Thursday, August 6, 2009

ಮಮತೆಯಲ್ಲಿ ತೊಯ್ದುಬಿಡು..ಬದುಕು ಶರಧಿಯಾಗಲಿ.

ಪ್ರೀತಿಯ ಅಣ್ಣ....
ರಾಖಿ ಹಬ್ಬದ ಶುಭಾಶಯಗಳು.

ಹೌದು, ನೀನಂದ್ರೆ ಪ್ರೀತಿ, ನೀನಂದ್ರೆ ಭಯ, ನೀನಂದ್ರೆ ಗೌರವ, , ನೀನಂದ್ರೆ ಅಮ್ಮ, ನೀನಂದ್ರೆ ಗೆಳೆಯ,..ಹೀಗೆ ಬದುಕಿನ ಸಮಸ್ತ ಬಾಂಧವ್ಯಗಳನ್ನು ಒಟ್ಟೊಟ್ಟಾಗೇ ನೀಡಿದವ. ಒಡಹುಟ್ಟಿದವ ಅಲ್ಲದಿದ್ದರೂ ಒಡನಾಡಿ ಆದವ. ನನ್ನ ಜೊತೆಗೇ ಹೆಜ್ಜೆಹಾಕಿದವ. ನಾನು, ನನ್ನ ಬದುಕನ್ನು ,ಪ್ರೀತಿಸೋಕೆ ಕಲಿಸಿದವ. ಬೆಳದಿಂಗಳ ತಂಪಿನಲ್ಲಿ ಕುಳಿತು ಅಜ್ಜಿ ಕಥೆ ಹೇಳಿದವ. ಶಾಲೆಗೆ ಹೋಗದೆ ರಚ್ಚೆ ಹಿಡಿದಾಗ ಗದರಿಸಿ, ಶಾಲೆಗೆ ಕಲಿಸಿದವ. ಸಮಸ್ತರನ್ನೂ ಪ್ರೀತಿಸು, ಯಾರನ್ನೂ ಪ್ರೇಮಿಸಬೇಡ ಎಂದು ಬುದ್ಧಿಮಾತು ಹೇಳಿದವ ನೀನು ನನ್ನಣ್ಣ. ನಿದ್ದೆ ಬಾರದಿದ್ದಾಗ ಅಮ್ಮನಂತೆ ಲಾಲಿ ಹಾಡಿದವ. ಅತ್ತಾಗ ನಿನ್ನೆದೆಯ ಪ್ರೀತಿಯ ಮಡಿಲಲ್ಲಿ ಮಲಗಿಸಿ ಸಂತೈಸಿದವ ನೀನು ನನ್ನಣ್ಣ. ಚೆನ್ನಾದ ಡ್ರೆಸ್ ಕೊಡಿಸು, ಬಳೆ ಕೊಡಿಸು, ಕಿವಿಯೋಳೆ ಕೊಡಿಸು ಎಂದಾಗ ಏನೂ ಅನ್ನದೆ ತೆಗೆದುಕೊಟ್ಟವ. ಕೈತುಂಬಾ ಬಳೆ, ತಲೆತುಂಬಾ ಮಲ್ಲಿಗೆ ಮುಡಿಸಿ ನನ್ನ ತಂಗಿ ಎಷ್ಟು ಚೆಂದ ಕಾಣ್ತಾಳೆ ಅಂತ ಹೆಮ್ಮೆ ಪಟ್ಟವ ನೀನು ನಂಗೆ ದೇವ್ರು ಕೊಟ್ಟ ಅಮೂಲ್ಯ ಉಡುಗೊರೆ ಗೊತ್ತಾ? ನಿನ್ನ ಪ್ರೀತಿಯನ್ನು ಮೀರಿ ನಡೆದಾಗ ಕಂಗಳು ಹನಿಗೂಡಿಸಿದವ. ಸುತ್ತಲ ಜಗತ್ತಿನ ಸತ್ಯ-ಮಿಥ್ಯಗಳ, ನೋವು-ನಲಿವುಗಳ ಅರಿವಾಗಿಸಿದವ. ಒಂದು ರೂ.ಗೂ ಅಮೂಲ್ಯ ಬೆಲೆಯಿದೆ ಎಂದು ತಿದ್ದಿತೀಡಿದವ.

ನನಗೆ ಇಷ್ಟದ ತಿಂಡಿ ತಂದುಕೊಟ್ಟು ನನ್ನ ಇನ್ನೂ ಡುಮ್ಮಿಯಾಗಿಸಿದವ. ಆಫೀಸ್ ನಲ್ಲಿ ಬಾಸ್ ಬೈದರೆಂದು ಮನೆಯ ಮೂಲೆಯಲ್ಲಿ ಕುಳಿತು ಅತ್ತಾಗ ಹೆದರಿಕೋಬೇಡ, ಸಹನೆಯಿಂದಿರು ಎಂದು ಸಮಾಧಾನ ಮಾಡಿದವ . ಕಾಲದ ತೆಕ್ಕೆಯಲ್ಲಿ ನೋವಿಗೆ ಬಲಿಯಾಗುವಾಗ ನೋವನ್ನೇ ನಲಿವಾಗಿಸಿದವ. ಪೇಟೆ, ಹಳ್ಳಿ, ಶಾಪಿಂಗ್ ಮಾಲ್ ಸುತ್ತಾಡಿಸಿದವ. ಅಮ್ಮ ಜೊತೆಗಿಲ್ಲದಾಗ ಅಮ್ಮನಾದವ. ನನ್ನ ಭವಿಷ್ಯದ ಕನಸುಗಳ ದೊಡ್ಡ ಗೋಪುರವನ್ನೇ ಕಟ್ಟಿಸಿದವ. ನನ್ನ ಹುಸಿಮುನಿಸು ಮುಂಗೋಪ, ಅಸಹನೆಯಂಥ ದೌರ್ಬಲ್ಯಗಳೊಂದಿಗೆ ರಾಜಿ ಮಾಡಿಕೊಂಡು ತಪ್ಪನ್ನು ತಿದ್ದಿ ತೀಡಿದವ. ನನ್ನ ಮೇಲೆ ಸಿಟ್ಟು ಬಂದರೂ ಒಂದೇ ಒಂದು ಸಲ ನನಗೆ ಕೈ ಎತ್ತದವ. ನಿತ್ಯ ಪುಟ್ಟಾ ಪುಟ್ಟಾ ಎನ್ನುತ್ತಾ ನನ್ನ ಪುಟ್ಟ ಬದುಕಿನಲ್ಲಿ ಪ್ರೀತಿಯ ಮಳೆ ಕರೆದವ ನೀನು ನನ್ನಣ್ಣ. ನನ್ನೊಳಗಿನ ಪುಟ್ಟ ಪ್ರತಿಭೆಗಳಿಗೆ ನೀರೆರೆದು ಪೋಷಿಸಿದವ ನೀನು ನನ್ನಣ್ಣ.

ಅಣ್ಣಾ...
ನೀ ಜೊತೆಗಿದ್ರೆ ನಂಗೆ ಖುಷಿ, ನೆಮ್ಮದಿ, ಸಂಭ್ರಮ ಎಲ್ಲಾನೂ. ನೆಮ್ಮದಿ, ಖುಷಿ ಇದ್ರೆ ಅಷ್ಟೇ ಸಾಕಲ್ವಾ ಹೇಳು. ಕೆಲಸದೊತ್ತಡದಿಂದ ತಡವಾಗಿ ಪತ್ರ ಬರೀತಾ ಇದ್ದೀನಿ. ನಂಗೆ ಬೆಟ್ಟದಷ್ಟು ಪ್ರೀತಿ ನೀಡಿ, ನನ್ನ ತಿದ್ದಿ ತೀಡಿದ ನೀನೂ ನಂಗೆ ಅಮ್ಮ. ಮೊನ್ನೆ ರಕ್ಷಾಬಂಧನ. ಹೌದು, ನನಗೆ ನೀನೇ ನಿತ್ಯ 'ರಕ್ಷಾಬಂಧನ'. ನಿತ್ಯ ಅಮ್ಮನ ಮಮತೆಯಲ್ಲಿ ನೀನು ನನ್ನ ತೊಯ್ದುಬಿಡು. ಬದುಕು 'ಶರಧಿ'ಯಾಗುತ್ತದೆ ಅಲ್ವಾ? ನೀನು ಖುಷಿಯಾಗಿರು..ಆ ಖುಷಿಯಲ್ಲಿ ನಂಗೊಂದು ಪುಟ್ಟ ತುಣುಕು ನೀಡು. ನಿಂಗೆ ದುಃಖವಾದ್ರೆ ನೀನೊಬ್ನೇ ಸಹಿಸಬೇಡ. ನಂಗೂ ಸಮಪಾಲು ಕೊಡು. ನಾನೂ ನಿನಗೆ 'ಅಮ್ಮ'ನಾಗುತ್ತೇನೆ. ಮತ್ತೊಮ್ಮೆ ರಾಖಿ ಹಬ್ಬದ ಶುಭಾಶಯಗಳು ಕಣೋ.
ತಡವಾಗಿ ಪತ್ರ ಬರೆದಿದ್ದಕ್ಕೆ ಕ್ಷಮೆಯಿರಲಿ.
ಇಂತೀ,
ನಿನ್ನ ತಂಗಿ

10 comments:

ಬಾಲು said...

ಚೆನ್ನಾಗಿದೆ. :)
ನಿಮಗೆ ಸಮುದ್ರ ದಷ್ಟು ಅಗಾದ ಪ್ರೀತಿ ಎಲ್ಲಾ ಸಿಗಲಿ.

PARAANJAPE K.N. said...

ತಂಗಿ
ನಿನ್ನ ಮನದ ಭಾವನೆಗಳನ್ನು, ಅಣ್ಣ೦ದಿರ ಬಗ್ಗೆ ನಿನಗಿರುವ ಗೌರವವನ್ನು ಅಕ್ಷರರೂಪದಲ್ಲಿ ಹೂವಿನ ಹಾರದ೦ತೆ ಪೋಣಿಸಿದ್ದಿಯಾ. ಚೆನ್ನಾಗಿದೆ. ನಿನಗೆ ಅಣ್ಣ೦ದಿರ ಪ್ರೀತಿ-ರಕ್ಷೆ ನಿರ೦ತರ ಸಿಗಲಿ, ನೆಮ್ಮದಿ-ನಲಿವು ಎ೦ದೆ೦ದೂ ಇರಲಿ
ಎ೦ದು ಹಾರೈಸುವೆ

Mohan Hegade said...

ಚಿತ್ರಾಜಿ,
ರಾಖಿ ಹಬ್ಬದ ಸಂದೇಶನೆ ಬ್ರಾತ್ವ ಬಾವನೆಯನ್ನು ದೀರ್ಘಗೊಳಿಸುವುದು. ನಿಮ್ಮ ಬರಹದಲ್ಲಿ ಆ ಅಣ್ಣ ಎಂಬ ವ್ಯಕ್ತಿಯಲ್ಲಿ ತಾವು ಎಲ್ಲದನ್ನು ಕಂಡಿದ್ದು ಈ ಹಬ್ಬಕ್ಕೆ ಒಂದು ವಿಶೇಷತೆ ತಂದಿದೆ. ತಮಗೆ ಪ್ರೀತಿಯ ಅಣ್ಣನ ಹಾರೈಕೆಗಳು ಯಾವಾಗಲು ಸಿಗಲಿ.
ದನ್ಯರಿ,

sunaath said...

ತಂಗಿಯಾದವಳು ಅಮ್ಮನಾಗುವದೇ ಅಣ್ಣನಿಗೆ ನೀವು ನೀಡುವ ದೊಡ್ಡ ಉಡುಗೊರೆ!ಇದಕ್ಕಿಂತ ಹೆಚ್ಚಿನದು ಯಾವುದಿದ್ದೀತು?

ದಿವ್ಯಾ ಮಲ್ಯ ಕಾಮತ್ said...

" ಮೊನ್ನೆ ರಕ್ಷಾಬಂಧನ. ಹೌದು, ನನಗೆ ನೀನೇ ನಿತ್ಯ 'ರಕ್ಷಾಬಂಧನ' " - ಚೆನ್ನಾಗಿದೆ :-)
ಅಣ್ಣ - ತಂಗಿ ಬಾಂಧವ್ಯ ಸದಾ ಹೀಗೆಯೇ ಬೆಳಗಲಿ...

Anonymous said...

ಎದೆಯ ಹಿಡಿ ಆಳದಲಿ ಅವಿತಿರುವ ಪ್ರತಿ ತಂಗಿಯ ಭಾವನೆಗಳ ಬಾಂದವ್ಯವನ್ನು ಅಮಿತ ಪ್ರೀತಿಯ ಅಲೆಯಾಗಿ ಚಿಮ್ಮಿಸಿದ್ದೀರಿ ಚಿತ್ರಾ...ಅಲೆಗಳ ಕಂಪನ ಅಣ್ಣಂದಿರ ಮನ ತೋಯಿಸಲಿ ಎಂಬ ಹಾರೈಕೆಯೊಂದಿಗೆ, ನಿಮ್ಮ ಜೀವನ ಸದಾ ಪ್ರೀತಿಯ ಹೊನಲಾಗಲಿ.ಬರೆಯುವ ಕೈಗಳು ಸದಾ ಸಂತಸದಿ ಕುಣಿಯಲೆಂದು ಹಾರೈಸುವ......
ದೇಜ ..ತುಳುನಾಡ್

Chevar said...

ಅಕ್ಕ ತಂಗಿಯರ ಸುಂದರ ಪ್ರೀತಿಯ ಅನಾವರಣ. ಹಿಂದೆ ಅನುಭವಿಸಿದ ಇದೇ ಪ್ರೀತಿ ಕಣ್ಣ ಮುಂದೆ ಸುಳಿದು ಬಂತು.

ಹರೀಶ ಮಾಂಬಾಡಿ said...

ಅಣ್ಣನಿಗೆ ಅಕ್ಷರರೂಪದ ಅಕ್ಕರೆ ತೋರುವ ನಿನ್ನ ಪ್ರಯತ್ನ ಚೆನ್ನಾಗಿದೆ

shivu.k said...

ಚಿತ್ರಾ,

ಕೆಲಸದ ಒತ್ತಡ ಮತ್ತು ಊರೂರು ಸುತ್ತಾಟ. ತಡವಾಯಿತು.

ರಾಕಿ ಹಬ್ಬದ ಶುಭಾಶಯಗಳು.

Arun said...

Install Add-Kannada button with ur blog. Then u can easily submit ur page to all top Kannada social bookmarking sites & u will get more traffic and visitors.
Install widget from www.findindia.net