Saturday, September 13, 2008

ಮಿಸ್ಡ್ ಕಾಲ್ ಕಿರಿಕಿರಿ!

ನಿಂಗೆ ತಾಳ್ಮೆಯಿಲ್ಲ.ಒಮ್ಮೊಮ್ಮೆ ಮುಖಕ್ಕೆ ರಾಚಿದ ಹಾಗೇ ಮಾತಾಡ್ತೀಯಾ..ಭವಿಷ್ಯದಲ್ಲಿ ಹಿಂಗಾದ್ರೆ ಕಷ್ಟ..ಏನ್ ಮಾತಾಡ್ತಿ ಅನ್ನೋದು ನಿಂಗೇ ಗೊತ್ತಿಲ್ಲ. ಮುಂದೆ ಮದುವೆಯಾದ ಗಂಡ ಹೀಗೆ ಸಿಡ ಸಿಡ ಅಂದ್ರೆ ಸಹಿಸ್ತಾನಾ? ಇಂಥ ಪಾಠಗಳು ನಂಗೆ ತೀರ ಸಾಮಾನ್ಯ. ಮನೆಯಲ್ಲಿ, ಆಫೀಸಿನಲ್ಲಿ ನಂಗೆ ತಾಳ್ಮೆಯ ಪಾಠ ಹೇಳಿದವ್ರು ಅದೆಷ್ಟೋ ಮಂದಿ. ಹೌದು! ಕೆಲವೊಮ್ಮೆ ತಾಳ್ಮೆ ನನ್ ಕೈಯಲ್ಲಿ ಇರಲ್ಲ..ಏನೇನೋ ಅಂತೀನಿ..ಎದುರಿಗಿದ್ದವರು ಯಾರೆನ್ನುವುದನ್ನೂ ನೋಡದೆ! ಆದ್ರೆ..ಮತ್ತೆ ಕ್ಷಮೆ ಕೇಳ್ತೀನಿ. ನಿನ್ನೆ ಇಂಥದ್ದೇ ಒಂದು ಆವಾಂತರ ನಡೆಯಿತು.

ನಿನ್ನೆ ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿ ಸಭೆ. ಬೆಳಿಗ್ಗೆ ಹೊಟ್ಟೆಗೇನೂ ತಿಂದಿರಲಿಲ್ಲ. ಆಫೀಸಿಗೆ ಬಂದು ತಿನ್ನೋಣ ಅಂದ್ರೆ ಮೀಟಿಂಗ್ ಇತ್ತು..ಮೀಟಿಂಗು ಮುಗಿದಾಗ ಮಧ್ಯಾಹ್ನ ಆಗಿತ್ತು. ಅಗ ಪತ್ರಿಕಾಗೋಷ್ಟೀಗೆ ಹೋಗಬೇಕಾಯಿತು. ಹೊರಟೆ. ಯಾವುದೇ ರಾಜಕೀಯ ಕಾರ್ಯಕ್ರಮಗಳಾಗಿರಲಿ ಟ್ರಾಫಿಕ್ ಜಾಮ್ ಕಟ್ಟಿಟ್ಟ ಬುತ್ತಿ. ಆಟೋದಲ್ಲಿ ಹೋದ್ರೂ ಸಮಯ ಮೀರಿತ್ತು. ಆದರೆ ಬೆಳಿಗ್ಗೆ ಮೀಟಿಂಗ್ ನಲ್ಲಿ ಕೂತಲ್ಲಿಂದ ಒಂದೇ ಸಮನೆ ಮಿಸ್ಡ್ ಕಾಲ್! ವಾಪಸ್ ಕಾಲ್ ಮಾಡೋಣಂದ್ರೆ ಟೈಮಿಲ್ಲ. ಬಂತು..ಒಂದೆರಡಲ್ಲ..50ಕ್ಕಿಂತಲೂ ಹೆಚ್ಚು ಮಿಸ್ಡ್ ಕಾಲ್. ಪ್ರೆಸ್ ಮೀಟ್ ಮುಗೀತು..ಊಟ ಮಾಡಿದೆ..ಆಫೀಸಿಗೆ ಬಂದೆ. ಆಗಾಗ ಮಿಸ್ಡ್ ಕಾಲ್ ದು ಕಿರಿಕಿರಿ. ಇವನಿಗೆ ಒಂದು ಗತಿ ಕಾಣಿಸ್ಬೇಕು ಅಂದುಕೊಂಡು ಆಫಿಸಿಗೆ ಬಂದು ಫೋನು ಮಾಡಿದ್ರೆ ಆ ಮನುಷ್ಯ ಫೋನು ತೆಗೀತಾ ಇಲ್ಲ. ನಂಗೆ ಸಹಿಸಿಕೊಳ್ಳಕೇ ಆಗಿಲ್ಲ..ಏನೇನೋ ಬೈಬೇಕಂದ್ರೆ ಆತ ಫೋನು ತೆಗೀತಿಲ್ಲ..ಎಂಥ ಮಾಡೋದು? ಅದೇ ಸಿಟ್ಟಲ್ಲಿ ಮನೆಗೆ ಹೋಗಿ ತಮ್ಮನ ಮೊಬೈಲಿನಿಂದ ಕರೆ ಮಾಡಿದ್ದೆ. ಪುಣ್ಯಾತ್ಮ ಫೋನು ಎತ್ತಿದ "ಚಿತ್ರಾನಾ...?" ಅಂದಾಗ "ಹೌದು, ನಿಂಗೆ ಅರ್ಜೆಂಟಿದ್ರೆ ಫೋನ್ ಮಾಡ್ಬೇಕಿತ್ತು. ಮಿಸ್ಡ್ ಕಾಲ್ ಏಕೆ ಕೊಡ್ತೀಯಾ?" ಅಂತೇಳಿ ಏಕವಚನದಲ್ಲಿ ಎರ್ರಾಬಿರ್ರೀ ಬೈದೆ. ಆವಾಗ ಫೋನ್ ಕಟ್! ತಡೆದುಕೊಳ್ಳದೆ "ಬೈದು ಮೆಸೇಜ್ ಕಳಿಸಿದೆ..". ಆವಾಗ ಆ ಕಡೆಯಿಂದ ಮೆಸೇಜ್ "ನಾನು ಬಾವ..." ಅಂತೇಳಿ ಹೆಸರು ಬರೆದಿತ್ತು. ನಂಗೆ ಶಾಕ್! ಬಾವ..ಅವರಿಗೆ ಬೈಯೋದು ಬಿಡಿ..ಅವರ ಜೊತೆ ಸರಿಯಾಗಿ ಮಾತೇ ಆಡದವಳು ನಾನು. ಮತ್ತೆ ಫೊನಾಯಿಸಿದೆ,,ಕ್ಷಮೆ ಕೇಳೋಣವೆಂದು..ಆದರೆ ಅವರು ಫೋನೇ ಎತ್ತಿಲ್ಲ.. ಇನ್ನೂ ಬಾವ ಫೋನೇ ಎತ್ತಿಲ್ಲ..ಬಹುಶಃ ನನ್ ಥರನೇ ಅವರಿಗೂ ತಾಳ್ಮೆ ಕೆಟ್ಟಿರಬೇಕು.

ಆದ್ರೆ..ನನ್ ಒಂದೇ ಒಂದು ಮಾತು..
ಯಾರೇ ಆಗಿರಲಿ..ಮಿಸ್ ಕಾಲ್ಡ್ ಕೊಡಬೇಕು..ಅದ್ಕೂ ಒಂದು ಮಿತಿಯಿದೆ, ರೀತಿಯಿದೆ. ಯಾರೋ ಯಾವುದೇ ಟೆನ್ಯ್ಷನ್ ನಲ್ಲಿರ್ತಾರೆ..ಅವರಿಗೆ ಪದೇ ಪದೇ ಮಿಸ್ಡ್ ಕಾಲ್ ಕೊಟ್ಟಾಗ ಕಿರಿಕಿರಿ ಎನಿಸುವುದು ಸಹಜ. ದಯವಿಟ್ಟು..ಒಬ್ಬರಿಗೆ ಕಿರಿಕಿರಿ ಎನಿಸುವಷ್ಟು ಮಿಸ್ಡ್ ಕಾಲ್ ನ್ನೂ ಯಾರಿಗೂ ಯಾರೂ ಕೊಡಬಾರದು. ನನ್ ತಮ್ಮನೇ ಆಗಿರಲಿ..ಈ ರೀತಿ ಕಿರಿಕಿರಿ ಮಾಡಿದರೆ ಸರಿ ಬೈದು ಫೋನ್ ಇಡ್ತೀನಿ..ನಂಗಿದು ಇಷ್ಟ ಆಗಲ್ಲ..ಅಷ್ಟೂ ಅರ್ಜೆಂಟಾಗಿದ್ರೆ ಫೋನ್ ಮಾಡಿ ಮಾತಾಡಬೇಕು..ಅದು ಬಿಟ್ಟು ತೊಂದರೆ ಕೊಡಬಾರದು.

Thursday, September 4, 2008

ಬೇಕೇ ಬೇಕಾ? 'ಮದ್ಯ' ರಾತ್ರಿ..?

'ಇದೇನ ಸಭ್ಯತೆ? ಇದೇನ ಸಂಸ್ಕೃತಿ?
ಇದೇನ ಇಂದು ಸತ್ಯತೆ? ಇದೇನ ನಮ್ಮ ಜಾಗೃತಿ?'
ಎಂದು ನೊಂದು ಕೇಳುತಿಹಳು ನಮ್ಮ ತಾಯಿ ಭಾರತಿ.

ರಾಜ್‌ಕುಮಾರ್, ಕಲ್ಪನಾ ಅಭಿನಯದ 'ಮಣ್ಣಿನ ಮಗ' ಚಿತ್ರಕ್ಕಾಗಿ 'ಗೀತಪ್ರಿಯ' ಬರೆದ ಹಾಡು ಅದೇಕೋ ತಲೆಯಲ್ಲಿ ಗುನುಗುಟ್ಟುತ್ತಿದೆ. ಮೊನ್ನೆ ಮೊನ್ನೆ ಗಿರೀಶ್ ಕಾರ್ನಾಡ್ ಬಿದ್ದಪ್ಪ ಜೊತೆ ಬೀದಿಗಿಳಿದು, ಬೆಂಗಳೂರು ಇಮೇಜ್ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹರಡಿಸುವ ಉದ್ದೇಶದಿಂದ ಬೇಕೇ ಬೇಕು..ಬೆಂಗಳೂರು ಜನರು ರಾತ್ರಿಯಡೀ ಸಂಗೀತ ಪಾರ್ಟಿಗಳಲ್ಲಿ ಮೋಜು-ಮಸ್ತಿ ಮಾಡಲು ಅವಕಾಶ ಕೊಡಿ ಎಂದು ಪ್ರತಿಭಟನೆ ಮಾಡಿದ್ದಾರೆ. ಆದಾದ ಬಳಿಕ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಬೀದಿಗಿಳಿದಿಲ್ಲ..ನೇರವಾಗಿ ಮುಖ್ಯಮಂತ್ರಿಗಳಿಗೇ ಪತ್ರ ಬರೆದಿದ್ದಾರಂತೆ. ಮುಂಬೈನಲ್ಲಿ ಮಧ್ಯರಾತ್ರಿ 1 ಗಂಟೆ ಮತ್ತು ದೆಹಲಿಯಲ್ಲಿ 12 ಗಂಟೆ ತನಕ ವಿನೋದಕ್ಕೆ ಅವಕಾಶ ಮಾಡಿಕೊಡುತ್ತಾರೆ. ನಾವೇನು ಕಡಿಮೆ? ನಮಗೂ ಅವಕಾಶ ಕೊಡಿ..ಮನುಷ್ಯ ಕಾಲಕ್ಕೆ ತಕ್ಕಂತೆ ಕೋಲ ಕಟ್ಟಬೇಕು ಎನ್ನುವ ಅರ್ಥದಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರಂತೆ. ಇದೀಗ ಕಿಂಗ್ ಫಿಶರ್ ದೊರೆ ವಿಜಯ್ ಮಲ್ಯ ಅವರು ಪತ್ರ ಬರೆದು ಸಮಯ ವ್ಯರ್ಥ ಮಾಡುವ ಬದಲು ಪೊಲೀಸರ ಕ್ರ,ಮದ ವಿರುದ್ಧ ಧರಣೆ ಕೂರುತ್ತೇನೆ ಎಂದಿದ್ದಾರೆ. 'ಬೆಂಗಳೂರು ಕಾಸ್ಮೋಪಾಲಿಟನ್ ನಗರ, ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ನೈಟ್ ಕ್ಲಬ್ ಮತ್ತು ಡಿಸ್ಕೋಥೆಕ್ ಗಳ ತಡರಾತ್ರಿ ಕಾರ್ಯನಿರ್ವಹಿಸಲು ತಡೆ ಹೇರಿರುವ ಪೊಲೀಸರ ಕ್ರಮದ ವಿರುದ್ಧ ಧರಣಿ ಕೂರುತ್ತೇನೆ" ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಬಿಟ್ಟಿದ್ದಾರೆ. ಇನ್ನೂ ಧರಣಿಗೆ ದಿನಾಂಕ ನಿಗದಿಯಾಗಿಲ್ಲ. ಏನ್ ಸ್ವಾಮಿ? ಈ 'ಮದ್ಯ' ರಾತ್ರಿಯ ವಿಷಯವನ್ನಿಟ್ಟುಕೊಂಡು ಎಷ್ಟು ಜನರು ಪ್ರತಿಭಟನೆ ಮಾಡ್ತಾರೆ? ಮನೆಯಲ್ಲಿ ತೆಪ್ಪಗೆ ಕುಳಿತವರೂ ಕೂಡ ಎದ್ದು ಬಂದು ಬೇಕೇ ಬೇಕು 'ಮದ್ಯ' ರಾತ್ರಿ ಎನ್ನುತ್ತಿದ್ದಾರೆ. ಏನ್ ಕಾಲ ಬಂತು ಸ್ವಾಮಿ? ಇದಕ್ಕೆಲ್ಲ ಕಾರಣ ಬೆಂಗಳೂರು ನಂ. 1. ಯಾವುದರಲ್ಲಿ..? ಐಟಿ-ಬಿಟಿಯಲ್ಲೇ? ಆಗಿರಬಹುದು ಜೊತೆಗೆ ಭ್ರಷ್ಟಾಚಾರ, ಭಯೋತ್ಪಾದನೆ, ಅತ್ಯಾಚಾರ. ಕೊಲೆ, ದರೋಡೆ, ಅಪಘಾತ, ಅಪರಾಧ, ಆತ್ಮಹತ್ಯೆ..ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಐಟಿ-ಬಿಟಿ ಬಿಟ್ಟರೆ ಈ ಪಟ್ಟಿಯಲ್ಲಿರುವ ಯಾವುದನ್ನೂ ಯಾವ ಮಹಾನುಭಾವರು ಪ್ರಸ್ತಾಪಿಸುವುದಿಲ್ಲ.

ಇತ್ತೀಚೆಗೆ ನವದೆಹಲಿಯ ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆ ನಡೆಸಿದ್ದ ಸಮೀಕ್ಷೆಯ ಪ್ರಕಾರ, ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶ ಗಳ 'ಲಂಚವತಾರ'ಗಳ ಜೊತೆ ಕರ್ನಾಟಕವೂ ನಂ. 1 ಆಗಿದೆ. 2005ರಲ್ಲಿ ಭ್ರಷ್ಟಾಚಾರದಲ್ಲಿ 20 ರಾಷ್ಟ್ರಗಳ ಪೈಕಿ ಕರ್ನಾಟಕ 17ನೇ ಸ್ಥಾನ ಪಡೆದರೆ, ಈಗ ಅತೀ ಭ್ರಷ್ಟ ರಾಷ್ಟ್ರಗಳ ಪೈಕಿ ಕನ್ನಡ ನಾಡೂ ಒಂದು. ಮಧ್ಯರಾತ್ರಿ ವರೆಗೂ ಮೋಜು-ಮಸ್ತಿ ಬೇಕೆಂದು ಧರಣಿ ಕೂರುವವರು 'ಅಯ್ಯೋ ನಮ್ ಕರ್ನಾಟಕ ಕೆಟ್ಟು ಹೋಯ್ತಪ್ಪ..ಭ್ರಷ್ಟಾಚಾರ, ಭಯೋತ್ಪಾದನೆಯನ್ನು ತೊಲಗಿಸಬೇಕು. ಇದಕ್ಕಾಗಿ ಎಂ.ಜಿ. ರೋಡ್ ನ ಮಹಾತ್ಮಾಗಾಂಧಿ ಪ್ರತಿಮೆ ಬಳಿ ಅಮರಣಾಂತ ಉಪವಾಸ ಕೂರುತ್ತೇನೆ' ಎಂದವರು ಯಾರಾದ್ರೂ ಇದ್ದರೆಯೇ? ಇದ್ದರೆ ಹೇಳಿ. ಏನಪ್ಪಾ ಈ ಹುಡ್ಗಿ..ಸಂಸ್ಕೃತಿ, ಸಭ್ಯತೆ, ಸತ್ಯ, ಜಾಗೃತಿ ಬಗ್ಗೆ ಮಾತನಾಡುತ್ತಿದ್ದಾಳೆ ಅನಿಸ್ತಾ..?! ಹೌದು! ಬೆಂಗಳೂರು ಬೆಂಗಳೂರಾಗಿ ಉಳಿದಿಲ್ಲ..ಆದರೆ ಇಂಥ ವಿಚಾರಕ್ಕೆಲ್ಲಾ ಧರಣಿ ಕೂರುವ "ಧಣಿ'ಗಳನ್ನು ಕಂಡಾಗ, ಒಳ್ಳೆಯ ವಿಚಾರಕ್ಕೆ ಬೀದಿಗೆ ಬರಲಿ ಎನ್ನುವುದು ತಪ್ಪಲ್ಲವಲ್ಲ. ಇರ್ಲಿ ಬೆಂಗಳೂರಿನಲ್ಲಿ ಹಗಲು-ರಾತ್ರಿ ಎರಡೂ ಒಂದೇ..ಮಧ್ಯರಾತ್ರಿ ವರೆಗೂ ಸಂಗೀತ ಪಾರ್ಟಿಗಳಿಗೆ ಅವಕಾಶ ಕೊಡಲಿ..ಆದ್ರೆ ಈ ಸಂಗೀತದೊಂದಿಗೆ ಬಾಟಲಿಗಳೂ ಸರಬರಾಜಾಗುತ್ತವೆ...ಮಾದಕ ವಸ್ತುಗಳು ಮಾದಕತೆಗೆ ಇನ್ನಷ್ಟು ಹುರುಪು ತುಂಬುತ್ತವೆ. ತಡರಾತ್ರಿ ವರೆಗೂ ಸಂಗೀತ ಕೇಳಿದವರು ಅಡ್ಡಾದಿಡ್ಡಿಯಾಗಿ ವಾಯಹನ ಚಲಾಯಿಸಿ..ಯಾವುದೋ ಕರೆಂಟು ಕಂಬಕ್ಕೋ ಅಥವಾ ಇನ್ಯಾವುದೋ ವಾಹನಕ್ಕೋ ಢಿಕ್ಕಿ ಹೊಡಿತಾರೇ..ಇವರನ್ನು ನೋಡಿಕೊಳ್ಳೋರು ಯಾರು ಸ್ವಾಮಿ? ಪಾಪ ಪೊಲೀಸರಿಗೂ ನಿದ್ದೆ ಯಿಲ್ಲ..ಇಂಥದ್ದೆಕ್ಕೆಲ್ಲ ಅವಕಾಶ ನೀಡಬಾರದು ಎನ್ನುವುದೇ ಸಭ್ಯ ನಾಗರಿಕರ ಮತ್ತು ಪೊಲೀಸರ ಇಚ್ಚೆಯಷ್ಟೇ, ರಾತ್ರಿ ಪಬ್. ಬಾರ್, ಡಿಸ್ಕೋಥೆಕ್ ಗಳು ಕಾರ್ಯನಿರ್ವಹಿಸಿದರೆ ನಮ್ಮ ಇಮೇಜು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುವುದಲ್ಲ. ಯಾವುದೇ ಕಟ್ಟುನಿಟ್ಟಿನ ಕಾನೂನು ಇಲ್ಲದ ನಮ್ಮ ರಾಜ್ಯದ ಮಾನ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತದೆಯಷ್ಟೇ.

ಗುರುವಿನ ಮಾತು ನೆನಪಲ್ಲ, ನಿತ್ಯ ಬದುಕು!

ಶಿಕ್ಷಕರ ದಿನಾಚರಣೆ ಮತ್ತೆ ಬಂದಿದೆ. ನಾಳೆ ಬೆಳಿಗೆದ್ದು ನನ್ನ ಪ್ರೀತಿಯ ಗುರುಗಳಿಗೆ ಶುಭಾಶಯ ಹೇಳ್ಬೇಕು. ಏನೋ ಒಂಥರಾ ಸಂಭ್ರಮ. ಶಿಕ್ಷಕರ ದಿನಾಚರಣೆ ಬಂದ ತಕ್ಷಣ ನನಗೆ ನೆನಪಾಗುವುದು ನಾನು ಓದಿದ ಪ್ರೀತಿಯ ಹೈಸ್ಕೂಲು ಕಾಣಿಯೂರು. ಯಾವುದೋ ಹಾಸ್ಟೇಲಿಗೆ ಹೋಗಬೇಕಾದವಳು ಕಾಣಿಯೂರು ಹೈಸ್ಕೂಲಿಗೆ ಸೇರಿದ್ದೆ. ನನಗೆ ಚಿಕ್ಕವಯಸ್ಸಿನಿಂದಲೂ ತುಂಬಾ ಭಯ. ಶಾಲೆಗೆ ಹೋದರೂ ಅಮ್ಮ ಜೊತೆಗೆ ಬರಬೇಕು..ಸಂಜೆ ಕರೆದುಕೊಂಡು ಬರಲೂ ಅಮ್ಮ ಬೇಕು. ಎಷ್ಟು ಅಂದ್ರೆ ಕ್ಲಾಸಲ್ಲಿ ಕುಳಿತುಕೊಂಡು ಅಮ್ಮನಿಗೆ ಯಾರಾದ್ರೂ ಏನಾದ್ರೂ ಮಾಡಿಯಾರು ಎಂಬ ಭಯ. ಆವಾಗನೇ ನಮ್ಮಪ್ಪ ನಮ್ಮ ಬಿಟ್ಟು ಹೋಗಿದ್ರು. ಅಮ್ಮ-ಅಪ್ಪ ಎರಡೂ ಅಮ್ಮನೇ. ಆವಾಗ ಏಳನೇ ತರಗತಿ ಮುಗಿಸಿದ ತಕ್ಷಣ ಅಮ್ಮ ನನ್ನನ್ನು ಪುತ್ತೂರಿನ ಹಾಸ್ಟೇಲೊಂದಕ್ಕೆ ಸೇರಿಸಿದ್ದರು. ಆದರೆ ಫೀಸು ಕೊಟ್ಟು, ಹಾಸ್ಟೇಲಿಗೆ ಬೇಕಾದ ಎಲ್ಲಾ ವಸ್ತುಗಳನ್ನು ತೆಗೆದುಕೊಟ್ಟು, ಬೇಕಾದ ಯುನಿಫಾರ್ಮ ಡ್ರೆಸ್ಸು ಕೂಡ ತೆಗೆದುಕೊಟ್ಟಿದ್ದರು. ತುಂಬಾ ಖರ್ಚು ಮಾಡಿದ್ದರು ಅಮ್ಮ. ಆದರೆ ಶಾಲೆ ಆರಂಭದ ದಿನ ಹಾಸ್ಟೇಲಿಗೆ ಹೋಗು ಅಂದ್ರೆ, ನಾನು ಒಪ್ಪಲೇ ಇಲ್ಲ. ಅಳುವುದು ಬಿಟ್ಟರೆ ಬೇರೇನಿಲ್ಲ ಉತ್ತರ. ಒಟ್ಟಾರೆ ಅಮ್ಮ ಜೊತೆಗಿರಬ್ಬೇಕು..ನನ್ನ ಕಣ್ಣೀರು ನೋಡಿ ಅಮ್ಮ 'ಇಷ್ಟೆಲ್ಲಾ ಖರ್ಚು ಮಾಡಿದೆ..ನಿಲ್ಲಮ್ಮಾ..ಒಂದು ವರ್ಷ ನಿಲ್ಲು' ಅಂದ್ರೂ ನಾ ಒಪ್ಪಿಲ್ಲ. ಮತ್ತೇನು? ಲಗೇಜಿನೊಂದಿಗೆ ಮತ್ತೆ ಅಮ್ಮನ ಜೊತೆ ವಾಪಾಸಾದೆ. ಅದು ನಡು ಮಧ್ಯಾಹ್ನ. ಆವಾಗ ಕಾಣಿಯೂರಿನಲ್ಲಿ ಊಟಕ್ಕೆಂದು ಬಸ್ಸಿಂದ ಇಳಿದೆವು. ಕಾಣಿಯೂರಿನ ಪರಿಮಳ ಹೊಟೇಲ್ ನಲ್ಲಿ ಊಟಕ್ಕೆ ಕುಳಿತಿದ್ದೇವು. ನನ್ನ ಮುಖವೆಲ್ಲಾ ಅತ್ತು ಅತ್ತು ಚೀಣೀಕಾಯಿ ಥರ ಆಗಿತ್ತು. ಮತ್ತೂ ಅಳುತ್ತಾನೇ ಇತ್ತು. ಅಮ್ಮನ ಮನಸೇ ದುಃಖದ ಕಡಲಾಗಿದ್ದರೂ ತೋರಿಸಿಕೊಳ್ಳಲಿಲ್ಲ ಅಮ್ಮ. ಹಾಗೇ ಊಟ ಮಾಡುತ್ತಿರುವಾಗ ನಮ್ಮೂರ ಸೊಸೈಟಿಯ ಅಂಕಲ್ ಒಬ್ರು ಬಂದ್ರು 'ಏನಾಯ್ತು..ಏಕೆ ಮಗಳು ಅಳ್ತಾ ಇದ್ದಾಳೆ?'ಅಂದಾಗ ಅಮ್ಮ ಎಲ್ಲಾ ಕಥೆ ಹೇಳಿದ್ದರು. ಆವಾಗ ಏಳನೇ ತರಗತಿಯಲ್ಲಿ ಪುತ್ತೂರು ತಾಲ್ಲೂಕಿನಲ್ಲಿ ಡಿಸ್ಟಿಂಕ್ಷನ್ ಪಡೆದ ಕೆಲವರಲ್ಲಿ ನಾನೂ ಒಬ್ಬಳು. ಅಷ್ಟೇ ಅಲ್ಲ ಕಾಣಿಯೂರು ಹೈಸ್ಕೂಲಿಗೆ ಆವರೆಗೆ ಅಡ್ಮಿಷನ್ ಪಡೆದ ಯಾರಿಗೂ ನನ್ನಷ್ಟು ಅಂಕ ಇರಲಿಲ್ಲ. ಸೊಸೈಟಿ ಅಂಕಲ್ ಹೇಳಿದ್ರು, ಈಗಾಗಲೇ ಸೀಟುಗಳು ಭರ್ತಿಯಾಗಿವೆ..ಕೇಳಿನೋಡೋಣ ..ಒಳ್ಳೆ ಅಂಕಗಳಿವೆ..ಅಂತೇಳಿ ಅಲ್ಲಿಂದಲೇ ಲಗೇಜು ಸಹಿತ ಕಾಣಿಯೂರು ಹೈಸ್ಕೂಲಿಗೆ ಕರೆದುಕೊಂಡು ಹೋದರು. ಅಲ್ಲಿಯ ಪ್ರಾಂಶುಪಾಲರಿಗಂತೂ ಖುಷಿಯೇ ಖುಷಿಯೇ. ನನಗೆ ಫೀಜುನಲ್ಲೂ ತುಂಬಾ ಕಡಿಮೆ ಮಾಡಿ, ಅಡ್ಮಿಷನ್ ಮಾಡಿಸಿಕೊಂಡರು. ಅಷ್ಟೇ ಅಲ್ಲ, ನನ್ನನ್ನ ಹಾಡು ಹೇಳಕೆ ಹೆಳಿದ್ರು 'ಜೋಗದ ಸಿರಿ ಬೆಳಕಿನಲ್ಲಿ..' ಊದಿಕೊಂಡ ಮುಖ, ಒಂದೆಡೆ ಹಾಡು..ಅಮ್ಮನಿಗೆ ತುಂಬಾ ಖುಷಿಯಾಯಿತು.

ಅಲ್ಲಿಂದ ನನ್ನ ಹೈಸ್ಕೂಲು ಜೀವನ. ಅಲ್ಲಿ ನಾನೇ ಹೀರೋಯಿನ್. ಕ್ಲಾಸ್ ಟೀಚರಿಂದ ಹಿಡಿದು ಪ್ರಾಂಶುಪಾಲರವರೆಗೆ ನನಗೆ ಎಲ್ಲಾ ರೀತಿಯಿಂದಲೂ ಪ್ರೋತ್ಸಾಹ ಕೊಡುತ್ತಿದ್ದರು. ಮೂರು ವರ್ಷವೂ ಕ್ಲಾಸಿನಲ್ಲಿ ಅಂಕಗಳಿಸುವುದರಾಗಲಿ, ಪ್ರಬಂಧ, ಭಾಷಣ, ಹಾಡೋದು ಎಲ್ಲದ್ರಲ್ಲೂ ನಾನು ಮುಂಚೂಣಿಯಲ್ಲಿದ್ದೆ. ಅಮ್ಮನಿಗಂತೂ ಆವಾಗ ಹಬ್ಬ. ಮತ್ತೆ ನಾನು ಹೈಸ್ಕೂಲು ಮುಗಿಸುವ ಹೊತ್ತಿಗೆ ಅಮ್ಮನ ಆರೋಗ್ಯವೂ ಕೆಟ್ಟಿತ್ತು. ತಮ್ಮನದೂ ಅದೇ ಪರಿಸ್ಥಿತಿ. ಮುಂದೆ ಪಿಯುಸಿ ಓದಬೇಕು..ಏನ್ ಮಾಡೋದು? ಎಂದಾಗ ನನ್ನ ನೆರವಿಗೆ ಬಂದಿದ್ದು ಇಡೀ ಕಾಣಿಯೂರು ಹೈಸ್ಲೂಲಿನ ಅಧ್ಯಾಪಕರುಗಳು. ಪ್ರತಿಯೊಬ್ಬ ಅಧ್ಯಾಪಕರೂ 'ಚಿತ್ರಾ ನೀನು ಇನ್ನೂ ಓದ್ಬೇಕಮ್ಮಾ..ನಾವಿದ್ದೇವೆ ಜೊತೆಗೆ' ಅಂತೇಳಿ ಸಹಾಯಧನದ ರೂಪದಲ್ಲಿ ನನಗೆ ಫೀಜಿನ ಹಣ ಕೊಟ್ಟಿದ್ದರು. ಬದುಕಿನ ಪ್ರತಿಯೊಂದು ಕ್ಷಣದಲ್ಲೂ ನನ್ನ ಗುರುವೃಂದವನ್ನು ನಿತ್ಯ ನೆನೆಸಿಕೊಳ್ಳುತ್ತೇನೆ..ಶಿಕ್ಷಕರ ದಿನದಂದು ಅವರಿಗೆ ಪುಟ್ಟದಾಗಿ ಶುಭಾಶಯ ಹೇಳುತ್ತೇನೆ..ಅದೇ ಅವರಿಗೆ ಖುಷಿ. ಚಿತ್ರಾ ಹೇಗಿದ್ಯಮ್ಮಾ..ಚೆನ್ನಾಗಿರು..ಬೆಂಗಳೂರು ಜೋಪಾನ..ಬಂದಾಗ ಕಾಲೇಜಿಗೆ ಬಾ ಅನ್ತಾರೆ..ನನ್ನ ಗುರುಗಳು. ಎಷ್ಟೊಂದು ಖುಷಿಯಾಗುತ್ತೆ ಅವರಿಗೆ. ನಮ್ಮ ಬದುಕಿಗೆ ಬೇಕಾದನ್ನೆಲ್ಲಾ ಧಾರೆ ಎರೆಯುವ ಗುರುಗಳಿಗೆ ವರ್ಷಕ್ಕೊಮ್ಮೆ ಶುಭಾಶಯ ಅಂದರೂ, ಅವರು ಹೇಳಿರುವ ಮಾತುಗಳು, ಹಿತನುಡಿಗಳು ಎಲ್ಲವೂ ನಿತ್ಯದ ನೆನಪಲ್ಲ, ಬದುಕು. ಮತ್ತೆ ಉಜಿರೆಗೆ ಹೋದೆ..ಅಲ್ಲೂ ನಂಗೇನೂ ಕಡಿಮೆಯಾಗಿಲ್ಲ..ಪ್ರೀತಿಯ ಮೇಡಂ ಶುಭದಾಸ್, ಸಂಪತ್ ಸರ್, ನಾಗಣ್ಣ ಸರ್, ಭಾಸ್ಕರ ಹೆಗಡೆ ಸರ್..ಎಲ್ಲರೂ ನನಗೆ ಕ್ಷಣ ಕ್ಷಣಕ್ಕೂ ಸ್ಫೂರ್ತಿಯಾಗಿದ್ದರು. ಮನೆಯಲ್ಲಿ ಅಮ್ಮನೇ ನನಗೆ ಗುರು, ಆದರೆ ಶಾಲೆ, ಕಾಲೇಜಿಗೆ ಬಂದಾಗ ನನಗೆ ಗುರುಗಳೇ ಅಮ್ಮ ನೂ ಆಗಿದ್ದರು.ಬದುಕನ್ನೇ ಕಲಿಸಿಕೊಟ್ಟ ನನ್ನ ಪ್ರೀತಿಯ ಗುರುಗಳೇ...ಶಿಕ್ಷಕರ ದಿನದ ಶುಭಾಶಯಗಳು.

Wednesday, September 3, 2008

ವೇದಿಕೆ ಮೇಲೆ ನಿಂತು ಬಡತನ ತೊಲಗಲಿ ಅಂದ್ರೆ..!

'ವಿಜ್ಞಾನ ಮತ್ತು ತಂತ್ರಜ್ಞಾನ ಬಡತನ ನೀಗಿಸಲಿ' ಎಂದು ವಿಜ್ಷಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತರ್ ರಾಷ್ಟ್ರೀಯ ಮನ್ನಣೆ ಗಳಿಸಿದ ಮಹಾನ್ ವ್ಯಕ್ತಿಯೊಬ್ಬರು ಬೆಂಗಳೂರಿನ ಪ್ರತಿಷ್ಠಿತ ಹೊಟೇಲೊಂದರ ಡಯಾಸ್ ಮೇಲೆ ನಿಂತು ಮಾತನಾಡಿದಾಗ ನಗು ಉಕ್ಕಿ ಬಂತು. ಹೌದು! ತುಂಬಾ ಜನ ಹೀಗೇ ಮಾತಾಡ್ತಾರೆ..ನಿಂಗೆ ನಗು ಉಕ್ಕಿ ಬಂದಿಲ್ವಾ ಚಿತ್ರಾ? ಅಂತ ನೀವು ಕೇಳಬಹುದು..ಆದ್ರೆ ಹೀಗೆ ಹೇಳಿದ್ದು ವಿದೇಶದಿಂದ ಬಂದ ವ್ಯಕ್ತಿ ಅಲ್ಲ. ಕನ್ನಡಿಗ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆದ, ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡ ಇವರು ಮುಕ್ಕಾಲು ಗಂಟೆ ಭಾಷಣ ಮಾಡಿದ್ದು ತೀರ ಹಾಸ್ಯಾಸ್ಪದ ಅನಿಸಿತ್ತು ನಂಗೆ. ಹೌದು! ಬೆಂಗಳೂರು ತಂತ್ರಜ್ಞಾನದಲ್ಲಿ ನಂ.1 ಸ್ಥಾನದತ್ತ ಸಾಗಿದೆ. ಇದಕ್ಕೆ ಕಾರಣಕರ್ತರಾದವರೂ ಇಲ್ಲೇ ಇದ್ದಾರೆ. ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಈ ರೀತಿಯ 'ಕರೆ'ಗಳನ್ನು ಕೊಡುತ್ತಲೇ ಇದ್ದಾರೆ. ವಿದೇಶದಲ್ಲಿ ಹೋಗಿ ಮುಂದಿನ ಹತ್ತು ವರ್ಷಗಳಲ್ಲಿ ಕರ್ನಾಟಕ ಐಟಿ-ಬಿಟಿಯಲ್ಲಿ ನಂ.1 ಆಗಲಿದೆ ಅನ್ತಾರೆ. ಅಲ್ಲೊಂದಿಷ್ಟು..ಇಲ್ಲೊಂದಿಷ್ಟು..ಚಪ್ಪಾಳೆಗಳ ಸದ್ದು. ಮರುದಿನ ಪತ್ರಿಕೆಗಳಲ್ಲಿ ಮುಖಪುಟಗಳಲ್ಲಿ ಅವರ ಭಾಷಣಗಳದ್ದೇ ಕಾರುಬಾರು..ಟಿ.ವಿ, ಚಾನೆಲ್ ಗಳಲ್ಲಿ ಅವರ ಮಾತುಗಳು ವಿಶೆಷ ವರದಿ..ಮಾಧ್ಯಮಗಳು ಪ್ರಚಾರ ನೀಡಬೇಕಾಗಿರುವುದೂ ಕರ್ತವ್ಯವೇ ಬಿಡಿ..ಆದರೆ ಅವರ ಮಾತಿಗೆಷ್ಟು ಪ್ರಚಾರ ಸಿಕ್ಕುತ್ತೆ ನೋಡಿ.

ಈ ರೀತಿ ಭಾಷಣ ಮಾಡೋವರಿಗೆ 'ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಬಡತನ ನೀಗಲಿ' ಎಂದು ಹೇಳಲಷ್ಟೇ ಗೊತ್ತು. ಅದನ್ನು ಹೇಗೆ ಮಾಡೋದು? ನಾವೇನು ಮಾಡಬೇಕು? ಇವರಿಗೇನೂ ಗೊತ್ತಿರಲ್ಲ. ಇನ್ನು ಇಂಥ ಕುಬೇರರಿಂದಲೇ ಅಭಿವೃದ್ಧಿ ಹೊಂದುವ ವಿಜ್ಷಾನ ಮತ್ತು ತಂತ್ರಜ್ಞಾನ ಬಡತನವನ್ನು ನೀಗಿಸುವುದಾದರೂ ಹೇಗೆ? ಮೊನ್ನೆ ಮೊನ್ನೆ ಒಂದು ಸಮೀಕ್ಷಾ ವರದಿ ಬಂದಿತ್ತು..ಅದೂ ವಿಶ್ವಬ್ಯಾಂಕ್ ಜಾಗತಿಕ ಬಡತನ ತಖ್ತೆಯಿಂದ ತಿಳಿದುಬಂದಿದ್ದು. .ಭಾರತದ ಒಟ್ಟು ಜನಸಂಖ್ಯೆಯ 1/3ರಷ್ಟು ಜನ ಬಡವರು! ಬೆಂಗಳೂರಿನ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನ ಕೊಳಗೇರಿಗಳಲ್ಲಿ ವಾಸಿಸುತ್ತಾರೆ. ಇವರ ಮನೆಯಲ್ಲಿ ಬೆಳಕು ನೀಡುವ ವಿದ್ಯುತ್ ಬಲ್ಬ್ ಗಳಿಲ್ಲ..ಕುಡಿಯುವ ನೀರಿನ ವ್ಯವಸ್ಥೆ ಇರುವುದಿಲ್ಲ. ಮಳೆ ಬಂದಾಗಲೆಲ್ಲಾ..ರಸ್ತೆ, ಚರಂಡಿಗಳ ನೀರು ಇವರ ಮನೆಗೆ ಹೋಗುತ್ತದೆ. ಇದು ಇಲ್ಲಿನ ಯಾವ ಮಹಾನ್ ಉದ್ಯಮಿಗಾದ್ರೂ ಅರಿವಿಗೆ ಬರುತ್ತದೆಯೇ? ಅರಿವು ಬಿಡಿ..ಯಾರೋಬ್ಬರ ಭಾಷಣದ ವಸ್ತುವೂ ಇದಾಗಲ್ಲ. ಜಾಗತಿಕ ಮಟ್ಟದಲ್ಲಿ ನಂ. 1ಆದವನು ಯಾವತ್ತೂ ಬಡಜನರ ಅಭಿವೃದ್ಧಿ ಬಗ್ಗೆ ಕನಸು ಕಾಣುವ ಮಾತನಾಡಿದರೆ ..ಅದು ಸತ್ಯವೆಂದು ನಂಬುವುದೇ ಅಪರಾಧವಾದೀತು. ಈ ರೀತಿ ಮೈಕ್ ಎದುರು ನಿಂತು 'ಬಡತನ ತೊಲಗಲಿ, ಬಡಜನರ ಉದ್ಧಾರ ಆಗ್ಲಿ..ಹಾಗೇ ಮಾಡಬೇಕು. ಹೀಗೇ ಮಾಡಬೇಕು' ಎಂದು ಹೇಳುವ ಬದಲು, ಸ್ವತಃ ನಾವೇನಾದ್ರೂ ಮಾಡಿದರೆ ಎಂದು ಯೋಚಿಸಬೇಕು. ತಾಕತ್ತಿದ್ರೆ ಬಡಜನರ ಮನೆಗೆ ಹೋಗಿ ನೋಡಲಿ..ಸತ್ತು ಬದುಕುವ ಬಡವರ ಬದುಕನ್ನು ಕಣ್ಣು ಬಿಟ್ಟು ನೋಡಬೇಕು. ನಮ್ಮ ಸರ್ಕಾರ, ಜನಪ್ರತಿನಿಧಿಗಳ ಬಗ್ಗೆ ಹೇಳಿ ಪ್ರಯೋಜನವಿಲ್ಲ. ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ನಂ.1 ಎನಿಸಿಕೊಂಡ ಉದ್ಯಮಿಗಳು, ವಿಜ್ಞಾನಿಗಳು ಮುಂತಾದವರು ಬಡತನ ಎಂಬ ಶಬ್ಧವನ್ನು ಭಾಷಣದ ವಸ್ತುವಾಗಿಸುವ ಬದಲು, ಬಡಜನರ ಬದುಕಿಗೆ ನೆರವಾಗುವುದು ಹೇಗೇ? ಎಂಬುದನ್ನು ಯೋಚಿಸಬೇಕು.
ಫೋಟೋ: ಎನ್.ಕೆ.ಎಸ್.

ಹೀಗೊಂದು ಸ್ವಾಮೀಜಿಯ ಕಥೆ!

ನನಗಾಗ ಪುಟ್ಟ ವಯಸ್ಸು. ಆವಾಗ ಊರ ಜಾತ್ರೆಗೆ ಹೋಗೋದಂದ್ರೆ ಭಾರೀ ಖುಷಿ. ಪ್ರತಿ ವರ್ಷ ಈ ಜಾತ್ರೆಗೆ ಯಾವುದಾದ್ರೂ ಮಠದ ಸ್ವಾಮೀಜಿಗಳು ವಿಶೇಷ ಅತಿಥಿಗಳಾಗಿ ಬರುತ್ತಿದ್ದರು. ಅವರದ್ದು ಪ್ರತ್ಯೇಕ ಧಾರ್ಮಿಕ ಉಪನ್ಯಾಸ..ಪಕ್ಕಾ ಭಯ, ಭಕ್ತಿ, ತ್ಯಾಗದ್ದೇ ಮಾತು. ನಾನು ಅಜ್ಜಿ ಜೊತೆ ಜಾತ್ರೆಗೆ ಹೋಗುತ್ತಿದ್ದೆ. ಅಮ್ಮನಿಗೆ ಜಾತ್ರೆ, ಜನಜಂಗುಳಿ ತುಂಬಾ ದೂರ. ಜಾತ್ರೆಗೆ ಹೋದಾಗ ಎಲ್ಲರಂತೆ ನಾನೂ ಸರತಿಯ ಸಾಲಿನಲ್ಲಿ ನಿಂತು ಸ್ವಾಮೀಜಿಗೆ ಚಿಲ್ಲರೆ ಹಾಕಿ, ಕಾಲಿಗೆ ನಮಸ್ಕರಿಸುತ್ತಿದ್ದೆ. ಅವರು ಪ್ರಸಾದ ಕೊಟ್ರೆ ಅದನ್ನೂ ಮನೆಗೆ ತರುತ್ತಿದ್ದೆ. ಅಲ್ಲಿ ಸ್ವಾಮೀಜಿಗಳು ಗಂಟೆಗಟ್ಟಲೆ ಹೇಳಿದ್ದನ್ನು ತಪ್ಪದೆ ಕೇಳಿಸಿಕೊಂಡು ಬಂದು ಅಮ್ಮನಿಗೊಪ್ಪಿಸುತ್ತಿದ್ದೆ. ಅಮ್ಮ ಅದನ್ನೆಲ್ಲಾ ಕೇಳಿಸಿಕೊಂಡು ಸ್ವಾಮೀಜಿ, ದೇವರು, ಭಕ್ತಿಯ ಬಗ್ಗೆ ನನಗೂ ಹೇಳುತ್ತಿದ್ದಳು. ಸ್ವಾಮೀಜಿಗಳ ಬಗ್ಗೆ ಹೇಳುವಾಗ ಅಮ್ಮನೆಂಬ ದೇವರ ಮಾತಿನಲ್ಲಿ ಗೌರವಿತ್ತು. ನನಗೆ ಇದೆಲ್ಲಾ ವಿಚಿತ್ರ ಅನಿಸ್ತಾ ಇತ್ತು. ಅದ್ಯಾಕಮ್ಮಾ ಸ್ವಾಮೀಜಿಗಳ ಪಾದಪೂಜೆ ಮಾಡಿ ನೀರು ಕುಡಿಯುತ್ತಾರೆ? ನೀನ್ಯಾಕೆ ದೇವರ ಪ್ರಸಾದವೆಂದರೆ ಅಷ್ಟೊಂದು ಭಕ್ತಿಯಿಂದ ಜೋಪಾನವಾಗಿಟ್ಟು ದಿನಾ ನನಗೆ ಸ್ನಾನ ಮಾಡಿಸಿ ಹಚ್ಚುತ್ತಿ? ಎಂದು ಕೇಳಿದಾಗ 'ಸ್ವಾಮೀಜಿಗೆ ಏನೂ ಹೇಳಬಾರದು ಮಗೂ. ಅವರು ಹೇಳಿದಂತೆ ಆಗುತ್ತದೆ. ಎಲ್ಲೇ ನೋಡಿದ್ರೂ ಅವರಿಗೆ ನಮಸ್ಕಾರ ಮಾಡ್ಬೇಕು" ಎನ್ನುತ್ತಿದ್ದಳು. ಅಮ್ಮ ಹೇಳಿದ ಮೇಲೆ ಮುಗಿದೇ ಹೋಗಿತು..ಮತ್ತೆ ಅದನ್ನು ಪ್ರಶ್ನಿಸುವ ಗೋಜಿಗೆ ನಾನ್ಯವತ್ತೂ ಹೋಗಲ್ಲ. ಸ್ವಾಮೀಜಿಗಳಂದ್ರೆ ಏನೋ ಗೌರವ, ಪ್ರೀತಿ, ಭಯ-ಭಕ್ತಿ. ಸಿಕ್ಕಾಗೆಲ್ಲಾ ಸ್ವಾಮೀಜಿಗಳನ್ನು ಹುಡುಕಿಕೊಂಡು ಹೋಗಿ ನಮಸ್ಕರಿಸುತ್ತಿದ್ದೆ. ಆದರೂ ಮನಸ್ಸಲ್ಲಿ ಹಲವಾರು ಪ್ರಶ್ನೆಗಳು: ಏಕೆ ಸ್ವಾಮೀಜಿಗಳನ್ನು ದೇವರಂತೆ ಕಾಣುತ್ತಾರೆ? ಅವರೇನು ಮಾನವರೂಪದ ದೇವರುಗಳೇ? ಹಿರಿಯರೆಂದು ಅವರನ್ನು ಗೌರವದಿಂದ ಕಾಣುತ್ತಾರೆಯೇ? ಅವರು ನಮ್ಮಂತೆ ನೆಲದ ಮೇಲೆ ನಡೆದಾಡುತ್ತಾರೆ..ಆದ್ರೂ ಥೂ! ಅವರ ಪಾದ ತೊಳೆದು ಅದ್ಯಾಕೆ ನೀರು ಕುಡಿಯಬೇಕು? ಶುದ್ದ ಸಸ್ಯಾಹಾರಿಗಳಾಗಿರಬಹುದು..ಮೂರು ಹೊತ್ತು ಸ್ನಾನ ಮಾಡುತ್ತಾರೆ..ಮದುವೆ ಆಗಲ್ಲ..ಇಷ್ಟಕ್ಕೂ ಅವರೂ ಮನುಷ್ಯರಲ್ವಾ? ಮುಂತಾದ ಪ್ರಶ್ನೆಗಳು ದಿನಾ ತಲೆ ತಿನ್ನುತ್ತಿದ್ದವು. ಇಂಥ ನನ್ನ ಪಾಲಿನ ಮಿಲಿಯನ್ ಡಾಲರ್ ಪ್ರಶ್ನೆಗಳಿಗೆ ಅಮ್ಮನದು ಮಾತ್ರ ಒಂದೇ ಉತ್ತರ 'ಹಾಗೆಲ್ಲ ಯೋಚಿಸಬಾರದು ಮಗೂ..ಸ್ವಾಮೀಜಿಗಳು ಮದುವೆ ಆಗಲ್ಲ.ಅವರು ದೇವರಿಗೆ ಸಮಾನ'! ಹೌದು! ಅಂತೆಯೇ ನಾನು ಆಮೇಲೆ ಕೇಳಿಲ್ಲ..ಓದು ಮುಗೀತು..ಬೆಂಗಳೂರಿಗೆ ಬಂದೆ..ಒಳ್ಳೆಯ ಉದ್ಯೋಗನೂ ಪಡೆದೆ.

ಆದರೆ ಬೆಂಗಳೂರು?! ನಮ್ಮೂರಿಗಿಂದ ತುಂಬಾ ಭಿನ್ನ. ಇಲ್ಲಿ ನೋಡಿದ್ದಲ್ಲಿ..ಹೆಜ್ಜೆಯಿಟ್ಟಲ್ಲಿ..ದೇವಸ್ಥಾನಗಳು, ಸ್ವಾಮೀಜಿಗಳು, ಜ್ಯೋತಿಷಿಗಳು ಅಬ್ಬಬ್ಬಾ! ನನಗೇನೋ ಹೊಸದು ಬೆಂಗಳೂರು. ಇಲ್ಲಿ ಬಂದೂ ನನಗೆ ಇಬ್ಬರು ಸ್ವಾಮೀಜಿಯಬರ ಪರಿಚಯವಾಗಿತ್ತು. ನೋಡುವ ಜನರಿಗೆ, ಬೆಂಗಳೂರಿಗೆ ಬೆಂಗಳೂರೇ ಗೌರವದಿಂದ ಕಾಣುವ ಈ ಮಹಾನ್ ಸ್ಮಾಮೀಜಿಗಳು ಮಾತ್ರ ಪಕ್ಕಾ ಬ್ಯುಸಿನೆಸ್ ಸ್ವಾ,ಮೀಜಿಗಳು. ನೈತಿಕತೆ ಬಗ್ಗೆ ಮಾತಾಡುತ್ತಿದ್ದ ಇವರಿನಿಗೆ ನೈತಿಕತೆ ಅಂದ್ರೆ ಏನೂಂತಾನೇ ಗೊತ್ತಿರಲಿಲ್ಲ. ಕಾವಿಧಾರಿ ಆ ಸ್ವಾಮೀಜಿಗಳು ಕಪಟ, ಮೋಸ, ವಂಚನೆ, ಅನೈತಿಕತೆಯ ಇನ್ನೊಂದು ರೂಪವಾಗಿದ್ದರು. ಸ್ವಲ್ಪ ದಿನಗಳ ನಂತರ ಒಟ್ಟಿನಲ್ಲಿ ಸ್ವಾಮೀಜಿಗಳ ಬಗ್ಗೆ ಶೋಧಿಸುವ ಕಾರ್ಯದಲ್ಲೇ ತೊಡಗಿದ್ದೆ. ಅಮ್ಮ ಹೇಳಿದ ಗೌರವ, ಭಕ್ತಿ, ಮಾನವರೂಪದ ದೇವರುಗಳು ಮೌಢ್ಯದ ರೂಪ ತಳೆದು ನಿಂತಿದ್ದವು. ಆವಾಗಲೇ ಅಮ್ಮನಿಗೆ ಫೋನು ಮಾಡಿ ಹೇಳಿದೆ, "ಅಮ್ಮಾ ನೀನು ಹೇಳಿದ್ದು ಸುಳ್ಳು..ನೋಡು ಎಲ್ಲವನ್ನೂ ಸತ್ಯವೆಂದು ನಂಬಬೇಡ". ಆದರೆ ಅಮ್ಮನಿಗೆ ದೇವರ ಬಗ್ಗೆ, ದೇವರ ಸ್ವರೂಪ ಎಂದು ಜನ ನಂಬುವ ಸ್ವಾಮೀಜಿಗಳ ಬಗೆಗಿದ್ದ ನೈಜ ಭಕ್ತಿ ಅವಳ ಮಾತನ್ನು ಸಮರ್ಥಿಸಿಕೊಳ್ಳುವಂತೆ ಮಾಡಿತ್ತು. ಅಮ್ಮನ ಮುಗ್ಧತೆ, ಪ್ರಾಮಾಣಿಕತೆಯೆದುರು ನಾನು ಮೌನವಾಗಿದ್ದೇನೆ. ಆದರೆ ಬೆಂಗಳೂರಿನಂಥ ನಗರಕ್ಕೆ ಬಂದು, ಜಗತ್ತಿನ ಇನ್ನೊಂದು ಮುಖವನ್ನು ನೋಡಿದ್ದೇನೆ. ಮನುಷ್ಯ ಎಷ್ಟೇ ಸುಶಿಕ್ಷಿತನಾಗಿದ್ದರೂ ಮೌಢ್ಯ ಅವನನ್ನು ಬಿಟ್ಟು ಹೋಗಿಲ್ಲ. ಸತ್ಯವನ್ನು ಶೋದಿಸುವ ಕಾರ್ಯ ಮನುಷ್ಯ ಮಾಡುತ್ತಿಲ್ಲ ಏಕೆ? ಎನ್ನುವ ಪ್ರಶ್ನೆ ನನ್ನದು. ಇತ್ತೀಚಿನ ದಿನಗಳಲ್ಲಿ ಹಣ ಮಾಡುವುದಕ್ಕಾಗಿ 'ಸ್ವಾಮೀಜಿ'ಗಳೆನಿಸಿಕೊಂಡವರು, ಕೊನೆಗೆ ಸಿಕ್ಕಿಬಿದ್ದ ನಕಲಿ ಸ್ವಾಮೀಜಿಗಳು ಎಲ್ಲವನ್ನೂ ಬೆಂಗಳೂರಲ್ಲಿ ನೋಡುತ್ತಿದ್ದೇನೆ. ಆದರೂ ಜನ ಹೀಗೇಕೆ? ಎನ್ನುವ ಪ್ರಶ್ನೆ ನನ್ನದು.

ಗೆಳೆಯ ಸಂಜು ಇಷ್ಟನ್ನೂ ಹೇಳಿ ಮುಗಿಸಿದಾಗ ನಾನು ಇಳಿಯುವ ಸ್ಥಳನೂ ಬಂದಿತ್ತು. ಕಾರಿಂದ ಇಳಿದೆ. ಮತ್ತಷ್ಟು ದೂರ ಹೋಗಬೇಕು..ಇನ್ನೊಂದು ಬಸ್ಸು. ಸೀಟುಗಳೆಲ್ಲಾ ಖಾಲಿ ಯಿದ್ದುವು..ಆರಾಮವಾಗಿ ಬಸ್ಸಲ್ಲಿ ಕೂತಾಗ ..ಆತನ ಮಾತುಗಳು ಮತ್ತೆ ಮತ್ತೆ ಪ್ರತಿಧ್ವನಿಸಿದುವು. ನನ್ನ ಅನುಭವಗಳೂ ಮತ್ತೊಮ್ಮೆ ಕಣ್ಣೆದುರು ಮೂಡಿಬಂದುವು. ಖ್ಯಾತ ಚಿತ್ರನಟರೊಬ್ಬರ ಮನೆಯಲ್ಲಿ ಪೂಜೆಯಿತ್ತು. ಅಲ್ಲಿ ಅಂತರ್ ರಾಷ್ಟ್ರೀಯ ಮನ್ನಣೆ ಪಡೆದ ಸ್ವಾಮೀಜಿಗಳಿಂದ ಭಜನೆ ಕಾರ್ಯಕ್ರಮನೂ ಇತ್ತು. ಹಾಗೇ ಸ್ವಾಮೀಜಿಗಳು ತಮ್ಮ ಭಜನಾ ತಂಡದೊಂದಿಗೆ ಕಾರಿನಲ್ಲಿ ಬಂದಿದ್ದರು. ಅವರ ಕಾರಿನ ಚಾಲಕ ಹೇಳುತ್ತಿದ್ದ; ಸ್ವಾಮಿಗಳು ನಿನ್ನೆ ಫಾರಿನ್ ಟೂರ್ ಮುಗಿಸಿ ಬಂದಿದ್ರು...ಇವತ್ತು 2 ಕಡೆ ಭಜನೆ ಇತ್ತು. ಇವರೇನೋ ತಮ್ಮದು ದಾನ ಧರ್ಮ ಅಂತಾರೆ. ಆದರೆ ಇವರನ್ನು ಹೊರತುಪಡಿಸಿ ಭಜನೆ ಹಾಡುವವರು, ತಬಲ ಬಾರಿಸುವವರು ಎಲ್ಲರಿಗೂ ಪ್ರತ್ಯೇಕ ಸಂಬಳ ತೆಗೆದುಕೊಳ್ಳುವಂತೆ ಹೇಳಿರುತ್ತಾರೆ. ದುಬಾರಿ..ಕೆಲವರು ಸ್ವಾಮೀಜಿ ತಂಡವೆಂದು ಬೇಕಾಬಿಟ್ಟಿ ಹಣ ನೀಡುವವರೂ ಇದ್ದಾರೆ. ತಮಗೆ ಬೇಕಾದ ಹಣವನ್ನು ಭಜನೆ ತಂಡದಿಂದ ತೆಗೆದುಕೊಂಡು ಬಳಿಕ ಆ ತಂಡಕ್ಕೆ ಸಂಬಳ ನೀಡುತ್ತಾರೆ!
ಇದು ಸತ್ಯಾನೋ/ಸುಳ್ಲೋ ಎನ್ನುವುದಕ್ಕಿಂತ ಆತ ಹೇಳಿದ್ರಿಲ್ಲಿ ಸತ್ತಾಂಶವಿದೆ ಎನ್ನುವುದನ್ನು ಅಲ್ಲಗಳೆಯಲಾಗದು. ಪ್ರಸ್ತುತ ಸಮಾಜದಲ್ಲಿ ಹಣಕ್ಕಾಗಿ ಸ್ವಾಮೀಜಿಗಳಾಗಿದ್ದ ಎಷ್ಟೋ ಮಂದಿ ಇದ್ದಾರೆ ಎನ್ನುವುದು ನಂಬಲರ್ಹ ಸತ್ಯವೇ.

Friday, August 29, 2008

ಥ್ಯಾಂಕ್ಯೂ ಕನ್ನಡಪ್ರಭ

ಕನ್ನಡ ಪ್ರಭದ (29.08.2008) ಬ್ಲಾಗಾಯಣ ಅಂಕಣದಲ್ಲಿ ನನ್ನ 'ಶರಧಿ'ಯ ಬಗ್ಗೆ ಮೂಡಿಬಂದಿದ್ದು: ಬದುಕಿನ ಅನುಭವಗಳು ಹರಿದ ಹಾದಿ 'ಶರಧಿ'. ಶರಧಿಯಲ್ಲಿ ಪಯಣ ಬೆಳೆಸಿರುವ ಇವರು ಚಿತ್ರಾಕರ್ಕೇರಾ ದೋಳ್ಪಾಡಿ. ಕರಾವಳಿ ಮಡಿಲಲ್ಲಿರುವ ಪುತ್ತೂರಿನವರಾದರೂ ಈಗ ಬೆಂಗಳೂರಿನ ನಿವಾಸಿ. ಪತ್ರಕರ್ತೆಯಾಗಿರುವ ಇವರು ಸುದ್ದಿ, ಸುತ್ತಾಟಗಳ ಅನುಭವಗಳನ್ನೇ ಹೆಚ್ಚಾಗಿ ಹಂಚಿಕೊಂಡಿದ್ದಾರೆ. ಥ್ಯಾಂಕ್ಯೂ ಕನ್ನಡಪ್ರಭ...

Thursday, August 28, 2008

'ಬಿಟ್ಟಿ ಟಿಕೆಟ್,' 'ಸ್ಲೀವ್ ಲೆಸ್ ಸರಸ'ಕ್ಕೆ ಕೊನೆ ಎಂದು?

ಬಿಟ್ಟಿ ಟಿಕೆಟ್', ಸ್ಲೀವ್ ಲೆಸ್ ಸರಸ, ಬೊಂಬಾಟ್ ಭಾಮಾ, ಒನ್ಲಿ ಸೂಪರ್ ಹಿಟ್ ಕನ್ನಡ ಹಾಡುಗಳು, ಸಕತ್ ಹಾಟ್ ಮಗಾ, ಮಸ್ತ್ ಮಜಾ ಮಾಡಿ....ಮುಂತಾದ ಪದಗಳನ್ನು ಎಲ್ಲಿ ಕೇಳಲು ಸಾಧ್ಯ? ಹೌದು! ನಿಮಗೂ ಗೊತ್ತು..ಎಫ್.ಎಂ.ಗಳಲ್ಲಿ ಮಾತ್ರವೆಂದು. ಬೆಳಿಗೆದ್ದು ಎಫ್.ಎಂ. ಕೇಳೋಣಾಂದ್ರೂ ಸಕತ್ ಹಾಟ್ ಮಗಾ, ಮಸ್ತ್ ಮಜಾ ಮಾಡಿ ಬೆಂಗಳೂರು ತಪ್ಪಿದ್ದಲ್ಲ. ಹೌದು! ಎಫ್.ಎಂ.ಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ...ಸಮಯ ಕಳೆದಿದ್ದೇ ಗೊತ್ತಾಗಲ್ಲ ಎನ್ನೋರು ಇದ್ದಾರೆ. ಆದರೆ ಅದ್ಯಾಕೋ ಕೆಲವೊಮ್ಮೆ ಜೀವಂತ ನಾಲಗೆಯಿರುವ ಕನ್ನಡಿಗರ ಬಾಯಿಯಿಂದಲೇ ಕನ್ನಡದ ಕೊಲೆಯಾಗುತ್ತಿರುವಾಗ ಅತಿಯಾಯಿತೆನಿಸುತ್ತೆ, ಕೇಳಲೂ ಅಸಹ್ಯವಾಗುತ್ತೆ. ಕೇಳಲೂ ಮಹಾವೇದನೆ. ಮಾತಾಡುತ್ತಾ ಮಜಾ ಮಾಡ್ಲಿ..ವಿಷ್ಯ ಅದಲ್ಲ..ಕಂಗ್ಲೀಷ್ ಮಾತಾಡ್ತಾರಲ್ಲ..ಅದು ಕೇಳುಗರಿಗೇ ಮುಜುಗರ ತರಿಸುತ್ತದೆ.

ಈ ಬಗ್ಗೆ ಹಿಂದೊಮ್ಮೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಿದ್ಧಲಿಂಗಯ್ಯ, ಕಟ್ಟಪ್ಪಣೆ ಮಾಡಿದ್ದರು. ಆದದೆ ಅದರಿಂದ ನಯಾಪೈಸೆಯೂ ಲಾಭವಾಗಿಲ್ಲ. ಇದೇನು ಹೊಸತಲ್ಲ ಬಿಡಿ..ಸರ್ಕಾರ ಬುದ್ದಿಜೀವಿಗಳು, ಹಿರಿಯರು ಎಲ್ಲರೂ ಅನ್ಯಭಾಷೆಗಳ ಕುರಿತು ಭಾರೀ ಪ್ರೀತಿಯಿಂದಲೇ ಮಾತನಾಡಿದ್ದಾರೆ. ಆವಾಗೆಲ್ಲಾ ಅವರಿಗೆ ಇಂಥ ಸಣ್ಣ ತಪ್ಪುಗಳಿಂದಲೇ ಕನ್ನಡ ಭಾಷೆ ನೆನೆಗುದಿಗೆ ಬೀಳುತ್ತಿದೆ ಎನ್ನುವುದು ತಲೆಯಲ್ಲಿ ಹೊಳೆದಿರಲಿಕ್ಕಿಲ್ಲ. ಅನ್ಯಭಾಷೆಯನ್ನು ಗೌರವಿಸೊಣ, ಪ್ರೀತಿಸೋಣ. ಆದರೆ ಇದನ್ನೇ ಕನ್ನಡಿಗರ ದೌರ್ಬಲ್ಯವೆಂದು ನಡೆದುಕೊಂಡಾಗ ಕನ್ನಡಿಗರು ಎದುರು ನಿಲ್ಲಲೇಬೇಕಲ್ವೇ? ಬೆಂಗಳೂರಿನ ಎಫ್. ಎಂ., ರೇಡಿಯೋ ಕಾರ್ಯಕ್ರಮಗಳಲಲ್ಲಿ ಕಂಡುಬರುವ ಕಂಗ್ಲೀಷ್ ನ ಕೇಳಲು ಅಸಹ್ಯವೆನಿಸುವ 'ಸ್ಲಿವ್ ಲೆಸ್ ಸರಸ' ದಂತಹ ಮಾತುಗಳು ವ್ಯಾಪಾರ ಮನೋಭಾವದ ಬೇಳೆ ಬೇಯಿಸಿಕೊಳ್ಳಲು ಮಾಡುವ ತಂತ್ರಗಳೇ. ಹಿಂದಿ, ಇಂಗ್ಲೀಷ್, ಕನ್ನಡದಲ್ಲಿ ಹೆಚ್ಚು ಪ್ರಾಶಸ್ತ್ಯ ಇರುವುದು ಹಿಂದಿ ಅಥವಾ ಇಂಗ್ಲೀಷ್ ಗೆ. 'ಕೇವಲ ಮೂರು ಹಾಡುಗಳು ಬ್ಯಾಕ್ ಟು ಬ್ಯಾಕ್' ಅಬ್ಬರದ ಸಂಗೀತದ ಜೊತೆಗೆ.. ಇಂಥ ವಿಕಾರಗಳನ್ನು ಕೇಳುವಾಗ ಯಾರಿಗಾದ್ರೂ ಅಯ್ಯೋ ಎನಿಸದಿರದು. ಏನು ಬೇಕಾದ್ರೂ ಮಾಡ್ಲಿ..ಕನ್ನಡದಲ್ಲಿ ಒಳ್ಳೆಯ ಶಬ್ದಗಳಿವೆ, ಪದಗಳಿವೆ ಅವುಗಳನ್ನು ಕನ್ನಡದಲ್ಲೇ ಹೇಳಿದ್ರೇನು ನಷ್ಟ? ಇಂಗ್ಲೀಷ್, ಹಿಂದಿ..ಅಸಂಬದ್ಧವಾಗಿ ಮಾತಾಡುವಾಗ ಇಂಥ ಎಫ್.ಎಂ. ಗಳಿಗೆ ಕನಿಷ್ಠ ಸೌಜನ್ಯತೆಯೂ ಇಲ್ಲವೇ? ಎಂಬ ಪ್ರಶ್ನೆ ಮೂಡದಿರದು. ಕೆಲವೊಂದಿಷ್ಟು ನಿಮಿಷಗಳು ಬಿಟ್ಟರೆ ದಿನವಿಡೀ ಹಿಂದಿ-ಇಂಗ್ಲೀಷ್ ಕಾರ್ಯಕ್ರಮಗಳೇ ಜಾಸ್ತಿ ಪ್ರಸಾರವಾಗುತ್ತವೆ. ಇನ್ನು ಕನ್ನಡದ ಕಾರ್ಯಕ್ತಮಗಳಲ್ಲಿ 'ಕಂಗ್ಲೀಷ್' ನಲ್ಲಿ ಮಾತನಾಡಿ ಪದ-ಅರ್ಥಗಳನ್ನು ಏನೋನೋ ಮಾಡಿಬಿಡ್ತಾರೆ. ಪ್ರಸ್ತುತ ನಮ್ಮ ಪರಿಸ್ಥಿತಿ ಎಂಥ ಕೀಳುಮಟ್ಟಕ್ಕೆ ಇಳಿದಿದೆಯೆಂದರೆ ಕನ್ನಡದ ಬಗ್ಗೆ ಮಾತನಾಡುವುದೇ ತಪ್ಪು, ಕನ್ನಡಿಗರ ದೌರ್ಬಲ್ಯ ಎನ್ನುವವರೇ ಹೆಚ್ಚು. ಅಷ್ಟೇ ಅಲ್ಲ ಯಾವುದೇ ಕರ್ನಾಟಕದ,., ಸರ್ಕಾರದ ಇಲಾಖೆಗಳಲ್ಲಿ ಹೋಗಿ ಕನ್ನಡದಲ್ಲಿ ಮಾತನಾಡಿದ್ದರೆ ನಮ್ಮನ್ನು ಅಡಿಯಿಂದ ಮುಡಿಯವರೆಗೆ ನೋಡಿ, ಭಾಷೆಯಿಂದ ವ್ಯಕ್ತಿತ್ವ ಅಳೆಯುವವರೇ ಹೆಚ್ಚು. ನಮ್ಮ ಕನ್ನಡದಲ್ಲಿ ಶ್ರೇಷ್ಠರೆನಿಸಿಕೊಂಡ ಕೆಲವರು ಕನ್ನಡ, ನಾಡು-ನುಡಿ ಕುರಿತು ಏನೇ ಬೀದಿರಂಪ ಮಾಡಿದ್ರೂ ಬೆಚ್ಚಗೆ ಮನೆಯೊಳಗೆ ಕೂರುತ್ತಾರೆ. ಬೇಕಾದ್ರೆ ಆ ಸಂದರ್ಭದಲ್ಲಿ ತಮ್ಮ ಮನೆಗಳಿಗೆ ಕಲ್ಲು ಬಿದ್ದೀತೆಂಬ ಪುಕ್ಜಲುತನದಿಂದ ರಕ್ಷಣೆಗೆ ಪೊಲೀಸ್ ರನ್ನೂ ನೇಮಕ ಮಾಡಿಕೊಳ್ಳುತ್ತಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಬಾಂಬು ಸ್ಪೋಟ ಆಯಿತು. ಎಷ್ಟು ಮಂದಿ ಕನ್ನಡದ ಶ್ರೇಷ್ಠರು ವಿರೋಧಿಸಿದ್ದಾರೆ? ಭಯೋತ್ಪಾದನೆಯನ್ನು ತಡೆಗಟ್ಟಿ ಎಂದು ವಿಧಾನಸೌಧ, ಮಹಾತ್ಮಾಗಾಂಧಿ ಪ್ರತಿಮೆ ಮುಂದೆ ನಿಂತು ಪ್ರತಿಭಟನೆ ಮಾಡಿದ್ದಾರೆ? ಆದರೆ ಅನಗತ್ಯವಾದ ವಿಚಾರಗಳಿದ್ದರೆ ತಕ್ಷಣ ಬೀದಿಗೆ ಬಂದು ಬೊಬ್ಬಿಡ್ತಾರೆ. ಆದರೆ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದಾಗ ನೋಡಿ..ಎಲ್ಲೋ ಇದ್ದವರು ತಕ್ಷಣ ಬೀದಿಗಿಳಿದು..ಸಂಜೆಯವರೆಗೆ ದುಡಿದು ದಣಿದ ದೇಹಕ್ಕೆ, ಮನಸ್ಸಿಗೆ ನೆಮ್ಮದಿ ಬೇಕು..ಅದ್ಕಾಗಿ ತಡರಾತ್ರಿವರೆಗೂ 'ಸಂಗೀತ ಕಚೇರಿಗಳು' ತೆರೆದಿರಬೇಕು ಎಂದು ಬೊಬ್ಬಿಟ್ಟರು! ಇದು ಬೇಕಿತ್ತೆ?

ಕನ್ನಡ ಭಾಷೆಯ ವಿಚಾರ ಬಂದಾಗಲೂ ಆಗುತ್ತಿರುವುದು ಹೀಗೆ. ಯಾರೋಬ್ಬರೂ ಮಾತಾಡಲ್ಲ..ಇಲ್ಲಿ ನಾನೊಬ್ಬಳು ಮಾತಾಡಿದ್ರೂ ಪ್ರಯೋಜನವಿಲ್ಲ. ಎಫ್.ಎಂ. ರೇಡಿಯೋ ಅಥವಾ ಇನ್ಯಾರೋ ಏನ್ ಬೇಕಾದ್ರೂ ಮಾತಾಡ್ಲಿ..ನಮಗೇನು ಎಂಬಂತೆ ತೆಪ್ಪಗಿರುತ್ತಾರಲ್ಲಾ..ಹಾಗಾಗಿಯೇ ಕನ್ನಡ ಸಾಯುತ್ತಿದೆ ನೋಡಿ. ಬಹುಶಃ ನನಗನಿಸಿದ ಪ್ರಕಾರ ಈ ಎಫ್.ಎಂ.ಗಳ ಅವತಾರಗಳನ್ನು ನಮ್ಮ ಗಣ್ಯರು ಆಲಿಸಿರಕ್ಕಿಲ್ಲ. ಪ್ರೇಮಿಗಳ ದಿನ, ಹೋಳಿ ಮುಂತಾದ ದಿನಗಳನ್ನು ವಿಶೇಷವಾಗಿ ಎಡೆಬಿಡದೆ ನಡೆಸಿಕೊಡುವ ಎಫ್.ಎಂ.ಗಳಿಗೆ ಕನ್ನಡದ ಶ್ರೇಷ್ಠ ನಾಟಕಕಾರರು, ನಟರು, ಸಾಹಿತಿಗಳು, ಗಾಯಕರ ದಿನಗಳನ್ನು ನಡೆಸಿಕೊಡಲಿ. ನಾನೇನು ಎಫ್.ಎಂ. ಗಳ ದ್ವೇಷಿಯಲ್ಲ..ಬದಲಾಗಿ ಅಸಂಬದ್ಧ ಮಾತುಗಳಿಂದ ಕನ್ನಡವನ್ನು ಕೊಲ್ಲುವ ಬದಲು ಶುದ್ಧ ಕನ್ನಡ ಬಳಸಿ, ಕನ್ನಡಕ್ಕೆ ತಮ್ಮಿಂದಾದ ಕೊಡುಗೆ ನೀಡಲಿ. ಕನ್ನಡದ ಅಭಿವೃದ್ಧಿ ಬಗ್ಗೆ ಮಾತನಾಡುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡಪರ ಸಂಘಟನೆಗಳು ಅದೇನು ನಿದ್ದೆ ಮಾಡುತ್ತಿವೆಯೇ?