ಅದೇ ಇತ್ತೀಚೆಗೆ ಅಮ್ಮನೂರಿಗೆ ಹೋಗಿದ್ದೆ. ಅಂದ್ರೆ ನಾ ತುಂಬಾ ಪ್ರೀತಿಸುವ ನನ್ನೂರಿಗೆ. ನಾ ಹುಟ್ಟಿ ಬೆಳೆದ ಪ್ರೀತಿಯ ಊರಿಗೆ. ಕಳೆದ ಏಳೆಂಟು ತಿಂಗಳಿಂದ ಅಮ್ಮ ದಿನಾ ಬೆಳಿಗೆದ್ದು ಮನೆಗೆ ಬಂದಿಲ್ಲವೆಂದು ಗೊಣಗಾಡುತ್ತಿದ್ದರೂ ಕೆಲ್ಸ ಕೆಲ್ಸ ಅಂತ ಹೋಗಿರಲಿಲ್ಲ. ಅದೇ ವರ್ಷದ ಕೊನೆ..ಒಂದಷ್ಟು ರಜೆಗಳು ಬಾಕಿ ಇವೆ. ಹೋಗಿಬರೋಣ ಅಂತ ಹೋಗಬಂದೆ.
ಅದೇ ಊರು..ಅದೇ ಮನೆ. ಅಮ್ಮನ ಸಾರಥ್ಯದಲ್ಲಿ ಅಂಗಳದಲ್ಲಿ ಬಣ್ಣಬಣ್ಣದ ಹೂವುಗಿಡಗಳು ಅರಳಿವೆ. ಹೊಸ ಹೊಸ ಹೂವುಗಿಡಗಳನ್ನು ತಂದು ನೆಟ್ಟಿದ್ದಾರೆ. ಚೆನ್ನಾಗಿ ಹೂವು ಬಿಟ್ಟು ಅವುಗಳು ಅರಳಿದನ್ನು ನೋಡೋದೇ ಖುಷಿಯಾಗಿತ್ತು. ಅದೇ ಬೆಂಗಳೂರಿನಷ್ಟು ಚಳಿಯ ತೀವ್ರತೆ ಇಲ್ಲಾಂದ್ರೂ ಬೆಳಿಗ್ಗೆ ಏಳುವಾಗ ಕೈ-ಕಾಲುಗಳೇ ಮರಗಟ್ಟಿಹೋಗುತ್ತವೆ. ಹನಿಹನಿ ಇಬ್ಬನಿ ಬಿಂದುಗಳು ಮುಂಜಾವು ಸ್ವಾಗತಿಸುತ್ತವೆ. ಮನೆಯ ಕೋಳಿ ನಾಲ್ಕು ಗಂಟೆಗೇ ಅಲಾರಂ ಹೊಡೆಯುತ್ತೆ.
ನಮ್ಮನೆಯ ಪ್ರೀತಿಯ ಹೆಣ್ಣು ನಾಯಿ ಸತ್ತಿದೆ. ಬಾವಿಯಲ್ಲಿ ಮುಕ್ಕಾಲು ಭಾಗ ನೀರು ಇದೆ. ಕಾಳು ಮೆಣಸು ಫಲ ಬರುತ್ತಿದೆ..ಅಮ್ಮ ಅದನ್ನು ಕೊಯ್ಯೋದ್ರಲ್ಲೇ ಭಾರೀ ಬ್ಯುಸಿಯಾಗಿದ್ದಾರೆ. ನೆರೆಹೊರೆಯ ಮೂರ್ನಾಲ್ಕು ಮನೆಯಲ್ಲಿ ಹೊಸ ಹೊಸ ಬೋರ್ ವೆಲ್ ಗಳು ಬಂದಿವೆ..ಹಾಗಾಗಿ ಬಾವಿ ನೀರನ್ನೇ ಅವಲಂಬಿಸಿದವರಿಗೇ ಬಾವಿ ನೀರು ಬೇಗನೇ ಬತ್ತಿಹೋಗೋದು ಗ್ಯಾರಂಟಿ ಅಂತ ಅಲ್ಲಲ್ಲಿ ಮಾತಾಡುತ್ತಿದ್ದಾರೆ. ಅಮ್ಮ ತರಕಾರಿ ಬೆಳೆಸಿದ್ದಾರೆ..ಇನ್ನೊಂದ್ಸಲ ಬರುವಾಗ ಕೆಜಿಗಟ್ಟಲೆ ಗೆಣಸು, ತರಕಾರಿ ಬೆಂಗಳೂರಿಗೆ ಕೊಂಡೋಗಬಹುದು ಎಂದರು ಪ್ರೀತಿಯಿಂದ. ಮತ್ತೆ ನಮ್ಮೂರಿನ ಮುದುಕರಿಬ್ಬರು...ಅಂದ್ರೆ ಅವರಿಬ್ಬರು ಅಣ್ಣ-ತಮ್ಮಂದಿರು ಎರಡು ದಿನಗಳ ಅಂತರದಲ್ಲಿ ತೀರಿಹೋಗಿದ್ದಾರೆ. ಕುಬೇರನ ಮಗಳೊಬ್ಬಳು ಯಾವುದೋ ಹುಡುಗನ ಪ್ರೀತಿಸಿ ಮದುವೆಯಾಗಿದ್ದಕ್ಕೆ ಊರೆಲ್ಲ ಓಡಿಹೋದ್ಳು ಅಂತ ಬೊಬ್ಬಿಡುತ್ತಿದೆ. ಕುಬೇರನ ಮಗಳು ಬಡವನ ಮದುವೆಯಾದವಳು ಅನ್ನೋದೇ ಯುವಕರಿಂದ ಹಿಡಿದು ಹಣ್ಣು-ಹಣ್ಣು ಮುದುಕರವರೆಗೆ ಅನುಕಂಪ, ಅತೀ ಕಾಳಜಿ! ಹಳ್ಳಿಯಿಂದ ಹಿಡಿದು ೩೦ ಕಿ.ಮೀ. ದೂರದ ಪುತ್ತೂರು ಪೇಟೆ ತನಕವೂ ಅದೇ ಬಿಸಿಬಿಸಿ ಸುದ್ದಿ.
ಮತ್ತೆ ನಮ್ಮೂರ ರಸ್ತೆ ..ಅದೇ ವಿಧಾನಸಭೆ ಚುನಾವಣೆಗೆ ಮೊದಲು ಶತಾಯುಗತಾಯ ಪ್ರಯತ್ನ ಮಾಡಿ,,ರಸ್ತೆ ರಿಪೇರಿ ಮಾಡಿಬಿಟ್ರು. ಅದು ಪರ್ವಾಗಿಲ್ಲ..ಚೆನ್ನಾಗಿದೆ. ಜೊತೆಗೆ ಶೋಭಾ ಕರಂದ್ಲಾಜೆ ನಮ್ಮೂರಿಂದ ಸಚಿವೆ ಆಗಿದ್ದಾರೆ. ಆದ್ರೆ ಸಚಿವೆ ಆದ ಮೇಲೆ ಊರೇ ಮರೆತಿದ್ದಾರೆ ಅನ್ತಾರೆ ಊರ ಜನಗಳು. ನಮ್ಮೂರಲ್ಲಿ ದೀಪ ಕಾಣದ ಮನೆಗಳು ಎಂದಿನಂತೇ ಇವೆ. ಏನೂ ಬದಲಾಗಿಲ್ಲ. ಐದು ದಿನದಲ್ಲಿ ಮನೆಯಲ್ಲಿ ಖುಷಿ ಖುಷಿಯಾಗಿದ್ದೆ. ಅಮ್ಮ ಬಗೆಬಗೆ ಗಮ್ಮತ್ತು ಮಾಡಿದ್ರು. ಒಂದು ದಿನ ನನ್ ಪ್ರೀತಿಯ ಮೇಷ್ಟ್ರ ಜೊತೆ ಪುತ್ತೂರು ಸುತ್ತಾಡಿದ್ದೆ. ಹೊಸ ವರುಷದ ಆರಂಭ. ವರ್ಷಕ್ಕೆ ಬೇಕಾಗುವಷ್ಟು ಹಾರೈಕೆಗಳು.ಪ್ರೀತಿಯ ಹಿತನುಡಿಗಳು, ಬದುಕಿಡೀ ಸವಿಯುವಷ್ಟು ಪ್ರೀತಿನ ಮನತುಂಬಾ ತುಂಬಿಸಿಬಿಟ್ಟು ಕಳಿಸಿಕೊಟ್ಟರು.
ಮನೆಯಿಂದ ಹೊರಟ ದಿನ ಬದುಕು ಕಲಿಸಿದ ನನ್ನ ಪ್ರೀತಿಯ ಕಾಲೇಜು ಉಜಿರೆ ಕಡೆಯಿಂದಲೇ ಬಸ್ಸು ಸಾಗುವಾಗ ಕಾಲೇಜು, ಅಲ್ಲಿನ ಕಾರಿಡಾರ್, ಗುರುಗಳು ಧುತ್ತನೆ ಕಣ್ಣೆದುರು ಮೂಡಿಬಂದರು. ಕೆಲ ವರುಷಗಳ ನಂತರವೇ ಮತ್ತೊಮ್ಮೆ ಧರ್ಮಸ್ಳಳಕ್ಕೆ ಹೋಗಿದ್ದೆ. ಅಮ್ಮನ ಪ್ರೀತಿ, ಗುರುಗಳ ಪ್ರೀತಿ, ಕಾಲೇಜು, ಮನೆ, ಎಲ್ಲವನ್ನೂ ಮನಸ್ಸಲ್ಲಿ ತುಂಬುಕೊಂಡು ಬೆಂಗಳೂರು ಬಸ್ಸು ಹತ್ತಿದೆ. ಮತ್ತೆ ಮತ್ತೆ ಅಮ್ಮನೂರು ನೆನಪಾಗುತ್ತಿತ್ತು. ಕಳೆದ ರಾತ್ರಿ ಅಮ್ಮನ ಸೆರಗಿನಲ್ಲಿ ಹುದುಗಿ ಮಲಗಿದ್ದ ನೆನಪು ಕಣ್ಣು ತೇವವಾಗಿಸಿತ್ತು. ಕೋಟಿಗಟ್ಟಲೆ ಗುಳುಂ ಮಾಡಿದ ಹದೆಗೆಟ್ಟ, ಧೂಳು ತುಂಬಿದ ಶಿರಾಡಿ ಘಾಟ್ ಸೆಕೆಯೋ ಸೆಕೆ...ಚಳಿಗಾಲದಲ್ಲೂ ಈ ಬರೋಬ್ಬರಿ ಧೂಳು ಮೈ ಬೆವರಾಗಿಸಿತ್ತು.
ಏನೇ ಆಗಲಿ..ಊರಿಗೆ ಹೋಗಬಂದ ದಿನದಿಂದಲೇ ಇನ್ಯಾವಾಗ ಊರಿಗೆ ಹೋಗೋದು ಎಂಬ ಚಿಂತೆಯಿಂದಲೇ ದಿನಚರಿ ಆರಂಭವಾಗಿಬಿಟ್ಟಿದೆ. ಅಮ್ಮನೂರು ಏನೂ ಮಹಾ ಬದಲಾಗಿಲ್ಲ. ಹಳ್ಳಿಯ ಸೊಗಡು ಇನ್ನೂ ಜೀವಂತವಾಗಿದೆ. ಕಂಪ್ಯೂಟರ್ ಎದುರು ಕುಳಿತು ಮಾಹಿತಿ ಹುಡುಕೋರಿಗಿಂತ ಪುಸ್ತಕ ಖರೀದಿ ಮಾಡಿ ಓದೋರೇ ಹೆಚ್ಚಿದ್ದಾರೆ. ವಿದ್ಯುತ್ ಬಲ್ಬ್ ಗಳಿಲ್ಲದೆ ಹಣತೆಯಡಿ ಬದುಕು ಸಾಗಿಸೋರು ಇದ್ದಾರೆ. ಅದೇ ಕಾಡು..ಅದೇ ನಾಡು.ಕೆಲವೆಡೆ ಅದೇ ಗದ್ದೆಗಳು..ನೀರು..ಹಳ್ಳ..ಹರಿಯುತ್ತಿದೆ. ಕುಮಾರಧಾರ.. ನೇತ್ರಾವತಿ ತುಂಬಿ ಹರಿಯುತ್ತಿದ್ದಾರೆ. ನಮ್ಮೂರಿಗೆ ನಮ್ಮೂರೇ ಸಾಟಿ ಅನಿಸಿತ್ತು.
Saturday, January 3, 2009
Subscribe to:
Post Comments (Atom)
24 comments:
ನಿಜ, ಚಿತ್ರಾ.
ಹಳ್ಳಿಯೂರಿನ relaxed ಸೊಗಡು ನಗರಗಳಲ್ಲಿ ಸಿಗೋದಿಲ್ಲ.
ಹೀಗೆ ಅಪರೂಪಕ್ಕೆ ಬಂದು ಹೋಗೋದು ಚಂದ. ಅಲ್ಲೇ ಇದ್ರೆ.......? ಅದು ನಿಜವಾದ ಹಳ್ಳಿ ಯ ಬಣ್ಣ ಅರಿವಾಗುತ್ತೆ. ನಕ್ಕರು ಸುದ್ಧಿ ಅತ್ತರೂ ಸುದ್ಧಿ. ಕಾಸಿದ್ದರೂ ಕಷ್ಟ ಇಲ್ಲದಿದ್ದರೂ ಕಷ್ಟ.
chennagide.. Karkondu hoogi ond sala nim oorige..
Correct.. ನಮ್ಮೂರಿಗೆ ನಮ್ಮೂರೇ ಸಾಟಿ ....Edde pandar
ಕಣೆಮಾ, ಓದಿ ಮುಗಿಸಿದ ಮೇಲೂ ಕುಮಾರಧಾರಾ ಹಾಗೆ ಹರಿತಾನೇ ಇದೆ ನೋಡು ನೀನು ಬರೆದದ್ದು.
ನಿಮ್ಮೂರಿನ ಮಾಹಿತಿ ಕೊಟ್ಟಿದ್ದು ಚೆನ್ನಾಗಿದೆ... :)
ನನ್ನ ಗೆಳೆಯನ ಊರಿನಲ್ಲೂ ಸಹ ವಿದ್ಯುತ್ ಇಲ್ಲವಂತೆ.. ತುಂಬ ದುಖವಾಗುತ್ತೆ...ಹೇಗೆ ಜೀವನ ಸಾಗಿಸುತ್ತಾರೋ ಅಲ್ಲಿಯವರು ಅಂತ..
ನಾನು ಕೂಡ ಊರಿಗೆ ಹೋಗಿದ್ದೆ ಇಯರ್ ಎ೦ಡ್ ರಜೆನಾ ಮುಗಿಸೋಣ ಅ೦ತ:)
ನನಗೂ ನಿಮ್ಮ ತರಹದ್ದೇ ಅನುಭವಗಳಾದವು. ಹಳ್ಳಿಗಳು ಇನ್ನೂ ಆ ಸೊಗಡನ್ನು ಉಳಿಸಿಕೊ೦ಡಿರುವುದು ಸಮಧಾನದ ಸ೦ಗತಿ.
ನೀವು ಬರೆಯುತ್ತಿರುವ ಸ್ಪೀಡು ನಿಜಕ್ಕೂ ಅಧ್ಬುತ ಚಿತ್ರಕ್ಕ:)
ಚಿತ್ರಾ...
ಅಮ್ಮನೂರಿನ ಅಂದವನ್ನು ಚೆಂದವಾಗಿ ಚಿತ್ರಿಸಿದ್ದೀರ.
ಅನಿವಾರ್ಯವಾಗಿ ಊರು ಬಿಟ್ಟ ನಮಗೆ ಊರು ಆಪ್ಯಾಯಮಾನವೆನಿಸುತ್ತದೆ, ತನ್ನೆಡೆಗೇ ನಮ್ಮ ಮನಸನ್ನ ಸೆಳೆದುಕೊಳ್ಳುತ್ತದೆ. ಹಾಗೆಯೇ ಅನಿವಾರ್ಯವಾಗಿ ಊರಲ್ಲಿಯೇ ಇರುವವರನ್ನು ಊರಾಚೆಯ ಪ್ರಪಂಚ ಸಹಜವಾಗಿ ಸೆಳೆಯುತ್ತದೆ.
ನಮಗಂತೂ ಊರು ಅಭಿವೃದ್ದಿಯಾದರೆ ಅದೆಷ್ಟು ಖುಷಿಯಾಗುತ್ತದೆ. ಅದೇ ಊರಿನಲ್ಲಿರುವ ಅನಾನುಕೂಲತೆಗಳು, ಕಷ್ಟಕಾರ್ಪಣ್ಯಗಳು ನೋವು ಕೊಡುತ್ತವೆ, ಅಲ್ಲಿಯೇ ಇದ್ದು ಅವನ್ನೆಲ್ಲ ಅನುಭವಿಸಿದ್ದರೆ ಆ ನೋವು ಬಹುಷಃ ನವಿರಾಗಿರದೆ ರೇಜಿಗೆ ಹುಟ್ಟಿಸುತ್ತಿತ್ತೇನೋ.
ಸಾಧ್ಯವಾದರೆ ಒಂದಲ್ಲ ಒಂದು ದಿನ ಹುಟ್ಟೂರನ್ನ ಸೇರಿಕೊಳ್ಳಬೇಕೆಂಬ ತುಡಿತ ಇದ್ದೇ ಇರುತ್ತದೆ, ಅಲ್ಲವೆ? ಅದು ಹಂಬಲ ಮಾತ್ರವಾಗಿ ಉಳಿದರೂ ಸಾಕು, ಅಂತಹದೊಂದು ಕನಸೇ ಆಪ್ಯಾಯಮಾನ.
ನಿಮ್ಮ ಬರಹಗಳು ಆಪ್ತವೆನಿಸುತ್ತವೆ.
olleya baraha. yakri bartha bartha tumba bhavukaragi baritiddiralla?
ಏನ್ ಚಿತ್ರಾ ಇದು. ಊರಿನ ಕತೆ ಎಲ್ಲಾ ಹೇಳಿ, ರಜೆ ಇಲ್ದೆ ಒದ್ದಾಡ್ತಿರೋ ನಮ್ಮಂತಹವರ ಹೊಟ್ಟೆಗೆ ಬೆಂಕಿ ಯಾಕೆ ಹಾಕ್ತೀರಿ. ನಂಗೂ..... ಹರಿಯುವ ನದಿಯಲ್ಲಿ ಕಾಲು ಬಿಟ್ಟು ಕುಳಿತುಕೊಳ್ಳೋದು....ಗದ್ದೆಗೆ ಬರೋ ಕೊಕ್ಕರೆಗಳನ್ನು ಹಿಡಿಯೋಕೆ ಹೋಗೋದು..ಹಾಗೆ..ಗುಡ್ಡದ ತುದಿಯಲ್ಲಿ ನಿಂತು ಜೋರಾಗಿ ಕೂಗೋದು... ಕೂಗಿ ಸುಸ್ತಾದರೆ..ಮೋಡಗಳಿಗೆ ಕಲ್ಲು ಹೊಡೆಯೋದು...ಮನೆಯಿಂದ ಕದ್ದು ಕೊಂಡು ಹೋದ ಬೆಲ್ಲ ಮೆಲ್ಲೋದು..... ತುಂಬಾನೇ ಇಷ್ಟ.
ಹಂ...
ಓದಿದ ಮೇಲೆ ಊರಿನ ನೆನಪು ಹೆಚ್ಚಾಗ್ತ ಇದೆ .ಮೊನ್ನೆ ದೀಪಾವಳಿಯಲ್ಲಷ್ಟೇ ಹೋಗಿಬಂದಿದ್ದು. ೮ ದಿನಗಳು ಎಲ್ಲಿ , ಹೇಗೆ ಕಳೆದವೋ ಎಂದು ಇನ್ನೂ ಗೊತ್ತಾಗ್ಲಿಲ್ಲ !
ಚೆಂದವಾಗಿ ಚಿತ್ರಿಸಿದ್ದೀರಿ .
ಚಿತ್ರಾರವರೆ...
ನಿಮ್ಮೂರಿನ ವರ್ಣನೆ ನಮ್ಮೂರ ಥರಹ ಇದೆಯಲ್ರಿ...
ಒಂದುಸಾರಿ ಪುಕ್ಕಟೆಯಾಗಿ ಊರಿಗೆ ಕರೆದೊಯ್ದಿದಕ್ಕೆ ವಂದನೆಗಳು..
ಚಂದದ ಬರಹಕ್ಕೆ ವಂದನೆಗಳು..
ಅಮ್ಮನ ಊರು ಅಂದ್ರೆ ಹೀಗಿರುತ್ತೋ ಏನೋ ಗೊತ್ತಿಲ್ಲ. ನಂಗು ನನ್ನ ಅಮ್ಮನ ಊರು ಅಂದ್ರೆ ಪ್ರಾಣ. ನನ್ನನ್ನು ಬೆಳೆಸಿದ ಊರು ಅದು. ನನಗೆ ಪ್ರಕೃತಿ, ಸಾಹಿತ್ಯ, ಚಿತ್ರಕಲೆ ಎಲ್ಲದರಲ್ಲೂ ಪ್ರೀತಿ ಹುಟ್ಟಿಸಿದ ಊರು ಅದು... ನನ್ನ ಅಮ್ಮನ ಊರನ್ನು ನೆನಪಿಸಿದ ನಿಮ್ಮ ಲೇಖನಕ್ಕೆ ಧನ್ಯವಾದಗಳು. ನಾನು ಕೆಲವೇ ದಿನಗಳಲ್ಲಿ ಅಲ್ಲಿಗೆ ಹೋಗುವ ನಿರೀಕ್ಷೆಯಲ್ಲಿದ್ದೇನೆ.
@ಸುನಾಥ್ ಸರ್, ಶ್ರೀ.ಶಂ. ಸರ್, ಹರೀಶ್ ಸರ್..ಧನ್ಯವಾದಗಳು
@ಸಂತೋಷ್..ಆಯ್ತು ಕರಕೊಂಡು ಹೋಗ್ತೀನಿ
@ಶ್ರೀದೇವಿ..(:)
@ಜಯಶಂಕರ್..ಹೌದು, ಕರೆಂಟಿಲ್ಲದ ಎಷ್ಟೋ ಹಳ್ಳಿಗಳಿವೆ.
@ಸುಧೇಶ್., ಚಿತ್ರಾ, ಪ್ರಕಾಶ್ ಸರ್..ಧನ್ಯವಾದಗಳು
@ಶಾಂತಲಾ ಮೇಡಂ..ತುಂಬಾ ಥ್ಯಾಂಕ್ಸ್ಊಉ
@ಜೋಮನ್..ಯಾಕೋ ಇಂಥ ಬರಹಗಳೇ ನಂಗಿಷ್ಟವಾಗಿಬಿಡುತ್ತವೆ.@
@ಪ್ರೀತು..ಯಪ್ಪಾ! ನಿಮಗ್ಯಾಕೆ ಹೊಟ್ಟೆ ಉರಿಯೋದು..ಆಗಾಗ ಊರಿಗೆ ಓಡಿದ್ರೂ ಸಾಕಾಗಲ್ವಾ?
@ಶರತ್ಚಂದ್ರ..ಹೌದಾ? ಹೋಗಬನ್ನಿ. ಶುಭವಾಗಲಿ..
-ತುಂಬುಪ್ರಿತಿ,
ಚಿತ್ರಾ
ಊರಿಗೆ ಹೋಗಿ ಬ೦ದ ಅನುಭವವಾಯ್ತು . Thanks
ನಿಮ್ಮ ಅನುಭವ ಅದ್ಬುತವಾಗಿದೆ. ಒಮ್ಮೆ ನಮ್ಮನ್ನು ನಿಮ್ಮ ಊರಿಗೆ ಕರೆದುಕೊಂಡು ಹೋಗಿ ಅಮ್ಮನನ್ನು ಪರಿಚಯಿಸಿ. ಧನ್ಯವಾದಗಳು.
ಗೆಳೆಯ
ರಾಜೇಶ್
ಚಿತ್ರಾ.
ಮತ್ತೊಂದು ಭಾವಪೂರ್ಣ ಬರಹ. ಚೆನ್ನಾಗಿದೆ. ನಾನೂ ನಮ್ಮೂರಿನ ಸೊಗಡನ್ನು ತುಂಬಾ ನೆನಪಿಸಿಕೊಳ್ಳುತ್ತಿರುತ್ತೇನೆ.
ಚಿತ್ರಾ,
ನಿಮ್ಮೂರಿನ ವರದಿಯಲ್ಲಿ ಹೂಗಳಿವೆ, ಅಲರಾಂನಂಥ ಕೋಳಿಯಿದೆ...ಬೋರ್ವೆಲ್ ಇದೆ, ಕಾಳುಮೆಣಸು[ಮುಂದಿನಬಾರಿ ಹೋದಾಗ ಕಾಳುಮೆಣಸಿನ ಚೊತೆ ತರಕಾರಿ ತರುವಾಗ ನಮ್ಮ ಮನೆ ಕಡೆ ಬಂದು ಸ್ವಲ್ಪ ಕೊಟ್ಟು ಹೋಗು]
ಓಡಿ ಹೋದವರಿದ್ದಾರೆ, ಸತ್ತುಹೋದವರಿದ್ದಾರೆ...ಅವರು ಸತ್ತರು ಸಾಯದ ರಸ್ತೆಗಳಿವೆ... ಬದುಕು ಕಲಿಸಿದ ಕಾಲೇಜಿದೆ...ಅಮ್ಮನ ಸೆರಗಿದೆ....ಹಿತನುಡಿಯ ಮೇಷ್ಟ್ರಿದ್ದಾರೆ...ಸೆಕೆಯಿದೆ...ದೂಳಿದೆ....ಹಣತೆ.....
ಅದೆಲ್ಲ ಚಿತ್ರ ಕಟ್ಟಿಕೊಡುವ ಚಿತ್ರ ಇರುವಾಗ ಓದಿ ಖುಷಿಪಡಲು ನಾನಿದ್ದೇನೆ......
ಹ್ಮ್.. ನಮ್ಮೂರಿಗೆ ನಮ್ಮೂರೇ ಸಾಟಿ
ಹಾಗೆಯೇ ಈ ಬರಹಕ್ಕೆ ಈ ಬರಹವೇ ಸಾಟಿ.
@ಪರಾಂಜಪೆ, ತೇಜಕ್ಕ ತುಂಬಾ ಧನ್ಯವಾದಗಳು.
@ರಾಜೇಶ್..ಪ್ರೀತಿಯಿಂದ ಸ್ವಾಗತ ಬನ್ರೀ ನಮ್ ಊರಿಗೆ
@ವಿಕಾಸ್..ಥ್ಯಾಂಕ್ಯೂಉಉ
@ಶಿವಣ್ಣ...ತುಂಬಾ ತುಂಬಾ ಬರೀಬೇಕು ಎನ್ನುವ ಬೆಟ್ಟದಷ್ಟು ಆಸೆ ಇದೆ..ಚೆನ್ನಾಗಿ ಬರೆಯಕೆ ಪ್ರಯತ್ನ ಮಾಡ್ತೀನಿ..ನಿಮ್ ಪ್ರೀತಿ, ಹಾರೈಕೆ ನನಗಿರಲಿ
-ತುಂಬುಪ್ರೀತಿಯಿಂದ,
ಚಿತ್ರಾ
ತವರು,ತಾಯಿ ಎರಡೂ ಅಪ್ಯಾಯಮಾನ. ದೂರವಿದ್ದಷ್ಟೂ ಸೆಳೆಯುತ್ತದೆ.ನೆನಪುಗಳು ಕಾಡುತ್ತವೆ.ತುಂಬಾ ಆತ್ಮೀಯವಾಗಿದೆ ಬರಹ.
ಅಂದ ಹಾಗೆ ನನ್ನ ಸ್ನೇಹಿತರದ ವಿನಯಕ್ ನಾಯಕ್ ಪುತ್ತೂರಿನವರು.ಒಳ್ಳೆಯ ಬರಹಗಾರರು ಮತ್ತು ಫೋಟೋಗ್ರಾಫರ್ ಕೂಡ.
ಚಿತ್ರಾ
ನಿಮ್ಮ ಬರವಣಿಗೆ ಮನಸ್ಸಿಗೆ ತುಂಬಾ ಹಿಡಿಸಿತು. ನಮ್ಮ ಊರು ಅಮ್ಮ ತುಂಬಾ ನೆನಪಾಗುತ್ತಿದ್ದಾರೆ. ಸಮಯ ಸಿಕ್ಕಿದಾಗ ನನ್ನ ಬ್ಲಾಗ್ ವೀಕ್ಷಿಸಿ.
http://prashanthkannada.blogspot.com/
ನಮಸ್ಕಾರ
ಪ್ರಶಾಂತ
Hi Chitra...
Nanage omme nammurige hogi bandanthe anisthu.. Thumba miss maadtha iddene... :-(
@ಪ್ರಶಾಂತ್..ಕೃತಜ್ಞತೆ. ಖಂಡಿತವಾಗಿಯೂ ನಿಮ್ ಬ್ಲಾಗ್ ನೋಡ್ತೀನಿ.
@ಮಲ್ಲಿಯಣ್ಣ..ಥ್ಯಾಂಕ್ಸ್ಯುಉಉಉ
@ಕೃಷ್ನವೇಣಿ..ಬನ್ರೀ ಊರಿಗೊಮ್ಮೆ.
-ಚಿತ್ರಾ
Post a Comment