Tuesday, August 26, 2008

ಹಂಪಿ ಎಂಬ ವಿಶ್ವ ಪಾರಂಪರಿಕ ಸ್ಥಳ

ಇದು ಜೀವನದ ಅಮೂಲ್ಯ ಕ್ಷಣ. ಒಂದನೇ ಕ್ಲಾಸಿನಿಂದ ಡಿಗ್ರಿ ತನಕ ಹಂಪಿ ಬಗ್ಗೆ ಓದಿದ್ದೇ ಓದಿದ್ದು. ಆದರೆ ಹಂಪಿ. ವಿಜಯನಗರ ಎಲ್ಲವನ್ನೂ ಕಲ್ಪನೆಯ ಗೂಡಲ್ಲಿ ಕಟ್ಟಿಕೊಂಡುಬಿಟ್ಟಿದೆ. ಮೊನ್ನೆ ಮೊನ್ನೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಆಫೀಸಿನಲ್ಲಿ ಗಲಾಟೆ ಮಾಡಿ ರಜಾ ತಕೋಂಡು ಹಂಪಿಗೆ ಹೋಗಿದ್ದೆ. ಹಂಪಿ ನೋಡೋದು ಎಷ್ಟೋ ದಿನಗಳ ಕನಸು, ಆಸೆ, ಹಂಬಲ, ಉತ್ಸಾಹ ಎಲ್ಲವೂ ಆಗಿತ್ತು. ಮೊದಲು ಪುಸ್ತಕದಲ್ಲಿ ಓದಿದ್ದು ಮಸ್ತಕದಲ್ಲಿ ಇಲ್ಲದಿದ್ದರೂ ಹಂಪಿಗೆ ಹೊರಡಲು ಕಾರಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಹಿಂದೆ ಓದಿದ ಪಾಠ, ಅದನ್ನು ಬೋಧಿಸಿದ ಮೇಷ್ಟ್ರು ಎಲ್ಲರೂ ನೆನಪಾದರು. ಅಂದು ಬೆಂಗಳೂರಲ್ಲಿ ಜಡಿಮಳೆ..ಆದರೂ ನಮ್ಮದು ಉತ್ಸಾಹದ ಪಯಣ!
ನನ್ನದು ಅದೇ ಮೊದಲ ಬಾರಿ ಉತ್ತರ ಕರ್ನಾಟಕ ಪ್ರವಾಸ. ನಮ್ಮ ಕಾರು ಚಿತ್ರದುರ್ಗ ಸಮೀಪಿಸುತ್ತಿದ್ದಂತೆ ಮಣ್ಣು ಮತ್ತಿದ ದೊಡ್ಡ ದೊಡ್ಡ ಗಣಿಲಾರಿಗಳು. ಯದ್ವತದ್ವವಾಗಿ ಓಡುವ ಲಾರಿಗಳು, ಎದುರಿಗೆ ಬರುವ ಸಣ್ಣ-ಪುಟ್ಟ ವಾಹನಗಳನ್ನೂ ಲೆಕ್ಕಿಸುವುದಿಲ್ಲ. ಅದರದ್ದೇ ಕಾರುಬಾರು! ಎದುರಿಂದ ಹೋಗುವ ಕಾರು, ಬಸ್ಸುಗಳು ಬೇಕಾದ್ರೆ ಹೊಂಡಕ್ಕೆ ಬಿದ್ದು-ಎದ್ದು ಹೋಗಬೇಕು. ರಸ್ತೆಯಂತೂ ಇದು ಹಂಪಿ ಎಂಬ ವಿಶ್ವ ಪಾರಂಪರಿಕ ಸ್ಥಳಕ್ಕೆ ಹೋಗುವ ರಸ್ತೆಯೇ ಅಲ್ಲ ಎನ್ನುವಷ್ಟು ಕೆಟ್ಟದಾಗಿದೆ. ಹೊಸ ಪೇಟೆ ಸಮೀಪಿಸುತ್ತಿದ್ದಂತೆ ಗಣಿಧೂಳಿನಿಂದಾಗಿ ರಸ್ತೆ ಪಕ್ಕದಲ್ಲಿರುವ ಮರಗಳೆಲ್ಲ ಕೆಂಪಾಗಿವೆ. ಎಲ್ಲೆಲ್ಲೂ ಧೂಳು, ಮಣ್ಣು. ಅದಕ್ಕಿಂತ ಮೊದಲು ಬೆಳಗ್ಗಿನ ಜಾವ ಚಿತ್ರದುರ್ಗ ಪ್ರವೇಶಿಸುತ್ತಿದ್ದಂತೆ 'ಚೆಂಬು ಹಿಡಿದು' ಹಿಂಡು ಹಿಂಡಾಗಿ ಗುಡ್ಡೆಗೆ ಹೋಗುವವರು ಕಾಣಸಿಗುತ್ತಾರೆ. ಬಹುಶಃ ಆ ಕಡೆ ಶೌಚಾಲಯಗಳೇ ಇಲ್ಲವೇನೋ? ಮಜಾ ಅಂದ್ರೆ ಕಚ್ಚೆ ಹಾಕಿ ಚೆಂಬು ಹಿಡಿದು ಹೋಗುವ ಅಜ್ಜ-ಅಜ್ಜಂದಿರನ್ನು ನೋಡೋದೇ. ಅಷ್ಟೇ ಅಲ್ಲ, ಬೆಳ್ಳಂಬೆಳ್ಳಗೆ ಜನರೆಲ್ಲ ಹೊಲದಲ್ಲಿ ಕೆಲ್ಸಮಾಡುತ್ತಿದ್ದರು!

ಅಂತೂ ನಮಗಾಗಿ ಕಾದಿರಿಸದ ಹೊಸಪೇಟೆಯ 'ಮಲ್ಲಿಗಿ' ವಸತಿಗೃಹದಲ್ಲಿ ಸ್ನಾನ ಮಾಡಿ, ತಿಂದು ಒಂದಷ್ಟು ನಿದ್ರೆ ಹೊಡ್ದು ಮದ್ಯಾಹ್ಮ ಹೊತ್ತಿನಲ್ಲಿ ಹಂಪಿಗೆ ನಮ್ಮ ಪಯಣ ಸಾಗಿತ್ತು. ಅಬ್ಬಬ್ಬಾ! ಕಲ್ಲುಗಳೇ ಇತಿಹಾಸವನ್ನು ಸಾರುವ ದೃಶ್ಯ ನೋಡಿ ತುಂಬಾ ಖುಷಿಯಾಯಿತು. ಪಾಪ! ಅನಾಥವಾಗಿ ಬಿದ್ದಿರುವ ಸ್ಮಾರಕಗಳನ್ನು ರಕ್ಷಿಸಲು ಅಲ್ಲಿ ಸಿಬ್ಬಂದಿಗಳೇ ಇಲ್ಲ. ಎಲ್ಲೆಂದರಲ್ಲಿ ಮೂತ್ರ ಮಾಡೋ ಗಂಡಸರು,ಸ ಬಿಯರ್ ಕುಡಿದು ಇಸ್ಪೀಟ್ ಆಡೋರು, (ಅಲ್ಲಿನ ಹುಡುಗರೇ ಈ ಬಿಯರ್ ತಂದುಕೊಡುತ್ತಿದ್ದರು. ಅವರಿಗೆ ಹಣ ನೀಡಲಾಗುತ್ತಿತ್ತು), ಕುಡಿದು ತೂರಾಡುವವರು, ಎಲ್ಲೆಂದರಲ್ಲಿ ಗಲೇಜೇ ಗಲೀಜು..ಕಾಲಿಡಲೂ ಅಸಹ್ಯವಾಗುವಷ್ಟು! ಇದೆಲ್ಲವನ್ನೂ ವಿರೂಪಾಕ್ಷ ದೇವಾಲಯದ ಆವರಣದಲ್ಲಿ ಕಾಣಬಹುದು. ಆದರೆ ವಿಜಯವಿಠ್ಠಲ ದೇವಸ್ಥಾನದ ಸುತ್ತಮುತ್ತ ಸ್ಚಚ್ಛವಾಗಿದೆ. ಹಂಪಿಯಲ್ಲಿ ಹಲವಾರು ದೇವಾಲಯಗಳಿದ್ದರೂ ಪೂಜಾ ಕಾರ್ಯಕ್ರಮ ನಡೆಯುವ ದೇವಸ್ಥಾನ ವಿರೂಪಾಕ್ಷ ಮಾತ್ರ. ಆ ದೇವಾಲಯದ್ದೇ ಒಂದು ಬಾವಿಯಿದೆ.(ನಮ್ಮಲೆಲ್ಲ ದೇವರ ಬಾವಿ ಅಂದ್ರೆ ತುಂಬಾ ಸ್ಚಚ್ಛವಾಗಿ ಜನರೂ ಹತ್ತಿರ ಹೋಗುವಾಗಿಲ್ಲ) ಆ ಬಾವಿಯಲ್ಲಿ ಸ್ವಲ್ಪ ನೀರಿದ್ದರೂ, ಪ್ಲಾಸ್ಟಿಕ್ ಬಾಟಲುಗಳು, ಚಪ್ಪಲಿ, ಕಸಕಡ್ಡಿಗಳಿಂದ ತುಂಬಿಹೋಗಿದೆ. ಬಾವಿಗೆ ಇಣುಕಿದರೆ ಕೆಟ್ಟವಾಸನೆ! ಬಂದ ಭಕ್ತರೆಲ್ಲ ಅದಕ್ಕೆ ಉಗೀತಾರೆ, ಕಸ ಬಿಸಾಡ್ತಾರೆ. ಏನೇ ಮಾಡಿದ್ರೂ ಕೇಳೋರು ಯಾರೂ ಇಲ್ಲ.

ಮೊನ್ನೆ ಮೊನ್ನೆ ಯಾರೋ ವಿಗ್ರಹ ವಿರೂಪಗೊಳಿಸಿದ್ರು ಅನ್ನೋದು ಭಾರೀ ಸುದ್ದಿಯಾಗಿತ್ತು. ಯಾರೋ ಒಬ್ಬನನ್ನು ಬಂಧಿಸಿದ್ದಾರೆ ಕೂಡ. ಆದರೆ ವಿಗ್ರಹಗಳು ವಿರೂಪಗೊಳಿಸಿದ್ರು ಎನ್ನುವುದಕ್ಕಿಂತ ಮೊದಲು ಅಲ್ಲಿ ಸೆಕ್ಯೂರಿಟಿ ಗಾರ್ಡ್ಗಳೇ ಇಲ್ಲ. ತಮಾಷೆಗೆಂಬಂತೆ ಪುಢಾರಿಗಳು ಏನೇನೋ ಮಾಡ್ತಾ ಇರ್ತಾರೆ. ಅವರಿಗೇ ಅದೇ ಕೆಲ್ಸ. ಆದ್ರೆ ರಕ್ಷಣಿಗೂ ಜನ ಬೇಕಲ್ಲ? ಮೊನ್ನೆ ಬಂಧಿಸಿದ ಹುಡುಗನನ್ನು ವಿಚಾರಿಸದಾಗ ಆತ ಮೊದಲೊಮ್ಮೆ ತಮಾಷೆಗೆಂಬಂತೆ ಪ್ರಯತ್ನ ಮಾಡಿದ್ದ. ಆಗ ವಿಗ್ರಹಕ್ಕೆ ಏನು ಆಗಿಲ್ಲ..ಮತ್ತೊಮ್ಮೆ ಅದನ್ನೇ ಮಾಡಿದ್ದೇನೆಂದು ಹುಡುಗ ಹೇಳ್ತಾನೆ ಅಂತಾರೆ ಅಲ್ಲಿನ ಡಿಸಿ ಶಿವಪ್ಪ. ಭಯೋತ್ಪಾದಕರು, ಕಿಡಿಗೇಡಿಗಳು ಮೂರ್ತಿ ವಿರೂಪಗೊಳಿಸುವ ಹಲ್ಕ ಮಾಡಿದ್ದಾರೆಂದು ಬೊಬ್ಬಿಡುವ ನಮ್ಮ ಘನಧಾರಿಗಳು ಮೊದಲು ಅಲ್ಲಿನ ವಾಸ್ತವ ಅರಿಯಬೇಕಿದೆ. ಅಲ್ಲಿನ ಬೃಹತ್ ಬಂಡೆಗಳ ನಡುವೆ ಭಯೋತ್ಪಾದಕರು ಅಡಗಿದ್ದರೂ ಗೊತ್ತಾಗಲ್ಲ. ಆದರೆ ಅಲ್ಲಿ ಏನಾಗುತ್ತಿದೆ ಎನ್ನುವುದನ್ನೇ ತಿಳಿಯಲು ಯಾರೂ ಮುಂದಾಗುತ್ತಿಲ್ಲ. ಇದು ಹಂಪಿ ರಕ್ಷಣೆ ಬಗ್ಗೆ ಬೊಬ್ಬಿಡುವ ಮಹಾನುಭಾವರು ಮಾಡೋ ತಪ್ಪು ಕೆಲಸ.

ಆದರೆ ಹಂಪಿ ಹೇಗೇ ಇದ್ದರೂ ನೋಡುವ ಕಣ್ಣುಗಳಿಗೆ ದಣಿವಾಗದು. ಮತ್ತಷ್ಟು ನೋಡೋಣ..ನೋಡಿದಷ್ಟು ನೋಡದೆ ಮಿಸ್ ಮಾಡ್ಕೋತಾ ಇರುವ ಸ್ಥಳಗಳೇ ತುಂಬಾ. ನೂರು ದಿನ ಇದ್ರೂ ಹಂಪಿ ಪೂರ್ತಿ ನೋಡಿ ಆಗದು. ಇನ್ನು ಮೂರು ದಿನದಲ್ಲಿ ಏನು ನೋಡಲಿ? ಮೂರು ದಿನ ಅಲ್ಲೇ ಇದ್ದ ನಾವು, ಮಧ್ಯಾಹ್ನದ ಹೊತ್ನಲ್ಲಿ ದಾರಿ ಮಧ್ಯೆ ಊಟ ಮಾಡುತ್ತಿದ್ದೇವು. ಪ್ರವಾಹ, ಮಳೆಯಿಂದ ಮುನಿಸಿಕೊಂಡಿದ್ದ ತುಂಗಾ ಭದ್ರಾ ಕೂಡ ನಾವು ಹೋಗುವ ವೇಳೆ ಶಾಂತವಾಗಿ ಹರಿಯುತ್ತಿತ್ತು. ತುಂಗಾಭದ್ರಾ ಅಣೆಕಟ್ಟು ಮಾತ್ರ ರಾತ್ರಿ ಹೊತ್ತು ನೋಡೋದು ಕಣ್ಣಿಗೆ ಇಂಪಾಗಿತ್ತು. ಹಂಪಿಯಲ್ಲಿ ಮೂರು ದಿನದಲ್ಲಿ ಏನೇನೋ ನೋಡಕಾಯಿತೋ ಅದನ್ನೆಲ್ಲ ನೋಡಿಕೊಂಡ್ವಿ. ಆ ಕಲ್ಲುಬಂಡೆಗಳ ನಡುವೆ ನಡೆದು ನಡೆದೂ ನನ್ನ ಕಾಲುಗಳಂತೂ ಸೋತು ಹೋಗಿದ್ದುವು.

ನಂಗೇನೋ ಭಾನುವಾರ ಬೆಂಗಳೂರು ಕಡೆ ಬ್ಯಾಗ್ ಪ್ಯಾಕ್ ಮಾಡಿದಾಗಂತೂ ಅಲ್ಲೆ ಇದ್ದುಬಿಡೋಣ ಅನಿಸ್ತು. ಅಲ್ಲಿಂದ ದಾರಿಯಲ್ಲಿ ಚಿತ್ರದುರ್ಗದ ಕೋಟೆಗೂ ಬಂದೆವು. ಅಲ್ಲೊಂದು 3 ಗಂಟೆ ಸುತ್ತುವಾಗ ನಾನು ಬಿದ್ದುಬಿಟ್ಟಿದೆ. ಸುಸ್ತೋ ಸುಸ್ತು! ನಡೆಯಕ್ಕೂ ಆಗದ ಸ್ಥಿತಿ ಆಗಿತ್ತು. ಮತ್ತೆ ಬೆಂಗಳುರು ತಪ್ಪುವಾಗಲೇ ನಾನು ಸಾವರಿಸಿಕೊಂಡಿದ್ದು. ಇನ್ನೊಂದು ಸಲ ಹಂಪಿಗೆ ಹೋಗಬೇಕನಿಸಿದೆ. ಹೋಗಬೇಕು..ಅಂತೂ ಹಂಪಿಗೆ ಹೋಗುವ ಕನಸು ನನಸಾಗಿದೆ..ಜೀವನದಲ್ಲಿ ಒಂದೇ ಒಂದ್ಸಲ ಹಂಪಿನಾ ನೋಡಬೇಕು. ಕೃಷ್ಣದೇವರಾಯನ ಕಾಲದಲ್ಲಿ ಹಂಪಿಯಲ್ಲಿ ಚಿನ್ನವನ್ನು ಸೇರಲ್ಲಿ ಅಳೆದು ವ್ಯಾಪಾರ ಮಾಡ್ತಾ ಇದ್ರಂತೆ..ಆದ್ರೆ ಈಗ ಹಂಪೀನೇ ವ್ಯಾಪಾರ ಮಾಡಕ್ಕೆ ಜನ ಕುಂತವ್ರೆ ಅನ್ತಾಳೆ ಅಲ್ಲೊಬ್ಬ ಅಜ್ಜಿ.

3 comments:

ವಿ.ರಾ.ಹೆ. said...
This comment has been removed by the author.
ವಿ.ರಾ.ಹೆ. said...

ನಿಜ . ಹಂಪಿಯನ್ನು ನೋಡಿದಾಗ ವಿಜಯನಗರ ಸಾಮ್ರಾಜ್ಯದ ಹಂಪಿ ಹಾಳಾದುದಕ್ಕಿಂತ ಅದನ್ನು ಈಗ ಇಟ್ಟುಕೊಂಡಿರುವ ಸ್ಥಿತಿ ನೋಡಿದರೆ ಬೇಜಾರಾಗುತ್ತದೆ. ವಿರೂಪಾಕ್ಷ ದೇವಾಲಯದ ಆವರಣವಂತೂ ಅಸ್ತವ್ಯಸ್ತ ವಿದೇಶೀಯರು, ಹೊಲಸು ಅಂಗಡಿಗಳು, ಸಿಗರೇಟು ಹೊಗೆ, ಕೊಚ್ಚೆಯಿಂದಲೆ ತುಂಬಿ ಹೋಗಿರುತ್ತದೆ. ಅಂತಾರಾಷ್ತೀಯ ಮಟ್ಟದ ಸ್ಮಾರಕವನ್ನು ಹೀಗಿಟ್ಟುಕೊಂಡಿರುವುದು ಬೇಸರ. ಆದರೂ ಹಂಪಿಯನ್ನು ನೋಡಿದರೆ ಒಂಥರಾ ನಮ್ಮ ಇತಿಹಾಸವೇ ಕಣ್ಣ ಮುಂದೆ ಇದ್ದಂತಾಗುತ್ತದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯ ನೋಡಲಿಲ್ವಾ?

ಚಿತ್ರಾ ಸಂತೋಷ್ said...

ಹಾಯ್ ವಿಕಾಸ್,
ಹೌದು..ನೀವಂದಿದ್ದು ನಿಜ..
-ಚಿತ್ರಾ