
ನನ್ನೆದೆಯ ಮಾತು ಇದೆ..
ಅಮ್ಮ ಕಲಿಸಿದ ಹಾಡು ಇದೆ
ಆ ಹಾಡಿನ ತೋಟದಲಿ
ನೀವು ಬೆಳೆಸಿದ ಹೂವು ಇದೆ...
ಈ ಹೃದಯ ಬಯಸುವುದು ಪ್ರೀತಿಸುವ ಹೃದಯವನ್ನು..! ಎಂದು ಮುದ್ದಾದ ಅಕ್ಷರಗಳಲ್ಲಿ ಬರೆದುಬಿಟ್ಟು ನನ್ನ ಪ್ರೀತಿಗೆ '
ಕಾಲೇಜಿಗೆ' ಸುಂದರವಾದ ಪುಸ್ತಕವನ್ನು ನೀಡಿದ್ದೆ...ಅದು
'ಮೈ ಆಟೋಗ್ರಾಫ್'! ಅಮ್ಮನೊಂದಿಗೆ ಮುನಿಸಿಕೊಂಡು ಮನಸ್ಸು ಭಾರವಾದಗ, ಕಾಲೇಜಿನ ಹಳೇ ನೆನಪುಗಳು ನನ್ನ ಕಾಡಿದಾಗ, ಮನೆಯಲ್ಲಿ ಅಣ್ಣ-ತಮ್ಮ ನ ಜೊತೆ ರಚ್ಚೆ ಹಿಡಿದು ಬೈಸಿಕೊಂಡು ಮೌನಕ್ಕೆ ಶರಣಾದಾಗ, ಪವರ್ ಕಟ್ ಆಗಿ ಮನೆಯೊಳಗೆ ಕ್ಯಾಂಡಲ್ ಉರಿಸಿ ಕುಳಿತಿದ್ದಂತೆ ನನ್ನ ಸುತ್ತುಹಾಕುವ ನೆನಪುಗಳ ಜೊತೆ ಮಾತಿಗಿಳಿದಾಗ, ಏಕಾಂತದಲ್ಲಿ ಭಾವನೆಗಳು ನನ್ನ ಮುತ್ತಿಕ್ಕಿದ್ದಾಗ..ನಾನು ಕೈಗೆತ್ತಿಕೊಳ್ಳುವುದು 'ಮೈ ಆಟೋಗ್ರಾಫ್'..!! ಹರಿದು ಚಿಂದಿ ಚಿತ್ರಣ್ಣವಾಗಿರುವ ಆ ನೆನಪಿನ ಹೊತ್ತಗೆಯ ಪುಟಗಳನ್ನು ಮತ್ತೆ ಜೋಡಿಸುತ್ತಾ...ನೋಡ್ತೀನಿ. ಅದೇ 'ಮೈ ಆಟೋಗ್ರಾಫ್'!
ಕನಸ ಕಸುವೂ ಬೇಕು
ಯಶದ ಹಾದಿಯ ಹೆಜ್ಜೆಗೆ
ಬಯಕೆ ಬಯಲು ಎರಡೂ ಬೇಕು
ಸಾಧನೆಯ ಕಾಲ್ಗೆಜ್ಜೆಗೆ...
ನನ್ನ ತುಂಬಾ ಪ್ರೀತಿಸಿದ, ಇಂದಿಗೂ ನನ್ನೆಲ್ಲಾ ಕನಸುಗಳಿಗೆ ಜೀವ ತುಂಬುತ್ತಾ ಬರುವ ಪ್ರೀತಿಯ ಮೇಡಂ ಶುಭದಾಸ್ ಮರವಂತೆ ಬರೆದ ನಾಲ್ಕು ಸಾಲುಗಳು ನನ್ನ ಹೊತ್ತಗೆಯ ಮೊದಲ ಪುಟದಲ್ಲೇ ಸ್ವಾಗತಿಸುತ್ತವೆ. ನನ್ನ ಮುದ್ದಾದ ಅಕ್ಷರಗಳನ್ನು ಕಂಡು ಹೆಮ್ಮೆಪಡುತ್ತಿದ್ದ ನಾಗಣ್ಣ ಸರ್, ನಿತ್ಯ ವಿಧೇಯತೆಯ ಪಾಠ ಹೇಳುತ್ತಾ ಬೆನ್ನುತಟ್ಟುತ್ತಿದ್ದ ಸಂಪತ್ ಸರ್...ಹಿತನುಡಿಗಳು.
'ಸವಿನೆನಪುಗಳು ಸಾವಿರವಿದ್ದರೂ, ಮನದೊಳಗೆ ನಿನಗೊಂದು ಮನೆಯಿದೆ ಗೆಳತೀ..'ಎಂದು ಸವಿಸವಿ ಮಾತುಗಳನ್ನು ಗೀಚಿದ ಸ್ನೇಹಿತರು, ನಿತ್ಯ ಅಕ್ಕಾ ..ಅಕ್ಕಾ..ಎಂದು ಹಿಂಬಾಲಿಸುತ್ತಿದ್ದ ನನ್ನ ತಮ್ಮ-ತಂಗಿಯರ ಎಂಥೆಂಥ ಸವಿನುಡಿಗಳು..ಪ್ರೀತಿಯ ಜೊತೆಜೊತೆಗೆ.
20 ಪುಟಗಳನ್ನು ಮೊದಲೇ ಮೀಸಲು ಎಂದು ಬರೆದಿಟ್ಟ ಆ ನನ್ನ ಗೆಳತಿ ಕವಿತಾ, ಹಾಸ್ಟೇಲಿನಿಂದ ಗಂಟುಮೂಟೆ ಕಟ್ಟಿಕೊಂಡು ಹೊರಡೋ ಮುಂಚಿನ ದಿನ..ಕರೆಂಟಿಲ್ಲದೆ ಕ್ಯಾಂಡಲ್ ಬೆಳಕಿನಡಿಯಲ್ಲಿಯೇ ಪುಟತುಂಬಿಸಿದ್ದಳು. ಆದರೆ ಮದುವೆಯ ಬಳಿಕ ಫೋನು ಮಾಡದಿದ್ದರೂ..ಮೊನ್ನೆ ಮೊನ್ನೆ ಅವಳಿಗೆ ಹೆಣ್ಣು ಮಗುವಾದಾಗ ಅವಳ ಗಂಡನೇ ಫೋನು ಮಾಡಿ ಖುಷಿಸುದ್ದಿ ತಿಳಿಸಿಬಿಟ್ಟರು. 'ಇಷ್ಟವಾಗದನ್ನು ಕಷ್ಟದಿಂದಲೇ ಸಹಿಸಿ, ಕಷ್ಟವೇ ಇಷ್ಟವೆಂಬಂತೆ ಬದುಕುವ ಕಲೆ ಹೇಗೆ ಕಲಿತೆ, ನನಗೂ ಕಲಿಸಿಕೊಡು ಅಕ್ಕಾ' ಎಂದು ನಾಲ್ಕು ಪುಟ ಭಾವದನಿಗಳನ್ನು ಬಿಚ್ಚಿಟ್ಟ ನನ್ನ ಪ್ರೀತಿಯ ತಮ್ಮ ಪಚ್ಚು...ಈಗಲೂ ಮೈಸೂರಿನಿಂದ ಫೋನು ಮಾಡಿ ಸಂತೋಷಗೊಳಿಸುತ್ತಾನೆ. ಕಾಲೇಜು ಕ್ಯಾಂಪಸ್ ನಲ್ಲಿ ನಿತ್ಯ ಹೊಡೆದಾಡುತ್ತಿದ್ದ ಪ್ರೀತಿಯಿಂದ ದಿನಾ ಕಿವಿಹಿಂಡುತ್ತಿದ್ದ ನನ್ನ ತುಂಬಾ ಪ್ರೀತಿಸುವ ಮುದ್ದು ತಮ್ಮ ಸಂದೇಶ ಈಗಲೂ ನನ್ನ ಮಡಿಲಲ್ಲೇ ಇದ್ದಾನೆ ಅನ್ನೋ ಬೆಟ್ಟದಷ್ಟು ಖುಷಿ ನನಗೆ.
ದಿನಾ ಮಧ್ಯಾಹ್ನದ ಕ್ಲಾಸಿನಲ್ಲಿ ಅಕ್ಕರೆಯಿಂದ ಚಾಕಲೇಟು ನೀಡುತ್ತಿದ್ದ, ಜಗಳವಾಡುತ್ತಿದ್ದ ಗೆಳೆಯ ಸುದರ್ಶನ್ ಬೆಂಗಳೂರಿನಲ್ಲೇ ಇದ್ದರೂ ಫೋನು ಕರೆಗೂ ಬರ..ಫೋನ್ ಮಾಡಿದರೂ ರಿಸೀವ್ ಮಾಡಲಾಗದಷ್ಟು ಬ್ಯುಸಿಯಾಗಿದ್ದಾನೆ. "ಬದುಕು ಇರುವುದು ಬಾಳುವುದಕ್ಕಾಗಿ...ಬಾಳು ಇರುವುದು ಬೆಳೆಯುವುದಕ್ಕಾಗಿ" ಎಂದು ಸುಂದರ ಬದುಕಿಗೆ ಶುಭಹಾರೈಸುತ್ತಾ ನೆನಪಿನ ಹೊತ್ತಗೆಯಲ್ಲಿ ಚಂದದ ಅಕ್ಷರಗಳಿಂದ ಬರೆದಿಟ್ಟ ನಿತ್ಯ ಅಪರೂಪಕ್ಕೊಮ್ಮೆ ನಗುತ್ತಿದ್ದ ಪ್ರೀತಿಯ ಗೆಳೆಯ ವೃಷಭ್ ಈಗಲೂ ಪುರುಸೋತ್ತಿನಿಂದ ಸವಿದನಿಗಳಿಗೆ ಕಿವಿಯಾಗುತ್ತಾನೆ. "ಹುಡುಗಿಯರು ಕೊರಳಿಗೆ ಹಾಕುತ್ತಾರೆ ಮಣಿಸರ...
ಆದ್ರೆ ಹುಡುಗರು ಡೈಲಿ ಹಾಕುತ್ತಾರೆ 'ಗಂಗಸರ'..
ಚಿತ್ರಾ ನಿನ್ನ ಬಿಟ್ಟಿರುವ ಕಿಂಚಿತ್ತೂ ತಾಕತ್ತು ನಂಗಿಲ್ಲ" ಎಂದು ಪೋಲಿ ಜೋಕುಗಳನ್ನು ತೇಲಿಬಿಟ್ಟ ಗೆಳೆಯ ರೋಹನ್, ಈಗ ಎಲ್ಲಿದ್ದಾನೋ ದೇವರೇ ಬಲ್ಲ. ದಿನಾ ನನಗೆ ಕೀಟಲೆ ಮಾಡು ಗುದ್ದು ತಿನ್ನುತ್ತಿದ್ದ ತರಗತಿಯ ಲಂಭು ಸಂತೋಷ ಇತ್ತೀಚೆಗೆ 'ನಿನ್ನ ಯಾವ ಹುಡುಗನೂ ಎತ್ತಹಾಕ್ಕೊಂಡು ಹೋಗಿಲ್ವಾ?' ಅಂತ ನಕ್ಕುನಗಿಸಿದ್ದ.
ಹಾಸ್ಟೇಲಿನಲ್ಲಿ ನಿತ್ಯ ನನ್ನ ಕೀಟಲೆ, ಪೋಲಿ ಜೋಕುಗಳಿಗೆ ಸಾಥ್ ನೀಡುತ್ತಿದ್ದ ಗೆಳತಿ ಚಿತ್ರಕಲಾ ಮರೆಯದೆ ಇತ್ತೀಚೆಗೆ ಮದುವೆಗೆ ಕರೆದಿದ್ದಳು. 'ತಾಳಿ ಕಟ್ಟುವ ಶುಭವೇಳೆ...ಬರಲಿ ಎನಗೊಂದು ಪ್ರೀತಿಯ ಕರೆಯೋಲೆ' ಎಂದು ಗೀಚಿಟ್ಟ ಗೆಳತಿ ಗೀತಾನಿಗೆ ಮದುವೆಯಾಗಿದೆಯೋ ಗೊತ್ತೇ ಇಲ್ಲ. ನನ್ನ ಬರವಣಿಗೆಗಳಿಗೆ ದಿನಾ ಬೆನ್ನುತಟ್ಟುತ್ತಿದ್ದ, 'ಭವಿಷ್ಯದಲ್ಲಿ ನಿನ್ನ ನಾ ಬರಹಗಾರ್ತಿಯಾಗಿ ನೋಡಬೇಕು 'ಎಂದು ಶುಭಹಾರೈಸಿದ ಮೂರನೇ ಬೆಂಚಿನ ಗೆಳತಿ ರಜನಿ,..ವಿಳಾಸ ಬರೆಯುವುದನ್ನು ಮರೆತುಬಿಟ್ಟಿದ್ದು ಮನಸ್ಸಿಗೆ ತುಂಬಾ ನೋವಾಗುತ್ತೆ. 'ಚಿತ್ರಾ ನಿನ್ನ ಹೇಗೆ ನಾ ಬಿಟ್ಟಿರಲೀ?' ಎಂದು ಅತ್ತು ವಿದಾಯ ಹೇಳಿದ ಗೆಳತಿ ಶ್ರುತಿ ಈಗ ಇಲ್ಲೇ ದಾರಿ ನಡುವೆ ಸಿಕ್ಕರೂ ಮತನಾಡಿಸಲೂ ಅವಳಿಗೆ ಪುರುಸೋತ್ತಿಲ್ಲ. ಹಾಸ್ಟೇಲಿನಲ್ಲಿ ನನ್ನ ಬೆಡ್ ಶೀಟ್ ಒಳಗಡೆ ಹುದುಗಿ ಮಲಗುತ್ತಿದ್ದ ನನ್ನ ಮುದ್ದು ತಂಗಿ ಪ್ರತಿಮಾನಿಗೆ ಈಗಲೂ ಫೋನ್ ಮಾಡಿ ಮಾತನಾಡದಿದ್ದರೆ ನಿದ್ದೆನೇ ಬರಲ್ಲ...ಇದು 'ಮೈ ಆಟೋಗ್ರಾಫ್'!
ಅಬ್ಬಾ..! ಇಷ್ಟು ನೆನಪುಗಳು ಗರಿಗರಿಯಾಗಿ ಬಿಚ್ಚಿ..ಬರೆದು ಮುಗಿಸಿದಾಗ ನಿನ್ನೆ ರಾತ್ರಿ ೧೨ ಗಂಟೆ. 'ಭಾವಸಂಗಮ' ದ ಹಾಡುಗಳು ಒಂದು ರೌಂಡು ಮುಗಿದು ..ಎರಡನೇ ರೌಂಡು ಶುರುವಾಗಿತ್ತು. ತಮ್ಮ ಸಂದೇಶ 'ಅಕ್ಕಾ, ಮಲಗು..ನಾಳೆ ಚಪಾತಿ-ಪಲ್ಯ ಮಾಡಬೇಕು..ಬೇಗ ಏಳಬೇಕು' ಅಂತ ಪದೇ ಪದೇ ಅಲಾರಂ ಥರ ತಡಬಡಿಸುತ್ತಿದ್ದ. ಅವನ ಮೇಲೆ ಪ್ರೀತಿಯಿಂದ ರೇಗುತ್ತಲೇ ನಿದ್ದೆಗೆ ಜಾರಿದೆ.
ಫೋಟೋ; ವ್ವ್ವ. flickr.com