ಈ ಹೆಣ್ಣು ಮಕ್ಕಳ ಬದುಕೇ ಹೀಗೇನಾ?
ಇಂಥದ್ದೊಂದು ಮಿಲಿಯನ್ ಡಾಲರ್ ಪ್ರಶ್ನೆ ಹುಟ್ಟಿಕೊಂಡಿದ್ದು ವೊನ್ನೆ ವೊನ್ನೆ ಆ ಹುಡುಗನ ಮನೆಯಲ್ಲಿ ಮುತ್ತೈದೆಯರು ನನ್ನ ಗುಳಿಬಿದ್ದ ಕೆನ್ನೆಗಳಿಗೆ ಅರಶಿನ ಕುಂಕುಮ ಹಚ್ಚಿದಾಗ, ನಮ್ಮನೆಯವರು ಮತ್ತು ಆ ಹುಡುಗನ ಮನೆಯವರು ತಾಂಬೂಲ ಬದಲಾಯಿಸಿಕೊಂಡಾಗ, ಆ ಹುಡುಗ ನನ್ನ ಬೆರಳಿಗೆ ಉಂಗುರ ತೊಡಿಸಿದಾಗ, ನನ್ನ ತಮ್ಮ ನನ್ನ ಕೆನ್ನೆ ಚಿವುಟಿ ‘ಅಕ್ಕಾ ಇನ್ನು ನೀನು ಈ ಮನೆಯ ಹುಡುಗಿ’ ಎಂದು ಖುಷಿಯಿಂದ ಹೇಳಿದಾಗ, ನನ್ನಮ್ಮ ನನ್ನ ನೋಡುತ್ತಲೇ ಗಳಗಳನೇ ಅತ್ತಾಗ!
ಥತ್, ನಾ ಹುಟ್ಟಿದ ಊರು, ನನ್ನ ಪ್ರೀತಿಯ ಅಮ್ಮ, ನನ್ನ ತಮ್ಮ, ಬದುಕಲು ಕಲಿಸಿದ ಅಮ್ಮನಂಥ ಅಣ್ಣ, ನನ್ನ ಕೈಯಾರೆ ಅಮ್ಮ ನೆಡಿಸಿದ ಆ ಗೆಂದಾಲೆ ತೆಂಗಿನ ಮರ, ನಾನು ಸ್ಕೂಲಿಗೆ ಹೋಗುವಾಗ ವೊಸರು ಕೊಂಡೋಗಲು ಕಾರಣಳಾದ ಪ್ರೀತಿಯ ಹಸು ಅಕ್ಕತ್ತಿ, ಅಮ್ಮನ ಜೊತೆ ಬಟ್ಟೆ ಒಗೆಯಲು ಹೋಗುತ್ತಿದ್ದ ನಮ್ಮೂರ ಕೆರೆ, ಅಜ್ಜ ಉಳುತ್ತಿದ್ದ ಗದ್ದೆ, ನಮ್ಮನೆ ತೋಟ, ನನ್ನ ನಿತ್ಯ ಆಟ ಆಡಿಸುತ್ತಿದ್ದ ಕುಸುಮಜ್ಜಿ, ನನ್ನಮ್ಮನ ಜೊತೆ ಬೀಡಿ ಕಟ್ಟಲು ಸಾಥ್ ನೀಡುತ್ತಿದ್ದ ಪಕ್ಕದ್ಮನೆ ಸೀತಕ್ಕ, ನಾನು ಓದಿದ ಸ್ಕೂಲ್, ಪ್ರೀತಿಯ ಟೀಚರ್ರು....! ಒಮ್ಮೆಲೆ ಎಲ್ಲರೂ ನೆನಪಾದರು.
ಕಣ್ಣಿಂದ ಸುರಿದ ಅಶ್ರುಬಿಂದುಗಳು ನನ್ನ ಪಾದವನ್ನು ತೋಯುತ್ತಿದ್ದಂತೆ, ಮುತ್ತೈದೆಯರೆಲ್ಲಾ ’ತವರಿನ ನೆನಪು ಇರಲಿ ಬಿಡಿ’ ಎಂದು ಅವರವರೊಳಗೆ ಮಾತನಾಡಿಕೊಳ್ಳುತ್ತಿದ್ದರು. ನಂಗೂ ಅನಿಸಿತ್ತು: ಇವರೂ ನನ್ನ ತರಾನೇ ಅತ್ತಿರಬಹುದೇನೋ!
ನಾನ್ಯಾಕೆ ಹುಡುಗಿಯಾಗಿ ಹುಟ್ಟಿದೆ? ಹುಡುಗನಾಗಿ ಹುಟ್ಟುತ್ತಾ ಇದ್ದರೆ, ಮದುವೆಯಾಗಿ ಬೇರೆ ಮನೆಗೆ ಹೋಗುವ ಅಗತ್ಯವೇನಿತ್ತು? ಅಮ್ಮನ ಜೊತೆ ಇರಬಹುದಿತ್ತಲ್ಲಾ?ಅಮ್ಮನ ಕೈಯಡಿಗೆ, ಅಮ್ಮನ ಹಿತನುಡಿಗಳು, ಅಮ್ಮ ಮಾಡಿಕೊಡುವ ಹಪ್ಪಳ-ಸಂಡಿಗೆ ಮೆಲ್ಲುತ್ತಾ, ಅಣ್ಣ-ತಮಂದಿರ ಜೊತೆ ನಿತ್ಯ ಮುನಿಸಿಕೊಳ್ಳುತ್ತಾ, ಮತ್ತೆ ರಾಜಿಯಾಗುತ್ತಾ, ಮನೆ ಹತ್ತಿರವಿರುವ ಮೈದಾನದಲ್ಲಿ ಲಗೋರಿಯಾಟ ಆಡುತ್ತಾ ಖುಷಿ ಖುಷಿಯಾಗಿ ಹಾಗೇ ಇರಬಹುದಿತ್ತಲ್ಲಾ...ಹೀಗೆ ನೂರಾರು ಯೋಚನೆಗಳ ಸಂತೆ ಮನದಲ್ಲಿ ಪಿಸುಗುಟ್ಟಿ, ‘ಅಮ್ಮ ನಾ ಬಿಡಲಾರೆ ನಿನ್ನ ಸೆರಗಾ’ ಎಂದುಕೊಳ್ಳುತ್ತಿದ್ದೆ.
ಹೌದು, ಆ ಹುಡುಗ ‘ನೀ ನನ್ನ ಮದುವೆ ಆಗ್ತೀಯಾ’ ಎಂದು ಕೇಳಿದಾಗ ಅಮ್ಮನ ಜೊತೆ ಕೇಳು ಅಂದಿದ್ದೆ. ‘ಅಯ್ಯೋ ಹುಚ್ಚು ಹುಡುಗಿ ನಾ ನಿನ್ನ ಮದುವೆ ಆಗ್ತಿರೋದು, ಅಮ್ಮನನ್ನು ಅಲ್ಲ ಕಣೇ’ ಎಂದು ರೇಗಿಸಿದಾಗಲೂ ಅವನು ನೀ ನಮ್ಮನೆಯಲ್ಲೇ ಶಾಶ್ವತವಾಗಿ ಇದ್ದುಬಿಡ್ತಿಯಾ ಅಂತ ಹೇಳಲೇ ಇಲ್ಲ! ಬದಲಾಗಿ ‘ನೀ ನನ್ನ ಮನದರಮನೆಗೆ ಬರ್ತಾ ಇದೀಯಾ’ ಅಂತ ಅಷ್ಟೇ ಹೇಳಿದ್ದ. ಛೆ! ದೇವರು ಯಾಕೆ ಇಷ್ಟೊಂದು ಮೋಸ ಮಾಡಿದ? ಹೆಣ್ಣು ಅವನಿಗೇನು ತಪ್ಪು ಮಾಡಿದ್ದಾಳೆ? ಯಾಕೆ ಅವಳನ್ನು ಹೆತ್ತಮ್ಮನ ಮಡಿಲಿಂದ ಮತ್ತೊಂದು ಮಡಿಲಿಗೆ ಹಾಕುವ ವಿಚಿತ್ರ ನಿಯಮ ಸೃಷ್ಟಿಸಿದ? ಅಂತ ದೇವರನ್ನು ಬೈಯುತ್ತಾ ಇದ್ದೀನಿ, ಅದೇನು ಅವನಿಗೆ ನನ್ನ ಮೇಲೆ ಸಿಟ್ಟೇ? ನನ್ನ ಪ್ರಶ್ನೆಗಳಿಗೆ ಉತ್ತರಿಸದೆ ಕಲ್ಲಾಗಿಬಿಟ್ಟಿದ್ದಾನೆ. ಬಹುಶಃ ಎಲ್ಲಾ ಹೆಣ್ಣುಮಕ್ಕಳಿಗೂ ಈ ರೀತಿ ಅನಿಸಿರಬಹುದಲ್ವಾ? ಹೇಳಿ, ನಿಮಗೂ ಹೀಗೇ ಅನಿಸಿದೆಯೇ?
ಇಲ್ಲಿ ಪ್ರಕಟವಾಗಿದೆ: