ನನ್ನ ಕನಸು, ಭಾವನೆ, ಬರಹಗಳಿಗೆ ವೇದಿಕೆಯಾಗಿದ್ದ ಪ್ರೀತಿಯ 'ಶರಧಿ'ಗೆ ಇದೀಗ ವರ್ಷ ತುಂಬಿದೆ. ಕಳೆದ ನವೆಂಬರ್ 2ರಂದು 'ಅಮ್ಮಾ ಎಂಬ ಮಾತಿಗಿಂತ ಬೇರೆ ಮಂತ್ರ ಏನಿದೆ?' ಎಂಬ ಪುಟ್ಟ ಬರಹವನ್ನು 'ಶರಧಿ'ಯೊಳಗೆ ಹಂಚಿಕೊಂಡಿದ್ದೆ. ಭಾವನೆಗಳ ಸಂತೆಯೊಳಗೆ ಕನಸುಗಳ ಮೂಟೆ ಹೊತ್ತು, ಹುಡುಕಾಟದಲ್ಲೇ ಕಳೆಯುತ್ತಿದ್ದ ನನ್ನ ಬರಹಗಳ ತುಡಿತಕ್ಕೆ 'ಶರಧಿ' ವೇದಿಕೆಯಾಯಿತು. ನಾನು 'ದ ಸಂಡೆ ಇಂಡಿಯನ್' ಪತ್ರಿಕೆಗೆ ಸೇರಿದಾಗ ಪರಿಚಯವಾಗಿದ್ದ ತರ್ಲೆ ಗೆಳತಿ ಕಲಾ ಕನ್ನಡ ಬ್ಲಾಗ್ ಲೋಕವನ್ನು ಪರಿಚಯಿಸಿದವಳು. ಆವಾಗ ಬ್ಲಾಗ್ ಅಂದರೆ ಏನು? ಎಂಬುದೇ ನನಗೇ ಗೊತ್ತಿರಲಿಲ್ಲ. ಸಮಯವಿದ್ದಾಗ, ಮನಸ್ಸು ಸರಿಯಿದ್ದಾಗ ಏನಾದ್ರೂ ಗೀಚಿ ಡೈರಿಯೊಳಗೇ ಮುಚ್ಚಿಡುವ ಅಭ್ಯಾಸ ನನ್ನದು. ಅದೇನೋ ಅವಳು ಯಾವಾಗ ನೋಡಿದರೂ ಅವಳ ಅಣ್ಣನ ಬ್ಲಾಗ್ 'ತುಂತುರು ಹನಿಗಳು'(ಶ್ರೀನಿಧಿ) ಸೇರಿದಂತೆ ತುಂಬಾ ಬ್ಲಾಗ್ ಗಳನ್ನು ತೆರೆದು ಓದುತ್ತಿದ್ದಳು. ನಾನು ಕುತೂಹಲದಿಂದ ಏನೇ ಅದು, ನಂಗೂ ಹೇಳಿಕೊಡು ಎನ್ನುತ್ತಿದ್ದೆ. ಕೊನೆಗೆ ಅವಳೇ ನನ್ನ ಹೆಸರಲ್ಲಿ ಬ್ಲಾಗ್ ತೆರೆದು, ಅಲ್ಲಿ ಬರೆಯುವ ಕುರಿತೆಲ್ಲಾ ಹೇಳಿದಳು. ಅಲ್ಲಿಂದ ಶರಧಿಯಲ್ಲಿ 'ಭಾವದಲೆಗಳ ಪಯಣ' ಮುಂದುವರಿದಿತ್ತು. ನನ್ನ ಗೆಳತಿಗೆ ಪ್ರೀತಿಯಿಂದ ಥ್ಯಾಂಕ್ಸ್ ಹೇಳಲೇಬೇಕು. ಜೊತೆಗೆ ಒಳ್ಳೆಯ ವಿನ್ಯಾಸವನ್ನೂ ಮಾಡಿಕೊಟ್ಟ ನನ್ನ ಪ್ರೀತಿಯ ಅಣ್ಣ' ರೋಹಿ'ಗೂ...
ಒಂದು ವರ್ಷದ ಪಯಣ ನೋಡಿದರೆ ನಾನು ಬರೆದಿದ್ದು ತೀರಾ ಕಡಿಮೆ. ಕೇವಲ 91 ಬರಹಗಳನ್ನು ಮಾತ್ರ ಬರೆದಿದ್ದೇನೆ. ಸೆಂಚುರಿ ಬಾರಿಸಕ್ಕೂ ನನಗೆ ಆಗಲಿಲ್ಲ. ಕಳೆದ ಏಪ್ರಿಲ್-ಮೇ ತಿಂಗಳಲ್ಲಿ ಬ್ಲಾಗ್ ಕಡೆ ಕಣ್ಣುಹಾಯಿಸಲೂ ಸಮಯವಿರಲಿಲ್ಲ..ಕಾರಣ ಚುನಾವಣೆ! ತುಂಬಾ ಭರವಸೆಯಿಂದ, ಆಸಕ್ತಿಯಿಂದ ಆರಂಭಿಸಿದ ಶರಧಿಯಲ್ಲಿ ನಿತ್ಯ ಪಯಣಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗು ಈಗ್ಲೂ ನಂಗಿದೆ. ಆದರೆ ಇಷ್ಟಾದರೂ ಬರೆದೆನಲ್ಲ ಅಂತ ನನಗೆ ಖುಷಿಯಿದೆ, ಏನೋ ಒಂದು ರೀತಿಯ ತೃಪ್ತಿ. ಯಾವತ್ತೂ ನ್ಯಾಯಬದ್ಧವಾದ ಬರಹ, ಸಾಹಿತ್ಯವನ್ನು ಬ್ಲಾಗ್ ಮೂಲಕ ನೀಡಬೇಕನ್ನುವ ಉದ್ದೇಶ ನನ್ನದಾಗಿರಿಲಿಲ್ಲ. ಅದು ನನ್ನಿಂದ ಸಾಧ್ಯನೂ ಇಲ್ಲ. ನನ್ನಾಸೆ ಇಷ್ಟೇ: ಮನಸ್ಸಿಗೆ ತೋಚಿದ್ದನ್ನು, ಕಂಡಿದ್ದನ್ನು , ಕೇಳಿದ್ದನ್ನು ಬ್ಲಾಗ್ ನಲ್ಲಿ ಬರೆಯುವುದು. ಅದೂ ನನ್ನ ತೃಪ್ತಿಗಾಗಿ ಅಷ್ಟೇ.
ನನ್ನ ಬ್ಲಾಗಿನಲ್ಲಿ ತುಂಬಾ ಒಳ್ಳೆಯ ಬರಹಗಳನ್ನು ನಾನೆಂದೂ ಬರೆದಿಲ್ಲ. ಆದರೂ ಬರೆದಿರುವುದಕ್ಕೆ ಎಷ್ಟೋ ಜನ ಬೆನ್ನುತಟ್ಟಿದ್ದಾರೆ. ಇನ್ನಷ್ಟು ಬರೆ ಅಂದಿದ್ದಾರೆ. ಏನೋ ಸುಮ್ನೆ ಗೀಚಿದಾಗ ಬರಹ ಚೆನ್ನಾಗಿತ್ತು, ಆದರೆ ಹೀಗಿರಬೇಕಿತ್ತು ಎಂದಿದ್ದಾರೆ..ಅದೇ ನನಗೆ ತುಂಬಾ ಖುಷಿ ತಂದಿರುವ ವಿಚಾರ. ನಾನು ಅಕ್ಷರಲೋಕಕ್ಕೆ ಹೆಜ್ಜೆಯಿಟ್ಟ ದಿನಗಳಿಂದಲೇ 'ಚಿತ್ರಾ , ಬ್ಲಾಗ್ ಶುರು ಮಾಡು' ಎನ್ನುತ್ತಿದ್ದವರು, ಪ್ರೀತಿಯಿಂದ ಪ್ರೋತ್ಸಾಹ ನೀಡುತ್ತಿದ್ದವರು, ಒಂದು ರೀತೀಲಿ ನನ್ನ ಪಾಲಿಗೆ 'ಮೇಷ್ಟ್ರು' ಆಗಿದ್ದ 'ಕುಂಟಿನಿ'ಸರ್ ಗೆ ಎಷ್ಟೇ ಥ್ಯಾಂಕ್ಸ್ ಹೇಳಿದ್ರೂ ಸಾಲದು. ಬ್ಲಾಗ್ ಬರೆದಾಗ 'ಆಗಲ್ಲ..ಹೀಗೆ ಬರೀಮ್ಮಾ' ಎನ್ನುತ್ತಿದ್ದ ರಶೀದ್ ಸರ್, ಆರಂಭದಿಂದಲೇ ಪ್ರತಿ ಬರಹಗಳನ್ನು ಓದಿ 'ನೋಡಮ್ಮಾ ಚಿತ್ರಾ..ಯಾರಿಗೂ ನೋವಾಗದಂತೆ ನಿನ್ನ ಭಾವನೆಗಳನ್ನು ಅಭಿವ್ಯಕ್ತಿಗೊಳಿಸು' ಎನ್ನುತ್ತಿದ್ದ ಗೆಳೆಯ ರಾಜೇಶ್, ನನ್ನ ಬ್ಲಾಗ್ ಅನ್ನು ಪ್ರಕಟಿಸಿ ಪ್ರೋತ್ಸಾಹಿಸಿರುವ ಕೆಂಡಸಂಪಿಗೆ, ಕನ್ನಡಪ್ರಭ, ಅವಧಿ ಎಲ್ಲರೂ ನನ್ನನ್ನು ಬೆನ್ನುತಟ್ಟಿದವರೇ. ..ಜೊತೆಗೆ ಒಂದಷ್ಟು 'ಬ್ಲಾಗ್ ಗೆಳೆಯರೇ' ನನಗೆ ಸ್ಫೂರ್ತಿ.
'ಶರಧಿ' ಅಂದ್ರೆ ನನ್ನ ಕನಸು. ಇದು ನಾನು ತುಂಬಾ ಇಷ್ಟಪಟ್ಟ ಹೆಸರು. ನನ್ನ ಅಮ್ಮನ ಜೊತೆ ಹೇಳ್ತಾ ಇದ್ದೆ, 'ಜಗತ್ತಿನಲ್ಲಿ ಒಳ್ಳೊಳ್ಳೆ ಹೆಸ್ರು ಇರುವಾಗ ನನಗೇಕೆ ಈ ಚಿತ್ರಾ ಅನ್ನೋ 'ವಿಚಿತ್ರ ಹೆಸರು ಇಟ್ಟೆಂತ?'. ಅದಕ್ಕೇ ಪ್ರೀತಿಯಿಂದ 'ಶರಧಿ' ಅಂತ ಹೆಸರಿಟ್ಟೆ. ನನ್ನ ಶರಧಿ ಇನ್ನೂ ಪುಟ್ಟದಾದ, ಒಂದು ವರ್ಷದ ಹಸುಗೂಸು. ನಾನಿಲ್ಲಿ ಇನ್ನೂ ತುಂಬಾ ದೂರ ದೂರ ಪಯಣಿಸಬೇಕಿದೆ. ಏನೇನೋ ಬರೆಯಬೇಕೆಂದುಕೊಂಡಿದ್ದೇನೆ..ಕತೆ, ಕವನ, ವಿಮರ್ಶೆಗಳನ್ನು ಬಿಟ್ಟು. ಯಾಕೆಂದರೆ ಎಂಥ ಪುಸ್ತಕಗಳನ್ನು ಓದಿದರೂ ಈ ಮೂರು ಅಭ್ಯಾಸಗಳಿನ್ನೂ ಒಲಿದಿಲ್ಲ. ಇದಕ್ಕೆ ಮಂಡೆನೇ ಒಡುತ್ತಿಲ್ಲ. ಆದರೂ ನನ್ನ ಪ್ರೀತಿಯ ಶರಧಿಯಲ್ಲಿ ಏನಾದ್ರೂ ಬರೆಯಲೇಬೇಕು...ಬರೀತಾಲೇ ಇರಬೇಕು..ಶರಧಿ ನಿರಂತರವಾಗಿ ಹರಿಯುತ್ತಲೇ ಇರಬೇಕು. ನನ್ನೊಳಗಿನ ಖುಷಿ, ಅಳಲಿನ ಭಾವಗಳ 'ಸವಿಹಾಡು'ಗಳು ಆಗಾಗ 'ಶರಧಿಯಲ್ಲಿ' ಪಯಣಿಸುತ್ತಿರಬೇಕು ಎಂಬುದು ನನ್ನಾಸೆ. ನನ್ನೊಳಗಿನ ಭಾವದಲೆಗಳ ಪಯಣಕ್ಕೆ 'ಶರಧಿ' ಪುಟ್ಟ ವೇದಿಕೆ. ನನಗೆ ಬೆನ್ನು ತಟ್ಟಬೇಕು,.ಶರಧಿಯಲ್ಲಿ ನನ್ನ ಜೊತೆಗೆ ನೀವೂ ಖುಷಿಖುಷಿಯಾಗಿ ಪಯಣಿಸಬೇಕು. ''ಶರಧಿ' ನಿನಗಿದೋ ಹುಟ್ಟುಹಬ್ಬದ ಶುಭಾಶಯಗಳು.
ಪ್ರೀತಿಯಿಂದ,
ಚಿತ್ರಾ
(ಫೋಟೋ: ರೋಹಿ ಅಣ್ಣ)
Thursday, November 6, 2008
Subscribe to:
Post Comments (Atom)
37 comments:
ಕಂಗ್ರಾಟ್ಸೂ.....
ಶರಧಿಗೆ ಶುಭಾಶಯಗಳು..
ಚಿತ್ರಾ, ಈ ವರ್ಷ ಇನ್ನೂ ಹೆಚ್ಚಿನದನ್ನು ಬರೆಯಿರಿ.. ಶುಭಾಶಯಗಳು ನಿಮಗೆ..
Cool. Congrats, Go ahead :)
೯೧ ಅ೦ದ್ರೆ ದೊಡ್ಡ ಸ೦ಖ್ಯೆ. ವಾರಕ್ಕೆ ಎರಡು ಪೋಸ್ಟಿನ ಹಾಗೇ. :)
ಚಿತ್ರಾ, ಈ ವರ್ಷ ಇನ್ನೂ ಹೆಚ್ಚಿನದನ್ನು ಬರೆಯಿರಿ.. ಶುಭಾಶಯಗಳು ನಿಮಗೆ.
rohi tikkfuvera ?
ಶುಭಾಶಯ ತಂಗಮ್ಮಾ... ನಿನ್ನ ಹರ್ಷದಲ್ಲಿ ನಾನೂ ಭಾಗಿ. ಬರೀತಿರು, ಖುಶಿಯಾಗಿರು.
ಅಂದಹಾಗೇ, ಆ ಚಿತ್ರದ ಡಿಸೈನಿಂಗ್ ತುಂಬಾ ಚನಾಗಿದೆ. ಆದ್ರೆ ಆ ಹುಡುಗಿ ಚಿತ್ರಾನ ಇನ್ನೂ ದಪ್ಪ್ಪ್ಪ ಮಾಡ್ಬೇಕಿತ್ತು. :P :P
ಚಿತ್ರಾ , ಶರಧಿಯ ಮೊದಲ ವರ್ಷದ ಸಂಭ್ರಮಕ್ಕೆ ಶುಭ ಹಾರೈಕೆಗಳು. ಒಂದು ವರ್ಷದಲ್ಲಿ ೯೧ ಬರಹಗಳು , ಮೆಚ್ಚತಕ್ಕದ್ದೇ. ನಿರಂತರತೆ ಕಾಯ್ದುಕೊಂಡಿದ್ದೀರಿ. ಹಲವು ಒಳ್ಳೆಯ ಬರಹಗಳನ್ನು ಬರೆದಿದ್ದೀರಿ , ಇನ್ನು ಕೆಲವು ಬರಹಗಳು ಸ್ವಲ್ಪ ಟ್ಯೂನ್ ಆಗಬೇಕಿತ್ತು ಅನ್ನಿಸುತ್ತೆ. ಓದು, ಅಧ್ಯಯನ ಹೆಚ್ಚಾದಷ್ಟೂ ಬರಹಗಳು ಇನ್ನಷ್ಟು ಗಟ್ಟಿಯಾಗುತ್ತವೆ. ಹಾಗಾಗಿ ಹೊಸತು ಹೊಸತು ವಿಚಾರಗಳನ್ನು ಓದುವ, ಒಳನೋಟಗಳನ್ನು ಗ್ರಹಿಸುವ ಜಾಣ್ಮೆ, ತಾಳ್ಮೆ ಹೆಚ್ಚಲಿ, ಹೊಸ ಚಿಂತನೆಯ ಬರಹಗಳು ಮೂಡಿಬರಲಿ. ಶರಧಿಯ ನಿರಂತರತೆ ಉಳಿಯಲಿ. ಶರಧಿ ಬೆಳೆಯಲಿ, ಬೆಳಗಲಿ. ಶುಭಾಶಯಗಳು. ---ರಾಮಚಂದ್ರ ಹೆಗಡೆ
ಚಿತ್ರಾ ಕಂಗ್ರಾಟ್ಸ್... ಒಂದು ವರ್ಷದ ಹಿಂದಿನ ಪೋಸ್ಟಿಗೂ ಇಂದಿನ ಪೋಸ್ಟಿಗೂ ಹೋಲಿಸಿದರೆ... ಬರವಣಿಗೆ ಶೈಲಿ ಎಷ್ಟೊಂದು ಆತ್ಮೀಯವಾಗಿಬಿಟ್ಟಿದೆಯಲ್ಲ...
ಹೀಗೇ ಮುಂದುವರಿಸಿ.
ಶುಭವಾಗಲಿ
-ಅವಿನಾಶ್
ಒಂದು ವರ್ಷಕ್ಕೆ ೯೧ ಪೋಸ್ಟ್ ಗಳು ಕಡಿಮೆಯೇನಲ್ಲ. ಶರಧಿ ಇನ್ನಷ್ಟು ಎತ್ತರಕ್ಕೇರಲಿ ಎಂಬ ಶುಭಾಶಯಗಳು.
ಹೀಗೆ ಸಾಗಲಿ.. ನಿಮ್ಮ ಭಾವದಲೆಗಳ ಪಯಣ...
ಶರಧಿಗೆ ಶುಭಾಶಯಗಳು. ಇದಕ್ಕೆ ಬಳಸಿರೋ ಚಿತ್ರವಂತೂ ತುಂಬಾ ಚೆನ್ನಾಗಿದೆ. ಕ್ರಿಯೇಟಿವ್ ಆಗಿದೆ.
ಅಭಿನಂದನೆಗಳು ಚಿತ್ರಾ . ನೀನು ಸುಮಾರು ೬ ಪೋಸ್ಟ್ ಗಳನ್ನು ಮಾಡಿದ್ದಾಗ ನಾನು ನಿನ್ನ ಬ್ಲಾಗ್ ನೋಡಿದ್ದು. ತಕ್ಷಣವೇ ಇದರಲ್ಲಿ ಸತ್ವ ಇದೆ ಎಂದು ಗೊತ್ತಾಗಿ , ಇಷ್ಟವಾಗಿ ನನ್ನ ಗೂಗಲ್ ರೀಡರ್ ಗೆ ಸೇರಿಸಿಕೊಂಡಿದ್ದೆ. ನಂತರ ಬಂದ ಹಲವಾರು ಬರಹಗಳು ನನ್ನ ಯೋಚನಾ ಲಹರಿಗೆ ಮ್ಯಾಚ್ ಆಗಿ ಇಷ್ಟವಾಗಿದ್ದವು. ಈಗಲೂ ಇಷ್ಟವಾಗುತ್ತಿವೆ.
ಹೀಗೆ ಬರೆಯುತ್ತಿರು, ಇನ್ನು ಜಾಸ್ತಿ ಬರೆದರು ಅಡ್ಡಿಲ್ಲ :). ಹ್ಯಾಪಿ ಬ್ಲಾಗಿಂಗ್.
ನಲ್ಮೆ,
ವಿಕಾಸ್
ಶರಧಿ ಓದುತ್ತಿರುತ್ತೇನೆ,ಆಸಕ್ತಿಕರವಾಗಿದೆ.ಇದನ್ನು ನಿಯಮಿತವಾಗಿ ನಿರ್ವಹಣೆ ಮಾಡುವುದು ಸುಲಭವೇನಲ್ಲ.
ಒಂದು ವರ್ಷ ಸಂದರ್ಭದ ಶುಭಾಶಯ
ಒಂಜಿ ವರುಷದ ಬಾಲೆಗ್ ಸೊಲ್ಮೆಲು. ನನಲ ಇಂಚನೆ ಅಕ್ಷರದ ಬುಳೆ ಬರಡ್.
- ಚೇವಾರ್
nanna preethiya thngi sharadhi ge nanna huttu habbadha shubhashyagalu..
nadae nee mundhae nadae nee mundhae thirugi nodadhiru nee hindae sagutha irali e shardhiya payana neerantharvagi.........
inthi..
Bhavalahari(umesh)
ಶುಭಾಶಯಗಳು. ಬರೀತಾ ಇರಿ.
ನಿನ್ನ ಶರಧಿ ಎಂಬ ಪುಟ್ಟ ಮಗುವಿಗೆ ಒಂದು ವರ್ಷ ತುಂಬಿದ್ದು ಕೇಳಿ ತುಂಬಾ ಖುಶಿ ಆಯ್ತು. ಆ ಪುಟ್ಟ ಮಗುವಿನ ತುಂಟ ನಗುವಿನ ಬರಹಗಳು ನನಗಂತೂ ಹಿಡಿಸ್ತಿತ್ತು.. ನಿನ್ನ ಪುಟ್ಟಿಯ ಅತೀ ಕಡಿಮೆ ಹೆಚ್ಚೆ ಗುರುತುಗಳನ್ನು ನೋಡಿದ ನನಗೆ ಕೆಲವೊಮ್ಮೆ ಅನ್ನಿಸ್ತಿತ್ತು.. ಆ ಹಳೆಯ ಹೆಜ್ಜೆ ಗುರುತನ್ನು ಮತ್ತೊಮ್ಮೆ ನೋಡಬೇಕು ಅಂತ.. ಈಗ ಮತ್ತೆ ಆ ಹೆಜ್ಜೆ ಗುರುತುಗಳನ್ನು ಹುಡುಕಿಕೊಂಡು ಹೋಗ್ತೀನಿ.. ಆಗಾಗ ನಿನ್ನ ಪುಟ್ಟಿಗೆ ಹೊಸ ಉಡುಗೆ ತೊಡಿಸುತ್ತಿದ್ದ ನಿನ್ ಅಣ್ನ ರೋಹಿಗೂ ಸಹ ಅಭಿನಂದನೆಗಳು.. ಈ ಪುಟ್ಟಿಯ ಮತ್ತಷ್ಟು ಹೆಜ್ಜೆ ಗುರುತುಗಳ ಹಿಂದೆ ಬೀಳುವ ನಿನ್ನ ಗೆಳೆಯನಿಂದ ಪುಟ್ಟಿಗೆ ಹುಟ್ಟು ಹಬ್ಬದ ಶುಭಾಶಯಗಳು...
-ವೀರೇಶ ಹೊಗೆಸೊಪ್ಪಿನವರ
ಶುಭ ಹಾರಯಿಕೆಗಳು! ಇನ್ನೂ ಒಳ್ಳೊಳ್ಳೊಳ್ಳೊಳ್ಳೇ ಬರಹಗಳು ಬರಲಿ:)
ಒಂದು ವರ್ಷ ತುಂಬಿದ 'ಶರಧಿ'ಗೆ ಶುಭಾಶಯಗಳು.
ಪಯಣ ಮುಂದುವರಿಯಲಿ..
@ ಸಂದೀಪ್, ರಾಘವೇಂದ್ರ, ಪ್ರಮೋದ್, ರಾಜೇಶ್, ನಗ್ನನಗು, ಶ್ರೀನಿಧಿ, ತನ್ ಹಾಯಿ, ಜಿತೇಂದ್ರ ಸರ್, ಶಿವು ಸರ್, ಅವಿನಾಶ್ ..ಎಲ್ಲರಿಗೂ ತುಂಬಾಬಾಬಾಬಾಬಾ ಧನ್ಯವಾದಗಳು. ಸದಾ ನಿಮ್ಮ ಪ್ರೋತ್ಸಾಹದ ಸವಿನುಡಿ ಎನಗಿರಲಿ.
@ಥ್ಯಾಂಕ್ಯೂ..ಶುಶ್ರುತಣ್ಣ. ಲೇ ಅಣ್ಣಯ್ಯ..ನೀನು ಸಣ್ಣಗಿದ್ದಿ ಅಂತ ನಾನೂ ಸಣ್ಣಗಿರಬೇಕಾ? ಇದೊಳ್ಳೆ ಕತೆ ಆಯ್ತಲ್ಲಾ..ಪಾರ್ಟಿ ಕೊಡ್ತೀನಿ ಬಾ..
@ಥ್ಯಾಂಕ್ಯೂ ವಿಕಾಸ್..ಪ್ರೀತಿಯಿರಲಿ.
@'ರಾಚಂ' ಅವರೇ ನಿಮ್ಮ ಸಲಹೆಗಳಿಗೆ ಕೃತಜ್ಞತೆಗಳು. ಇನ್ನೂ ಚೆನ್ನಾಗಿ ಬರೀತೀನಿ
@ಚೇವಾರ್...ಅಕ್ಷರದ ಬುಳೆ ಬೆಳೆವರ..ನಿಕ್ಲೆನ ಪ್ರೋತ್ಸಾಹ ಉಪ್ಪಡ್
-ತುಂಬು ಪ್ರೀತಿಯಿಂದ,
ಚಿತ್ರಾ
congrats madam!!!
`ಶರಧಿಗೆ ವರ್ಷ`ದ ಸಂದರ್ಭದಲ್ಲಿ ಚಿತ್ತುಗೆ ಬಂದ ಶುಭಾಶಯಗಳನ್ನು ನೋಡಿ ಬಹಳ ಖುಷಿಯಾಗ್ತಿದೆ. `ಶರಧಿ'ಯಲ್ಲಿ ನನಗೆ ಹಿಡಿಸಿದ ಒಳ್ಳೆಯ ಬರಹಗಳಿವೆ. ಎಲ್ಲವನ್ನೂ ತಪ್ಪದೆ ಓದ್ತೀನಿ. ಪಯಣ ಹೀಗೆ ಸಾಗಲಿ ಎಂಬ ಹಾರೈಕೆಯೊಂದಿಗೆ...
-ರೋಹಿ
ಶರಧಿಯ ವರ್ಷದ ಹರ್ಷದಲ್ಲಿ ನಾನೂ ಭಾಗಿ... ;)
ಬರೀ ಸೆಂಚುರಿ ಅಲ್ಲಾ... ನಮ್ಮ ನಿರೀಕ್ಷೆ ಇನ್ನೂ ಹೆಚ್ಚಿನದ್ದು ಎಂಬುದು ನೆನಪಿರಲಿ... ;)
ಪ್ರೀತಿಯಿಂದ.
ಸುನೀ...
ಹುಟ್ಟು ಹಬ್ಬದ ಶುಭಾಷಯ. ಅಬ್ಬಾ! ಅದೆಷ್ಟು ಜನ ಶರಧಿಗೆ ಶುಭಾಷಯ ಕೋರಿದ್ದಾರೆ.ಬಹುಶಃ ನಾನೇ ಕೊನೆಯವನೇನೊ?
ಶರಧಿ ಸಾಕಷ್ಟು ಅವಧಿಗೆ ಸಾಗಲಿ ಎಂದು ಹಾರೈಸುತ್ತೇನೆ.
@ಉಮೆಶಣ್ಣ, ಶ್ರೀದೇವಿ, ಸುನೀ, ವಿನಾಯಕ್...ಎಲ್ಲರಿಗೂ ನಾ ಋಣಿ. ಹೀಗೇ ಇರಲಿ..ನಿಮ್ಮ ಪ್ರೀತಿ, ಸ್ಫೂರ್ತಿ.ನಿಮ್ಮ ನಿರೀಕ್ಷೆ ಸುಳ್ಳಾಗದು..
ಪ್ರೀತಿಯಿಂದ,
ಚಿತ್ರಾ
@ ರೋಹಿಯಣ್ಣ..So Chweetu...ನೀವು ಮಾಡಿಕೊಟ್ಟ ಚಿತ್ರ ಚೆನ್ನಾಗಿದೆಯಂತೆ..ಥ್ಯಾಂಕ್ಯೂ ಅಣ್ಣ...ಊರಿಗೆ ಬಂದಾಗ ನಿಮ್ಗೆ ಪಾರ್ಟಿ ಕೊಡ್ಥಿನಿ ಆಯಿತಾ...
-ಚಿತ್ತು
Shubhashayagalu. Neevu estu barediri ennuvudakinta neevu baredaddu estu chennagi baredidderi ennuvudu mukyavaguttade. number gamenalli gelluvudakinta nimage nimma baraha kushi kottare adakinta bere khushi bere ellla. Nimma payana yashasviyagi sagali. nimmma barahagalu nannalli asuye mudisive. ekendare nanage nimmstu chendavagi bareyalu baruvudilla. nimma manasiinaste nimma lekhanagalu sundara hagu sarala. chitra neevu ennu bareyabeku. ha maretidde nimma gelathi kalaravarigu nanna agbhinandanegalu.
geleya
rajesh
೯೧ ಬರಹ ಕಡಿಮೆ ಆಗೋದು ಹೇಗೆ? ಬರೆಯೋ ಉತ್ಸಾಹ, ನಿಲ್ಲದೆ ನಿರಂತರ ನಡೆಯೋ ಸಮರ್ಥ್ಯ ಮುಖ್ಯ ಅಲ್ವ? ಆಲ್ ದ ಬೆಸ್ಟ್
ಶರಧಿಗೆ ವರ್ಷವಾಯಿತೆ?
ಕೇಳಿ ತುಂಬಾ ಹರ್ಷವಾಯ್ತು. ಚಿತ್ರಾ, ನಿಮ್ಮಿಂದ ಬದುಕಿನ ಇನ್ನಷ್ಟು ಚಿತ್ರಗಳು ಮೂಡಿಬರಲಿ. ಸಂಖ್ಯೆ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ತೀರಿ? ಬರೆದ ಖುಷಿ ಸಾಕಲ್ಲವೆ?
ಒಳ್ಳೆಯದಾಗಲಿ.
- ಪಲ್ಲವಿ ಎಸ್.
ಚಿತ್ರಾ ಅವರೆ,
ಹಾರ್ದಿಕ ಶುಭಾಶಯಗಳು. ಶರಧಿಗೆ ಆದಿ ಅಂತ್ಯವಿಲ್ಲವೆನ್ನುತ್ತಾರೆ. ಈ ಶರಧಿಯ ಶುಭಾರಂಭವಾಗಿ ವರುಷ ಕಳೆಯಿತು. ಆದರೆ ಎಂದೂ ಅಂತ್ಯಕಾಣದಿರಲಿ. ಬರವಣಿಗೆಯ ಮಹಾಪೂರ ಸದಾ ಶರಧಿಯ ತುಂಬುತಿರಲಿ.
ಚಿತ್ರ ತುಂಬಾ ಆಕರ್ಷಕವಾಗಿದೆ :)
@ಅಬ್ಬಾ! ಎಷ್ಟು ಖುಷಿಯಾಗ್ತಿದೆ..ಗೊತ್ತಾ! ರಾಜೇಶ್, ಪಲ್ಲವಿ. ಕೃಷ್ಣ ಸರ್ ಎಲ್ಲರಿಗೂ ನನ್ನ ಕೃತಜ್ಞತೆಗಳು..ನನ್ನೊಳಗಿನ ಬರಹಗಳ ತುಡಿತಕ್ಕೆ ನಿಮ್ಮ ಮಾತುಗಳೇ ಸ್ಫೂರ್ತಿ.
@ತೇಜಕ್ಕ ಥ್ಯಾಂಕ್ಯೂ..ಬಹುಶಃ ,'ಶರಧಿ'ಗೆ ಇಂದೇ ನಿಮ್ಮ ಅಧಿಕೃತ ಭೇಟಿ ಎಂದನಿಸುತ್ತೆ....ತುಂಬಾಬಾಬಾ..ಥ್ಯಾಂಕ್ಸ್.
-ಪ್ರೀತಿಯಿಂದ,
ಚಿತ್ರಾ
ಚಿತ್ರಾ
ತುಂಬಾ ಪ್ರೀತಿಯಿಂದ, ಆಪ್ತವಾಗಿ ಬರೆದಿದ್ದೀರ. ಚಿತ್ರಾ ಎನ್ನುವ ಹೆಸರು ಚೆನ್ನಾಗಿಲ್ಲ ಅಂತ ನಿಮಗೆ ಹೇಳಿದ್ದು ಯಾರು? ಎಷ್ಟೊಂದು ಅರ್ಥವಿರುವ ಸುಂದರವಾದ ಹೆಸರದು. ನಿಮ್ಮ ಶರಧಿಯ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ನನ್ನದೂ ಒಂದು ಬೆಚ್ಚನೆಯ ಶುಭಾಶಯ.
ಸೆಂಚುರಿ ಬಾರಿಸಲಿಕ್ಕೆ ಆಗಿಲ್ಲ ಎನ್ನುವ ಬೇಸರ ಬೇಡ. ಹಾಗೆ ಬೇಜಾರಾದಾರೆ ಒಮ್ಮೆ ಹಿಂತುರುಗಿ ನೋಡಿದರೆ ಸಾಕು. ನನ್ನಂತ ಸೋಮಾರಿ ಬ್ಲಾಗಿಗರು ಬ್ಲಾಗಿಸಲು ತೊಡಗಿ ಒಂದು ವರ್ಷ ಕಳೆದರೂ ಲೇಖನಗಳ ಸಂಖ್ಯೆ ಇನ್ನೂ ಐವತ್ತು ದಾಟಿಲ್ಲ. ಅದರ ಬಗ್ಗೆ ಎಲ್ಲ ತಲೆಕೆಡಿಸಿಕೊಳ್ಳಬೇಡಿ. ಬ್ಲಾಗೆಂಬುದು ಬೆಚ್ಚನೆಯ ಭಾವ. ನಿಮೆಗೆ ತೋಚಿದಾಗ ಗೀಚುತ್ತಾ ಹೋಗಿ.
ನೀವು ತುಂಬಾ ಪುಣ್ಯವಂತೆಯಾಗಿದ್ದರೆ ಈ ಬದುಕಿನಲ್ಲಿ ನಿಮಗೊಂದು ಅಪರೂದ ವಸ್ತು ಸಿಗುತ್ತದೆ. ಅದು ನಿಮ್ಮ ಇಡೀ ವ್ಯಕ್ತಿತ್ವವನ್ನು ತೊಡಗಿಸಿಕೊಂಡು ಮಾಡಬಹುದಾದ ಒಂದು ಸುಂದರ ಕೆಲಸ. ಆ ಕೆಲಸ ನಿಮಗೆ ಕೊಡುವ ಖುಷಿಯ ಮುಂದೆ ಇನ್ಯಾವುದೂ ಇಲ್ಲ. ಆ ಖುಷಿಗೆ ಪ್ರತಿಯಾಗಿ ನಿಮ್ಮೊಳಗೆ ಉಂಟಾಗುವ ಕೃತಜ್ಞತೆ ಇದೆಯಲ್ಲಾ, ಅದು ಈ ಬದುಕಿನ ಪುಟ್ಟ ಪುಟ್ಟ ಸಂತೋಷಗಳನ್ನೂ ನಿಮಗೆ ಅನುಭವಿಸಲು ಸಾಧ್ಯವಾಗುವಂತೆ ಮಾಡುತ್ತದೆ. ಬದುಕಿನ ಬಗ್ಗೆ ಹೆಮ್ಮೆ, ಪ್ರೀತಿ ಮೂಡುತ್ತದೆ. ಅದು ನಿಮ್ಮಿಂದ ಇಂತಹ ಚೆಂದ ಚೆಂದದ ಲೇಖನಗಳನ್ನು ಬರೆಸುತ್ತಾ ಹೋಗುತ್ತದೆ:)
ಭಾವದಲೆಗಳ ಪಯಣ ಸಾಗಲಿ...
nimma blog tumba chhenagide. nanu istu din bahala mis madkonde. poorti odoke agilla. odida mele baritene. bye
ಶುಭಾಶಯಗಳು ಚಿತ್ರಾ,
ನಿಮ್ಮ ಹಳೆಯ ಬರಹಗಳನ್ನು ನಾನು ಇನ್ನೂ ಓದಬೇಕಿದೆ..
ನಿಮ್ಮ ಬ್ಲಾಗಿನ ಪಯಣ ಹೀಗೆ ಮುಂದುವರೆಯಲಿ ಚಿತ್ರಾ.
ಬರಹಗಳೆಲ್ಲಾ ಸೊಗಸಾಗಿವೆ. ಪ್ರತಿಕ್ರಿಯೆಗಳೇ ಎಲ್ಲಾ ಹೇಳುತ್ತವೆ... :)
ಜೋಮನ್, autumn nightingale, ರಾಘವ ನಿಮ್ಮ ಹಾರೈಕೆಗಳೇ ಸ್ಫೂರ್ತಿ. ಆಗಾಗ ಬರುತ್ತೀರಿ 'ಶರಧಿ'ಗೆ...
ಪ್ರೀತಿಯಿಂದ,
ವಂದನೆಗಳು..
ಚಿತ್ರಾ
Post a Comment