Saturday, December 20, 2008

ನನ್ನಜ್ಜನ ಮೂರ್ತೆ ಕೆಲಸ..ಒಂದು ನೆನಪು...

ಳೆದ ತಿಂಗಳಿಂದ ಬರೇ, ನೋವು ವಿಷಾದಗಳೇ ಅಕ್ಷರರೂಪ ಪಡೆಯುತ್ತಿವೆ. ಅದೇ ಯಾಕೋ ಗೊತ್ತಿಲ್ಲ..ಇನ್ನು ತೀರ ಹಾಸ್ಯಮಯವಾಗಿ, ಚೆನ್ನಾಗಿ, ಖುಷಿಖುಷಿಯಾಗಿ ಬರೆಯೋಕೆ ನಂಗೆ ಬರಲ್ಲ ಅನ್ನೋದನ್ನು ಬೇರೆ ಹೇಳಬೇಕಾಗಿಲ್ಲ.

ಇಂದು ನಾನು ನನ್ನಜ್ಜನ ಒಂದು ಕತೆ ಹೇಳುತ್ತೇನೆ. ನನ್ನಜ್ಜ ಮೂರ್ತೆದಾರ(ಶೇಂದಿ ತೆಗೆಯುತ್ತಿದ್ದರು). ಬೆಳ್ಳಂಬೆಳಿಗ್ಗೆ ಅಜ್ಜ ಶೇಂದಿ ತೆಗೆಯೋ ಕಥೆ ಹೇಳುತ್ತೇನೆ. ಇದು ನನ್ನಜ್ಜನ ಕಥೆ ಅನ್ನೋದಕ್ಕಿಂತಲೂ ಶೇಂದಿ ತೆಗೆಯೋದು ನಮ್ಮ ಕುಲಕಸುಬು ಅದು. ನಾವು ಚಿಕ್ಕವರಿರುವಾಗ ಅಜ್ಜ ಶೇಂದಿ ತೆಗೆಯುತ್ತಿದ್ದರು. ಆವಾಗ ಅಜ್ಜ ಶೇಂದಿ ತೆಗೆಯೋದ್ರಲ್ಲಿ ನಿಸ್ಸೀಮರು, ಹಾಗೇ ಊರೆಲ್ಲಾ ಭಾರೀ ಫೇಮಸ್ಸು. ನಮ್ಮ ತಲಾತಲಾಂತರಗಳಿಂದ ಮಾಡಿಕೊಂಡು ಬರುತ್ತಿದ್ದ ಕುಲಕಸುಬಿದು. ನಮ್ಮ ಮುತ್ತಜ್ಜನ್ನೂ ಅದೇ ಮಾಡುತ್ತಿದ್ದರು. ಅಜ್ಜ ರಾತ್ರಿ ೪.30ಗೆ ಸರಿಯಾಗಿ ಶೇಂದಿ ತೆಗೆಯೋಕೆ ಹೊರಡೋರು. ಸೊಂಟಕ್ಕೆ ಒಡಂಕ್(ಪಟ್ಟಿ) ಹಾಗೂ ಕೈಯಲ್ಲಿ ಅರ್ಕತ್ತಿ(ಕಳ್ಳು ತೆಗೆಯುವ ಹರಿತವಾದ ಕತ್ತಿ) ಕಟ್ಟಿಕೊಂಡು, ಬೆನ್ನಿಗೆ ಪ್ಲಾಸ್ಟಿಕ್ ಕೊಡಗಳನ್ನು(ಕಳ್ಳು ತುಂಬಿಸಿಕೊಂಡು ಬರಲು) ಹೋಗುವ ಹಣ್ಣು ಹಣ್ಣು ಮುದುಕ ನಮ್ಮಜ್ಜ ಥೇಟ್ ನಮ್ ಥರದ ತರಲೆ ಹುಡುಗರ ಥರ ಕಾಣುತ್ತಿದ್ದರು.

ಹಾಗೇ ಹೋದ ಅಜ್ಜ ತಾಳೆಮರದ ಬುಡಕ್ಕೆ ಹೋದಂತೆ ಅಲ್ಲಿ ಊರಿನ ಗೌಡರೆಲ್ಲ ಶೇಂದಿ ತೆಗೆದು ಮರದಿಂದ ಇಳಿಯುವ ಅಜ್ಜನಿಗಾಗಿ ಕಾಯುತ್ತಿದ್ದರು. ಲೀಟರ್ ನಲ್ಲಿ ಅಜ್ಜ ಅಳೆದು ಶೇಂದಿ ಕೊಡುತ್ತಿದ್ದರು. ಕೆಲವೊಮ್ಮೆ ಶೇಂದಿ ಬೆಳ್ಳಂಬೆಳಿಗ್ಗೆ ತಾಳೆ ಮರದ ಬುಡದಲ್ಲೇ ಶೇಂದಿ ಮೂರ್ತಿ ಮಾರಾಟವಾಗುತ್ತಿತ್ತು. ಉಳಿದರೆ ಮಾತ್ರ ಗುತ್ತಿಗೆಗೆ( ಪರವಾನಗಿ ಶೇಂದಿ ಅಂಗಡಿ) ಮಾರುತ್ತಿದ್ದರು. ಹಾಗೇ ೧೦ ಗಂಟೆಗೆ ಶೆಂದಿ ಮಾರಾಟ ಮುಗಿದು ಬರುವಾಗಲೇ ಅಜ್ಜನೂ ಒಂದು ಲೀಟರ್ ಕುಡಿದು ಬಂದವರೇ ಅಜ್ಜಿಗೆ ಗದರುತ್ತಿದ್ದರು. ಬಂದ ತಕ್ಷಣ ತಂಗಳನ್ನು ಮೊಸರು ತಿಂದು ಮಲಗಿದವರೆ ಮತ್ತೆ ಮದ್ಯಾಹ್ನ ೧೨ ಗಂಟೆಗೆ ಮೂರ್ತೆ ಕೆಲಸಕ್ಕೆ ಹೋಗೋರು...ಆಮೇಲೆ ೨ ಗಂಟೆಗೆ ಬಂದು ಊಟ ಮಾಡಿ..ಮತ್ತದೆ ಸಂಜೆಗೆ ಮತ್ತೆ ಹೋಗುವರು. ಎಷ್ಟು ನಿಯತ್ತಾಗಿ ಅವರು ಮೂರ್ತೆ ಕೆಲಸ ಮಾಡೋರಂದ್ರೆ ಒಂದು ದಿನನೂ ಚಕ್ಕರ್ ಹಾಕಲ್ಲ. ಒಂದು ವೇಳೆ ಆ ಸಮಯಕ್ಕೆ ಸರಿಯಾಗಿ ಹೋಗಕ್ಕಾಗಲಂದ್ರೆ ಬೇರೆ ಯಾರನ್ನಾದ್ರೂ ಸಂಬಳಕ್ಕೆ ನೇಮಿಸಿ ಹೋಗುವರು ಅಜ್ಜ. ಆವಾಗ ಕುಟಂಬ ನಡೆಯುತ್ತಿದ್ದುದೇ ಮೂರ್ತೆಯಿಂದ. ಶೇಂದಿ ಮಾರಾಟ ಮಾತ್ರವಲ್ಲ ಅದರಿಂದ ಬೆಲ್ಲನೂ (ಓಲೆ ಬೆಲ್ಲ) ಮಾಡುತ್ತಿದ್ದರು. ಅದ್ರಲ್ಲಿ ತುಂಬಾ ಹಣ ಬರುತ್ತಿತ್ತು. ಕೈತುಂಬಾ ಹಣ ಬರುವಾಗ ಮನೆಯ ಯಜಮಾನನಾದ ಅಜ್ಜನ ಮುಖದಲ್ಲಿ ಯಜಮಾನಿಕೆ ಒಂಥರಾ ಏನೋ , ಗತ್ತು -ಗಡುಸು ಇದ್ದಂತೆ ಕಾಣುತ್ತಿತ್ತು. ಮಕ್ಕಳಾದ ನಾವೆಲ್ಲ..ಅಜ್ಜ ಕ್ಯಾಂಡಿಗೆ 5 ಪೈಸೆ ಕೊಡಿ ಅಂದ್ರು ಅಜ್ಜ ಮುಖ ಮೂತಿ ನೋಡದೆ ಬೈಯುತ್ತಿದ್ದರು. ಆವಾಗ ೫ ಪೈಸೆ ಕ್ಯಾಂಡಿಗೆ ಇತ್ತೆನ್ನುವುದು ನೆನಪು.

ಮೇಲೆ ನಮ್ಮಜ್ಜ ಶೇಂದಿಯಿಂದ ಊರಲೆಲ್ಲಾ ಫೇಮಸ್ಸು..ಯಾರಿಗೆ ಶೇಂದಿ ಬೇಕಾದ್ರೂ ಮೊದಲ ದಿನವೇ ಹೇಳಿ ಹೋಗುವರು. ಊರಿನ ಗೌಡ್ರೆಲ್ಲ ಹೇಳಿದ್ರೆ..ಅದನ್ನು ಹಾಗೇ ಇಡಬೇಕೆನ್ನುವುದು ಗೌಡರ ತಾಕತ್ತು. ಮಾರಿದ್ರೆ..ಅಜ್ಜನ ತಲೆನೇ ಹೋಗಬಹುದು. ಆ ನಮ್ಮ ಹಳ್ಳಿಯಲ್ಲಿ ಇದ್ದ ತಾಳೆಮರಗಳೆಲ್ಲ ಹೆಚ್ಚಿನವು ನಮ್ಮ ಅಜ್ಜನ ವ್ಯಾಪ್ತಿಗೆ ಬರುತ್ತಿದ್ದವು. ವರ್ಷಕ್ಕೆ ಇಷ್ಟು ಹಣಕ್ಕೆ ಅಂತ ಬೇರೆಯವರಿಂದ ಗುತ್ತಿಗೆ ಆಧಾರದಲ್ಲಿ ತಾಳೆಮರಗಳನ್ನು ಕೊಂಡುಕೊಳ್ಳಲಾಗುತ್ತಿತ್ತು. ಮತ್ತೆ ತಾಳೆಮರ ಮಾಲೀಕನಿಗೆ ವರ್ಷಕ್ಕೆ ಇಂತಿಷ್ಟು ಹಣದ ಜೊತೆಗೆ ದಿನಾ ಬೆಳಿಗ್ಗೆ ಉಚಿತವಾಗಿ ಒಂದು ಲೀಟರ್ ಗಟ್ಟಲೆ ಶೇಂದಿ ಕೊಡಬೇಕು..ಅದೂ ಬೆಳ್ಳಂಬೆಳಿಗ್ಗೆ ಆತ ತಮ್ಮ ಮನೆಯವರನ್ನು ಕಳಿಸಿಕೊಡುತ್ತಿದ್ದ ಶೇಂದಿ ಮರದ ಬುಡಕ್ಕೆ. ಒಂದು ವೇಳೆ ಕೊಟ್ಟಿಲ್ಲವೋ...ಬರುವ ವರ್ಷ ಅಜ್ಜನಿಗೆ ತಾಳ ಮರ ಇಲ್ಲ! ಕೊಡಲ್ಲಂದ್ರೆ...ಸಂಸಾರದ ಗತಿ?! ಹಾಗೇ ಹೆದರಿಕೊಂಡೇ ಅವರಿಗೆ ಶೇಂದಿ ಕೊಡುತ್ತಿದ್ದರು. ಮತ್ತೆ ಕೆಲವರು ತಾಳೆಮರಕ್ಕಾಗಿಯೇ ಶೇಂದಿ ಕೊಡೋದ್ರಲ್ಲಿ ಪೈಪೋಟಿ ಇರುತ್ತಿತ್ತು.

ಷ್ಟೇ ಅಲ್ಲ, ಶೇಂದಿ ತೆಗೆಯೋದು ಕೂಡ ಒಂದು ಕಲೆ. ನಮ್ಮ ಜಾತೀಲಿ ಅದೊಂದು ಗೌರವ, ಪ್ರತಿಷ್ಠೆಯ ಕೆಲಸ. ಎಲ್ಲರೂ ಮರಕ್ಕೆ ಹತ್ತಿ ಶೇಂದಿ ತೆಗೆಯಕ್ಕೆ ಆಗಲ್ಲ..ಅದಕ್ಕೆ ಅಭ್ಯಾಸ ಬೇಕು. ಆಗಿನ ಕಾಲದಲ್ಲಿ ಶೇಂದಿ ತೆಗೆಯಕನೇ ತರಬೇತಿ ಕೊಡುತ್ತಿದ್ದರು. ಅಷ್ಟುದ್ಧದ ತಾಳೆಮರಕ್ಕೆ ಹತ್ತಬೇಕು..ಅದು ಕತ್ತಿ, ಬಿಂದಿಗೆಗಳನ್ನು ಹಿಡಕೊಂಡು ತುಂಬಾ ಕಷ್ಟ. ದಕ್ಷಿಣ ಕನ್ನಡ ಮತ್ತು ಕಾಸರಗೋಡು ಅಂಚುಗಳಲ್ಲಿ ಮಾತ್ರ ಇಂಥ ತಾಳೆಮರಗಳು, ಶೇಂದಿ ತೆಗೆಯೋದು ಕಾಣಬಹುದು.

ಹೌದು..ನಮ್ಮ ಕುಲಕಸುಬು ಅಂದೆ. ಈವಾಗ? ಆ ಕಸುಬು ಏನೂಂತ ಗೊತ್ತಿಲ್ಲ. ಹಳ್ಳಿಗಳಲ್ಲಿ ತಾಳೆಮರಗಳೇ ಕಾನುತ್ತಿಲ್ಲ. ಈಗ ಕೆಲವೆಡೆ ತೆಂಗಿನ ಮರದಿಂದಲೂ ಶೇಂದಿ ತೆಗೆಯುತ್ತಾರೆ..ಅದಕ್ಕೆ ಏನೇನೂ ಮಿಶ್ರ ಮಾಡಿ ಶೇಂದಿಯ ನಿಜವಾದ ರುಚಿಯೇ ಸಿಗಲ್ಲ. ನಾವು ಚಿಕ್ಕದಿರುವಾಗ ಶೇಂದಿ ಕುಡಿಯುತ್ತಿದ್ವಿ..ಅದೂ ಚಳಿಗಾಲದಲ್ಲಿ ಸಿಹಿ ಇರುತ್ತೆ..ಅದನ್ನು ಕುಡಿಯಕೆ ಖುಷಿಯಾಗುತ್ತಿತ್ತು. ನಮ್ಮಜ್ಜ ನಮಗೆಲ್ಲಾ ೨-೩ ನಷ್ಟು ಶೇಂದಿ ಬಾಯಿಗೆ ಹಾಕೋರು..ಆದ್ರೆ ಅದೇ ಅಮಲು. ಥೇಟ್ ಇಂಗು ತಿಂದ ಮಂಗನ ಪಾಡು ನಮ್ಮದು. ಈವಾಗ ಊರಿಗೆ ಹೋದ್ರೆ..ಯಾರು ಶೇಂದಿ ತೆಗೆಯಲ್ಲ. ನಮ್ಮ ಕುಟುಂಬದಲ್ಲೇ ಇಲ್ಲ. ಇಡೀ ಹಳ್ಳಿಯಲ್ಲಿ ಒಬ್ಬರಷ್ಟೇ ಶೇಂದಿ ತೆಗೆಯೋದನ್ನು ಉದ್ಯೋಗ ಮಾಡಿಕೊಂಡು ಬಂದಿದ್ದಾರೆ. ಯಾರಾದ್ರೂ ಆ ಬಗ್ಗೆ ಮಾತಾಡಿದ್ರೆ.."ಅಯ್ಯೋ ಅದನ್ನಾರು ಮಾಡುತ್ತಾರೆ" ಎಂದು ಉದಾಸೀನ ತೋರುವವರೇ ಜಾಸ್ತಿ.

ಷ್ಟು ಬೇಗ ಬದುಕು ಬದಲಾಗುತ್ತೆ ನೋಡಿ. ಒಂದು ಸಂಸಾರಕ್ಕೆ ಅನ್ನ ಹಾಕುತ್ತಿದ್ದ ಮೂರ್ತೆ ಕೆಲಸ ಈಗ ಯಾರಿಗೆ ಬೇಕು? ಯಾರೂ ಇಷ್ಟಪಡಲ್ಲ. ಹೊಲದಲ್ಲಿ ದುಡಿಯೋದನ್ನು ಯಾರು ಇಷ್ಟಪಡುತ್ತಾರೆ? ನನ್ನ ಮಗ ಹುಟ್ಟುವಾಗಲೇ ಕಂಪ್ಯೂಟರ್ ಮೌಸ್ ಹಿಡಿಬೇಕು..ಅವನ್ನ ನೋಡಿ ಜಗತ್ತು ಮೂಗಿನ ಮೇಲೆ ಕೈ ಇಡಬೇಕು..ಅನ್ನೋ ಹೆತ್ತವರೇ ಜಾಸ್ತಿ. ಮೊನ್ನೆ ಮೊನ್ನೆ ಆರ್ಥಿಕ ತಜ್ಷರೊಬ್ರು 'ಆರ್ಥಿಕ ಬಿಸಿ' ಕುರಿತು ಮಾತಾಡಿ ಇನ್ನು ವ್ಯವಸಾಯನೇ ಗತಿ ಅನ್ನುತ್ತಿದ್ದರು. ಇನ್ನು 'ಕಂಪ್ಯೂಟರ್ ಮೌಸ್' (ನಾನೂ ಹೊರತಾಗಿಲ್ಲ)ಹಿಡಿದವ್ರು ಏನು ಮಾಡಬೇಕೋ?...!

21 comments:

ತೇಜಸ್ವಿನಿ ಹೆಗಡೆ said...

ನಿಜ. ಸಮಯದ ಜೊತೆಗೆ ಮಾನವನೂ ಬದಲಾಗಿದ್ದಾನೆ. ಸದಾ ಹೊಸತರ ತುಡಿತವಿರುವ ಮನುಷ್ಯ ಹಳೆಯ ಬೇರನ್ನೇ ಕಿತ್ತು ತನ್ನ ಕಾಲಿಗೆ ತಾನೇ ಕೊಡಲಿಯೇಟು ಹಾಕಿಕೊಳ್ಳುತ್ತಿದ್ದಾನೆ. ಸವಿವರವಾದ ಲೇಖನ ಚೆನ್ನಾಗಿ ಮೂಡಿದೆ.

Ittigecement said...

ಚಿತ್ರಾರವರೆ....

ತುಮ್ಬಾ ಚಂದವಾಗಿ ಬರೆಯುತ್ತೀರಿ..
ಕಾಲ ಬದಲಾದ ಹಾಗೆ ಮೌಲ್ಯಗಳೂ ಬದಲಾಗುತ್ತದೆ...
ಬದಲಾವಣೆಯೇ ಜಗತ್ತಿನಲ್ಲಿ ಶಾಶ್ವತವಾದ ಸಂಗತಿ..

ನಾನು ತೆಂಗಿನ ಮರದ ಕಳ್ಳು ಕುಡಿದಿದ್ದೆ..
ಅದೂ ಸೂರ್ಯೋದಯದ ಮೊದಲು..
ತುಂಬಾ ರುಚಿಯಾಗಿತ್ತು..
ಅದು ಹುಳಿ ಬಂದ ಮೇಲೆ ತಲೆಗೆ ಏರುತ್ತದಂತೆ..

ಮತ್ತೆ ಹಳ್ಳಿ ಲೋಕಕಕ್ಕೆ ಕರೆದೊಯ್ದುದದಕ್ಕೆ ವಂದನೆಗಳು...

ತುಂಬು ಅಭಿಮಾನದಿಂದ..

ಬಾನಾಡಿ said...

ನಿಮ್ಮ ಅಜ್ಜನವರ ಮೂರ್ತೆ ಕತೆ ಓದಿ ತುಂಬಾ ಖುಷಿ ಆಯ್ತು. ಸಣ್ಣವರಿರುವಾಗ ಶೇಂದಿ ಅಂಗಡಿಯಿಂದ ನಾವೂ ನಮ್ಮ ಅಜ್ಜನವರಿಗೆ ತಂದು ಕೊಡುತ್ತಿದ್ದ ನೆನಪು ಬಂತು. ಜತೆಗೆ ನಾವೂ ಶೇಂದಿ ರುಚಿ ನೋಡಿದ್ದು ತುಂಬಾ ಎಳವೆಯಲ್ಲಿಯೇ. ಮಕ್ಕಳಿಗೆ ಶೇಂದಿ ಕುಡಿಸಿ ಅದರ ಮಜ ನೋಡುವುದು ಅಜ್ಜನವರಿಗಂತೂ ಖುಷಿಯೋ ಖುಷಿ. ಈಗ ದ.ಕ. ದಲ್ಲಿ ಶೇಂದಿ ಕಡಿಮೆ ಸಿಗುವುದಾದರೂ ಕೇರಳದಲ್ಲಿ ಮುಖ್ಯವಾಗಿ ಮಧ್ಯ ಕೇರಳದಲ್ಲಿ ಶೇಂದಿಯೇ ಮುಖ್ಯ ಮದ್ಯ! ಉತ್ತಮ ಬರಹ. ಅಭಿನಂದನೆಗಳು.
ಒಲವಿನಿಂದ
ಬಾನಾಡಿ

ಮಲ್ಲಿಕಾರ್ಜುನ.ಡಿ.ಜಿ. said...

ನಿಜ. ನೀವು ಬರೆದಂತೆ ಕುಲಕಸುಬು ಎಂಬುದು ಈಗ ಅರ್ಥ ಕಳೆದುಕೊಳ್ಳುತ್ತಿದೆ. ನಾನು ಹಳ್ಳಿ ಕಡೆ ಹೋದಾಗ ಈ ರೀತಿ ಮುಂದೆ ಸಿಗದಂತಹ ಸಂಗತಿಗಳ ಫೋಟೋ ತೆಗೆಯಲು ಪ್ರಯತ್ನಿಸುತ್ತಿರುತ್ತೇನೆ.

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ...

ನನ್ನೂರಿನಲ್ಲೂ ಇ೦ತಹ ಕಸುಬು ಮಾಡುತ್ತಿದ್ದವರು ಇದ್ದರು. ನಿಮ್ಮ ಬರಹ ಅವೆಲ್ಲವನ್ನೂ ನೆನಪಿಸಿತು. ಹೌದು...ಕಾಲ ಎಷ್ಟು ಬದಲಾಗಿದೆ. ನಾನು ಊರಿನಲ್ಲಿದ್ದಾಗ ಗದ್ದೆಯ ಕೆಲಸಗಳನ್ನೆಲ್ಲಾ ಮಾಡಿದ್ದೇನೆ. ಈಗ ಮನೆಯಲ್ಲಿ ವ್ಯವಸಾಯ ನಿ೦ತು ಬಿಟ್ಟಿದೆ. ನಾನಿಲ್ಲಿ ಮೌಸ್ ಕುಟ್ಟುತ್ತಿದ್ದೇನೆ ಹಿ೦ದೆ ಬತ್ತ ಕುಟ್ಟುತ್ತಿದ್ದ೦ತೆ.

ಮೊನ್ನೆ ನನ್ನನ್ನೊಬ್ಬರು ಕೇಳಿದರು ಕ೦ಪೆನಿಯಿ೦ದ ಹೊರಕಳಿಸಿದರೆ ಏನು ಮಾಡುತ್ತೀಯ ಅ೦ತ. ನಾನು ಊರಿಗೆ ಗದ್ದೆ ಊಳುತ್ತೇನೆ ಎ೦ದು ತಮಾಷೆ ಮಾಡಿದ್ದ. ನೀವು ಕೊನೆಯಲ್ಲಿ ಹೇಳಿದ್ದು ಅದನ್ನು ನೆನಪಿಸಿತು.

shivu.k said...

ಚಿತ್ರಾ ,

ನಿಜಕ್ಕೂ ಮನುಷ್ಯ ಬದಲಾಗಿದ್ದಾನೆ ಅನ್ನುವುದಕ್ಕೆ ನಿನ್ನ ಬರವಣಿಗೆಯೇ ಸಾಕ್ಷಿ. ತುಂಬಾ ಚೆಂದಾಗಿ ಬರೆದಿದ್ದೀಯಾ ! ಇದು ನಾನು ನಮ್ಮ ಊರಿನಲ್ಲಿ [ಬಾಲ್ಯದಲ್ಲಿ] ಹೋದಾಗ ಸೇಂದಿ ಕುಡಿದು ದಿನ ಪೂರ್ತಿ ಮಲಗಿದ್ದು ನೆನಪಾಯಿತು.
ಬಾಲ್ಯವನ್ನು ಈ ರೀತಿ ನೆನಪಿಸಿದ್ದಕ್ಕೆ , ಮತ್ತು ಈ ರೀತಿ ಹಳ್ಳಿ ಚಿತ್ರಗಳನ್ನು ಕಟ್ಟಿಕೊಡುತ್ತಿರುವುದಕ್ಕೆ ಧನ್ಯವಾದಗಳು. ಆಹಾಂ! ನಿನಗೆ ಹಾಸ್ಯ ಬರವಣಿಗೆ ಬರುವುದಿಲ್ಲವೆಂದು ನಿನಗೆ ನೀನೆ ಬ್ರಾಂಡ್ ಮಾಡಿಕೊಳ್ಳುವುದು ಬೇಡ. ಸುಮ್ಮನೆ ಪ್ರಯತ್ನಿಸಿದರೆ ಅದು ಸುಲಭ ಸಾಧ್ಯ.

Keshav.Kulkarni said...

ನಾನು ಉತ್ತರ ಕರ್ನಾಟಕದವನು, ನಮಗೆ ಶೇಂದಿ ಅಂದರೆ ಹೆಂಡ. ಮುಂದೆ ಶಾಲೆಯಲ್ಲಿ ಓದುತ್ತ ಶೇಂದಿ ಮರದ ಬಗ್ಗೆ ಕಲಿತೆ. ತುಂಬ ಚೆನ್ನಾಗಿ ಬರೆದಿದ್ದೀಯಾ.

-ಕೇಶವ (www.kannada-nudi.blogspot.com)

Anonymous said...

ಚಿತ್ರಾ,

ನಮ್ಮನ್ನೆಲ್ಲ ಹಳ್ಳಿಗೆ ಕರೆದುಕೊಂಡು ಹೋದ್ರಿ... ಹೆಚ್ಚೂ-ಕಡಿಮೆ ಶೇಂದಿ ಕುಡಿಸಿಯೇ ಬಿಟ್ರಿ... :-) ಅಷ್ಟರ ಮಟ್ಟಿಗೆ ನಿಮ್ಮ ಬರೆಹ ಓದಿಸಿಕೊಂಡು ಶೇಂದಿಮರದ ಬುಡಕ್ಕೇ ನಮ್ಮನ್ನು ಕರೆದೊಯ್ದಿತು.

ನಾನು ಮುಂಬಯಿಯಲ್ಲಿದ್ದಾಗ ನೀರಾ ಕುಡಿದಿದ್ದೆ. ನೀರಾ ಮತ್ತು ಶೇಂದಿಗೆ ಏನು ವ್ಯತ್ಯಾಸ.. ನಿಮಗೇನಾದ್ರೂ ಗೊತ್ತಾ? ನೀರಾ ಕುಡಿದು ಬಿಸಿಲಿಗೆ ಹೋದ್ರೆ ಅಮಲು ಆಗಿದ್ದಿದೆ... ಆದ್ರೆ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Anonymous said...

ಚಿತ್ರಾ,

ನಮ್ಮನ್ನೆಲ್ಲ ಹಳ್ಳಿಗೆ ಕರೆದುಕೊಂಡು ಹೋದ್ರಿ... ಹೆಚ್ಚೂ-ಕಡಿಮೆ ಶೇಂದಿ ಕುಡಿಸಿಯೇ ಬಿಟ್ರಿ... :-) ಅಷ್ಟರ ಮಟ್ಟಿಗೆ ನಿಮ್ಮ ಬರೆಹ ಓದಿಸಿಕೊಂಡು ಶೇಂದಿಮರದ ಬುಡಕ್ಕೇ ನಮ್ಮನ್ನು ಕರೆದೊಯ್ದಿತು.

ನಾನು ಮುಂಬಯಿಯಲ್ಲಿದ್ದಾಗ ನೀರಾ ಕುಡಿದಿದ್ದೆ. ನೀರಾ ಮತ್ತು ಶೇಂದಿಗೆ ಏನು ವ್ಯತ್ಯಾಸ.. ನಿಮಗೇನಾದ್ರೂ ಗೊತ್ತಾ? ನೀರಾ ಕುಡಿದು ಬಿಸಿಲಿಗೆ ಹೋದ್ರೆ ಅಮಲು ಆಗಿದ್ದಿದೆ... ಆದ್ರೆ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Santhosh Rao said...

ಎಷ್ಟೊಂದು ಸುಂದರ ನೆನಪು ... ಎಲ್ಲೊ ಓದಿದ್ದೆ .. ನೆನಪುಗಳನ್ನು ವೇದಿಕೆ ಹತ್ತಿಸಿ, ಹಾರ ಹಾಕಿ, ಚಪ್ಪಾಳೆ ತಟ್ಟಿ, ಫೋಟೋ ತೆಗೆದು ಆಲ್ಬಮ್ ನಲ್ಲಿ ಇಟ್ಟು ಆಗಾಗ ತೆಗೆದು ನೋಡ್ತಾ ಇದ್ರೆ ಚೆಂದ ..

ಚೆನ್ನಾಗಿ ಬರೆದಿದ್ದೀರ .. ನಾನು ಕಲಬೆರೆಕೆ ಶೇಂದಿ ಕುಡಿದು Color Color ವಾಂತಿ ಮಾಡ್ಕೊಂಡಿದ್ದು ನೆನಪಾಯಿತು

Santhosh Rao said...

ಹೇಳಲು ಮರೆತಿದ್ದೆ ... ನನ್ನ ಮಗ ಹುಟ್ಟುವಾಗಲೇ ಕಂಪ್ಯೂಟರ್ ಮೌಸ್ ಹಿಡಿಬೇಕು..ಅವನ್ನ ನೋಡಿ ಜಗತ್ತು ಮೂಗಿನ ಮೇಲೆ ಕೈ ಇಡಬೇಕು.. ಆ ಕಾಲ ಹೋಯ್ತು ಮೇಡಂ .. Software Engineer ಗಳಿಗೆ ಹೆಣ್ಣ್ ಕೊಡಕಿಲ್ಲ ಅಂತವ್ರೆ ಈಗ :)

ಅಂತರ್ವಾಣಿ said...

ಚಿತ್ರಾ,
ನಿಮ್ಮ ಈ ಅನುಭವನನ್ನು ಹಂಚಿಕೊಂಡ ರೀತಿ ಸೊಗಸಾಗಿತ್ತು. ಕುಲ ಕಸುಬು ಪಾರಂಪರಿಕವಾಗಿ ಇರುತ್ತದೆಯೆಂದು ಹೇಳಲು ಸಾಧ್ಯವಿಲ್ಲ.

Ashok Uchangi said...

ಬಹಳ ಗ‘ಮ್ಮತ್ತಾ’ಗಿತ್ತು.ನಮ್ಮೂರಲ್ಲೂ ಸೇಂದಿ ತೆಗೆಯುವವರು ಇದ್ದರು.ನಮ್ಮಲ್ಲಿ ಹೆಚ್ಚಾಗಿ ಸಿಗುತ್ತಿದ್ದದ್ದು ಬೈನೆ ಸೇಂದಿ(ಬಗಿನೆ ಮರ). ಸರ್ಕಾರವೇ ಬೈನೆ ಸೇಂದಿ ತೆಗೆಯುವುದನ್ನು ನಿಷೇಧಿಸಿದೆ.ನಮ್ಮೂರಿನ ಮೂರ್ತೆದಾರರು ಕೋಳಿ ಅಂಕದಲ್ಲೂ ಎತ್ತಿದ ಕೈ.ಈ ಬಗ್ಗೆ ನಿಮ್ಮ ಅನುಭವವಿದ್ದರೆ ಬರೆಯಿರಿ.
ಅಶೋಕ ಉಚ್ಚಂಗಿ.
http://mysoremallige01.blogspot.com/

ಮಹೇಶ್ ಪುಚ್ಚಪ್ಪಾಡಿ said...

ಈಗ ಸರಕಾರ ಮೂರ್ತೆದಾರರಿಗೆ ಏನೇನೆಲ್ಲಾ ಸವಲತ್ತು ಕೊಡುತ್ತಿದೆ.ಅಲ್ವಾ?. ನನ್ನ ಮಿತ್ರ ಮೂರ್ತೆದಾರಿಕೆಯ ಬಗ್ಗೆಯೇ ಒಂದು Story ಮಾಡಿದ್ದ.

ಚಿತ್ರಾ ಸಂತೋಷ್ said...

ಆತ್ಮೀಯರೇ.....ಯಾಕೋ ನೆನಪಾಯಿತು..ನನ್ನ ಬರಹದ ಕುರಿತು ನಿಮ್ಮೆಲ್ಲ ಪ್ರೀತಿಯ ನುಡಿಗಳನ್ನು ಕೇಳುತ್ತಿದ್ದಂತೆ...
"ನಿನ್ನ ಪ್ರೀತಿಗೆ, ಅದರ ರೀತಿಗೆ
ಕಣ್ಣ ಹನಿಗಳೆ ಕಾಣಿಕೆ ?
ಹೊನ್ನ ಚಂದಿರ, ನೀಲಿ ತಾರಗೆ
ಹೊಂದಲಾರದ ಹೋಲಿಕೆ.

ನಿನ್ನ ಪ್ರೀತಿಗೆ, ಅದರ ರೀತೆಗೆ
ಚೆಲುವು ಕನಸಿನ ಜವನಿಕೆ ;
ಬೆಳ್ಳಿನಿದ್ದೆಯ ತುಟಿಗಳಂಚಿಗೆ
ಸುಳಿದ ಕಿರುನಗೆ ತೋರಿಕೆ."
ಕೆ.ಎಸ್.ಎನ್. ಹಾಡಿನ ಸಾಲುಗಳು ಥಟ್ಟಂತ ನೆನಪಾದುವು. ತೇಜಕ್ಕ, ಪ್ರಕಾಶ್ ಸರ್, ಸಂತೋಷ್, ಬಾನಾಡಿ ಸರ್, ಶಿವಣ್ಣ, ಮಲ್ಲಿಯಣ್ಣ, ಸುಧೇಶ್ , ಅವಿನಾಶ್ ಸರ್, ಕೇಶವ ಕುಲಕರ್ಣಿ ಸರ್, ಮಹೇಶ್, ಅಶೋಕ್ ಸರ್, ಜಯಶಂಕರ್..ಎಲ್ಲರಿಗೂ ತುಂಬಾ ಥ್ಯಾಂಕ್ಸ್ . ಹೌದು ಇತ್ತೀಚಿನ ಆರ್ಥಿಕ ಬಿಕ್ಕಟ್ಟಿನ ಪರಿಣಾಮ...ಬತ್ತ ಕುಟ್ಟುವ ಕೆಲಸದತ್ತ ಮತ್ತೆ ಮರಳಬಹುದೇನೋ? ಕೆಲವರಿಗೆ ಶೇಂದಿ ಕುಡಿಯಬೇಕು ಅನಿಸಿದರೆ ಜೋಪಾನ..ಯಾಕಂದ್ರೆ ಮತ್ತೆ ಸಂತೋಷ್ ತರ ಕಲರ್ ಕಲರ್ ವಾಂತಿಗೆ ಕಾರಣವಾದರೆ...! ಹಾಗೇ ತೆಂಗಿನ ಮರದ ಶೇಂದಿಗಿಂತ ತಾಳೆಮರದ ಶೇಂದಿಯೇ ಒಳ್ಳೆದು. ಅವಿನಾಶ್ ಸರ್,...ನೀರಾ ಅಂದ್ರೆ ಶೇಂದಿ ಅಲ್ಲ..ವ್ಯತ್ಯಾಸ ಇದೆ ಅಂತೆ. ಹೆಚ್ಚು ಗೊತ್ತಿಲ್ಲ..ತಿಳಿದುಕೊಂಡು ಹೇಳುತ್ತೇನೆ. ಯಾರಿಗಾದ್ರೂ ಗೊತ್ತಿದ್ರೆ ತಿಳಿಸಿ...
ತುಂಬಾ ತುಂಬಾ ಪ್ರೀತಿಯಿಂದ,
ಚಿತ್ರಾ

ಕೆ.ಎನ್. ಪರಾಂಜಪೆ said...

hi chitra,
I like your write-ups. I am just thrilled by reading. I hail from Belthangady and now I am in B'lore. Keep writing.

Paranjape KN

ಇಂಚರ said...

ನಿಜ.ಈಗ ಕುಲ ಕಸುಬುಗಳನ್ನೇ ಮಾಡಿಕೊಂಡು ಬಂದವರನ್ನು ಕಾಣುವುದು ಬಹಳ ವಿರಳ.ರೈತನ ಮಗ ರೈತನಾಗಲು,ಅಧ್ಯಾಪಕರ ಮಗ ಅಧ್ಯಾಪಕನಾಗಲು ಒಪ್ಪುವುದಿಲ್ಲ. ಅಂತಹಾ ಪರಿಸ್ಥಿತಿ ನಮ್ಮದು.ಹೀಗೆ ಮುಂದುವರಿದರೆ ಮುಂದೆ ನಮಗೆ ಪ್ರಾಥಮಿಕವಾಗಿ, ನಾವು ಇತರರನ್ನು ಅವಲಂಬಿಸಿ ಪಡೆಯಬಾಕಾದ್ದನ್ನು ನಾವು ಸ್ವಾವಂಬನೆಯ ಮೂಲಕ ಪೂರೈಸಿಕೊಳ್ಳುವ ಕಾಲ ಬೇಗ ಬರಬಹುದು.

ಚಿತ್ರಾ ಸಂತೋಷ್ said...

@ಇರ್ಷಾದ್ ..ವಂದನೆಗಳು
@ಪರಾಂಜಪೆ..ನಾನು ಓದಿದ್ದು ಎಸ್ ಡಿಎಂನಲ್ಲೇ.ನಮ್ಮ ಸೀನಿಯರ್ ಒಬ್ರು ಪ್ರತಿಮಾ ಪರಾಂಜಪೆ ಅಂತ ಇದ್ರು..ನಿಮ್ಮ ಕಮೆಂಟು ನೋಡಿದಾಗ ಅವರ ನೆನಪಾಗುತ್ತೆ...ಹೀಗೆ ಬರುತ್ತಿರಿ.
-ತುಂಬುಪ್ರೀತಿ
ಚಿತ್ರಾ

ಹೆಸರು ರಾಜೇಶ್, said...

ಚಿತ್ತ ಎಷ್ಟು ಚೆನ್ನಾಗಿ ಬರೆಯುತ್ತೀರ. ನನಗಂತು ನಿಮ್ಮ ಲೇಖನಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದೇ ತಿಳಿಯುತ್ತಿಲ್ಲ. i am very much impressed.
ಗೆಳೆಯ
ರಾಜೇಶ್

Anonymous said...

thumbaa chennaagi barediddeera... mouse hidoyodu tappidru...neevu pennu hidibahudu...ashtu chennaagirutte nimmellaa barahagaLu

ಚಿತ್ರಾ ಸಂತೋಷ್ said...

@ನಮಸ್ಕಾರ ವಿಜಯ್ ಕಾಂತ್ ಸರ್..ಧನ್ಯವಾದಗಳು.
@ರಾಜೇಶ್..ವಂದನೆಗಳು. ಆದ್ರೆ ನನಗಿಂತ ಚೆನ್ನಾಗಿ ನೀವು ಬರೇತೀರ.
-ಚಿತ್ರಾ