Thursday, April 2, 2009

ಬೆಳಗು ಹಣತೆಯ ಮುಂದೆ ನಾ ಹಾಡಿದಾಗ...

ಆವಾಗ ನನ್ನ ಪ್ರೀತಿಯ ಉಜಿರೆ ಬಿಸಿಎಂ ಹಾಸ್ಟೇಲ್ ನಲ್ಲಿದ್ದೆ. ಪಿಯುಸಿನಿಂದ ಡಿಗ್ರಿ ಮುಗಿಯುವ ತನಕ ಐದು ವರ್ಷಗಳ ಕಾಲ ಈ ಹಾಸ್ಟೇಲ್ ನನ್ನ ಮನೆಯಾಗಿತ್ತು. ಅಮ್ಮನಂತೆ ಪ್ರೀತಿಯಿಂದ ಪೋಷಿಸಿತ್ತು. ಈವಾಗಲೂ ಊರಿಗೆ ಹೋದರೆ ಆ ಹಾಸ್ಟೇಲ್, ಎದುರಿರುವ ಹೂವಿನ ಗಿಡಗಳು, ಅಡುಗೆ ಆಂಟಿಯವರು, ನಾನು ಓದೋಕೆ ಕೂರುತ್ತಿದ್ದ ಗಾಳಿ ಮರದ ಗಿಡಗಳು, ನಾವು ಗೇರು ಕದಿಯುತ್ತಿದ್ದ ಭಟ್ರ ಗೇರು ಬೀಜ ಮರ, ಈಗ ಅಪರಿಚತರೇ ತುಂಬಿರುವ ರೂ.ನಂ. 4, ನಾನು ದಿನದ ಎರಡು ಹೊತ್ತು ದೇವರ ನಾಮಗಳನ್ನು ಹಾಡುತ್ತಿದ್ದ ಆ ಸುಂದರ ಪ್ರಾರ್ಥನಾ ಮಂದಿರ....ಎಲ್ಲವನ್ನೂ ಒಂದು ಬಾರಿ ಕಣ್ತುಂಬಿಸಿಕೊಳ್ಳೋಕೆ ಉಜಿರೆ ತನಕ ಹೋಗಿಬರುತ್ತೇನೆ. ಹಾಸ್ಟೇಲ್ ಪಕ್ಕದಲ್ಲೇ ಇರುವ ಹಸಿರು ತೋಟಗಳ ನಡುವೆ ನಿಂತ ರತ್ನಮಾನಸ, ಇನ್ನೊಂದೆಡೆ ಸಂಜೆ ಹೊತ್ತು ಮನಸ್ಸು, ಹೃದಯಕ್ಕೆ ತಂಪು ನೀಡುವ ಗಡಾಯಿ ಕಲ್ಲು...ಎಷ್ಟು ಚೆನ್ನಾಗಿತ್ತು.
ಹೌದು..ನಾನು ಈಗ ಹೇಳಹೊರಟಿರುವುದು ನಮ್ಮ ಪ್ರಾರ್ಥನಾ ಮಂದಿರದ ಕುರಿತು, ನಾವು ಹಾಡೋ ಭಜನೆಗಳ ಕುರಿತು. ಸುಮಾರು 100 ಜನರನ್ನು ತುಂಬಿಕೊಳ್ಳುವ ಪುಟ್ಟ ಕೋಟೆಯದು. ಬೆಳಿಗ್ಗೆ ಮತ್ತು ಸಂಜೆ ಆರೂವರೆಗೆ ಪ್ರಾರ್ಥನೆ ಮಾಡುವ ಸಮಯ. ಬೆಳಿಗ್ಗೆ ಶಿವಸ್ತುತಿ ಹಾಡಿದರೆ, ಸಂಜೆಯ ಹೊತ್ತು ಕೋಣೆ ತುಂಬಾ ದೇವರ ಹಾಡುಗಳ ಘಮಘಮ. ಅದರಲ್ಲೂ ಸಂಜೆ ಹೊತ್ತಿನ ಭಜನೆ ಒಂದು ಥರ ಮನಸ್ಸಿಗೆ ತುಂಬಾ ಖುಷಿಕೊಡುತ್ತಿತ್ತು. ಪ್ರತಿಯೊಬ್ಬರೂ ಆರೂವರೆಗೆ ಪ್ರಾರ್ಥನಾ ಕೋಣೆಯಲ್ಲಿ ಸೇರುತ್ತಿದ್ದೇವು. ಒಬ್ಬರೂ ತಪ್ಪಿಸುವಂತಿರಲ್ಲಿಲ್ಲ. ಆರೂ ಗಂಟೆ ಆದಾಗಲೇ ಬಾತ್ ರೂಮ್ ನಲ್ಲಿದ್ದವರು, ಸುತ್ತಮುತ್ತ ಮರ, ಪೊದೆಗಳ ನಡುವೆ ಓದೋಕೆ ಕುಳಿತವರು, ಪಟ್ಟಾಂಗಗಕ್ಕೆ ಕುಳಿತವರು ಎಲ್ಲಾರೂ ಪ್ರಾರ್ಥನೆಗೆ ಹಾಜರಾಗಲೇಬೇಕು.

ಗಜಮುಖನೆ..ಗಣಪತಿಯೇ..ನಿನಗೆ ವಂದನೆ...

ಇದು ಮೊದಲ ಹಾಡು....ಆಮೇಲೆ ಮೂರೂ ಹಾಡುಗಳನ್ನು ಹಾಡೋ ಸರದಿ ನನ್ನದು. ನಂಗೆ ಭಜನೆಗಳಂದ್ರೆ ತುಂಬಾನೇ ಇಷ್ಟ. ರಾಗ, ಲಯ ಎಂಥದ್ದೂ ಗೊತ್ತಿಲ್ಲಾಂದ್ರೂ ಕೈಯಲ್ಲೊಂದು ತಾಳ ಹಿಡಿದುಕೊಂಡು ಹಾಡಕೆ ಕುಳಿತರೆ ಎಷ್ಟು ಹಾಡಿದ್ರೂ ಸಾಕೆನಿಸುತ್ತಿರಲಿಲ್ಲ. ಅದರಲ್ಲೂ ಹಾಸ್ಟೇಲ್ ಹುಡುಗಿಯರಿಗೆ ನಾನು ಹಾಡೋದಂದ್ರೆ ಭಾರೀ ಇಷ್ಟ. ಈ ಹಾಡು ಹಾಡಿ..ಅಂಥ ಅವರೇ ಸೂಚಿಸಿದ ಮೇಲೆ ನಾನು ಹಾಡುತ್ತಿದ್ದೆ. ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ, ಬಾಲಕೃಷ್ಣನೇ ಬಾರೋ, ಬಂದಾನೋ ಗೋವಿಂದ..ಚಂದದಿ ಆನಂದ, ಎಲ್ಲಿ ಹೋದ ನಮ್ಮ ಕೃಷ್ಣ ಎಲ್ಲಿ ಅಡಗಿದ...ಮುಂತಾದ ಕೃಷ್ಣನ ಕುರಿತಾದ ಗೀತೆಗಳನ್ನೇ ಹೆಚ್ಚಾಗಿ ಹಾಡುತ್ತಿದ್ದೆ. ಅದಕ್ಕೆ ಹಾಸ್ಟೇಲಿನಲ್ಲಿ ನನ್ನನ್ನು 'ರಾಧೆ' ಎಂದೇ ಕರೆಯುತ್ತಿದ್ದುದು ವಿಶೇಷ. ಒಂದೊಂದು ಬಾರಿ ಕರೆಂಟ್ ಹೋದ್ರೆ..ಸಮಯದ ಅರಿವೇ ಇಲ್ಲ..ಬೆಳಗುವ ಹಣತೆಯ ಸುಂದರ ಬೆಳಕಿನಲ್ಲಿ ಒಂದೆರಡು ಗಂಟೆ ಹಾಡಿದ್ರೂ ಸುಸ್ತಾಗುತ್ತಿರಲಿಲ್ಲ. ನನಗೆ ಸಂಗೀತದ ಬಗ್ಗೆ ಏನೂ ಗೊತ್ತಿಲ್ಲ..ಆದರೂ ಹಾಡೋದಂದ್ರೆ ತುಂಬಾ ಇಷ್ಟ. ಒಂದು ಸಲ ನಾವು ಖುಷಿಯಿಂದ ಹಾಡಿದರೆ ಮನಸ್ಸಿನ ಹಗುರಾಗುತ್ತಿತ್ತು. ಮನಸ್ಸು ಏನೋ ಒಂಥರ ಖುಷಿಯಿಂದ ನಲಿಯುತ್ತಿತ್ತು. ಈವಾಗ ಹಾಸ್ಟೇಲಿಗೆ ಹೋಗಿ ತಂಗಿದ್ರೂ ನಾನು ಭಜನೆಗಳನ್ನು ಹಾಡುತ್ತೇನೆ..ಅದೇ ಹಳೆಯ ಹಾಡು..ಅದೇ ಕೋಣೆ..ಅದೇ ಗಣಪತಿ ಫೊಟೋ..ಕೇಳೋ ಕಿವಿಗಳು ಬೇರೆ ಮಾತ್ರ. ನಾನು ಮತ್ತೆ ಮರಳಿ..ಅದೇ ಹಳೆಯ ಚಿತ್ರ ಆಗುತ್ತೇನೆ. ಮನಸ್ಸು ತುಂಬಾ ಖುಷಿಯಾಗುತ್ತೆ.

ಆದರೆ ಬೆಂಗಳೂರಿನಲ್ಲಿ....

ಮನಸ್ಸಿದ್ದರೆ ಮಾರ್ಗ ಅಂತಾರೆ...ಆದರೂ ಇದನ್ನು ಮುಂದುವರಿಸಲು ಸಾಧ್ಯವಾಗಲೇ ಇಲ್ಲ. ನಿತ್ಯ ಕೆಲಸ. ಬೆಳಿಗ್ಗೆ ಆರು ಗಂಟೆಗೆ ಎದ್ದು ಮನೆಗೆಲಸ ಮುಗಿಸಿ, ದೇವರಿಗೆ ದೀಪ ಹಚ್ಚಿ ಆಫಿಸಿಗೆ ಹೊರಡೋವಷ್ಟರಲ್ಲಿ ಸಮಯ ಮೀರಿರುತ್ತೆ. ಮತ್ತೆ ಸಂಜೆ, ಸಮಯದ ಮಿತಿಯಿಲ್ಲ..ನಮ್ ಕೆಲಸ ಮುಗಿದಾಗ ಮನೆಗೆ ಹೋಗಬೇಕು. ನಡುವೆ ಟ್ರಾಫಿಕ್, ಒಂದಷ್ಟು ಧೂಳು, ಆಫೀಸ್ ಕೆಲಸದ ತಲೆಹರಟೆಗಳು..ಇದನ್ನೆಲ್ಲಾ ಹೊತ್ತುಕೊಂಡು ಮನೆಗೆ ಹೋಗಬೇಕಾದರೆ ಎಂಟು ಗಂಟೆ ಮೀರಿರುತ್ತೆ. ಹೊಟ್ಟೆ ಮಾತನಾಡುತ್ತಿರುತ್ತೆ. ಮತ್ತೆ ಅಡುಗೆ ಆಗಬೇಕು. ಬಟ್ಟೆ ಬದಲಾಯಿಸೋದು ಆಮೇಲೆ..ಮೊದಲು ಅಡುಗೆ. ಆಮೇಲೆ ಊಟ..ಕಣ್ಣಲ್ಲಿ ನಿದ್ದೆ. ನಾಳಿನ ಚಿಂತೆ...ಮತ್ತೆಲ್ಲಿಂದ ಭಜನೆ, ದೇವರ ಚಿಂತೆ?

ನಿನ್ನೆ ಕೋರಮಂಗಲದ ಬೀದಿಯೊಂದರಲ್ಲಿ ನಡೆದು ಹೋಗುತ್ತಿದ್ದಾಗ ದೇವಸ್ಥಾನವೊಂದರಲ್ಲಿ ಭಜನಾ ಕಾರ್ಯಕ್ರಮ ನಡೆಯುತ್ತಿತ್ತು. ಹಳೇ ದೇವರ ನಾಮಗಳನ್ನು ತಂಡವೊಂದು ಹಾಡುತ್ತಿತ್ತು. ಒಂದಷ್ಟು ಹೊತ್ತು ಕೇಳಿ ಮನೆ ಕಡೆ ಸಾಗಿದವಳಿಗೆ ನೆನಪಾಗಿದ್ದು ನನ್ನ ಪ್ರೀತಿಯ ಹಾಸ್ಟೇಲಿನಲ್ಲಿ ನಾನಾಡುತ್ತಿದ್ದ ಭಜನೆಗಳು. ಇಲ್ಲಿ ಭಜನೆ ಹಾಡಕೆ ನನಗೆ ಸಮಯವಿಲ್ಲದಿದ್ದರೂ ಸುಂದರ ಭಾವಗೀತೆಗಳನ್ನು ನಿತ್ಯಕೇಳುತ್ತಾ ಮನಸ್ಸು ಖುಷಿಪಡುತ್ತೆ. ಈ ಖುಷಿಯನ್ನು ಮುಂದಿನ ಸಲ ಹಂಚಿಕೊಳ್ಳುತ್ತೇನೆ.

24 comments:

ವಿ.ರಾ.ಹೆ. said...

ಸಮಯ ಇಲ್ಲ ಅನ್ನಬಾರದು, ಸಮಯ ಮಾಡಿಕೊಳ್ಳಬೇಕು. !

PARAANJAPE K.N. said...

ಚಿತ್ರಾ,
ಮತ್ತೆ ಶರಧಿಯಲ್ಲಿ ಬರಹ ಕಂಡು ಖುಷಿಯಾಯಿತು. ಹೌದು, ಕೆಲಸದ ಗಡಿಬಿಡಿಯಲ್ಲಿ ನಮ್ಮ ದಿನಚರಿ ಬದಲಾಗುವುದು, ಜೀವನ ಯಾ೦ತ್ರಿಕವಾಗುವುದು ಸಹಜ. ನಿನಗೆ ಭಜನೆಯಿ೦ದ ಮನಸ್ಸಿಗೆ ನಿರಾಳತೆ, ಉಲ್ಲಾಸ ಸಿಗುವುದಾದರೆ ಅದಕ್ಕೆ ಸಮಯ ಹೊ೦ದಿಸಿಕೊ೦ಡು ಮತ್ತೆ ಶುರು ಹಚ್ಚಿಕೊಳ್ಳುವುದು ಒಳಿತು. ಆಪ್ತ ಬರಹ. ಮುಂದುವರಿಸು.

Pramod said...

ಹೌದು..ನಾನು ಸಿದ್ದವನದ ಶನಿವಾರದ ಭಜನೆ, ಪ್ರಸಾದ ಎಲ್ಲವನ್ನೂ ಮಿಸ್ ಮಾಡ್ಕೊಳ್ತಾ ಇದ್ದೇನೆ. ವಿಕಾಸ್ ನೇಗಿಲೋಣಿ, ವಿಶ್ವಾಸ್ ಇನ್ನು ತು೦ಬಾ ಸೂಪರ್ ಹಾಡುಗಾರರು..ಹಾಡ್ತಾ ಇದ್ರೆ ..ನೊ ಟೆನ್ಶನ್..

sunaath said...

ಸ್ಟುಡೆಂಟ್ ಜೀವನದ ಸುಖ ಮತ್ತೆ ಸಿಕ್ಕೀತೆ?

Rajesh Manjunath - ರಾಜೇಶ್ ಮಂಜುನಾಥ್ said...

ಚಿತ್ರ,
"ಸವಿ ನೆನಪುಗಳು ಬೇಕು ಸವೆಯಲಿ ಬದುಕು"
ಈ ಹಾಡು ನೆನಪಾಗುತ್ತಿದೆ, ಒಳ್ಳೆ ಬರಹ.

Guruprasad said...

ಹಾಯ್ ಚಿತ್ರ,
ಚೆನ್ನಾಗಿ ಇದೆ ಬರಹ... ಹೌದು ನಾವು ಓದುತ್ತ ಇರಬೇಕಾದ್ರೆ ಅಥವ ಚಿಕ್ಕವರಿರಬೇಕದ್ರೆ ಬೆಳೆಸಿಕೊಂಡ್ ತುಂಬ ಹವ್ಯಾಸಗಳನ್ನು ಈಗ ಕೆಲಸದ ಒತ್ತಡದ ನಡುವೆ ಮರೆತುಹೊಗ್ತಾ ಇದ್ದೇವೆ... ಏನ್ ಮಾಡೋದು ಬೆಳೆದಂತೆಲ್ಲ ಜವಾಬ್ದಾರಿ ಜಾಸ್ತಿ ಅದಂತೆ ಎಲ್ಲ ಹಳೆ ಅಭ್ಯಾಸಗಳು ಹವ್ಯಾಸಗಳಿಗೆ ಟೈಮ್ ಇರೋಲ್ಲ.. ಆದರು ದಿನ ಮಾಡೋಕೆ ಆಗೋಲ್ಲ ಅಂದ್ರು ಯಾವಾಗ ಲಾದರು ಟೈಮ್ ಸಿಕ್ಕಾಗ, week ends ನಲ್ಲಿ ಮುಂದುವರಿಸಬಹುದು ಅಲ್ವ... ಬಿಡಬಾರದು ಅಸ್ಟೆ... ಮನಸಿದ್ದಲಿ ಮಾರ್ಗ...( ಹಾ ಹಾ ನೀವೇ ಹೇಳಿದಿರ) :-)
ಚೆನ್ನಾಗಿ ಬರೆದಿದ್ದೀರ, ಒಳ್ಳೆ ಬರಹ,

ಗುರು

Laxman (ಲಕ್ಷ್ಮಣ ಬಿರಾದಾರ) said...

ಹಾಯ್ ಚಿತ್ರಾ, ನಮ್ಮ ಚಿತ್ರಾ ಹಾಡ್ತಾಳೆ ಅಂಥ ನನಗು ಖುಷಿ ಆಯಿತು. ನಮಗೆ ಯಾವಾಗ ಹಾಡು ಕೆಳಿಸ್ತಿಯ?
ನಿಮಗೆ ಸಮಯ ಸಿಕ್ಕಾಗ ನಾವು ಬರುತ್ತಿವಿ ನಿನ್ನ ಭಜನೆ ಕೆಳಕ್ಕೆ. ಬಹಳ ದಿನದ ನಂತರ ಒಳ್ಳೆ ಬರಹ. ನಿನ್ನ ಬೇರೆ ಬೇರೆ ವಿಷಯಗಳನ್ನ ನೆನಪಿಸುವ ಬಗೆ ನನಗೆ ತುಂಬಾ ಇಷ್ಟ - ಲಕ್ಶ್ಮಣ

ಶಿವಪ್ರಕಾಶ್ said...

ಚಿತ್ರಾ ಅವರೇ.
ಸಮಯದ ಅಭಾವ ಎಲ್ಲರನ್ನು ಕಾಡುತ್ತೆ ರೀ, ನನಗೆ ಬಹಳ ವಿಷಯಗಳಲ್ಲಿ ಆಸಕ್ತಿ, ಆದ್ರೆ ನಮಗಿರೋದು ದಿನಕ್ಕೆ ಬರಿ ೨೪ ಗಂಟೆ ಅಸ್ಟೆ :(

ಚನ್ನಾಗಿ ಬರೆದಿದ್ದೀರಿ..
ಧನ್ಯವಾದಗಳು..

ಹರೀಶ ಮಾಂಬಾಡಿ said...

ಮನಸ್ಸಿದ್ದರೆ ಮಾರ್ಗ :)

shivu.k said...

ಚಿತ್ರಾ...

ಸೂಪರೋ ಸೂಪರ್ರು....ನೀನು ಹಾಡ್ತೀಯಾ ಅಂತ ನನಗೆ ಗೊತ್ತಿರಲಿಲ್ಲ...ನನಗೂ ಭಜನೆ ಅಂದ್ರೆ ತುಂಬಾ ಇಷ್ಟ....ಸುಶ್ರಾವ್ಯವಾಗಿ ಆಡೋರು ಸಿಕ್ಕರೆ ನಾನು ಮೈಮರೆಯುತ್ತೇನೆ....ಈಗಲೂ ನಾನು ನನ್ನ ಶ್ರೀಮತಿ ನಮ್ಮ ssy ಗೆ ಹೋದರೆ ಅಲ್ಲಿ ಭಜನೆಯಂತೂ ಇದ್ದೇ ಇರುತ್ತದೆ....ಅದೊಂದು ಸಾಕು ನಮ್ಮ ಎಲ್ಲಾ ನಿತ್ಯ ಜಂಜಟ, ನೋವು, ಕಷ್ಟಗಳನ್ನು ಮರೆಸಲು...
ನಾನಂತೂ ಒಂದೆರಡು ಹಾಡೋದು ಖಚಿತ. ಮತ್ತೆ ನನಗೆ ಸಂಗೀತ ಜ್ಞಾನ ಗೊತ್ತಿಲ್ಲ...ರಾಗ ತಾಳ ಗೊತ್ತಿಲ್ಲ...ಅದ್ರೆ ಭಕ್ತಿಯೊಂದೆ ಸಾಕು ನಮ್ಮನ್ನು ಅ ಮಟ್ಟಕ್ಕೆ ಕರೆದೊಯ್ಯುತ್ತೆ....

ನಿನ್ನ ಹಳೆಯ ನೆನಪುಗಳ ಬರವಣಿಗೆ ಅಪ್ತವಾಗಿದೆ....ಎಲ್ಲವೂ ಚಿತ್ರಗಳ ಹಾಗೆ ಕಟ್ಟಿಕೊಡುತ್ತೆ...
ಇನ್ನಷ್ಟು ಇಂಥವು ಬರಲಿ....
ಮತ್ತೆ ನೀನು ಹಾಡುತ್ತೀಯಾ ಅಂತ ಗೊತ್ತಾಯಿತಲ್ಲ...ನಮ್ಮ ಮನೆಗೆ ಬಂದಾಗ ನೀನು ಹಾಡಬೇಕಾಗುತ್ತೆ...ಆಯ್ತ...

ಅಭಿನಂದನೆಗಳು...

ಅಂತರ್ವಾಣಿ said...

ಮಂಜುಳ ಗುರುರಾಜ್ ನೆನಪಾದ್ರು.. :)

ಚಿತ್ರಾ said...

ಚಿತ್ರಾ,
ನನಗೂ ಹಳೆಯ ನೆನಪುಗಳು ಉಕ್ಕಿ ಬರುತ್ತಿವೆ ಇದನ್ನೋದಿದಮೇಲೆ. ನಾವೂ ಚಿಕ್ಕವರಿದ್ದಾಗ ಪ್ರತಿ ಸಂಜೆ ಮನೆಯಲ್ಲಿ ದೇವರ ಮುಂದೆ ಕುಳಿತು, ಭಜನೆ, ಶ್ಲೋಕ, ಬಾಯಿಪಾಠ( ವಾರ , ತಿಥಿ, ನಕ್ಷತ್ರ, ಮಾಸಗಳು ಇತ್ಯಾದಿ ) ಹೇಳುತ್ತಿದ್ದುದು ನೆನಪಾಯಿತು. ಚೆನ್ನಾಗಿ ಬಂದಿದೆ ಲೇಖನ.

Anonymous said...

http://kshakirana.blogspot.com/

rj said...

ಬಂದಾನೋ ಗೋವಿಂದ/ ಚಂದದಿ ಆನಂದ/ಸುಂದರಿಯ ಮಂದಿರಕೆ ನಂದನ ಕಂದ..
ಹ್ಮ್..
ಎಷ್ಟೊಂದು ಸುಂದರ ಹಾಡುಗಳಲ್ವ?
ನಂಗಂತೂ ಈ ಹಾಡು ತುಂಬ ಇಷ್ಟ..
ಸುಲಲಿತ ಬರಹ.Untouched ಕಾಡಿನಂತೆ!

-ರಾಘವೇಂದ್ರ ಜೋಶಿ.

Krishnaveni said...

Chennagi mudi banide lekhana:-) Nanagu nanna baalyada nenapaaythu..
Naanu eegalu kelsada janjaatada naduvenu 15 nimisha dinalu sanje shloka helthene :-) Manassige kushi kodutte..:-)

Krishnaveni said...

Chennagi mudi banide lekhana:-) Nanagu nanna baalyada nenapaaythu..
Naanu eegalu kelsada janjaatada naduvenu 15 nimisha dinalu sanje shloka helthene :-) Manassige kushi kodutte..:-)

PrashanthKannadaBlog said...

೧೫ ವರ್ಷ ಪ್ರತೀ ಶನಿವಾರ ನಮ್ಮೂರ ದೇವಾಲಯದಲ್ಲಿ ಭಜನೆ ಮಾಡುತ್ತಿದ್ದೆ. ಮನಸ್ಸಿಗೆ ತುಂಬಾ ನೆಮ್ಮದಿ ಸಿಗುತ್ತಿತ್ತು. ಆ ದಿನಗಳನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು.

ಹರೀಶ ಮಾಂಬಾಡಿ said...

ನಿಮ್ಮ ಭಜನೆಯ ಸಿ.ಡಿ ಮಾಡಿ ಕಳಿಸಿಕೊಡಿ

ಮಲ್ಲಿಕಾರ್ಜುನ.ಡಿ.ಜಿ. said...

ಕೃಷ್ಣ ದ್ವಾರಕೆಗೆ ಹೊರಟಾಗ ರಾಧೆ ಮತ್ತು ಕೊಳಲನ್ನು(ಮುರಳೀಗಾನವನ್ನು) ಮಥುರೆಯಲ್ಲೇ ಬಿಟ್ಟು ಹೊರಟ. ಅವನಿಗೆ ಕೈಯಲ್ಲಿ ಚಕ್ರ ಹಿಡಿಯುವ ಅಗತ್ಯವಿತ್ತು ಮುಂದೆ ಪಾಂಚಜನ್ಯವನ್ನೂ ಹಿಡಿಯಬೇಕಿತ್ತು.
ಆದರೆ ಶರಧಿಯ ರಾಧೆ MGM ಕಾಲೇಜಿನಿಂದ ಹೊರಡುವಾಗ ಭಜನೆಯನ್ನು ಬಿಟ್ಟು ಬಂದದ್ದು ಏಕೆ? ಕೃಷ್ಣನಂತೆ ಗೀತೆ ಭೋದಿಸಲಾ? ರಾಜಕೀಯ ವರದಿ ಓದಿ ಹೇಳಲಾ? ಅಣ್ಣಂದಿರೊಂದಿಗೆ ಕೂಗಾಡಲಿಕ್ಕಾ!?!

ಕನಸು said...

ಚಿತ್ರಾ,
ಮುದ್ದಾದ ಲೇಖನ..!!

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ...

ನಿಮ್ಮ ಲೇಖನಗಳು ಏನಾದರೂ ಹೊಸ ವಿಷಯ ಹೊತ್ತು ತ೦ದಿರುತ್ತದೆ ಮತ್ತು ನಮ್ಮನ್ನು ಎಲ್ಲೋ ಕೊ೦ಡೊಯ್ಯುತ್ತದೆ...

ನಾನು ಸಣ್ಣವನಿರುವಾಗ ದಿನಾ ಭಜನೆ ಮಾಡುತ್ತಿದ್ದುದು ನೆನಪಾಯಿತು...

ekanasu said...

ಸವಿನೆನಪುಗಳು ಯಾವಾಗಲೂ ಮಧುರ. ಇಂತಹ ನೆನಪುಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು

www.ekanasu.com

ಕನಸು said...

ಚಿತ್ರಾ ಮೇಡಂ
ನಿಮ್ಮ ಕೇಲ ದಿನಗಳಿಂದ ನಿಮ್ಮ ಸುಳಿವೆ ಇಲ್ಲಾ
ಎಲ್ಲಿ ಹೋದ್ರಿ ?
ಕೇಲಸ ಬಹಳ ಇದೆಯೆನೋ
ಆದ್ರೂ ಸ್ವಲ್ಪ ಬಿಡುವು ಮಾಡಿಕೋಳ್ಳಿ
ನಿಮ್ಮ ಹೋಸ ಬರಹ ಇಲ್ಲದೆ ಹೋದ್ರೆ ಯಾಕೋ ಬೇಜಾರು..!!

ಚಿತ್ರಾ ಸಂತೋಷ್ said...

ಪುರುಸೋತ್ತು ಮಾಡಿಕೊಂಡು ಓದಿದ, ನನ್ನ ನೆನಪುಗಳ ಜೊತೆ ನಿಮ್ಮ ನೆನಪುಗಳನ್ನೂ ಬಿಚ್ಚಿಟ್ಟ, ಪ್ರೀತಿಯಿಂದ ಬೆನ್ನುತಟ್ಟಿದ, ಹೊಗಳಿ ಹೊಗಳಿ ನಂಗೆ ಕೊಂಬು ಬರುವಂತೆ ಮಾಡಿದ ನಿಮಗೆಲ್ಲರಿಗೂ ಧನ್ಯವಾದಗಳು. ಬರ್ತಾ ಇರಿ
ಧನ್ಯವಾದಗಳು.
ಚಿತ್ರಾ