Saturday, November 15, 2008

ನಿದ್ದೆಯಲ್ಲಿ ನನ್ನ 'ಯಕ್ಷಗಾನ'...!

"ಪೊಂಜನಕುಳು, ಆಂಜನಕುಳು, ಜೋಕುಳು, ಅಕ್ಕನಕುಲು, ಅಣ್ಣನಕುಳು, ಅಜ್ಜಿ-ಅಜ್ಜನಕುಳು ಮಾತೆರ್ಲ ಬಲೇ..ಒಂಜೆ ಒಂಜಿ ಆಟೋ ರಾತ್ರಿ 9 ಗಂಟೆಗ್..ದೇವಿಮಹಾತ್ಮೆ..ಮಾತೆರ್ಲ ಬಲೆ..."ಹೀಗೆಂದ ತಕ್ಷಣ ಸಂಜೆಯ ಅಡುಗೆ ಕೆಲಸ ಮುಗಿಸಿ ಮನೆ ಜಗುಲಿಯಲ್ಲಿ ಕುಳಿತು ಹರಟುತ್ತಿದ್ದ ಅಜ್ಜಿಯರು, ಕೂಲಿ ಕೆಲಸ ಮುಗಿಸಿ ಮನೆಗೆ ಆತುರದಿಂದ ಓಡಿಬರುತ್ತಿದ್ದ ಹೆಂಗಸರು, ಗದ್ದೆ ಕಟ್ಟೆಯ ಮೇಲೆ ಕುಳಿತು ದಣಿವಾರಿಸಿಕೊಳ್ಳುತ್ತಿದ್ದ ಗಂಡಸರು, ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ನಮ್ಮಂಥ ಫೋಲಿ ಹುಡುಗರು ಎಲ್ಲರ ಕಿವಿಗಳೂ ಈ ಪ್ರಚಾರದ ಅಬ್ಬರಕ್ಕೆ ನೆಟ್ಟಗಾಗುತ್ತಿದ್ದವು.

ಆವಾಗ ನಾನಿನ್ನೂ ಪುಟ್ಟ ಹುಡುಗಿ. ಯಕ್ಷಗಾನ ಎಂದರೆ ಪಂಚಪ್ರಾಣ. ಊರಿಗೆ ಬಂದ ಯಕ್ಷಗಾನಗಳನ್ನೆಲ್ಲ ನೋಡೋ ಚಾಳಿ. ದೇವಿ ಮಹಾತ್ಮೆ, ಕಂಸವಧೆ. ಕೃಷ್ಣಲೀಲೆ..ಹೀಗೇ ನೋಡಿದ ಯಕ್ಷಗಾನಗಳಿಗೆ ಲೆಕ್ಕವೇ ಇಲ್ಲ. ಚಳಿಗಾಲ ಶುರುವಾಗುತ್ತಿದ್ದಂತೆ ಕರಾವಳಿಯಲ್ಲಿ ಯಕ್ಷಗಾನ ಮೇಳಗಳ ಅಬ್ಬರದ ಹಬ್ಬ. ಊರಲ್ಲೊಂದು ಯಕ್ಷಗಾನ ನಡೆಯೋದಾದ್ರೆ ..ಒಂದು ವಾರಕ್ಕೆ ಮೊದಲೇ ಪ್ರಚಾರ ಶುರುವಾಗುತ್ತೆ..ಥೇಟ್ ಚುನಾವಣಾ ಪ್ರಚಾರದಂತೆ! ಊರಲ್ಲಿ ಯಾರಾದ್ರೂ ಒಳ್ಳೆ ಮಾತುಗಾರ ಇದ್ರೆ ಆಟದ ಪ್ರಚಾರಕ್ಕೆ ಅವನೇ ಪ್ರಚಾರ ಮಾಡೋನು. ಒಂದಿಷ್ಟು ಜೋಕ್...ಮಸಾಲೆ ಸೇರಿಸಿ ಅವನ ಪ್ರಚಾರ ಕೇಳೋ ಕಿವಿಗೆ ಖುಷಿ ಕೊಡುತ್ತೆ..ಹಾಗಾಗಿ ಆಟ(ಯಕ್ಷಗಾನ) ಪ್ರಚಾರ ಮಾಡುವವನು ಯಾರು? ಏನ್ ಹೇಳ್ತಾನೆ? ಅನ್ನೋದೇ ಕೆಲವರಿಗೆ ಕುತೂಹಲದ ಸಂಗತಿ.

ಪ್ರಚಾರ ಕಿವಿಗೆ ಬಿದ್ದ ದಿನವೇ ನಾನು, ತಮ್ಮಾ ಅಮ್ಮನತ್ರ ಟಿಕೆಟ್ ಗೆ ಹಣ ಫಿಕ್ಸ್ ಮಾಡಿ ಇಡ್ತೀವಿ. ಹೆಚ್ಚಾಗಿ ಶನಿವಾರನೇ ಯಕ್ಷಗಾನ ಆಗೋದು..ಮರುದಿನ ಜನರಿಗೆ ನಿದ್ದೆ ಮಾಡಲೂ ಅನುಕೂಲವಾಗುತ್ತೆ ಅದ್ಕೆ. ಆವಾಗಲ್ಲೆ ಯಕ್ಷಗಾನ ಎಂದರೆ ಊರಿಗೆ ಊರೇ ಯಕ್ಷಗಾನ ಹೋಗುತ್ತಿತ್ತು..ಸುಮಾರು ರಾತ್ರಿ 9 ಗಂಟೆಗೆ ಯಕ್ಷಗಾನ ಶುರುವಾಗುವುದೆಂದರೆ, ಅಂದಿನ ಬೆಳಿಗ್ಗೆಯೇ ಜನ ಎಲ್ಲಾ ರೆಡಿಯಾಗುತ್ತಿದ್ದರು. ಹಣ್ಣು ಹಣ್ಣು ಅಜ್ಜ-ಅಜ್ಜಂದಿರು ಕೂಡ ದೊಣ್ಣೆ ಕುಟ್ಟುತ್ತಾ ಮೊಮ್ಮಕ್ಕಳ ಜೊತೆ ಹೋಗುತ್ತಿದ್ದರು. ನಮ್ಮ ಅಮ್ಮ ಯಾವಾಗ್ಲೂ ಯಕ್ಷಗಾನಕ್ಕೆ ಬರೋಲ್ಲ..ಹಾಗಾಗಿ ನಾವು ಹಿಂಡು ಹಿಂಡಾಗಿ ಹೋಗುತ್ತಿದ್ದ ಊರಮಂದಿ ಜೊತೆಗೇ ಹೋಗುತ್ತಿದ್ದವು. ನಮಗೆ ಬೆಡ್ ಶೀಟ್ ಕೊಟ್ಟು ಅಮ್ಮ ಕಳಿಸುತ್ತಿದ್ರು. ಯಾಕಂದ್ರೆ ರಾತ್ರಿಯ ಚಳಿ ಸಹಿಸಾಕೆ ಆಗಲ್ಲ. ಯಾರ ಜೊತೆಗಾದ್ರೂ ಹೋಗಿ ವೇದಿಕೆಯ ಎದುರು ಮುಂದಿನ ಸಾಲಿನಲ್ಲೇ ಕುಳಿತುಕೊಳ್ಳುತ್ತಿದ್ದೇವು. ನಾನು ರಾತ್ರಿ ಇಡೀ ಬಿಟ್ಟ ಕಣ್ಣುಗಳಿಂದ ಪಿಳಿಪಿಳಿ ಎಂದು ಯಕ್ಷಗಾನ ನೋಡುತ್ತಿದ್ದರೆ, ನನ್ನ ತಮ್ಮ ಚಂಡೆಯ ಸದ್ದಿಗೆ ಏಳೋದು...ಭಾಗವತಿಕೆ ಕೇಳಿದಾಗ ಮಲಗೋದು ಮಾಡುತ್ತಿದ್ದ. ಮಧ್ಯರಾತ್ರೀಲಿ ದೊಡ್ಡ ವೇಷಗಳು ವೇದಿಕೆಗೆ ಬಂದು, ಆಕಾಶ ಭೂಮಿ ಒಂದಾಗುವಂತೆ ಕುಣಿದು ಅಬ್ಬರಿಸಿದಾಗ ನನ್ನ ತಮ್ಮ ಬೆದರಿ ಅದೆಷ್ಟು ಬಾರಿ ಉಚ್ಚೆ ಮಾಡಿದ್ನೋ. ಆದ್ರು ಅವ ಬರೋದನ್ನು ಬಿಡಲ್ಲ.

ಯಕ್ಷಗಾನ ನೋಡಿದ ಮರುದಿನ ನನ್ನ ಕಿತಾಪತಿಯೇ ಬೇರೆ. ಬಂದು ಮನೆಯಲ್ಲಿ ನಿದ್ದೆ ಮಾಡಿದ್ರೆ, ನಿದ್ದೆ ಅಮಲಿನಲ್ಲಿ ಎದ್ದು ರಾತ್ರಿ ನಡೆದ ಯಕ್ಷಗಾನ ಡೈಲಾಗ್ ಗಳು, ಚಂಡೆ ಬಡಿಯೋದು ಎಲ್ಲವನ್ನು ಮಾಡುತ್ತಿದ್ದ ನಾನು ಕೊನೆಗೆ ಎದ್ದು ಕುಣಿಯುತ್ತಿದ್ದೆ ಅಂತೆ. ಅದ್ಕೆ ಅಮ್ಮ ನಿದ್ದೆ ಮಾಡುವಾಗ ನನ್ನ ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಆ ಹುಚ್ಚು ಕನಸು ಎಷ್ಟರಮಟ್ಟಿಗೆ ಇತ್ತೆಂದರೆ ಅಡುಗೆ ಮನೆಗೆ ಹೋಗಿ ಸೌಟು ಮತ್ತು ಪಾತ್ರೆ ತಂದು ಚೆಂಡೆ ಎಂದು ಬಡಿಯುತ್ತಿದ್ದೆ! ಈಗ ನೆನೆಸಿದಾಗ ನಗು ಬರುತ್ತಿದೆ. ಎಂಥ ಅವಸ್ಥೆ ನನ್ನದೂಂತಾ.

ಈಗ ಯಕ್ಷಗಾನ ನೋಡದೆ ಏಳೆಂಟು ವರ್ಷಗಳಾಯ್ತು. ಹೈಸ್ಕೂಲು ಮುಗ್ಸಿ ಪಿಯು, ಡಿಗ್ರಿಗೆ ಹಾಸ್ಟೇಲು ಸಹವಾಸ..ಈಗ ಈ ರೀತಿ ಯಕ್ಷಗಾನ ನೋಡೋದೇ ಅಪರೂಪ. ಅಷ್ಟೇ ಅಲ್ಲ, ಈಗ ಊರಿಗೆ ಹೋದರೆ ಎಂದಿನಂತೆ ಜನ ಯಕ್ಷಗಾನ ಅಂದ್ರೆ ಕಿವಿ ನೆಟ್ಟಗೆ ಮಾಡಲ್ಲ. ಮನೆಯಲ್ಲಿ ಟಿವಿ ಇದೆ, ಸಿಡಿ ತರೋಣ ಹೊಸ ಸಿನಿಮಾ ನೋಡೊಣ ಅಂತಾರೆ. ಕಲೆಗಳು ಜೀವಂತವಾಗಿರುತ್ತವೆ..ಆದರೆ ಜನರ ಅಭಿರುಚಿಗಳು....?!
ಫೋಟೋ: flickr.com

17 comments:

shivu.k said...

ಚಿತ್ರಾ ಮೇಡಮ್,
ನಿಮ್ಮ ಬಾಲ್ಯದ ಯಕ್ಷಗಾನ ಕಥೆ ಕೇಳಿ ನನಗೆ ನನ್ನೂರಿನ ರಾತ್ರಿ ಪೂರ್ತಿ ನಡೆಯುವ ಸತ್ಯವ್ರತ, ಶನಿಮಹಾತ್ಮೆ, ನಳದಮಯಂತಿ ಇತ್ಯಾದಿ ನಾಟಕಗಳು, ಅದನ್ನು ನಿಮ್ಮಂತೆ ರಾತ್ರಿ ಪೂರ ನೋಡುತ್ತಿದ್ದುದು, ಬೆಳಗಿನ ಜಾವ ಚೆನ್ನಾಗಿ ನಿದ್ರೆ ಹೋಗುತ್ತಿದ್ದುದ್ದು ನೆನಪಿಗೆ ಬಂತು. ನಮ್ಮೂರಿನ ಕಡೆಯದಾಗಲಿ, ನಿಮ್ಮೂರಿನ ಕಡೆಯದಾಗಲಿ ನಾಟಕ ಯಾವುದಾದರೇನೆಂತೆ ಅದನ್ನು ಬಾಲ್ಯದಲ್ಲಿ ನೋಡುವ ಮಜವೇ ಬೇರೆ. ನಿಮ್ಮ ಲೇಖನ ನನ್ನ ಬಾಲ್ಯ್ದ ನೆನಪನ್ನು ಮರುಕಳಿಸಿದ್ದಕ್ಕೆ ತುಂಬಾ thanks.

Ittigecement said...

ಯಕ್ಷಗಾನ ತನ್ನ ಗಾಢ ಪ್ರಭಾವವನ್ನು ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಾಡಿದೆ. ನನ್ನ ಬೆಂಗಳೂರು ಗೆಳೆಯರೊಬ್ಬರು " ಈ ಎರಡು ಜಿಲ್ಲೆಯವರು ಬುದ್ದಿವಂತರು ಮತ್ತು ತರ್ಕಬದ್ಧವಾಗಿ ಮಾತನಾಡುವದು ಯಕ್ಷಗಾನದ ಪ್ರಭಾವದಿಂದಾಗಿ" ಅನ್ನುವದು ಜ್ನಾಪಕವಾಯಿತು. ಬಾಲ್ಯದ ಅನುಭವ ಚೆನ್ನಾಗಿ ವರ್ಣಿಸಿದ್ದೀರಿ.. ಧನ್ಯವಾದಗಳು..

Jagali bhaagavata said...

ಮಜವಾಗಿದೆ ನಿಮ್ಮ ಕನಸಿನಲ್ಲಿ ಕುಣಿಯುವ ಕಥೆ. ಮತ್ತೆ, ಅದೇ ಗುಂಗಿನಲ್ಲಿ ’ಯುದ್ಧಕ್ಕೆ ಬರ್ತೀಯೋ, ಕಪ್ಪ ಕೊಡ್ತಿಯೋ’ ಅಂತ ಅಮ್ಮನ ಜೊತೆನೋ, ತಮ್ಮನ ಜೊತೆನೋ ಕಾಳಗ ಮಾಡ್ತಿರ್ಲಿಲ್ಲ ತಾನೆ? :-)

Sushrutha Dodderi said...

"..ನಿದ್ದೆ ಅಮಲಿನಲ್ಲಿ ಎದ್ದು ರಾತ್ರಿ ನಡೆದ ಯಕ್ಷಗಾನ ಡೈಲಾಗ್ ಗಳು, ಚಂಡೆ ಬಡಿಯೋದು ಎಲ್ಲವನ್ನು ಮಾಡುತ್ತಿದ್ದ ನಾನು ಕೊನೆಗೆ ಎದ್ದು ಕುಣಿಯುತ್ತಿದ್ದೆ.."
I'm just imagining.. ಹೇಗಿದ್ದಿರಬಹುದು ಆ ಸನ್ನಿವೇಶ ಅಂತ..! :P

ಅಂದಹಾಗೇ, ಬೆಂಗಳೂರಿನಲ್ಲಿ ತಿಂಗಳಿಗೆ ಕನಿಷ್ಟ ಐದಾರು ಯಕ್ಷಗಾನಗಳು ಇದ್ದೇ ಇರ್ತವೆ.. ಅಭಿರುಚಿ ಇದ್ದೋರು ಖಂಡಿತ ಬರಬಹುದು.

Anonymous said...

ನಾನು ಕೂಡ ಯಕ್ಷಗಾನದೊಂದಿಗೇ ಆಡುತ್ತಾಡುತ್ತಾ ಬೆಳೆದವ. ಚೆಂಡೆ ಸದ್ದು ಕೇಳಿದರೆ ಮನದ ರಂಗಸ್ಥಳಲ್ಲಿಯೂ ಪಾತ್ರಗಳು ಹುಚ್ಚೆದ್ದು ಕುಣಿಯುತ್ತವೆ. ಕರಾವಳಿ ಕನ್ನಡಿಗರನ್ನು ಯಕ್ಷಗಾನವೇ ರೂಪಿಸಿತು ಎಂದರೂ ತಪ್ಪಿಲ್ಲ. ನಿದ್ದೆಗೆಡಿಸಿದರೂ ಯಕ್ಷಗಾನ ನಮ್ಮಲ್ಲಿ ತುಂಬಿದ ಜಾಗೃತಪ್ರಜ್ಞೆ ಅನನ್ಯ. ಆದರೆ ಇಂದಿನ ಸ್ಥಿತಿ ಹಾಗಿಲ್ಲ ಎಂಬುದೂ ಅಷ್ಟೇ ಕಟು ಸತ್ಯ.

ಹಳೆಯ ಕಾಲಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ಶರಣು...
ಅವಿನಾಶ್

Chevar said...

ಮತ್ತೆ ಕರಾವಳಿಯ ಮಡಿಲಿಗೆ ಕೊಂಡೊಯ್ದ ಶರಧಿಗೆ ಸೊಲ್ಮೆಲು. ಊರುದ ಆಟದ ಅನೌನ್ಸ್ ಮೆಂಟ್ ಮಸ್ತ್ ಖುಷಿ ಆಂಡ್.
-ಮಹೇಶ್ ಚೇವಾರ್.

ಮಹೇಶ್ ಪುಚ್ಚಪ್ಪಾಡಿ said...

ಇತ್ತೆ ಆಟದ ಅನೌನ್ಸ್ ಮೆಂಟ್ ಊರುಡ್ ಇಜ್ಜತ್ತೇ... ಯಾನ್ ಕೇನಾಂತೆ ಮಸ್ತ್ ಸಮಯ ಆಂಡ್... ರಾಜಕೀಯದ ಅನೌನ್ಸ್ ಕೇಣೊಂದುಂಡು... But ಒಂಜಿ ಸಮಾಧಾನ , ಇತ್ತೆಲಾ ಆಟ ನಡಪುಂಡು...

ಹೆಸರು ರಾಜೇಶ್, said...

ರೀ ಹಾಗಾದ್ರೆ ಬೆಂಗಳೂರಿನ ರೌಡಿಸಮ್ ಸಿನೆಮ ನೊಡಬೇಡಿ, ಆಮೇಲೆ ರಾತ್ರಿ ನಿದ್ದೆಗಣ್ಣಲ್ಲಿ ಲಾಂಗ್ ಎತ್ಕೋಂಡು ಒಡಾಡಿದರೆ ಏನು ಗತಿ...
ಹಾ ಬರಹ ಚನ್ನಾಗಿದೆ. ಎನ್ನಷ್ಟು ನೆನಪುಗಳನ್ನು ಹೆಕ್ಕಿ ಕೊಡಿ.
ಗೆಳೆಯ
ರಾಜೇಶ್

ranjith said...

ಬೆಂಗಳೂರಲ್ಲಿ ಒಂದೆರಡು ಬಾರಿ ಯಕ್ಷಗಾನ ನೋಡಿದ್ದೆ. ಆದರೆ ಅದು ಗದ್ದೆಬಯಲಿನ ಸವಿ ಉಣಿಸಲಿಲ್ಲ.

ನಿಮ್ಮ ತಮ್ಮನ ಕತೆ ಕೇಳಿ ನನ್ನ ಬಾಲ್ಯ ನೆನಪಾಯಿತು..;-)

ಎಡ್ಡೆ ಉಂಡು ಮೀರ್ ಬರೆಪುಣ ಸ್ಟೈಲ್....ಬರೆತೊಂತಿಪ್ಪುಲೆ..:)

ಚಿತ್ರಾ ಸಂತೋಷ್ said...

@ಶಿವಣ್ಣ..ಭಾಳ ಥ್ಯಾಖ್ಸೂ...
@ಪ್ರಕಾಶ್..ಹೌದೌದು..ಕರಾವಳಿಯವ್ರು ಬುದ್ಧಿವಂತರು!
@ಭಾಗವತರೇ, ಅಮ್ಮನ ಜೊತೆಗೆನೇ..ಏಕಂದ್ರೆ ತಮ್ಮ ನಿದ್ದೆ ಹೊಡೀತಾ ಇದ್ದ.
@ಶುಶ್ರುತಣ್ಣ ನಿನ್ನ ಸಲಹೇನ ಶಿರಸಾವಹಿಸಿ ಪಾಲಿಸುವೆನು ಅಣ್ಣಯ್ಯಾ...
@ರಾಜೇಶ್..ಈಗ ಹಾಗೆಲ್ಲ ಮಾಡಲ್ಲ ಗೊತ್ತಾ..?!
@ಚೇವಾರ್, ಅವಿನಾಶ್ ಸರ್ , ಮಹೇಶ್, ರಂಜಿತ್ ...ತುಂಬಾನೇಏಏಏಏಏಏಏಏಏ ಧನ್ಯವಾದಗಳು.
-ಚಿತ್ರಾ

jomon varghese said...

ಹ್ಹಹ್ಹಹ್ಹಹ್ಹ... ಯಕ್ಷಗಾನ ನೋಡಿ ಬಂದು ಮಲಗಿದ ಮೇಲೆ ನಿದ್ರೆಗಣ್ಣಲ್ಲಿ ನಿಜವಾದ ಯಕ್ಷಗಾನ ಪ್ರಾರಂಭವಾಗುತ್ತಿತ್ತಲ್ಲ. ಆ ರಂಗಪ್ರವೇಶ,ಚಂಡೆಮದ್ದಳೆ, ಭಾಗವತಿಕೆ ಊಹಿಸಿಕೊಂಡು ನಗುತ್ತಿದ್ದೇನೆ. ನಿಮ್ಮ ತಮ್ಮ ಮತ್ತು ಅಮ್ಮನಿಗೆ ಮಾತ್ರ ಈ ಯಕ್ಷಗಾನ ನೋಡುವ ಭಾಗ್ಯ ಸಿಕ್ಕಿತಲ್ಲ.. ಯಕ್ಷಗಾನ ಪ್ರಿಯರಿಗೆ ಎಂಥ ಛಾನ್ಸ್ ಮಿಸ್ ಆಯ್ತು! ಮಸ್ತ್ ಬರಹ. ಓದಿಸಿಕೊಂಡು ಹೋಯಿತು.

ಜಿ.ಎಸ್.ಬಿ. ಅಗ್ನಿಹೋತ್ರಿ said...

ಹೌದು ಕಣ್ರಿ...,
ಯಕ್ಷಗಾನ ನೋಡೋ ಹವ್ಯಾಸ ಈಗೀಗ ತೀರ ವಿರಳ. ಆದ್ರೆ ನೀವು ಎಂಟು ವರ್ಷದ ಹಿಂದೆ ನೋಡಿದ್ದನ್ನ ನೆನಪಿಸಿಕೊಂಡು ಬ್ಲಾಗ್ನಲ್ಲಿ ಬರೆದದ್ದು ಖುಷಿಯಾಯಿತು. ಹೀಗೆ ಬರೀತಾ ಇರಿ.
-ಅಗ್ನಿಹೋತ್ರಿ.

ಜಿ.ಎಸ್.ಬಿ. ಅಗ್ನಿಹೋತ್ರಿ said...
This comment has been removed by the author.
Anonymous said...

balyada nenapu marukaliso hagaytu. navella kaddu kaddu yaksagana nodtiddevu. madhyaratri eccharavagisuttidda chandeya sappala matte kiviyalli gungadidantaytu. duggapa gudigarar maddale, navudara gana innu naviragiye iddu. matte yaksalokakke keredoytantyut nimma baraha.

ಚಿತ್ರಾ ಸಂತೋಷ್ said...

@ಜೋಮನ್ ಥ್ಯಾಂಕ್ಯೂ..ಜಾಸ್ತಿ ನಕ್ಕರೆ..! ಏನ್ ಮಾಡ್ತಿನಿ ನೋಡು.
@ ಅಗ್ನಿ ಸರ್..
ಬರೀತಾ ಇರ್ತೀನಿ..ಬರ್ತಾ ಇರಿ.
@ವೈ,ಗ. ಸರ್..ಧನ್ಯವಾದಗಳು
-ಪ್ರೀತಿಯಿಂದ,
ಚಿತ್ರಾ

Pramod said...

ಸಡ್-ಸಡನ್ಲೀ ಶಾಲೆ-ಹೈಸ್ಕೂಲ್ ಎಲ್ಲಾ ನೆನಪಾಯಿತು. ಆಟಕ್ಕೆ ಹೋಗ್ಲಿಕ್ಕೆ ನಾನು ರ೦ಪಾಟ ಮಾಡ್ತಿದ್ದೆ. ಆಟದ್ದು ಮರ್ಲ್ ಜಾಸ್ತಿ ಇತ್ತು :). ಮಧ್ಯರಾತ್ರಿ ಜೋರು ಚಳಿಗೆ ಐಸ್ ಕ್ಯಾ೦ಡಿ ತಿ೦ದದ್ದು,ಚರುಮುರಿ ತಿ೦ದದ್ದು..etc ..etc.

ಚಿತ್ರಾ ಸಂತೋಷ್ said...

@ಪ್ರಮೋದ್...ಥ್ಯಾಂಕ್ಯೂ...ಈಗ ಆಟಕ್ಕೆ ಹೋಗಲ್ವಾ?
-ಚಿತ್ರಾ