ನಮ್ಮೂರ ಶೇಷಮ್ಮಕ್ಕ ಅಂದ್ರೆ ಅಕ್ಕರೆ, ಪ್ರೀತಿ. ನಮ್ಮನೆಯಿಂದ ಮೂರ್ನಾಲ್ಕು ಮೈಲಿ ನಡೆದರೆ ಶೇಷಮ್ಮಕ್ಕನ ಮನೆ. ೫೫ ದಾಟಿರುವ ಆಕೆ ಅತ್ತ ಅಜ್ಜಿಯೂ ಅಲ್ಲ, ಇತ್ತ ಆಂಟಿಯೂ ಅಲ್ಲ. ಕೂದಲೂ ನರೆತರೂ , ಅರ್ಧಡಜನ್ ಗಿಂತ ಹೆಚ್ಚು ಮಕ್ಕಳಿದ್ದರೂ, ಮೊಮ್ಮಕ್ಕಳದ್ರೂ ಅವಳದು ಇನ್ನೂ ಹರೆಯದ ಉತ್ಸಾಹ. ಶೇಷಮ್ಮಕ್ಕ ಅಂದ್ರೆ ಊರಿಗೆಲ್ಲಾ ಪ್ರೀತಿ. ತಮ್ಮ ಮಕ್ಕಳಂತೆ ಊರವರನ್ನೂ ತುಂಬಾನೇ ಪ್ರೀತಿಸುವ ವಿಶಾಲ ಹೃದಯ ಅವಳದ್ದು. ಅವಳಿಗೆ ಏಳು ಜನ ಮಕ್ಕಳಲ್ಲಿ ನಾಲ್ಕು ಹೆಣ್ಣು ಮತ್ತು ಮೂರು ಗಂಡು. ಮೂವರು ಹೆಣ್ಣುಮಕ್ಕಳನ್ನು ಮದುವೆ ಮಾಡಿ ಕೊಟ್ಟಾಗಿದೆ, ಕೊನೆಯವಳು ಬಾಕಿ..ಗಂಡು ಮಕ್ಕಳೆಲ್ಲಾ ಹೊರಗಡೆ ಒಳ್ಳೇ ಕೆಲ್ಸದಲ್ಲಿದ್ದಾರೆ.
ನಾನು ಊರಿಗೆ ಹೋದರೆ ಶೇಷಮ್ಮಕ್ಕನ ಮನೆಗೆ ಹೋಗೋದನ್ನು ಮರೆಯಲ್ಲ. ನಾನು ಬರ್ತೀನಿ ಅಂದ್ರೆ ಸಾಕು ರೊಟ್ಟಿ ಮತ್ತು ಮೀನು ಸಾರು ಮಾಡಿ ಕಾಯೋಳು ಶೇಷಮ್ಮಕ್ಕ. ಬಟ್ಟಲು ತುಂಬಾ ಪ್ರೀತಿನ ನೀಡೋಳು. ಆಕೆಯ ಅಮ್ಮನ ಮಮತೆಯನ್ನು ಮನತುಂಬಾ ತುಂಬಿಸಿಕೊಳ್ಳೋ ಹಂಬಲ ನನ್ನದು. ಕಳೆದ ಸಲ ಊರಿಗೆ ಹೋದಾಗ ಅವಳ ಮನೆಗೆ ಹೋಗಲು ಮರೆಯಲಿಲ್ಲ. ಒಂದು ಮಟಮಟ ಮಧ್ಯಾಃಹ್ನ ಶೇಷಮ್ಮಕ್ಕನ ಮನೆಗೆ ಹೋದೆ. ನಾನು ಹೋಗಿದ್ದೇ ತಡ..ದೊಡ್ಡ ಚೊಂಬಿನಲ್ಲಿ ನೀರು ತಕೊಂಡು ಬಂದು ನೆಂಟರಿಗೆ ಮನೆ ಒಳಗೆ ಹೋಗುವಾಗ ನೀರು ಕೊಡ್ತಾರಲ್ಲಾ..ಹಾಗೇ ನೀರು ಕೊಟ್ಟು ನನ್ನ ಬರಮಾಡಿಕೊಂಡಳು. ಮನೆ ನೋಡಿದರೆ ಎಂದಿನಂತೆ ಇರಲಿಲ್ಲ. ಎದುರಿನ ಚಾವಡಿಯಲ್ಲಿ ದೊಡ್ಡ ಸೋನಿ ಟಿವಿ ಮಾತಾಡುತ್ತಾ ಕುಳಿತಿತ್ತು. ಪದೇ ಪದೇ ಬೊಬ್ಬಿಡುವ ಫೋನ್ ಕೂಡ ಬಂದಿದೆ. ಚಿಕ್ಕಮಗಳು ಕಾಣಿಸಲಿಲ್ಲ..ಅವಳೂ ಯಾವುದೇ ಕೆಲಸಕ್ಕೆ ಹೊರಗೆ ಹೋಗುತ್ತಿದ್ದಾಳೆ. ನಾನು ಹೋದಾಗ ಶೇಷಮ್ಮಕ್ಕ ಒಬ್ಬಳೇ ಕುಳಿತು ಟಿವಿ ನೋಡುತ್ತಾ, ತನ್ನಷ್ಟಕ್ಕೆ ನಗುತ್ತಾ, ಖುಷಿಪಡುತ್ತಾ, ಆರಾಮವಾಗಿ ಕಾಲುಚಾಚಿ ಈಜಿ ಚಯರ್ ನಲ್ಲಿ ಕುಳಿತಿದ್ದಳು...ಥೇಟ್ ಒಂದೇ ಸಲ ನಂಗೆ ಕಾಸರವಳ್ಳಿಯವರ 'ಗುಲಾಬಿ ಟಾಕೀಸಿ'ನ ಗುಲಾಬಿಯ ಹಾಗೇ. ..
ಮೀನು ಸಾರು ಮತ್ತು ರೊಟ್ಟಿನೂ ರೆಡಿಯಾಗಿತ್ತು. ಆವಾಗ ಅವಳು ನಾನು ಹೇಗಿದ್ದೇನೆ? ಬೆಂಗಳೂರು ಹೇಗಿದೆ? ಕೆಲಸ ಹೇಗಾಗುತ್ತಿದೆ? ಎನ್ನುವ ಮಾಮೂಲಿ ಪ್ರಶ್ನೆಗಳ ಸುರಿಮಳೆ ಗೈಯಲಿಲ್ಲ. ಬೆಂಗಳೂರಿನಲ್ಲಿ ಅಂಬರೀಷ್ ಕಾಣಕ್ಕೆ ಸಿಗ್ತಾನಾ? ವಿಷ್ಣುವರ್ಧನ್ ಸಿಗ್ತಾನಾ? ಶ್ರುತಿ,ಶಶಿಕುಮಾರ್ ಸಿಗ್ತಾರಾ? ಅಂತ..ಯಪ್ಪಾ..ನಾನು ಟೋಟಲೀ ಕನ್ ಫ್ಯೂಸ್! ನನ್ನ ಉತ್ತರಕ್ಕೂ ಕಾಯದೆ, ಅಂಬರೀಷ್ , ವಿಷ್ಣುವರ್ಧನ್ ಸಿನಿಮಾ ಭಾಳ ಇಷ್ಟ..ಶ್ರುತಿಯ ಅಳುಮುಂಜಿ ಸಿನಿಮಾ ನೋಡಿದಾಗ..ಕರುಳು ಕಿತ್ತು ಬರುತಂತೆ...ಅವಳು ಸೀರೆ, ಲಂಗಧಾವಣಿಯಲ್ಲೇ ಇರ್ತಾಳಂತೆ..ಅರ್ಧಂಬರ್ಧ ಡ್ರೆಸ್ ಹಾಕೋಲ್ಲಂತೆ..ಹಾಗಾಗಿ ಭಾಳ ಇಷ್ಟ ನೋಡೋಕೆ" ಅಂತ ಒಂದೇ ಉಸಿರಿಗೆ ಹೇಳಿಬಿಟ್ಟಾಗ ಮೂಗಿನ ಮೇಲೆ ಬಂದು ನಿಂತಿದ್ದ ನನ್ನ ಬಂಪರ್ ಕೋಪ ಕೂಡ ಕರಗಿ ತಣ್ಣಗಾಗಿ ಹೋಗಿತ್ತು. ಆಕೆಯ ಮುಗ್ಧ, ಪ್ರಾಮಾಣಿಕ ಮಾತು..ಅದನ್ನು ಹೇಳೋ ಸ್ಟೈಲ್ ಹಾಗಿತ್ತು. ಅವಳಿಗೆ ಕುತೂಹಲ ಅಂದ್ರೆ..ಈ ನಟ-ನಟಿಮಣಿಯರೆಲ್ಲಾ ಬೆಂಗಳೂರಲ್ಲೇ ಇರ್ತಾರೆ..ಅಂತ ಮಕ್ಕಳು ಹೇಳಿರ್ತಾರೆ..ಹಾಗೇ ನಾನು ಬೆಂಗಳೂರಿನಲ್ಲಿ ಇರೋದ್ರರಿಂದ ಊರಲ್ಲಿದ್ದ ಹಾಗೇ ಅಕ್ಕ-ಪಕ್ಕನೇ ಇರ್ತಾರೆ..ಅಂಥ ಅವಳ ಮುಗ್ಧ ನಂಬಿಕೆ!.ಆಮೇಲೆ ಅವಳಿಗೆಲ್ಲಾ ವಿವರಿಸಿ ಹೇಳೋವಷ್ಟರಲ್ಲಿ..ಬಟ್ಟಲು ತುಂಬಾ ಹಾಕಿಕೊಟ್ಟ ಮೀನುಸಾರು, ರೊಟ್ಟಿ ಖಾಲಿಯಾಗಿ..ತಲೆನೂ ಖಾಲಿ ಖಾಲಿ ಅನಿಸಿ ಇನ್ನೊಂದು ಬಟ್ಟಲು ರೊಟ್ಟಿ ತಿನ್ನುವ ಮಟ್ಟಕ್ಕೆ ಬಂದು ತಲುಪಿದ್ದೆ ನಾನು. ಪಾಪ! ಶೇಷಮ್ಮಕ್ಕ ಒಬ್ಬಳೇ ಮನೇಲಿರ್ತಾಳಂತ ಮಕ್ಕಳು ಟಿವಿ ತಂದಿದ್ದರು..ಬೋರ್ ನಿವಾರಿಸೋದಕ್ಕೆ..ಇಳಿವಯಸ್ಸಿನತ್ತ ಸಾಗೋ ಒಂಟಿ ಜೀವಕ್ಕೆ ಕಂಪನಿ ಕೊಡಾಕೆ!!!
ಇಷ್ಟಕ್ಕೂ ನಂಗೆ ಈ ಶೇಷಮ್ಮಕ್ಕ ನೆನಪಾಗಿದ್ದು ಮೊನ್ನೆ ಗುರುವಾರ 'ಬೆಂಗಳೂರು ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಪ್ರದರ್ಶನಗೊಂಡ ಕಾಸರವಳ್ಳಿಯವರ 'ಗುಲಾಬಿ ಟಾಕೀಸ್' ಎಂಬ ಒಳ್ಳೆ ಸಿನಿಮಾನ ನೋಡಿದಾಗಲೇ! ನಗರ ಎಷ್ಟೇ ಬದಲಾಗುತ್ತಾ ಹೋದರೂ, ಹಳ್ಳಿಯಲ್ಲಿರುವ ಮುಗ್ಧತೆ, ಪ್ರಾಮಾಣಿಕತೆ ಎಂದಿಗೂ ಬದಲಾಗಿಲ್ಲ..ಅದೇ ಕಾರಣದಿಂದ ಹಳ್ಳೀನ ಇನ್ನೂ ನಾವು ಪ್ರೀತಿಯಿಂದ ಅಪ್ಪಿಕೊಳ್ತಿವಿ ಅನಿಸುತ್ತೆ.
Friday, January 23, 2009
Subscribe to:
Post Comments (Atom)
16 comments:
ಶೇಷಮ್ಮತ್ತೆಯ ಬಗೆಗೆ ನೀವು ಬರೆದದ್ದನ್ನು ಓದುತ್ತ, ಅವಳು
ನಮಗೆಲ್ಲರಿಗೂ ಆಪ್ತಳಾಗುತ್ತಿದ್ದಾಳೆ!
@ಸುನಾಥ್ ಸರ್...ಧನ್ಯವಾದಗಳು.
@ಸುಶ್ರುತಣ್ಣ.....ಯಾಕೋ ನಗ್ತಿಯಾ? ನಾ ಬರೆದಿದ್ದು ಚಂದಂಗಿಲ್ಬಾ? ಏನೇ ಆಗ್ಲೀ..ನಕ್ಕಿದ್ದಕ್ಕೆ ಥ್ಯಾಂಕ್ಸ್ಉ...
-ಚಿತ್ರಾ
ಚಿತ್ರಾ, ನೆನಪುಗಳ ಮಾತು ಮಧುರ. ಅಂಥದ್ದೊಂದು ಮುಗ್ಧ ಜೀವನ ನಮಗೆ ನಗರಗಳಲ್ಲಿ ಕಾಣಲು ಸಾಧ್ಯವೇ? ಏನೋ ಕಳೆದುಕೊಂಡಂತೆ ಮಾಡಿಸಿತು ನಿಮ್ಮ ಲೇಖನ.
ರೊಟ್ಟಿ ಜೊತೆಗೆ.. ಕಾಯಿ ಚಟ್ನಿ ಅಥವಾ ಬದನೆಕಾಯಿ ಈರುಳ್ಳಿ ಪಲ್ಯ ಸಕ್ಕತ್ ರುಚಿ ತರುತ್ತೆ... ಮೀನು ಸಾರಲ್ಲಿ ಏನಿದೇ????
ಚಿತ್ರ ಮರಿ,
ಶೇಷಮ್ಮನ ಬಗ್ಗೆ ಸೊಗಸಾಗಿದೆ ಮತ್ತು ತುಂಬಾ ಆಪ್ತವಾಗಿದೆ....[ಅದ್ರೆ ನೀನು ಶೇಷಮ್ಮನ ಮನೆಯಲ್ಲೂ ಪತ್ರಕರ್ತೆಯ ಬುದ್ಧಿ ತೋರಿಸಬೇಕೆ..ಆಕೆಯ ಬಗ್ಗೆ ಬರೆಯುವ ಕಾರಣಕ್ಕೆ ಅಲ್ಲಿ ಹೋಗಿ ಚೆನ್ನಾಗಿ ರೊಟ್ಟಿ ಮತ್ತು ಮೀನು ಕಬಳಿಸುವುದು...ಇಲ್ಲಿ ಅದನ್ನೆಲ್ಲಾ ಬರೆದು ನನ್ನ ಹೊಟ್ಟೆ ಉರಿಸುವುದು.......ತಮಾಷೆಗೆ]ಶೇಷಮ್ಮ ನಂಥವರು ಅಲ್ಲಲ್ಲಿ ಇರುತ್ತಾರೆ...ಇಂಥವರೇ ಅಲ್ಲವಾ ನಮ್ಮ ಮುಂದಿನ ಸ್ಪೂರ್ತಿ......
ಚಿತ್ರಾ,
ಲೇಖನ ಸೋಕು೦ಡು ಮಾರಾಯ್ರೆ, ಒರೋ ಊರುಗ್
ಪೋದು ಬತ್ತಿನ ಅನುಭವ. ಇ೦ಚನೆ ಬರೆವೋ೦ದಿಪ್ಪುಲೆ
ಚಿತ್ರಾ,
ಕೊನೆಯ ಮಾತುಗಳು ನಿಜಕ್ಕೂ ಸತ್ಯ ಹಾಗೂ ಸುಂದರ. ಹಳ್ಳಿ ಹಾಗೂ ಹಳ್ಳಿಯ ಜನ ನಮಗೆ ಇಷ್ಟವಾಗಲು ಅವರೊಳಗಿನ ಭಾವುಕತೆ, ಸಹೃದಯತೆ ಹಾಗೂ ಮುಗ್ಧತೆಯೇ ಕಾರಣ. ವಿಷಾದವೆಂದರೆ ಈಗ ಹಳ್ಳಿ ಮೊದಲಿನಂತಲಿಲ್ಲ. ನಗರದ ಕಲುಷಿತ ವಾತಾವರಣ ಹಳ್ಳಿಯಲ್ಲಿ ಹಾಗೂ ಅಲ್ಲಿಯ ಜನರ ಮನದಲ್ಲೂ ತುಂಬ ತೊಡಗಿದೆ. ನಿಜಕ್ಕೂ ವಿಷಾದನೀಯವಿದು.
ಆಪ್ತತೆ ತುಂಬಿದ ಬರಹ. ಚಿಕ್ಕದಾದರೂ ಚೊಕ್ಕದಾಗಿದೆ...:)
ಶೇಷಮ್ಮಕ್ಕನಂಥವರೂ ಈಗೀಗ ವಿರಳವಾಗುತ್ತಿದ್ದಾರೆ. ಸಿಟಿಯ ಆಡಂಬರ, ಕೃತ್ರಿಮತೆ ಹಳ್ಳಿಗೂ ಬಂದಿದೆ ಅನಿಸುತ್ತದೆ. ನಿಮ್ಮ ಬರೆಹ ಹಳೆಯ ನೆನಪುಗಳನ್ನು ಕೆದಕಿತು.
ವಯಸ್ಸಾದವರ ಬಗ್ಗೆ ಸೊಗಸಾಗಿ ಬರೆದಿರುವಿರಿ. ನೀವೂ ದೋಡ್ಡ ಬ್ಯಾಟ್ಸ್ ಮನ್ ಎಂಬುದು ಈಗ ತಿಳಿಯಿತು! ಎರಡು ಬಟ್ಟಲು ಮೀನು ಬಾಡು, ರೊಟ್ಟಿಗಳು... ಮಾಯಾಬಜಾರ್ ಫಿಲಂನ 'ವಿವಾಹ ಭೋಜನವಿದು...' ಹಾಡು ನೆನಪಾಯ್ತು!!!
ಚಿತ್ರಾರವರೆ,
ಈ ಧಿಡೀರ್ ಆಧುನಿಕತೆಯಿಂದ ಕೂಡ ನಮ್ಮ ಊರು ಎಲ್ಲೋ ನಮಗೆ ಇನ್ನು ಸಹ್ಯ, ಮತ್ತು ಆಪ್ತ ಅನಿಸೋದು ನೀವು ಬರೆದ ಕೊನೆಯ ಎರಡು ಸಾಲಿನಿಂದ ಅನ್ಸುತ್ತೆ. ಇಷ್ಟವಾಯಿತು ಬರಹ.
-ರಾಜೇಶ್ ಮಂಜುನಾಥ್
ಹಳ್ಳಿಯಲ್ಲಿರುವ ಮುಗ್ಧತೆ, ಪ್ರಾಮಾಣಿಕತೆ ಎಂದಿಗೂ ಬದಲಾಗಿಲ್ಲ ಅಂತ ನಾ ಒಪ್ಪಲ್ಲ ನೋಡಿ. ಆದ್ರೆ better than cities ಅಂತ ಹೇಳ್ತೀನಿ.
@ಅವಿನಾಶ್ ಸರ್..ಪ್ರತಿಕ್ರಿಯೆಗೆ ಧನ್ಯವಾದಗಳು
@ಜಯಶಂಕರ್..ಮೀನು ಸಾರ್ ನಲ್ಲಿ ಏನಿದೆ? ಅಂದ್ರೆ ಹ್ಯಾಂಗ ಹೇಳಲಿ..ತಿಂದ್ರೆ ತಾನೇ ಗೊತ್ತಾಗೋದು?....(:)
@ಶಿವಣ್ಣ..ಧನ್ಯವಾದಗಳು. (ಆಮೇಲೆ ನಾನು ಬರೆಯೋ ಕಾರಣಕ್ಕೆ ಶೇಷಮ್ಮಕ್ಕನ ಮನೆಗೆ ಹೋಗಿಲ್ಲ..ಚಿಕ್ಕಂದಿನಿಂದಲೂ ಅಲ್ಲಿಗೆ ಹೋಗ್ತಾ ಇರ್ತೀನಿ..ಅಣ್ಣಯ್ಯ 'ಯಾವ ಪತ್ರಕರ್ತನೂ ಬರೆಯೋ ಉದ್ದೇಶದಿಂದ ವಿಪರೀತ ತಿನ್ನೋ ಕೆಲ್ಸ ಮಾಡಲ್ಲ..ತಮಾಷೆಗೆ)
@ಪರಾಂಜಪೆ..ಮಸ್ತ್ ಸೊಲ್ಮೆಲು
@ತೇಜಕ್ಕ, ಹರೀಶ್ ಸರ್...ನೀವಂದಿದ್ದು ನಿಜ
@ಮಲ್ಲಿಯಣ್ಣ..ಹಹಹ...ಅದ್ಸರಿ..ನಾನು ದೊಡ್ಡ ಬ್ಯಾಟ್ಸ್ ಮನ್. ನಿಮ್ಮ ಪಾರ್ಟಿ ಯಾವಾಗ?
@ರಾಜೇಶ್..ಹೀಗೆ ಬರುತ್ತಿರಿ
@ವಿಕಾಸ್...ನೀವು ಹೇಳ್ತಿರೋದೂ ತಪ್ಪಲ್ಲ..ಎಲ್ಲೋ ಒಂದೆಡೆ ಹಳ್ಳಿಯ ಮುಗ್ಧತೆ, ಪ್ರಾಮಾಣಿಕ ಬದಲಾಗಿಲ್ಲ ಅಂತ ಅನಿಸಿದರೂ, ಮತ್ತೊಂದೆಡೆ ಆಧುನಿಕತೆಯತ್ತ ದಾಪುಗಾಲಿಡುತ್ತಿರುವ ಹಳ್ಳಿಗಳೂ ಕಾಣಸಿಗುತ್ತವೆ. ಧನ್ಯವಾದಗಳು.
-ಚಿತ್ರಾ
"ಬೆಂಗಳೂರಿನಲ್ಲಿ ಅಂಬರೀಷ್ ಕಾಣಕ್ಕೆ ಸಿಗ್ತಾನಾ? ವಿಷ್ಣುವರ್ಧನ್ ಸಿಗ್ತಾನಾ? ಶ್ರುತಿ, ಶಶಿಕುಮಾರ್ ಸಿಗ್ತಾರಾ?" ಹಳ್ಳಿಯೋರೆಲ್ಲಾ ಹೀಗೇ ಅಂದ್ಕೊಂಡ್ಬಿಟ್ಟಾರು ಕಣ್ರಿ...!! ಹಳ್ಳಿಯಲ್ಲಿ ಸ್ನೇಹ, ಬಾಂಧವ್ಯಕ್ಕೆ ಸಿಗುವ ಬೆಲೆ ಪಟ್ಟಣಗಳಲ್ಲಿ ಖಂಡಿತಾ ಸಿಗೋಲ್ಲ.ಲೇಖನ ತುಂಬಾ ಚನ್ನಾಗಿದೆ ಹಾಗೂ ನಗು ತರಿಸುವಂತೆಯೂ ಇದೆ.
namaskaara, thumba chennagide.
@ಮನಸ್ವಿ..ಶರಧಿಯಲ್ಲಿ ಪುಟ್ಟ ಪಯಣ ನಿಮ್ಮದಾಗಿಸಿದ್ದಕ್ಕೆ ಮನತುಂಬಿ ವಂದನೆಗಳು
@ಮಿನುಗುತಾರೆ..ತಮಗೂ ನಮಸ್ಕಾರ.ಆಗಾಗ ಬರುತ್ತೀರಿ...
-ಚಿತ್ರಾ
avadhiyalli banda mele odide.. thumbaa chennagittu baraha
Post a Comment