Thursday, November 27, 2008

ಕಂಡಿದ್ದು..ಕೇಳಿದ್ದು..!

ಜೋಕೆ ಸುಳ್ಳು ಹೇಳ್ತಾರೆ
ನಮ್ಮ ತಂದೆ, ತಾತ, ಮುತ್ತಾತರ ಕಾಲದಲ್ಲಿ ಬಸ್ಸಲ್ಲಿ ಯಾರು ಎಲ್ಲಿ ಬೇಕಾದ್ರೂ ಕುಳಿತುಕೊಳ್ಳಬಹುದಿತ್ತು. ಆದರೆ ಈಗ ಕಾಲ ಬದಲಾಗಿದೆ. ಮಹಿಳೆಯರಿಗೆ ಮತ್ತು ಗಂಡಸರಿಗೆ ಪ್ರತ್ಯೇಕ ಸೀಟುಗಳಿವೆ. ಇಂತಹ ನಿಮಯ ಇಲ್ಲಾಂದ್ರೆ ಬಸ್ಸಲ್ಲಿ ಆಗುವ ಕೆಲವು ಅನಾಹುತಗಳಿಂದ ತಪ್ಪಿಸಿಕೊಳ್ಳಬೇಕಲ್ಲಾ?ಎರಡು ದಿನದ ಹಿಂದೆ ಬಿಎಂಟಿಸಿ ಬಸ್ಸಲ್ಲಿ ಪ್ರಯಾಣಿಸುತ್ತಿದ್ದೆ. ಬಸ್ಸಲ್ಲಿ ತುಂಬಾ ರಶ್. ಮಹಿಳೆಯರಿಗಾಗಿ ಮೀಸಲಿಟ್ಟ ಸೀಟಿನ ಪಕ್ಕ ಅಂಗವಿಕರಿಗೆ ಎಂದು ಬರೆದ ಸೀಟಿತ್ತು. ಅದರಲ್ಲಿ ಇಬ್ಬರು ಮಧ್ಯವಯಸ್ಸಿನ ವ್ಯಕ್ತಿಗಳು ಕುಳಿತಿದ್ದರು. ಇಬ್ಬರು ಹುಡುಗೀರು ಬಸ್ಸು ಹತ್ತಿ ದಬಾಯಿಸಿದ್ದೇ ದಬಾಯಿಸಿದ್ದು. "ಏನ್ರೀ ಮಹಿಳೆಯರ ಸೀಟಲ್ಲಿ ಕುಳಿತಿದ್ದೀರಿ. ಏಳ್ರೀ.." ಎಂದಾಗ ಆ ಇಬ್ಬರೂ "ನಾವು ಅಂಗವಿಕಲರು ಕಣ್ರೀ. ಬೇಕಾದ್ರೆ ಇಳಿವಾಗ ನೋಡ್ರೀ" ಎಂದುಬಿಟ್ಟರು. ಅಷ್ಟೋತ್ತಿಗೆ ಬಸ್ಸಲ್ಲಿರುವ ಗಂಡಸರೆಲ್ಲರೂ ಅವರಿಬ್ಬರ ಪರ ಮಾತಾಡಿದ್ರೆ, ಹೆಂಗಸರೆಲ್ಲ ಹುಡುಗೀರ ಪರ ಮಾತಾಡಿದ್ರು. ಯಾರ ಪರ ಮಾತಾಡಬೇಕೆಂದು ತೋಚದ ಕಂಡಕ್ಟರ್ "ಬಸ್ಸು ಸ್ಟ್ಯಾಂಡಿನಲ್ಲಿ ಇಳಿತಾರಮ್ಮ..ನೋಡ್ಕೊಳ್ಳಿ" ಅಂದುಬಿಟ್ಟ.ಕೋರಮಂಗಲ ಕೊನೆಯ ಸ್ಟಾಪಿನಲ್ಲಿ ಇಳಿದ ಆ ಇಬ್ಬರು ಅಂಗವಿಕಲ ಗಂಡಸರು, 25 ವರ್ಷದ ಉತ್ಸಾಹದ ಯುವಕರಂತೆ ನಗುತ್ತಾ, "ಇನ್ನು ನೋಡ್ಕೊಳ್ಳಿ' ಅಂತ ಅವರ ಪಾಡಿಗೆ ಹೋದರು. ಹೇಗಿದೆ ಬಸ್ಸು ಪುರಾಣ..ಜೋಕೆ ಸುಳ್ಳು ಹೇಳ್ತಾರೆ.

ಕೌಟುಂಬಿಕ ದೌರ್ಜನ್ಯ ಕಾಯ್ದೆ
ಆತ ನಮ್ಮೂರ ಪಕ್ಕದವನು. ಬೆಂಗಳೂರಿನ ಪ್ರಮುಖ ಕಂಪನಿಯಲ್ಲಿ ಕೆಲ್ಸ. ಆರು ತಿಂಗಳ ಹಿಂದೆ ಮದುವೆಯಾಗಿತ್ತು. ಮನೆಯವರು ನೋಡಿದ ಹುಡುಗೀನ ಮದುವೆಯಾದ. ಆಕೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ವೈದ್ಯೆ. ವರದಕ್ಷಿಣೆನೂ ಈತ ಕೇಳಿಲ್ಲ..ಚಿನ್ನನ್ನೂ ಕೇಳಿಲ್ಲ. ಅಂತೂ ತುಂಬಾ ಗ್ಯ್ರಾಂಡ್ ಆಗಿ ಊರಲ್ಲೇ ಮದುವೆಯಾಯಿತು. ಗಂಡ-ಹೆಂಡತಿ ಇಬ್ಬರೂ ಬೆಂಗಳೂರಿಗೆ ಬಂದರು. ಆವಾಗಿನಿಂದ ಏನಾಯಿತೋ? ಇಬ್ಬರಿಗೂ ಜಗಳ. ಆಕೆ ದಿನಾ ಹುಚ್ಚರಂತೆ ವರ್ತಿಸುತ್ತಿದ್ದಳು. ಆಸ್ಪತ್ರೆಗೆ ಹೋದರೆ ಅವಳಿಗೇನೂ ಆಗಿಲ್ಲ ಅನ್ನೋರು ಡಾಕ್ಟರ್. ಸರಿಯಾಗಿ ದಿನಾ ಡ್ಯೂಟಿಗೆ ಹೋಗುತ್ತಿದ್ದಳು..ಆದರೆ ಡ್ಯೂಟಿ ಸಮಯದಲ್ಲಿ ಅವಳೆಂದೂ ಹುಚ್ಚಳಂತೆ ವರ್ತಿಸಿಲ್ಲ. ರಾತ್ರಿ ಮನೆಗೆ ಬಂದ್ರೆ..ಗಂಡನಿಗೆ ಹೊಡೆಯುವುದು,...ಏನೇನೋ ಹೇಳೋದು ಬೈಯೋದು..ಹಾಗೇ ಆರು ತಿಂಗಳು ಕಳೆಯಿತು. ಅಂದಿನಿಂದಲೇ ಆತ ಕುಡಿಯಾಕೆ ಆರಂಭಿಸಿದ. ನೆಮ್ಮದಿಯಿಲ್ಲ...ಯಾರಲ್ಲೂ ಹೇಳಿಕೊಳ್ಳಲಾಗದ ಅರ್ಥವಾಗದ ಸಮಸ್ಯೆ. ಆತ ತುಂಬಾ ಒಳ್ಳೆ ಹುಡುಗ. ಯಾವುದೇ ಕೆಟ್ಟ ಅಭ್ಯಾಸಗಳಿರಲಿಲ್ಲ. ಅದೇನಾಯಿತೋ,,ಕುಡಿಯಾಕೆ ಆರಂಭಿಸಿದ. ಹಾಗೇ ಆರು ತಿಂಗಳು ಬದುಕು ಸಾಗಿತ್ತು. ಮೊನ್ನೆ ಆಕೆ ಅವಳ ಅಪ್ಪ-ಅಮ್ಮನ ಜೊತೆ ಹೋಗಿ ಇವನ ಮೇಲೆ, ಇವನ ಇಡೀ ಕುಟುಂಬದ ಮೇಲೆ 'ಕೌಟುಂಬಿಕ ದೌರ್ಜನ್ಯ ಕಾಯ್ದೆ' ಯಡಿಯಲ್ಲಿ ಕೇಸು ಕೊಟ್ಟಿದ್ದಾಳೆ. ಆತ ವರದಕ್ಷಿಣೆಗೆ ಪೀಡಿಸಿದ ಇನ್ನು ಏನೇನೋ ಹೇಳಿದ್ದಾಳೆ. ಇದು ಕೌಟುಂಬಿಕ ದೌರ್ಜನ್ಯ...ಆತನ ತಪ್ಪೇನಿಲ್ಲ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಕಾನೂನು ಎದುರು ಅವನು ತಲೆಬಾಗಬೇಕು..ಜೈಲಿಗೂ ಹೋಗಬೇಕು. ಕೌಟುಂಬಿಕ ದೌರ್ಜನ್ಯ ಕಾಯ್ದೆ ಹೇಗೆ ದುರುಪಯೋಗವಾಗುತ್ತಿದೆ ಎಂಬುದಕ್ಕೆ ಇಂಥ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ.

ವಿದ್ಯುತ್ ಕ್ಷಾಮ
ಈಗ ವಿದ್ಯುತ್ ಸಮಸ್ಯೆ ಅಲ್ಲ, ವಿದ್ಯುತ್ ಕ್ಷಾಮ ಆರಂಭವಾಗಿಬಿಟ್ಟಿದೆ. ಬೆಳಿಗ್ಗೆ ನಾನು ಹೆಚ್ಚೆಂದರೆ ಆರು ಗಂಟೆಗೇ ಎದ್ದೇಳುತ್ತೇನೆ. ಎದ್ದಾಗ ನನ್ನ ಚಿಂತೆ ಬೇರೇನಲ್ಲ...ಅಯ್ಯೋ ಕರೆಂಟು ಹೋಗಿಬಿಟ್ರೇ..ಅಂತ. ಬೆಳಿಗ್ಗೆ ಏಳೋದೇ ತಿಂಡಿ ರೆಡಿ ಮಾಡೋ ಹೊತ್ತಿಗೆ ಕರೆಂಟು ಮಾಯ. ನಮ್ಮದು ಕೋರಮಂಗಲ..ಇಲ್ಲಿ ಬೆಳಿಗ್ಗೆ ಏಳು ಗಂಟೆಗೇ ಕರೆಂಟು ಹೋಗಿರುತ್ತೆ. ಕರೆಂಟಿಲ್ಲಾಂದ್ರೆ ನೀರೂ ಬರಲ್ಲ..ಮಿಕ್ಸಿ ತಿರುಗಲ್ಲ. ಮಧ್ಯಾಹ್ನಕ್ಕೆ ಅಡುಗೆ..ಸಾರು ರೆಡಿ ಆಗಬೇಕು..ನಮ್ಮ ಸರ್ಕಾರಕ್ಕೆ ಶಾಪ ಹಾಕೊಂಡು ಬೆಳಿಗ್ಗೆ ಆರು ಗಂಟೆಗೆ ಎದ್ದು ಅಡುಗೆ ರೆಡಿ ಮಾಡುವುದು. ಇದು ಬೆಳಿಗ್ಗೆಯ ಕತೆ ಆದ್ರೆ..ನಾನು ಸಂಜೆ ಆರು ಗಂಟೆಗೆ ಆಫೀಸು ಬಿಟ್ಟು ಹೋದಾಗಲೂ ..ಸಂಜೆ ಏಳು ಗಂಟೆಗೆ ಹೋದ ಕರೆಂಟು ಮತ್ತೆ ಬರೋದು 10.30ಗೆ. ಅಷ್ಟೊತ್ತಿನವರೆಗೆ ಕ್ಯಾಂಡಲ್ ಅಡಿಯಲ್ಲಿ ಪರದಾಡಬೇಕು. ಕರ್ಮಕಾಂಡ..ಆಮೇಲೆ ಸಾರು ರೆಡಿ. ಮಲಗುವಾಗಲೂ ತಡ ಆಗಿ ಹೋಗುತ್ತೆ. ಮತ್ತೆ ಊರಲೆಲ್ಲ ಇಡೀ ದಿನ ಕರೆಂಟಿಲ್ಲಂತೆ..ಕರೆಂಟು ನಂಬಿದ್ರೆ ಕೆಲ್ಸಾಸನೇ ಆಗಲ್ಲ ಅಂತಾರೆ. ಬಹುಶಃ ಎಲ್ಲರಿಗೂ ವಿದ್ಯುತ್ ಕ್ಷಾಮದ ಅನುಭವ ಆಗಿರಬೇಕು. ಆದರೆ ನಮ್ಮ ಮುಖ್ಯಮಂತ್ರಿ ಹೇಳೋದೇನು? ಉತ್ತರ ಭಾರತದ ರಾಜ್ಯಗಳಲ್ಲಿ ಚುನಾವಣೆ ನಡೆದೇ ಬಳಿಕವೇ ಕರೆಂಟು ಕೊಡ್ತಾರಂತೆ. ಅವತ್ತಿನವರೆಗೆ ಕರೆಂಟಿಲ್ಲದೆ, ನೀರಿಲ್ಲದೆ ಸಾಯುವವರೆಲ್ಲ ಸಾಯಲಿ ಅಂತೇನು? ಹೌದು.. 'ಬಿಜೆಪಿಯೇ ಪರಿಹಾರ'!!! ಅಂತೆ.

5 comments:

Ittigecement said...

ಬದುಕಿನ ಕಹಿಸತ್ಯದ ಅನುಭವ ಈ ಥರವೂ ಇರುತ್ತದೆ.. ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ..
ಧನ್ಯವಾದಗಳು

ಹರೀಶ ಮಾಂಬಾಡಿ said...

೧:
ಕೆಲವೊಂದು ಬಾರಿ ಹುಡುಗಿಯರು ಲೇಡೀಸ್ ಸೀಟ್ ಖಾಲಿ ಇದ್ದರೂ ಇತರ ಸೀಟ್ನಲ್ಲಿ ಕೂತ್ಕೋತಾರೆ. ಪಾಪದ ಹುಡುಗರು ಎಲ್ಲಾ ಸೀಟು ತುಂಬಿದಾಗ ಲೇಡೀಸ್ ಸೀಟಿನಲ್ಲಿ ಸುಮ್ಮನೆ ಕುಳಿತರೂ ಸಾಕು!

೨:
ಕಾಯಿದೆಯನ್ನು ಹೀಗೆ ದುರುಪಯೋಗಪಡಿಸುವ ಹಲವು ಪ್ರಕರಣಗಳು ಇವೆ.

೩: ಖಾಯಂ ಸಮಸ್ಯೆ.
ಮೇಲಿನ ಎರಡೂ ಪ್ರತಿಕ್ರಿಯೆಗಳು ಮಹಿಳೆಯಿಂದ ಶೋಷಣೆ ಬಗ್ಗೆ...

ಸಂದೀಪ್ ಕಾಮತ್ said...

3 in One ?? Good!

shivu.k said...

ಚಿತ್ರ,
ಬಿ ಎಂ ಟಿ ಸಿ ಸೀಟು ಜೋಕು, ಕೌಟುಂಬಿಕ ದೌರ್ಜನ್ಯ ಕಾಯ್ದೆ, ಮತ್ತು ವಿದ್ಯುತ್ ಕ್ಷಾಮದ ಬಗ್ಗೆ ಲೇಖನಗಳು ಚಿಕ್ಕದಾದರು ಚೊಕ್ಕವಾಗಿವೆ. ಮತ್ತು ವಾಸ್ತವದ ತಳಹದಿಯಲ್ಲಿ ಮೂಡಿಬಂದಿವೆ. ವಿದ್ಯುತ್ ಕ್ಷಾಮದ ಬಗ್ಗೆ ನನ್ನ ಅಭಿಪ್ರಾಯವೇನೆಂದರೆ ನನಗೆ ಕಂಪ್ಯೂಟರಿನಲ್ಲಿ ಫೋಟೊಗ್ರಪಿಯ ಕೆಲಸವಿದ್ದಾಗ ಅಥವಾ ಏನಾದರೂ ಬರೆಯುತ್ತಿದ್ದಾಗ ಇದ್ದಕ್ಕಿದಂತೆ ಕರೆಂಟ್ ಹೋಗಿ ಮಾಡಿದ್ದೆಲ್ಲಾ ಹೊರಟು ಹೋಗುತ್ತಿತ್ತು. ಅದಕ್ಕೆ ಮತ್ತೊಂದು ಕಾರಣ ನನ್ನ ups ಸರಿಯಾಗಿರದಿದ್ದದ್ದು. ಆಗ ಅನುಭವಿಸಿದ ತೊಂದರೆ, ಸಮಯ ಹಾಳಾದ ಅನುಭವ ನನಗೂ ಬೇಸರವಾಗುವಷ್ಟು ಆಗಿದೆ.

ಚಿತ್ರಾ ಸಂತೋಷ್ said...

@ಪ್ರಕಾಶ್ ಸರ್..ಸಂದೀಪ್..ಶಿವಣ್ಣ ವಂದನೆಗಳು
@ಹರೀಶ್ ಸರ್..ಪ್ರತಿಕ್ರಿಯೆಗೆ ಧನ್ಯವಾದಗಳು. ಸಧ್ಯದಲ್ಲಿಯೇ ಪುರುಷರ ಶೋಷಣೆಯ ಬಗ್ಗೆ ಬರೀತೀನಿ(:)
-ಚಿತ್ರ