Wednesday, December 16, 2009

ದೇವರೇ ನೀನೇಕೆ ಕಲ್ಲಾಗಿಬಿಟ್ಟೆ?


ಈ ಹೆಣ್ಣು ಮಕ್ಕಳ ಬದುಕೇ ಹೀಗೇನಾ?
ಇಂಥದ್ದೊಂದು ಮಿಲಿಯನ್ ಡಾಲರ್ ಪ್ರಶ್ನೆ ಹುಟ್ಟಿಕೊಂಡಿದ್ದು ವೊನ್ನೆ ವೊನ್ನೆ ಆ ಹುಡುಗನ ಮನೆಯಲ್ಲಿ ಮುತ್ತೈದೆಯರು ನನ್ನ ಗುಳಿಬಿದ್ದ ಕೆನ್ನೆಗಳಿಗೆ ಅರಶಿನ ಕುಂಕುಮ ಹಚ್ಚಿದಾಗ, ನಮ್ಮನೆಯವರು ಮತ್ತು ಆ ಹುಡುಗನ ಮನೆಯವರು ತಾಂಬೂಲ ಬದಲಾಯಿಸಿಕೊಂಡಾಗ, ಆ ಹುಡುಗ ನನ್ನ ಬೆರಳಿಗೆ ಉಂಗುರ ತೊಡಿಸಿದಾಗ, ನನ್ನ ತಮ್ಮ ನನ್ನ ಕೆನ್ನೆ ಚಿವುಟಿ ‘ಅಕ್ಕಾ ಇನ್ನು ನೀನು ಈ ಮನೆಯ ಹುಡುಗಿ’ ಎಂದು ಖುಷಿಯಿಂದ ಹೇಳಿದಾಗ, ನನ್ನಮ್ಮ ನನ್ನ ನೋಡುತ್ತಲೇ ಗಳಗಳನೇ ಅತ್ತಾಗ!
ಥತ್, ನಾ ಹುಟ್ಟಿದ ಊರು, ನನ್ನ ಪ್ರೀತಿಯ ಅಮ್ಮ, ನನ್ನ ತಮ್ಮ, ಬದುಕಲು ಕಲಿಸಿದ ಅಮ್ಮನಂಥ ಅಣ್ಣ, ನನ್ನ ಕೈಯಾರೆ ಅಮ್ಮ ನೆಡಿಸಿದ ಆ ಗೆಂದಾಲೆ ತೆಂಗಿನ ಮರ, ನಾನು ಸ್ಕೂಲಿಗೆ ಹೋಗುವಾಗ ವೊಸರು ಕೊಂಡೋಗಲು ಕಾರಣಳಾದ ಪ್ರೀತಿಯ ಹಸು ಅಕ್ಕತ್ತಿ, ಅಮ್ಮನ ಜೊತೆ ಬಟ್ಟೆ ಒಗೆಯಲು ಹೋಗುತ್ತಿದ್ದ ನಮ್ಮೂರ ಕೆರೆ, ಅಜ್ಜ ಉಳುತ್ತಿದ್ದ ಗದ್ದೆ, ನಮ್ಮನೆ ತೋಟ, ನನ್ನ ನಿತ್ಯ ಆಟ ಆಡಿಸುತ್ತಿದ್ದ ಕುಸುಮಜ್ಜಿ, ನನ್ನಮ್ಮನ ಜೊತೆ ಬೀಡಿ ಕಟ್ಟಲು ಸಾಥ್ ನೀಡುತ್ತಿದ್ದ ಪಕ್ಕದ್ಮನೆ ಸೀತಕ್ಕ, ನಾನು ಓದಿದ ಸ್ಕೂಲ್, ಪ್ರೀತಿಯ ಟೀಚರ್ರು....! ಒಮ್ಮೆಲೆ ಎಲ್ಲರೂ ನೆನಪಾದರು.
ಕಣ್ಣಿಂದ ಸುರಿದ ಅಶ್ರುಬಿಂದುಗಳು ನನ್ನ ಪಾದವನ್ನು ತೋಯುತ್ತಿದ್ದಂತೆ, ಮುತ್ತೈದೆಯರೆಲ್ಲಾ ’ತವರಿನ ನೆನಪು ಇರಲಿ ಬಿಡಿ’ ಎಂದು ಅವರವರೊಳಗೆ ಮಾತನಾಡಿಕೊಳ್ಳುತ್ತಿದ್ದರು. ನಂಗೂ ಅನಿಸಿತ್ತು: ಇವರೂ ನನ್ನ ತರಾನೇ ಅತ್ತಿರಬಹುದೇನೋ!
ನಾನ್ಯಾಕೆ ಹುಡುಗಿಯಾಗಿ ಹುಟ್ಟಿದೆ? ಹುಡುಗನಾಗಿ ಹುಟ್ಟುತ್ತಾ ಇದ್ದರೆ, ಮದುವೆಯಾಗಿ ಬೇರೆ ಮನೆಗೆ ಹೋಗುವ ಅಗತ್ಯವೇನಿತ್ತು? ಅಮ್ಮನ ಜೊತೆ ಇರಬಹುದಿತ್ತಲ್ಲಾ?ಅಮ್ಮನ ಕೈಯಡಿಗೆ, ಅಮ್ಮನ ಹಿತನುಡಿಗಳು, ಅಮ್ಮ ಮಾಡಿಕೊಡುವ ಹಪ್ಪಳ-ಸಂಡಿಗೆ ಮೆಲ್ಲುತ್ತಾ, ಅಣ್ಣ-ತಮಂದಿರ ಜೊತೆ ನಿತ್ಯ ಮುನಿಸಿಕೊಳ್ಳುತ್ತಾ, ಮತ್ತೆ ರಾಜಿಯಾಗುತ್ತಾ, ಮನೆ ಹತ್ತಿರವಿರುವ ಮೈದಾನದಲ್ಲಿ ಲಗೋರಿಯಾಟ ಆಡುತ್ತಾ ಖುಷಿ ಖುಷಿಯಾಗಿ ಹಾಗೇ ಇರಬಹುದಿತ್ತಲ್ಲಾ...ಹೀಗೆ ನೂರಾರು ಯೋಚನೆಗಳ ಸಂತೆ ಮನದಲ್ಲಿ ಪಿಸುಗುಟ್ಟಿ, ‘ಅಮ್ಮ ನಾ ಬಿಡಲಾರೆ ನಿನ್ನ ಸೆರಗಾ’ ಎಂದುಕೊಳ್ಳುತ್ತಿದ್ದೆ.

ಹೌದು, ಆ ಹುಡುಗ ‘ನೀ ನನ್ನ ಮದುವೆ ಆಗ್ತೀಯಾ’ ಎಂದು ಕೇಳಿದಾಗ ಅಮ್ಮನ ಜೊತೆ ಕೇಳು ಅಂದಿದ್ದೆ. ‘ಅಯ್ಯೋ ಹುಚ್ಚು ಹುಡುಗಿ ನಾ ನಿನ್ನ ಮದುವೆ ಆಗ್ತಿರೋದು, ಅಮ್ಮನನ್ನು ಅಲ್ಲ ಕಣೇ’ ಎಂದು ರೇಗಿಸಿದಾಗಲೂ ಅವನು ನೀ ನಮ್ಮನೆಯಲ್ಲೇ ಶಾಶ್ವತವಾಗಿ ಇದ್ದುಬಿಡ್ತಿಯಾ ಅಂತ ಹೇಳಲೇ ಇಲ್ಲ! ಬದಲಾಗಿ ‘ನೀ ನನ್ನ ಮನದರಮನೆಗೆ ಬರ್ತಾ ಇದೀಯಾ’ ಅಂತ ಅಷ್ಟೇ ಹೇಳಿದ್ದ. ಛೆ! ದೇವರು ಯಾಕೆ ಇಷ್ಟೊಂದು ಮೋಸ ಮಾಡಿದ? ಹೆಣ್ಣು ಅವನಿಗೇನು ತಪ್ಪು ಮಾಡಿದ್ದಾಳೆ? ಯಾಕೆ ಅವಳನ್ನು ಹೆತ್ತಮ್ಮನ ಮಡಿಲಿಂದ ಮತ್ತೊಂದು ಮಡಿಲಿಗೆ ಹಾಕುವ ವಿಚಿತ್ರ ನಿಯಮ ಸೃಷ್ಟಿಸಿದ? ಅಂತ ದೇವರನ್ನು ಬೈಯುತ್ತಾ ಇದ್ದೀನಿ, ಅದೇನು ಅವನಿಗೆ ನನ್ನ ಮೇಲೆ ಸಿಟ್ಟೇ? ನನ್ನ ಪ್ರಶ್ನೆಗಳಿಗೆ ಉತ್ತರಿಸದೆ ಕಲ್ಲಾಗಿಬಿಟ್ಟಿದ್ದಾನೆ. ಬಹುಶಃ ಎಲ್ಲಾ ಹೆಣ್ಣುಮಕ್ಕಳಿಗೂ ಈ ರೀತಿ ಅನಿಸಿರಬಹುದಲ್ವಾ? ಹೇಳಿ, ನಿಮಗೂ ಹೀಗೇ ಅನಿಸಿದೆಯೇ?
ಇಲ್ಲಿ ಪ್ರಕಟವಾಗಿದೆ:

28 comments:

Anonymous said...

ಸಂಭ್ರಮದ ಗಳಿಗೆಯಲ್ಲಿ ಬೇಸರವ್ಯಾಕೆ ಹುಡುಗಿ? ಎಲ್ಲಾ ಹುಡುಗರಿಗೂ ಹೆತ್ತಮ್ಮನ ಮಡಿಲಿನಲ್ಲೇ ಇರುವ ಭಾಗ್ಯ ಸಿಗೋದಿಲ್ಲ. ಅದೆಲ್ಲಾ ಹಳೇ ಮಾತಾಯಿತು. ದೇವರು ಎಲ್ಲರಿಗೂ ಮೋಸ ಮಾಡಿದ್ದಾನೆ ಅಥವಾ ಯಾರಿಗೂ ಮೋಸ ಮಾಡಿಲ್ಲ. ಅದಿರಲಿ. ಶುಭಾಶಯಗಳು ಹುಡುಗ ಹುಡುಗಿ ಇಬ್ಬರಿಗೂ.

-ಕೋ..:)

sunaath said...

ಚಿತ್ರಾ,
ಹೆಣ್ಣು ಮಕ್ಕಳ ಅಳಲನ್ನು ಚೆನ್ನಾಗಿ ಚಿತ್ರಿಸಿದ್ದೀರಿ. ಆದರೆ, ಇದೇ ಅಲ್ಲವೆ ಜೀವನದ ರೀತಿ?

ಶಿವಪ್ರಕಾಶ್ said...

ಸ್ವಲ್ಪ ಕಷ್ಟವಾದ ಪ್ರಶ್ನೆ... :(

ನಿಮ್ಮ ಲೇಖನ ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದ್ದಕ್ಕೆ ಅಭಿನಂದನೆಗಳು....

ಶಂಕರ ಪ್ರಸಾದ said...

ಚಿತ್ರಾ,
ಲೇಖನ ಚೆನ್ನಾಗಿದೆ. ಇದರ ಬಗ್ಗೆ ಹೇಳೋಕ್ಕೆ ತುಂಬಾ ಇದೆ, ಆದರೂ ಇಲ್ಲಿ ಅದನ್ನ ಹೇಳೋ ಧೈರ್ಯ ಬರ್ತಾ ಇಲ್ಲ.

ಕಟ್ಟೆ ಶಂಕ್ರ

ಚಿತ್ರಾ ಕರ್ಕೇರಾ said...

@ಕೋ...(:) ಪ್ರತಿಕ್ರಿಯೆಗೆ, ಹಾರೈಕೆಗೆ ಧನ್ಯವಾದಗಳು
&ಸುನಾಥ್ ಅಂಕಲ್ , ಶಿವಪ್ರಕಾಶ್ ವಂದನೆಗಳು
@ಹಲೋ ಶಂಕ್ರಣ್ಣ..ಹೆಹೆ ಮದುವೆಗೆ ಕರೇತೀನಿ ಬೈಬೇಡ. ಧೈರ್ಯದಿಂದ ಹೇಳೋದನ್ನು ಹೇಳಿಬಿಡಣ್ಣ
-ಚಿತ್ರಾ

ಸಾಗರದಾಚೆಯ ಇಂಚರ said...

ಚಿತ್ರಾ
ಅದು ಶ್ರಷ್ಟಿ ಮಾಡಿದ ವಿಚಿತ್ರ ನಿಯಮ,
ಬಹುಶ: ಪುರುಷ ಪ್ರಧಾನ ಸಮಾಜ ಮಾಡಿದ ಹುಚ್ಚು ನಿಯಮವೂ ಇರಬಹುದು
ಅದೇ ಮಹಿಳಾ ಪ್ರಧಾನ ಸಮಾಜವಿದ್ದಿದ್ದರೆ ಗಂಡೇ ಹೆಂಡತಿಯ ಮನೆಗೆ ಹೋಗುವ
ಪರಿಸ್ಥತಿ ಬರುತ್ತಿತ್ತೇನೋ,
ದಕ್ಷಿಣ ಕನ್ನಡದ ಬಂಟ್ ಸಮುದಾಯದಲ್ಲಿ ಗಂಡನೇ ಹೆಂಡತಿಯ ಮನೆಗೆ ಹೋಗುವ ಸಂಪ್ರದಾಯವಿದೆ ಎಂದು ಕೇಳಿದ್ದೇನೆ.
ಹೆಣ್ಣಿಗೆ ಜೀವನದಲ್ಲಿ ಎರಡು ಮನೆಯ ಆಳುವ ಅವಕಾಶ, ಗಂಡಿಗೆ ಒಂದೇ ಅಲ್ಲವೇ?
ಅದಕ್ಕೆ ಸಂತಸ ಪಡಿ
ಶುಭ ಘಳಿಗೆಗೆ ಅಭಿನಂದನೆಗಳು

ವನಿತಾ / Vanitha said...

ಚಿತ್ರಾ..ಈ ಸಲ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತ ಇಲ್ಲ..ನಮಗೆ ಮಾತ್ರಾ ಎರಡೂ ಮನೆಯೂ ನಮ್ಮದೇ ಅನ್ನುವ ಸೌಭಾಗ್ಯ ಅಲ್ವೇ..??!!:-)

ಭಾಶೇ said...

ದೇವರನ್ನ ಬೈಬೇಡಿ
ಈ ನಿಯಮ ಮಾಡಿದ ಸಮಾಜ ಹೊಣೆ!
ಎಲ್ಲ ಹೆಣ್ಣು ಮಕ್ಕಳಿಗೂ ಈ ತೊಳಲಾಟ ಸಹಜ.
ನಾಳೆ ಮದುವೆಯ ನಂತರ ಆ ಮನೆ ನಿಮ್ಮದೇ ಮನೆಯದಾಗ, ನಿಮ್ಮ ಗಂಡ ಮಗು ನಿಮ್ಮ ಸುತ್ತ ಸುಳಿದಾಗ ಅದರ ಸಂತೃಪ್ತಿಯೇ ಬೇರೆ!

ವಿ.ರಾ.ಹೆ. said...

@Vanitha,

Ur opinion is the best exaple of positive thinking and living in a practical +ve way in this social system. thank you..

@sharadhi,
Enanthira idke ? :)

Laxman (ಲಕ್ಷ್ಮಣ ಬಿರಾದಾರ) said...

ಅಭಿನಂದನೆಗಳು ಚಿತ್ರಾರವರೆ,
ನೀವು ತಿಳಿದಂತೆ ಎಲ್ಲ ಹೆಣ್ಣು ಮಕ್ಕಳಿಗೂ ಬರುವ ಒಂದು ಘಟ್ಟ ಇದು. ಈ ಹಂತದಲ್ಲಿ ಹಾಗೆ ಅನಿಸುವದು ಸಹಜ. ಆದರೆ ಇದೇ ಮಾತು ನಿಮಗೆ ಹಲವು ವರ್ಷದ ನಂತರ ಇರುವದಿಲ್ಲ. ಕೇಲವು ವಿಷಯಗಳಲ್ಲಿ ಹೆಣ್ಣು ಮಕ್ಕಳಿಗೆ ಇರುವ ಭಾಗ್ಯ ಸಿಗೋದಿಲ್ಲ ಹುಡುಗರಿಗೆ ಇರೊಲ್ಲ.

ಮದುವೆಗೆ ಕರೆಯಲು ಮರಿಬೇಡಿ
ಲಕ್ಷ್ಮಣ

ಚಿತ್ರಾ ಕರ್ಕೇರಾ said...

@ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ವನಿತಾ, ವಿಕಾಸ್..ನೀವು ಹೇಳೊದೇನು ಸರಿಯೇ. ಆದರೆ ಆ ಕ್ಷಣ ಹೆಣ್ಣೊಬ್ಬಳಿಗೆ ಹಾಗನಿಸುವುದು ಕೂಡ ಸಹಜವೇ. ಮದುವೆಗೆ ಕರೇತೀನಿ..ಎಲ್ಲರೂ ಬನ್ನಿ
-ಚಿತ್ರಾ

PARAANJAPE K.N. said...

ನಿನ್ನ ಬರಹ ಚೆನ್ನಾಗಿದೆ. ಮದುವೆಯ ಮಮತೆಯ ಕರೆಯೋಲೆಯ ನಿರೀಕ್ಷೆಯಲ್ಲಿದ್ದೇನೆ

Anonymous said...

ಚಿತ್ರಾ ನನ್ನ ಬ್ಲಾಗಿಗೂ + ನಿಮ್ಮಗಳ ಬ್ಲಾಗಿಗೂ ಬಾರದೆ ಬಹಳ ದಿನಗಳಾಗಿತ್ತು. ಮದುವೆಯ ಸಂಭ್ರಮಕ್ಕೆ ಶುಭಾಶಯಗಳು ಹುಡುಗೀ ...

ದಿನಕರ ಮೊಗೇರ.. said...

ಚಿತ್ರಾ ಮೇಡಂ,
ಹೆಣ್ಣು ಮಕ್ಕಳ ಮನದ ಬಗ್ಗೆ ( ಮದುವೆಯಾಗುವಾಗ ) ಚೆನ್ನಾಗಿ ಬರೆದಿದ್ದೀರಿ......
ನಾನು ಸಹ ಮದುವೆಯಾಗುವಾಗ, ನನ್ನ ಹೆಂಡತಿಯನ್ನ ಇದೆ ಪ್ರಶ್ನೆ ಕೇಳಿದ್ದೆ... ಬೇಜಾರಾಗಿತ್ತು ಕೂಡ.... ಅವಳ ನೆನಪನ್ನ ಕೆದಕಿದ್ದೀರಿ....
ಮೊನ್ನೆ ಅಜಾದ್ ಸರ್ ಮಂಗಳೂರಿಗೆ ಬಂದಿದ್ದಾಗ, ಹೋಗಿ ಭೇಟಿಯಾಗಿ ಬಂದೆ...... ನಿಮ್ಮ ಬಗ್ಗೆ ಅವರು ಹೇಳುತ್ತಿದ್ರು .... ನೀವು ಬಂದಿದ್ರೆ ಚೆನ್ನಾಗಿರ್ತಿತ್ತು.....

ಗೌತಮ್ ಹೆಗಡೆ said...

olle baraha:) nannadoo ondu shubhashya hosa badukige:)

ಜಲನಯನ said...

ಚಿತ್ರಾ, ನಿನ್ನ ಆ ಮದುಮಗಳಂತೆ ಶೃಂಗರಿಸಿಕೊಂಡ ದೃಶ್ಯ ನನಗೆ ಊಹಿಸಿಕೊಳ್ಳುವಾಗ ನಗು ಬರುತ್ತಿದೆ...ಮುಸಿ-ಮುಸಿ ಅಳುತ್ತಾ ಮನಸಲ್ಲೇ ಮಂಡಿಗೆ ತಿನ್ನೋ ದೃಶ್ಯ ಮಿಸ್ ಆಯ್ತು...ಛೇ..ಛೇ..

Anonymous said...

ಹಲೋ ಚಿತ್ರ ಮೇಡಂ,
ಯಾವಾಗ್ಲೂ ನಾವು ಕಲ್ಲಿನ ದೇವರನ್ನೇ ಆರಾಧಿಸುವುದು. ಹಾಗಾಗಿ ಹೊಸತಾಗಿ ದೇವರು ಕಲ್ಲಾದಂತಿಲ್ಲ!!! ಒಳ್ಳೆ ಬರಹ...ಶುಭವಾಗಲಿ...
ವಿನಾಯಕ ಕೋಡ್ಸರ..

Mohan Hegade said...

ಹಾಯ್ ಚಿತ್ರಾಜಿ,
ತುಂಬಾ ದಿನಗಳಾಯಿತು ಮಾತಾಡದೆ. ಸಣ್ಣ ಎಸ ಮ್ ಎಸ ನಲ್ಲೂ ವಿಷಯ ತಿಳಿಸದೇ ನಿಚ್ಚಿತಾಥ್ರ ಮಾಡಿಕೊಂಡಿರೆಂದು ಇಂದು ಈ ಬರಹ ಓದಿದಾಗ ತಿಳೀತು. ಒಳ್ಳೆಯ ಬರಹ ಕೂಡ ಅಮ್ಮನನ್ನು ಹುಡುಗರು ಕೊಡ ಬಿಟ್ಟು ಇರಬೇಕಾದ ಸ್ಥಿತಿ ತುಂಬಾ ಇದೆ. ನೀವು ಅಮ್ಮನಲ್ಲಿ ಇಟ್ಟ ಪ್ರೀತಿ ಅಮೋಘ, ಅದಕ್ಕೆ ದೇವರನ್ನು ಕೂಡ ನೀವು ಬೈಯಲು ಹೆದರುವುದಿಲ್ಲ.
ಹುಡುಗ ಹೇಗಿದ್ದಾರೆ? ನಿಚ್ಚಯದ ಫೋಟೋ ಕಳುಹಿಸುವುರಾ?. ಮದುವೆಯ ಕರೆಯೋಲೆ ನಿರೀಕ್ಷಿಸಬಹುದೇ?.

ಬರಲಾ,
ಮೋಹನ್ ಹೆಗಡೆ

shekar said...

CONGRATS

ತೇಜಸ್ವಿನಿ ಹೆಗಡೆ- said...

ಹಾರ್ದಿಕ ಶುಭಾಶಯಗಳು ಚಿತ್ರಾ :) ಆ ಫೋಟೋ ನಿಂದೇಯಾ? ಅಲ್ಲವೇ ಅದ್ಯಾಕೆ ಬಿಟ್ಟು ಹೋಗ್ತಿ ಅಂದುಕೊಳ್ಳುವೆ? ಪಡೆದುಕೊಂಡೆ ಅಂದುಕೋ.. ಯಾರಿಗೆ ತಾನೇ ಎರಡೂ ಮನೆಯ ಸೌಭಾಗ್ಯ ಇರುವುದು ಹೇಳು? ನಿನ್ನ ತಳಮಳ ಅರ್ಥವಾಗೊತ್ತೆ. ಆದರೆ ಅದನ್ನು ನಿಭಾಯಿಸುವ ಶಕ್ತಿ ಹೆಣ್ಣಿಗೆ ಹುಟ್ಟುತ್ತಲೇ ಬಂದಿರುತ್ತದೆ. ಎರಡೂ ಕಡೆಯ ಸಂಬಂಧವನ್ನೂ ನಿಭಾಯಿಸುವ ಚಾಕಚಕ್ಯತೆ ನಮಗೆ ಕೊಟ್ಟ ಆ ದೇವರು ಖಂಡಿತ ಕಲ್ಲು ಅಲ್ಲಮ್ಮ :)

sublogger said...

Very good narration of feelings...

ಗಿರಿ said...

ಹ ಹ್ಹ... ಸಾಂತ್ವನಕೆ ಅವನ ಹೆಗಲಿದೆಯಲ್ಲ... ಸ್ವಲ್ಪ ಪಕ್ಕಕ್ಕೆ ವಾಲಿ ಬಿಡಿ...!
ಮತ್ತೆ, ಅವರಿಗೂ...!!

Happy journey through the way together...

- ಗಿರಿ

My life is full of Mirth said...

hosa jeevankke kaliduttidira haleya savi nenapugalondige bavishyada sundarabada kshanagannu kaleyiri. tumba chennagide nimma balyada anubha oduttiruvaga nanna balyada dinagalu nenapadavu

My life is full of Mirth said...

tumba chennagide

Anonymous said...

nimma balyada savi nenapugala jothege sundaravada bhavisya kshanagalannu kaliyiri.

PRAVEEN ಮನದಾಳದಿಂದ said...

ಶುಭಗಳಿಗೆಯಲ್ಲಿ ಬೇಸರವೇಕೆ ಹೆಣ್ಣೇ,
ಇದು ಪುರುಷ ಪ್ರಧಾನ ಸಮಾಜ. ಇಲ್ಲಿನ ರೀತಿ ನೀತಿಗಳೇ ವಿಚಿತ್ರ. ಆದರೂ ಅಲ್ಲೆಲ್ಲೋ ಒಂದು ಸತ್ಯ ಅಡಗಿದೆ. ಒಳ್ಳೆಯ ಆಲೋಚನೆಯೊಂದು ಆ ನಿಯಮದ ಹಿಂದಿದೆ. ಅದು ನಮಗೆ ತಿಳಿಯುವುದಿಲ್ಲ. ಯಾಕೆಂದರೆ ನಾವು ಕಣ್ಣೆದುರಿಗೆ ಕಾಣುವುದೇ ಪ್ರಪಂಚ, ಇದೇ ಸತ್ಯ ಎಂದು ತಿಳಿದುಕೊಂಡಿದ್ದೇವೆ. ನಿಜವಾದ ಸತ್ಯ ನಮಗೆ ತಿಳಿಯುವುದು ಸಂಶೋದಿಸಿದಾಗ ಮಾತ್ರ! ಯಾವುದೋ ಒಂದು ಪದ್ಧತಿ ಹಿಂದಿನಿದ ನಡೆದು ಬಂದಿದೆ ಎಂದರೆ ಅದರ ಹಿಂದೆ ಒಂದು ಉದ್ದೇಶ ಖಂಡಿತ ಇದ್ದೆ ಇರುತ್ತದೆ. ಚಿಂತಿಸಬೇಡಿ, ಧನಾತ್ಮಕವಾಗಿ ಯೋಚಿಸಿ. ಶುಭಗಳಿಗೆಯಲ್ಲಿ ಸಂತೋಷವಾಗಿ ಇರಿ, ಇನ್ನೊಬ್ಬ ತಂದೆ-ತಾಯಿಯರನ್ನು ಪಡೆಯುವ ಪುಣ್ಯವಂತರು ನೀವು. ಅವರಲ್ಲೇ ನಿಮ್ಮ ಮಾತಪಿತ್ರುಗಳನ್ನು ಕಾಣಿರಿ. ಇನ್ನೊಂದು ಮನೆಯ ಒಡತಿಯಾಗುವ ಅದೃಷ್ಟವಂತೆ ನೀವು, ಆ ಮನೆಯನ್ನು ಬೆಳಗಿ. ನಿಮಗೆ ಶುಭವಾಗಲಿ.

'A-NIL' said...

Hmmm, swalpa kashta aagtide hege helabeku antha. aadre baduku heege alwa,,? sadaa khushi khushiyagiri... :-)

'A-NIL' said...

enu helali, hege helali,,,, hmmmm ondu gottagtillaa... buduku heegene alwa,,? :-)
sada khushi khushiyaagiri..
"A-NIL"