Tuesday, February 10, 2009

ಅಣ್ಣನ ಪತ್ರದಲ್ಲಿ 'ಕರ್ವಾಲೋ' ಕಲರವ..

ಈ ಹಿಂದೆ ಅಣ್ಣನೊಬ್ಬ ಬರೆದ ಪತ್ರವನ್ನು ಇದೇ ಬ್ಲಾಗಿನಲ್ಲಿ ಹಾಕಿದ್ದೆ. ಇದೀಗ ಮತ್ತೆ 2005ರ ಅಕ್ಟೋಬರ್ 3!ರಂದು ಮೈಸೂರಿನ ಅನಿಲಣ್ಣ ಬರೆದ ಪತ್ರವನ್ನು ಇಲ್ಲಿ ಹಾಕಿದ್ದೀನಿ. ಪತ್ರ ಬರೆಯೋದು ಒಂದು ಕಲೆ. ಆತ ಪ್ರತಿ ಸಲ ಪತ್ರ ಬರೆದಾಗಲೂ ಅದರಲ್ಲಿ ಬೊಗಸೆ ತುಂಬಾ ಪ್ರೀತಿಯೊಂದಿಗೆ, ಆತ ಓದಿದ ಪುಸ್ತಕಗಳ ಕುರಿತು, ತಿಳಿದಿರುವ ಒಳ್ಳೆಯ ವಿಚಾರಗಳನ್ನು ಬರೆದು ಕಳುಹಿಸುತ್ತಿದ್ದ. ನೋಡಿ ಈ ಪತ್ರದೊಳಗೆ ತಮ್ಮೂರ ಸೋನೆ ಮಳೆ ಮಾತ್ರವಲ್ಲ ತೇಜಸ್ವಿ ಅವರ 'ಕರ್ವಾಲೋ' ಕಾದಂಬರಿ ಕುರಿತು ಅನಿಸಿದ್ದು ಹಂಚಿಕೊಂಡಿದ್ದಾನೆ,

ಹಾಯ್ ಮಾರಾಯ್ತಿ.. ಹೇಗಿದ್ದೀಯಾ? ಆಳ್ವಾಸ್ ನುಡಿಸಿರಿ ತುಂಬಾ ಇಷ್ಟವಾಗಿದೆ ಅನ್ಸುತ್ತೆ. ನೀನಂತೂ ನಿಜಕ್ಕೂ ಪುಣ್ಯವಂತೆ. ಎಲ್ಲಾ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳಿಗೆ ನಿಮ್ಮೂರು ಒಂಥರಾ ಸುಂದರ ವೇದಿಕೆ. ನಮ್ಮೂರಲ್ಲೂ ಆ ರೀತಿಯ ಕಾರ್ಯಕ್ರಮಗಳು ನಡೆಯೋದು ತೀರ ಅಪರೂಪ. ನಿನ್ನ ಎರಡೂ ಪತ್ರಗಳು ಇವತ್ತೇ ಸಿಕ್ಕಿವೆ. ನಿನ್ನ ಮೊದಲ ಪತ್ರವೇ ತುಂಬಾ ಇಷ್ಟವಾಯಿತು. ನಂಗೆ ನವೆಂಬರ್ 20ಕ್ಕೆ ಸಿಇಟಿ ಪರೀಕ್ಷೆ ಇದೆ, ಯಾಕೋ ಅಷ್ಟೊಂದು ಚೆನ್ನಾಗಿ ಪತ್ರ ಬರೀಲಿಕೆ ಆಗ್ಲಿಲ್ಲ. 'ಕೋಪ ಮಾಡ್ಕೋಬೇಡವೇ ತಂಗೀ..ಈ ಪತ್ರನಾ ತುಂಬಾ ಶ್ರದ್ಧೆಯಿಂದ ಬರೀತಾ ಇದ್ದೀನಿ. o.k. ನಾ?" ನಾನು ನಿನ್ನೆದುರು ಇದ್ದರೆ ಕಿವಿ ಹಿಂಡ್ಕೊಂಡು ದಂಡ ಹೊಡೀತಾ ಇದ್ದೆ..ನಗ್ಬೇಡಾ...!

ಪಕ್ಕದ್ದಲ್ಲೇ ಟೇಪ್ ರೆಕಾರ್ಡರ್ ಬಾಯಿಯಿಂದ ನಿಸಾರ್ ಅಹಮ್ಮದ್ ಅವರ
'ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ....
ಯಾಕೋ ನಿನ್ನ ನಲಿವಿನಲ್ಲಿ ಪಾಲುಗೊಳ್ಳದೆನ್ನ ಮನಸ್ಸು...."
ಹೊರಬರುತ್ತಿದೆ. ನಿಜಕ್ಕೂ ಈ ಹಾಡು ಅದ್ಭುತ. ಪ್ರತಿಯೊಬ್ಬ ಮನುಷ್ಯನಿಗೂ ವಿರಹದ ಹಾಡುಗಳೇ ಯಾಕೋ ಇಷ್ಟವಾಗುತ್ತದೆಯಂತೆ, ಅಪ್ಯಾಯಮಾನವಾಗಿ ಬಿಡುತ್ತದೆ. ಇನ್ನೂ ಮುಂದೆ ಈ ವಿಷಾದಗಳ ಹಾದಿಯಲ್ಲೇ ಮುಂದೆ ಸಾಗಿದರೆ 'ಬೇಂದ್ರೆ ಅಜ್ಜ' ಜೊತೆಯಾಗ್ತಾರೆ. ಅವರ 'ನೀ ಹಿಂಗ ನೋಡಬ್ಯಾಡ' 'ಹುಬ್ಬಳ್ಳಿಯಾಂವ' 'ಸಖೀಗೀತ'ದ ಕೆಲವು ಸಾಲುಗಳು ಎಷ್ಟೊಂದು ಮಧುರ ಅಲ್ವಾ?

ನಿನ್ನ ಪರೀಕ್ಷೆಗೆ ಶುಭ ಹಾರೈಕೆ. ಬರಹಲೋಕದಲ್ಲಿ ದಾಪುಗಾಲಿಟ್ಟು ಮುಂದೆ ಸಾಗುತ್ತಿದ್ದಿಯಾ...ಹಾಗೇ ಈ ಪಯಣ ಸಾಗಲಿ. ನಿನ್ನ ಪ್ರತಿ ಹೆಜ್ಜೆಗೂ ನಿನ್ನಣ್ಣನ ಪ್ರೀತಿಯ ಹಾರೈಕೆಗಳಿವೆ. ಉಮೇಶ್ ಗೆ ಫೋನ್ ಮಾಡಿದ್ದೆ. ಚಿತ್ರಾ ಮೂಡುಬಿದಿರೆಯಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದಾಳೆ ಅಂತ ಹೇಳಿದ್ರು. ಬಹುಶಃ ಇವತ್ತು ಊರಿಗೆ ಬಂದಿರಬಹುದು, ನಾಳೆ ಭೇಟಿಯಾಗ್ತೇನೆ. ಮತ್ತೆ ಸುಮಾರು ಬಾರಿ ನಿನ್ನ ಫ್ರೆಂಡ್ ಮೊಬೈಲ್ ಗೆ ಕರೆ ಮಾಡಿದ್ದೆ..ಹ್ಞೂಂ..ನೀನೂ ಸಿಕ್ಕಲಿಲ್ಲ..ಸರಿಯಾಗಿ ಲೈನೂ ಸಿಗಲಿಲ್ಲ.

ಇದು ಅಂತಿಮ ವರ್ಷ ಮುಂದೆ ಏನ್ಮಾಡುಕಂತಿದ್ದೀಯಾ? ಎಲ್ಲಿಯಾದ್ರೂ ಒಳ್ಳೆ ಕಡೆ ಕೆಲಸ ಗಿಟ್ಟಿಸಿಕೊಂಡರೂ ಮುಂದೆ ಓದು. ಅಧ್ಯಯನ ನಿಲ್ಲಿಸಬೇಡ. 'ಚಿಲಿಪಿಲಿ ಚಿಣ್ಣರ ಮೇಳ' ಹೇಗಾಯ್ತು?
ನಮ್ಮೂರು ಕೂಡಾ ಒಂಥರಾ ಮಲೆನಾಡಿನ ರೀತಿ ಇದೆ. ಯಾವಾಗ ನೋಡಿದ್ರೂ ಜಡಿಮಳೆ..ಸೋನೆ ಮಳೆ..ತುಂತುರು ಮಳೆ. ಇಳೆಯ ಒಡಲಲ್ಲಿ ಪ್ರೀತಿಯ ಬೀಜನೆಟ್ಟು ಬೆಳೆಸುವ ಮಳೆಯೆಂಬ ಮಾಯೆಯೇ ಅದ್ಭುತ. ಚಹಾ ಗುಟುಕಿಸುತ್ತಾ ಮಳೆಯನ್ನೇ ದಿಟ್ಟಿಸಿ ನೋಡುತ್ತಿದ್ದರೆ, ಹುದುಗಿಹೋದ ನೆನಪುಗಳ ಖಜಾನೆಯಿಂದ ಸವಿಕ್ಷಣಗಳ ಮಳೆ, ಮೈ-ಮನ ತೋಯಿಸುತ್ತೆ. ಅದಕ್ಕೆ ಅಲ್ವಾ ಕವಿ ಹೇಳೋದು "ಮತ್ತೆ ಮಳೆ ಹುಯ್ಯುತ್ತಿದೆ..ಎಲ್ಲಾ ನೆನಪಾಗುತ್ತಿದೆ' ಎಂದು. ನಿಮ್ಮೂರಿನಲ್ಲಿ ಮಳೆ ಹೇಗೇ? ನೇಗಿಲಯೋಗಿ ಚೆನ್ನಾಗಿದ್ದಾನೆಯೇ?

ಸದ್ಯಕ್ಕೆ ತೇಜಸ್ವಿ ಅವರ ಕರ್ವಾಲೋ ಓದ್ತಾ ಇದ್ದೀನಿ. ಈ ಹಿಂದೆ ಮೂರು-ನಾಲ್ಕು ಬಾರಿ ಓದಿದ್ದೇನೆ. ನಿಜಕ್ಕೂ ಕರ್ವಾಲೋ ಅದ್ಭುತ ಪುಸ್ತಕ. ಅಜ್ಜಿಯ ಮಡಿಲಲ್ಲಿ ಮುಖ ಹುದುಗಿಸಿಕೊಂಡು ಯಕ್ಷ-ಗಂಧರ್ವರ ಕಥೆಯನ್ನು ಕೇಳುತ್ತಿದ್ದರೆ ಎಷ್ಟು ಸಂತೋಷವಾಗುತ್ತದೋ, ಅಷ್ಟೇ ಖುಷಿಯಾಗುತ್ತದೆ ಕರ್ವಾಲೋ ಓದುತ್ತಿದ್ದರೆ ...!

ಕನ್ನಡ ಸಾಹಿತ್ಯದಲ್ಲಿ ಕೆಲವೊಂದು ಪಾತ್ರಗಳಿವೆ. ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯ 'ನಾಯಿಗುತ್ತಿ', ಕಾರಂತರ 'ಚೋಮ', ಭೈರಪ್ಪನವರ 'ಮಂದ್ರ'ದ 'ಮೋಹನಲಾಲ'...ಇವರ ಜೊತೆಗೆ ತೇಜಸ್ವಿಯ 'ಮಂದಣ್ಣ' ಒಬ್ಬ ಅತ್ಯದ್ಭುತ ವ್ಯಕ್ತಿ.
ನಿಗೂಢ ಕಾಡಿನ ಸಮಸ್ತ ಹೊಳಪುಗಳನ್ನು ತಿಳಿದುಕೊಂಡು ಕೂಡಾ, ತನ್ನ ಅರಿವಿನ ಬಗ್ಗೆ ಗೊತ್ತೇ ಇರದ ಮಂದಣ್ಣ, ಕರ್ವಾಲೋರ ಶಿಷ್ಯನಾಗಿ ಕರ್ವಾಲೋರಿಗೆ ಹಾರುವ ಓತಿಯ ಸಂಶೋಧನೆಯಲ್ಲಿ ಸಹಕರಿಸಿದ್ದು, ತೇಜಸ್ವಿಯವರು ಅದನ್ನು ನಿರೂಪಿಸುವ ಹಾಸ್ಯಮಯ ಶೈಲಿ, ಎಲ್ಲವೂ ಒಂದು ಸುಂದರ ತಾಣವೊಂದರಲ್ಲಿ ಪ್ರಯಾಣ ಮಾಡಿದ ಅನುಭವ ನೀಡುತ್ತದೆ. ಕಾದಂಬರಿಯ ಆರಂಭದಲ್ಲಿ 'ಜೇನುನೊಣ'ದ ಬಗ್ಗೆಯೇ ಹೆಚ್ಚಿನ ಕುತೂಹಲಕಾರಿ ಮಾಹಿತಿ ದೊರಕಿದರೂ, ನಂತರ ಪ್ರಭಾಕರ ಕರ್ವಾಲೋರ ಸಖ್ಯದಿಂದ ಜೀವಜಗತ್ತಿನ ವಿಸ್ಮಯಗಳನ್ನು ಅನಾವರಣಗೊಳುತ್ತದೆ. ಜೀಪಿಗೆ ಮುತ್ತಿಗೆ ಹಾಕಿದ ಜೇನು ನೊಣಗಳ ಪ್ರಸಂಗ, ಮಂದಣ್ಣ ಡೋಲು ಶಬ್ಧ ಮಾಡಿದ ಕೆಲಸ, ಮಂದಣ್ಣನ ಮದುವೆ, ದಪ್ಪಗಾಜಿನ ಕನ್ನಡಕದ ಗೂಬೆ ಮೊರೆಯಾತ, ಬಿರ್ಯಾನಿ ಕರಿಯಪ್ಪ, ನಾಯಿ ಕಿವಿ, ಪ್ಯಾರಾ, ಕಾಡಿನ ವರ್ಣನೆ..ಎಲ್ಲವೂ ಮನಸ್ಸಲ್ಲಿ ನೆಲೆನಿಂತುಬಿಡುವಷ್ಟು ಚೆನ್ನಾಗಿ ನಿರೂಪಿಸಿದ್ದಾರೆ ತೇಜಸ್ವಿ. ಕೊನೆಗೂ ಹಾರುವ ಓತಿ ಇವರ ಕೈಗೆ ಸಿಗೋದೇ ಇಲ್ಲ ಅಲ್ವಾ? ದಯಾಮಯಿ ಪ್ರಕೃತಿ ಮಾತೆ, ತನ್ನ ಅಗಾಧ ನಿಗೂಡತೆಯನ್ನು ಯಾವತ್ತೂ ಅಲ್ಪನಾದ ಮನುಷ್ಯನಿಗೆ ಬಿಟ್ಟುಕೊಡುವುದೇ ಇಲ್ಲ ಎಂದನಿಸಿತ್ತು ನನಗೆ. ಕರ್ವಾಲೋ ಥರದ ವಿಜ್ಞಾನಿ ನಮ್ಮ ನಡುವೆ ಇರಬೇಕಾದ್ದು ತೀರಾ ಅನಿವಾರ್ಯ.

ತಾವೋ ಎನ್ನುವ ಯಾವುದೋ ಅಪರಿಚಿತ ಕವಿಯೊಬ್ಬನ ಕನ್ನಡ ಅನುವಾದಿತ ಕವಿತೆಗಳ ಸಂಕಲನವೊಂದು ಓದಲು ಸಿಕ್ಕಿತ್ತು. ಒಂದೆರಡು ಸುಂದರ ಸಾಲುಗಳಿವೆ..ತಕೋ...
"ನನ್ನ ಹೃದಯದೊಳಗಿನಿಂದ ಹೊರನೆಗೆಯುವ ವಲಸೆ ಹಾಡುಗಳು. ನಿನ್ನ ಪ್ರೀತಿಯ ಸ್ತರದಲ್ಲಿ ಗೂಡು ಕಟ್ಟಲೆತ್ನಿಸುತ್ತವೆ"

"ಇರುಳ ಕತ್ತಲಿನಲ್ಲಿ ದೇಹ ಮತ್ತು ಆತ್ಮ ಸಂಯೋಗಗೊಂಡಿವೆ. ಕತ್ತಲ ಮಂಜು ಕರಗಿದಾಗ ಅವು ಬೇರೆ-ಬೇರೆ. ಹಗಲ ಬೆಳಕಿನಲ್ಲಿ ಎರಡೂ ಆತ್ಮಗಳು ಒಂದಾಗಲಾರವು. ಆದರೆ ಇರುಳಿನ ಶೂನ್ಯದಲ್ಲಿ ಏನಾದರೂ ಮಾಡಬಹುದು"

ತಾವೋ ತನ್ನ ಸ್ನೇಹಿತನಿಗೆ ಹೇಳುತ್ತಾನೆ..
"ದಯವಿಟ್ಟು ದೀಪವಾರಿಸು ಗೆಳೆಯಾ..ನನಗೆ ಬೆಳಕು ಬೇಕಿದೆ' "
ಈ ಪುಟ್ಟ ಸಾಲು ಎಷ್ಟೊಂದು ಅದ್ಭುತ ಅನಿಸುತ್ತೆ ಅಲ್ವಾ? ವಿಷಾದ, ನೋವುಗಳು ಕರಗಿ ಮನಸ್ಸಿಗೆ ಸಾಂತ್ನನ ನೀಡುವ ಸಾಮರ್ಥ್ಯ ವಿರುವುದು ಕತ್ತಲಿಗೆ ಮಾತ್ರ. ಕತ್ತಲು ಕರಾಳವಲ್ಲ ಸವಾಲು ಅಷ್ಟೇ.
ಪತ್ರ ಮುಗಿಸುತ್ತೇನೆ...ಪರೀಕ್ಷೆಗೆ ಚೆನ್ನಾಗಿ ಓದು. ಪ್ರತಿ ಕ್ಷಣಗಳೂ ನಿನ್ನ ಮುಗ್ಧ ಮನಸ್ಸಿಗೆ, ಪ್ರತಿಭೆಗೆ, ಪ್ರಫುಲ್ಲ ಭಾವನೆಗಳಿಗೆ ಉತ್ಸಾಹ, ಚೈತನ್ಯ, ಸ್ಫೂರ್ತಿ ತುಂಬಲಿ.
-ಪ್ರೀತಿಯಿಂದ ಅಣ್ಣ,
ಅನಿಲ್ ಕುಮಾರ.

12 comments:

Santhosh Rao said...

ನಿಜಕ್ಕೂ ಪತ್ರದಲ್ಲಿ ಎಷ್ಟೊಂದು ಪ್ರೀತಿ ತುಂಬಿದೆ ..ನಮ್ಮೊಂದಿಗೆ ಹಂಚಿಕೊಂಡದಕ್ಕೆ ಧನ್ಯವಾದಗಳು

shivu.k said...

ಹಲೋ ಪುಟ್ಮರಿ,

ಅದೆಷ್ಟು ಜನ ಅಣ್ಣಂದಿರಿದ್ದಾರೆ ನಿಂಗೆ ಮಹಾರಾಣಿ... ಇವರೆಲ್ಲರ ಪ್ರೀತಿಯನ್ನು ಪಡೆದುಕೊಂಡು ಒಡಲಲ್ಲಿ ಬಚ್ಚಿಟ್ಟುಕೊಳ್ಳಬೇಡ್ವೋ ಮರಿ....ನಿನಗಿಂತ ಚಿಕ್ಕವರಿಗೆ ಹಂಚು....ಹಂಚಿದಷ್ಟು ನಿನ್ನ ಪುಟ್ಟ ಹೃದಯ ಮತ್ತ್ ಮತ್ತೆ ತುಂಬಿಕೊಳ್ಳುತ್ತೇ....[ಹಂಚುವ ಕಲೆ ತಿಳಿಯಬೇಕೆನಿಸಿದರೆ " pay forward" ಅನ್ನುವ ಸಿನಿಮಾ ನೋಡು. ಸಿಕ್ಕಾ ಪಟ್ಟೆ ಹೃದಯಸ್ಪರ್ಶಿ ಸಿನಿಮಾ ಅದು]

"ಈ ಹಿಂದೆ ಮೂರು-ನಾಲ್ಕು ಬಾರಿ ಓದಿದ್ದೇನೆ. ನಿಜಕ್ಕೂ ಕರ್ವಾಲೋ ಅದ್ಭುತ ಪುಸ್ತಕ. ಅಜ್ಜಿಯ ಮಡಿಲಲ್ಲಿ ಮುಖ ಹುದುಗಿಸಿಕೊಂಡು ಯಕ್ಷ-ಗಂಧರ್ವರ ಕಥೆಯನ್ನು ಕೇಳುತ್ತಿದ್ದರೆ ಎಷ್ಟು ಸಂತೋಷವಾಗುತ್ತದೋ, ಅಷ್ಟೇ ಖುಷಿಯಾಗುತ್ತದೆ ಕರ್ವಾಲೋ ಓದುತ್ತಿದ್ದರೆ ...!"

ಆಹಾ! ನನ್ನದು ಇದೇ ಕತೆ. ಕರ್ವಾಲೋ ಈಗಲೂ ನನ್ನ ಮೆಚ್ಚಿನದೇ. ಬೇಸರವಾದಾಗ ಈಗಲು ಕೈಗೆತ್ತಿಕೊಂಡರೆ ನನ್ನಿಂದ ಹೊಸ ಪುಸ್ತಕದಂತೆ ಓದಿಸಿಕೊಳ್ಳುತ್ತದೆ....

ಪತ್ರ ಬರೆಯೋದು ಒಂದು ಕಲೆ ನೋಡು... ಅನಿಲಣ್ಣ ಚೆನ್ನಾಗಿ ಬರೆದಿದ್ದಾರೆ. ಅವರಿಗೆ ನನ್ನ ಅಭಿನಂದನೆಗಳು..
ಇನ್ನೂ ನಿನ್ನ ಖಜಾನೆಯಲ್ಲಿ ಅದೆಷ್ಟು ಪತ್ರ-ಉತ್ತರಗಳಿವೆಯೋ ಹುಡುಕು...ಕಾಯುತ್ತಿರುತ್ತೇನೆ.

PARAANJAPE K.N. said...

ಚಿತ್ರಾ,
ಇ೦ದಿನ ಆಧುನಿಕ ಯುಗದಲ್ಲಿ ಪತ್ರವ್ಯವಹಾರವೇ ಮರೆಯಾಗುತ್ತಿರುವ ಸ೦ದರ್ಭದಲ್ಲಿ ಸು೦ದರವೂ, ಕಾವ್ಯಮಯವೂ, ಸ೦ಗ್ರಹಯೋಗ್ಯವೂ ಆದ, ಪ್ರೀತಿಯ ಅಕ್ಷಯಪಾತ್ರೆಯ೦ತಹ ಪತ್ರವನ್ನು ಓದಿಗೆ ಒದಗಿಸಿದ್ದೀರಿ.
Good, Thanks.

ಚಿತ್ರಾ ಸಂತೋಷ್ said...

@ಸಂತೋಷ್..ನಿಮ್ಮ ಪ್ರೀತಿಯ ಸ್ಪಂದನೆಗೆ ಧನ್ಯವಾದಗಳು.

@ಪರಾಂಜಪೆ..ಸರ್..ಹೌದು, ಪತ್ರ ಬರೆಯುವ ಕಲೆಯೇ ಮಾಯವಾಗುತ್ತಿದೆ. ನಿಮ್ಮ ಪ್ರೀತಿಯ ಮಾತುಗಳು, ಹಾರೈಕೆಗಳು ನನ್ನ ಬರವಣಿಗೆಗೆ ಸ್ಫೂರ್ತಿಯಾಗಲಿವೆ.

@ಶಿವಣ್ಣ..
ನ್ನ ಹೊಗಳಿ-ಹೊಗಳಿ ಅಟ್ಟಕೇರಿಸಿಬಿಟ್ಟಿರಾ!ನಂಗೆ ತುಂಬಾ ಜನ ಅಣ್ಣಂದಿರಿದ್ದಾರೆ...ಬೇಜಾರಾಂದ್ರೆ ಅವರ್ಯಾರೂ ನಮ್ ಅಮ್ಮನ ಹೊಟ್ಟೇಲೇ ಹುಟ್ಟಿಲ್ಲ..ಆದ್ರೆ ಅಮ್ಮನಂತೆ ನನ್ನ ಪ್ರೀತಿಯಿಂದ ನೋಡ್ಕೋತಾರೆ. ನಿಮ್ಮ ಅಭಿನಂದನೆಗಳನ್ನು ಅನಿಲನಿಗೆ ತಿಳಿಸುವೆ. ಖಜಾನೆಯಲ್ಲಿ ಇನ್ನು ಚೆಂದದ ಪತ್ರಗಳಿವೆ. ಬೆಟ್ಟದಷ್ಟು ಪ್ರೀತಿ ನೀಡುವ ಪತ್ರಗಳಿವೆ. ಆಗಾಗ ಬ್ಲಾಗ್ ನಲ್ಲಿ ಬಿಚ್ಚಿಡ್ತೀನಿ.ನೀವು ಹೇಳಿದ ಸಿನಿಮಾ ನೋಡ್ತೀನಿ. ಪ್ರತಿಕ್ರಿಯಿಸಿದ ನಿಮಗೂ ತುಂಬಾ..ತುಂಬಾ..ತುಂಬಾ ..ಪ್ರೀತಿಯ ವಂದನೆಗಳು.
ಮತ್ತೆ ಬನ್ನಿ..
-ಚಿತ್ರಾ

ಹರೀಶ ಮಾಂಬಾಡಿ said...

ಪತ್ರ ಬರೆಯುವವರಾರಿದ್ದಾರೆ? ಎಂಬ ಈ ಎಸ್.ಎಂ.ಎಸ್. ಯುಗದಲ್ಲಿ ಪತ್ರ ಓದಿಸಿಕೊಂಡು ಹೋಯಿತು. ಒಂದಿಡೀ ಬಾಂಧವ್ಯವನ್ನು ತೋರಿಸಿಕೊಟ್ಟಿತು.

Sushrutha Dodderi said...

ಆಪ್ತವಾಗಿದೆ ಕಣೇ ಹುಡ್ಗೀ.. ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್.

PaLa said...

ಸುಂದರ ಪತ್ರದ ಸುಂದರ ಭಾವನೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ವಂದನೆಗಳು
--
ಪಾಲ

Shankar Prasad ಶಂಕರ ಪ್ರಸಾದ said...

ಚಿತ್ರಕ್ಕ,
ಅಪ್ಪ, ಅಮ್ಮ, ಎರಡು ಮನೆ ಕಡೆಗೂ ನಾನೇ ದೊಡ್ಡ ಮೊಮ್ಮಗ.
ಹಾಗಾಗಿ, ಅಣ್ಣ ಅಂತಾ ಯಾರನ್ನೂ ಕರೆದ ನೆನಪಿಲ್ಲ. ಕೆಲವೊಮ್ಮೆ ಬೇಕು ಅನ್ನಿಸುತ್ತೆ.
ಆದ್ರೆ ಬಾಯಿ ಮಾತಲ್ಲಿ ಅಣ್ಣ ಅಂತ ಕರೆಯೋದಕ್ಕೂ ನಿಜವಾದ ಒಬ್ಬ ಅಣ್ಣನನ್ನು ಕರೆಯೋದಕ್ಕೂ ಎಷ್ಟು ವ್ಯತ್ಯಾಸ ಇದೆ ಅಲ್ವ?
ಲೇಖನ ಬಹಳ ಚೆನ್ನಾಗಿದೆ.. ಭಾವಪೂರ್ಣ.

ಕಟ್ಟೆ ಶಂಕ್ರ

ಚಿತ್ರಾ ಸಂತೋಷ್ said...

@ಹರೀಶ್ ಸರ್, ಪಾಲಚಂದ್ರ ಸರ್..ಶರಧಿಯಲ್ಲಿ ಪುಟ್ಟ ಪಯಣ ನಿಮ್ಮದಾಗಿಸಿದ್ದಕ್ಕೆ ನನ್ ಕಡೆಯಿಂದ ಧನ್ಯವಾದಗಳು.

@ಶುಶ್ರತಣ್ಣ..ಇವತ್ತು ಬಂದ್ಯಾ? ಎಲ್ಲೋಗಿದ್ದೆ ಇಷ್ಟು ದಿನ? ಥ್ಯಾಂಕ್ಸ್ಉ...ನಿಂಗೆ.

@ಶಂಕ್ರಣ್ಣ..ನಿಜವಾದ ಅಣ್ಣನ ಪಡೆಯುವುದಕ್ಕೂ, ಬಾಯಿಮಾತಲ್ಲೂ ಕರೆಯುವುದಕ್ಕೂ ವ್ಯತ್ಯಾಸ ಇದ್ದೇ ಇದೆ. ಆದ್ರೆ ಅಣ್ನನಂತೆ ನಮ್ಮನ್ನು ಮುಗ್ಧ ಮನಸ್ಸಿನಿಂದ ಪ್ರೀತಿಸುವ ಅಣ್ಣ ಸಿಕ್ರೇ..ನಿತ್ಯ ಅಣ್ಣನ ಪ್ರೀತಿ ಸವಿಯೋಕೆ ಸಾಧ್ಯ ಅಂತ ನನ್ನ ಅನಿಸಿಕೆ.

-ಚಿತ್ರಾ

ತೇಜಸ್ವಿನಿ ಹೆಗಡೆ said...

ಚಿತ್ರಾ,

ಚೂರು ಹೊಟ್ಟೆ ಕಿಚ್ಚಾಗುತ್ತಿದೆ. ಇಷ್ಟೊಂದು ಸುಂದರವಾಗಿ, ಆಪ್ತವಾಗಿ ಉತ್ತಮ ವಿಚಾರಗಳನ್ನೊಳಗೊಂಡ ಪತ್ರವನ್ನು ಬರೆಯುವ ಅಣ್ಣಂದಿರಿದಾರಲ್ಲಾ ಎಂದು :) ನನಗೂ ಅಣ್ಣನಿಲ್ಲ. ಎಲ್ಲರಿಗೂ ಅಕ್ಕಾ ಎಂದೆಣಿಸಿಕೊಂಡು ಅಣ್ಣಂದಿರು ಇರಬೇಕೆಂದು ಎಣಿಸಿದ್ದೆ.

ಕರ್ವಾಲೊ ಸಧ್ಯದಲ್ಲೇ ಓದಿ ಮುಗಿಸಿದೆ. ಅದ್ಭುತ ಕೃತಿ. ನಾವೇ ಸ್ವತಃ ಆ ಹಾರುವ ಓತಿಯನ್ನು ಹುಡುಕಲು ಹೋದಂತಹ ಅನುಭವ. ತೇಜಸ್ವಿ ಅವರು ಅದನ್ನು ಕಂಡಾಗ ಯಾವ ರೀತಿ ರೋಮಾಂಚಿತರಾದರೋ(ಕೃತಿಯಲ್ಲಿ) ಅದೇ ರೀತಿಯ ಅನುಭೂತಿ ನಮ್ಮಲ್ಲೂ ಉಂಟಾಗುತ್ತದೆ. ಕೊನೆಯಲ್ಲಿ ಅದು ಕೈಗೆ ಸಿಗದ ನಿರಾಶೆಯ ಜೊತೆಗೆ ಸ್ವತಂತ್ರವಾಗೇ ಇರಲೆಂಬ ಹಾರೈಕೆಯೂ ನಮ್ಮೊಳಗೆ ಮೂಡುತ್ತದೆ.

ಮಲೆಗಳಲ್ಲಿ ಮದುಮಗಳನ್ನು ಹಲವಾರು ವರುಷಗಳ ಹಿಂದೆ ಓದಿದ್ದೆ. ಈಗ ಮತ್ತೆ ಓದುತ್ತಿರುವೆ. ನಾಯಿಗುತ್ತಿಯಲ್ಲದೇ ಇನ್ನೂ ಹಲವು ಪಾತ್ರಗಳು ನಮ್ಮ ಮನದೊಳಗೆ ಮನೆಮಾಡುತ್ತವೆ. ಓದಿರುವೆಯಾ ನೀನು?

ಈ ಪತ್ರವನ್ನು ನಮ್ಮೊಂದಿಗೆ ಹಂಚಿಕೊಂಡದ್ದಕ್ಕೆ ತುಂಬಾ ಧನ್ಯವಾದಗಳು.

sunaath said...

"ದಯವಿಟ್ಟು ದೀಪವಾರಿಸು ಗೆಳೆಯಾ..ನನಗೆ ಬೆಳಕು ಬೇಕಿದೆ' "
ಮನಸ್ಸಿಗೆ ಮಾರ್ಗದರ್ಶನ ಕೊಡುವ ಮಾತಿದು.
ತಿಳಿಸಿದ್ದಕ್ಕೆ ವಂದನೆಗಳು,ಚಿತ್ರಾ.

ಚಿತ್ರಾ ಸಂತೋಷ್ said...

@ತೇಜಕ್ಕ..ಹೊಟ್ಟೆಗಿಚ್ಚಾ? ಹಿಹಿಹಿ..ಅಂಥ ಪತ್ರಗಳು ತುಂಬಾ ಇವೆ. ಟೈಮ್ ಸಿಕ್ಕಾಗ ಹಾಕ್ತಾ ಇರ್ತೀನಿ...ಮತ್ತೆ ನಿಮಗೆ ಹೊಟ್ಟೆಗಿಚ್ಚು ಆಗಲಿ! ಕರ್ವಾಲೋ ಮಾತ್ರವಲ್ಲ ತೇಜಸ್ವಿಯ ಯಾವುದೇ ಪುಸ್ತಕಗಳಾದ್ರೂ..ಓದುತ್ತಾ ಹೋದಂತೆ ನಾವು ಕಳೆದುಹೋಗಿಬಿಡುತ್ತೇವೆ. ಮಲೆಗಳಲ್ಲಿ ಮದುಮಗಳು ಡಿಗ್ರಿಯಲ್ಲಿರುವಾಗ ಓದಿದ್ದು. ಆಗಾಗ ಬರ್ತಾ ಇರಿ,...ತೇಜಕ್ಕ

@ಸುನಾಥ್ ಸರ್..ನಿಮ್ಮ ಪ್ರೀತಿಯ ಮಾತಿಗಳು ನನಗೆ ಇನ್ನಷ್ಟು ಬರೆಯಲು ಸ್ಫೂರ್ತಿ.

-ಪ್ರೀತಿಯಿಂದ,
ಚಿತ್ರಾ