ಎಂಥ ಗೊತ್ತುಂಟಾ? ಈ ಬಾರಿ ನಮ್ಮೂರ ಪೋಸ್ಟ್ ಮ್ಯಾನ್ಗಳ ಕುರಿತು ಬರೆಯೋಣಾಂತ. ನಾನು ಒಂದನೇ ಕ್ಲಾಸಿನಿಂದ ಹತ್ತನೇ ಕ್ಲಾಸು ತನಕ ನಮ್ಮೂರಲ್ಲೇ ಓದಿದ್ದು. ಆವಾಗ ಪೋಸ್ಟ್ ಮ್ಯಾನ್ಗಳು ನಮ್ಮ ಕ್ಲಾಸಿಗೆ ಬಂದು ಪತ್ರ ಹಂಚುತ್ತಿದ್ದರು. ಮಧ್ಯಾಹ್ನ ೧೨ ರಿಂದ ೧ ಗಂಟೆಯೊಳಗೆ ಪೋಸ್ಟ್ಮ್ಯಾನ್ ಕ್ಲಾಸಿನಲ್ಲಿ ಬಂದು ಪೋಸ್ಟ್ ಪೋಸ್ಟ್....ಎನ್ನುತ್ತಿದ್ದರು. ನಾವೆಲ್ಲ ನಮ್ಮನೆಗೆ ಪೋಸ್ಟ್ ಇದೆಯಾ? ಯಾರದು ಇರಬಹುದು? ಯಾರಿಗಿರಬಹುದು...ಹೀಗೇ ಕುತೂಹಲಭರಿತ ಪ್ರಶ್ನೆಗಳೊಂದಿಗೆ ಚಿಲಿಪಿಲಿಗುಟ್ಟುವ ಹಕ್ಕಿಗಳಂತೆ ಕೈ-ಕಾಲು ಅಲ್ಲಾಡಿಸಕ್ಕೂ ಬಿಡದೆ ಪೋಸ್ಟ್ ಮ್ಯಾನ್ ಶೀನಪ್ಪಣ್ಣ ನನ್ನು ಸುತ್ತುವರಿಯುತ್ತಿದ್ದೇವು. ತರಗತಿ ಮುಂದೆ ನಿಂತು ಹೆಸರು, ಮನೆ, ವಿಳಾಸ ಕೂಗಿ ಹೇಳುವಾಗ ಪತ್ರ ತೆಗೆದುಕೊಳ್ಳಲು ತಾ ಮುಂದೆ-ತಾ ಮುಂದೆ ಎನ್ನುವ ಸರದಿ ನಮ್ಮದು. ನನ್ನ ಹಿಂದಿನ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ ಕುಸುಮನ ಮನೆಗೆ ಹೆಚ್ಚಾಗಿ ಪತ್ರಗಳು ಬರುತ್ತಿದ್ದರಿಂದ ಅವಳಿಗೆ ಸ್ವಲ್ಪ ಹೆಮ್ಮೆ. ಪ್ರತಿ ಕ್ಲಾಸಿಗೂ ಹೋಗಿ ಪೋಸ್ಟಮ್ಯಾನ್ ಶೀನಪ್ಪಣ್ಣ ಪತ್ರ ವಿತರಿಸಿ ಬರುವಾಗ ತಡವಾಗುತ್ತಿತ್ತು. ಆಮೇಲೆ ಮುಖ್ಯವಾದ ಪತ್ರಗಳನ್ನು ಹಿಡಿದುಕೊಂಡು ತಮ್ಮ ಹಳೇ ಸೈಕಲ್ ತುಳಿಯುತ್ತಾ ಮುಂದೆ ಸಾಗೋ ಶೀನಪ್ಪಣ್ಣನನ್ನು ನೋಡೋದೇ ಖುಷಿ. ಶಾಲೆಯ ಹೊರಗಡೆ ಸೈಕಲ್ ನಿಲ್ಲಿಸಿ ಒಂದು ಕ್ಲಾಸ್ ರೂಂಗೆ ಹೊಕ್ಕರೆ, ಮತ್ತೊಂದು ಕ್ಲಾಸಿನ ಮಕ್ಕಳಿಗೆ ಅವರ ಸೈಕಲ್ ರಿಪೇರಿ ಮಾಡೋದೇ ಕೆಲಸ. ಹಾಗಾಗಿ ಅವರ ಸೈಕಲ್ ಗೆ ಬೆಲ್ ಕೂಡ ಇರಲಿಲ್ಲ. ನಮ್ಮ ಕ್ಲಾಸಿನ ಕುಸುಮಾಧರ ಹ್ಯಾಂಡಲ್ ಮುರಿದಿದ್ದು ಈಗಲೂ ನೆನಪಿದೆ.
ಇನ್ನೊಬ್ಬ ಪೋಸ್ಟ್ ಮ್ಯಾನ್ ಮೋನಪ್ಪಣ್ಣ. ನಮ್ಮ ಮನೆ ಕಡೆ ಬರುವವರು ಮೋನಪ್ಪಣ್ಣ. ನಾನು ಹುಟ್ಟಿದಂದಿನಿಂದಲೂ ನಾನು ಅವರನ್ನೇ ನೋಡುತ್ತಿದ್ದೇನೆ. ಈಗಲೂ ಮೋನಪ್ಪಣ್ಣ ಹಾಗೇ ಇದ್ದಾರೆ ಗುಂಡುಗುಂಡಾಗಿ..ಅದೇ ಬಣ್ಣ ಮಾಸಿದ ಹಳೆಯ ಸೈಕಲ್, ಮದುವೆಯಾಗಿ ಮಕ್ಕಳಾದ್ರೂ ಪಟಪಟಾಂತ ಹೊಲ-ಗದ್ದೆ ದಾಟಿ, ಅದೇ ಯುವ ಉತ್ಸಾಹದಿಂದ ಬಿಸಿಲು, ಮಳೆಗಾಳಿ, ಚಳಿ ಇದ್ಯಾವುದನ್ನೂ ಲೆಕ್ಕಿಸದೆ ಪತ್ರ ರವಾನೆ ಮಾಡ್ತಾರೆ. ಆದ್ರೆ ಅವರಿಗೆ ಸೈಕಲ್ ಒಂದು ನೆಪ ಅಷ್ಟೇ..ಅರ್ಧ ದಾರಿವರೆಗೆ ಸೈಕಲ್ ನಲ್ಲಿ ಹೋಗಬಹುದು..ಆಮೇಲೆ ಬರೀ ಕಾಲ್ನಡಿಗೆ. ಸೂರ್ಯೋದಯದ ಸಮಯದಲ್ಲಿ ಎದ್ದು ಈ ಪೋಸ್ಟ್ ಮ್ಯಾನ್ ಗಳು ಸೂರ್ಯಾಸ್ತವಾದರೂ ಮನೆಗೆ ಮರಳುವುದು ಗ್ಯಾರಂಟಿ ಇಲ್ಲ. ಯಾಕಂದ್ರೆ ಪತ್ರ ಹಂಚಿ ಮುಗಿದಿರುವುದಿಲ್ಲ. ಸಿಗುವ ಸರ್ಕಾರದ ಪುಡಿಗಾಸಿಗೆ ಇವರ ಪ್ರಾಮಾಣಿಕ ಕೆಲಸ ನೋಡಿದಾಗ ಮನಸ್ಸು ಅಯ್ಯೋ ಅನಿಸುತ್ತೆ. ಸಂಜೆಯಾಗುತ್ತಿದ್ದಂತೆ ಮುಖ ಕಪ್ಪಿಟ್ಟುಕೊಂಡು, "ಎಂಚಿನ ಮಾರಾಯ್ರೆ ಈ ಬೇಲೆ ಏರ್ ಲಾ ಮಲ್ಪಯೆರ್(ಎಂಥದ್ದು ಮಾರಾಯ್ರೆ..ಈ ಕೆಲಸ ಯಾರೂ ಮಾಡಲಾರರು) " ಅನ್ತಾರೆ.
ಕಲಾಂಜೀ ರಾಷ್ಟ್ರಪತಿಯಾಗಿದ್ದಾಗ ಒಂದು ಬಾರಿ ದೇಶದ ಬೇರೆ ಬೇರೆ ಕಡೆಯ 150ಕ್ಕೂ ಹೆಚ್ಚು ಪೋಸ್ಟ್ ಮ್ಯಾನ್ ಗಳನ್ನು ಮನೆಗೆ ಕರೆಸಿಕೊಂಡಿದ್ದರಂತೆ. ಹಳ್ಳಿಯಲ್ಲಿ ತೆವಳುತ್ತಾ, ನಡೆಯುತ್ತಾ, ಸೈಕಲ್ ತುಳಿಯುತ್ತಾ ಪತ್ರವಿತರಿಸುವ ಪೋಸ್ಟ್ ಮ್ಯಾನ್ಗಳಿಗೆ ಹಳ್ಳಿ ಬಿಟ್ಟರೆ ಇನ್ನೇನೂ ಗೊತ್ತಿಲ್ಲ. ಅವರ ಕುರಿತು ಮಾತನಾಡಿದ ಕಲಾಂ, "ನೀವು ನಿಮ್ಮ ಜನ್ಮದಲ್ಲಿ ನಯಾಪೈಸೆ ಲಂಚ ಮುಟ್ಟಿದವರಲ್ಲ. ನಿಯತ್ತಾಗಿ ಕೆಲಸ ಮಾಡಿದವರು. ನೀವು ಈ ದೇಶಕ್ಕೆ ಸಲ್ಲಿಸಿದ ಸೇವೆ ಅಗಾಧವಾದುದು. ಅದಕ್ಕೆ ತಕ್ಕ ಪ್ರತಿಫಲ ನಿಮಗೆ ಸಿಕ್ಕಿಲ್ಲದಿರಬಹುದು. ಆದರೂ ನೀವು ಅದಕ್ಕೆ ತಲೆಕೆಡಿಸಿಕೊಳ್ಳದೇ ಕರ್ತವ್ಯವನ್ನು ಕಡೆಗಣಿಸಿದವರಲ್ಲ. ಮಳೆಬರಲಿ, ಬಿಸಿಲು ಉಕ್ಕಲಿ, ಚಳಿ ಅಪ್ಪಲಿ ನೀವೆಂದೂ ಕೆಲಸಕ್ಕೆ ನೆಪ ಹೇಳಿದವರಲ್ಲ. ನಿಮ್ಮ ಕರ್ತೃತ್ವ ಶಕ್ತಿಗೆ ಶರಣೆಂಬೆ" ಎಂದರಂತೆ. "ಈಗ ನಿಮ್ಮ ವೃತ್ತಿಯೇ ಅವಸಾನದ ಅಂಚಿನಲ್ಲಿದೆ. ತಂತ್ರಜ್ಞಾನ ಮುಂದುವರಿದಂತೆ ಅಂಚೆ ಇಲಾಖೆಯನ್ನೇ ರದ್ದುಮಾಡಬಹುದು. 2020ರ ಹೊತ್ತಿಗೆ ಅಂಚೆ ಇಲಾಖೆಯನ್ನು ರದ್ದು ಮಾಡಬಹುದಾದ ಸ್ಥಿತಿ ನಿರ್ಮಾಣವಾಗಬಹುದು. ಇದು ಅನಿವಾರ್ಯ. ಇದು ಮುಪ್ಪಿನಲ್ಲಿ ಬೇಸರದ ಸಂಗತಿಯಾಗಿ ಕಾಡಬಾರದು. ಆಗ ಅಂಚೆ ಕಚೇರಿಯನ್ನು ಮಾಹಿತಿ ಕೇಂದ್ರವಾಗಿ ಪರಿವರ್ತಿಸಬೇಕಾಗುತ್ತದೆ. ಅದೇನೇ ಇರಲಿ ನಿಮ್ಮ ಸೇವೆ ಅನುಪಮ. ನಿಮ್ಮ ಕೆಲಸವನ್ನು ನಾ ಬೇರೆಯವರಿಗೆ ಹೋಲಿಸುವುದಾದರೆ ಅದು ಸೈನಿಕರಿಗೆ ಮಾತ್ರ" ಎಂದಾಗ ಅಂಚೆಯಣ್ಣರ ಕಣ್ಣಲ್ಲಿ ಖುಷಿಯ ಭಾಷ್ಪ ತುಂಬಿತ್ತಂತೆ.
ಕಲಾಂಜೀ ಹೇಳಿದ ಮಾತು ನಿಜವಾಗುವ ದಿನ ಬಹುದೂರವಿಲ್ಲ ಎಂದನಿಸುತ್ತೆ. ಪ್ರತಿಯೊಂದಕ್ಕೂ ತಂತ್ರಜ್ಞಾನವನ್ನೇ ಅವಲಂಬಿಸಿದ್ದೇವೆ. ಇದೇನು ತಪ್ಪಲ್ಲ..ಆದರೆ ಅಂಚೆಯಣ್ಣಂದಿರ ಬದುಕು ಏನಾದೀತು ಅನ್ನೋದೇ ಕಾಡುವ ಪ್ರಶ್ನೆ. ಹೆಚ್ಚೇನೂ ಹೇಳಲಾರೆ..ನಿಮ್ಮೂರಿನ ಅಂಚೆಯಣ್ಣರ ಕುರಿತು ನೆನಪಾದರೆ ಓದುವ ಜೊತೆಗೆ ಹಂಚಿಕೊಳ್ಳಿ..
14 comments:
ನಿಮ್ಮ ಬರಹ ಮುದ್ದಾಗಿದೆ
ಧನ್ಯವಾದಗಳು
soku barethar...
ಖಂಡಿತ ಅಂಚೆ ಕಛೇರಿಯೇ ಕಾಣದಂತಾಗುವ ದಿನ ದೂರವಿಲ್ಲ. ನಮ್ಮ ಮುಂದಿನ ಪೀಳಿಗೆಗೆ ಪತ್ರ, ಅಂಚೆ ಪೆಟ್ಟಿಗೆ ಎಂದೆಲ್ಲಾ ಹೇಳಿದರೆ ಅರ್ಥವೇ ಆಗದಿರಬಹುದು. "ಮೊದಲ ಪ್ರೇಮ ಪತ್ರವೇ.." "ನೀ ಬರೆದ ಒಲವಿನ ಓಲೆ.. " "ಛಿಟ್ಟಿ ಆಯೀ ಹೇ ಆಯೀ ಹೇ ಛಿಟ್ಟಿ.." ಮುಂತಾದ ಮಾಧುರ್ಯ ತುಂಬಿದ ಹಾಡುಗಳು ಮುಂದೆ ಅರ್ಥವನ್ನೇ ಕಳೆದುಕೊಳ್ಳುವವೇನೋ. ಕಾರಣ ಇವುಗಳನ್ನು ಅರ್ಥೈಸಿಕೊಳ್ಳುವ ವ್ಯವಧಾನವಾಗಲೀ ಸಾಧನಗಳಾಗಲೀ ಇಲ್ಲವಾಗಿರುತ್ತವೆ ಭವಿಷ್ಯತ್ತಿನಲ್ಲಿ.
ಅಂಚೆಯಣ್ಣರಿಗೆಲ್ಲಾ ಪರ್ಯಾಯ ಉದ್ಯೋಗಗಳನ್ನು ಕಲ್ಪಿಸಿಯಾದ ಮೇಲಾದರೂ ಬದಲಾವಣೆ ಬಂದರೆ ಸಮಾಧಾನ.
ಉತ್ತಮ ಲೇಖನ.
ಚಿತ್ರಾ,
ಒಂದು ಸೊಗಸಾದ ಲೇಖನ ಓದಿದ ಅನುಭವವಾಯಿತು....ನಿಮ್ಮೂರಿನ ಅಂಚೆಯಣ್ಣಯಣ್ಣಂದಿರನ್ನು, ಅವರ ಕೆಲಸಗಳನ್ನು ಅಪ್ತವಾಗಿ ಓದಿಸಿಕೊಂಡು ಹೋಗುತ್ತದೆ.. .ನಿಮ್ಮ ಸ್ಕೂಲಿಗೆ ಬಂದು ಅವರು ನಿಮ್ಮ ಮನೆಗಳ ಕಾಗದ ಪತ್ರ ಕೊಡುವುದು ನನಗೆ ಹೊಸ ವಿಚಾರ ಮತ್ತು ಕುತೂಹಲ.....ಕಲಾಂಜಿ ಹೇಳಿದಂತೆ ಅವರು ಮಹಾನುಭಾವರುಗಳೇ.....ಅವರಿಗೆ ನನ್ನ ನಮಸ್ಕಾರ ಮತ್ತು ಕೃತಜ್ಞತೆಗಳು.....ಮತ್ತೆ ಸೀನಪ್ಪಣ್ಣ ಸೈಕಲ್ಲಿನ ಯಾವ ಭಾಗವನ್ನು ಮುರಿದಿದ್ದೆ ಅಂತ ಹೇಳಲೇ ಇಲ್ಲ.!!
ಚಿತ್ರಾ,
ನಿನ್ನ ಲೇಖನವನ್ನು ಓದಿದಾಗ, ನಮಗೆ ಪ್ರಾಥಮಿಕ ಶಾಲೆಯಲ್ಲಿ
ಕಲಿಸುತ್ತಿದ್ದ ಕವನವೊಂದರ ನೆನಪಾಯಿತು:
"ಅಂಚೆಯ ಅಣ್ಣ, ಬಂದಿಹೆನಣ್ಣ,
ಅಂಚೆಯ ಹಂಚುತ ಮನೆಮನೆಗೆ."
ಅಂಚೆಯಣ್ಣ ಎಲ್ಲರಿಗೂ ಪ್ರಿಯನಾದ ಬಡಜೀವಿ,ಅಲ್ಲವೆ?
"ಪತ್ರ ಬರಲಿ, ಬರದೇ ಇರಲಿ, ಅಂಚೆಯಣ್ಣ ಮಾತ್ರ ದಿನವೂ ಬಂದು ಹೋಗುತ್ತಿರಲಿ" ಧಾರವಾಡದ ಮುಖ್ಯ ಅಂಚೆ ಕಚೇರಿಯ ಕಟ್ಟಡದ ಒಳಗೆ ಹೀಗೊಂದು ಸಾಲು ಇದೆ. ಕವಿ ಚೆನ್ನವೀರ ಕಣವಿ ಅವರದು.
ಒಳ್ಳೆಯ ಬರಹ. ಇಷ್ಟವಾಯಿತು.
ಚಿತ್ರಾ,
ನನ್ನ ಬಾಲ್ಯಕಾಲದಲ್ಲಿ ನಮ್ಮೂರು ಕುಗ್ರಾಮ.
ಆಗ ನಮ್ಮೂರಿಗೆ ಅ೦ಚೆಕಚೇರಿ ಮ೦ಜೂರು ಮಾಡಿಸಿಕೊಳ್ಳಲು ನಮ್ಮ ತ೦ದೆ ತು೦ಬಾ ಶ್ರಮಿಸಿದ್ದರು. ಆಗ ಹತ್ತು ಕಿ.ಮೀ ದೂರದಿ೦ದ ಅ೦ಚೆ ತರಲು ಚೀ೦ಕ್ರ ಮಲೆಕುಡಿಯ ಎ೦ಬವರು ರನ್ನರ್ ಆಗಿ ದಿನನಿತ್ಯ ೨೦ ಕಿಮಿ ಕಾಲ್ನಡಿಗೆಯಲ್ಲಿ ಹೋಗಿ ಬರುತ್ತಿದ್ದರು.ನಿಮ್ಮ ಲೇಖನ ಓದಿ ಹಳೆಯದೆಲ್ಲ ನೆನಪಾಯಿತು. ಹಾಗೇ ತೇಜಸ್ವಿಯವರ ಅಬಚೂರಿನ ಪೋಸ್ಟಾಫೀಸು ಕೂಡ ನೆನಪಾಯಿತು. ಲೇಖನ ಚೆನ್ನಾಗಿದೆ.
ಚಿತ್ರಾ,
ತುಂಬಾ ಹಿಂದೆ ನೋಡಿದ " ಫಣಿಯಮ್ಮ" ಚಿತ್ರದ ನೆನಪಾಯ್ತು ! ಆತ್ಮೀಯ ಬರೆಹ .
ಅಂಚೆಯಣ್ಣರ ಬಗ್ಗೆ ನಿಜಕ್ಕೂ ಯೋಚಿಸುವ ಸಮಯ ಬಂದಿದೆ ಅಲ್ಲವೆ? ಒಂದು ಕಾಲವಿತ್ತು , ಮನೆಯವರು ಪೋಸ್ಟ್ ಮ್ಯಾನ್ ಬರುವಿಕೆಯನ್ನು ಕಾಯುತ್ತಿದ್ದರು. ದೂರದೂರಿನ ಸಂಬಂಧಿಗಳಿಂದ , ಆತ್ಮೀಯರಿಂದ ಬರುವ ಪತ್ರಗಳಿಗಾಗಿ ಕಾಯುತ್ತಿದ್ದೆವು !ಪತ್ರವನ್ನು ನೋಡಿದಾಗ ಸ್ವತಃ ಬರೆದವರನ್ನೇ ಕಂಡಷ್ಟು ಸಂಭ್ರಮ ! ಭಾವನೆಗಳನ್ನು ಬಚ್ಚಿಟ್ಟ ಪತ್ರಗಳನ್ನು ಜೋಪಾನವಾಗಿ ಕಾಯ್ದುಕೊಳ್ಳುವ ಆ ಖುಷಿ ಈಗೆಲ್ಲಿ?
ತಂತ್ರಜ್ಞಾನ ಮುಂದುವರೆದಂತೆ ಹೊಸದನ್ನು ಅಪ್ಪಿಕೊಳ್ಳುವ ಭರದಲ್ಲಿ ನಾವು ಹಳೆಯದರಿಂದ ಸಂಪೂರ್ಣವಾಗಿ ಕಳಚಿಕೊಳ್ಳುತ್ತಿದ್ದೇವೆಯೆ? ನಮ್ಮ ಮಕ್ಕಳಿಗಂತೂ ಪತ್ರ ಬರೆಯುವುದೆಂದರೆ ಕೇವಲ ಪರೀಕ್ಷೆಯಲ್ಲಿ ಮಾತ್ರ ಎಂಬ ಭಾವನೆ ! ಇ ಮೇಲ್ ಹಾಗೂ ಹಳ್ಳಿ ಹಳ್ಳಿಯಲ್ಲೂ ಫೋನ್ , ಮೊಬೈಲ್ ಗಳ ಬಳಕೆಯಿಂದಾಗಿ ,ಪತ್ರ ಬರೆಯುವ ಕಲೆಯೇ ಮಾಯವಾಗುತ್ತಿದೆ. ಇನ್ನು ,ಪತ್ರಗಳೇ ಇಲ್ಲದ ಮೇಲೆ ಅಂಚೆಯಣ್ಣನಾದರೂ ಏನು ಮಾಡಬೇಕು !
@ಕನಸು..ರೋಹಿಯಣ್ಣ ..ಧನ್ಯವಾದಗಳು.
@ಹೌದು..ತೇಜಕ್ಕ..ನೀವಂದಿದ್ದು ನಿಜ.
@ಶಿವಣ್ಣ..ಸಿಕ್ಕಾಗ ಕಥೆ-ಪುರಾಣ ಹೇಳ್ತೀನಿ ಆಯಿತಾ?
@ಹೌದು ಸುನಾಥ್ ಸರ್..ಅಂಚೆಯಣ್ಣನಷ್ಟು ಪ್ರಾಮಾಣಿಕ ಯಾವ ಉದ್ಯೋಗಿಯೂ ಇರಲ್ಲ ಅಲ್ವಾ?
@ಜೋಮನ್, ಪರಾಂಜಪೆ..ನೆನಪುಗಳು ಬಿಚ್ಚಿಕೊಂಡವೇ? ಪರಾಂಜಪೆ..ನಿಮ್ ತಂದೆಯ ಕೆಲಸಕ್ಕೆ ನನ್ನದೂ ಪ್ರೀತಿಯ ಅಭಿನಂದನೆ ತಿಳಿಸಿ
@ಚಿತ್ರಾ ಪತ್ರ ಬರೆಯೋದೇ ಒಂದು ಕಲೆ. ಮುಂದೊಂದು ದಿನ ಖಂಡಿತವಾಗಿಯೂ ಪತ್ರ ಬರೆಯೋದು ಅಂದ್ರೇನು ಅನ್ನೋ ಕಾಲ ಬರಬಹುದು.
-ಪ್ರೀತಿಯಿಂದ,
ಚಿತ್ರಾ
ಬರಹ ಚೆನ್ನಾಗಿದೆ. keep it up....
ಚಿತ್ರಾ,
[ಎಂತ ಗೊತ್ತುಂಟು ಇಲ್ಲ...]
ನಿಜ. ಈಗ ತಂತ್ರಜ್ಞಾನ ಮುಂದುವರೆದಿದೆ. ಆದರೆ ಎಲ್ಲಾ ಹಳ್ಳಿಗಳಲ್ಲಿ ಮೊಬೈಲು, ಅಂತರ್ಜಾಲ ಇರೋದಿಲ್ಲ. ಅಲ್ಲಿ ಈ ಅಣ್ಣ ಬೇಕೆ ಬೇಕು...
ಚಿತ್ರಾ...
ತುಂಬಾ.. ಆಪ್ತವಾಗಿ ಬರೆದಿದ್ದೀರಿ...
ಕಲಾಂ ರವರ ಮಾತು ಓದಿ ನಿಜಕ್ಕೂ ಖುಷಿಯಾಯಿತು...
ರಾಷ್ಟ್ರಪತಿ ಹುದ್ದೆಗೆ ಘನತೆ ತಂದವರು "ಅವರು"
ಒಳ್ಳೆಯ ಲೇಖನಕ್ಕಾಗಿ ವಂದನೆಗಳು...
ಚೇವಾರ್..ಯಪ್ಪಾ..ಬ್ಲಾಗ್ ಗ್ ಬತ್ತಿನೆಕ್ ಥ್ಯಾಂಕ್ಸ್..ಏಪಲಾ ಇಂಚನೆ ಬಲೆ..
@ಅಂತರ್ವಾಣಿ..ತುಳು ಕಲಿಸಬೇಕಾ? (:)..ನೀವಂದಿದ್ದು ಸ್ವಲ್ಪ ಮಟ್ಟಿಗೆ ನಿಜ.
@ಪ್ರಕಾಶ್ ಸರ್..ನಿಮಗೂ ಧನ್ಯವಾದಗಳು.
-ಚಿತ್ರಾ
Post a Comment