Thursday, December 3, 2009

'ಹುಡುಗಿ’ಯಾದ ನನ್ ತಮ್ಮಾ..!.

ಆವಾಗ ನಾನಿನ್ನೂ ಅಂಗನವಾಡಿಗೆ ಹೋಗುತ್ತಿದ್ದ ಪುಟ್ಟ ಹುಡುಗಿ. ನನ್ನ ತಮ್ಮನಿಗೆ ಇನ್ನೂ ನಾಲ್ಕು ವರ್ಷ ಮೀರಿರಲಿಲ್ಲ. ಇನ್ನೂ ಎದೆಹಾಲನ್ನು ಬಿಡದ ಪೋರ. ದಿನದದಲ್ಲಿ ಅರ್ಧದಿನವನ್ನು ಅಳುತ್ತಲೇ ಕಳೆಯುತ್ತಿದ್ದ. ಅವನ ಹಠಕ್ಕೆ ಮಣಿದ ಅಮ್ಮ ನನಗೆ ಏನೇ ಕೊಡಿಸಬೇಕಾದರೂ ಅವನಿಗೆ ವೊದಲು ಕೊಡಿಸಿ ಆಮೇಲೆ ನನಗೆ ಕೊಡಿಸುತ್ತಿದ್ದರು. ಅವನು ಗಂಡು ಮಗುವೆಂಬ ಮಮಕಾರ ಬೇರೆ.

ನನಗೆ ತಂದ ಬಟ್ಟೆಗಳನ್ನೆಲ್ಲಾ ಅವನು ಹಾಕುತ್ತಿದ್ದ. ಅದು ಹುಡುಗಿಯರ ಉಡುಪುಗಳೆಂಬ ಪರಿಜ್ಞಾನವೇ ಆತನಿಗಿಲ್ಲ. ಒಟ್ಟಾರೆ ಅಕ್ಕನಿಗೆ ಕೊಡಿಸಿದ್ದೆಲ್ಲಾ ಅವನಿಗೆ ಬೇಕು, ಅವನು ವೊದಲು ಅದನ್ನು ತೊಡಬೇಕು, ಅವನು ಖುಷಿಪಡಬೇಕು, ಆಮೇಲೆ ಏನಿದ್ದರೂ ನನಗೆ.

ಹಾಗೇ ಒಂದು ದಿನ ನನಗೆ ಅಮ್ಮ ಚೆಂದದ ಫ್ರಾಕ್ ತಂದರು. ಅವನು ನೋಡಿದ್ದೇ ತಡ, ನನಗೆ ಅದೇ ಬೇಕೆಂದು ಹಠ ಹಿಡಿದ. ಅದು ಹುಡುಗಿಯರು ಹಾಕುವ ಉಡುಪು ಎಂದು ಎಷ್ಟೇ ಕೇಳಿದರೂ ಹಠ ಬಿಡಲಿಲ್ಲ. ಅದನ್ನೇ ಹಾಕಿಕೊಂಡ. ಅವನಿಗೆ ತಂದ ಟೀಶರ್ಟ್ ಬೇಡವೇ ಬೇಡವೆಂದು ಹಠ ಹಿಡಿದ. ಮರುದಿನ ಅಮ್ಮ ಪೇಟೆಗೆ ಹೋಗಿ ನನಗೆ ಇನ್ನೊಂದು ಫ್ರಾಕ್ ತಂದರು.
ಇಬ್ಬರೂ ಫ್ರಾಕ್ ಧರಿಸಿ ಅಮ್ಮನ ಜೊತೆ ತೋಟಕ್ಕೆ ಹೋಗಿದ್ದೆವು. ಇಬ್ಬರೂ ಒಂದೇ ಬಣ್ಣದ ಫ್ರಾಕ್ ಹಾಕಿದ್ದು ಹೆಮ್ಮೆಯಾದರೆ, ತಮ್ಮನಿಗೆ ನಾನು ಹುಡುಗಿಯರ ಉಡುಪು ತೊಟ್ಟಎಂಬ ಖುಷಿ ಬೇರೆ.

ತೋಟದಲ್ಲಿ ಕೆಲಸ ಮಾಡಬೇಕಾದರೆ ನಮ್ಮೂರಿನ ಬಾಲಣ್ಣ ಬಂದು ನಮ್ಮ ಅಮ್ಮನ ಜೊತೆ, ’ಅಕ್ಕಾ, ನಿಮಗೆ ಇಬ್ಬರೂ ಹೆಣ್ಣುಮಕ್ಕಳು ಅಂತ ಗೊತ್ತೇ ಇರಲಿಲ್ಲ’ ಎನ್ನಬೇಕೆ? ಅಮ್ಮನಿಗೆ ಆಶ್ಚರ್ಯ. ನಾನು ಮತ್ತು ತಮ್ಮ ಬಿಟ್ಟ ಕಣ್ಣುಗಳಿಂದ ಆಶ್ಚರ್ಯಭರಿತ ಅಮ್ಮನ ಮುಖ ನೋಡುತ್ತಾ ನಿಂತೆವು. ನೋಡಲೂ ಥೇಟ್ ಹುಡುಗಿ ತರ ಕಾಣುತ್ತಿದ್ದ ನನ್ನ ತಮ್ಮನನ್ನು ಎತ್ತಿ ಮುದ್ದಿಸಿದ ಬಾಲಣ್ಣನಿಗೆ ನನ ತಮ್ಮ ಹುಡುಗನೆಂದು ತಿಳಿದಿದ್ದು ಮಾತ್ರ ನಮ್ಮೂರಿನ ವಾರ್ಷಿಕ ಜಾತ್ರೆಯಲ್ಲೇ!

ಇಪ್ಪತ್ತು ವರ್ಷದ ಹಿಂದಿನ ಘಟನೆಯನ್ನು ನೆನೆದು ಈಗಲೂ ತಮ್ಮನ ಚುಡಾಯಿಸುವಾಗ ಅದೇಕೋ ಬಾಲ್ಯ ಮತ್ತೆ ಮರುಕಳಿಸಲಿ ಎಂದನಿಸುತ್ತದೆ!

10 comments:

Unknown said...

i remembered my younger brother... those days were so colorful...thank you :)

L'Étranger said...

".... ನನ್ನ ತಮ್ಮನನ್ನು ಎತ್ತಿ ಮುದ್ದಿಸಿದ ಬಾಲಣ್ಣನಿಗೆ ನನ ತಮ್ಮ ಹುಡುಗಿಯೆಂದು ತಿಳಿದಿದ್ದು ಮಾತ್ರ ನಮ್ಮೂರಿನ ವಾರ್ಷಿಕ ಜಾತ್ರೆಯಲ್ಲೇ!"

"ಹುಡುಗನೆಂದು" ಅಂತಿರಬೇಕಲ್ಲವೆ? ;-)

ಮಜವಾಗಿದೆ ಘಟನೆ. :-)

sunaath said...

ಹಳೆಯದನ್ನು ನೆನಸಿದಂತೆಲ್ಲ, ಖುಶಿ ಮತ್ತೆ ಮರುಕಳಿಸುತ್ತದೆ ಅಲ್ಲವೆ? Short and sweet article!

ಭಾಶೇ said...

Majavaagide!

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ... ಚನ್ನಾಗಿದೆ :)

ಜಲನಯನ said...

ಚಿತ್ರಾ ನಾನೇದರೂ ಮಿಸ್ ಮಾಡಿಕೊಂಡೆನೇ..?? ಇಲ್ಲ ..ಅಲ್ವಾ...?? ಹೌದು ಮಿಸ್ ಮಾಡ್ಕಂಡೆ..ನನಗೆ ಅಕ್ಕ ಇಲ್ಲ...ಹಹಹ...ನನ್ನ ತಮ್ಮ ಮಾತ್ರ ಹುಡುಗಿ ವೇಷದಲ್ಲಿ ನನ್ನ ಜೊತೆ ಬರ್ತಿದ್ದ. ಬಾಲ್ಯದ ನೆನೆಪುಗಳು ಮಾಸದ ನೆನೆಪುಗಳು...ಚಂದ ನಿನ್ನ ಮೆಲುಕು...

Raghu said...

ಚಿತ್ರಾ,
ಚೆನ್ನಾಗಿದೆ ಸ್ಟೋರಿ... ನನಗೂ ನನ್ನ ಬಾಲ್ಯದ ನೆನಪಾಯಿತು... :)
ನಿಮ್ಮವ,
ರಾಘು.

PARAANJAPE K.N. said...

ಚೆನ್ನಾಗಿದೆ, ನೆನಪುಗಳು ಸವಿದಷ್ಟೂ ಮಧುರ

ಕೃಪಾ said...

ಆಹ್ಲಾದಕರವಾಗಿದೆ

ಬಾಲು said...

hahahaha majavaagide.