Saturday, January 5, 2008

ಸಿಕ್ಸ್-ಫೋರ್ ಚಚ್ಚಿದೋರು ಸಮಾಜಕ್ಕೇನು ಕೊಟ್ರು?

ನಿನ್ನೆ ರಾತ್ರಿ ಟಿವಿ ನೋಡುತ್ತಿದ್ದಂತೆ ಚಾನೆಲ್ಲೊಂದು ಒಂದು ವಿಷ್ಯದ ಬಗ್ಗೆ ಬಡ ಬಡಿಸುತ್ತಿತ್ತು. ಅದೂ ದೇಶದ ಪ್ರತಿಷ್ಠಿತ ಪುರಸ್ಕಾರ ಭಾರತ ರತ್ನದ ಬಗ್ಗೆ. ನಮ್ಮ ಕ್ರಿಕೆಟ್ ಕಲಿ ಸಚಿನ್ ತೆಂಡೂಲ್ಕರ್ ಗೆ ಭಾರತ ರತ್ನ ನೀಡಬಹುದೇ?ಇಲ್ಲವೇ ಎನ್ನುವ ಕುರಿತು ಚರ್ಚೆಯಾಗುತ್ತಿತ್ತು. ಏನೋ ತೋಚಿತ್ತು, ಒಂದಷ್ಟು ತಲೆಹರಟೆಗಳು ತಲೆಯನ್ನು ಕೊರೆಯತೊಡಗಿದವು. ನಮ್ಮನೆಯಲ್ಲಿ ನಾನು ಬಿಟ್ರೆ ಇನ್ಯಾರು ಕ್ರಿಕೆಟ್ ನೋಡಲ್ಲ, ಒಂದು ವೇಳೆ ರಾತ್ರಿ ಮ್ಯಾಚ್ ಇದ್ರೂ ಎಲ್ಲರೂ ನಿದ್ದೆಗೆ ಜಾರಿದಾಗ ನಾನೂ ನಿದ್ದೆಹೋಗಬೇಕು. ಟಿವಿ ಆನ್ ಮಾಡಿ ಕ್ರಿಕೆಟ್ ನೋಡೋ ಹಾಗಿಲ್ಲ. ಯಾರೂ ಕ್ರಿಕೆಟ್ ಸವಿಯದವರು ಇರುವಾಗ ನಾನು ಅವರತ್ರ ತೋಚಿದ್ದನ್ನು ಹೇಳಿಯೇನು ಪ್ರಯೋಜನ? ಅದ್ಕೆ ಈಗ ಬ್ಲಾಗ್ ಬುಟ್ಟೀಲಿ ಹಾಕೊಣ ಅನಿಸ್ತು. ತಪ್ಪೋ/ಸರಿಯೋ ಅದಲ್ಲ ನನ್ ಪ್ರಶ್ನೆ. ತೋಚಿದ್ದನ್ನು ಗೀಚೋದು ನನ್ ಹವ್ಯಾಸ, ಅಭ್ಯಾಸ.

ಟಿವಿ ಬಡಬಡನೆ ಬಡಿದುಕೊಳ್ಳುವಾಗ ನಂಗೂ ಅನಿಸ್ತು, ಸಚಿನ್ ಗೆ ಭಾರತ ರತ್ನ ನೀಡಬೇಕೆ? ಅಥವಾ ಈ ಚಾನೆಲ್ ಬೇರೆ ಏನೂ ಕೆಲ್ಸ ಇಲ್ಲದೆ ಈ ವಿಷ್ಯದ ಬಗ್ಗೆ ಪುಂಖಾನುಪುಂಖವಾಗಿ ಬಡಿದುಕೊಳ್ಳುತ್ತಿದೆಯೇ? ಎಂದು. ವೈಯಕ್ತಿಕವಾಗಿ ಹೇಳೊದಾದ್ರೆ ಸಚಿನ್ ಅಂದ್ರೆ ನಂಗೆ ತುಂಬಾ ಇಷ್ಟ. ಆತ ಫೋರ್, ಸಿಕ್ಸ್ ಹೊಡೆದಾಗ ನಾನೂ ಎಲ್ಲರಂತೆ ಖುಷಿಪಡೋಳು. ಕಾಲೇಜಲ್ಲಿರುವಾಗ ಕ್ಲಾಸಿಗೆ ಚಕ್ಕರ್ ಹಾಕಿ ಕಾಲೇಜು ಲೇಡಿಸ್ ರೂಮಲ್ಲಿ ಕುಳಿತು ಕ್ರಿಕೆಟ್ ನೋಡ್ತಾ ಇದ್ದೆ. ಸಚಿನ್ ಸಿಕ್ಸ್ ಹೊಡೆದ್ರೆ ಕ್ಲಾಸಲ್ಲಿದ್ದವರಿಗೆಲ್ಲ ಮೆಸೇಜ್ ಮಾಡಿ ಕಿರಿಕಿರಿ ಮಾಡ್ತಾ ಇದ್ದೆ. ಹಾಸ್ಟೇಲಲ್ಲಿರುವಾಗ ಏನಾದ್ರೂ ಮಾಡಿ ಬೈಸಿಕೊಂಡು, ಉಗಿಸಿಕೊಂಡು ಕ್ರಿಕೆಟ್ ನೋಡ್ತಾ ಇದ್ದೆ. ಇಂದೂ ನೋಡ್ತೇನೆ. ಇಂದಿಗೂ ಸಚಿನ್ ಬಗ್ಗೆ ಗೌರವವಿದೆ. ಹೌದು! ತುಂಬಾ ಚಂದ ಆಡ್ತಾನೆ. ಬೇಕಾದಷ್ಟು ಬಹುಮಾನ,ಬಿರುದುಗಳನ್ನು ಪಡೆದಿದ್ದಾನೆ. ಜನರು ದೇವರಂತೆ ಆತನನ್ನು ಪೂಜಿಸುತ್ತಿದ್ದಾರೆ. ತಪ್ಪೇನಿಲ್ಲ, ಸರಿಯೇ. ಸರಣಿ ಮ್ಯಾಚ್ಚಲ್ಲಿ ಹದಿನೈದು ಸಾವಿರಕ್ಕಿಂತಲೂ ಹೆಚ್ಚು ರನ್ ಗಳಿಸಿದ ಸಚಿನ್, ವನ್ ಡೇ ಮ್ಯಾಚಲ್ಲಿ ಹನ್ನೊಂದು ಸಾವಿರಕ್ಕಿಂತಲೂ ಹೆಚ್ಚು ರನ್ ಪಡೆದಿದ್ದಾರೆ. ಈ ಅಂಕಿ-ಅಂಶದಲ್ಲಿ ಹೆಚ್ಚು-ಕಡಿಮೆ ಇದ್ರೆ ಓದಿದವರು ಹೇಳಬಹುದು.

ಈಗ ಬರೋಣ ವಿಷ್ಯಕ್ಕೆ. ಸಚಿನ್ ರನ್ ಪಡೆದಿರಬಹುದು, ಹೌದು! ಅದು ದೇಶಕ್ಕೆ ಗೌರವ ತಂದುಕೊಟ್ಟಿದ್ದಾರೆ. ಆದ್ರೆ ನನ್ ಪ್ರಶ್ನೆ ಅದಲ್ಲ, ನಮ್ಮ ಸರ್ಕಾರ, ಜನರು, ಸಂಘ-ಸಂಸ್ಥೆಗಳು ಎಲ್ಲರೂ ಸಚಿನ್ ಅಥವಾ ಇನ್ಯಾವ ಕ್ರಿಕೆಟ್ ಕ್ರೀಡಾಪಟುಗಳಿಗೆ ಬಹುಮಾನದ ರೂಪದಲ್ಲಿ ಬೇಕಾಬಿಟ್ಟಿ ಹಣ ಸುರೀತಾರೆ. ಜಾಹೀರಾತಿನಲ್ಲಿ ಕೋಟಿ ಗಟ್ಟಲೆ ಹಣ ಗಳಿಸುತ್ತಾರೆ. ಆದ್ರೆ ಇಂಥ ಮಹಾನ್ ಪುರುಷರು, ಇಂದಿನ ಯುವಜನರ ಆದರ್ಶ ಪುರುಷರು ಎಷ್ಟರಮಟ್ಟಿಗೆ ನಮ್ಮ ದೇಶ, ಸಮಾಜದ ಅಭಿವೃದ್ಧಿಯಲ್ಲಿ ಶ್ರಮಿಸಿದ್ದಾರೆ. ಅವರು ಸಮಾಜಕ್ಕೆ ಕೊಟ್ಟ ಪಾಲೆಷ್ಟು? ಸರ್.ಎಂ. ವಿ ಅಂತ ಮಹಾನ್ ವ್ಯಕ್ತಿಗಳು ತಾವು ದುಡಿದ್ದನೆಲ್ಲಾ ಸಮಾಜಕ್ಕೆ ನೀಡಿದ್ದಾರೆ. ಸಮಾಜಕ್ಕಾಗಿ ದುಡಿದಿದ್ದಾರೆ. ಅವರು ಇಂದಿಗೂ ಸಮಾಜದಲ್ಲಿ, ಜನಮಾನಸದಲ್ಲಿ ಪ್ರಸ್ತತ. ಭಾರತ ರತ್ನ ಅಂಥವರಿಗೆ ನೀಡಬೇಕಾದ ನಿಜವಾದ ಗೌರವ. ಬದುಕನ್ನೇ ಸಮಾಜದ ಉದ್ಶಾರಕ್ಕಾಗಿ ಸವೆಸಿದ ಇವರಿಗೆ ಇದಕ್ಕಿಂತ ದೊಡ್ಡ ಬಹುಮಾನ ಸಿಕ್ಕರೂ ಕಡಿಮೆನೇ. ಆದರೆ ನಮ್ಮ ಸಚಿನ್, ರನ್ ಮಾಡಿದ್ದು ಬಿಟ್ರೆ ದೇಶದ ಜನರಿಗೇನು ಕೊಟ್ಟಿದ್ದಾರೆ,? ದುಡಿದದ್ದನ್ನು ಪೂರ್ತಿ ಕೊಡಿ ಎಂದು ಹೇಳುತ್ತಿಲ್ಲ. ನಮ್ಮ ದೇಶದಲ್ಲಿ ಎಷ್ಟೋ ಜನರು ಬಡ ಜನರಿದ್ದಾರೆ. ಶಿಕ್ಷಣ ಪಡೆಯದ ಮಕ್ಕಳಿದ್ದಾರೆ. ಅವರಿಗೆ ಕನಿಷ್ಠ ಶಿಕ್ಷಣ ಕೊಡಿಸಲಿ. ದೇಶದ ಕೊಳೆಗೇರಿ ಪ್ರದೇಶಗಳನ್ನು ದತ್ತು ತೆಗೆದುಕೊಂಡು ಅಲ್ಲಿನ ಬೆಳಕು ನೀಡಲಿ. ಆದ್ರೆ ಸಚಿನ್ ನಂಥವರು ಹಳೇ ಬ್ಯಾಟ್ ಮಾರಿದ್ರೂ ಹಣ ಕೊಡ್ಬೇಕು ಕಣ್ರೀ. ಅಂಥವರಿಗೆ ನಾವು ಭಾರತ ರತ್ನ ಕೊಡಬೇಕೋ/ ಬೇಡವೋ ನೀವೂ ಹೇಳಿ. ಸಚಿನ್ ನಂಥ ಕ್ರೀಡಾಪಟುಗಳಿಗೆ, ಅಥವಾ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅದರಿಂದ ಹಣ ಹಳಿಸುವ ಇಂದಿನ 'ಉದರಿಗಳು' ಅಂಥವರಿಗೆ ಬಹುಮಾನ ರೂಪದಲ್ಲಿ ಸಿಕ್ಕ ಕಾರುಗಳೆಷ್ಟೋ/ ಗೌರವ ಬಿರುದುಗಳೆಷ್ಟೋ. ಇನ್ನೂ ನನಗೆ ನೆನಪಿದೆ ಕಳೆದ ಕೆಲ ವರ್ಷಗಳ ಹಿಂದೆ ಕನ್ನಡದ ಪ್ರಸಿದ್ಧ ಚಾನೆಲ್ಲೊಂದು ಓರ್ವ ಪ್ರಸಿದ್ಧ ಕ್ರೀಡಾಪಡುಗೆ ಕನ್ನಡಿಗ ಪ್ರಶಸ್ತಿ ನೀಡಿತ್ತು. ಆದ್ರೆ ಇತ್ತೇಚೆಗೆ ಅದೇ ಬಹುಮಾನ ಪಡೆದ ಆತನನ್ನು ಭೇಟಿಯಾಗುವ ಸುಯೋಗ ಸಿಕ್ಕಿತ್ತು. ಆ ಮಹಾತ್ಮನಲ್ಲಿ ಕನ್ನಡ ಮಾತಾಡಿದ್ರೆ 'ಪ್ಲೀಸ್ ಟೆಲ್ ಮೀ ಇನ್ ಇಂಗ್ಲೀಷ್' ಅನ್ನಬೇಕೆ?
ಸಚಿನ್ ದೇಶದ ಹೆಸರನ್ನು ಎತ್ತಿಹಿಡಿದಿದ್ದಾರೆ ಎಂದು ಕೆಲವರು ವಾದಿಸಬಹುದು. ಎತ್ತಿಹಿಡಿಯೋದು ಬೇರೆ, ಸಮಾಜ ನಿರ್ಮಾಣ ಬೇರೆ. ನಮ್ಮ ಕ್ರಿಕೆಟ್ ಪಟುಗಳು ಜಾಹೀರಾತಿನಲ್ಲಿ ಪಡೆದ ಹಣದ 10% ಆದ್ರೂ ಬಡಜನರ ಉದ್ಧಾರಕ್ಕೆ ನೀಡಲಿ. ಶಿಕ್ಷಣ ಕೊಡಿಸಲಿ. ಬಡಜನರಿಗೆ ಹೊಟ್ಟೆ-ಬಟ್ಟೆಗೆ ಒಂಚೂರು ಉಣ ಬಡಿಸಲಿ. ಆಗ ಅವರಿಗೆ ಕೊಡೋಣ ಭಾರತರತ್ನ. ಅವರೂ ಆಗ ನಿಜವಾದ 'ರತ್ನ' ಆಗಬಲ್ಲರು. ಏನಂತೀರಿ?

1 comment:

Rajesh said...

entaha vishayagalige nimma samaya needabede.
geleya
rajesh