Wednesday, February 6, 2008

ಮಿಸ್ ಮಾಡ್ಕೋತಾ ಇರುವ ನಮ್ಮೂರ ಜಾತ್ರೆ 'ಒತ್ತೆಕೋಲ'

ವಿಷ್ಣುಮೂರ್ತಿ ಜೊತೆ 'ಪೂಜಾರಿ'ಗಳು
ನನ್ನ ಬಾಲ್ಯದ ಪುಟ್ಟ ಮನಸ್ಸು ಯಾವತ್ತೂ ಊರ ಜಾತ್ರೆ, ಮದುವೆ, ಯಕ್ಷಗಾನ ಯಾವುದನ್ನೂ ತಪ್ಪಿಸಿಲ್ಲ. ಯಾರೂ ಬಂದಿಲ್ಲಾಂದ್ರೆ ಸಿಕ್ಕವರ ಜೊತೆ ಜಾತ್ರೆಗೋ, ಯಕ್ಷಗಾನಕ್ಕೋ ಹೋಗಿ ಬರುತ್ತಿದೆ. ಅದೊಂದು ಹುಚ್ಚು. ಅಮ್ಮ ಕೊಟ್ಟ ಚಿಲ್ಲರೆ ಕಾಸು ಹಿಡ್ಕೊಂಡು ಹೋಗೋದು ನಂಗೊಂದು ಖುಷಿ. ಅಂಥದ್ದೇ ಒಂದು ಜಾತ್ರೆ 'ಒತ್ತೆಕೋಲ'. ಬಾಲ್ಯದಲ್ಲಿ 'ಒತ್ತೆಕೋಲಕ್ಕೆ' ಹೋಗಿ ಬಂದ ನೆನಪುಗಳನ್ನು ಬ್ಲಾಗ್ ಬುಟ್ಟಿಗೆ ಹಾಕಿದ್ದೀನಿ.
ಪ್ರತಿ ವರ್ಷ ಎಪ್ರಿಲ್ ತಿಂಗಳ ಮೊದಲ ವಾರ ನಮ್ಮೂರ ಪಕ್ಕದ 'ವಿಷ್ಣು ಮೂರ್ತಿ' ದೇವಾಲಯದ ಪಕ್ಕ ಒತ್ತೆಕೋಲ (ನೇಮೋತ್ಸವ) ನಡೆಯುತ್ತಿತ್ತು. ಮಾರ್ಚಿನಿಂದಲೇ ಈ ಜಾತ್ರೆಗೆ ಹಣ ಸಂಗ್ರಹಿಸಿಡುವ ಕೆಲ್ಸ ನನ್ದು. ಆಮೇಲೆ ಅಮ್ಮ ಕೊಟ್ಟ ಚಿಲ್ರೆ ಕಾಸು ಕೂಡಿ ಬಲೆ, ಮೀಠಾಯಿ ಕೊಳ್ಳೊದು. ರಾತ್ರಿ 9 ಗಂಟೆಗೆ ಅಜ್ಜಿ ಜೊತೆ ಹೋಗಿ ಕುಳಿತರೆ, ಮರುದಿನ 11 ಗಂಟೆಯವರೆಗೆ ಜಾತ್ರೆ ಮುಗಿಯುವ ತನಕ ಅಲ್ಲಿ ಕುಳಿತುಕೊಂಡು ನೇಮೋತ್ಸವ ನೋಡೋದು. ಪುಟ್ಟ ಶೀತದಿಂದ ಹಿಡಿದು, ದೊಡ್ಡ ರೋಗಗಳಿಗೂ ಈ ದೇವರಿಗೆ ಹರಕೆ ಹೊರುತ್ತಾರೆ. ಅಲ್ಲಿ ವಿಷ್ಣುಗೆ ಹರಕೆ ಕೊಡೋದು ಕಟ್ಟಿಗೆ. ನೇಮೋತ್ಸವ ನಡೆಯುವ ಸಮಯಕ್ಕೆ ರಾಶಿ ರಾಶಿ ಕಟ್ಟಿಗೆ ತಂದು ಹಾಕೋರು ಜಾಸ್ತಿ. ಆ ಕಟ್ಟಿಗೆಯನ್ನು ನೇಮೋತ್ಸವದ ಮೊದಲ ದಿನ ರಾತ್ರಿ ರಾಶಿ ಹಾಕಿ ಬೆಂಕಿ ಹಚ್ಚುತ್ತಾರೆ. ಅದು ಬೆಳಿಗ್ಗೆ ಆಗುವಾಗ ಪೂರ್ತಿ ಉರಿದು, ಕೆಂಪಗಿನ ಕೆಂಡದ ರಾಶಿ. ಆಗ ಸುಮಾರು ಬೆಳಿಗ್ಗೆ 5 ಗಂಟೆ. ವಿಷ್ಣುಮೂರ್ತಿ ನೇಮ. ಅದಕ್ಕೆ ಮುಂಚೆ ಇತರ ನೇಮಗಳು ನಡೆಯುತ್ತವೆ. ವಿಷ್ಣುಮೂರ್ತಿ ನೇಮ ನೋಡಕ್ಕೆಂದೇ ಬೆಳಿಗ್ಗಿನ ಹೊತ್ತು ತುಂಬಾ ಜನ ಸೇರುತ್ತಾರೆ. ಬಣ್ಣದ ವೇಷ, ಸೊಂಟಕ್ಕೆ ತಾಳೆ ಗರಿ ಕಟ್ಟಿದ್ದ ವ್ಯಕ್ತಿ ವಿಷ್ಣುಮೂರ್ತಿ. ಇದರ ನೇಮೋತ್ಸವ ನಡೆಯುವಾಗ ಅದರ ಜೊತೆ 'ಸೇವಕರು' ಇರುತ್ತಾರೆ. ಅವರನ್ನು ತುಳು ಭಾಷೆಯಲ್ಲಿ 'ಪೂಜಾರಿ'ಗಳು ಎನ್ನುತ್ತಾರೆ. ವಿಷ್ಣುಮೂರ್ತಿ ಎದ್ದು ಬಂದಾಗ, ಈ ಪೂಜಾರಿಗಳು ಜೊತೆಗೆ ಬಂದು ಉರಿಯುವ ಕೆಂಡದ ಮೇಲೆ ವೇಗವಾಗಿ ನಡೆಯುತ್ತಾರೆ. ಜೊತೆಗೆ ವಿಷ್ಣುಮೂರ್ತಿಯೂ ಕೆಂಡದ ಮೇಲೆ ಹೊರಳಾಡುತ್ತದೆ.

ಕೆಂಡದ ಮೇಲೆ ಹೊರಳಾಡುತ್ತಿರುವ 'ವಿಷ್ಣುಮೂರ್ತಿ'
ಕೆಂಡದ ಮೇಲೆ ಹೊರಳಾಡುತ್ತಿದ್ದರೂ ಅವರಿಗೆ ಏನೂ ಆಗುವುದಿಲ್ಲ. ಪ್ರತಿ ವರ್ಷವೂ ನಮ್ಮಮ್ಮ ಸಣ್ಣ ಪುಟ್ಟ ಜ್ವರಕ್ಕೂ ಹರಕೆ ಹೇಳಿ ನಮ್ಮನ್ನು ಕಟ್ಟಿಗೆ ಹೊರುವಂತೆ ಮಾಡುತ್ತಿದ್ದರು. ಒಂದೊಂದು ಸಲ ಅಮ್ಮನನ್ನೆ ಹೊರಿಸಿದ್ದೂ ಉಂಟು. ಆಗೆಲ್ಲ ಅಮ್ಮ ಸಂತೋಷದಿಂದ ಹೊತ್ತು, ತಂದು ಮಕ್ಕಳಿಗೆ ಒಳ್ಳೆದು ಮಾಡಿ ಅಂತ ಹೇಳಿ ಕಟ್ಟಿಗೆ ಹಾಕುತ್ತಿದ್ರು. ಆದ್ರೂ ಆ ಜಾತ್ರೆಯೆಂದರೆ ನಂಗೂ ನನ್ ತಮ್ಮಂಗೂ ಹಬ್ಬ.
ಈ ಜಾತ್ರೆಯಲ್ಲಿ ಇನ್ನೊಂದು ವಿಶೇಷ ಅಂದ್ರೆ 'ಮುಳ್ಳುಗುಳಿಗ' ನೇಮೋತ್ಸವ. ಅದು ಆರಂಭವಾಗೋದು ಒಂಬತ್ತು ಗಂಟೆ ನಂತರ. ಅದನ್ನು ಮಾತ್ರ ನಾವು ಎದುರಿಂದ ನೋಡುತ್ತಿರಲಿಲ್ಲ. ಗರ್ಜಿಸುತ್ತ ಅದು ಓಡುತ್ತಾ ಬಂದಾಗ, ಯಾರಾದ್ರೂ ಹಿಡಿದುಕೊಳ್ಳದಿದ್ರೆ ಎದುರಿದ್ದವರ ಮೇಲೆರಗುತ್ತಿತ್ತು. ಮಾತ್ರವಲ್ಲ ಓಡಿ ಹೋಗಿ ಮರದ ಮೇಲೆ ಹತ್ತಿ, ಅಥವಾ ಮುಳ್ಳಿನ ಬೇಲಿ ಮೇಲೆ ಎರಗಿ..ಅದು ಒರಳಾಡುವ ಅದ್ರ ಕಿತಾಪತಿ..ನೋಡೋಕೆ ಭಯದ ಜೊತೆಗೆ ಅಷ್ಟೇ ತಮಾಷೆ. ಹುಡುಗ್ರಿಗೆ ಬೇಕಾದ ಹಾಗೆ ತರ್ಲೆಮಾಡಿ ಮುಳ್ಳಿನ ಮೇಲೆ ಸಿಕ್ಕವರನ್ನು ದೂಡಿ ಹಾಕೋದು.
ಈ ಜಾತ್ರೆ ನೋಡದೆ ಈ ಏಳೆಂಟು ವರ್ಷ ಕಳೆಯಿತು. ಪ್ರತಿ ಬಾರಿಯೂ ಎಪ್ರಿಲ್ ಬಂದಾಗಲೆಲ್ಲಾ ಅಮ್ಮ ಕೊಟ್ಟ ಚಿಲ್ರೆ ಕಾಸು, ಸಿಟ್ಟಿನಿಂದ ಹರಕೆ ಕಟ್ಟಿಗೆ ಹೊತ್ತಿದ್ದು, ಅಜ್ಜ-ಅಜ್ಜಿಯಿಂದ ಸಂಗ್ರಹಿಸಿದ ಒಂದು ರೂಪಾಯಿ ನಾಣ್ಯ, ಕೈತುಂಬಾ ತೊಟ್ಟ ಬಲೆ, ಹೊಟ್ಟೆ ತುಂಬಾ ತಿಂದ ಮೀಠಾಯಿ, ಕೆಂಡದ ಮೇಲೆ ಬಿದ್ದ ವಿಷ್ಣುಮೂರ್ತಿ, ಮುಳ್ಳಿನ ಮೇಲೆ ಬಿದ್ದ ಮುಳ್ಳುಗುಳಿಗ..ಎಲ್ಲವೂ ನೆನಪಾಗದೆ ಇರುವುದಿಲ್ಲ. ಒಂದು ವರ್ಷವೂ ಮಿಸ್ ಮಾಡ್ಕೊಳ್ಳದ ಜಾತ್ರೇನ ಈಗ ಮಿಸ್ ಮಾಡ್ಕೋತಾ ಇದ್ದೀನಿ ಅಂತ ಅನಿಸುತ್ತೆ

ಪೋಟೋ: ದಯಾನಂದ ಕುಕ್ಕಾಜೆ, DAIJIWORLD

4 comments:

Satish said...

ನಿಮ್ಮ ಬ್ಲಾಗ್ ಹೆಸರೂ, ಬ್ಯಾನರ್ರೂ, ಚಿತ್ರಗಳೂ ಹಾಗೂ ಬರಹ ಎಲ್ಲವೂ ಸೊಗಸಾಗಿವೆ, ನಿಮ್ಮ ಪ್ರಯತ್ನ ಹೀಗೇ ಮುಂದುವರೆಯಲಿ ಹಾಗೂ ಸುಗಮವಾಗಿ ಸಾಗಲಿ!

ಪರವಾಗಿಲ್ಲ, ಇತ್ತೀಚೆಗೆ ನೀವು ಬ್ಲಾಗ್ ಪ್ರಪಂಚದಲ್ಲಿ ನಿಮ್ಮನ್ನ ಕಾಣಿಸಿಕೊಂಡ್ರೂ ಆಗ್ಲೇ ಸಾಕಷ್ಟು ದುಡಿದಿದ್ದೀರ.

ನಾವೇನಾದ್ರೂ ನಮ್ಮೂರಿನ ಕಥೆಗಳ ಬಗ್ಗೆ ಬರೆದ್ರೆ ಅದು ನಾಸ್ಟಾಲ್ಜಿಯಾ ಅಗುತ್ತೆ, ಆದ್ರೆ ನೀವು ಅದನ್ನ ಒಂದು ’ಅನುಭವ’ವನ್ನಾಗಿ ಬಣ್ಣಿಸಿದ್ದೀರ ಅಂತ್ಲೇ ನನ್ನ ಅನುಮಾನ, ಭೂತದ ಕೋಲದ ಬಗ್ಗೆ ನಾವು ಶಾಲೆಯಲ್ಲಿ ಓದಿದ್ ಬಿಟ್ರೆ ಹೆಚ್ಚೂ ಕಡಿಮೆ ಅದು ಘಟ್ಟದ ಕೆಳಗಿನ ಅನುಭವದಲ್ಲೇ ಹುದುಗಿ ಹೋಗ್ತಿತ್ತೋ ಏನೋ ಅಂಥದ್ದನ್ನ ನೀವು ನೆನಪಿಸಿಕೊಟ್ರಿ :-)

ಈಗ ನಿಮ್ಮ ಕ್ರಿಯೇಟಿವಿಟಿಗೊಂದು ಸವಾಲು, ’ಅಂತರಂಗ’ಕ್ಕೊಂದು ಇದೇ ರೀತಿ ಬ್ಯಾನರ್ರನ್ನ ನೀವು ಯಾಕ್ ತಯಾರಿಸಿಕೊಡಬಾರ್ದು?!

ನಾವಡ said...

ಚಿತ್ರಾರೇ,
ಪೊರ್ಲುಂಡು ಬರೆಹ.
ಕರಾವಳಿಯ ನಮಗೆ ಒಂದು ಕಲ್ಪನೆ, ಆಲೋಚನಾ ಕ್ರಮವನ್ನೆಲ್ಲಾ ಕಲಿಸಿದ್ದು ಇಂಥ ಜನಪದ ಆಚರಣೆಗಳೇ ಹೊರತು ಸಾಹಿತ್ಯ ಆಕರವಲ್ಲ ಎನ್ನುವುದು ನನ್ನ ಅನಿಸಿಕೆ.
ನಮ್ಮೊಳಗಿನ ಅನುಭವದ ಜೋಳಿಗೆ ಭಾರವಾಗಲೂ ಅವೇ ಕಾರಣ."ಒತ್ತೆಕೋಲ’ದ ಬಗ್ಗೆ ಹೇಳಿ ನನ್ನೂರಿಗೆ ಹೋಗೋವಾಗೆ ಮಾಡಿದ್ರಿ. ಧನ್ಯವಾದ. ಇಂಥದ್ದನ್ನೇ ಬರೆಯುತ್ತಿರಿ.
ನಾವಡ

ಚಿತ್ರಾ ಸಂತೋಷ್ said...

ಆತ್ಮೀಯ ಸತೀಶ್ ಮತ್ತು ನಾವಡ ಅವರೇ,
ಪ್ರತಿಕ್ರಿಯೆಗೆ ಧನ್ಯವಾದಗಳು. ಆಗಾಗ ನನ್ನ ಬ್ಲಾಗ್ ಗೆ ಬರುತ್ತೀರಿ..
ಪ್ರೀತಿಯಿಂದ
ಚಿತ್ರಾ

ಹೆಸರು ರಾಜೇಶ್, said...

nanage nammurina marihabba nenapisidakke. Dhanyavadagalu.
rajesh