ಅಂದು ರಜಾದಿನ. ಮನೆಯಂಗಳವನ್ನು ತುಂತುರು ಮಳೆಹನಿಗಳು ಮುತ್ತಿಕ್ಕುತ್ತಿದ್ದವು. ಮೋಡ ಕವಿದ ಬಾನಂಗಳದಿ ಸೂರ್ಯನೂ ಮಸುಕಾಗಿದ್ದ. ಸಂಜೆಯ ಹೊತ್ತು ಒಬ್ಬಳೇ ಟಿವಿ ಎದುರು ಕುಳಿತು ಅದಾವುದೋ ಸಿನಿಮಾ ನೋಡುತ್ತಿದ್ದಂತೆ ಆ ಪುಟ್ಟ ಹುಡುಗಿ ನೆನಪಾದಳು. ಹಸಿರು ಲಂಗಧಾವಣಿ ಉಟ್ಟ ಆ ಮುಗ್ಧ ಹುಡುಗಿಯ ಮುಖ ಕಣ್ಣೆದುರು ಬಂತು. ಬೆಟ್ಟದಷ್ಟು ಕನಸುಗಳನ್ನು ಕಂಗಳಲ್ಲಿ ತುಂಬಿಕೊಂಡ, ಆಗತಾನೇ ಭವಿಷ್ಯ ಬದುಕಿನ ಕುರಿತು ಯೋಚಿಸುತ್ತಿದ್ದ ಆ ಚೆಂದದ ಹುಡುಗಿ ನೆನಪಾಗುತ್ತಿದ್ದಂತೆ ಅದೇಕೋ ನನ್ನ ಕಣ್ಣುಗಳೂ ಮಂಜಾದವು. ಹೃದಯ ಚಿರ್ರನೆ ಚೀರಿತ್ತು.
ಹೌದು,ಆಗ ನಾನು ಒಂಬತ್ತನೇ ತರಗತಿ. ಮಂಗಳ ವಾರಪತ್ರಿಕೆಯನ್ನು ಎಡೆಬಿಡದೆ ಓದಿ ಪರೀಕ್ಷೆಗಿಂತಲೂ ಧಾರವಾಹಿಗಳಿಗೆ ತಲೆಕೆಡಿಸಿಕೊಳ್ಳುತ್ತಿದ್ದ ದಿನಗಳು. ಮೇಷ್ಟ್ರು ಪಾಠ ಮಾಡುತ್ತಿರುವಾಗಲೇ ಡೆಸ್ಕಿನ ಸಂದಿಯಲ್ಲಿ ಮಂಗಳವಾರಪತ್ರಿಕೆ ಓದಿ ಎಷ್ಟೋ ಸಲ ಮೇಷ್ಟ್ರ ಕೆಂಗಣ್ಣಿಗೆ ಗುರಿಯಾಗಿ, ಹೆಡ್ ಮಾಸ್ತರ ಚೇಂಬರ್ ಗೆ ಬೈಗುಳ ತಿಂದ ದಿನಗಳು.
ಅದೊಂದು ಶನಿವಾರ ಮಂಗಳ ತಂದಂತೆ ಆ ಹುಡುಗಿಯ ಬಗ್ಗೆ ಯಾರೋ ಒಂದು ಪುಟ ಗೀಚಿದ್ದರು. ಅವಳು ಕಾಲೇಜು ಹುಡುಗಿ. ತನ್ನ ಓರಗೆಯ ಹುಡುಗನ್ನೊಬ್ಬ ಆ ಹುಡುಗಿಗೆ ಆಸೀಡ್ ಎಸೆದು ಮುಖವೆಲ್ಲಾ ಸುಟ್ಟು ಕರಲಾಗಿತ್ತು. ಪ್ರೀತಿಯನ್ನು ನಿರಾಕರಿಸಿದ್ದೇ ಇದಕ್ಕೆ ಕಾರಣ. ಆಸೀಡ್ ಎಸೆದ ನಂತರ ಅವಳ ಮುಖ ಹಾಗೂ ಇದಕ್ಕೂ ಮೊದಲು ಅವಳು ಆಡಿನಲಿಯುತ್ತಿದ್ದ ಪೋಟೋಗಳನ್ನು ನೀಡಲಾಗಿತ್ತು.ಆ ಪುಟ್ಟ ಹುಡುಗಿಯ ಮೇಲೆ ಕನಿಕರ ತೋರಿ ಅದೆಷ್ಟೋ ದಾನಿಗಳು ನೋಟುಗಳನ್ನು ಅವಳ ಮುಂದೆ ಚೆಲ್ಲಿದ್ದರು. ಭೂಗತದೊರೆಯೊಬ್ಬ 50 ಸಾವಿರ ಘೋಷಿಸಿ ಜನರಿಂದ ಸೈ ಎನಿಸಿಕೊಂಡಿದ್ದು ಈಗಲೂ ನೆನಪಿದೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ದೇಹವಷ್ಟೇ ಉಳಿದಿತ್ತು. ಸುತ್ತಲಿನ ಜಗತ್ತನ್ನು ಕಾಣೋಕೆ, ನಮ್ಮಂತೆ ಸುತ್ತಲಿನ ಜಗತ್ತಿನ ಜೊತೆ ಆಟವಾಡೋಕೆ, ಖುಷಿಪಡೋಕೆ ಅವಳ ಕನಸು ತುಂಬಿದ ಕಣ್ಣುಗಳು ಉಳಿಯಲಿಲ್ಲ. ಭಾವನೆಗಳಿದ್ದರೂ, ಕನಸುಗಳಿದ್ದರೂ, ಜೀವನ ಪ್ರೀತಿ ಉಕ್ಕಿ ಹರಿಯುತ್ತಿದ್ದರೂ ಅವಳ ಸುತ್ತಲಿನ ಜಗತ್ತು ಮಾತ್ರ ಅವಳನ್ನು ಕುರುಡಿಯಂತೆ ಒಪ್ಪಿಕೊಂಡುಬಿಟ್ಟಿದೆ.ತನ್ನದಲ್ಲದ ತಪ್ಪುಗಳಿಗೆ ಆಕೆ ಬಲಿಯಾದಳು.
ಆ ಮಹಾಪಾಪಿ ಏನಾದ..ಗೊತ್ತಿಲ್ಲ. ಅವನ ಬದುಕಿಗೆ ಪೆಟ್ಟಾಗಿಲ್ಲ. ಅವನನ್ನು ಬಂಧಿಸುವ ಕೈಗಳಿಲ್ಲ, ಆತನಿಗೆ ಶಿಕ್ಷೆಯಾಗಲಿಲ್ಲ. ಅಂಥವರಿಗೆ ಶಿಕ್ಷೆಯಾಗಬೇಕು ಎಂದು ಒಕ್ಕೋರಲಿನಿಂದ ಕೂಗುವ, ಬೀದಿಯಲ್ಲಿ ನಿಂತು ಕೂಗಿ ಹೇಳುವ ದನಿಗಳು ನಮ್ಮಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅವಳೆದುರು, ಅವಳ ಭಾವನೆಗಳೆದುರು, ಅವಳ ಕನಸುಗಳೆದುರು ಕನಿಕರದಿಂದ ನೋಟುಗಳನ್ನು ಚೆಲ್ಲೋರು ಜಾಸ್ತಿ ಇದ್ರು.
ಬದುಕಬೇಕು ಅನ್ನೋ ಹಂಬಲ, ಬದುಕಿನ ಕುರಿತಾದ ಆಕೆಯ ಪ್ರೀತಿ, ಭವಿಷ್ಯದ ಕುರಿತಾದ ಆಕೆಯ ಭರವಸೆ ಅವಳನ್ನು ಇನ್ನೂ ಜೀವಂತವಾಗಿರಿಸಿದೆ. ಇನ್ನೂ ಬದುಕಿದ್ದಾಳೆ..ಸಮಾಜದ ಪಾಲಿಗೆ ಕುರುಡಿಯಂತೆ..ಆಕೆಯ ಪಾಲಿಗೆ 'ಭರವಸೆಯ ಕಿರಣ'ದಂತೆ!
ಬರೆದು ಮುಗಿಸುತ್ತಿದ್ದಂತೆ...
ಕರುಣಾಳು ಬಾ ಬೆಳಕೇ
ಮಸುಕಿದೀ ಮಬ್ಬಿನಲಿ...
ಕೈ ಹಿಡಿದು ನಡೆಸೆನ್ನನು...
ಎಂ.ಡಿ. ಪಲ್ಲವಿ ಧ್ವನಿಯಲ್ಲಿ ಇಂಪಾಗಿ ಕೇಳಿಬರುತ್ತಿತ್ತು.
Sunday, August 23, 2009
Subscribe to:
Post Comments (Atom)
7 comments:
ಚಿತ್ರಾ,
ನಿಜವಾದ ಪ್ರೀತಿಯಿದ್ದವನು, acid ಏಕೆ ಎರಚುತ್ತಾನೆ? ಆತ ಕೇವಲ ಕಾಮಾಂಧ. ಅಂಥವರಿಗೆ ಗಲ್ಲಿನ ಶಿಕ್ಷೆಯಾಗಬೇಕು. ಅವನ
ಆಸ್ತಿಯನ್ನು (ಏನಾದರೂ ಇದ್ದರೆ), ಜಪ್ತು ಮಾಡಿ ಈ ನತದೃಷ್ಟ ಹುಡುಗಿಗೆ ಕೊಡುವ ವ್ಯವಸ್ಥೆಯಾಗಬೇಕು. ನಮ್ಮ ಕಾನೂನುಗಳಲ್ಲಿ ಈ ತರಹದ ಬದಲಾವಣೆ ಬರುವದು ಅವಶ್ಯವಾಗಿದೆ.
chitra karkera,
good writing on matured topic.
carry on.
good luck.
ನೀನು ಎಲ್ಲೆಲ್ಲಿ೦ದಲೋ ನೆನಪುಗಳನ್ನು ಹುಡುಕಿತ೦ದು, ಅಕ್ಷರರೂಪದಲ್ಲಿ ಪೋಣಿಸಿಡುತ್ತೀಯ, ಅವುಗಳಲ್ಲಿ ಅಡಗಿರುವ ನೀತಿ, ಇ೦ದಿನ ಪರಿಸ್ಥಿತಿಗೆ ಹೊ೦ದುವ ವಿಡ೦ಬನೆ, ಎಲ್ಲವೂ ಇರುತ್ತದೆ. ವಿಚಾರಪ್ರಚೋದಕ ಬರಹ
ರೀ, ತುಂಬ ಅರ್ಥಘರ್ಭಿತವಾಗಿತ್ತು ನಿಮ್ಮ ಲೇಖನ. ನಿಮ್ಮ ಬರಹ ಓದಲು ಬಂದಿದ್ದು ಸೋನೆಮಳೆ ಯಿಂದ . ನಿಮ್ಮ ಅಸ್ಟೂ ಲೇಖನ ಓದೋ ಆಸೆ. ಅದಕ್ಕೆ ಅಂತ ಸ್ವಲ್ಪ ಸಮಯ ಇತ್ತು ಓದುತ್ತೇನೆ.ಗಡಿಬಿಡಿಯಲ್ಲಿ ಓದುವ ಬರಹ ನಿಮ್ಮದಲ್ಲ ಅನ್ನಿಸಿತು.
ಹಾಗೆ, ನಾನೂ ಒಂದ್ ಬ್ಲಾಗ್ ಬರೀತಾ ಇದೀನಿ. ದಯವಿಟ್ಟು ಒಮ್ಮೆ ಭೇಟಿ ಕೊಡಿ. ನನ್ನ ಬ್ಲಾಗ್ ನೀನಂದ್ರೆ.ಬ್ಲಾಗ್ಸ್ಪಾಟ್ .ಕಾಂ

ಪಾಪಿ ಚಿರಾಯು ಎನ್ನುವಂತೆ, ಆತ ಬದುಕಿರುತ್ತಾನೆ, ಅಥವಾ ಬೇರೊಬ್ಬರ ರೂಪದಲ್ಲಿಯಾದರೂ ಬದುಕಿದ್ದಾನೆ. ಏಕೆಂದರೆ ಇಂದಿಗೂ ಆಸಿಡ್ ದಾಳಿ ನಡೆಯುತ್ತಿರುವುದು ಸುಳ್ಳಲ್ಲ. ಆಸಿಡ್ ಹಾಕಿದವರ ಮುಖಕ್ಕೆ ಆಸಿಡ್ ಹಾಕುವ ಕಾನೂನು ಬರುವವರೆಗೂ ಇದು ನಿಲ್ಲುವುದಿಲ್ಲ ಅನ್ನಿಸುತ್ತಿದೆ.
Post a Comment