Wednesday, February 11, 2009

ಎದೆಯಿಂದ-ಎದೆಗೆ ಸಂಬಂಧಗಳ ಕೊಂಡಿ ಬೆಸೆದುಬಿಡಮ್ಮಾ..!

ಮಗಳೇ...
ಪತ್ರ ನೋಡಿ ಅಚ್ಚರಿಯಿಂದ ಪಿಳಿಪಿಳಿಂತ ಕಣ್ಣು ಬಿಡ್ತಾ ಇದ್ಯಾ? ಯಾರ ಪತ್ರ ಅಂತ ಮತ್ತೆ ಮತ್ತೆ ಅಚ್ಚರಿ, ಅನುಮಾನಗಳ ಸುಳಿಯಲ್ಲಿ ವಿಲವಿಲ ಒದ್ದಾಡ್ತಾ ಇದ್ಯಾ? ಹೌದು, ನಿನ್ನ ಅನುಮಾನ, ಅಚ್ಚರಿಗಳು ಸಹಜವೇ. ನಿನ್ನೆ ಬೆಳಿಗೆದ್ದು ಪತ್ರಿಕೆ ತೆರೆದಾಗ ಕಂಡ ಹುಬ್ಬಳ್ಳಿಯ ಸರ್ಕಾರಿ ಶಾಲೆಯೊಂದರಲ್ಲಿ ಪ್ರೇಮಕ್ಕಾಗಿ ಆರನೇ ಕ್ಲಾಸಿನ ಪುಟ್ಟ, ಮುಗ್ಧ ಹುಡುಗನೊಬ್ಬ ಸಹಪಾಠಿಯಿಂದಲೇ ಕೊಲೆಯಾದ ಘಟನೆ ಮನಸ್ಸನ್ನು ಕಲಕಿಬಿಡ್ತು. ಇನ್ನೇನೋ ಹೊಸ ಜಗತ್ತಿಗೆ ತೆರೆದುಕೊಳ್ಳುವ ಆ ಮುಗ್ಧ ಕಂದಮ್ಮಗಳಲ್ಲಿ ಪ್ರೇಮ, ಅದಕ್ಕಾಗಿ ನಡೆದ ಕೊಲೆ..ಅಪರಾಧಿಗಳಂತೆ ಕಂಬಿ ಎಣಿಸುತ್ತಿರುವ ಮಕ್ಕಳನ್ನು ಕಂಡಾಗ ನನ್ನ ಜೀವ ರೋಧಿಸಿತ್ತು. ಕಣ್ಣೀರೇ ಬತ್ತಿಹೋದ ಹೃದಯದಲ್ಲಿ ಮತ್ತೆ ಕಣ್ಣೀರಧಾರೆ ಉಕ್ಕಿಹರಿಯಿತ್ತು. ನಿನ್ನ ಮುಗ್ಧ ಮುಖ ಕಣ್ಣೆದುರು ಬಂದು ನಿಂತಿತ್ತು. ನಿನಗೆ ಅಮ್ಮನಾಗಲಿಲ್ಲವಾದರೂ..ಅಮ್ಮನಾಗಿ ಕೆಲ ಮಾತುಗಳನ್ನು ಹೇಳಬೇಕನಿಸಿತ್ತು ಮಗಳೇ..ನನ್ನ ಮಾತುಗಳನ್ನು ತಿರಸ್ಕರಿಸಲ್ಲ ತಾನೇ?

ಆ ಜನಗಳ ಸದ್ದಿಲ್ಲದ ಪುಟ್ ಪಾತ್ ನಲ್ಲಿ ನಿನ್ನ ಹೆತ್ತು ಬಿಸಾಡಿದಾಗ ನನ್ನ ಕರುಳೂ ಅತ್ತಿದೆ. ಮಡಿಲಲ್ಲಿ ಜೋಕಾಲಿಯಾಡಿಸಬೇಕೆಂದು ಮನ ಹಂಬಲಿಸಿದೆ. ಪ್ರೀತಿ, ಮಮತೆಯ ಹಾಲುಣಿಸಿ ಎದೆಯಾಳದಲ್ಲಿ ನಿನ್ನ ಬಚ್ಚಿಡುವ ಅಮರ ಆಸೆ ನನಗೂ ಇತ್ತಮ್ಮ. ಆದರೆ, ಆ ಕ್ಷಣ ಅಮ್ಮನಾಗಿ ಮಗುವಿನ ಮನಸ್ಸು ಅರಿಯಲೂ ಶಕ್ತಳಾಗಿರಲಿಲ್ಲ . ನಿನಗೊಂದು ನೆಲೆ, ಬೆಚ್ಚಗಿನ ಆಸರೆ..ನಿತ್ಯ ನಿನ್ನ ನಗುವಿನಲ್ಲೇ ಬೆಳಕು ಕಾಣುವ ಆಸೆ ನನಗೂ ಇತ್ತು..ಆದರೆ ಹಾಗಾಗಲಿಲ್ಲ ನೋಡು!

ನನ್ನ ಮಡಿಲಲ್ಲಿ ಹುಟ್ಟಿ, ಯಾರದೋ ಬಾಟಲ್ ಹಾಲುಂಡು, ಯಾರೋ ತೂಗಿದ ಬದುಕಿನ ತೊಟ್ಟಿಲಲ್ಲಿ ಬೆಳೆದೆ. ನಮ್ಮ ದೇಶ, ನಮ್ಮ ಸಂಸ್ಖೃತಿ ಎಂದು ಬೀದಿ ಬೀದಿಯಲ್ಲಿ ನಿಂತು ಬೊಬ್ಬಿಡುವವರು..ಯಾರೋ ಒಬ್ಬ ಕಾಮುಕನ ಕ್ಷಣಿಕ ತೃಷೆಗೆ ಬಲಿಯಾಗಿ ನಿನ್ನ ಹೆತ್ತಾಗ ...ಬೆಳಕಾಗಲಿಲ್ಲ, ದಾರಿ ತೋರಿಲ್ಲ. ಸಮಾಜದ ಎದುರು ಹೆಣ್ಣಾಗಿ ನಿನ್ನ ಜೊತೆ ಬದುಕುವ ಹಕ್ಕನ್ನೂ ಸಮಾಜ ಕಿತ್ತುಕೊಂಡುಬಿಟ್ಟಿತ್ತು..ಆ ಆತ್ಮವಿಶ್ವಾಸ ನನ್ನಲ್ಲಿ ಇರಲಿಲ್ಲ ಮಗಳೇ.. ಸಮಾಜಕ್ಕೆ ಹೆದರಿ ಅದೆಂಥ ನೀಚ ಕೆಲಸಮಾಡಿಬಿಟ್ಟೆ...ನಿನ್ನಿಂದ ಅಮ್ಮಾ ಅಂತ ಕರೆಸಿಕೊಳ್ಲಲು ನಾ ಅರ್ಹಳಲ್ಲ ಬಿಡು..ಆದರೂ ಹೆತ್ತ ಮಡಿಲು ಮರೆತೇತೇ? ಹೌದು! ಮಗಳೇ....ಸೂರ್ಯ-ಚಂದ್ರರಿರುವಷ್ಟೇ ಸತ್ಯ..ನಿನ್ನ ಕಣ್ತುಂಬಾ ನೋಡಬೇಕು..ನಿನ್ನ ಹೆಜ್ಜೇಲಿ ನನ್ನ ಹೆಜ್ಜೆಯಿಟ್ಟು ಮಗಳೇ ಅನ್ನಬೇಕು. ಹಾಲು, ತುತ್ತು ಬಾಯಿಗಿಡಲು ಹೃದಯ ಹಂಬಲಿಸುತ್ತೆ . ಒಂಬತ್ತು ತಿಂಗಳು ಹೊತ್ತು ಮೆರೆದವಳಿಗೆ ತುತ್ತು ನೀಡಿ ಸಾಕೋ ಧೈರ್ಯ ಇರಲಿಲ್ಲ ಅಂತ ನನ್ನ ನಾನೇ ಶಪಿಸಿಕೊಳ್ಳುತ್ತೇನೆ.

ನೀನು ತುಂಬಾನೇ ಚೆನ್ನಾಗಿದ್ದೀಯಾ..ಆದರೂ ಪತ್ರಿಕೇಲಿ ಓದಿದ ಘಟನೆ ಮನಸ್ಸನ್ನು ತಲ್ಲಣಿಸಿತ್ತು. ಎಲ್ಲಿ ನನ್ನ ಮಗಳು ಎಡವಿಬಿಡ್ತಾಳೋ ಅಂತ ಭಯ ನಂಗೆ. ಪ್ರೇಮದ ಗಾಥೆಯಲ್ಲಿ ಎಡವಿಬೀಳಬೇಡಮ್ಮಾ. ಪ್ರೇಮಿಸುವ ಬದಲು, ಪ್ರೀತಿಸು..ನಿನ್ನನ್ನು, ಜಗತ್ತನ್ನೂ, ಕೊಟ್ಟಿರುವ ಬದುಕನ್ನು! ಇದರಲ್ಲೇ ಜೀವನಸುಖ ಅಡಗಿದೆ ಪುಟ್ಟೀ..ಬೇರೆಯವರ ಪ್ರೀತಿ ಬಯಸುವ ಮೊದಲು ನಿನ್ನೊಳಗೆ ಪ್ರೀತಿಯ ಸಸಿ ಬೆಳೆಸಿಬಿಡು ಮಗಳೇ..

"ತಾರುಣ್ಯದ ಉನ್ಮಾದದಲ್ಲಿ ಜಗತ್ತೆಲ್ಲ ಸುಂದರಕಾಂಡ ಎನಿಸುತ್ತದೆ. ಜೀವನವೆಲ್ಲ 'ಉದ್ಯೋಗಪರ್ವ' ಎನಿಸುತ್ತದೆ. ಪ್ರತಿಯೊಬ್ಬ ಗದರ್ಭನೂ ಗಂಧರ್ವನಾಗುತ್ತಾನೆ. ಅಪಸ್ಮಾರಿಯೂ ಅಪ್ಸರೆಯೆನಿಸುತ್ತಾಳೆ" ಮತ್ತೆ ಮತ್ತೆ ನೆನಪಾಗುವ ಈ ಸಾಲನ್ನು ನಿನ್ನ ಕಿವಿಯಲ್ಲಿ ಮತ್ತೆ ಮತ್ತೆ ಗಟ್ಟಿಯಾಗಿ ಕೂಗಬೇಕನಿಸುತ್ತೆ.

ಕನಸ ಕನವರಿಕೆಯಲ್ಲಿ, ಮನದ ಮಾರ್ದನಿಯಲ್ಲಿ, ಕವಿಗಳ ಸಾಲಿನಲ್ಲಿ, ಸಂಗೀತದಲ್ಲಿ, ಕಲಾವಿದನ ಚಿತ್ರಪಟಗಳಲ್ಲಿ, ಸೃಷ್ಟಿ ಸಂಕುಲಕೆ ಸಾಮೀಪ್ಯ ದೇದಿಪ್ಯಮಾನವಾಗಿ ಹೊಳೆವ ಹೆಣ್ಣು..ಕ್ಷಣಮಾತ್ರದ ತಪ್ಪಿಗೆ ಯಾರಿಗೂ ಬೇಡವಾಗುತ್ತಾಳೆ. ಆಕೆಯ ಹೃದಯದಲ್ಲಿ ಹೆಪ್ಪುಗಟ್ಟಿದ ನೋವಿಗೆ ದನಿಗೂಡಿಸುವವರು ಯಾರೂ ಇರುವುದಿಲ್ಲ. ಮಗಳೇ..ಪ್ರೀತಿ, ಮಮತೆಯ ಮೂಲಕವೇ ಜಗದ ಎದೆಯಿಂದ -ಎದೆಗೆ ಸಂಬಂಧಗಳ ಕೊಂಡಿ ಬೆಸೆದುಬಿಡಮ್ಮಾ...ಆದರೆ ನಿನ್ನನ್ನು ಬಲಿಯಾಗಿಸಿ ಅಲ್ಲ!

ಮಗಳೇ ಒಂದೇ ಒಂದು ಆಸೆ..ನೀನು ಬರಡು ಎದೆಗೆ ತುಂತುರು ಹನಿ ಚಿಮುಕಿಸುವ ಜೀವನ್ಮುಖಿಯಾಗಬೇಕು. ಪ್ರೀತೀನ ಜಲಧಾರೆಯಂತೆ ಹರಿಸುವ, ಜಗತ್ತಿನ ಒಡಲಾಳದ ದನಿಯಾಗಬೇಕು. ಜೀವನದ ಸತ್ಯಗಳಿಗೆ ನಿನ್ನ ನೀ ತೆರೆದುಕೊಳ್ಳುವಾಗ ಜಗತ್ತಿನ ನೀರವತೆಯನ್ನು ಅರ್ಥಮಾಡಿಕೊಂಡು ಹೆಜ್ಜೆಯಿಡುವ ಮಗಳು ನೀನಾಗಬೇಕು.

ಈ ನಲವತ್ತು ವರುಷಗಳಲ್ಲಿ ಬೀದಿಬದಿಯನ್ನೇ ಬದುಕಾಗಿಸಿದ ನನಗೆ ಸಂಸಾರದ ಸುಖ-ದುಃಖಗಳಿಲ್ಲ. ಬೆಳದಿಂಗಳೂ ನನ್ನ ಪಾಲಿಗೆ ಬೆಳಕಾಗಿಲ್ಲ. ನನ್ನ ಕಣ್ಣಲ್ಲಿ ನಗು ತರಿಸಿಲ್ಲ. ಜಗದ ನಗುವೂ ನನ್ನ ಮುಖದಲ್ಲಿ ಮಂದಹಾಸ ಮೂಡಿಸಲಿಲ್ಲ. ಜೋಗುಳ ತೂಗುತ್ತಾ, ಮಮತೆಯ ಮಹಾಪೂರ ಹರಿಸುವ, ಮೈಮರೆತು ನಗುವ ನಿನ್ನಮ್ಮ ನಾನಾಗಲಿಲ್ಲ..ಕ್ಷಮಿಸಿಬಿಡು ಮಗಳೇ..
ಇಂತೀ,
ಅಮ್ಮ

....ಮೊನ್ನೆ ಮಾತನಾಡುತ್ತಾ ಕುಳಿತಂತೆ, ಪ್ರಕಾಶ್ ಹೆಗ್ಡೆ ಸರ್, ನಾನು ವ್ಯಾಲಂಟೈನ್ಸ್ ಡೇ ಗೆ 'ಬಾಂಬ್' ಹಾಕ್ತೀನಿ ಅಂದ್ರು..ಶಿವಣ್ಣ ಕೇಳಿದ್ರೆ ಒಂಚೂರು ಬಿಚ್ಚದೆ 'ಸಸ್ಪೆನ್ಸ್'ನಲ್ಲಿಟ್ರು. ಇನ್ನೊಬ್ಬ ಬ್ಲಾಗ್ ಗೆಳೆಯನ ಕೇಳಿದ್ರೆ..'ನಾನು ನನ್ನ ಗೆಳತಿಗೆ ಪತ್ರ ಬರೀಬೇಕು' ಅಂದ. ಗೆಳತಿನ ಕೇಳಿದ್ರೆ, 'ಹೇಳಕ್ಕಾಗಲ್ಲ' ಅಂದ್ಳು. ಇವರೆಲ್ಲರ ನಡುವೆ ನಾನೂ ಏನಾದ್ರೂ ಹೊಸತು ಬರೀಬೇಕು..ಈ ಬಾಂಬ್, ಸಸ್ಪೆನ್ಸ್ ಗಳ ನಡುವೆ ನನಗೆ ಕನಿಷ್ಠ ಪಕ್ಷ ನೂರಕ್ಕೆ ಮೂವತ್ತು ಅಂಕ ಆದ್ರೂ ಕೊಡಬೇಕು..ಅಂತ ಅಂದುಕೊಂಡವಳಿಗೆ 'ತಾಯಿ ಮಗಳಿಗೆ ಪತ್ರ ಬರೆದರೆ ಹೇಗೇ?' ....ಎಲ್ಲೋ ನೋಡಿದ್ದು...ಎಲ್ಲೋ ಕೇಳಿದ್ದು..ಮನದೊಂದಿಗೆ ಮಾತನಾಡಿದಾಗ ಈ ಪತ್ರ ಹುಟ್ಟಿದೆ.

25 comments:

shivu.k said...

ಚಿತ್ರಾ,

ಲೇಖನ ಮನಸ್ಪರ್ಶಿಯಾಗಿದೆ......ಅದ್ಭುತ ಕಲ್ಪನೆ. ಕಲ್ಪನೆಯಲ್ಲೂ ಈ ರೀತಿ ಅಮ್ಮ ಮಗುವಿನ ಭಾಂಧವ್ಯ , ಮಮತೆ, ಕಕ್ಕುಲತೆ, ಹಾಲಿಗಿಂತ ಶುಧ್ಧವಾದ ಪ್ರೀತಿ, ನೋವು, ಸಮಾಜದ ನಿಜ ಸ್ಥಿತಿ, ಅಸಹಾಯಕ ಹೆಣ್ಣಿನ ಪರಿಸ್ಥಿತಿ...... ಎಲ್ಲವನ್ನೂ ತುಂಬಾ ಚೆನ್ನಾಗಿ ವಿವರಿಸಿದ್ದೀಯಾ....ಪ್ರೇಮಿಗಳ ದಿನದ ವಿಶೇಷಕ್ಕಾಗಿ ಎಲ್ಲರೂ ಪ್ರೇಮಿಗಳ ಹಿಂದೆ ಬಿದ್ದರೆ ನೀನು ಆರಿಸಿಕೊಂಡಿರುವ ವಸ್ತು ತುಂಬಾ ಚೆನ್ನಾಗಿದೆ....ಹೇಳಿರುವ ರೀತಿಯೂ ಚೆನ್ನಾಗಿದೆ...good keep it up...

ಸಂದೀಪ್ ಕಾಮತ್ said...

ಚೆನ್ನಾಗಿದೆ ಪತ್ರ:)

Santhosh Rao said...

ವ್ಯಾಲಂಟೈನ್ಸ್ ಡೇ ಗೆ ಯಾರ್ ಏನ್ ಬಾಂಬ್ ಹಾಕ್ತಾರೋ ಗೊತ್ತಿಲ್ಲ...
ಆದ್ರೆ ನೀವೊಂತು ಒಂದು ಸುಂದರವಾದ ಹೃದಯಸ್ಪರ್ಶಿ ಪತ್ರ ಕೊಟ್ಟಿದ್ದೀರ, ಪತ್ರದ ಪೂರ್ವಪರಗಳು ಏನು ಗೊತ್ತಿಲ್ಲದೆ ಇದ್ರೂ .. ತುಂಬ ಚೆನ್ನಾಗಿ ಓದಿಸಿಕೊಂಡು ಹೋಗುತ್ತೆ .

Ittigecement said...

ಚಿತ್ರಾ..

ಹ್ರದಯ ಸ್ಪರ್ಷಿ ಲೇಖನ...

ಇತ್ತೀಚೆಗೆ ತುಂಬಾ ಭಾವ ಪೂರ್ಣವಾಗಿ ಬರೆಯುತ್ತಿರುವಿರಿ..

ಒಬ್ಬ ನಿಸ್ಸಹಾಯಕ ತಾಯಿಯ .. ವಾತ್ಸಲ್ಯ..ಪ್ರೇಮವನ್ನು..

ಚೆನ್ನಾಗಿ ಚಿತ್ರಿಸಿದ್ದೀರಿ....

ಪ್ರೇಮಿಗಳ ದಿನಕ್ಕೆ ನಿಜಕ್ಕೂ
ಒಂದು ಅರ್ಥ ಪೂರ್ಣ ಲೇಖನ..

ಅಭಿನಂದನೆಗಳು...

ನಾನು "ಬಾಂಬ್" ಹಾಕಲ್ಲಮ್ಮ..
ನಾನು... ಶ್ರೀರಾಮ ಸೇನೆಯವನು ಅಂದು ಕೊಂಡರೆ ಕಷ್ಟ..
ಈ ಸಾರಿ "ಚೇತನಾಳ" ಮುಂದಿನ ಭಾಗವನ್ನೇ ಬರೆಯುವ ವಿಚಾರವಿದೆ..

ಒಳ್ಳೆಯ ಲೇಖನಕ್ಕಾಗಿ ಮತ್ತೊಮ್ಮೆ

ಅಭಿನಂದನೆಗಳು...

Anonymous said...

ಪತ್ರ ತುಂಬ ಚೆಂದ ಇದೆ ಚಿತ್ರಾ

Anonymous said...

ಪತ್ರ ತುಂಬ ಚೆಂದ ಇದೆ ಚಿತ್ರಾ

Prakash Shetty said...

ಲೇಖನ ನನಗೆ ತುಂಬಾ ಹಿಡಿಸಿತು... ಪ್ರೇಮದ ಬಲೆಗೆ ಬೀಳುವ ಹುಚ್ಚು ಮನಗಳಿಗೆ ಕಿವಿಮಾತನ್ನು ನೀವು ಅಮ್ಮನ ರೂಪದಲ್ಲಿ ಹೇಳಿದ್ದೀರಾ..

ಆದರೆ ನೀವು ಕೊಟ್ಟಿರೋ ಇಂಟ್ರೋಗೆ ಆ ಜಾಗ ಸೂಟ್ ಆಗಲ್ಲ.. ಅದು ನಿಮ್ಮ ಲೇಖನದ ಮೌಲ್ಯವನ್ನು ಕುಂದಿಸುತ್ತದೆ..(ಲೇಖನ ನೇರವಾಗಿ ಪತ್ರದಿಂದಲೇ ಆರಂಭವಾಗಲಿ)

ಆ ಇಂಟ್ರೋದ ವಾಕ್ಯಗಳನ್ನು ಬರಹದ ಕೊನೆಗೆ ಹಾಕಿದ್ದರೆ ಚೆನ್ನಾಗಿರುತ್ತದೆ ಅಂತ ನನ್ನ ಭಾವನೆ...

Anonymous said...

patra tumba chennagide chithra..

ವಿ.ರಾ.ಹೆ. said...

heart touching...

sunaath said...

ಸತ್ಯದ ಮುಖವನ್ನು ಮಮತೆಯಿಂದ ತೋರಿಸುವ ಪತ್ರ.

ಆಲಾಪಿನಿ said...

putti... belaggene ninna concept ishta aagittu. aadre ishtondhu chennagi barabhudu antha oohisiralilla. gud gud guddi....

ಮಲ್ಲಿಕಾರ್ಜುನ.ಡಿ.ಜಿ. said...

ತಾಯಿಯ ಮಮತೆಗೆ, ಪ್ರೀತಿಯ ಒರತೆಗೆ ಮಿತಿಯುಂಟೆ?
ಅತ್ಯಂತ ಹೃದಯಸ್ಪರ್ಶಿಯಾಗಿದೆ ಲೇಖನ.
ಇದರಲ್ಲೊಂದು ಸಂದೇಶವೂ ಇದೆ.
ಮನದೊಳಗೆ ನಡೆಯುವ ಮಾತನ್ನು ಪದಗಳಾಗಿ ಪೋಣಿಸಿರುವ ನಿಮಗೆ ನನ್ನ ಸಲಾಂ.

PARAANJAPE K.N. said...

ಚಿತ್ರಾ,
ಭಾವುಕ ಬರೆಹ. ಪ್ರತಿಯೊ೦ದು ವಾಕ್ಯವೂ ಪ್ರೀತಿ, ಪ್ರೇಮ, ಮಮತೆ, ಬಾ೦ಧವ್ಯಗಳ ಶಾಯಿಯಲ್ಲಿ ಅದ್ದಿ ಅದ್ದಿ ಬರೆದ೦ತಿದೆ. ತು೦ಬಾ ಚೆನ್ನಾದ ಪತ್ರ. Good.

ಚಿತ್ರಾ ಸಂತೋಷ್ said...

@ಶಿವಣ್ಣ, ಪ್ರಕಾಶ್ ಹೆಗ್ಡೆ ಸರ್...
ನನ್ನನ್ನು ಯಾವಾಗಲೂ ಹೊಗಳಿ ಹೊಗಳಿ ಅಟ್ಟಕ್ಕೇರಿಸಬೇಡಿ! ನಂಗೆ ಕೊಂಬು ಬರುತ್ತೆ ಗೊತ್ತಾ?. ಅದೇ ಎಲ್ಲೋ ನೋಡಿದ್ದು..ಎಲ್ಲೋ ಕೇಳಿದ್ದು...ಮನಸ್ಸು ಕಲಕಿದಾಗ ಇಂಥ ಭಾವಪೂರ್ಣ ಬರಹಗಳೇ ಹುಟ್ಟಿಬಿಡುತ್ತವೆ. ಆದರೆ ಭಾವಪೂರ್ಣ ಬರಹಗಳಲ್ಲಿ ಅಷ್ಟೇ ಖುಷಿ ಸಿಗುತ್ತೆ ನನಗೆ. 'ಹಾಲಿಗಿಂತಲೂ ಪರಿಶುದ್ಧ ಪ್ರೀತಿ' ಗಾಗಿ ಹಂಬಲಿಸುವ ಅದೆಷ್ಟು ಜೀವಗಳಿರಬಹುದಲ್ಲಾ...ನೀವಿಬ್ಬರೂ ಪ್ರೇಮಿಗಳ ದಿನ ಓದುಗರಿಗೆ ನೀಡಿದ ಉಡುಗೊರೆಯೂ ಮಹತ್ವದ್ದು..ಮತ್ತೆ ಬನ್ನಿ ಕಾಯುತ್ತಿರುತ್ತೇನೆ.

@ಸಂದೀಪ್, ಸಂತೋಷ್, ಶಮಾ, ವಿಕಾಸ್, ರೋಹಿಯಣ್ಣ..ಮೆಚ್ಚುಗೆಗೆ ಧನ್ಯವಾದಗಳು.

@ಪ್ರಕಾಶಣ್ಣ..ನಿಮ್ಮ ಸಲಹೆಯಂತೆ ಮಾಡಿದ್ದೀನಿ. ಬರಹ ಮೆಚ್ಚಿದ್ದಕ್ಕೆ ಥ್ಯಾಂಕ್ಸ್ ..ಹೀಗೇ ಬರುತ್ತಿರಿ.

@ಶ್ರೀದೇವಿ ಪುಟ್ಟಮ್ಮಿ..ನಿಂಗೂ ಪ್ರೀತಿಯ ಥ್ಯಾಂಕ್ಸ್ಉ..

@ಮಲ್ಲಿಯಣ್ಣ..ನಿಮಗೂ ನನ್ನ ಸಲಾಂ..ಆಗಾಗ ಬರುತ್ತಿರಿ ತಾನೇ? "ತಾಯಿಯ ಮಮತೆಗೆ, ಪ್ರೀತಿಯ ಒರತೆಗೆ ಮಿತಿಯುಂಟೆ?" ಚೆನ್ನಾಗಿ ಹೇಳಿದ್ದೀರಿ.

@ಪರಾಂಜಪೆ ಸರ್..ಇಂಥ ವಿಚಾರಗಳೇ ಭಾವುಕವಾಗಿರುತ್ತವೆ ಅಲ್ಲವೇ?

@ಸುನಾಥ್ ಸರ್..ನನ್ನ ಇಡೀ ಬರಹಾನ ಒಂದೇ ಸಾಲಿನಲ್ಲಿ ಹೇಳಿಬಿಟ್ಟಿರಿ.

-ಮತ್ತೊಮ್ಮೆ ಎಲ್ಲರಿಗೂ ಪ್ರೀತಿಯ ನೆನೆಕೆಗಳು. ಆಗಾಗ ಬರುತ್ತೀರಿ..ಸರಿ/ತಪ್ಪುಗಳನ್ನು ಹೇಳುತ್ತಿರಿ, ತಿದ್ದುತ್ತಿರಿ ಅನ್ನೋ ಭರವಸೆ ನನ್ನದು.

-ಚಿತ್ರಾ

ತೇಜಸ್ವಿನಿ ಹೆಗಡೆ said...

ಚಿತ್ರಾ,

ಪ್ರೀತಿಯೆಂದರೆ ಕೇವಲ ಗಂಡು ಹೆಣ್ಣಿನ ನಡುವೆ ಏರ್ಪಡುವ ಭಾವನೆ ಎಂಬ ಮೂರ್ಖತೆಯನ್ನು ಹೊಂದಿರುವವರ ಕಣ್ತೆರೆಯುವಂತಿದೆ ನಿನ್ನ ಹೃದಯಸ್ಪರ್ಶಿ ಲೇಖನ. ಒಂದು ದಿನದ ಪ್ರೀತಿಯಲ್ಲಿ, ನಿವೇದನೆಯಲ್ಲಿ, ಆಮೋದ, ಪ್ರಮೋದದಲ್ಲಿ ಏನು ಸಾರ್ಥಕತೆ ಕಾಣುವರೋ ಕಾಣೆ. ತಾಯೊಬ್ಬಳು ಹೇಗೆ ಜೀವನ ಪೂರ್ತಿ ತನ್ನನ್ನು ಅಗಲಿದ ಕಂದನಿಗೆ ಮರುಗುತ್ತಾ ಪ್ರತಿದಿನ ಪ್ರೀತಿಯಹೊಳೆಯನ್ನೇ ಮನದಲ್ಲೇ ಹರಿಸುತ್ತಾಳೆ ಎಂಬುದನ್ನು ಸಮರ್ಥವಾಗಿ ಕಾಣಿಸಿದ್ದಿ. ತುಂಬಾ ಇಷ್ಟವಾಯಿತು.

ರೇಣಿಕಾಜೀ ಅವರಿಗೂ ಇದನ್ನು ಕಳುಹಿಸಬೇಕಿತ್ತು...:)

ಹರೀಶ ಮಾಂಬಾಡಿ said...

ಚೆನ್ನಾಗಿದೆ. ನಿಜವಾದ ಕಕ್ಕುಲತೆ ವ್ಯಕ್ತವಾಗಿದೆ...

ಆದ್ರೆ, ಪಾಶ್ಯಾತ್ಯರು ಅಮ್ಮನಿಗ ಒಂದೇ ದಿನ ಮೀಸಲಿಡುತ್ತಾರೆ..ಅದು ಮದರ್ಸ್ ಡೆ..ವ್ರಧ್ಹಾಶ್ರಮದಲ್ಲಿದ್ದ ತಮ್ಮ ತಾಯಿಯನ್ನು ನೋಡಲು ಆ ದಿನ ಉಪಯೋಗಿಸುತ್ತಿದ್ದಾರೆ)

ಚಿತ್ರಾ said...

ಚಿತ್ರಾ,
ತುಂಬಾ ಭಾವುಕರಾಗಿ ಬರೆದಿದ್ದೀರಾ.ಅಮ್ಮನ ಕಾಳಜಿ,ಮಮತೆ, ಅಸಹಾಯಕತೆ ಎಲ್ಲವೂ ತುಂಬಾ ಹೃದಯಸ್ಪರ್ಶಿಯಾಗಿ ಮೂಡಿಬಂದಿದೆ.
ನಾವು ಮಗಳೊಬ್ಬಳಿಗೆ ತಾಯಿಯಾದಾಗ , ಅವಳು ಬೆಳೆಯುತಿದ್ದಂತೆ , ಏನೋ ಆತಂಕ ,ನಾವೇನೋ ಒಳ್ಳೆಯ ಸಂಸ್ಕಾರವನ್ನೇ ಕೊಟ್ಟಿದ್ದರೂ ,ಅವಳ ತಪ್ಪಿಲ್ಲದೇ ಕೂಡ ನಡೆದುಬಿಡಬಹುದಾದ ದುರ್ಘಟನೆಯ ಬಗ್ಗೆ ಮನಸ್ಸು ಯೋಚಿಸಿ ಕಳವಳಗೊಳ್ಳುತ್ತಿರುತ್ತದೆ .ಪ್ರೀತಿಯ ಹೆಸರಿನಲ್ಲಿ ಅವಳು ನೋವುಣ್ಣದಿರಲಿ ಅಂದು ಹೃದಯ ಹಾರೈಸುತ್ತದೆ. ಅಲ್ಲವೆ?

" ಮಗಳೇ..ಪ್ರೀತಿ, ಮಮತೆಯ ಮೂಲಕವೇ ಜಗದ ಎದೆಯಿಂದ -ಎದೆಗೆ ಸಂಬಂಧಗಳ ಕೊಂಡಿ ಬೆಸೆದುಬಿಡಮ್ಮಾ...ಆದರೆ ನಿನ್ನನ್ನು ಬಲಿಯಾಗಿಸಿ ಅಲ್ಲ! "
ಮನ ತಟ್ಟುವಂತೆ ಬರೆದಿದ್ದೀರಾ. ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಶಬ್ದಗಳಿಲ್ಲ ಚಿತ್ರಾ.

Mediapepper said...

ಶರಧಿ,

ಬೆಚ್ಚನೆ ನೆನಪುಗಳ ಪತ್ರ...ಕಣ್ಣಲ್ಲಿ ನೀರು ಬಂತು...ಅಂದ ಹಾಗೆ ಕರಾವಳಿಯಲ್ಲಿನ ಅಶ್ವಿನಿಯರಿಗೆ ಬರೆದ ಪತ್ರವನ್ನೂ ನಮ್ಮಲ್ಲಿ ಓದಿ

ಚಿತ್ರಾ ಸಂತೋಷ್ said...

@ಹರೀಶ್ ಸರ್..ಶರಧಿಗೆ ಭೇಟಿ ಕೊಟ್ಟಿದ್ದಕ್ಕೆ ವಂದನೆಗಳು.

@ತೇಜಕ್ಕಾ, ಚಿತ್ರಕ್ಕಾ...ನಿಮ್ಮ ಮೆಚ್ಚುಗೆಗೆ ನಾನೇನು ಹೇಳಲಿ? ತುಂಬಾನೇ ಧನ್ಯವಾದಗಳು .

@ಸ್ಟ್ರೇಟ್ ಫಾರ್ವರ್ಡ್..ನಿಮ್ಮ ಮೆಚ್ಚುಗೆ ವಂದನೆಗಳು. ಅಮ್ಮನ ಮಡಿಲ ಪ್ರೀತಿಯ ಪತ್ರನಾ, ಪ್ರೀತಿಯಿಂದಲೇ ಓದಿದ್ದಕ್ಕೆ ಧನ್ಯವಾದಗಳು. ನಿಮ್ಮ ಬ್ಲಾಗ್ ನೋಡಿ, ಓದಿದೆ. ಖುಷಿಗೊಂಡೆ. ಆದರೆ ಪ್ರತಿಕ್ರಿಯೆ ಹಾಕಕೆ ಅವಕಾಶ ಸಿಗಲಿಲ್ಲ. ಇನ್ನೊಮ್ಮೆ ಪರಿಶಿಲಿಸಿ...

-ಚಿತ್ರಾ

-ಚಿತ್ರಾ

Mediapepper said...

chitra,
thanks for viewing our page...now you can add your comments and back up our efforts....
thank you
STRAIGHT>>>>>

Anonymous said...

manassannu muTTida taTTida baraha

Anonymous said...

ಪತ್ರ ಬರೆದ ರೀತಿ, ವಿಷಯ, ನಿಮ್ಮ ಕಲ್ಪನೆ ಎಲ್ಲಾ ಇಷ್ಟ ಅಯಿತಕ್ಕ

ದಿನೇಶ್ ಕುಮಾರ್ ಎಸ್.ಸಿ. said...

ಚಿತ್ರ,
ಪತ್ರದ ಶೈಲಿ, ಭಾಷೆ ಎಲ್ಲವೂ ಚೆನ್ನಾಗಿದೆ. ಅಮ್ಮನ ಪಾತ್ರದಲ್ಲಿ ನೀವು ಪರಕಾಯ ಪ್ರವೇಶ ಮಾಡಿದಂತಿದೆ.
ನಿಮ್ಮೊಳಗಿನ ತಾಯಿಗೆ ಅಭಿನಂದನೆಗಳು.
ಆದರೆ ತನ್ನ ಹಸುಗೂಸನ್ನೇ ಬೀದಿಗೆ ಎಸೆದ ತಾಯಿ ಇಷ್ಟು ಸಂವೇದನಾಶೀಲಳಾಗಿರಲು ಸಾಧ್ಯವೇ? ಎಂಬ ಅನುಮಾನ ನನ್ನದು.
ನಿಜ, ಅಸಹಾಯಕತೆಯಿಂದಾಗಿ ಕೆಲವು ತಾಯಂದಿರು ಇಂಥ ಕೆಲಸ ಮಾಡುತ್ತ ಬಂದಿದ್ದಾರೆ. ಆದರೆ ತನ್ನದೇ ಕರುಳ ಕುಡಿಯನ್ನು ಕಸದ ತೊಟ್ಟಿಗೆ ಎಸೆಯುವವರ ಒಳಗಿನ ಕ್ರೌರ್ಯಕ್ಕೆ ಎಣೆಯುಂಟೇ?
ಅವರು ನೀವು ಕಲ್ಪಿಸಿಕೊಂಡ ಇಂಥ ಸುಂದರ ಮನಸ್ಸಿನವರಾಗಲು ಸಾಧ್ಯವೇ ಇಲ್ಲ.
ಕ್ಷಮಿಸಿ, ಇದು ನನಗನ್ನಿಸಿದ್ದು.

ಚಿತ್ರಾ ಸಂತೋಷ್ said...

ವಿಜಯಕಾಂತ ಸರ್..ರೋಹಿಣಿ..ಬ್ಲಾಗ್ ಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು.

@ದಿನೇಶ್ ಸರ್...ಪ್ರತಿಕ್ರಿಯೆಗೆ ಧನ್ಯವಾದಗಳು. "ತನ್ನ ಹಸುಗೂಸನ್ನೇ ಬೀದಿಗೆ ಎಸೆದ ತಾಯಿ ಇಷ್ಟು ಸಂವೇದನಾಶೀಲಳಾಗಿರಲು ಸಾಧ್ಯವೇ?" ನಿಮ್ಮ ಅನುಮಾನ ಸಹಜವೇ. ನಾನು ಬರೆದ ಪತ್ರದ ಸುಂದರ ಮನಸ್ಸಿನ ಅಮ್ಮ, ಅವಳ ಕಕ್ಕುಲತೆ, ಮಮತೆ, ಹಂಬಲ...'ಹಸುಗೂಸನ್ನು ಬೀದಿಗೆ ಎಸೆದ ತಾಯಿಯಲ್ಲಿ ಇರಲು ಸಾಧ್ಯವೇ ಇಲ್ಲ" ಎಂದಿರಿ. ಆದರೆ, ಅನಿವಾರ್ಯತೆಗಳಿಗೆ ಬಾಗಿ ನಡೆಯುವ ಅದೆಷ್ಟೋ ಮಂದಿ ತಾಯಂದಿರುಗಳಲ್ಲಿ 'ಕೆಲವರು' ಆದರೂ ಇಂಥ ಸುಂದರ ಮನಸ್ಸನ್ನು ಹೊಂದಿರಬಹುದು ಅನ್ನೋ ಕಲ್ಪನೆಯಲ್ಲಿ ಈ ಪತ್ರ ಬರೆದೆ. ಆದರೆ, ಕಲ್ಪನೆಯಲ್ಲಿ ಮೂಡಿಬಂದ ಪತ್ರಕ್ಕೆ ಸತ್ಯ/ಮಿಥ್ಯಗಳ ಪರಿಧಿಯ ಅಗತ್ಯವಿಲ್ಲ ಅನಿಸುತ್ತೆ. ಸರ್..ಆಗಾಗ ಶರಧಿಗೆ ಭೇಟಿ ಕೊಡಿ..ಸರಿ/ತಪ್ಪುಗಳ ಹೇಳುತ್ತಿರಿ..
ವಂದನೆಗಳು,
ಚಿತ್ರಾ

ರವಿರಾಜ್ ಆರ್.ಗಲಗಲಿ said...

patra chennagide chitra