Friday, March 20, 2009

ಇದೊಂದು ಸಿಹಿ ಸುದ್ದಿ.....

ನಮ್ ಛಾಯಾಕನ್ನಡಿ ಬ್ಲಾಗ್ ನ ಶಿವಣ್ಣ ಮತ್ತು ಕ್ಯಾಮಾರ ಕಣ್ಣಿನಲ್ಲಿ ಬ್ಲಾಗ್ ನ ಮಲ್ಲಿಕಾರ್ಜುನ ಅವರ ಫೋಟೋಗ್ರಾಫಿ ಬಗ್ಗೆ ನಾ ಹೇಳೋದು ಅಗತ್ಯವಿಲ್ಲ. ಎಲ್ಲಿ ನೋಡಿದ್ರೂ ಬೆನ್ನಲ್ಲಿ ಕ್ಯಾಮರಾ ನೇತುಹಾಕೊಂಡು, ಮಾತಿಗಿಳಿದರೆ ಬರೇ ಫೋಟೋಗ್ರಾಫಿಯ ಬಗ್ಗೆ ಹರಟೆ ಹೊಡೆಯುವ ಈ ಗೆಳೆಯರಿಗೆ ಇದೀಗ ಮತ್ತೊಂದು ಅಂತರ್ ರಾಷ್ಟ್ರೀಯ ಮನ್ನಣೆ! ನಾವೆಲ್ಲಾ ಹೆಮ್ಮೆ ಪಡುವ ವಿಷಯ. ಲಂಡನ್ನಿನ ಪ್ರತಿಷ್ಠಿತ ರಾಯಲ್ ಫೋಟೋಗ್ರಫಿ ಸೊಸೈಟಿಯಿಂದ ಅದರ ಪ್ರತಿನಿಧಿ(Associate) ಎಂಬ ಗೌರವಕ್ಕೆ ಇವರು ಪಾತ್ರರಾಗಿದ್ದಾರೆ.
ಈವರೆಗೆ ರಾಯಲ್ ಫೋಟೋಗ್ರಫಿ ಸೊಸೈಟಿಯ ಈ ಗೌರವಕ್ಕೆ ೧೩೨ ಭಾರತೀಯರು ಪಾತ್ರರಾಗಿದ್ದಾರೆ. ಈ ವರ್ಷ ವಿಶ್ವದಾದ್ಯಂತ ಈ ಮನ್ನಣೆ ೨೯ ಜನ ಛಾಯಾಗ್ರಾಹಕರಿಗೆ ಸಿಕ್ಕಿದೆ. ಅದರಲ್ಲಿ ಭಾರತೀಯರು ಇವರಿಬ್ಬರು ಮಾತ್ರ ಎನ್ನುವುದು ಖುಷಿಯ, ಹೆಮ್ಮೆಯ ವಿಚಾರ. ಮೇರಾ ಭಾರತ್ ಮಹಾನ್! ಅಭಿನಂದನೆಗಳು..ಎಲ್ಲಾ ಬ್ಲಾಗಿಗರ ಪರವಾಗಿ ಪ್ರೀತಿಯ ಅಭಿನಂದನೆಗಳು.
ಹೆಚ್ಚಿನ ಮಾಹಿತಿಗೆ: http://avadhi.wordpress.com

Saturday, March 7, 2009

'ಮೈ ಆಟೋಗ್ರಾಫ್' ಪುಟಗಳಿಂದ...

ನನ್ನೆದೆಯ ಮಾತು ಇದೆ..
ಅಮ್ಮ ಕಲಿಸಿದ ಹಾಡು ಇದೆ
ಆ ಹಾಡಿನ ತೋಟದಲಿ
ನೀವು ಬೆಳೆಸಿದ ಹೂವು ಇದೆ...
ಈ ಹೃದಯ ಬಯಸುವುದು ಪ್ರೀತಿಸುವ ಹೃದಯವನ್ನು..! ಎಂದು ಮುದ್ದಾದ ಅಕ್ಷರಗಳಲ್ಲಿ ಬರೆದುಬಿಟ್ಟು ನನ್ನ ಪ್ರೀತಿಗೆ 'ಕಾಲೇಜಿಗೆ' ಸುಂದರವಾದ ಪುಸ್ತಕವನ್ನು ನೀಡಿದ್ದೆ...ಅದು 'ಮೈ ಆಟೋಗ್ರಾಫ್'! ಅಮ್ಮನೊಂದಿಗೆ ಮುನಿಸಿಕೊಂಡು ಮನಸ್ಸು ಭಾರವಾದಗ, ಕಾಲೇಜಿನ ಹಳೇ ನೆನಪುಗಳು ನನ್ನ ಕಾಡಿದಾಗ, ಮನೆಯಲ್ಲಿ ಅಣ್ಣ-ತಮ್ಮ ನ ಜೊತೆ ರಚ್ಚೆ ಹಿಡಿದು ಬೈಸಿಕೊಂಡು ಮೌನಕ್ಕೆ ಶರಣಾದಾಗ, ಪವರ್ ಕಟ್ ಆಗಿ ಮನೆಯೊಳಗೆ ಕ್ಯಾಂಡಲ್ ಉರಿಸಿ ಕುಳಿತಿದ್ದಂತೆ ನನ್ನ ಸುತ್ತುಹಾಕುವ ನೆನಪುಗಳ ಜೊತೆ ಮಾತಿಗಿಳಿದಾಗ, ಏಕಾಂತದಲ್ಲಿ ಭಾವನೆಗಳು ನನ್ನ ಮುತ್ತಿಕ್ಕಿದ್ದಾಗ..ನಾನು ಕೈಗೆತ್ತಿಕೊಳ್ಳುವುದು 'ಮೈ ಆಟೋಗ್ರಾಫ್'..!! ಹರಿದು ಚಿಂದಿ ಚಿತ್ರಣ್ಣವಾಗಿರುವ ಆ ನೆನಪಿನ ಹೊತ್ತಗೆಯ ಪುಟಗಳನ್ನು ಮತ್ತೆ ಜೋಡಿಸುತ್ತಾ...ನೋಡ್ತೀನಿ. ಅದೇ 'ಮೈ ಆಟೋಗ್ರಾಫ್'!

ಕನಸ ಕಸುವೂ ಬೇಕು
ಯಶದ ಹಾದಿಯ ಹೆಜ್ಜೆಗೆ
ಬಯಕೆ ಬಯಲು ಎರಡೂ ಬೇಕು
ಸಾಧನೆಯ ಕಾಲ್ಗೆಜ್ಜೆಗೆ...

ನನ್ನ ತುಂಬಾ ಪ್ರೀತಿಸಿದ, ಇಂದಿಗೂ ನನ್ನೆಲ್ಲಾ ಕನಸುಗಳಿಗೆ ಜೀವ ತುಂಬುತ್ತಾ ಬರುವ ಪ್ರೀತಿಯ ಮೇಡಂ ಶುಭದಾಸ್ ಮರವಂತೆ ಬರೆದ ನಾಲ್ಕು ಸಾಲುಗಳು ನನ್ನ ಹೊತ್ತಗೆಯ ಮೊದಲ ಪುಟದಲ್ಲೇ ಸ್ವಾಗತಿಸುತ್ತವೆ. ನನ್ನ ಮುದ್ದಾದ ಅಕ್ಷರಗಳನ್ನು ಕಂಡು ಹೆಮ್ಮೆಪಡುತ್ತಿದ್ದ ನಾಗಣ್ಣ ಸರ್, ನಿತ್ಯ ವಿಧೇಯತೆಯ ಪಾಠ ಹೇಳುತ್ತಾ ಬೆನ್ನುತಟ್ಟುತ್ತಿದ್ದ ಸಂಪತ್ ಸರ್...ಹಿತನುಡಿಗಳು.
'ಸವಿನೆನಪುಗಳು ಸಾವಿರವಿದ್ದರೂ, ಮನದೊಳಗೆ ನಿನಗೊಂದು ಮನೆಯಿದೆ ಗೆಳತೀ..'ಎಂದು ಸವಿಸವಿ ಮಾತುಗಳನ್ನು ಗೀಚಿದ ಸ್ನೇಹಿತರು, ನಿತ್ಯ ಅಕ್ಕಾ ..ಅಕ್ಕಾ..ಎಂದು ಹಿಂಬಾಲಿಸುತ್ತಿದ್ದ ನನ್ನ ತಮ್ಮ-ತಂಗಿಯರ ಎಂಥೆಂಥ ಸವಿನುಡಿಗಳು..ಪ್ರೀತಿಯ ಜೊತೆಜೊತೆಗೆ.
20 ಪುಟಗಳನ್ನು ಮೊದಲೇ ಮೀಸಲು ಎಂದು ಬರೆದಿಟ್ಟ ಆ ನನ್ನ ಗೆಳತಿ ಕವಿತಾ, ಹಾಸ್ಟೇಲಿನಿಂದ ಗಂಟುಮೂಟೆ ಕಟ್ಟಿಕೊಂಡು ಹೊರಡೋ ಮುಂಚಿನ ದಿನ..ಕರೆಂಟಿಲ್ಲದೆ ಕ್ಯಾಂಡಲ್ ಬೆಳಕಿನಡಿಯಲ್ಲಿಯೇ ಪುಟತುಂಬಿಸಿದ್ದಳು. ಆದರೆ ಮದುವೆಯ ಬಳಿಕ ಫೋನು ಮಾಡದಿದ್ದರೂ..ಮೊನ್ನೆ ಮೊನ್ನೆ ಅವಳಿಗೆ ಹೆಣ್ಣು ಮಗುವಾದಾಗ ಅವಳ ಗಂಡನೇ ಫೋನು ಮಾಡಿ ಖುಷಿಸುದ್ದಿ ತಿಳಿಸಿಬಿಟ್ಟರು. 'ಇಷ್ಟವಾಗದನ್ನು ಕಷ್ಟದಿಂದಲೇ ಸಹಿಸಿ, ಕಷ್ಟವೇ ಇಷ್ಟವೆಂಬಂತೆ ಬದುಕುವ ಕಲೆ ಹೇಗೆ ಕಲಿತೆ, ನನಗೂ ಕಲಿಸಿಕೊಡು ಅಕ್ಕಾ' ಎಂದು ನಾಲ್ಕು ಪುಟ ಭಾವದನಿಗಳನ್ನು ಬಿಚ್ಚಿಟ್ಟ ನನ್ನ ಪ್ರೀತಿಯ ತಮ್ಮ ಪಚ್ಚು...ಈಗಲೂ ಮೈಸೂರಿನಿಂದ ಫೋನು ಮಾಡಿ ಸಂತೋಷಗೊಳಿಸುತ್ತಾನೆ. ಕಾಲೇಜು ಕ್ಯಾಂಪಸ್ ನಲ್ಲಿ ನಿತ್ಯ ಹೊಡೆದಾಡುತ್ತಿದ್ದ ಪ್ರೀತಿಯಿಂದ ದಿನಾ ಕಿವಿಹಿಂಡುತ್ತಿದ್ದ ನನ್ನ ತುಂಬಾ ಪ್ರೀತಿಸುವ ಮುದ್ದು ತಮ್ಮ ಸಂದೇಶ ಈಗಲೂ ನನ್ನ ಮಡಿಲಲ್ಲೇ ಇದ್ದಾನೆ ಅನ್ನೋ ಬೆಟ್ಟದಷ್ಟು ಖುಷಿ ನನಗೆ.
ದಿನಾ ಮಧ್ಯಾಹ್ನದ ಕ್ಲಾಸಿನಲ್ಲಿ ಅಕ್ಕರೆಯಿಂದ ಚಾಕಲೇಟು ನೀಡುತ್ತಿದ್ದ, ಜಗಳವಾಡುತ್ತಿದ್ದ ಗೆಳೆಯ ಸುದರ್ಶನ್ ಬೆಂಗಳೂರಿನಲ್ಲೇ ಇದ್ದರೂ ಫೋನು ಕರೆಗೂ ಬರ..ಫೋನ್ ಮಾಡಿದರೂ ರಿಸೀವ್ ಮಾಡಲಾಗದಷ್ಟು ಬ್ಯುಸಿಯಾಗಿದ್ದಾನೆ. "ಬದುಕು ಇರುವುದು ಬಾಳುವುದಕ್ಕಾಗಿ...ಬಾಳು ಇರುವುದು ಬೆಳೆಯುವುದಕ್ಕಾಗಿ" ಎಂದು ಸುಂದರ ಬದುಕಿಗೆ ಶುಭಹಾರೈಸುತ್ತಾ ನೆನಪಿನ ಹೊತ್ತಗೆಯಲ್ಲಿ ಚಂದದ ಅಕ್ಷರಗಳಿಂದ ಬರೆದಿಟ್ಟ ನಿತ್ಯ ಅಪರೂಪಕ್ಕೊಮ್ಮೆ ನಗುತ್ತಿದ್ದ ಪ್ರೀತಿಯ ಗೆಳೆಯ ವೃಷಭ್ ಈಗಲೂ ಪುರುಸೋತ್ತಿನಿಂದ ಸವಿದನಿಗಳಿಗೆ ಕಿವಿಯಾಗುತ್ತಾನೆ. "ಹುಡುಗಿಯರು ಕೊರಳಿಗೆ ಹಾಕುತ್ತಾರೆ ಮಣಿಸರ...
ಆದ್ರೆ ಹುಡುಗರು ಡೈಲಿ ಹಾಕುತ್ತಾರೆ 'ಗಂಗಸರ'..
ಚಿತ್ರಾ ನಿನ್ನ ಬಿಟ್ಟಿರುವ ಕಿಂಚಿತ್ತೂ ತಾಕತ್ತು ನಂಗಿಲ್ಲ" ಎಂದು ಪೋಲಿ ಜೋಕುಗಳನ್ನು ತೇಲಿಬಿಟ್ಟ ಗೆಳೆಯ ರೋಹನ್, ಈಗ ಎಲ್ಲಿದ್ದಾನೋ ದೇವರೇ ಬಲ್ಲ. ದಿನಾ ನನಗೆ ಕೀಟಲೆ ಮಾಡು ಗುದ್ದು ತಿನ್ನುತ್ತಿದ್ದ ತರಗತಿಯ ಲಂಭು ಸಂತೋಷ ಇತ್ತೀಚೆಗೆ 'ನಿನ್ನ ಯಾವ ಹುಡುಗನೂ ಎತ್ತಹಾಕ್ಕೊಂಡು ಹೋಗಿಲ್ವಾ?' ಅಂತ ನಕ್ಕುನಗಿಸಿದ್ದ.
ಹಾಸ್ಟೇಲಿನಲ್ಲಿ ನಿತ್ಯ ನನ್ನ ಕೀಟಲೆ, ಪೋಲಿ ಜೋಕುಗಳಿಗೆ ಸಾಥ್ ನೀಡುತ್ತಿದ್ದ ಗೆಳತಿ ಚಿತ್ರಕಲಾ ಮರೆಯದೆ ಇತ್ತೀಚೆಗೆ ಮದುವೆಗೆ ಕರೆದಿದ್ದಳು. 'ತಾಳಿ ಕಟ್ಟುವ ಶುಭವೇಳೆ...ಬರಲಿ ಎನಗೊಂದು ಪ್ರೀತಿಯ ಕರೆಯೋಲೆ' ಎಂದು ಗೀಚಿಟ್ಟ ಗೆಳತಿ ಗೀತಾನಿಗೆ ಮದುವೆಯಾಗಿದೆಯೋ ಗೊತ್ತೇ ಇಲ್ಲ. ನನ್ನ ಬರವಣಿಗೆಗಳಿಗೆ ದಿನಾ ಬೆನ್ನುತಟ್ಟುತ್ತಿದ್ದ, 'ಭವಿಷ್ಯದಲ್ಲಿ ನಿನ್ನ ನಾ ಬರಹಗಾರ್ತಿಯಾಗಿ ನೋಡಬೇಕು 'ಎಂದು ಶುಭಹಾರೈಸಿದ ಮೂರನೇ ಬೆಂಚಿನ ಗೆಳತಿ ರಜನಿ,..ವಿಳಾಸ ಬರೆಯುವುದನ್ನು ಮರೆತುಬಿಟ್ಟಿದ್ದು ಮನಸ್ಸಿಗೆ ತುಂಬಾ ನೋವಾಗುತ್ತೆ. 'ಚಿತ್ರಾ ನಿನ್ನ ಹೇಗೆ ನಾ ಬಿಟ್ಟಿರಲೀ?' ಎಂದು ಅತ್ತು ವಿದಾಯ ಹೇಳಿದ ಗೆಳತಿ ಶ್ರುತಿ ಈಗ ಇಲ್ಲೇ ದಾರಿ ನಡುವೆ ಸಿಕ್ಕರೂ ಮತನಾಡಿಸಲೂ ಅವಳಿಗೆ ಪುರುಸೋತ್ತಿಲ್ಲ. ಹಾಸ್ಟೇಲಿನಲ್ಲಿ ನನ್ನ ಬೆಡ್ ಶೀಟ್ ಒಳಗಡೆ ಹುದುಗಿ ಮಲಗುತ್ತಿದ್ದ ನನ್ನ ಮುದ್ದು ತಂಗಿ ಪ್ರತಿಮಾನಿಗೆ ಈಗಲೂ ಫೋನ್ ಮಾಡಿ ಮಾತನಾಡದಿದ್ದರೆ ನಿದ್ದೆನೇ ಬರಲ್ಲ...ಇದು 'ಮೈ ಆಟೋಗ್ರಾಫ್'!
ಅಬ್ಬಾ..! ಇಷ್ಟು ನೆನಪುಗಳು ಗರಿಗರಿಯಾಗಿ ಬಿಚ್ಚಿ..ಬರೆದು ಮುಗಿಸಿದಾಗ ನಿನ್ನೆ ರಾತ್ರಿ ೧೨ ಗಂಟೆ. 'ಭಾವಸಂಗಮ' ದ ಹಾಡುಗಳು ಒಂದು ರೌಂಡು ಮುಗಿದು ..ಎರಡನೇ ರೌಂಡು ಶುರುವಾಗಿತ್ತು. ತಮ್ಮ ಸಂದೇಶ 'ಅಕ್ಕಾ, ಮಲಗು..ನಾಳೆ ಚಪಾತಿ-ಪಲ್ಯ ಮಾಡಬೇಕು..ಬೇಗ ಏಳಬೇಕು' ಅಂತ ಪದೇ ಪದೇ ಅಲಾರಂ ಥರ ತಡಬಡಿಸುತ್ತಿದ್ದ. ಅವನ ಮೇಲೆ ಪ್ರೀತಿಯಿಂದ ರೇಗುತ್ತಲೇ ನಿದ್ದೆಗೆ ಜಾರಿದೆ.
ಫೋಟೋ; ವ್ವ್ವ. flickr.com

Wednesday, March 4, 2009

ಸಾಗರದಾಚೆಯ ಅಣ್ಣನಿಗೆ....

ಲೇ ಅಣ್ಣಾ..
ನಾನು-ನೀನು ಕಣ್ಣ ಮುಚ್ಚೆ ಆಡಲಿಲ್ಲ, ಗಾಡೇ ಗೂಡೇ ಅನ್ನಲಿಲ್ಲ. ಬಣ್ಣದ ಗಾಳಿಪಟ ಹಾರಿಸೇ ಇಲ್ಲ. ಜೊತೆ-ಜೊತೆಯಾಗಿ ವಾಕಿಂಗ್ ಹೋಗೇ ಇಲ್ಲ. ಇಬ್ಬನಿ ಹನಿಬಿಂದು ನೋಡಿ ಖುಷಿಪಟ್ಟಿ;ಲ್ಲ. ಎಸ್ಎಂಎಸ್ ಗಳ ಹರಟೆ ಮಾಡೇ ಇಲ್ಲ. ಸಂಜೆ ಹೊತ್ತಿನಲ್ಲಿ ತಿಳಿಬಾನಲ್ಲಿ ಹಾರಾಡೋ ಪಾರಿವಾಳ ನೋಡಿ ನಕ್ಕುನಲಿಯಲೇ ಇಲ್ಲ. ಆದ್ರೂ ನಿನ್ನ ಕಂಡರೆ ನಂಗೆ ಅಕ್ಕರೆ, ಪ್ರೀತಿ, ಅಭಿಮಾನ, ಗೌರವ. ನಿನ್ನನ್ನು ಅಣ್ಣಾ ಅಂತ ಕೂಗೋದು ಏನೋ ಮನಸ್ಸಿಗೆ ಹಿತ, ಖುಷಿ. ನಿಂಗೂ ಅಷ್ಟೇ ನಾನಂದ್ರೆ ಇಷ್ಟ ಆಲ್ವಾ?

ನೀನು ನನ್ನ ತಂಗೀ ಅಂತ ಕೂಗುವಾಗ ನಾನೂ ಖುಷಿಗೊಳ್ಳುತ್ತೇನೆ. ನಂಗೂ ಒಬ್ಬ ಅಣ್ಣ ಸಿಕ್ಕಿದ್ದಾನೆ ಅಂತ ಹಿರಿಹಿರಿ ಹಿಗ್ಗುತ್ತೇನೆ. ನಿನ್ನ ಪ್ರೀತಿಯಲ್ಲೇ ತೊಯ್ದು ಬಿಡುತ್ತೇನೆ. ಆ ಖುಷಿಯಲ್ಲಿ ನಿನ್ನ ನಾ ತುಂಬಾ ಪ್ರೀತಿಸುವ ತಂಗೀ ಅಂತ ಜೋರು ಬೊಬ್ಬಿಡಬೇಕು ಅನಿಸುತ್ತೆ. ಆದರೆ, ಬೇಡ..ಪ್ರೀತಿನ ಹೇಳಿಕೊಳ್ಳಬಾರದು ಎಂದನಿಸಿ ಸುಮ್ಮನಾಗುತ್ತೇನೆ. ಮೌನವಾಗಿ ನಿನ್ನ ಪ್ರೀತಿನ ಸವಿಯುತ್ತಿದ್ದೇನೆ ಕಣಣ್ಣಾ. ನೀನು ಫೋನು ಮಾಡಿದಾಗ ..ಅದೂ ಮೊದಲ ಬಾರಿಗೆ ನೀ ಫೋನ್ ಮಾಡಿದಾಗ ಸ್ವರ್ಗಕ್ಕೆ ಮೂರೇ ಗೇಣು..ಅಷ್ಟು ಖುಷಿಗೊಂಡೆ ಗೊತ್ತಾ?! ಆ ಕ್ಷಣ ಅಮ್ಮನ ಮಡಿಲಲ್ಲಿ ಮುಖ ಹುದುಗಿಸಿ ಖುಷಿ ಪಟ್ಟಂತೆ ಆಯ್ತು. ನೀ ನನ್ನ ನೋಡಲೇ ಇಲ್ಲ ಅಲ್ವಾ..ನಾನೆಷ್ಟು ದೊಡ್ಡದಿದ್ದೀನಿ ಗೊತ್ತಾ?
ಅಣ್ಣಾ..ದಿನಾ ನೀ ಸಣ್ಣಗಾಗು ಅಂತೀನಿ. ಡುಮ್ಮಣ್ಣ ಅಂತ ರೇಗಿಸ್ತೀನಿ. ನೋಡು..ನೀ ಸಣ್ಣಗಾಗು ಸಣ್ಣಗಾಗು ಅನ್ನುತ್ತಲೇ ನಾ ದಪ್ಪ ಆಗಿಬಿಟ್ಟಿದ್ದೀನಿ. ಬಹುಶಃ ನೀ ಕಲಿಸಿದ ಅಡುಗೆ ಪರಿಣಾಮವೇ ಆಗಿರಬೇಕು. ಎಲ್ರೂ ನನ್ನ ಡುಮ್ಮಿ ಅಂದಾಗ ಅಣ್ಣನತ್ರ ದೂರು ಹೇಳ್ತೀನಿ ಅಂತ ಬೈತೀನಿ. ಅದಕ್ಕೆ ಭಾರತಕ್ಕೆ ಬೇಗ ಬಂದುಬಿಡಣ್ಣ. ಈಗಲೇ ನೀನು ನನ್ನೆದುರು ಬಂದು ಬಿಡು ಅಂತ ರಚ್ಚೆಹಿಡಿಯಬೇಕು ಅನಿಸುತ್ತೆ. ಆದರೆ, ನೀನಿದ್ದಲ್ಲಿಂದ ಇಲ್ಲಿ ಬರೋದು ಎಷ್ಟು ದೂರ ಅಲ್ವಾ? ಆದ್ರೂ ಬೇಗ ನನ್ನ ನೋಡಕ್ಕೆ ಬರ್ತಿಯಾ ಅಂದುಕೊಂಡಿದ್ದೀನಿ. ಬರದಿದ್ರೆ ನಿನ್ನ ಜೊತೆ ನಾ ಟೂ ಟೂ ಬಿಡ್ತೀನಿ ನೋಡು. ನೀ ಬಂದಾಗ ನಿನ್ನ ಕೈಯಿಂದ ನನ್ನ ಪ್ರೀತಿಯ ಕಪ್ಪು ಹ್ಯಾಟ್ ತೆಗೆಸಿಕೊಳ್ಳಬೇಕು. ಚಾಕಲೇಟು ಗಿಟ್ಟಿಸಿಕೊಳ್ಳಬೇಕು. ಫೋಟೋ ತೆಗೆಸಿಕೊಳ್ಳಬೇಕು. ನಿನ್ನ ಜೊತೆ ವಾಕಿಂಗ್ ಹೋಗಬೇಕು. ನೀ ಕಲಿಸಿದ ಅಡುಗೆ ಗಳನ್ನು ನಿನ್ನೆದುರಲ್ಲೇ ಮಾಡಿತೋರಿಸಬೇಕು. ನಿನ್ನ ಬಾಯಿಂದ ಆಗಾಗ 'ಟ್ಯೂಬ್ ಲೈಟ್' ಅಂತ ಕರೆಸಿಕೊಳ್ಳಬೇಕು. ನಿನ್ನ ಜೊತೆ ಲಗೋರಿಯಾಟ ಆಡಬೇಕು. ನನ್ನ ಡುಮ್ಮಿ ಅಂತ ಕರೆದವರಿಗೆ ಎಲ್ಲಾ ನಿನ್ನ ಬಾಯಲ್ಲಿ ಬೈಸಬೇಕು. ಒಟ್ಟಿನಲ್ಲಿ ನಿನ್ನ ಜೊತೆಗೆ ನಾ ಖುಷಿಖುಷಿ ಕ್ಷಣಗಳನ್ನು ಕಳೆಬೇಕು..ನೀನು ನನ್ನ ಅಣ್ಣಂತ ಎಲ್ಲರೆದುರು ಹೇಳಿಕೋಬೇಕು. ಲೇ ಅಣ್ಣಾ..ಇನ್ನೂ ಹೇಳಕ್ಕಿದೆ..ಇವತ್ತಿಗೆ ಇಷ್ಟು ಸಾಕು. ನೀ ನಕ್ಕಾಗ, ನೀ ಅತ್ತಾಗ..ನಿನ್ನ ಜೊತೆ ನಾನಿರ್ತೀನಿ. ನನ್ನೆದುರೇ ನಕ್ಕುಬಿಡು..ಅಳಬೇಕಾಂದ್ರೂ ನನ್ನೆದುರೇ ಅತ್ತುಬಿಡು. ನಾ ನಿನಗೆ ಕಿವಿಯಾಗುತ್ತೇನೆ. ಮರೀಬೇಡ..ನಿನ್ನ ಹಿಂದೆ ನೆರಳಂತೆ ನಾನಿರ್ತೀನಿ...ನಿನ್ನ ತುಂಬಾ ಪ್ರೀತಿಸುವ ತಂಗಿಯಾಗಿ..! ನಿದ್ದೆ ಬರುತ್ತಿದೆ..ನಾ ಮಲಗ್ತೀನಿ..ಬೊಗಸೆ ತುಂಬಾ ಪ್ರೀತಿ ನಿನಗಾಗಿ ಇಟ್ಟಿದ್ದೀನಿ...ತಕೋತಿಯಲ್ಲಾ..!!
ಇಂತೀ,
ನಿನ್ನ
ಪೋಟೋ: ವ್ವ್ವ. flickr.com

Friday, February 27, 2009

ಥರಗುಟ್ಟುವ ಚಳಿಯಲ್ಲಿ ಆ ಬಾಲಕ ಬೂದಿಯಲ್ಲಿ ಮಲಗಿದ್ದ..!!

ಜ್ವರದಿಂದ ತಲೆಭಾರ, ನೆನಪುಗಳಿಂದ ಅದೇಕೋ ಮನಸ್ಸು ಭಾರ. ಆದರೆ ಸಂಜೆಯ ತಂಪಿನಲ್ಲಿ ಪಡುವಣದಿ ಮುಳುಗುತ್ತಿದ್ದ ನೇಸರನನ್ನು ನೋಡುತ್ತಿದ್ದಂತೆ ಮನಸ್ಸೇಕೋ ಖುಷಿ, ಖುಷಿ. ಮನೆಯ ಟೆರೇಸ್ ಮೇಲೆ ಹೋಗಿ ನಿಂತರೆ, ಅದೇ ಖುಷಿ ನೀಡುವ ತಂಗಾಳಿ. ಗೂಡು ಸೇರುವ ಹಕ್ಕಿಗಳ ಕಲರವ. ಪುಟ್ಟ ಬಾಲಕನೊಬ್ಬ ತಾನು ಸಾಕಿದ ಪಾರಿವಾಳ ಜೊತೆ ಆಟವಾಡುತ್ತಿದ್ದ. ಕೆಳಗಡೆ ನೋಡಿದರೆ ರಾಶಿ ಮರಳ ಮೇಲೆ 'ಮರಳಾಗಿ' ಆಡುವ ಮಕ್ಕಳು, ಬ್ಯಾಟ್ ಹಿಡಿದು ಸಚಿನ್, ಗಂಗೂಲಿ ಕನಸು ಕಾಣುವ ಕಂದಮ್ಮಗಳು. ಇನ್ನೊಂದೆಡೆ ಇವೆಲ್ಲವನ್ನೂ ಅಕ್ಕರೆಯಿಂದ ನೋಡುತ್ತಾ ಅಚ್ಚರಿಪಡುವ 'ಚಿಂದಿ' ಪುಟಾಣಿಗಳು.

ಹೌದು, ಅಂದು ನನ್ನ ಹೃದಯ ಕಣ್ಣೀರಾದ ದಿನ. ಬದುಕಿನ ಇನ್ನೊಂದು ಮುಖವನ್ನು ನೋಡಿ ಬದುಕೆಂದರೆ ಹೀಗೂ ಇರುತ್ತಾ? ಎಂದು ಬೆರಗುಗಣ್ಣಿಂದ ಮಗುವಿನಂತೆ ಪಿಳಿಪಿಳಿ ನೋಡುತ್ತಾ ನಿಂತ ದಿನ, ಘಟನೆ ನೆನೆಸಿಕೊಂಡಾಗ ಈಗಲೂ ಮನ ಅಳುತ್ತೆ. ಅಸಹಾಯಕಳಾಗಿ ಮೌನವಾಗಿ ಮನ ರೋಧಿಸುತ್ತದೆ. ನವೆಂಬರ್ 3, 2006! ಮಲ್ಲೇಶ್ವರದ ದೇವಯ್ಯ ಪಾರ್ಕ್ ಬಳಿ ಇರುವ ರೈಲುಮಾರ್ಗ..ಕಸ ಕಡ್ಡಿ, 'ಬೇಡ'ದೆಲ್ಲವನ್ನೂ ತನ್ನೊಳಗೆ ತುಂಬಿಸಿಕೊಳ್ಳುವ ಜಾಗ ಅದು. ಏಳೆಂಟು ವರ್ಷದ ಪುಟ್ಟ ಬಾಲಕ. ಕಣ್ಣಲ್ಲಿ ಮುಗಿಲು ಮುಟ್ಟುವ ಕನಸು ತುಂಬಿಕೊಂಡಿದ್ದ. ಹರಿದ ಬಟ್ಟೆ ಮೈಮೇಲೆ. ಮಲದ ಬದಿಯಲ್ಲಿದ್ದ ಇಡ್ಲಿ ತುಂಡನ್ನು ಹೆಕ್ಕಿ ತಿನ್ನುತ್ತಿದ್ದ!! ನನ್ನೆರಡೂ ಕಣ್ಣುಗಳು ಒಂದು ಕ್ಷಣ ಮುಚ್ಚಿಕೊಂಡಿದ್ದವು. ತೆರೆದು ನೋಡಿದಾಗ 'ಅಕ್ಕಾ..'ಎನ್ನುತ್ತಾ ನನ್ನೆದುರು ಕೈಚಾಚಿದ್ದ. ವಾಸ್ತವದ ಇನ್ನೊಂದು ಮುಖ. ಅಲ್ಲೇ ಇರುವ ಇರುವ ಶಾಂತಿಸಾಗರ ಹೊಟೇಲಿನಲ್ಲಿ ದೋಸೆ ಕೊಡಿಸಿದೆ. ಒಂದಲ್ಲ..ಎರಡಲ್ಲ..ಮೂರು ದೋಸೆಗಳನ್ನು ತಿಂದ!! ಪ್ರೀತಿಯಿಂದ ತನ್ನೆರಡೂ ಕಣ್ಣುಗಳನ್ನು ತೆರೆದು ನನ್ನತ್ತಾ ನೋಡುತ್ತಾ ನಿಂತ...ಯಾವುದೋ 'ಹೆಸರಿಡದ ಸಂಬಂಧಿಕನಂತೆ'!!

ಆಗಸ್ಟ್ 14. ಅಂದು ಜೀವನದ ಮೊದಲ ಬಾರಿಗೆ ನಾವು ಹಂಪಿಗೆ ಹೊರಟ ದಿನ. ಥರಗುಟ್ಟುವ ಚಳಿ. ಆಕಾಶದಲ್ಲಿ ಚಂದ್ರ, ನಕ್ಷತ್ರಗಳು ಕಾಣುತ್ತಿಲ್ಲ. ಮೋಡಗಳ ಮೇಲಾಟಗಳೂ ಗೋಚರಿಸುತ್ತಿಲ್ಲ. ಚಿತ್ರದುರ್ಗದಿಂದ ಮುಂದೆ ಸಾಗುತ್ತಿದ್ದಂತೆ ಗಣಿಲಾರಿಗಳ ಧೂಳು, ಆವೇಗ.!ವೇಗದಿಂದ ಎದುರಿಗೆ ಬರುತ್ತಿದ್ದ ಲಾರಿಗಳನ್ನು ನೋಡಿ ನಮ್ಮ ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದೆವು. ಚಳಿಗೆ ಮೈ ಬೆಚ್ಚಗಾಗಿಸುವಾಸೆ. ಅಲ್ಲೇ ಒಂದು ಟೀ ಅಂಗಡಿ. ಟೀ ಅಂಗಡಿ ಮಾಲೀಕ ಗೊರಕೆ ಹೊಡೆಯುತ್ತಿದ್ದರೆ, ಇತ್ತ ಒಬ್ಬ ಬಾಲಕ ನಿದ್ದೆಯ ಮಂಪರಿನಲ್ಲಿ ತೂಕಾಡಿಸುತ್ತಿಸಿದ್ದ. ಮತ್ತೊಮ್ಮೆ ಬಾಲಕ ..???! ಬೂದಿಯಲ್ಲಿ ಮಲಗಿದ್ದ. ನಾವು ಹೋದ ಕೂಡಲೇ ಮಾಲೀಕ ಆ 'ಬೂದಿ ಬಾಲಕ'ಕನನ್ನು ಎಬ್ಬಿಸಿದ..ಇಲ್ಲ, ಆತ ಏಳಲೇ ಇಲ್ಲ. ಅಲ್ಲೇ ಇದ್ದ ಕೋಲಿನಲ್ಲಿ ಹೊಡೆದೇಬಿಟ್ಟ..! ಎದ್ದ..'ಬೂದಿ ಬಾಲಕ'..ಕಂಣ್ಣೊರೆಸಿಕೊಂಡು!!..ಕಾಲೆಳೆಯುತ್ತಲೇ ಬಂದು..ಟೀ ತಂದುಕೊಟ್ಟ. ಟೀ ಕುಡಿಯುವ ಬದಲು..ಆ ಬಾಲಕನ ಕಣ್ಣುಗಳನ್ನೇ ನೋಡುತ್ತಿದ್ದೆ...ಅಲ್ಲಿ ಆಪ್ತತೆಯಿತ್ತು, ಪ್ರೀತಿಯಿತ್ತು..ಅಸಹಾಯಕತೆಯಿತ್ತು., ಸಾವಿರ ಕನಸುಗಳ ಆಶಾಗೋಪುರ ಇತ್ತು..ಆದರೆ 'ಬದುಕಿರಲ್ಲಿಲ್ಲ'!!!

ಮೊನ್ನೆ ಮೊನ್ನೆ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರಕ್ಕೆ ಆಸ್ಕರ್ ಬಂತು...ಅದಕ್ಕೆ ಸಿಕ್ಕ ಪ್ರಚಾರ, ಆಸ್ಕರ್, 'ಕೊಳಗೇರಿ' ಮಕ್ಕಳೂ ಆಚರಿಸಿದ ಆ ಸಂಭ್ರಮದ ಕ್ಷಣಗಳನ್ನು ಕಂಡಾಗ ಯಾಕೋ ಮೇಲಿನ ಘಟನೆಗಳು ನೆನಪಾದುವು. ಆಸ್ಕರ್ ಬಂದ ಖುಷಿಯ ಭರದಲ್ಲಿ ಸೋನಿಯಾ ಗಾಂಧಿ, 'ಈ ಚಿತ್ರ ನಮಗೆ ಸ್ಪೂರ್ತಿ' ಎಂದರೆ ,. ಮಹಾರಾಷ್ಟ್ರ ಸರ್ಕಾರ, ಸ್ಲಂ ಡಾಗ್ ನಲ್ಲಿ ಅಭಿನಯಿಸಿದ ಬಾಲಕಲಾವಿದರಿಗೆ ಫ್ಲಾಟ್ ಒದಗಿಸುವ ಭರವಸೆ ನೀಡಿದ್ದಾರೆ..ಥೇಟ್ 'ಶರದ್ ಪವಾರ್' ನಂತೆ!! ಆಸ್ಕರ್ ಬಂದಿರುವುದಕ್ಕೆ ನನ್ನದೇನೂ ಅಭ್ಯಂತರವಿಲ್ಲ..ಆದರೆ, ಈ ಸ್ಲಂ, ಈ ಬದುಕು, ಚಿಂದಿ ಪುಟಾಟಿಗಳು, ಅವರ ಕನಸುಗಳು, ಕಕ್ಕುಲತೆ...ಜೀವ ಹಿಂಡುವ ಬದುಕು, ಸರ್ಕಾರ ನೀಡಿರುವ ಭರವಸೆಗಳು, ವಿಜಯೋತ್ಸವ....ಯಾಕೋ ನನ್ನೊಳಗೊಂದು 'ನೋವಿಗೆ' ಕಾರಣವಾಯಿತು. ಅದನ್ನೇ 'ಶರಧಿ' ಜೊತೆ ಹಂಚಿಕೊಂಡೆ.

Wednesday, February 25, 2009

ಕಣ್ಣೀರು ಒರೆಸುವ 'ಕೈಗಳು' ನೀನ್ಯಾಕೆ ಆಗುತ್ತಿಲ್ಲ..?! ಎಂದು ಕೇಳುತ್ತಿದ್ದೆ.

"ನೋಡು ಪುಟ್ಟಾ..ಆಕಾಶದಲ್ಲಿ ಚಂದ್ರ ಕಾಣ್ತಾನೆ. ರಾತ್ರಿಗೆ ಅವನೇ ದೇವರು. ಅವನು ದೊಡ್ಡ ದೇವರು. ಅವನ ಸುತ್ತ ಇರುವುದು ನಕ್ಷತ್ರಗಳು, ಅದು ಚಿಕ್ಕ ದೇವರುಗಳು. ದೇವ್ರು ನೋಡುತ್ತಿರುವಾಗ ಊಟ ಮಾಡಿದ್ರೆ ಒಳ್ಳೆದಂತೆ. ದೇವ್ರು ಕೇಳಿದ್ದೆಲ್ಲವನ್ನೂ ಕೊಡ್ತಾನೆ" ಎನ್ನುತ್ತಾ ಅಮ್ಮ ತಮ್ಮನ ಬಾಯಿಗೆ ಅನ್ನ ತುರುಕಿಸುತ್ತಿದ್ದುದು ಹಾಗೇ ನೆನಪಲ್ಲಿ ಉಳಿದಿದೆ. ಬೆಳಗಾದರೆ ಸೂರ್ಯನಿಗೆ ನಮಸ್ಕರಿಸಬೇಕು..ಅವನು ಹಗಲಿನ ದೇವ್ರು ಎನ್ನುತ್ತಿದ್ದಳು. ದೇವಸ್ಥಾನಗಳಿಗೆ ಹೋದರೆ..ಮೂರ್ತಿಗಳನ್ನು ತೋರಿಸಿ, "ಇವ್ರು ಮಾತನಾಡದ ದೇವ್ರು, ಕೈಮುಗಿಯಬೇಕು..ಒಳ್ಳೆದಾಗ್ಲಿ ಅಂತ ಕೇಳಬೇಕು" ಎನ್ನುವಳು. ದೇವರಿಗೆ ಕೈಮುಗಿಯುವ ಭರದಲ್ಲಿ ನಾವು ನೆಲಕ್ಕೆ ಹಾಸಿದ ಸಗಣಿ-ಮಣ್ಣು ಎಲ್ಲವನ್ನೂ ಮೊಣಕಾಲಿನಲ್ಲಿ ಮೆತ್ತಿಕೊಳ್ಳುತ್ತಿದ್ದೆವು. ಕಲ್ಲು. ಮರಗಳು, ಹಾವುಗಳು, ದನಕರುಗಳು..ಎಲ್ಲವೂ ಅಮ್ಮನೆಂಬ ದೇವರಿಗೆ 'ದೇವರು'ಗಳು! ಶಾಲೆಯಲ್ಲಿ ಓದಿಸುವ ಮೇಷ್ಟ್ರು ಜನಗಣತಿ ಸಮಯದಲ್ಲಿ ಮನೆಗೆ ಬಂದರೆ ಅವರೂ 'ಮಹಾದೇವರು'. ಮನೆಗೆ ಬಂದ ಮೇಷ್ಟ್ರಿಗೆ ಕೈಮುಗಿಯಿರಿ ಅನ್ನೋಳು ಅಮ್ಮ. ಮನೆಗೆ ಹಿರಿಯರು ಬಂದರೆ ಅವರ ಕಾಲಿಗೆ ಅಡ್ಡಬೀಳಕೆ ಹೇಳೋಲು ಅಮ್ಮ. ಹೀಗೇ ಸಣ್ಣವರಿರುವಾಗ ಅಮ್ಮ ನಮ್ಮ ತಲೆಯೊಳಗೆ 'ತುಂಬಾ ದೇವರು'ಗಳನ್ನು ತಲೆಯಲ್ಲಿ ತುಂಬಿಸಿಬಿಟ್ಟಿದ್ದಳು. ಇಷ್ಟೆಲ್ಲಾ ದೇವರುಗಳಲ್ಲಿ ದೇವಸ್ಥಾನದಲ್ಲಿರುವ ಮೂರ್ತಿ ದೇವರು ಯಾಕೆ ಕಣ್ಣಿಗೆ ಕಾಣಲ್ಲ ಅಂದರೆ? ದಿನಾ ದೇವರಿಗೆ ಪೂಜಿಸಿ..ಎನ್ನುತ್ತಾ ಕನಸಕದಾಸರ ಕಥೆ ಆರಂಭಿಸುತ್ತಾಳೆ ಪ್ರೀತಿಯ ಅಮ್ಮ. ಹಾಗೇ ಪುಟ್ಟ ವಯಸ್ಸಿನಿಂದಲೂ ಸ್ನಾನ ಮಾಡಿ, ದೇವರಿಗೆ ದೀಪ ಹಚ್ಚಿ ಪ್ರಾರ್ಥಿಸಬೇಕು ಎನ್ನುವ ಅಮ್ಮ ಪರಿಪಾಠ ಈಗಲೂ ಮುಂದುವರೆದಿದೆ. ನಿತ್ಯ ದೇವರಿಗೆ ದೀಪ ಹಚ್ಚುವಾಗಲೂ ಅಮ್ಮ ಹೇಳಿದ್ದೆಲ್ಲಾ ನೆನಪಾಗುತ್ತೆ.

ಮೊನ್ನೆ ಶಿವರಾತ್ರಿ ದಿನ ನಮ್ಮ ಛಾಯಾಕನ್ನಡಿ ಬ್ಲಾಗ್ ಶಿವಣ್ಣ ದೇವಸ್ಥಾನಕ್ಕೆ ಹೋಗಿ ಬಂದು ನಂಗೆ ಪೋನು ಮಾಡಿದ್ದರು. ನಾನು, "ನಂಗೆ ದೇವರ ಬಳಿ ಏನು ಕೇಳಿಕೊಂಡೆ ಅಣ್ಣ?" ಎಂದಿದ್ದಕ್ಕೆ, ಅವರು "ನೋಡು ಮರೀ, ದೇವರು ಫ್ರೆಂಡ್ ಥರ..ಅವನ ಜೊತೆ ಏನೂ ಕೇಳಬಾರದು" ಎಂದುಬಿಟ್ಟರು! ನನ್ನ ತಲೆಯಲ್ಲಿ ವಿಚಿತ್ರ ತಲೆಹರಟೆಗಳು ಹೊಳೆಯತೊದಗಿದವು.

ದೇವ್ರು ಫ್ರೆಂಡ್ ಆದ್ರೆ....! ನಿಜವಾಗಲೂ ದೇವ್ರು ಫ್ರೆಂಡ್ ಆದ್ರೆ...!! ನನ್ನೆದುರು ಕುಳಿತು, "ನಿನ್ನ ದುಃಖವನ್ನೆಲ್ಲ ನನಗೆ ಕೊಡು, ಎನ್ನುತ್ತಲೇ ದುಃಖವನ್ನು ಸಹಿಸುವ ಶಕ್ತಿ ನೀಡುವ ಒಳ್ಳೆಯ ಗೆಳೆಯ ದೇವ್ರು ಆಗಿರ್ತಾ ಇದ್ರೆ..ನಂಗೆ 'ಒಳ್ಳೆಯ ಫ್ರೆಂಡ್ ಕೊಡೋ' ಎಂದು ದೇವರೆದುರು ಹಣತೆ ಹಚ್ಚಿ, ಆ ಮಂದ ಬೆಳಕಿನಲ್ಲಿ ನಿಂತು ಪ್ರಾರ್ಥಿಸೋ ಅಗತ್ಯವಿತ್ತಾ?!!" ....ದೇವರು ಮಾತನಾಡುತ್ತಿದ್ದರೆ...?! ಹೀಗೇ ಯೋಚನೆಗಳ ಸರಮಾಲೆ......

ಕಷ್ಟಗಳು ಎದುರಾದಾಗ..ದೇವರೆದುರು ನಿಂತು ಏಕಾಂಗಿಯಾಗಿ ಕಷ್ಟ ತೋಡಿಕೊಳ್ಳುವಾಗ..ನಮ್ಮ ಫ್ರೆಂಡ್ ಆಗಿ ನಮ್ಮ 'ಕಣ್ಣೀರು ಒರೆಸುವ ಕೈಗಳು' ಆತನಾಗಿದ್ದರೆ..ಎಷ್ಟು ಚೆನ್ನಾಗಿರ್ತಾ ಇತ್ತು ಅಲ್ವಾ? ಪ್ರತಿಯೊಂದು ಹೃದಯ ನೊಂದಾಗ..ದುಃಖ ಅರಿತುಕೊಳ್ಳುವ, ನಮ್ಮೊಂದಿಗೆ ಮಾತನಾಡುವ 'ಫ್ರೆಂಡು' ಆಗಿದ್ದರೆ...ನೋವು-ನಲಿವಿನ ತಿಕ್ಕಾಟ, ಬದುಕಿನ ಜಂಜಾಟಗಳಿಗೆ ಬಲಿಯಾಗಿ..ಬದುಕನ್ನೇ ಕಳೆದುಕೊಳ್ಳುವ ಕ್ಷಣದಲ್ಲಿ ನಮ್ಮನ್ನು ಅಪ್ಪಿ ಸಮಾಧಾನಪಡಿಸುವ ಫ್ರೆಂಡು ದೇವರಾಗಿದ್ದರೆ..ಬದುಕುವ ಪ್ರತಿಯೊಬ್ಬರಿಗೂ ಜೀವನ ಸುಂದರ ಅನಿಸ್ತಾ ಇತ್ತು ಅಲ್ವಾ?
ಅದೇಕೆ 'ಒಳ್ಳೆಯ ಫ್ರೆಂಡು' ಪ್ರತಿಯೊಬ್ಬರಲ್ಲೂ 'ಜೀವನಪ್ರೀತಿ 'ಹುಟ್ಟಿಸಲ್ಲ..ಗುರಿಸಾಧಿಸುವ ಛಲವನ್ನೇಕೆ ಬೆಳೆಸಲಿಲ್ಲ?ನಂಗೂ ಒಂಟಿಯಾಗಿದ್ದಾಗ..ಜೊತೆಗಾರರು ಬೇಕನ್ನಿಸುತ್ತೆ.,.ನೀನ್ಯಾಕೆ ಅದೆಷ್ಟೋ ಮಂದಿಯ ಒಂಟಿತನ ನೀಗಿಸುವ ಜೊತೆಗಾರನಾಗುವುದಿಲ್ಲ...?!


"ನಮ್ಮೆಲ್ಲಾ ದೌರ್ಬಲ್ಯ, ನ್ಯೂನತೆಗಳೊಂದಿಗೆ ನಮ್ಮನ್ನು ಪ್ರೀತಿಸುವವರು, ಆದರಿಸುವವರು ನಿಜವಾದ ಸ್ನೇಹಿತರು ಆಗಿರುತ್ತಾರೆ" ಅಂತಾರೆ ದೊಡ್ಡವರು., ಆದರೆ ನಾವು ಏನೋ ಸಣ್ಣ ತಪ್ಪು ಮಾಡಿ..ಕ್ಷಮಿಸು ಎಂದು ನಿನ್ನ ಮುಂದೆ ಗೋಳಾಡಿದ್ರೂ ನೀನ್ಯಾನೆ ಮೌನವಾಗಿರ್ತಿಯಾ? ಕನಿಷ್ಠ ನಮ್ಮನ್ನು ಸಮಾಧಾನ ಮಾಡಲ್ಲ? 'ಹಿಡಿಪ್ರೀತಿ' ತೋರಿಸಲ್ಲಾ..? ನಾವು ನಂಬಿದ ಆದರ್ಶಗಳೇ..ಕೆಲವೊಮ್ಮೆ ನಮ್ಮನ್ನು ಕೊಲ್ಲುವಾಗ ಫ್ರೆಂಡು ಆದವನು ನೀನ್ಯಾಕೆ ಸುಮ್ಮನಿರ್ತಿಯಾ? ಪರಿವರ್ತನಶೀಲವಾದ ಬದುಕಿನ ಸನ್ನಿವೇಶಗಳಿಗೆ ಸ್ಪಂದಿಸಿ, ಕಾಲದ ಸವಾಲುಗಳಿಗೆ ಉತ್ತರ ನೀಡಲಾಗದೆ ತಡಕಾಡುವ ನಿನಗೆ ಏನೂ ಅನಿಸಲ್ವಾ? ಅದೆಷ್ಟೋ ಹಸಿದ ಹೊಟ್ಟೆಗೆ 'ಅನ್ನ' ಯಾಕೆ ಆಗುತ್ತಿಲ್ಲ? ಅಳುವ ಕಂಗಳಿಗೆ 'ಕರ್ಚಿಪ್ ' ಯಾಕೆ ಆಗುತ್ತಿಲ್ಲ? ನಮ್ಮೊಂದಿಗೆ ಒಡನಾಡುವ, ಮಾತನಾಡುವ ಮೌನವನ್ನೂ ಮಾತಾಗಿಸುವ, ಗೆಳೆಯ ನೀನ್ಯಾಕೆ ಆಗಲಿಲ್ಲ..ಹೇಳು ನೀನು ಫ್ರೆಂಡ್ ಆಗಿದ್ದರೆ...ಒಂದೇ ಒಂದು ಬಾರಿ ನಿನ್ನ ಮಡಿಲಲ್ಲಿ ಮುಖ ಹುದುಗಿಸಿ ನನ್ನ 'ಹೃದಯ'ವನ್ನು ಹಂಚಿಕೊಳ್ಳಕೆ ಅವಕಾಶ ಯಾಕೆ ಕೊಡುತ್ತಿಲ್ಲ..!!!! ಎಂದು ದೇವರು ಮಾತನಾಡ್ತಾ ಇರುತ್ತಿದ್ದರೆ ಕೇಳುತ್ತಿದ್ದೆ..!

'ಅಕ್ಕಾ..' ಎಂದು ಬಾಗಿಲು ಬಡಿಯೋ ಸದ್ದು. ತಮ್ಮ ಆಫೀಸ್ನಿಂದ ಬಂದಿದ್ದ. ನನ್ನ ತಲೆಹರಟೆ ಯೋಚನೆಗಳಿಗೆ 'ಕಡಿವಾಣ' ಹಾಕಿದ್ದ.!

Saturday, February 21, 2009

ಹೀಗೊಬ್ಬ ಜಾಹೀರಾತು ಹುಡುಗ..!!

ನನಗಾಗ ಬೆಂಗಳೂರು ಹೊಸತು. ಬಹುಮಡಿಯ ಕಟ್ಟಡಗಳು, ಟ್ರಾಫಿಕ್ ಜಾಮ್, ಸಿಗ್ನಲ್ಲುಗಳು, ಪಾರ್ಕ್ ತುಂಬಾ ಮುತ್ತಿಕೊಂಡಿರುವ ಹುಡುಗ-ಹುಡುಗಿಯರು, ಪಾರ್ಟ್ ಟೈಮ್ ಕೆಲಸಕ್ಕಾಗಿ ಅಲೆದಾಡುವವರು, ನಿತ್ಯ ಮನೆಬಾಗಿಲು ಹಾಕಿಕೊಂಡೇ ಮನೆಯೊಳಗೆ'ಬಂಧಿತ;'ರಾಗಿರುವ ಗೃಹಿಣಿಯರು, ಮುಖ ನೋಡಿದರೆ ಗಹಿಗಹಿಸಿ ನಗುವ ವಿಚಿತ್ರ ಮಾನವಜೀವಿಗಳು..ಇವೆಲ್ಲವನ್ನೂ ಅಚ್ಚರಿಯಿಂದ ನೋಡಿ, ಬೆಂಗಳೂರಿಗೊಂದು 'ಡೆಫಿನೆಶನ್' ಕಂಡುಕೊಳ್ಳುತ್ತಿದ್ದ ಸಮಯ. ಆಗತಾನೇ ಹೊಸದಿಗಂತ ಪತ್ರಿಕೆಯಲ್ಲಿ ಕೆಲಸ ಸಿಕ್ಕಿತ್ತು. ಬೆಂಗಳೂರು ಬಗ್ಗೆ ಎಂಥದ್ದೂ ಗೊತ್ತಿಲ್ಲ..ಕಣ್ಣಿಗೆ ಕಂಡಿದ್ದೇ ಬೆಂಗಳೂರು ನನ್ನ ಪಾಲಿಗೆ. ನಗರದ ಒಂದೊಂದು ಸಿಗ್ನಲ್ ದಾಟಲೂ..ಅರ್ಧ ಗಂಟೆ ತೆಗೆದುಕೊಳ್ಳುತ್ತಿದ್ದ ಹುಡುಗಿ ನಾನಾಗಿದ್ದೆ. ಅಂದು ಮೆಜೆಸ್ಟಿಕ್ ನಿಂದ 96 ನಂಬರಿನ ಬಸ್ಸು ಹತ್ತಿ ಮಲ್ಲೇಶ್ವರಕ್ಕೆ ಹೊರಟಿದ್ದೆ. ಬಸ್ಸು ಎಲ್ಲೆಲ್ಲೋ ಸುತ್ತುತ್ತಾ..ಅದೇನೋ 'ಭಾಷ್ಯಂ' ಸರ್ಕಲ್ ಗೆ ಬಂದುಬಿಡ್ತು. ಏನು ಮಾಡೋದು? ಆ ಭಾಷ್ಯಂ ಸರ್ಕಲ್ ಕೂಡ ನನಗೆ ಹೊಸತು. ವಾಪಾಸ್ ಮಲ್ಲೇಶ್ವರಕ್ಕೆ ಬರಲು ಬಸ್ಸು ಎಲ್ಲಿ ನಿಲ್ಲುತ್ತೆ ಗೊತ್ತಿರಲಿಲ್ಲ. ಅಷ್ಟೊತ್ತಿಗೆ ನನ್ನ ಗೊಂದಲವನ್ನು ಗಮನಿಸಿದ ಹುಡುಗನೊಬ್ಬ ಬಂದು 'ನಿಮಗೆ ಎಲ್ಲಿ ಹೋಗಬೇಕು?' ಅಂದ. ನಾನು "ನಂಗೆ ಮಲ್ಲೇಶ್ವರಕ್ಕೆ ಹೋಗಬೇಕು. ಬಸ್ಸು ತಪ್ಪಿ ಇಲ್ಲಿ ಬಂತು. ಬಸ್ ಸ್ಟಾಂಡ್ ಎಲ್ಲಿ ಗೊತ್ತಾಗ್ತಿಲ್ಲ..ಹೇಳ್ತೀರಾ?'ಅಂದೆ. ನಾನೂ ಆ ಕಡೆ ಬರ್ತೀನಿ ಅಂತ ನನ್ನ ಮಾತನಾಡಿಸಿದ. ನನಗೆ ಹೋದ ಜೀವ ಬಂದಂತಾಯಿತು..ನಾನೇನೋ ನಮ್ಮ ಹಳ್ಳೀಲಿ ಇರೋ 'ಪಕ್ಕದ್ಮನೆ' ಹುಡುಗನಂತೆ ಭಾವಿಸಿದ್ದೆ. ನನ್ನ ಪರಿಚಯ ಫೋನ್ ನಂಬರು ಕೇಳಿದ. ಆಫೀಸ್ ನಂಬರ್ ಕೊಟ್ಟೆ. ತಾನೊಬ್ಬ ಸಾಫ್ಟ್ ವೇರ್ ಉದ್ಯೋಗಿ...ನನ್ನ ಕಂಪನಿಯ ಜಾಹೀರಾತು ಕೊಡಲು ಇದ್ರೆ ನಿಮ್ಮನ್ನು ಸಂಪರ್ಕಿಸಬಹುದಾ? ಅಂದಿದ್ದ. ಓಕೆ ಅಂದೆ. ಮೊಬೈಲ್ ನಂಬರ್ ಕೇಳಿದ ..ನನ್ನ ಕಸೀನ್ ಬ್ರದರ್ ನಂಬರು ಕೊಟ್ಟೆ..! ಯಾಕಂದ್ರೆ ನನ್ನ ಕಸಿನ್, ಅಪರಿಚಿತ ಹುಡುಗ್ರು ಸಿಕ್ಕಿ ನಿನ್ನ ನಂಬರ್ ಕೇಳಿದ್ರೆ..ನನ್ನ ನಂಬರು ಕೊಡು..ತಪ್ಪಿಯೂ ನಿನ್ನ ನಂಬರ್ ಕೊಡಬೇಡ, ಹೆಸರೂ ಹೇಳಬೇಡ ಅಂದಿದ್ದ. ನಾನು ಹಾಗೇ ಮಾಡಿದ್ದೆ.

ಬಳಿಕ ಅಣ್ಣನ ಮೊಬೈಲಿಗೆ ಒಂದೇ ಸಮನೆ ಮೆಸೇಜ್ ಬರ್ತಾ ಇತ್ತು. ಪ್ರೀತಿ, ಪ್ರೇಮ, ಪ್ರಣಯದ ಸುತ್ತಾನೇ ಸುತ್ತೋ ಆ ಮೆಸೇಜುಗಳಿಗೆ ಅಣ್ಣನೇ ರಿಪ್ಲೆ ಮಾಡುತ್ತಿದ್ದ. ಅದೃಷ್ಟ ಎಂದರೆ ಒಂದೇ ಒಂದು ಸಲ ಆ ಮನುಷ್ಯ ಫೋನ್ ಮಾಡಲಿಲ್ಲ. ಎರಡು-ಮೂರು ತಿಂಗಳು ಮೆಸೇಜ್ ಗಳಲ್ಲೇ ಕಳೆದುಹೋಯಿತು. ಮತ್ತೆ ಬಂದೇಬಿಟ್ಟಿತು..ಫ್ರೆಬ್ರುವರಿ 13. ರಾತ್ರಿ 10 ಗಂಟೆಗೆ ಫೋನ್ ಮಾಡಿದ್ದ. ಅಣ್ಣ ರಿಸೀವ್ ಮಾಡಲಿಲ್ಲ. ಮತ್ತೆ ಮೆಸೇಜ್ ಅವನಿಂದ, "ನೀನು ಸಿಗೋದಾದ್ರೆ ನಾಳೆ ಬೆಳಿಗ್ಗೆ 10 ಗಂಟೆಗೆ ಮೆಜೆಸ್ಟಿಕ್ ನಲ್ಲಿರ್ತೀನಿ. ನಮ್ಮ ಕಂಪನಿಯ ಜಾಹೀರಾತು ಬಗ್ಗೆನೂ ಮಾತನಾಡಬೇಕು" ಅಂತ ಮೆಸೇಜ್ ಮಾಡಿದ್ದಕ್ಕೆ ಅಣ್ಣ 'ಓಕೆ' ಅಂದಿದ್ದ.

ಈ ಸಲ ಹೊಸದಿಗಂತಕ್ಕೆ ಸಕತ್ ಲಾಭ'..ಒಳ್ಳೆ ಜಾಹೀರಾತು ಬಂದಿದೆ ಅಂತ ಅಣ್ಣ ತಮಾಷೆ ಮಾಡ್ತಿದ್ದ. ಫೆ.14ರ ಬೆಳಿಗ್ಗೆ 8 ಗಂಟೆಗೆ ಆತನಿಂದ ಫೋನು. ಅಣ್ಣ ರಿಸೀವ್ ಮಾಡಿ, 'ಯಾರು ಬೇಕಿತ್ತು?' ಎಂದಾಗ 'ನಾನು ಸಿಂಧು ಜೊತೆ ಮಾತನಾಡಬೇಕಿತ್ತು(ನಾನು ಅವನತ್ರ ನನ್ನ ಹೆಸರು ಸಿಂಧು ಅಂದಿದ್ದೆ)' ಅಂದ. ಅದಕ್ಕೆ ಅಣ್ಣ "ಏನಪ್ಪಾ ಜಾಹೀರಾತು ಕೊಡಬೇಕಿತ್ತಾ? ಇಲ್ಲಿ ಸಿಂಧುನೂ ಇಲ್ಲ, ಬಿಂದುನೂ ಇಲ್ಲ.." ಎನ್ನುವಾಗಲೇ ಫೋನ್ ಕಟ್. ಮತ್ತೆಂದೂ ಆತನ ಮೆಸೇಜ್ ಬರಲೇ ಇಲ್ಲ!! ಈ ಘಟನೆ ನಡೆದಿದ್ದು 2007ರ ಫೆ.14ರಂದು.!! ಈ ಸಲದ ವಿಶೇಷ ಮುಂದಿನ ಬಾರಿ ಹೇಳ್ತೀನಿ..ನಿರೀಕ್ಷಿಸಿ..!!!!

Thursday, February 19, 2009

ಅಮ್ಮಾ ...ನಿನ್ನ ಎದೆಯಾಳದಲ್ಲಿ...

ನಿನ್ನೆ ಅಮ್ಮ ಫೋನ್ ಮಾಡಿ, ಯಾವಾಗ ಬರ್ತೀಯಾ? ಸ್ವಲ್ಪ ಹಣ ಕಳಿಸಿಕೊಡು ಅಂದ್ರು. ಜಮೀನಿಗೆ ಸಂಬಂಧಿಸಿದಂತೆ ಯಾವುದೋ ವಿಷಯಕ್ಕೆ ಅಮ್ಮನಿಗೆ ಅರ್ಜೆಂಟಾಗಿ ಹಣ ಬೇಕಿತ್ತು. ಅಮ್ಮ ಯಾವತ್ತೂ ಹಾಗೇ ನೇರವಾಗಿ ಕೇಳಿದವರಲ್ಲ. ಆದರೆ, ನಿನ್ನೆ ಇದ್ದಕ್ಕಿದ್ದಂತೆ ಹಾಗೇ ಕೇಳಿದಾಗ ಮೊದಲೇ ಮುಂಗೋಪಿಯಾಗಿರುವ ನಾ ಬೈದುಬಿಟ್ಟೆ. 'ನಾನು ಹೇಗಿದ್ದೀನಿ..ಸತ್ತಿದ್ದೀನಾ? ಬದುಕಿದ್ದೀನಾ ಅಂತ 'ಕೇಳಲ್ಲ ಅಂತ ಬೈದೆ. ಅದಕ್ಕೆ ಕಾರಣನೂ ಇತ್ತು. ಮೂರು ದಿನದಿಂದ ಆಫೀಸಿಗೆ ರಜೆ. ನನ್ನ ಪಾಲಿನ ಕೆಲಸ ಬಾಕಿಯಿತ್ತು. ಆರೋಗ್ಯ ಸರಿಯಿರಲಿಲ್ಲ. ಆಸ್ಪತ್ರೆ, ಡಾಕ್ಟರ್ ಅಂತ ಅಲೆದಾಡಿದ್ದೆ. ಆವಾಗ ಯಾರೊಬ್ಬರೂ ಮನೆಯಿಂದ ಫೋನ್ ಕೂಡ ಮಾಡಿರಲಿಲ್ಲ. ತಮ್ಮನೂ ಫೋನ್ ಮಾಡುವಾಗ ರಿಸೀವ್ ಮಾಡಿರಲಿಲ್ಲ. ಆ ಸಿಟ್ಟು ಹಾಗೇ ಉಳಿದಿತ್ತು. ಅಮ್ಮ ಪೋನ್ ಮಾಡುವಾಗ..ಸಿಕ್ಕಿದ್ದೇ ಚಾನ್ಸ್ ಅಂತ ಬೈದೇ ಬಿಟ್ಟೆ! ಆದರೆ, ಅಮ್ಮ ಟೆನ್ಷನ್ ಮಾಡಿಕೊಳ್ಳೋದು ಬೇಡ ಅಂತ ಹುಷಾರಿಲ್ಲ ಅನ್ನೋ ಶಬ್ದವನ್ನೇ ಅಮ್ಮನತ್ರ ಮಾತನಾಡುವಾಗ ಹೊರಕ್ಕೆಸೆದು ಬಿಡ್ತೀನಿ. ಹಾಗಾಗಿ ಆರೋಗ್ಯ ಸರಿ ಇಲ್ಲ ಅಂತ ಹೇಳಲಿಲ್ಲ.
ಆದರೆ, ಬೈದಾಗ ಅಮ್ಮನಿಗೆ ಒಂಚೂರು ಕೋಪ ಬರಲಿಲ್ಲ. ನನ್ನ ಸಿಡುಕನ್ನು ಸಾವರಿಸಿಕೊಂಡು ಹೇಳಿದ್ರು.."ನೋಡಮ್ಮಾ..ನೀನು ಯಾವತ್ತೂ ಚೆನ್ನಾಗಿರ್ತೀಯಾ ಅಂತ ನನ್ನ ಮನಸ್ಸು ಹೇಳುತ್ತೆ. ಬೈದ್ರೆ, ಸಿಟ್ಟು ಮಾಡಿಕೊಂಡ್ತೆ ಸಮಸ್ಯೆ ಬಗೆಹರಿಯಲ್ಲ" ಅಂದ್ರು. ಅಮ್ಮನ ದೊಡ್ಡ ಮಾತಿನೆದುರು ಬಹಳ ಮುಜುಗರಪಟ್ಟೆ. ಆಯ್ತಮ್ಮ..ಎಷ್ಟು ಹಣ ಬೇಕು..ನಾ ಕಳಿಸ್ತೀನಿ ಅಂದು ಫೋನಿಟ್ಟೆ.

ಆದ್ರೆ ಅಮ್ಮನಿಗೆ ಬೈದ ವಿಚಾರ..ರಾತ್ರಿಯಿಡೀ ನನ್ನ ತಲೆಯನ್ನು ಕೆಡಿಸಿಬಿಡ್ತು. ಅಮ್ಮನಿಗೆ ಮುಖಕ್ಕೆ ಹೊಡೆದ ಹಾಗೆ ಬೈದೆನಲ್ಲ..ಎಂಥ ಮಾಡೋದು? ಕ್ಷಮೆ ಕೇಳಿದ್ರೂ ತಪ್ಪೇ..ಯಾಕಂದ್ರೆ ಬೈದಿದ್ದು ಅಮ್ಮನಿಗೆ..ಬೇರೆ ಯಾರಿಗಾದ್ರೂ 'ಸಾರಿ' ಅಂತ ಮೆಸೇಜ್ ಮಾಡಬಹುದಿತ್ತು. ರಾತ್ರಿ ಮಲಗಿದವಳಿಗೆ ಅದೇ ಗುಂಗು..ಬೆಳಿಗೆದ್ದು ತಿಂಡಿ ತಿನ್ನಕ್ಕೆ ಕೂತಾಗಲೂ ಅದೇ ಜ್ಞಾನ..ತಮ್ಮ ಬೇರೇ ಅಮ್ಮನಿಗೆ ಬೈದಿದ್ದಕ್ಕೆ ಕಪ್ಪೆ ಥರ ವಟವಟ ಅನ್ತಾನೆ ಇದ್ದ. ಆಫೀಸ್ಗೆ ಬಂದು ಐಪಾಡ್ ಕಿವಿಗೆ ಹಾಕೊಂಡು ಭಾವಗೀತೆಗಳನ್ನು ಕೇಳಿ ಸಮಾಧಾನ ಮಾಡಿಕೊಳ್ಳೋಣ ಅಂದ್ರೂ...ಮನಸ್ಸು ಸಮಾಧಾನ ಆಗ್ತಿಲ್ಲ. ..ಹಾಗೇ ಚಡಪಡಿಸ್ತಾನೇ ಇದ್ದೆ.
11 ಗಂಟೆಗೆ ಮೊಬೈಲ್ ರಿಂಗುಣಿಸಿತು. ಅಮ್ಮನ ಫೋನು. "ಎಲ್ಲಿದ್ದಿಮ್ಮ? ಹೇಗಿದ್ದಿ?ನಿನ್ನೆ ಏನದು ಬಡಬಡಾಂತ ಮಾತಾಡಿದ್ಯಲ್ಲ..ಅದ್ಕೆ ತಲೆಬಿಸಿ ಮಾಡಿಕೊಳ್ಳೋದು ಬೇಡಾಂತ ಫೋನ್ ಮಾಡಿದೆ.." ಅಂದ್ರು. ಒಂದೇ ಉಸಿರಿಗೆ ಅಮ್ಮ ಅಷ್ಟು ಹೇಳಿದಾಗ ಅಬ್ಬಾ! ಮನಸ್ಸು ಒಂದೇ ಕ್ಷಣ ಖುಷಿಯ ನಿಟ್ಟುಸಿರು ಚೆಲ್ತು. ಅಮ್ಮ ಅನ್ನೋ 'ಸತ್ಯ'ವೇ ಹಾಗೇ ಅಲ್ಲವೇ..ನಾವು ಬೈದ್ರೂ, ಮುನಿಸ್ಕೊಂಡ್ರೂ ಅದನ್ನು ನೋವುಂತ ಕಾಣಲ್ಲ. ಅದೇ ಗುಂಗಿನಲ್ಲಿ ಇದೀಗ ಬ್ಲಾಗ್ ಬರೀತಾ ಇದ್ದೀನಿ...ಖುಷಿ ಖುಷಿಯಾಗಿ!

ತವರಿನಿಂದ ದೂರದಲ್ಲಿದ್ರೆ..ಈ ಕೆಲಸ, ಈ ಒತ್ತಡ, ಜಂಜಾಟ..ನಮ್ಮ ಮನಸ್ಸನ್ನು ಎಷ್ಟು ಕೆಡಿಸಿಬಿಡುತ್ತೆ. ಬೆಂಗಳೂರಿಗೆ ಬಂದು ಎರಡೂವರೆ ವರ್ಷ ಆದ್ರೂ ಅಮ್ಮನಿಗೆ ಈ ರೀತಿ ಸಿಡಸಿಡ ಅನ್ನದ ಹುಡುಗಿ ಮೊನ್ನೆ ಇದ್ದಕಿದ್ದಂತೆ ಬೆಂಕಿಯಂತೆ ಧಗಧಗಿಸಿದ್ದೆ. ಮತ್ತೆ ಅಮ್ಮನತ್ರ ಹೇಳಿದೆ, ಅಮ್ಮ ಏನೋ ಆಫೀಸ್ ತಲೆಬಿಸಿಯಲ್ಲಿದ್ದೆ.,ನೀನೇನೂ ಟೆನ್ಷನ್ ಮಾಡಿಕೋಬೇಡ ಅಂತ. ಆದ್ರೆ, ಅಮ್ಮ ನಾವೇನು ಅಂದ್ರೂ, ಟೆನ್ಷನ್ ಮಾಡಿಕೊಳ್ಳಲ್ಲ..ನನ್ ಜೊತೆ 'ಟೂ' . ಅನ್ನಲ್ಲ. ಅಮ್ಮನೇ ಹಾಗೇ ಅಲ್ಲವೇ? " ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು..ಮಿಡುಕಾಡುತ್ತಿರುವೆ ನಾನು..ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ..." ಹೀಗೆ ಮನ ಖುಷಿಯಿಂದ ಹಾಡುತ್ತಿದೆ.

ಕೊನೆಗೆ ಒಂದಿಷ್ಟು ನೆನಪಾಗಿದ್ದು: ಮೊನ್ನೆ ನಮ್ ಮನೆ ಓನರ್ ಮಗ ಮನೀಷ್ ಜೊತೆ ನಿನ್ನಮ್ಮ ನಿಂಗೆ ಯಾಕೆ ಇಷ್ಟ? ಅಂತ ನಿನ್ನೆ ಸುಮ್ ಸುಮ್ನೆ ಕೇಳಿದ್ದೆ..ಅವನಿನ್ನೂ ಚಿಕ್ಕವನು. ಅವನು ಹೇಳುತ್ತಿದ್ದ: "ಅಮ್ಮ ನಂಗೆ ಬೈಯಲ್ಲ, ಅಮ್ಮ ಕೆಲಸ ಮಾಡುತ್ತೆ, ಅಮ್ಮ ಸ್ನಾನ ಮಾಡಿಸುತ್ತೆ, ಮನೆ ಗುಡಿಸುತ್ತೆ, ನಂಗೆ ಜೋಜೋ ಮಾಡುತ್ತೆ. ಅಮ್ಮನಿಗೆ ಸುಸ್ತಾಗುತ್ತೆ. ನಂಗೆ ತುಂಬಾ ಪಪ್ಪಿ ಕೊಡುತ್ತೆ"!