Monday, March 3, 2008

ಕೆಂಡಸಂಪಿಗೆಯಲ್ಲಿ ಶರಧಿಯ ಪಯಣ

ನಾನಂದು ಬಹಳ ಖುಷಿಪಟ್ಟಿದ್ದೆ. ಅಂದು 02.02.2008 ಕೆಂಡಸಂಪಿಗೆಯಲ್ಲಿ ನನ್ 'ಶರಧಿ'ಯ ಪುಟ್ಟ ಪಯಣ. ನಾನು ಬ್ಲಾಗ್ ಆರಂಭಿಸಿ ಇನ್ನೂ ಮೂರೇ ಮೂರು ತಿಂಗಳು ಅಂದಿಗೆ. 2007ರ ಜನವರಿ 02ರಂದು 'ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಏನಿದೆ?' ಬರೆದಿದ್ದೆ. ಆಮೇಲೆ ಸಮಯ ಸಿಕ್ಕಾಗಲೆಲ್ಲಾ ಬರೆಯುತ್ತಿದ್ದೆ. ನನಗೆ ಕವನ, ಕಥೆ ಬರೆಯಕೆ ಬರಲ್ಲ. ಆದ್ರೂ ಅನುಭವವನ್ನು ನನಗನಿಸಿದ ಹಾಗೆ ಗೀಚೋದು ಗೊತ್ತು. ಅಲ್ಲಿ-ಇಲ್ಲಿ ನೋಡಿದ್ದು, ಯಾರೋ ಹೇಳಿದ್ದು ಎಲ್ಲವೂ ನಂಗೆ ಬ್ಲಾಗ್ ಗೆ ವಸ್ತುಗಳಾಗಿವೆ. ಏನೋ ಗೊತ್ತಿಲ್ಲ ಬ್ಲಾಗ್ ಬರೆದ್ರೆ ಏನೋ ಖುಷಿ, ಸಂತೃಪ್ತಿ ಮನಸ್ಸಿಗೆ. ಬೆಳಗ್ಗಿನಿಂದ ಸಂಜೆ ತನಕ ಕೀ- ಬೋರ್ಡಗಳನ್ನು ಕುಟ್ಟುತ್ತಾ ಇರುವ ನನಗೆ ಬ್ಲಾಗಲ್ಲಿ ಏನಾದ್ರೂ ಹಾಕಿದ್ರೆ ಸಾಕು..ಎಲ್ಲಾ ನೋವನ್ನು ಮರೀತೇನೆ, ತುಂಬಾ ಖುಷಿಪಡುತ್ತೇನೆ. ಕೆಂಡಸಂಪಿಗೆಗೆ ನಾನು ಆಭಾರಿ.

ಕೆಂಡಸಂಪಿಗೆಯಲ್ಲಿ ಬರೆದ ಸಾಲುಗಳು ಇಲ್ಲಿವೆ.
ಈ ಬಾರಿಯ ಬ್ಲಾಗ್ ಬೊಗಸೆಯಲ್ಲಿ ಚಿತ್ರಾ ಕರ್ಕೇರಾ ಅವರ ಶರಧಿಯ ಸರದಿ. ನಿತ್ಯ ಜೀವನದ ಸಹಜ, ಸರಳ ಸಂಗತಿಗಳನ್ನು ನವಿರಾಗಿ ಹೆಣೆಯುವ ಚಿತ್ರ ಪುತ್ತೂರಿನಿಂದ ಬಂದಿರುವ ಯುವ ಪ್ರತಿಭೆ. ಅವರು ವಾಸ್ತವಕ್ಕೆ ಹತ್ತಿರವಾಗಿ ಬರೆಯುತ್ತಾರೆ. ಸುತ್ತಮುತ್ತ ನಡೆಯುವ ಸಣ್ಣಪುಟ್ಟ ಘಟನೆಗಳನ್ನು ಇದ್ದದ್ದು ಇದ್ದ ಹಾಗೆ ಬ್ಲಾಗಿಸುತ್ತಾರೆ. ಅಲ್ಲಿ ನೋಡಿ, ಇಲ್ಲಿ ಬಂದು ಕತೆ ಹೇಳಿದ ಹಾಗೆ ಇರುವ ಈ ಪ್ರಾಮಾಣಿಕ ಬರಹಗಳಿಗೆ ಚಿಂತನೆಯ ನವಿರಾದ ಸ್ಪರ್ಶವಿದೆ.
ಬಸ್ಸಿನಲ್ಲಿ ಭೇಟಿಯಾದ ಮಣಿಪುರಿ ಹುಡುಗ, ರಾತ್ರಿ ಕಾಣುವ ಎಂ.ಜಿ ರೋಡು, ಪುಸ್ತಕ ಪ್ರೀತಿಸುವ ಫ್ರಾನ್ಸಿನ ಅಧ್ಯಕ್ಷ, ರಾಖಿ ಕಟ್ಟಿ ಗಿಪ್ಟ್ ಕೊಡಲು ಬರುವ ಅಣ್ಣ ಈ ಎಲ್ಲಾ ಕತೆಗಳ ಹಿಂದಿರುವ ಮಾನವೀಯ ಆಯಾಮಗಳು ಗಮನ ಸಳೆಯುತ್ತದೆ. ಪಕ್ಕಾ ವ್ಯವಹಾರಿಯಂತಿರುವ ಬೆಂದಕಾಳೂರು, ಅದರೊಳಗಿನ ಕೃತಕ ನಗು, ಕಂಡು ಕಾಣದಂತಿರುವ ನೋವು ನರಳಾಟ, ಜನರ ಅವಸರ, ಉತ್ಸಾಹ ತಲ್ಲಣ ಎಲ್ಲವೂ ಶರಧಿಯ ಒಳನೋಟಕ್ಕೆ ಸಿಕ್ಕಿವೆ.
ರಜೆಯ ಮಜ ಅನುಭವಿಸಿದ ಕತೆ ಈ ಬಾರಿಯ ಪೋಸ್ಟಿನಲ್ಲಿದೆ. ವೃತ್ತಿ ಬದುಕಿನ ಒತ್ತಡದ ನಡುವೆ ಕಳೆದು ಹೋಗುವ ಒಂದು ವಾರ, ಅದರ ನಡುವೆ ಕೈಗೆ ಸಿಕ್ಕೂ ಸಿಗದಂತಿರುವ ಒಂದು ಭಾನುವಾರ, ಅದನ್ನು ಬೆಂಗಳೂರಿಗರು ಅನುಭವಿಸುವ ಸಂಭ್ರಮದ ವರ್ಣನೆ. ಮುಂದಿನ ಭಾನುವಾರಕ್ಕಾಗಿ ಕಾಯುತ್ತಾ, ಜುಗಾರಿ ಕ್ರಾಸ್‌ನ ಟಿಕೇಟ್ ಹಿಡಿದು ಎಲ್ಲರನ್ನೂ ಸ್ವಾಗತಿಸುವ ಶರಧಿಗೆ ಆರಾಮವಾಗಿ ಹೋಗಿ ಬರಬಹದು.

No comments: