ್ಕೂ ಮುಡಿಯಕ್ಕೂ. ನೀವು ನೋಡಿದ್ರೂನೂ ಇಷ್ಟಪಡ್ತೀರ..ತುಂಬಾ ಪ್ರೀತಿ ಮಾಡ್ತೀರಾ!

Thursday, August 6, 2009

ಮಮತೆಯಲ್ಲಿ ತೊಯ್ದುಬಿಡು..ಬದುಕು ಶರಧಿಯಾಗಲಿ.

ಪ್ರೀತಿಯ ಅಣ್ಣ....
ರಾಖಿ ಹಬ್ಬದ ಶುಭಾಶಯಗಳು.

ಹೌದು, ನೀನಂದ್ರೆ ಪ್ರೀತಿ, ನೀನಂದ್ರೆ ಭಯ, ನೀನಂದ್ರೆ ಗೌರವ, , ನೀನಂದ್ರೆ ಅಮ್ಮ, ನೀನಂದ್ರೆ ಗೆಳೆಯ,..ಹೀಗೆ ಬದುಕಿನ ಸಮಸ್ತ ಬಾಂಧವ್ಯಗಳನ್ನು ಒಟ್ಟೊಟ್ಟಾಗೇ ನೀಡಿದವ. ಒಡಹುಟ್ಟಿದವ ಅಲ್ಲದಿದ್ದರೂ ಒಡನಾಡಿ ಆದವ. ನನ್ನ ಜೊತೆಗೇ ಹೆಜ್ಜೆಹಾಕಿದವ. ನಾನು, ನನ್ನ ಬದುಕನ್ನು ,ಪ್ರೀತಿಸೋಕೆ ಕಲಿಸಿದವ. ಬೆಳದಿಂಗಳ ತಂಪಿನಲ್ಲಿ ಕುಳಿತು ಅಜ್ಜಿ ಕಥೆ ಹೇಳಿದವ. ಶಾಲೆಗೆ ಹೋಗದೆ ರಚ್ಚೆ ಹಿಡಿದಾಗ ಗದರಿಸಿ, ಶಾಲೆಗೆ ಕಲಿಸಿದವ. ಸಮಸ್ತರನ್ನೂ ಪ್ರೀತಿಸು, ಯಾರನ್ನೂ ಪ್ರೇಮಿಸಬೇಡ ಎಂದು ಬುದ್ಧಿಮಾತು ಹೇಳಿದವ ನೀನು ನನ್ನಣ್ಣ. ನಿದ್ದೆ ಬಾರದಿದ್ದಾಗ ಅಮ್ಮನಂತೆ ಲಾಲಿ ಹಾಡಿದವ. ಅತ್ತಾಗ ನಿನ್ನೆದೆಯ ಪ್ರೀತಿಯ ಮಡಿಲಲ್ಲಿ ಮಲಗಿಸಿ ಸಂತೈಸಿದವ ನೀನು ನನ್ನಣ್ಣ. ಚೆನ್ನಾದ ಡ್ರೆಸ್ ಕೊಡಿಸು, ಬಳೆ ಕೊಡಿಸು, ಕಿವಿಯೋಳೆ ಕೊಡಿಸು ಎಂದಾಗ ಏನೂ ಅನ್ನದೆ ತೆಗೆದುಕೊಟ್ಟವ. ಕೈತುಂಬಾ ಬಳೆ, ತಲೆತುಂಬಾ ಮಲ್ಲಿಗೆ ಮುಡಿಸಿ ನನ್ನ ತಂಗಿ ಎಷ್ಟು ಚೆಂದ ಕಾಣ್ತಾಳೆ ಅಂತ ಹೆಮ್ಮೆ ಪಟ್ಟವ ನೀನು ನಂಗೆ ದೇವ್ರು ಕೊಟ್ಟ ಅಮೂಲ್ಯ ಉಡುಗೊರೆ ಗೊತ್ತಾ? ನಿನ್ನ ಪ್ರೀತಿಯನ್ನು ಮೀರಿ ನಡೆದಾಗ ಕಂಗಳು ಹನಿಗೂಡಿಸಿದವ. ಸುತ್ತಲ ಜಗತ್ತಿನ ಸತ್ಯ-ಮಿಥ್ಯಗಳ, ನೋವು-ನಲಿವುಗಳ ಅರಿವಾಗಿಸಿದವ. ಒಂದು ರೂ.ಗೂ ಅಮೂಲ್ಯ ಬೆಲೆಯಿದೆ ಎಂದು ತಿದ್ದಿತೀಡಿದವ.

ನನಗೆ ಇಷ್ಟದ ತಿಂಡಿ ತಂದುಕೊಟ್ಟು ನನ್ನ ಇನ್ನೂ ಡುಮ್ಮಿಯಾಗಿಸಿದವ. ಆಫೀಸ್ ನಲ್ಲಿ ಬಾಸ್ ಬೈದರೆಂದು ಮನೆಯ ಮೂಲೆಯಲ್ಲಿ ಕುಳಿತು ಅತ್ತಾಗ ಹೆದರಿಕೋಬೇಡ, ಸಹನೆಯಿಂದಿರು ಎಂದು ಸಮಾಧಾನ ಮಾಡಿದವ . ಕಾಲದ ತೆಕ್ಕೆಯಲ್ಲಿ ನೋವಿಗೆ ಬಲಿಯಾಗುವಾಗ ನೋವನ್ನೇ ನಲಿವಾಗಿಸಿದವ. ಪೇಟೆ, ಹಳ್ಳಿ, ಶಾಪಿಂಗ್ ಮಾಲ್ ಸುತ್ತಾಡಿಸಿದವ. ಅಮ್ಮ ಜೊತೆಗಿಲ್ಲದಾಗ ಅಮ್ಮನಾದವ. ನನ್ನ ಭವಿಷ್ಯದ ಕನಸುಗಳ ದೊಡ್ಡ ಗೋಪುರವನ್ನೇ ಕಟ್ಟಿಸಿದವ. ನನ್ನ ಹುಸಿಮುನಿಸು ಮುಂಗೋಪ, ಅಸಹನೆಯಂಥ ದೌರ್ಬಲ್ಯಗಳೊಂದಿಗೆ ರಾಜಿ ಮಾಡಿಕೊಂಡು ತಪ್ಪನ್ನು ತಿದ್ದಿ ತೀಡಿದವ. ನನ್ನ ಮೇಲೆ ಸಿಟ್ಟು ಬಂದರೂ ಒಂದೇ ಒಂದು ಸಲ ನನಗೆ ಕೈ ಎತ್ತದವ. ನಿತ್ಯ ಪುಟ್ಟಾ ಪುಟ್ಟಾ ಎನ್ನುತ್ತಾ ನನ್ನ ಪುಟ್ಟ ಬದುಕಿನಲ್ಲಿ ಪ್ರೀತಿಯ ಮಳೆ ಕರೆದವ ನೀನು ನನ್ನಣ್ಣ. ನನ್ನೊಳಗಿನ ಪುಟ್ಟ ಪ್ರತಿಭೆಗಳಿಗೆ ನೀರೆರೆದು ಪೋಷಿಸಿದವ ನೀನು ನನ್ನಣ್ಣ.

ಅಣ್ಣಾ...
ನೀ ಜೊತೆಗಿದ್ರೆ ನಂಗೆ ಖುಷಿ, ನೆಮ್ಮದಿ, ಸಂಭ್ರಮ ಎಲ್ಲಾನೂ. ನೆಮ್ಮದಿ, ಖುಷಿ ಇದ್ರೆ ಅಷ್ಟೇ ಸಾಕಲ್ವಾ ಹೇಳು. ಕೆಲಸದೊತ್ತಡದಿಂದ ತಡವಾಗಿ ಪತ್ರ ಬರೀತಾ ಇದ್ದೀನಿ. ನಂಗೆ ಬೆಟ್ಟದಷ್ಟು ಪ್ರೀತಿ ನೀಡಿ, ನನ್ನ ತಿದ್ದಿ ತೀಡಿದ ನೀನೂ ನಂಗೆ ಅಮ್ಮ. ಮೊನ್ನೆ ರಕ್ಷಾಬಂಧನ. ಹೌದು, ನನಗೆ ನೀನೇ ನಿತ್ಯ 'ರಕ್ಷಾಬಂಧನ'. ನಿತ್ಯ ಅಮ್ಮನ ಮಮತೆಯಲ್ಲಿ ನೀನು ನನ್ನ ತೊಯ್ದುಬಿಡು. ಬದುಕು 'ಶರಧಿ'ಯಾಗುತ್ತದೆ ಅಲ್ವಾ? ನೀನು ಖುಷಿಯಾಗಿರು..ಆ ಖುಷಿಯಲ್ಲಿ ನಂಗೊಂದು ಪುಟ್ಟ ತುಣುಕು ನೀಡು. ನಿಂಗೆ ದುಃಖವಾದ್ರೆ ನೀನೊಬ್ನೇ ಸಹಿಸಬೇಡ. ನಂಗೂ ಸಮಪಾಲು ಕೊಡು. ನಾನೂ ನಿನಗೆ 'ಅಮ್ಮ'ನಾಗುತ್ತೇನೆ. ಮತ್ತೊಮ್ಮೆ ರಾಖಿ ಹಬ್ಬದ ಶುಭಾಶಯಗಳು ಕಣೋ.
ತಡವಾಗಿ ಪತ್ರ ಬರೆದಿದ್ದಕ್ಕೆ ಕ್ಷಮೆಯಿರಲಿ.
ಇಂತೀ,
ನಿನ್ನ ತಂಗಿ

Sunday, July 26, 2009

ನೆನಪುಗಳ ಜೊತೆಗೆ ಒಂದಿಷ್ಟು ಹೊತ್ತು...


ನೀ ನೀಡಿದ 'ಹಿಡಿಪ್ರೀತಿ'ಯ ನೆನಪು.
ಅಮ್ಮನಂತೆ ಸಂತೈಸಿದ ನಿನ್ನ ನುಣುಪು ಕೈಗಳ ನೆನಪು

ನನ್ನ ಕಾಲ್ಗೆಜ್ಜೆ ಸದ್ದಿಗೆ ದನಿಗೂಡಿಸಿದ ನಿನ್ನ ಹೃದಯದ ನೆನಪು.

ನಿನ್ನ ಪ್ರೀತಿಯ ಜೋಗುಳಕ್ಕೆ ನಿದ್ದೆಯ ಮಂಪರಿಗೆ ಜಾರಿದ ನೆನಪು

ನನ್ನ ಕಣ್ಣುಗಳಲ್ಲಿ ಬೆಳಕು ಮೂಡಿಸಿದ ಆ ನಿನ್ನ ಪ್ರೀತಿಯ ಕಂಗಳ ನೆನಪು

ನೀತೊಡಿಸಿದ ಕೈ ಬಳೆ, ಮುಡಿಸಿದ ಘಮ್ ಎನ್ನುವ ಮಲ್ಲಿಗೆಯ ನೆನಪು.

ನಿನ್ನ ಜೊತೆ ದೇವರೆದುರು ಮಂಡಿಯೂರಿ ನಮಿಸಿದ ನೆನಪು

ನಿನ್ನ ಹೆಸರಿನಲ್ಲಿ ದೇವರಿಗೆ ಹಣ್ಣುಕಾಯಿ ಮಾಡಿಸಿದ ನೆನಪು
ನಿನ್ನ ಮಡಿಲಲ್ಲಿ ಪ್ರೀತಿಯ ಅನನ್ಯತೆಯನ್ನು ಸವಿದ ನೆನಪು

ಮನತುಂಬಾ ಕನಸುಗಳನ್ನು ಹೊತ್ತು ನಿನ್ನ ಜೊತೆ ದಾರಿಗುಂಟ ಸಾಗಿದ ನೆನಪು
ನಿನ್ನ ಕಂಗಳಲ್ಲಿ ಕಣ್ಣಿಟ್ಟು 'ನೀ ನನ್ನ ಜೊತೆಗಿರ್ತೀಯಾ?' ಎಂದು ಭರವಸೆಯಿಂದ ಕೇಳಿದ ನೆನಪು.
ಜ್ವರದಿಂದ ನರಳುತ್ತಿರುವಾಗ ತುತ್ತು ಬಾಯಿಗಿಟ್ಟು ಅಮ್ಮನ ವಾತ್ಸಲ್ಯ ತೋರಿದ ನಿನ್ನ ವಿಶಾಲ ಮನದ ನೆನಪು

'ನಂಗ್ಯಾರಿಲ್ಲ' ಎಂದು ನಿನ್ನೆದೆಯಲ್ಲಿ ಅತ್ತಾಗ 'ನಾನಿದ್ದೇನೆ' ಎಂದು ಬದುಕಿನ ಧೈರ್ಯ ತುಂಬಿದ ನಿನ್ನ ದಿಟ್ಟ ಹೃದಯದ ನೆನೆಪು.!

Thursday, July 23, 2009

ಚೆಂದದ ಕಾರ್ಯಕ್ರಮಕ್ಕೆ ನೀವೂ ಬನ್ನಿ..


ಇದೇ ಬರುವ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಚೆಂದದ ಕಾರ್ಯಕ್ರಮವೊಂದು ಇದೆ. ಅಲ್ಲಿಗೆ ನೀವೂ ಬಂದ್ರೆ ಇನ್ನೂ ಮೆರುಗು. ಬರ್ತೀರಲ್ಲಾ...
-ಚಿತ್ರಾಕರ್ಕೇರಾ

Thursday, July 9, 2009

ಜಿನುಗು ಮಳೆಗೆ, ಚುಟುಕ ಹನಿಗಳು...

ನಿನ್ನೆಯ ಜಿನುಗು ಮಳೆಗೆ ನನ್ನ ಪುಟ್ಟ ಮನೆಯಲ್ಲಿ ಕುಳಿತಾಗ ಯಾವುದೋ ಪುಸ್ತಕ ಓದುತ್ತಿದ್ದಂತೆ ಚುಟುಕ ಕವಿ ದಿನಕರ ದೇಸಾಯಿ ಅವರ ಚುಟುಕುಗಳು ಕಣ್ಣಿಗೆ ಬಿದ್ದವು. ಓದುತ್ತಿದ್ದಂತೆ ಮಳೆಗಾಲಕ್ಕೆಂದು ಅಮ್ಮ ಮಾಡಿಕೊಟ್ಟ ಹಪ್ಪಳ-ಸಂಡಿಗೆ ಮೆಲ್ಲೋ ಅನುಭವವಾಯ್ತು. ನಾನು ಓದಿದ್ದನ್ನು ನಿಮಗೂ ಉಣಬಡಿಸಿದ್ದೇನೆ. ಪುರುಸೋತ್ತು ಇದ್ರೆ ಓದಿಕೊಳ್ಳಿ. ಬೆಂಗಳೂರಿನ ಜಿಟಿಜಿಟಿ ಮಳೆ, ಚುಮುಚುಮು ಚಳಿಗೆ ನಿಮಗೂ ಹಪ್ಪಳ-ಸಂಡಿಗೆ ತಿಂದಂತಾಗಬಹುದೇನೋ...?

"ಬಿಸಿನೆಲದಲ್ಲಿ ತುಸು ಹಸಿಯಾಯ್ತು
ಬಿತ್ತಿದ ನೆಲದ ಬೀಜವು ಸಸಿಯಾಯ್ತು
ಸಸಿ ದೊಡ್ಡಗಾಗಲು ತೆನೆಯಾಯ್ತು
ತೆನೆಯೇ ದೇವರ ಮನೆಯಾಯ್ತು"

"ಬೆಳೆಯೇ ಭೂಮಿಯು ಬಂಗಾರ
ಬೆಳೆಯೇ ದೇವರ ಅವತಾರ"

"ಬಾಯಿಗಿಲ್ಲವೆಂದು ತುತ್ತು
ನಿನ್ನ ಕಣ್ಣಮುಂದೆ ಅತ್ತು
ಹೋದರೆನಿತೋ ಮಂದಿ ಸತ್ತು
ನೀನು ಸತ್ತರೇನು ಕುತ್ತು"

"ಜೋ ಜೋ ಜೋ ಜೋ ನನ ತಂಗಿ
ಜೋಗುಳ ಹಾಡುವೆ ರಸರಂಗಿ"


"ಕಟ್ಟಿದರೆ ಅನುಭವದ ತಳಹದಿಯ ಮೇಲೆ
ಕೊನೆಯವರೆಗೂ ನಿಲುವುದು ಕವಿಯ ಲೀಲೆ
ಇಟ್ಟಂಗಿಯಾಗಲಿ ಮಾತು ಕೃತಿಯೊಂದು
ಸರಿಯಾದ ಜಾಗದೊಳಗಿರಲಿ ಒಂದೊಂದು"

"ಲಾಭದಾಯಕವಲ್ಲ ಕವಿಯ ಬೇಸಾಯ
ಕಾಡಿನಲ್ಲಿ ಕೃಷಿ ಮಾಡಿದಂತೆ ಮಾರಾಯ"

"ಎಲೆಕವಿಯೇ ನಿನಗೇಕೆ ನರನ ಬಹುಮಾನ
ಕಾಲರಾಯನು ಕೇಳುವನು ನಿನ್ನ ಗಾನ
ಮೊದಲು ಸಿಗಬೇಕೆಂದು ಕೈಮುಗಿಯಬೇಡ
ತಲೆಬಾಗಿಸಿದರೆ ಕವಿ, ಕವಿಯುವುದು ಮೋಡ"

"ಕಾವ್ಯವೆಂಬುವುದು ಜಾಣತನವಲ್ಲ ಹುಚ್ಚು
ತೀವ್ರವಾದರೆ ಹುಚ್ಚು ಕವಿಯ ಬೆಲೆ ಹೆಚ್ಚು"

"ತರಕಾರಿ ಎಂಬುವುದು ಅಲ್ಲ ಬರಿ ಬದನೆ
ಕಾವ್ಯವೆಂಬುವುದು ಅಲ್ಲ ಬರಿ ಶಬ್ಧ ರಚನೆ
ಪ್ರತಿಯೊಂದು ಶಬ್ಧದೊಳಗಿರಬೇಕು ಪಾಕ
ಈ ಪಾಕ ಎನ್ನುವುದು ಅನುಭವದ ಲೋಕ"

Friday, July 3, 2009

ಬೆಂಗಳೂರು ನನ್ನ ಪ್ರೀತಿಸಿದೆ, ಆದರೆ ಅಮ್ಮನಷ್ಟು ಅಲ್ಲ!

ಜುಲೈ 2, 2006!
ಭಾನುವಾರ.


ಮೊತ್ತಮೊದಲ ಬಾರಿಗೆ ಬೆಂಗಳೂರೆಂಬ ಮಹಾನಗರಿಗೆ ಕಾಲಿಟ್ಟ ದಿನ. ನಮ್ಮೂರಿಂದ ಶಿರಾಡ್ ಘಾಟ್ ದಾಟಿದ್ದು ಅದೇ ಮೊದಲು. ತುಮಕೂರು ರಸ್ತೆ ಸಮೀಪಿಸುತ್ತಿದ್ದಂತೆ ದೊಡ್ಡ ದೊಡ್ಡ ಟ್ಯಾಂಕರ್ ಗಳು ಕಣ್ಣಿಗೆ ಬೀಳುತ್ತಿರುವಾಗ ಇದೇನಾ ಬೆಂಗಳೂರು? ಅಂತ ಭಯ, ಗೊಂದಲ. ಯಾಕಪ್ಪಾ ಬಂದೇ ಈ ಊರಿಗೆ? ಅಂತ ಕಣ್ತುಂಬ ನೀರು ತುಂಬಿಕೊಂಡಿದ್ದೆ. ಊರಿಂದ ಕರೆದುಕೊಂಡು ಬಂದಿದ್ದ ಅಣ್ಣ, ಮೊದಲು ಹಂಗೆ ಅನಿಸೋದು..ಆಮೇಲೆ ಎಲ್ಲಾ ಸರಿಹೋಗುತ್ತೆ ಅಂತ ಸಮಾಧಾನಿಸ್ತಾ ಇದ್ರೆ..ಬಸ್ಸಲ್ಲಿ ಕುಳಿತು ಹೊರ ಜಗತ್ತನ್ನು ನೋಡುತ್ತಿದ್ದ ನನ್ನ ಕಣ್ಣುಗಳಲ್ಲಿ ಬರೇ ನೀರಷ್ಟೆ ತುಂಬಿಕೊಂಡಿತ್ತು. ಒಂದು ಪುಟ್ಟ ಸೂಟುಕೇಸ್ ಜೊತೆಗೆ ಒಂದು ಪುಟ್ಟ ಬ್ಯಾಗ್ ಜೊತೆಗೆ ಮೆಜೆಸ್ಟಿಕ್ ನ ಜನಜಂಗುಳಿ ನಡುವೆ ಬಂದು ನಿಂತಾಗ ಜುಲೈ 2, ಮುಂಜಾವು. ಪರವೂರಿಂದ ರೈಲಿನಲ್ಲಿ, ಬಸ್ಸಿನಲ್ಲಿ ಬಂದು ಇಳಿದ ಕೂಲಿಕಾರ್ಮಿಕರು. ಪುಟ್ ಪಾತ್ ನಲ್ಲೇ ಬದುಕು ಕಾಣೋರು, ಬಸ್ ಸ್ಟಾಂಡಿನ ಕಲ್ಲುಬೆಂಚಿನ ಮೇಲೆ ಮಲಗಿದೋರು, ಸಿಕ್ಕಲೆಲ್ಲಾ ಮೂತ್ರ ಮೂಡೋರು, ಜೊತೆಗೆ ಮೆಜೆಸ್ಟಿಕ್ ನಲ್ಲಿ ಮೂಗಿಗೆ ಬಡಿಯೋ ಕೆಟ್ಟ ವಾಸನೆ, ಹುಚ್ಚರು, ಅರೆಹುಚ್ಚರು, ಹಸಿದವರು, ಹೊಟ್ಟೆ ತುಂಬಿದೋರು, ಬದುಕಿದವರು, ಬದುಕಿಗಾಗಿ ಹೋರಾಡುವವರು,.....ಹೀಗೇ 'ಮೆಜೆಸ್ಟಿಕ್' ಬದುಕಿನ ನಾನಾ ಸತ್ಯಗಳಿಗೆ ತನ್ನನ್ನು ತೆರೆದುಕೊಳ್ಳುತ್ತಾ ನಿಂತಿದ್ದನ್ನು ನೋಡುತ್ತಾ ಮೂಖಳಾಗಿದ್ದೆ.

ಅಲ್ಲಿಂದ ಜಯನಗರ ಬಸ್ ಹತ್ತಿದ್ರೆ..ಜಯನಗರ ಅಂದ್ರೆ ಬಸ್ ಕಂಡಕ್ಟರ್ ಗೆ ಅರ್ಥವಾಗೊಲ್ಲ. ಜಯನಗರದಲ್ಲಿ ತುಂಬಾ ಬ್ಲಾಕ್ ಗಳಿವೆ ...ಅಂದಾಗ ಮತ್ತೊಂದು ಸಲ ಹೋಗಬೇಕಾದ ಸ್ಥಳ ಕನ್ ಫಾರ್ಮ್ ಮಾಡಿಕೋಬೇಕಾಯಿತು. ಜಯನಗರ ನಾಲ್ಕನೇ ಬ್ಲಾಕ್ ನಲ್ಲಿರುವ ಬ್ಯಾಂಕ್ ಆಫ್ ಬರೋಡಾ ಎಟಿಎಂ ಬಳಿ ಬಸ್ಸಿಂದಿಳಿದು ಬಸ್ ಸ್ಟಾಂಡ್ ಎಲ್ಲಿ ಅಂತ ಹುಡುಕಾಕೆ ನಾಲ್ಕು ರೌಂಡು ಹಾಕಿಸಿದ ಅಟೋದವನಿಗೆ 30 ರೂ. ಕೊಟ್ಟು ಇಳಿದಾಗ ಬಸ್ ಸ್ಟಾಂಡ್ ಅಲ್ಲೇ ಹತ್ತಿರದಲ್ಲಿತ್ತು!!

ಬೆಂಗಳೂರು..! ಬಂದೇ ಬಿಟ್ಟೆ..ಎಕ್ಸಾಮ್ ಹಾಲ್ ನಿಂದ ನೇರವಾಗಿ ಬೆಂಗಳೂರಿಗೆ ಬಿದ್ದುಬಿಟ್ಟೆ. ಕೈಯಲ್ಲಿ ಮೊಬೈಲ್ ಇಲ್ಲ..ಸಿಕ್ಕ ಕಾಯಿನ್ ಬೂತ್ ಗಳಿಗೆ ಕಾಯಿನ್ ಹಾಕಿ ಅತ್ತು ಅತ್ತು ದಿನಾ ಮುಖ ಊದಿಸಿಕೊಳ್ಳೋದೇ ಆಗಿತ್ತು. ಯಾಕಾದ್ರೂ ಬೆಂಗಳೂರಿಗೆ ಬಂದೆ ವಾಪಾಸ್ ಹೋಗೋಣ ಅಂದ್ರೆ ಆ ಧಮ್ ನಂಗಿಲ್ಲ, ಭಯ. ಹೊರಗಡೆ ಜನರ ಮುಖ ನೋಡೋಕೆ ಭಯವಾಗ್ತಿತ್ತು. ಹಾಸ್ಟೇಲ್ ನಲ್ಲಿದ್ರೂ ಗುಬ್ಬಚ್ಚಿ ಥರ ಇದ್ದ ನಂಗೆ ಈ ಬೆಂಗಳೂರು ಮೈಚಳಿ ತರಿಸಿಬಿಟ್ಟಿತ್ತು. ಬಂದ ಮೊದಲ ದಿನ ಬನಶಂಕರಿಗೆ ಅಣ್ಣ ಜೊತೆ ಹೋಗಿದ್ದೆ. ನಾನು ರಸ್ತೆ ದಾಟಬೇಕಾದ್ರೆ ವಾಹನಗಳೆಲ್ಲಾ ಹೋಗಿ ರಸ್ತೆ ಖಾಲಿಯಾಗಲೀ..ಅಂತ ಕಾಯ್ತಾ ನಿಂತಿದ್ದೆ. ಆಮೇಲೇ ಆರಾಮವಾಗಿ ದಾಟೋಣ ಅಂತ. ಆದ್ರೆ ಈ ಬೆಂಗಳೂರಲ್ಲಿ ಖಾಲಿರಸ್ತೆಗಳನ್ನು ಕಾಣೋದೆಲ್ಲಿ? ಅಣ್ಣ ಕೈ ಹಿಡಿದು ಬೈಕೊಂಡು ಎಳೆದುಕೊಂಡು ಹೋಗುವಾಗ ಭಯದಿಂದ ಅತ್ತೆಬಿಟ್ಟಿದ್ದೆ. ಹೋದಲೆಲ್ಲಾ ಸಿಗ್ನಲ್ ಗಳು..ಜನರ ಬೊಬ್ಬೆ, ಗದ್ದಲ...ಅಸಹ್ಯವಾಗಿಬಿಟ್ಟಿತ್ತು. ಸೂರ್ಯ ಮುಳುಗೋ ಹೊತ್ತಿಗೆ ಮನೆ ಸೇರದಿದ್ರೆ ಹೆದರಿಕೆ. ಸುಮಾರು ಆರು ತಿಂಗಳು ಬೇಕಾಯಿತು...ಈ ಬೆಂಗಳೂರಿಗೆ ಹೊಂದಿಕೊಳ್ಲೋಕೆ. ಮೂರ್ನಾಲ್ಕು ತಿಂಗಳಲ್ಲಿ ಹೊಟ್ಟೆಪಾಡಿಗೊಂಡು ಕೆಲ್ಸ ಸಿಕ್ಕು, ಮೂರು ವರ್ಷದಲ್ಲಿ ಒಂದು ಆಫೀಸು ಬದಲಾಯಿಸಿದ್ದೀನಿ. ಮೂರು ವರ್ಷದಲ್ಲಿ ಎಂಥೆಂಥವರನ್ನೂ ಕಂಡೆ. ನಮ್ಮಲ್ಲಿರುವ 'ಒಳ್ಳೆತನ, ಮುಗ್ದತೆ' ಬಳಸಿಕೊಂಡು ಬದುಕುವವರು, ಮೋಸಗಾರರು, ವಂಚಕರು, ಕೊಲೆಗಡುಕರು, ಒಳ್ಳೆಯವರು/ ಕೆಟ್ಟವರು ಎಲ್ಲರನ್ನೂ ನೋಡಿದೆ. ಬಹುಶಃ ನಮ್ಮೂರ ಹಸಿರ ಮಧ್ಯೆ ಇರುವ ನಮ್ಮ ಪುಟ್ಟ ಮನೆಯಲ್ಲಿ ಕುಳಿತಿರುತ್ತಿದ್ರೆ ಬಹುಶಃ ಇದನ್ನೆಲ್ಲಾ ನೋಡುತ್ತಿರಲಿಲ್ಲ ಎಂದನಿಸುತ್ತೆ.

ಹೌದು, ನಿನ್ನೆ ಇದ್ದಕಿದ್ದಂತೆ ನೆನಪಾಯಿತು. ಇಲ್ಲಿ ಬಂದು ಮೂರು ವರ್ಷವಾಯಿತು. ನಿಜವಾಗ್ಲೂ ಅಚ್ಚರಿಪಟ್ಟೆ. ಅಷ್ಟು ಪುಕ್ಕಲುತನ ವಿದ್ದೋ ಹುಡುಗಿ ನಾನೇನಾ? ಅನಿಸ್ತು. ಹೌದು ಬದಲಾಗಿದ್ದೇನೆ..ಒಂಚೂರು ಹೆದರಿಕೆ, ಭಯ ಎಲ್ಲನೂ ಹೋಗಿದೆ. ನಾಲ್ಕು ಜನರೆದುರು ಮಾತಾನಾಡೋ ಧೈರ್ಯ ಬಂದಿದೆ. ಅಡುಗೆ ಮನೆ ಹೊಕ್ಕದವಳು ಇಲ್ಲಿಯ ಪುಟ್ಟ ಅಡುಗೆ ಮನೇಲಿ ನಂಗೆ ಬೇಕಾದಷ್ಟಾದರೂ ಮಾಡಿಕೊಂಡು ತಿನ್ನೋಕೆ ಕಲಿತೆ. 'ಬದುಕುವವರ' ನಡುವೆ ಹೇಗೆ 'ಬದುಕಬೇಕು' ಅನ್ನೋದನ್ನು ಕಲಿತೆ. ಬೆಂಗಳೂರನ್ನು ಪ್ರೀತಿಸಿದೆ..ಬೆಂಗಳೂರೂ ನನ್ನನ್ನು ಪ್ರೀತಿಸಿದೆ..ಆದರು ನನ್ನ ಅಮ್ಮನಷ್ಟು ಅಲ್ಲ! ದುಡಿಯೋಕೆ ಕಲಿತಿದ್ದೇನೆ..ಹೌದು, ಬೆಂಗಳೂರು ಎಲ್ರಿಗೂ ಅನ್ನ ನೀಡುತ್ತೆ. ಬದುಕೋಕೆ ಕಲಿತವನು ಮಾತ್ರ ಇಲ್ಲಿ ಸಲ್ಲುತ್ತಾನೆ ಅನ್ನೋದನ್ನೂ ತಿಳ್ಕೊಂಡೆ.

ಹೌದು...ನಿಮ್ ಜೊತೆ ಹೇಳಿಕೋಬೇಕಾನಿಸ್ತು...ಹೇಳಿಬಿಟ್ಟೆ. ಹಾಗೇ ನೋಡಿದ್ರೆ ಹೇಳಕ್ಕೆ ತುಂಬಾ ಇದೆ..ಇನ್ನೊಂದ್ಸಲ ಹೇಳ್ತೀನಿ..ಬೋರ್ ಆದ್ರೆ ಸಾರಿ..