Friday, June 12, 2009

ಪ್ರೇಮಿಯಾಗಿರುತ್ತಿದ್ದರೆ, ನಾನೊಬ್ಬಳು ಸಂತಸ ಸವಿಯುವ ಮಾನವಜೀವಿಯಾಗುತ್ತಿದ್ದೆ!

ಇಲ್ಲ, ಮನೆಯ ಸಂತಸ, ಶುಭರಾತ್ರಿಯ ಮುತ್ತು...
'ಅತ್ಯಂತ ಪ್ರೀತಿಯ' ಎಂಬ ಪದದಿಂದ ಶುರುವಾಗುವ
ವಾರದ ಪತ್ರಗಳ ವಂಚಕ ಭರವಸೆಗಳು ನನಗಲ್ಲ.
ನನಗಲ್ಲ, ಟೊಳ್ಳು ಸಪ್ತಪದಿಯ ವಿಧಿ, ಹಾಸಿಗೆಯ ಮೇಲಿನ ಒಂಟಿತನ..
ಅದರ ಮೇಲೆ ಮಲಗಿ, ಒಬ್ಬ ಸಂಗಾತಿಯ ಕನಸು ಕಾಣುತ್ತಾನೆ.
ಬಹುಶಃ ಹೆಣ್ನೇ, ತನ್ನವಳಿಗಿಂತ ಹೆಚ್ಚು ಕಾಮಿಸುವವಳನ್ನು....
*******
ಕೊಡು ಅವನಿಗೂ ಉಡುಗೊರೆ
ಕೊಡು ಅವನಿಗೂ ನೀಳ ಕೇಶದ ಘಮ
ಸ್ತನದ್ವಯಗಳ ನಡುವಿನ ಕಸ್ತೂರಿ ಗಂಧ.
ಋತುಚಕ್ರದ ರಕ್ತದಾಘಾತ, ಇಂಗಿ ಹೋಗದ ಹೆಣ್ಣಿನ ಹಸಿವುಗಳನ್ನು...
*******
ಮುಂಜಾನೆ ಟೀ ಜತೆಗೆ, ಬಾಗಿಲಿನಿಂದ ತೂರಿಬಂದ
ಪ್ರೀತಿಯ ಮಾತುಗಳಿಂದ, ಹ್ಲಾಂ...ದಣಿದ ಕಾಮದಿಂದ
ಸುತ್ತ ನೀ ಹೆಣೆದ ರೇಷಿಮೆ ಗೂಡನ್ನು
ಬಿಟ್ಟು ನಾನು ಹೋಗುತ್ತೇನೆ, ಒಂದಲ್ಲ ಒಂದು ದಿನ
ರೆಕ್ಕೆ ಪಡೆದು ನಾನು ಹಾರಿ ಹೋಗುತ್ತೇನೆ..
*******
ಪುರುಷ ಋತುವಿನಂತೆ
ನೀನು ಅನಂತ
ಇದನ್ನು ಕಲಿಸಲು, ನೀನು
ನನ್ನ ಯೌವನವನ್ನು ನಾಣ್ಯದಂತೆ
ಹಲವು ಕೈಗಳಿಗೆ ಚಿಮ್ಮಲು ಬಿಡು,
ನೆರಳುಗಳ ಜೊತೆ ಸಮಾಗಮಕ್ಕೆ ಬಿಡು,
ಖಾಲಿ ದೇಗುಲಗಳಲ್ಲಿ ಹಾಡಲು ಬಿಡು
*******
ನಾನು ಸತ್ತ ಮೇಲೆ
ಮಾಂಸ, ಮೂಳೆಗಳನ್ನು ಹಾಗೇ ಎಸೆದುಬಿಡಿ.
ಒಂದೆಡೆ ರಾಶಿ ಹಾಕಿ,
ಅದರ ವಾಸನೆಗೆ
ಕಥೆ ಹೇಳಲು ಬಿಡಿ,
ಎಂಥ ಬದುಕಿಗೆ ಈ
ಭುವಿಯ ಮೇಲೆ ಬೆಲೆ
ಕೊನೆಗೆ ಎಂಥ ಪ್ರೀತಿಗೆ
ಸಿಕ್ಕುವುದು ಬೆಲೆ
*******
ನಾನಿನ್ನು ಹೊರಡುತ್ತೇನೆ, ಸುಂದರ ನಗರವೇ
ನನ್ನ ಪ್ರಬುದ್ಧ ಕಂಗಳಲ್ಲಿ ಕಂಬನಿ ಬಚ್ಚಿಟ್ಟುಕೊಂಡಿರುವಾಗಲೇ
ಹರಿವ ನದಿಯ ಮಧ್ಯೆ ನಿಂತ ಕಲ್ಲಿನಂತೆ
ದುಃಖ ನಿಶ್ಯಬ್ಧವಾಗಿರುವಾಗಲೇ
ವಿದಾಯ...ವಿದಾಯ...ವಿದಾಯ..
ಮುಚ್ಚಿದ ಕಿಟಕಿಗಳ ಹಿಂದೆ ನಿಂತ ತೆಳ್ಳನೆ ಆಕಾರಗಳಿಗೆ
ಭೇದವಿಲ್ಲದ, ಹಂಬಲ ಮಳೆಗೆ.
*******
ನಾನೊಬ್ಬಳು ಪ್ರೇಮಿಯಾಗಿದ್ದದ್ದರೆ,
ಪ್ರೇಮಿಸಲ್ಪಟ್ಟವಳಾಗಿದಿದ್ದರೆ, ನಾನು ಖಂಡಿತವಾಗಿಯೂ ಬರಹಗಾರಳೇ ಆಗುತ್ತಿರಲಿಲ್ಲ. ಬದಲಿಗೆ ನಾನು ಒಬ್ಬಳು ಸಂತಸ ಸವಿಯುವ ಮಾನವ ಜೀವಿಯಾಗುತ್ತಿದ್ದೆ.
*******
ಪ್ರತಿಯೊಂದು ಕವಿತೆಯೂ ನೋವಿನ ಬಸಿರಿನಿಂದಲೇ ಹುಟ್ಟುತ್ತದೆ. ಇಂಥ ನೋವನ್ನು ನಾನು ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಿಮ್ಮ ನೋವನ್ನು ಹಂಚಿಕೊಳ್ಳುವಂಥ ವ್ಯಕ್ತಿಯಾದರೂ ಇರಬೇಕಲ್ಲವೇ?ಆದರೆ ಇಂಥ ವ್ಯಕ್ತಿ ನಿಮಗೆಲ್ಲೂ ಕಾಣಸಿಗುವುದೇ ಇಲ್ಲ. ಇಂಥ ವ್ಯಕ್ತಿಯ ಶೋಧನೆಯಿಂದ ಕವಯತ್ರಿ ಬರೆಯುತ್ತಾಳೇ ಹೋಗುತ್ತಾಳೆ. ಕೊನೆಗೊಮ್ಮೆ ಇಂಥ ವ್ಯಕ್ತಿ ಸಿಕ್ಕಿಬಿಟ್ಟರೆ, ಅಲ್ಲಿಗೆ ಶೋಧನೆ ಮುಗಿಯುತ್ತದೆ. ಕವಿತೆಯೂ ಮುಗಿದುಹೋಗುತ್ತದೆ.
*******
ನಾನು ಯಾರನ್ನಾದರೂ ಪ್ರೇಮಿಸುವಾಗ, ಪ್ರೇಮಿಸುವುದಿದ್ದರೆ, ಅದನ್ನು ಹೃತ್ಪೂರ್ವಕವಾಗಿ ಮಾಡುತ್ತೇನೆ. ಆ ಇಳಿಹೊತ್ತಿನಲ್ಲಿ, ನಸುಕಿನ ತೆಕ್ಕೆಯಲ್ಲಿ
ನನಗೆ ಅತ್ಯಂತ ಸಂವೇದನಾಪೂರ್ಣ ಭಾವನೆಗಳ ಅಪೂರ್ಣ ಅನುಭವವಾಗುತ್ತದೆ. ಕವಿತೆ ಹೃದಯಾಂತರಾಳದಿಂದ ಹೊರಹೊಮ್ಮುತ್ತದೆ. ಉಕ್ಕಿ ಹರಿಯುತ್ತದೆ. ಒಂದೊಮ್ಮೆಗೆ ನನ್ನೊಳಗಿರುವ ನನ್ನ ಕವಿತೆ ಹೊರಬಂದುಬಿಟ್ಟಿತೆಂದರೆ, ನನ್ನ ಹೃದಯವೇ ಖಾಲಿಯಾಗುತ್ತದೆ. ವ್ಯಕ್ತಿಯೊಬ್ಬನಿಗಾಗಿ ನಾನು ಅನುಭವಿಸಿದ ಆ ಭಾವನೆಗಳೆಲ್ಲ ಆವಿಯಾಗುತ್ತವೆ. ಆಗ ಆ ವ್ಯಕ್ತಿ ಕೇವಲ ಹೆಣದಂತಾಗುತ್ತಾನೆ.
*******
ಸಂದರ್ಶನಕಾರ: ನಿಮ್ಮ ಮೊದಲ ಪ್ರೇಮಿ ಯಾರು? ಉತ್ತರ: ಶ್ರೀಕೃಷ್ಣ
ಯಾ...ಅಲ್ಲಾ...ಈಗಲಾದರೂ ನನ್ನನ್ನು ಶಿಕ್ಷಿಸು. ನಿನ್ನನ್ನು ಪ್ರೀತಿಸಿದ್ದಕ್ಕಿಂತ ಹೆಚ್ಚಾಗಿ ಅವನನ್ನೇ ನಾನು ಪ್ರೀತಿಸಿದೆ. ಸಂತಸದ ಆ ಸಂಪತ್ತನ್ನು ಹುಡುಕಲು ಆತನ ದೇಹವನ್ನಪ್ಪಿ, ಆ ದೇಹದಲ್ಲೇ ಕರಗಿ ಹೋದ ನನ್ನ ಕೈಗಳನ್ನು ಕತ್ತರಿಸಿ ಹಾಕು. ಪುರುಷನೊಬ್ಬನನ್ನು ಪೂಜಿಸಿದ ಮಹಾ ಪಾತಕಿ ನಾನು. ಶಿಕ್ಷೆ ಪಡೆಯಲು ಹಪಹಪಿಸುತ್ತಿರುವ ಒಬ್ಬ ಸೇವಕಿ..ಅದೇ ಈ ಸುರಯ್ಯಾ...!!

ಚಿತ್ರಕೃಪೆ: ಅಂತರ್ಜಾಲ

(ವಿ.ಸೂ: ಕಮಲದಾಸ್ ಬಗ್ಗೆ ಇತ್ತೀಚೆಗೆ ಕನ್ನಡಪ್ರಭದ ಸಾಪ್ತಾಹಿಕ ದಲ್ಲಿ ಟಿ.ಜೆ. ಎಸ್. ಜಾರ್ಜ್ ಹಾಗೂ ಎಸ್. ಕುಮಾರ್ ಅವರು ಬರೆದ ಲೇಖನದಲ್ಲಿ ಕಮಲದಾಸ್ ಅವರ ಕವಿತೆಗಳ ಸಾಲುಗಳನ್ನು ಬರೆದಿದ್ದರು. ಕಮಲದಾಸ್ ನನ್ನ ಇಷ್ಟದ ಬರಹಗಾರ್ತಿಗಳಲ್ಲಿ ಒಬ್ಬರಾಗಿದ್ದರಿಂದ ಅದನ್ನು ಹೆಕ್ಕಿ ಬ್ಲಾಗ್ ನಲ್ಲಿ ಹಾಕೊಂಡಿದ್ದಿನಿ. ಸಂಪರ್ಕಿಸಿ:http://www.kannadaprabha.com/pdf/epaper.asp?pdfdate=6/7/2009

ಚಿತ್ರಕೃಪೆ: ಅಂತರ್ಜಾಲ

12 comments:

ಬಾಲು said...

nanu kamala das avara bagge jasti thilidilla, but nivu blog nallu hekki haakiruva saalugalu chanda ide.

kamala das bagge vijaya karnataka dallu bandittu ansutt!! avadhi nalliyu ide.

ಕನಸು said...

ನಮಸ್ಕಾರ್,
ನಾನು ಕನಸು ಮತ್ತೆ ನಿಮ್ಮ ಬ್ಲಾಗಿಗೆ
ಬಂದಾಗ ಸಿಕ್ಕದ್ದು ಕಮಲಾದಾಸ್ ಎನ್ನುವಒ ಒರ್ವ ಮಹಿಳೇ ಬರೆದ ಕವಿತೆಯ ಜೋತೆಗಿನ ನಿಮ್ಮ ಮುದ್ದಾದ ಲೇಖನ ..!!
ತುಂಭಾ ಚೆನ್ನಗಿದೆ.

sunaath said...

ಕಮಲಾ ದಾಸರ ಕವನಗಳ ಅನುವಾದವನ್ನು ಓದುತ್ತಿದ್ದಂತೆ ಭಾವನೆಗಳು ಸ್ಫೋಟವಾಗುತ್ತವೆ. ಈ ಸಾಲುಗಳನ್ನು ಹೆಕ್ಕಿ ಕೊಟ್ಟದ್ದಕ್ಕೆ ನಿಮಗೆ ಧನ್ಯವಾದಗಳು.

Basavaraj.S.Pushpakanda said...

too impressive..Kamala das bagge nanage tumba gottilla adare avara baravanige nimmanna eshtu attract madide, mattu adarinda namage eshtu sikkide annodu tumba mukhya ...nimage noorondu thanks...

shivu.k said...

ಚಿತ್ರಾ,

ಕಮಲಾ ದಾಸ್ ಕವನವನ್ನು ಬಿಸಿಲಹನಿ ಉದಯ್ ಸರ್ ಬ್ಲಾಗಿನಲ್ಲಿ ಓದಿದಾಗಲೇ ಅವರ ನೇರ ಭಾವಸ್ಪೋಟದ ಬಗ್ಗೆ ತಿಳಿಯಿತು....ಮತ್ತೆ ನೀನು ಇಲ್ಲಿ ಕೆಲವು ಸಾಲುಗಳನ್ನು ಆರಿಸಿಕೊಟ್ಟಿದ್ದೀಯಾ....ಅವರ ನೇರವಂತಿಕೆಯ ಬರಹಗಳು ನಮ್ಮೊಳಗೆ ಭಾವನೆಗಳ ತಾಕಲಾಟಕ್ಕೆ ಶುರುಹಚ್ಚಿಬಿಡುತ್ತವೆ...
ಧನ್ಯವಾದಗಳು..

ಹರೀಶ ಮಾಂಬಾಡಿ said...

ಕಮಲಾದಾಸ್ ಅಮರ

ದಿವ್ಯಾ ಮಲ್ಯ ಕಾಮತ್ said...

ತುಂಬಾ ಚೆನ್ನಾಗಿದೆ... ಹೃದಯಸ್ಪರ್ಶಿ ಸಾಲುಗಳು !

PARAANJAPE K.N. said...

ಕಮಲಾದಾಸ್ ಅವರ ಕವನದ ಕನ್ನಡ ಅನುವಾದಿತ ಭಾಗವನ್ನು ಕನ್ನಡಪ್ರಭದಿ೦ದ ಹೆಕ್ಕಿ ಓದಿಗೆ ಒದಗಿಸಿರುವೆ. ಆಕೆಯ ಜೀವನದ ನೋವಿನ ಘಟನೆಗಳು ಇ೦ತಹ ಕವನಗಳ ರಚನೆಗೆ ಪ್ರೇರಣೆಯಾಗಿರಬಹುದು. ಆಕೆ ಒಬ್ಬ ಉತ್ತಮ ಲೇಖಕಿ.
ನೊ೦ದುಬೆ೦ದು ಬದುಕಿನ ವಿವಿಧ ಮಗ್ಗುಲುಗಳನ್ನು ಕ೦ಡ ಜೀವ. ಸಕಾಲಿಕ ಬರಹ.

ಸುಧೇಶ್ ಶೆಟ್ಟಿ said...

"ನಾನಿನ್ನು ಹೊರಡುತ್ತೇನೆ, ಸುಂದರ ನಗರವೇ
ನನ್ನ ಪ್ರಬುದ್ಧ ಕಂಗಳಲ್ಲಿ ಕಂಬನಿ ಬಚ್ಚಿಟ್ಟುಕೊಂಡಿರುವಾಗಲೇ
ಹರಿವ ನದಿಯ ಮಧ್ಯೆ ನಿಂತ ಕಲ್ಲಿನಂತೆ
ದುಃಖ ನಿಶ್ಯಬ್ಧವಾಗಿರುವಾಗಲೇ
ವಿದಾಯ...ವಿದಾಯ...ವಿದಾಯ..
ಮುಚ್ಚಿದ ಕಿಟಕಿಗಳ ಹಿಂದೆ ನಿಂತ ತೆಳ್ಳನೆ ಆಕಾರಗಳಿಗೆ
ಭೇದವಿಲ್ಲದ, ಹಂಬಲ ಮಳೆಗೆ."

ತು೦ಬಾ ಇಷ್ಟವಾಯಿತು ಈ ಸಾಲುಗಳು. ಕಮಲಾದಾಸ್ ಅವರ ಪುಸ್ತಕವನ್ನು ಓದಬೇಕೆ೦ದು ತು೦ಬಾ ಕಾತುರವಾಗುತ್ತಿದೆ. ಎಷ್ಟು ನೇರವಾಗಿ ಬರೆಯುತ್ತಾರೆ ಆಕೆ.

ಇದನ್ನು ನಿಮ್ಮ ಬ್ಲಾಗಿನಲ್ಲಿ ಪೋಸ್ಟ್ ಮಾಡಿದ್ದಕ್ಕೆ ಅನ೦ತ ಧನ್ಯವಾದಗಳು. ಮತ್ತೆ ಮತ್ತೆ ಕಾಡುವ ಬರಹ...

ಎಚ್. ಆನಂದರಾಮ ಶಾಸ್ತ್ರೀ said...

ಅಮ್ಮ ಹೆತ್ತೂರು ಪುತ್ತೂರು
ಬೆನ್ನ್‌ಹತ್ತಿದ್ದು ಬೆನ್‌ಗಳೂರು

ಬದುಕಂದ್ರೆ ಪ್ರೀತಿ ಜಾಸ್ತಿ
ಅದುವೇ ನಿಮ್ಮ ಆಸ್ತಿ

ಭಾವ ಬಚ್ಚಿಡದೆ ಬಿಚ್ಚಿಡುವ ಮನ
ಭಾವಿಸಲು ’ಚಿತ್ರಾ’ತ್ಮಕ ನಿಮ್ಮ ಜೀವನ

ನಿರ್ಮಲ ಮನಸ್ಸಿನ ಪ್ರತೀಕ
ನಿಮ್ಮೆಲ್ಲ ಬರಹಗಳ ರಸಪಾಕ

’ಜನನಿ, ಜನ್ಮಭೂಮಿ ಸ್ವರ್ಗಕ್ಕಿಂತ ಹೆಚ್ಚು’
’ಜನನಿ’ ದಿನಚರಿ ನಿಮಗೆ ಬಲು ಅಚ್ಚುಮೆಚ್ಚು
(ಕಾರಣ, ನಿಮ್ಮ ಆ ಸಾಹಿತ್ಯದ ಹುಚ್ಚು)

ಹಸಿ-ಬಿಸಿ ಭಾವಗಳ ಹರಹುಗಳು
ಕಸಿವಿಸಿ ನೀಡದ ಬರಹಗಳು
ಅಮ್ಮಾ, ದಿಟ್ಟಿಸಿದೆ ’ಶರಧಿ’
ಒಮ್ಮೆ ಸುಮ್ಮನೆ ಹೀಗೇ ಭರದಿ.

Ittigecement said...

ವಾಹ್....
ಎಷ್ಟು ಸುಂದರ ಕವನ....

ಕಮಲಾದಾಸ್ ಕವಿತೆಗಳ ತುಣುಕು ಓದಿಸಿದ್ದಕ್ಕೆ ಧನ್ಯವಾದಗಳು...

ನನಗೆ ಕಮಲಾದಾಸ್ ಬಗ್ಗೆ ಹೆಚ್ಚಿಗೆ ತಿಳಿದಿಲ್ಲವಾಗಿತ್ತು...
ಈಗ ಬ್ಲಾಗುಗಳಲ್ಲಿ ಓದಿ ಅವರ ವಿಚಾರಧಾರೆಗಳು ಇಷ್ಟವಾಗುತ್ತಿವೆ(ಕೆಲವೊಂದು)

Anonymous said...

nodiralilla. nanna salu mattashtu odugaranu odagisiddakke runi.
-alemari