Friday, July 3, 2009

ಬೆಂಗಳೂರು ನನ್ನ ಪ್ರೀತಿಸಿದೆ, ಆದರೆ ಅಮ್ಮನಷ್ಟು ಅಲ್ಲ!

ಜುಲೈ 2, 2006!
ಭಾನುವಾರ.


ಮೊತ್ತಮೊದಲ ಬಾರಿಗೆ ಬೆಂಗಳೂರೆಂಬ ಮಹಾನಗರಿಗೆ ಕಾಲಿಟ್ಟ ದಿನ. ನಮ್ಮೂರಿಂದ ಶಿರಾಡ್ ಘಾಟ್ ದಾಟಿದ್ದು ಅದೇ ಮೊದಲು. ತುಮಕೂರು ರಸ್ತೆ ಸಮೀಪಿಸುತ್ತಿದ್ದಂತೆ ದೊಡ್ಡ ದೊಡ್ಡ ಟ್ಯಾಂಕರ್ ಗಳು ಕಣ್ಣಿಗೆ ಬೀಳುತ್ತಿರುವಾಗ ಇದೇನಾ ಬೆಂಗಳೂರು? ಅಂತ ಭಯ, ಗೊಂದಲ. ಯಾಕಪ್ಪಾ ಬಂದೇ ಈ ಊರಿಗೆ? ಅಂತ ಕಣ್ತುಂಬ ನೀರು ತುಂಬಿಕೊಂಡಿದ್ದೆ. ಊರಿಂದ ಕರೆದುಕೊಂಡು ಬಂದಿದ್ದ ಅಣ್ಣ, ಮೊದಲು ಹಂಗೆ ಅನಿಸೋದು..ಆಮೇಲೆ ಎಲ್ಲಾ ಸರಿಹೋಗುತ್ತೆ ಅಂತ ಸಮಾಧಾನಿಸ್ತಾ ಇದ್ರೆ..ಬಸ್ಸಲ್ಲಿ ಕುಳಿತು ಹೊರ ಜಗತ್ತನ್ನು ನೋಡುತ್ತಿದ್ದ ನನ್ನ ಕಣ್ಣುಗಳಲ್ಲಿ ಬರೇ ನೀರಷ್ಟೆ ತುಂಬಿಕೊಂಡಿತ್ತು. ಒಂದು ಪುಟ್ಟ ಸೂಟುಕೇಸ್ ಜೊತೆಗೆ ಒಂದು ಪುಟ್ಟ ಬ್ಯಾಗ್ ಜೊತೆಗೆ ಮೆಜೆಸ್ಟಿಕ್ ನ ಜನಜಂಗುಳಿ ನಡುವೆ ಬಂದು ನಿಂತಾಗ ಜುಲೈ 2, ಮುಂಜಾವು. ಪರವೂರಿಂದ ರೈಲಿನಲ್ಲಿ, ಬಸ್ಸಿನಲ್ಲಿ ಬಂದು ಇಳಿದ ಕೂಲಿಕಾರ್ಮಿಕರು. ಪುಟ್ ಪಾತ್ ನಲ್ಲೇ ಬದುಕು ಕಾಣೋರು, ಬಸ್ ಸ್ಟಾಂಡಿನ ಕಲ್ಲುಬೆಂಚಿನ ಮೇಲೆ ಮಲಗಿದೋರು, ಸಿಕ್ಕಲೆಲ್ಲಾ ಮೂತ್ರ ಮೂಡೋರು, ಜೊತೆಗೆ ಮೆಜೆಸ್ಟಿಕ್ ನಲ್ಲಿ ಮೂಗಿಗೆ ಬಡಿಯೋ ಕೆಟ್ಟ ವಾಸನೆ, ಹುಚ್ಚರು, ಅರೆಹುಚ್ಚರು, ಹಸಿದವರು, ಹೊಟ್ಟೆ ತುಂಬಿದೋರು, ಬದುಕಿದವರು, ಬದುಕಿಗಾಗಿ ಹೋರಾಡುವವರು,.....ಹೀಗೇ 'ಮೆಜೆಸ್ಟಿಕ್' ಬದುಕಿನ ನಾನಾ ಸತ್ಯಗಳಿಗೆ ತನ್ನನ್ನು ತೆರೆದುಕೊಳ್ಳುತ್ತಾ ನಿಂತಿದ್ದನ್ನು ನೋಡುತ್ತಾ ಮೂಖಳಾಗಿದ್ದೆ.

ಅಲ್ಲಿಂದ ಜಯನಗರ ಬಸ್ ಹತ್ತಿದ್ರೆ..ಜಯನಗರ ಅಂದ್ರೆ ಬಸ್ ಕಂಡಕ್ಟರ್ ಗೆ ಅರ್ಥವಾಗೊಲ್ಲ. ಜಯನಗರದಲ್ಲಿ ತುಂಬಾ ಬ್ಲಾಕ್ ಗಳಿವೆ ...ಅಂದಾಗ ಮತ್ತೊಂದು ಸಲ ಹೋಗಬೇಕಾದ ಸ್ಥಳ ಕನ್ ಫಾರ್ಮ್ ಮಾಡಿಕೋಬೇಕಾಯಿತು. ಜಯನಗರ ನಾಲ್ಕನೇ ಬ್ಲಾಕ್ ನಲ್ಲಿರುವ ಬ್ಯಾಂಕ್ ಆಫ್ ಬರೋಡಾ ಎಟಿಎಂ ಬಳಿ ಬಸ್ಸಿಂದಿಳಿದು ಬಸ್ ಸ್ಟಾಂಡ್ ಎಲ್ಲಿ ಅಂತ ಹುಡುಕಾಕೆ ನಾಲ್ಕು ರೌಂಡು ಹಾಕಿಸಿದ ಅಟೋದವನಿಗೆ 30 ರೂ. ಕೊಟ್ಟು ಇಳಿದಾಗ ಬಸ್ ಸ್ಟಾಂಡ್ ಅಲ್ಲೇ ಹತ್ತಿರದಲ್ಲಿತ್ತು!!

ಬೆಂಗಳೂರು..! ಬಂದೇ ಬಿಟ್ಟೆ..ಎಕ್ಸಾಮ್ ಹಾಲ್ ನಿಂದ ನೇರವಾಗಿ ಬೆಂಗಳೂರಿಗೆ ಬಿದ್ದುಬಿಟ್ಟೆ. ಕೈಯಲ್ಲಿ ಮೊಬೈಲ್ ಇಲ್ಲ..ಸಿಕ್ಕ ಕಾಯಿನ್ ಬೂತ್ ಗಳಿಗೆ ಕಾಯಿನ್ ಹಾಕಿ ಅತ್ತು ಅತ್ತು ದಿನಾ ಮುಖ ಊದಿಸಿಕೊಳ್ಳೋದೇ ಆಗಿತ್ತು. ಯಾಕಾದ್ರೂ ಬೆಂಗಳೂರಿಗೆ ಬಂದೆ ವಾಪಾಸ್ ಹೋಗೋಣ ಅಂದ್ರೆ ಆ ಧಮ್ ನಂಗಿಲ್ಲ, ಭಯ. ಹೊರಗಡೆ ಜನರ ಮುಖ ನೋಡೋಕೆ ಭಯವಾಗ್ತಿತ್ತು. ಹಾಸ್ಟೇಲ್ ನಲ್ಲಿದ್ರೂ ಗುಬ್ಬಚ್ಚಿ ಥರ ಇದ್ದ ನಂಗೆ ಈ ಬೆಂಗಳೂರು ಮೈಚಳಿ ತರಿಸಿಬಿಟ್ಟಿತ್ತು. ಬಂದ ಮೊದಲ ದಿನ ಬನಶಂಕರಿಗೆ ಅಣ್ಣ ಜೊತೆ ಹೋಗಿದ್ದೆ. ನಾನು ರಸ್ತೆ ದಾಟಬೇಕಾದ್ರೆ ವಾಹನಗಳೆಲ್ಲಾ ಹೋಗಿ ರಸ್ತೆ ಖಾಲಿಯಾಗಲೀ..ಅಂತ ಕಾಯ್ತಾ ನಿಂತಿದ್ದೆ. ಆಮೇಲೇ ಆರಾಮವಾಗಿ ದಾಟೋಣ ಅಂತ. ಆದ್ರೆ ಈ ಬೆಂಗಳೂರಲ್ಲಿ ಖಾಲಿರಸ್ತೆಗಳನ್ನು ಕಾಣೋದೆಲ್ಲಿ? ಅಣ್ಣ ಕೈ ಹಿಡಿದು ಬೈಕೊಂಡು ಎಳೆದುಕೊಂಡು ಹೋಗುವಾಗ ಭಯದಿಂದ ಅತ್ತೆಬಿಟ್ಟಿದ್ದೆ. ಹೋದಲೆಲ್ಲಾ ಸಿಗ್ನಲ್ ಗಳು..ಜನರ ಬೊಬ್ಬೆ, ಗದ್ದಲ...ಅಸಹ್ಯವಾಗಿಬಿಟ್ಟಿತ್ತು. ಸೂರ್ಯ ಮುಳುಗೋ ಹೊತ್ತಿಗೆ ಮನೆ ಸೇರದಿದ್ರೆ ಹೆದರಿಕೆ. ಸುಮಾರು ಆರು ತಿಂಗಳು ಬೇಕಾಯಿತು...ಈ ಬೆಂಗಳೂರಿಗೆ ಹೊಂದಿಕೊಳ್ಲೋಕೆ. ಮೂರ್ನಾಲ್ಕು ತಿಂಗಳಲ್ಲಿ ಹೊಟ್ಟೆಪಾಡಿಗೊಂಡು ಕೆಲ್ಸ ಸಿಕ್ಕು, ಮೂರು ವರ್ಷದಲ್ಲಿ ಒಂದು ಆಫೀಸು ಬದಲಾಯಿಸಿದ್ದೀನಿ. ಮೂರು ವರ್ಷದಲ್ಲಿ ಎಂಥೆಂಥವರನ್ನೂ ಕಂಡೆ. ನಮ್ಮಲ್ಲಿರುವ 'ಒಳ್ಳೆತನ, ಮುಗ್ದತೆ' ಬಳಸಿಕೊಂಡು ಬದುಕುವವರು, ಮೋಸಗಾರರು, ವಂಚಕರು, ಕೊಲೆಗಡುಕರು, ಒಳ್ಳೆಯವರು/ ಕೆಟ್ಟವರು ಎಲ್ಲರನ್ನೂ ನೋಡಿದೆ. ಬಹುಶಃ ನಮ್ಮೂರ ಹಸಿರ ಮಧ್ಯೆ ಇರುವ ನಮ್ಮ ಪುಟ್ಟ ಮನೆಯಲ್ಲಿ ಕುಳಿತಿರುತ್ತಿದ್ರೆ ಬಹುಶಃ ಇದನ್ನೆಲ್ಲಾ ನೋಡುತ್ತಿರಲಿಲ್ಲ ಎಂದನಿಸುತ್ತೆ.

ಹೌದು, ನಿನ್ನೆ ಇದ್ದಕಿದ್ದಂತೆ ನೆನಪಾಯಿತು. ಇಲ್ಲಿ ಬಂದು ಮೂರು ವರ್ಷವಾಯಿತು. ನಿಜವಾಗ್ಲೂ ಅಚ್ಚರಿಪಟ್ಟೆ. ಅಷ್ಟು ಪುಕ್ಕಲುತನ ವಿದ್ದೋ ಹುಡುಗಿ ನಾನೇನಾ? ಅನಿಸ್ತು. ಹೌದು ಬದಲಾಗಿದ್ದೇನೆ..ಒಂಚೂರು ಹೆದರಿಕೆ, ಭಯ ಎಲ್ಲನೂ ಹೋಗಿದೆ. ನಾಲ್ಕು ಜನರೆದುರು ಮಾತಾನಾಡೋ ಧೈರ್ಯ ಬಂದಿದೆ. ಅಡುಗೆ ಮನೆ ಹೊಕ್ಕದವಳು ಇಲ್ಲಿಯ ಪುಟ್ಟ ಅಡುಗೆ ಮನೇಲಿ ನಂಗೆ ಬೇಕಾದಷ್ಟಾದರೂ ಮಾಡಿಕೊಂಡು ತಿನ್ನೋಕೆ ಕಲಿತೆ. 'ಬದುಕುವವರ' ನಡುವೆ ಹೇಗೆ 'ಬದುಕಬೇಕು' ಅನ್ನೋದನ್ನು ಕಲಿತೆ. ಬೆಂಗಳೂರನ್ನು ಪ್ರೀತಿಸಿದೆ..ಬೆಂಗಳೂರೂ ನನ್ನನ್ನು ಪ್ರೀತಿಸಿದೆ..ಆದರು ನನ್ನ ಅಮ್ಮನಷ್ಟು ಅಲ್ಲ! ದುಡಿಯೋಕೆ ಕಲಿತಿದ್ದೇನೆ..ಹೌದು, ಬೆಂಗಳೂರು ಎಲ್ರಿಗೂ ಅನ್ನ ನೀಡುತ್ತೆ. ಬದುಕೋಕೆ ಕಲಿತವನು ಮಾತ್ರ ಇಲ್ಲಿ ಸಲ್ಲುತ್ತಾನೆ ಅನ್ನೋದನ್ನೂ ತಿಳ್ಕೊಂಡೆ.

ಹೌದು...ನಿಮ್ ಜೊತೆ ಹೇಳಿಕೋಬೇಕಾನಿಸ್ತು...ಹೇಳಿಬಿಟ್ಟೆ. ಹಾಗೇ ನೋಡಿದ್ರೆ ಹೇಳಕ್ಕೆ ತುಂಬಾ ಇದೆ..ಇನ್ನೊಂದ್ಸಲ ಹೇಳ್ತೀನಿ..ಬೋರ್ ಆದ್ರೆ ಸಾರಿ..

12 comments:

ದಿವ್ಯಾ ಮಲ್ಯ ಕಾಮತ್ said...

ಚಿತ್ರಾರವರೆ,
ಒಂದು ಪುಟ್ಟ ಊರಿಂದ, ಬೆಂಗಳೂರಿಗೆ ಬರುವ ಎಲ್ಲರ ಅನುಭವವೂ ಭಾಗಶಃ ಇದೆ..
" 'ಬದುಕುವವರ' ನಡುವೆ ಹೇಗೆ 'ಬದುಕಬೇಕು' ಅನ್ನೋದನ್ನು ಕಲಿತೆ. " ಈ ಸಾಲು ತುಂಬಾ ಮಾರ್ಮಿಕವಾಗಿದೆ.. ಇಷ್ಟವಾಯಿತು!

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ...

ನನ್ನ ಅನುಭವವೂ ಹೆಚ್ಚು ಕಡಿಮೆ ಇದೇ ತರಹನೇ ಇದೆ... ಹೆಚ್ಚು ಮಾತನಾಡದ ನಾನು ಬೆ೦ಗಳೂರಿಗೆ ಬ೦ದಾಗ ಈ ಜನಜ೦ಗುಳಿಯಲ್ಲಿ ಬದುಕುವುದು ಸಾಧ್ಯವಾಗುತ್ತಾ ಅ೦ತ ಭಯಪಟ್ಟಿದ್ದೆ... ಈಗ ಬೆ೦ಗಳೂರು ನ೦ಗ್ ಮಾತು ಕಲಿಸಿಬಿಟ್ಟಿದೆ....

ಆದರೂ ಬೆ೦ಗಳೂರು ಅ೦ದರೆ ಅದೇನೋ ಪ್ರೀತಿ...

ತು೦ಬಾ ಇಷ್ಟವಾಯಿತು....

Laxman (ಲಕ್ಷ್ಮಣ ಬಿರಾದಾರ) said...

tumba chennagide chitra

sunaath said...

ಬದುಕುವದನ್ನು ಕಲಿತ ಬರಹ ಚೆನ್ನಾಗಿದೆ. ಹೇಳೋದನ್ನ ಇನ್ನೂ ಹೇಳಿ. ಕೇಳೋಕೆ ಕಾತರವಿದೆ.

ಬಾಲು said...

ondu chikka oorinda baro ellara anubhava vu ide.

:) chenangide nimma anubhava lekhana.

ಶರಶ್ಚಂದ್ರ ಕಲ್ಮನೆ said...

ಚಿತ್ರ,
ನನ್ನ ಅನುಭವವೂ ಹೀಗೆ... ಬಹುಶ ಪರ ಊರಿನಿಂದ ಬರುವ ಎಲ್ಲರಿಗೂ ಇದೆ ಅನುಭವ ಆಗುತ್ತದೆ... ಕೇಳುವವರು ನಾವಿರುವಾಗ ಹೇಳೋಕೆ ನಿಮಗೇಕೆ ಭಯ... ಬರಹ ಮುಂದುವರೆಯಲಿ :)

ಮಲ್ಲಿಕಾರ್ಜುನ.ಡಿ.ಜಿ. said...

ಬೆಂಗಳೂರನ್ನು ನೀವು ಕಂದ ಬಗೆ ಚೆನ್ನಾಗಿದೆ. ಇನ್ನಷ್ಟು ಬೆಂಗಳೂರಿನ ಅನುಭವಗಳನ್ನು ನೆನಪಿಸಿಕೊಳ್ಳಿ. ಮೂರು ವರ್ಷವಾಯಿತಾ?

PARAANJAPE K.N. said...

ನಿನ್ನ ಅನುಭವದ ಬರಹ ಚೆನ್ನಾಗಿದೆ. ಹೆಚ್ಚು ಕಡಿಮೆ ಪುಟ್ಟ ಊರಿನಿ೦ದ ಬರುವ ಎಲ್ಲರದು ಇದೆ ಕಥೆ. ಕೆಲವರು ಇಲ್ಲಿ ಸಲ್ಲದೆ ಮರಳಿ ವಾಪಸಾಗುತ್ತಾರೆ. ಇನ್ನು ಕೆಲವರು ಇಲ್ಲೇ ಬಯು ಕ೦ಡುಕೊಳ್ಳುತ್ತಾರೆ . ನಿನ್ನ ಬಾಳು ಇಲ್ಲಿ ಅರಳುತ್ತಿದೆ. ಅದು ಖುಷಿಯ ಸ೦ಗತಿ. ನಿಧಾನಕ್ಕೆ ಅಮ್ಮನನ್ನು ಇಲ್ಲಿಗೆ ಕರೆಸಿಕೊ೦ಡರೆ ಆಗ ಅಮ್ಮನ ಪ್ರೀತಿಯೂ ಸಿಗುತ್ತದೆ.

shivu.k said...

ಚಿತ್ರ,

ಬೆಂಗಳೂರನ್ನು ಮೊದಲು ಕಂಡಾಗ ಆದ ಆನುಭವ ಚೆನ್ನಾಗಿದೆ...ಲೇಖನದಲ್ಲಿ ಮುಗ್ದತೆಯಿದೆ...ಈ ನಿಟ್ಟಿನಲ್ಲಿ ಹಳೆಯ ನೆನಪುಗಳನ್ನು ಭಾವನಾತ್ಮಕವಾಗಿ ಮೆಲುಕು ಹಾಕುವುದರಲ್ಲಿನ ಮಜವೇ ಬೇರೆ...
ಇನ್ನಷ್ಟು ಇಂಥವು ಬರಲಿ....

ಇಳಾ said...

Please see my blog
http://www.ilaone.blogspot.com/

Anonymous said...

Please see my blog
http://www.ilaone.blogspot.com/

ಚಿತ್ರಾ ಸಂತೋಷ್ said...

ಪ್ರೀತಿಯಿಂದ ಪ್ರತಿಕ್ರಿಯಿಸಿ, ಬೆನ್ನು ತಟ್ಟಿದ ಎಲ್ಲರಿಗೂ ಧನ್ಯವಾದಗಳು
-ಚಿತ್ರಾ