Wednesday, October 29, 2008

ಕಂಡಿದ್ದು..ಕೇಳಿದ್ದು!

ಆಶೀರ್ವಾದ ಅಂದ್ರೆ....
ದೀಪಾವಳಿ ಹಬ್ಬ. ಆಫೀಸ್ನಲ್ಲಿ ಬಿಡುವಿಲ್ಲದ ಕೆಲಸ. ಹಾಗಾಗಿ ರಜೆ ಮಾಡಲಾಗಿಲ್ಲ. ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ನನ್ನ ತಮ್ಮನ ಕರೆದುಕೊಂಡು ಮನೆಯ ಸಮೀಪ ಇರುವ ದೇವಸ್ಥಾನವೊಂದಕ್ಕೆ ಹೋಗಿದ್ದೆ. ಅಲ್ಲಿ ಸುಮರು 80 ವರ್ಷದಷ್ಟು ವಯಸ್ಸಾಗಿರುವ ಅಜ್ಜನೊಬ್ಬ ಬಂದಿದ್ದರು. ದೇವಸ್ಥಾನಕ್ಕೆ ಹೋಗಲಾಯಿತು, ಪೂಜೆ ಆಯಿತು. ನಾವು ಹೊರಡಲನುವಾದೆವು. ಅ ದೇವಸ್ಥಾನದ ಅರ್ಚಕನೊಬ್ನನಿಗೆ ಸುಮಾರು 20-23 ವರ್ಷವಾಗಿರಬಹುದು. ಯುವಕ. ನಮ್ಮ ಪಕ್ಕದಲ್ಲೇ ಇದ್ದ ಅಜ್ಜ ಹೋಗಿ ಆ ಯುವಕನ ಕಾಲಿಗೆ ಅಡ್ಡ ಬಿದ್ದರು. ಅವನು ತಥಾಸ್ತು ಅಂದ. ಅಜ್ಜನಿಗೆ ಮೊಮ್ಮಗನಷ್ಟು ವಯಸ್ಸಿನ ಯುವ ಅರ್ಚಕ ಆಶೀರ್ವಾದ ಮಾಡಿದ್ದ. ನಂಗೆ ಯಾವ ದೇವಸ್ಥಾನಗಳಿಗೆ ಹೋದರೂ ಸ್ವಾಮೀಜಿ. ಅರ್ಚಕರಿಗೆ ಕಾಲಿಗೆ ಬೀಳುವ ಅಭ್ಯಾಸ ಇಲ್ಲ. ಅದಿರಲಿ, ಆಶೀರ್ವಾದ ಎಂದರೇನು? ಹಿರಿಯರು ನೀಡಬೇಕೋ/ಕಿರಿಯರು ನೀಡಬೇಕೋ ನಂಗಂತೂ ಹಿಂದಿನಿಂದಲೂ ಕನ್ ಪ್ಯೂಶನ್!

ಕಳ್ಳ ವರದಿಗಾರ!
ನಾನು ನಿನ್ನೆ ಕಾರ್ಯನಿಮಿತ್ತ ಕನ್ನಡದ ಜನಪ್ರಿಯ ಟಿವಿ ಚಾನೆಲ್ ಒಂದರ ಕಚೇರಿಗೆ ಹೋಗಿದ್ದೆ. ಕೈಯಲ್ಲಿ ನೇತಾಡುತ್ತಿದ್ದ ಬ್ಯಾಗ್, ಫೈಲ್ ಎಲ್ಲವನ್ನೂ ಕಾರಲ್ಲೇ ಬಿಟ್ಟು ಟಿವಿ ಕಚೇರಿಗೆ ಹೋದೆ. ನಮ್ಮ ಕಾರು ಡ್ರೈವರ್ ಏನು ಮಾಡಿದ್ದರೆಂದರೆ...ಪಕ್ಕದಲ್ಲೇ ಮಕ್ಕಳು ಪಟಾಕಿ ಹಚ್ಚುವುದನ್ನು ನೋಡುತ್ತಾ ನಿಂತಿದ್ದರು. ಕಾರಿಗೆ ಡೋರ್ ಹಾಕಿದ್ರೂ ಲಾಕ್ ಮಾಡಿರಲಿಲ್ಲ. ಅಲ್ಲೇ ಒಬ್ಬ ಅದೇ ಟಿವಿಯ ವರದಿಗಾರನೂ ನಿಂತು ಮಕ್ಕಳು ಪಟಾಕಿ ಹಚ್ಚುವುದನ್ನು ನೋಡಿ ಖುಷಿಪಡುತ್ತಿದ್ದ. ಈ ಡ್ರೈವರ್ ಅವರ ಪಾಡಿಗೆ ಅವರು ನೋಡುತ್ತಿದ್ದರು. ಕಾರಿನ ಡೋರ್ ತೆಗೆದ ಶಬ್ಧ ಬಂದಾಗ ತಿರುಗಿ ನೋಡಿದ್ದರು. ಆ ವರದಿಗಾರ ನನ್ನ ಬ್ಯಾಗ್ ಎತ್ತಿದ್ದ. ಟಿವಿ ಗುರುತಿನ ಚೀಟಿ ಕುತ್ತಿಗೆಗೆ ಹಾಕೊಂಡಿದ್ದ ಆ ಸುಂದರ ಯುವಕ, ನನ್ನ ಬ್ಯಾಗ್ ಕದಿಯಲು ನೋಡಿದ್ದ. ಆತನನ್ನು ಬೈದಾಗ ನಗುತ್ತಾ ಬ್ಯಾಗನ್ನು ಅಲ್ಲೇ ಬಿಟ್ಟು ಹೋದ. ನಾನು ನನ್ನ ಕೆಲಸ ಮುಗಿಸಿ ಬರುವಾಗ ಡ್ರೈವರ್ ಈ ಕಥೆ ನನಗೆ ಹೇಳಿದ್ದರು. ಇವನೂ ಒಬ್ಬ ಸಮಾಜದ ಧ್ವನಿ!!

ಇಂಥವರೂ ಇದ್ದಾರೆ!
ಇತ್ತೀಚೆಗೆ ಕೆಲಸದ ನಿಮಿತ್ತ ತಮಿಳುನಾಡು ಕಡೆ ಹೋಗಿದ್ದೆ. ಅದೇ ಮೊದಲು ಕರ್ನಾಟಕ-ತಮಿಳು ಗಡಿ ದಾಟಿ ಹೋಗಿದ್ದು. ಚೆಕ್ ಪೋಸ್ಟ್ ಬಳಿ ಗಾಡಿ ನಿಲ್ಲಿಸಿದೆವು. ನಡುವಯಸ್ಸಿನ ಭಿಕ್ಷುಕಿಯೊಬ್ಬಳು ತನ್ನ ಮಗುವನ್ನು ಕಂಕುಳಲ್ಲಿ ಹಾಕಿಕೊಂಡು 'ಅಮ್ಮಾ...' ಎನ್ನುತ್ತಾ ಬಂದಳು. ನಾನು ಚಿಲ್ಲರೆಗಾಗಿ ಹುಡುಕಾಡಿದಾಗ ಕೊನೆಗೂ ಚಿಲ್ಲರೆ ಸಿಗಲಿಲ್ಲ. ಇರ್ಲಿ ಬಿಡಿ ಅಂತ ಸುಮ್ಮನಾದೆ. ಆದ್ರೂ ಆ ಹೆಂಗಸು ಹೋಗವಂತೆ ಕಾಣಲಿಲ್ಲ. ಕಾರಿನ ಸಮೀಪ ನಿಂತು ಏನೇನೋ ಗೊಣಗುತ್ತಿದ್ದಳು. ಮತ್ತೆಲ್ಲೋ ಸಿಕ್ಕಿದ ಎರಡು ರೂ. ನಾಣ್ಯ ಕೈಗೆ ಹಾಕಿದೆ. 10 ನಿಮಿಷ ಆದ್ರೂ ಕಂಕುಳಲಿದ್ದ ಮಗು ಅಳಲಿಲ್ಲ, ಮಿಸುಕಾಡಲಿಲ್ಲ. ಮಗು ಕಾಣದಂತೆ ಪೂರ್ತಿಯಾಗಿ ಬಟ್ಟೆಯಿಂದ ಸುತ್ತಿದ್ದಳು. ಆವಾಗ್ಲೇ ನನಗೆ ಗೊತ್ತಾಗಿದ್ದು ಕಂಕುಳಲಿದ್ದುದು ಮಗುವಲ್ಲ, ಬಟ್ಟೆಯನ್ನೇ ಮಗು ರೀತಿ ಮಾಡಿ ಕಂಕುಳಿಗೆ ಹಾಕೊಂಡಿದ್ದಾಳೆಂದು!

11 comments:

ವಿ.ರಾ.ಹೆ. said...

ನಿಮಗೆ ಕಂಡಿದ್ದು ನಮಗೆ ಹೇಳಿದ್ದು . ಅಭಿಪ್ರಾಯ , ತೀರ್ಮಾನ, ಅವರಿಗವರಿಗೇ ಬಿಟ್ಟದ್ದು. ಫೈನ್.

ಅಂದಹಾಗೇ ಅವನು ’ಉತ್ತಮ ಸಮಾಜಕ್ಕಾಗಿ’ ಇರುವ ಧ್ವನಿಯೇ ಆಗಿರಬೇಕು ಅಂತ ಸುಮ್ಸುಮ್ನೆ ಡೌಟು :)

ಸಂದೀಪ್ ಕಾಮತ್ said...

ಎಲ್ಲಾದಕ್ಕೂ exception ಗಳಿದ್ದ ಹಾಗೆ ಆಶೀರ್ವಾದಕ್ಕೂ ಇದೆ!
ಸಾಮಾನ್ಯವಾಗಿ ಆಶೀರ್ವಾದ ದೊಡ್ಡವರೇ ಕೊಡೋದು.ಈ ಅರ್ಚಕರು,ಸ್ವಾಮೀಜಿಗಳು ಚಿಕ್ಕವರಾಗಿದ್ರೂ ಆಶೀರ್ವದಿಸಬಹುದು ನಮ್ಮನ್ನೆಲ್ಲಾ.

ತನ್ ಹಾಯಿ said...

ಶರಧಿ,
ಸಣ್ಣ ಝಲಕುಗಳು ಚೆನ್ನಾಗಿವೆ.
ಇಷ್ಟವಾಯಿತು.

ಕೆ. ರಾಘವ ಶರ್ಮ said...

ಸಣ್ಣ ಸಣ್ಣ ತುಣುಕುಗಳು ಮನತಟ್ಟಿದವು. ಚಿತ್ರ ಅವರೇ ನಿಮ್ಮಂತೆ ನಾನೂ ಕೂಡ. ಸಿಕ್ಕಾಪಟ್ಟೆ ಕಾಲಿಗೆ ಬೀಳುವ ಅಭ್ಯಾಸವನ್ನು ಮೈಗೂಡಿಸಿಕೊಂಡಿಲ್ಲ. ಅಷ್ಟಕ್ಕೂ ಆಶೀರ್ವಾದ ನೀಡುವಾತ ಎಷ್ಟು ಯೋಗ್ಯ ಎಂಬುದನ್ನು ಗಮನಿಸುವುದು ಮುಖ್ಯ. ಹೆಚ್ಚಿನ ಎಲ್ಲಾ ಸ್ವಾಮೀಜಿ ಅಥವಾ ಅರ್ಚಕರ ಹಣೆಬರಹ ಈಗಾಗಲೇ ಬಯಲಾಗಿರುವುದರಿಂದ ಅಡ್ಡಬೀಳುವ ಅಭ್ಯಾಸ ಹೊಂದಿರುವವರು ಸ್ವಲ್ಪ ಯೋಚಿಸೋದು ಒಳ್ಳೇದು :-)

ಚಿತ್ರಾ ಸಂತೋಷ್ said...

@ಪ್ರಮೋದ್ ..ನನ್ನ ಪ್ರತಿ ಬರಹಗಳಿಗೆ ಪ್ರತಿಕ್ರಿಯೆ ನೀಡ್ತೀರಿ ತುಂಬಾ ತುಂಬಾ ಥ್ಯಾಂಕ್ಸ್
@ವಿಕಾಸ್, ಸಂದೀಪ್, ತನ್ ಹಾಯಿ, ರಾಘು ಬರ್ತಾ ಇರಿ ಬ್ಲಾಗ್ ಬುಟ್ಟಿಗೆ...
-ಪ್ರೀತಿಯಿಂದ,
ಚಿತ್ರಾ

Anonymous said...

ಶರಧಿ,
ನಿಮ್ಮ ಬರವಣಿಗೆ ತುಂಬ ಚೆನ್ನಾಗಿದೆ..

ಹೆಸರು ರಾಜೇಶ್, said...

kandiddu keliddu odi ayitu.
regards
rajesh

ಬಾನಾಡಿ said...

ಸುದ್ದಿ, ಬರಹ ಕದಿಯುತ್ತಿದ್ದ 'ವರದಿಗಾರರು' ಬ್ಯಾಗ್ ಕದಿಯಲು ಆರಂಭಿಸಿದ್ದು ನಿಜಕ್ಕೂ ಬ್ರೇಕಿಂಗ್ ನ್ಯೂಸ್! ಪತ್ರಕರ್ತರಿಗೆ 'ಉತ್ತಮ' ಸಂಭಾವನೆ ದೊರೆಯುವ ಈ ಕಾಲದಲ್ಲಿ ಇಂಥ ಕಳ್ಳತನದ ವರದಿ ನೀಡಿದ ನಿಮ್ಮ ಸುದ್ದಿ ಮೂಲ ಡ್ರೈವರ್ ನೀಡಿದ ಈ ಬ್ರೇಕಿಂಗ್ ನ್ಯೂಸ್ ನೀವು ಹೋದ ಟಿವಿ ಚಾನೆಲ್ ನೀಡುವ ಬ್ರೇಕಿಂಗ್ ನ್ಯೂಸ್ ನ ಪ್ರಭಾವದಿಂದಲ್ವಲ್ಲ!ಒಲವಿನಿಂದ
ಬಾನಾಡಿ

shivu.k said...

ಬರಹಗಳು ಚಿಕ್ಕವಾದರೂ ಚೊಕ್ಕವಾಗಿವೆ. ಆರ್ಶೀವಾದ ಕೊಡುವುದು ಮುಖ್ಯವಲ್ಲ. ಕೊಡಲಿಕ್ಕೆಅರ್ಚಕನಿಗೆ ಅಧಿಕಾರವೂ ಇಲ್ಲ. ಭೇಡುವವನ ಭಾವುಕತೆ, ತನ್ಮಯತೆ ಮತ್ತು ಭಕ್ತಿ, ಶರಣಾಗತಿಯ ಮೇಲೆ ಪಡೆದುಕೊಳ್ಳುವ ಅರ್ಹತೆ ಬರುತ್ತದೆ.
ವೃತ್ತಿಭಾಂದವರ ಇಂಥ ಸಣ್ಣ ಕೆಲಸಗಳು ಎಲ್ಲಾ ಕಡೆಯೂ ನಡೆಯುತ್ತವೆ.

ರಾಧಾಕೃಷ್ಣ ಆನೆಗುಂಡಿ. said...

ಅರ್ಚಕರ ಬಗ್ಗೆ ನನಗೂ ಹೀಗೆ ಕಾಡಿದೆ.....

jomon varghese said...

ಒಳ್ಳೆಯ ಬರಹ. ಕಳ್ಳತನ ವರದಿಯೂ ಚೆನ್ನಾಗಿದೆ. ಆರ್ಶೀವಾದ ಇರಲಿ ಬಿಡಿ, ಮುಂದೆ ಉಪಯೋಗಕ್ಕೆ ಬರುತ್ತೆ. -:)