Wednesday, January 16, 2008

ಆ ಮಣಿಪುರಿ ಹುಡುಗ..

ಅಂದು ರಾತ್ರಿ 8 ಗಂಟೆಗೆ ಆಫೀಸ್ ನಿಂದ ಹೊರಟಾಗ ಬಸ್ಸುಗಳೆಲ್ಲಾ ಖಾಲಿ ಖಾಲಿ. ಸೀಟು ಸಿಕ್ರೆ ಸಾಕು..ಕಿವಿಗೆ ಇಯರ್ ಪೋನ್ ಸಿಕ್ಕಿಸಿಕೊಂಡು ಹಾಡು ಕೇಳುತ್ತಾ, ಏನಾದ್ರೂ ಪುಸ್ತಕ ಓದುತ್ತಾ ಹೋಗೋದು ನನ್ ಅಭ್ಯಾಸ. ಅದ್ರಲ್ಲಿ ಬೆಂಗ್ಳೂರಲ್ಲಿ ಟ್ರಾಪಿಕ್ ಜಾಮ್ ಲ್ಲಿ ಸಿಕ್ಕಹಾಕೊಂಡು ಹೋಗುವಾಗ ಇನ್ನೂ ಲೇಟ್. ಸೀಟ್ ಸಿಕ್ಕಾಗ ಓದೋಕೆ ಏನೂ ತೊಂದ್ರೆ ಆಗಲ್ಲ.

ಅಂದು ನನ್ ಸೀಟಲ್ಲಿ ಇನ್ನೊಬ್ಬ ಬಿಳಿ ಹುಡುಗ ಬಂದು ಕೂತಿದ್ದ. ಯಾಕೋ ಆತನನ್ನು ನೋಡುವಾಗ್ಲೆ ವಿಚಿತ್ರ ಅನಿಸ್ತು. ಬಿಳಿ ಟೀ ಶರ್ಟ್ , ಜಾರಿ ಬೀಳುತ್ತೇನೋ ಎನ್ನುವಂತ ದೊಗಲೆ ಜೀನ್ಸ್ ಪ್ಯಾಂಟ್, ಒಂದು ಕಿವಿಗೆ ಓಲೆ, ಕತ್ತಲ್ಲಿ ನಾಯಿಯನ್ನು ಕಟ್ಟಿಹಾಕಲು ಬಳಸುವಂತ ದೊಡ್ಡ ಸಂಕೋಲೆ, ಉದ್ದ ಜುಟ್ಟು ನೋಡುವಾಗ ಮಹಾಎಡಬಿಡಂಗಿ ಅನಿಸ್ತು. ನನ್ ಕೈಯಲ್ಲೊಂದು ಕನ್ನಡ ಮ್ಯಾಗಜಿನ್ ಇತ್ತು. ಆತ ನಾನು ಓದೊದನ್ನು ತುಂಬಾ ಕುತೂಹಲದಿಂದ ಇಣುಕಿ ಇಣುಕಿ ನೋಡ್ತಾ ಇದ್ದ. ಯಾಕಪ್ಪಾ ಈ ಮನುಷ್ಯ ಇಷ್ಟೊಂದು ನೋಡ್ತಾ ಇದ್ದಾನೆ..ಬುಕನ್ನೋ,..ನನ್ನನ್ನೋ..ಅನ್ನೋ ಕುತೂಹಲ ನಂಗೆ.

ಮುಖ ನೋಡಿದಾಗ ತಣ್ಣಗೆ ನಕ್ಕುಬಿಟ್ಟ. ನಂಗೊಂದು ಕೆಟ್ಟ ಅಭ್ಯಾಸ..ಯಾರಾದ್ರೂ ಹುಡುಗ್ರು ಸುಮ್ನೆ ತರ್ಲೆ ಮಾಡಿದ್ರೆ..ನಾನೂ ಬಿಡಲ್ಲ..ಅವ್ರು ಗುರಾಯಿಸಿದ್ರೆ ನಾನೂ ಗುರಾಯಿಸೋದು,,,ನೋಡ್ತಾ ಇದ್ರೆ..ನಾನೂ ನೋಡಿದ್ರೆ..ಮತ್ತೆ ಅವ್ರೂ ತಿರುಗಿನೇ ನೋಡಲ್ಲ. ಹಾಗೆ ಮಾಡೋಣ ಅಂದುಕೊಂಡೆ. ಆತ ನಕ್ಕನಲ್ಲ..ನಾನೂ ನಕ್ಕುಬಿಟ್ಟು ಬುಕ್ ಬೇಕಾ ಅಂದೆ. ಆ ಮನುಷ್ಯನಿಗೆ ಇಂಗ್ಲೀಷ್ ಬರಲ್ಲ..ನನ್ ಮುಖವನ್ನೇ ದಿಟ್ಟಿಸಿದ. ಪುನಃ ಇಂಗ್ಲೀಷ್ನಲ್ಲಿ ಕೇಳಿದೆ..ಆಗ ಮಾತಿಗಿಳಿದ..'ನೀವು ಓದ್ತಾ ಇರೋದು ಯಾವ ಭಾಷೆ ಅಂಥ ನನ್ ಕುತೂಹಲ ಮೇಡಂ..ನಂಗೆ ಕನ್ನಡ ಅಂದ್ರ ಇಷ್ಟ. ನಾನು ಮಣಿಪುರಿ. ಒಂದು ವರ್ಷ ಆಯ್ತು. ಬೆಂಗಳೂರಲ್ಲಿ ಸಾಫ್ಟ್ ವೇರ್." ಅಂದ ಅಚ್ಚ ಇಂಗ್ಲೀಷ್ನಲ್ಲಿ. 'ಓದಿದ್ದು ಎಲ್ಲಿ'? ಅಂದೆ. 'ನಾನು ಎಂಬಿಎ ಮಾಡಿದ್ದು ಇಲ್ಲೇ ' ಅಂದ. 'ಯಾಕೆ ನಿಮ್ಮಲ್ಲಿ ಓದಬಹುದಿತ್ತಲ್ಲ?'ಅಂದೆ. 'ಅಲ್ಲ ಮೇಡಂ ನಮ್ಮಲ್ಲಿ ಶಿಕ್ಷಣ ವ್ಯವಸ್ಥೆ ಚೆನ್ನಾಗಿಲ್ಲ..ಅದ್ಕೆ ಇಲ್ಲಿಗೆ ಬಂದೆ. ಕರ್ನಾಟಕ ಚೆನ್ನಾಗಿದೆ. ನಂಗೆ ತುಂಬಾ ಖುಷಿಯಾಗುತ್ತೆ. ನನ್ ತಂಗೀನ ಇಲ್ಲೇ ಒದಿಸ್ಬೇಕು. ಯಾಕಂದ್ರೆ ನಮ್ಮಲ್ಲಿ ಹುಡುಗೀರಿಗೆ ರಕ್ಷಣೆ ಇಲ್ಲ. ಯಾವ ಕ್ಷಣದಲ್ಲಿ ಏನು ಬೇಕಾದ್ರೂ ಆಗಬಹುದು. ಆದ್ರಿಂದ ಮುಂದಿನ ವರ್ಷ ನಮ್ ತಂಗೀನ ಇಲ್ಲಿ ಕರ್ಕೊಂಡು ಬರ್ಬೇಕು. ಅಲ್ಲಿ ಹುಡುಗೀರನ ಹೆತ್ತವರೇ ಹೊರ ರಾಜ್ಯಗಳಿಗೆ ಕಳಿಸ್ತಾರೆ..ಕಾರಣ ಹುಡುಗೀರು ಸುರಕ್ಷಿತವಾಗಿರಲು ಸಾಧ್ತವಿಲ್ಲ" ಅಂದ. 'ಯಾಕೆ ನಿಮ್ಮಲ್ಲಿ ಏನೇ ಮಾಡಿದ್ರೂ ಶಿಕ್ಷೆ ಇಲ್ವಾ?' ಅಂದೆ. "ಇರುತ್ತೆ. ಆದ್ರೆ ಯಾವುದೂ ಫಲಿಸಲ್ಲ. ಕಾನೂನಿದ್ರೂ ಅದರಂತೆ ಆಗಲ್ಲ' ಅಂದ.
"ಕನ್ನಡ ಕಲೀತೀರಾ?' ಅಂದ್ರೆ. ಹೂ ಕಲೀತಾ ಇದ್ದಿನಿ. ನನ್ನ ಫ್ರೆಂಡ್ಸ್ ಕನ್ನಡದೋರು. ತುಂಬಾ ಒಳ್ಳೆಯವರು" ಅಂದ..ಅಷ್ಟೊತ್ತಿಗೆ ನನ್ ಸ್ಟಾಪ್ ಬಂತು. ನಾನು ಸೀಟನಿಂದ ಇಳಿಯುತ್ತಿದ್ದಂತೆ..ನನ್ನ ಕೈಯಲ್ಲಿದ್ದ ಮ್ಯಾಗಜೀನ್ ಅವನಿಗೆ ಕೊಟ್ಟೆ. ಅವನ ನಂಬರು ಕೊಟ್ಟ. ನಗುತ್ತ ಬೈ ಅಂದ..ನಾ ಬಸ್ಸಿನಿಂದ ಇಳಿದೆ. ಆತ ಮಾತ್ರ ಮತ್ತೆ ನನ್ನತ್ತ ತಿರುಗಿ ನೋಡ್ತಾ ಬೈ ಅನ್ನುತ್ತಿದ್ದ.

ಕುತೂಹಲ ಮಾತಾಯಿತು..ಮಾತು ಹೊಸ ಅನುಭವ, ಹೊಸತೊಂದರ ಪರಿಚಯಿಸಿತ್ತು. ಕನ್ನಡದ ಬಗ್ಗೆ ನಮ್ಮವರಿಗಿಲ್ಲದ ಅಭಿಮಾನ, ದೇಶದ ಯಾವುದೋ ಮೂಲೆಯಲಲಿದ್ದವರಿಗೆ ಇರುವುದನ್ನು ಕಂಡು ನನಗೆ ನಮ್ಮ ಬಗ್ಗೆ ನಾಚಿಕೆಯೆನಿಸಿತ್ತು.

3 comments:

ಹೆಸರು ರಾಜೇಶ್, said...

lekana chennagide sharadiya payana sharavegadali munnadeyali.
shubhashayagalondige
geleya
rajesh

Prakash Shetty said...

ವಾವ್....

ನಿಮ್ ಬರವಣಿಗೆ ಮನ ಮುಟ್ಟುವ ರೀತಿಯಲ್ಲಿ ಬದಲಾಗಿದೆ...

ಮನದ ಮಾತು ಬರಹದ ರೂಪದಲ್ಲಿ ಬ್ಲಾಗಿಗಿಳಿಯುವುದು ನಮ್ಮಂತಹ ಓದುಗರಿಗೆ ಖುಷಿ ಕೊಟ್ಟಿದೆ...

ಈ ತೆರನಾದ ಶೈಲಿ ಉತ್ತಮವಾಗಿದೆ.. ಬೆಳೆಸಿಕೊಳ್ಳಿ...

ನಿಮ್ಮ ಬರಹಗಳ ಮಹಾ ಪೂರದ ನಿರೀಕ್ಷೆಯಲ್ಲಿ

ಚಿತ್ರಾ ಸಂತೋಷ್ said...

ರಾಜೇಶ್ ಮತ್ತು ಪ್ರಕಾಶ್ ಅವರಿಗೆ ಕೃತಜ್ಞತೆಗಳು..