Sunday, August 23, 2009

ಅವಳಿನ್ನೂ ಬದುಕಿದ್ದಾಳೆ, ಭರವಸೆಯ ಹೊಂಗಿರಣದಂತೆ...

ಅಂದು ರಜಾದಿನ. ಮನೆಯಂಗಳವನ್ನು ತುಂತುರು ಮಳೆಹನಿಗಳು ಮುತ್ತಿಕ್ಕುತ್ತಿದ್ದವು. ಮೋಡ ಕವಿದ ಬಾನಂಗಳದಿ ಸೂರ್ಯನೂ ಮಸುಕಾಗಿದ್ದ. ಸಂಜೆಯ ಹೊತ್ತು ಒಬ್ಬಳೇ ಟಿವಿ ಎದುರು ಕುಳಿತು ಅದಾವುದೋ ಸಿನಿಮಾ ನೋಡುತ್ತಿದ್ದಂತೆ ಆ ಪುಟ್ಟ ಹುಡುಗಿ ನೆನಪಾದಳು. ಹಸಿರು ಲಂಗಧಾವಣಿ ಉಟ್ಟ ಆ ಮುಗ್ಧ ಹುಡುಗಿಯ ಮುಖ ಕಣ್ಣೆದುರು ಬಂತು. ಬೆಟ್ಟದಷ್ಟು ಕನಸುಗಳನ್ನು ಕಂಗಳಲ್ಲಿ ತುಂಬಿಕೊಂಡ, ಆಗತಾನೇ ಭವಿಷ್ಯ ಬದುಕಿನ ಕುರಿತು ಯೋಚಿಸುತ್ತಿದ್ದ ಆ ಚೆಂದದ ಹುಡುಗಿ ನೆನಪಾಗುತ್ತಿದ್ದಂತೆ ಅದೇಕೋ ನನ್ನ ಕಣ್ಣುಗಳೂ ಮಂಜಾದವು. ಹೃದಯ ಚಿರ್ರನೆ ಚೀರಿತ್ತು.

ಹೌದು,ಆಗ ನಾನು ಒಂಬತ್ತನೇ ತರಗತಿ. ಮಂಗಳ ವಾರಪತ್ರಿಕೆಯನ್ನು ಎಡೆಬಿಡದೆ ಓದಿ ಪರೀಕ್ಷೆಗಿಂತಲೂ ಧಾರವಾಹಿಗಳಿಗೆ ತಲೆಕೆಡಿಸಿಕೊಳ್ಳುತ್ತಿದ್ದ ದಿನಗಳು. ಮೇಷ್ಟ್ರು ಪಾಠ ಮಾಡುತ್ತಿರುವಾಗಲೇ ಡೆಸ್ಕಿನ ಸಂದಿಯಲ್ಲಿ ಮಂಗಳವಾರಪತ್ರಿಕೆ ಓದಿ ಎಷ್ಟೋ ಸಲ ಮೇಷ್ಟ್ರ ಕೆಂಗಣ್ಣಿಗೆ ಗುರಿಯಾಗಿ, ಹೆಡ್ ಮಾಸ್ತರ ಚೇಂಬರ್ ಗೆ ಬೈಗುಳ ತಿಂದ ದಿನಗಳು.

ಅದೊಂದು ಶನಿವಾರ ಮಂಗಳ ತಂದಂತೆ ಆ ಹುಡುಗಿಯ ಬಗ್ಗೆ ಯಾರೋ ಒಂದು ಪುಟ ಗೀಚಿದ್ದರು. ಅವಳು ಕಾಲೇಜು ಹುಡುಗಿ. ತನ್ನ ಓರಗೆಯ ಹುಡುಗನ್ನೊಬ್ಬ ಆ ಹುಡುಗಿಗೆ ಆಸೀಡ್ ಎಸೆದು ಮುಖವೆಲ್ಲಾ ಸುಟ್ಟು ಕರಲಾಗಿತ್ತು. ಪ್ರೀತಿಯನ್ನು ನಿರಾಕರಿಸಿದ್ದೇ ಇದಕ್ಕೆ ಕಾರಣ. ಆಸೀಡ್ ಎಸೆದ ನಂತರ ಅವಳ ಮುಖ ಹಾಗೂ ಇದಕ್ಕೂ ಮೊದಲು ಅವಳು ಆಡಿನಲಿಯುತ್ತಿದ್ದ ಪೋಟೋಗಳನ್ನು ನೀಡಲಾಗಿತ್ತು.ಆ ಪುಟ್ಟ ಹುಡುಗಿಯ ಮೇಲೆ ಕನಿಕರ ತೋರಿ ಅದೆಷ್ಟೋ ದಾನಿಗಳು ನೋಟುಗಳನ್ನು ಅವಳ ಮುಂದೆ ಚೆಲ್ಲಿದ್ದರು. ಭೂಗತದೊರೆಯೊಬ್ಬ 50 ಸಾವಿರ ಘೋಷಿಸಿ ಜನರಿಂದ ಸೈ ಎನಿಸಿಕೊಂಡಿದ್ದು ಈಗಲೂ ನೆನಪಿದೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ದೇಹವಷ್ಟೇ ಉಳಿದಿತ್ತು. ಸುತ್ತಲಿನ ಜಗತ್ತನ್ನು ಕಾಣೋಕೆ, ನಮ್ಮಂತೆ ಸುತ್ತಲಿನ ಜಗತ್ತಿನ ಜೊತೆ ಆಟವಾಡೋಕೆ, ಖುಷಿಪಡೋಕೆ ಅವಳ ಕನಸು ತುಂಬಿದ ಕಣ್ಣುಗಳು ಉಳಿಯಲಿಲ್ಲ. ಭಾವನೆಗಳಿದ್ದರೂ, ಕನಸುಗಳಿದ್ದರೂ, ಜೀವನ ಪ್ರೀತಿ ಉಕ್ಕಿ ಹರಿಯುತ್ತಿದ್ದರೂ ಅವಳ ಸುತ್ತಲಿನ ಜಗತ್ತು ಮಾತ್ರ ಅವಳನ್ನು ಕುರುಡಿಯಂತೆ ಒಪ್ಪಿಕೊಂಡುಬಿಟ್ಟಿದೆ.ತನ್ನದಲ್ಲದ ತಪ್ಪುಗಳಿಗೆ ಆಕೆ ಬಲಿಯಾದಳು.

ಆ ಮಹಾಪಾಪಿ ಏನಾದ..ಗೊತ್ತಿಲ್ಲ. ಅವನ ಬದುಕಿಗೆ ಪೆಟ್ಟಾಗಿಲ್ಲ. ಅವನನ್ನು ಬಂಧಿಸುವ ಕೈಗಳಿಲ್ಲ, ಆತನಿಗೆ ಶಿಕ್ಷೆಯಾಗಲಿಲ್ಲ. ಅಂಥವರಿಗೆ ಶಿಕ್ಷೆಯಾಗಬೇಕು ಎಂದು ಒಕ್ಕೋರಲಿನಿಂದ ಕೂಗುವ, ಬೀದಿಯಲ್ಲಿ ನಿಂತು ಕೂಗಿ ಹೇಳುವ ದನಿಗಳು ನಮ್ಮಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅವಳೆದುರು, ಅವಳ ಭಾವನೆಗಳೆದುರು, ಅವಳ ಕನಸುಗಳೆದುರು ಕನಿಕರದಿಂದ ನೋಟುಗಳನ್ನು ಚೆಲ್ಲೋರು ಜಾಸ್ತಿ ಇದ್ರು.

ಬದುಕಬೇಕು ಅನ್ನೋ ಹಂಬಲ, ಬದುಕಿನ ಕುರಿತಾದ ಆಕೆಯ ಪ್ರೀತಿ, ಭವಿಷ್ಯದ ಕುರಿತಾದ ಆಕೆಯ ಭರವಸೆ ಅವಳನ್ನು ಇನ್ನೂ ಜೀವಂತವಾಗಿರಿಸಿದೆ. ಇನ್ನೂ ಬದುಕಿದ್ದಾಳೆ..ಸಮಾಜದ ಪಾಲಿಗೆ ಕುರುಡಿಯಂತೆ..ಆಕೆಯ ಪಾಲಿಗೆ 'ಭರವಸೆಯ ಕಿರಣ'ದಂತೆ!

ಬರೆದು ಮುಗಿಸುತ್ತಿದ್ದಂತೆ...
ಕರುಣಾಳು ಬಾ ಬೆಳಕೇ
ಮಸುಕಿದೀ ಮಬ್ಬಿನಲಿ...
ಕೈ ಹಿಡಿದು ನಡೆಸೆನ್ನನು
...
ಎಂ.ಡಿ. ಪಲ್ಲವಿ ಧ್ವನಿಯಲ್ಲಿ ಇಂಪಾಗಿ ಕೇಳಿಬರುತ್ತಿತ್ತು.

Monday, August 17, 2009

ನಮ್ಮೂರ ಮಲ್ಲಿಗೆ ಚೆನ್ನಾ...

ನನಗೆ ಮಲ್ಲಿಗೆ ಅಂದ್ರೆ ಭಾಳ ಪ್ರೀತಿ. ಅದರಲ್ಲೂ ನಮ್ಮೂರ ಮಲ್ಲಿಗೆ ಅಂದ್ರೆ ಅಕ್ಕರೆ ಜಾಸ್ತಿ. ಅದೇ 'ಮಂಗ್ಳೂರ ಮಲ್ಲಿಗೆ' ಅಂತಾರಲ್ಲಾ ಅದೇ ಮಲ್ಲಿಗೆ. ಒಂದು ಮಲ್ಲಿಗೆ ಎಸಳು ಕೂಡ ನಮ್ಮನೆ-ಮನವನ್ನು ಘಮ್ಮೆನಿಸಬಲ್ಲುದು.ನಾನು ಊರಿಗೆ ಹೋಗುವಾಗ ತಪ್ಪದೆ ತಲೆತುಂಬಾ ಮಲ್ಲಿಗೆ ಮುಡಿತೀನಿ. ಯಾಕಂದ್ರೆ ಈ ಬೆಂಗ್ಲೂರಲ್ಲಿ ಅಂಥ ಸುಂದರ ಮಲ್ಲಿಗೆನೇ ಸಿಗೊಲ್ಲ. ಅದನ್ನು ಏನಿದ್ರೂ ನೀವು ಮಂಗಳೂರಲ್ಲೇ ನೋಡಬೇಕು. ಮೊನ್ನೆ ಮೊನ್ನೆ ಊರಿಗೆ ಹೋದೆ. ಹೋಗುವಾಗಲೇ ಪೇಟೆಯಲ್ಲಿ ಇಳಿದು ಮಲ್ಲಿಗೆ ತಕೊಂಡು ಹೊರಟೆ.

ನಾನು ಶಾಲೆಗೆ ಹೋಗುತ್ತಿದ್ದಾಗಲೂ ಅಷ್ಟೇ ತುಂಬಾ ಹೂವು ಮುಡಿಯೋ ಹುಚ್ಚು. ಅದರಲ್ಲೂ ಮಲ್ಲಿಗೆ ಅಂದ್ರೆ ಜಡೆಗಿಂತಲೂ ಜಾಸ್ತಿ ಮಲ್ಲಿಗೆ ಮುಡಿಯುತ್ತಿದ್ದೆ. ಆವಾಗ ನಮ್ಮ ಹೆಡ್ ಮಾಸ್ತರು ಯಾವಾಗಲೂ ಹೂವು ಮುಡಿದಿದ್ದಕ್ಕೆ ರೇಗಿಸುತ್ತಿದ್ದು ಈಗಲೂ ನೆನಪಿದೆ. ಹೈಸ್ಕೂಲು-ಕಾಲೇಜಿನಲ್ಲೂ ಅಷ್ಟೇ. ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಅಮ್ಮ ಎರಡು ಜಡೆ ಕಟ್ಟಿ. ಎರಡೂ ಜಡೆಗೂ ಮಲ್ಲಿಗೆ ಮುಡಿಸಿ ಕಳುಹಿಸುತ್ತಿದ್ದರು. ಆ ಮಲ್ಲಿಗೆ ಮುಡಿದು ಕ್ಲಾಸಿನಲ್ಲಿದ್ದವರಿಗೆಲ್ಲ ಅಸೂಯೆ ಬರಿಸೋದು ನನ್ ಕೆಲಸ. ಅದೆಷ್ಟೋ ಹುಡುಗಿಯರು ನನ್ ಮಲ್ಲಿಗೆ ಮೇಲೆ ಕಣ್ಣು ಹಾಕಿದ್ದಾರೋ? ಕಡಲವರಂರೂ ಸ್ವಲ್ಪ ಕೊಡೇ ಅನ್ನುತ್ತಾ ತೆಗೆದುಕೊಂಡು ಬಿಡೋರು.
ನಮ್ಮೂರಿನ ಪ್ರತಿ ಹಬ್ಬ ಅಥವಾ ಯಾವುದೇ ಸಮಾರಂಭಗಳಲ್ಲಿ ಮಲ್ಲಿಗೆ ತಂದೇ ತರುತ್ತಾರೆ. ವಧುವಿಗೆ ಮಲ್ಲಿಗೆ ಮುಡಿಸಿದರೇನೇ ಚೆನ್ನ ಕಾಣೋದು. ಅಷ್ಟೇ ಅಲ್ಲ, ತಲೆಯಲ್ಲಿ ಆ ಮಲ್ಲಿಗೇನ ನೋಡೋದು ಕಣ್ಣಿಗೆ ಒಂಥರಾ ಹಬ್ಬ.

ಅದೇ ಮೊನ್ನೆ ನಾನು ಊರಿಗೆ ಹೋದನ್ನಲ್ಲಾ..ಬೆಂಗಳೂರಿಗೆ ವಾಪಾಸು ಬರುವಾಗಲೂ ಮಲ್ಲಿಗೆ ತಕೋ ಬಂದೆ. ಇತರ ಮಲ್ಲಿಗೆಗಳಿಗಿಂತ ಇದು ದುಬಾರಿ. ಮನೆಯಿಂದ ಹೊರಟು 10 ಗಂಟೆ ಪ್ರಯಾಣಿಸಿದವಳು ಮಲ್ಲಿಗೇನ ಜೋಪಾನವಾಗಿ ತಕೊಂಡು ಬಂದೆ. ಇಡೀ ಬಸ್ಸೇ ಘಮ್ಮೆನ್ನುತ್ತಿತ್ತು.
ಮಲ್ಲಿಗೆ ತಂದ್ರೆ ಬೆಂಗಳೂರಿನ ನಮ್ಮನೆ ಬಿಡೀ ಇಡೀ ಬಿಲ್ಡಿಂಗೇ ಘಮ್ ಅನ್ನಬೇಕೇ? ಪಕ್ಕದ ಮನೆ ಆಂಟಿ ಬಂದು ಕೇಳಿದ್ರು...ತುಂಡು ಮಾಡಿ ಕೊಟ್ಟೆ. ಅವರ ಮಕ್ಜಳು, ಮರಿಗಳೆಲ್ಲಾ ಮುಡಿದ್ರು. ನಾಲ್ಕು ಮನೆಗೆ ಹಂಚಿದೆ. ಎಲ್ರ ಬಾಯಲ್ಲೂ ಮಂಗ್ಳೂರ ಮಲ್ಲಿಗೆ. ನಮ್ಮನೆ ಓನರ್ ಆಂಟಿಯ ಖುಷಿಗಂತೂ ಸರಿಸಾಟಿ ಏನೂ ಇರಲಿಲ್ಲ. ಅಷ್ಟು ಖುಷಿಯಾಗಿಬಿಟ್ರು. ಎಲ್ಲರಿಗೆ ಹಂಚಿ ಪುಟ್ಟದೊಂದು ತುಂಡು ಉಳಿಯಿತು. ದೇವರ ಫೋಟೋಗೆ ಹಾಕಿ ಮಲಗುವಾಗ ಮುಡಿದುಕೊಂಡೇ ಮಲಗಿದೆ.

ಹಂಗೇ ನಮ್ಮೂರ ಮಲ್ಲಿಗೆ ಅಂದ್ರೆ ತುಂಬಾ ಚಂದ..ನೋಡಕ್ಕೂ ಮುಡಿಯಕ್ಕೂ. ನೀವು ನೋಡಿದ್ರೂನೂ ಇಷ್ಟಪಡ್ತೀರ..ತುಂಬಾ ಪ್ರೀತಿ ಮಾಡ್ತೀರಾ!

Thursday, August 6, 2009

ಮಮತೆಯಲ್ಲಿ ತೊಯ್ದುಬಿಡು..ಬದುಕು ಶರಧಿಯಾಗಲಿ.

ಪ್ರೀತಿಯ ಅಣ್ಣ....
ರಾಖಿ ಹಬ್ಬದ ಶುಭಾಶಯಗಳು.

ಹೌದು, ನೀನಂದ್ರೆ ಪ್ರೀತಿ, ನೀನಂದ್ರೆ ಭಯ, ನೀನಂದ್ರೆ ಗೌರವ, , ನೀನಂದ್ರೆ ಅಮ್ಮ, ನೀನಂದ್ರೆ ಗೆಳೆಯ,..ಹೀಗೆ ಬದುಕಿನ ಸಮಸ್ತ ಬಾಂಧವ್ಯಗಳನ್ನು ಒಟ್ಟೊಟ್ಟಾಗೇ ನೀಡಿದವ. ಒಡಹುಟ್ಟಿದವ ಅಲ್ಲದಿದ್ದರೂ ಒಡನಾಡಿ ಆದವ. ನನ್ನ ಜೊತೆಗೇ ಹೆಜ್ಜೆಹಾಕಿದವ. ನಾನು, ನನ್ನ ಬದುಕನ್ನು ,ಪ್ರೀತಿಸೋಕೆ ಕಲಿಸಿದವ. ಬೆಳದಿಂಗಳ ತಂಪಿನಲ್ಲಿ ಕುಳಿತು ಅಜ್ಜಿ ಕಥೆ ಹೇಳಿದವ. ಶಾಲೆಗೆ ಹೋಗದೆ ರಚ್ಚೆ ಹಿಡಿದಾಗ ಗದರಿಸಿ, ಶಾಲೆಗೆ ಕಲಿಸಿದವ. ಸಮಸ್ತರನ್ನೂ ಪ್ರೀತಿಸು, ಯಾರನ್ನೂ ಪ್ರೇಮಿಸಬೇಡ ಎಂದು ಬುದ್ಧಿಮಾತು ಹೇಳಿದವ ನೀನು ನನ್ನಣ್ಣ. ನಿದ್ದೆ ಬಾರದಿದ್ದಾಗ ಅಮ್ಮನಂತೆ ಲಾಲಿ ಹಾಡಿದವ. ಅತ್ತಾಗ ನಿನ್ನೆದೆಯ ಪ್ರೀತಿಯ ಮಡಿಲಲ್ಲಿ ಮಲಗಿಸಿ ಸಂತೈಸಿದವ ನೀನು ನನ್ನಣ್ಣ. ಚೆನ್ನಾದ ಡ್ರೆಸ್ ಕೊಡಿಸು, ಬಳೆ ಕೊಡಿಸು, ಕಿವಿಯೋಳೆ ಕೊಡಿಸು ಎಂದಾಗ ಏನೂ ಅನ್ನದೆ ತೆಗೆದುಕೊಟ್ಟವ. ಕೈತುಂಬಾ ಬಳೆ, ತಲೆತುಂಬಾ ಮಲ್ಲಿಗೆ ಮುಡಿಸಿ ನನ್ನ ತಂಗಿ ಎಷ್ಟು ಚೆಂದ ಕಾಣ್ತಾಳೆ ಅಂತ ಹೆಮ್ಮೆ ಪಟ್ಟವ ನೀನು ನಂಗೆ ದೇವ್ರು ಕೊಟ್ಟ ಅಮೂಲ್ಯ ಉಡುಗೊರೆ ಗೊತ್ತಾ? ನಿನ್ನ ಪ್ರೀತಿಯನ್ನು ಮೀರಿ ನಡೆದಾಗ ಕಂಗಳು ಹನಿಗೂಡಿಸಿದವ. ಸುತ್ತಲ ಜಗತ್ತಿನ ಸತ್ಯ-ಮಿಥ್ಯಗಳ, ನೋವು-ನಲಿವುಗಳ ಅರಿವಾಗಿಸಿದವ. ಒಂದು ರೂ.ಗೂ ಅಮೂಲ್ಯ ಬೆಲೆಯಿದೆ ಎಂದು ತಿದ್ದಿತೀಡಿದವ.

ನನಗೆ ಇಷ್ಟದ ತಿಂಡಿ ತಂದುಕೊಟ್ಟು ನನ್ನ ಇನ್ನೂ ಡುಮ್ಮಿಯಾಗಿಸಿದವ. ಆಫೀಸ್ ನಲ್ಲಿ ಬಾಸ್ ಬೈದರೆಂದು ಮನೆಯ ಮೂಲೆಯಲ್ಲಿ ಕುಳಿತು ಅತ್ತಾಗ ಹೆದರಿಕೋಬೇಡ, ಸಹನೆಯಿಂದಿರು ಎಂದು ಸಮಾಧಾನ ಮಾಡಿದವ . ಕಾಲದ ತೆಕ್ಕೆಯಲ್ಲಿ ನೋವಿಗೆ ಬಲಿಯಾಗುವಾಗ ನೋವನ್ನೇ ನಲಿವಾಗಿಸಿದವ. ಪೇಟೆ, ಹಳ್ಳಿ, ಶಾಪಿಂಗ್ ಮಾಲ್ ಸುತ್ತಾಡಿಸಿದವ. ಅಮ್ಮ ಜೊತೆಗಿಲ್ಲದಾಗ ಅಮ್ಮನಾದವ. ನನ್ನ ಭವಿಷ್ಯದ ಕನಸುಗಳ ದೊಡ್ಡ ಗೋಪುರವನ್ನೇ ಕಟ್ಟಿಸಿದವ. ನನ್ನ ಹುಸಿಮುನಿಸು ಮುಂಗೋಪ, ಅಸಹನೆಯಂಥ ದೌರ್ಬಲ್ಯಗಳೊಂದಿಗೆ ರಾಜಿ ಮಾಡಿಕೊಂಡು ತಪ್ಪನ್ನು ತಿದ್ದಿ ತೀಡಿದವ. ನನ್ನ ಮೇಲೆ ಸಿಟ್ಟು ಬಂದರೂ ಒಂದೇ ಒಂದು ಸಲ ನನಗೆ ಕೈ ಎತ್ತದವ. ನಿತ್ಯ ಪುಟ್ಟಾ ಪುಟ್ಟಾ ಎನ್ನುತ್ತಾ ನನ್ನ ಪುಟ್ಟ ಬದುಕಿನಲ್ಲಿ ಪ್ರೀತಿಯ ಮಳೆ ಕರೆದವ ನೀನು ನನ್ನಣ್ಣ. ನನ್ನೊಳಗಿನ ಪುಟ್ಟ ಪ್ರತಿಭೆಗಳಿಗೆ ನೀರೆರೆದು ಪೋಷಿಸಿದವ ನೀನು ನನ್ನಣ್ಣ.

ಅಣ್ಣಾ...
ನೀ ಜೊತೆಗಿದ್ರೆ ನಂಗೆ ಖುಷಿ, ನೆಮ್ಮದಿ, ಸಂಭ್ರಮ ಎಲ್ಲಾನೂ. ನೆಮ್ಮದಿ, ಖುಷಿ ಇದ್ರೆ ಅಷ್ಟೇ ಸಾಕಲ್ವಾ ಹೇಳು. ಕೆಲಸದೊತ್ತಡದಿಂದ ತಡವಾಗಿ ಪತ್ರ ಬರೀತಾ ಇದ್ದೀನಿ. ನಂಗೆ ಬೆಟ್ಟದಷ್ಟು ಪ್ರೀತಿ ನೀಡಿ, ನನ್ನ ತಿದ್ದಿ ತೀಡಿದ ನೀನೂ ನಂಗೆ ಅಮ್ಮ. ಮೊನ್ನೆ ರಕ್ಷಾಬಂಧನ. ಹೌದು, ನನಗೆ ನೀನೇ ನಿತ್ಯ 'ರಕ್ಷಾಬಂಧನ'. ನಿತ್ಯ ಅಮ್ಮನ ಮಮತೆಯಲ್ಲಿ ನೀನು ನನ್ನ ತೊಯ್ದುಬಿಡು. ಬದುಕು 'ಶರಧಿ'ಯಾಗುತ್ತದೆ ಅಲ್ವಾ? ನೀನು ಖುಷಿಯಾಗಿರು..ಆ ಖುಷಿಯಲ್ಲಿ ನಂಗೊಂದು ಪುಟ್ಟ ತುಣುಕು ನೀಡು. ನಿಂಗೆ ದುಃಖವಾದ್ರೆ ನೀನೊಬ್ನೇ ಸಹಿಸಬೇಡ. ನಂಗೂ ಸಮಪಾಲು ಕೊಡು. ನಾನೂ ನಿನಗೆ 'ಅಮ್ಮ'ನಾಗುತ್ತೇನೆ. ಮತ್ತೊಮ್ಮೆ ರಾಖಿ ಹಬ್ಬದ ಶುಭಾಶಯಗಳು ಕಣೋ.
ತಡವಾಗಿ ಪತ್ರ ಬರೆದಿದ್ದಕ್ಕೆ ಕ್ಷಮೆಯಿರಲಿ.
ಇಂತೀ,
ನಿನ್ನ ತಂಗಿ