Friday, May 15, 2009

ಗೆಳತಿ ಮತ್ತೆ ಸಿಕ್ಕಾಗ ....

ಆಫೀಸ್ ನಲ್ಲಿ ಬಂದು ಕುಳಿತಾಗ ಚಡಪಡಿಕೆ, ಅಳು ಉಕ್ಕಿ ಬರುತ್ತಿತ್ತು. ನನ್ನ ಸಿಸ್ಟಮ್ ಎದುರು ಕುಳಿತು ಬಿಕ್ಕಿ ಬಿಕ್ಕಿ ಅತ್ತಿದ್ದೆ...ಅಮ್ಮನ ಮಡಿಲ ಬಿಟ್ಟು ಬಂದಂಗೆ! ಕಾರಣ ಬಸ್ಸಲ್ಲಿ ಬರುವಾಗ ನನ್ನ ಪ್ರೀತಿಯ ಗೆಳತಿಯನ್ನು ಕಳೆದುಕೊಂಡಿದ್ದೆ!! ಅವಳು ಬೇರಾರೂ ಅಲ್ಲ, ನನ್ನ ಡೈರಿ..ಹೆಸರು ಜನನಿ! ಎರಡು ವರ್ಷಗಳ ಹಿಂದೆ ಹೊಸದಿಗಂತ ಪತ್ರಿಕೆಯಲ್ಲಿರುವಾಗ ನನ್ನ ಸೀನಿಯರ್ ಸರ್ ಒಬ್ರು ನಂಗೆ ತುಂಬಾ ಚೆಂದದ ಡೈರಿ ಪುಸ್ತಕ ತಂದುಕೊಟ್ಟಿದ್ದರು. ಅದಕ್ಕೆ ಜನನಿ ಎಂದು ಹೆಸರಿಟ್ಟು, ನಾನು ಓದಿರುವ, ನನಗೆ ಇಷ್ಟವಾದ ಎಲ್ಲಾ ವಿಷಯಗಳನ್ನು ಅದರಲ್ಲಿ ಬರೆದಿಡುತ್ತಿದ್ದೆ. ಬಸವಣ್ಣನ ವಚನ, ಮಂಕುತಿಮ್ಮನ ಕಗ್ಗ, ರಸ್ಕಿನ್ ಬಾಂಡ್ ಕವನ ಸಾಲುಗಳು, ಬೇಂದ್ರೆ, ಕುವೆಂಪು, ನಿಸಾರ್, ಕೆ.ಎಸ್.ಎನ್, ಗೌರೀಶ ಕಾಯ್ಕಿಣಿ ಸಾಹಿತ್ಯ ವಿಮರ್ಶೆಯ ಸಾಲುಗಳು, ಲಂಕೇಶ್...ಹೀಗೆ ಕಳೆದ ಎರಡು ವರ್ಷದಲ್ಲಿ ಓದಿದ ಎಲ್ಲಾ ವಿಷಯಗಳನ್ನು ಬರೆದಿಡುತ್ತಿದ್ದೆ.

ನನ್ನದೊಂದು ಅಭ್ಯಾಸ ಎಂದ್ರೆ ಎಲ್ಲೇ ಹೋದ್ರು ಆ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಳ್ಳುವುದು..ಕಣ್ಣಿಗೆ ಬಿದ್ದದ್ದನ್ನೆಲ್ಲಾ ಬರೆದುಕೊಳ್ಳುವುದು. ಹಾಗೇ ನಿನ್ನೆ ಶುಕ್ರವಾರ ನನ್ನ ಬ್ಯಾಗ್ ನಲ್ಲಿ ಅದು ತುಂಬದಾಗ ಕೈಯಲ್ಲಿ ಹಿಡಿದುಕೊಂಡೇ ಬಸ್ಸು ಹತ್ತಿದ್ದೆ. ಅದೇನಾಯ್ತೋ ಇಳಿಯುವಾಗ ಮರೆತೇಬಿಟ್ಟೆ. ನನ್ನ ಒಂದು ಪುಟ್ಟ ವಸ್ತು ಕೂಡ ಕಳೆದುಹೋಗದ ಹಾಗೇ ಜೋಪಾನವಾಗಿಡೋಳು ನಾನು. ಛೇ! ಕಳೆದುಹೋಯ್ತಲ್ಲಾ..ಅಂದಾಗ ನಿಜವಾಗಲೂ ನನಗೆ ದುಃಖ ತಡೆಯಲಾಗಲಿಲ್ಲ. ನನ್ನ ಕಲೀಗ್ಸ್ 'ಚಿತ್ರಾ ಸಿಕ್ರೂ ಸಿಗಬಹುದು..ಚಿಂತೆ ಮಾಡಿ ಪ್ರಯೋಜನವಿಲ್ಲ' ಅಂತ ಸಮಾಧಾನ ಹೇಳುತ್ತಿದ್ರು. ಮನೆಯಲ್ಲಿ ನಿಂಗೆ ತಲೆಯಲ್ಲಿ ಏನು ತುಂಬಿಕೊಂಡಿತ್ತು ಅಂತ ಬೈದುಬಿಟ್ರು. ಗೆಳೆಯನೊಬ್ಬ ನೀನು ಚೆಂದದ ಹುಡುಗ್ರನ್ನು ನೋಡಿ ಮರೆತುಬಿಟ್ಟಿದ್ದಿ ಅಂತ ತಮಾಷೆ ಮಾಡಿದಾಗ ಕೆಟ್ಟ ಸಿಟ್ಟಿನಿಂದ ಅವನಿಗೆ ಎದುರುತ್ತರ ಕೊಟ್ಟಿದ್ದೆ. ಆಫೀಸ್ ನಲ್ಲಿ ಕುಳಿತವಳು ಎರಡೆರಡು ಸಲ ಬಸ್ ಸ್ಟಾಂಡಿಗೆ ಹೋಗಿ ಕಾದಾಗಲೂ ಆ ಬಸ್ಸನ್ನು ಪತ್ತೆ ಹಚ್ಚಲಾಗಲಿಲ್ಲ. ಕಥೆ ಮುಗಿದೇ ಹೋಯ್ತು ಅಂದುಕೊಂಡೆ. ರಾತ್ರಿ ಇಡೀ ಅದೇ ಗೆಳತಿಯ ಚಿಂತೆ,,,,,

ಇಂದು ಬೆಳಿಗ್ಗೆ ಏಳೂವರೆಗೆ ಬಂದು ಅದೇ ಬಸ್ ಸ್ಟಾಂಡಿನಲ್ಲಿ ಕುಳಿತೆ. ಎಂಟೂವರೆ ತನಕವೂ ಬಸ್ಸು ಬರಲಿಲಲ್ಲ. ಆದ್ರೂ ಸಿಗುತ್ತೇನೋ ಅನ್ನೋ ಭರವಸೆ. ಎಂಟು ಮುಕ್ಕಾಲಿಗೆ ಬಸ್ಸು ಬಂದುಬಿಡ್ತು..ಒಟ್ಟೊಟ್ಟಿಗೆ ಮೂರು ಬಸ್ಸುಗಳು ಬಂದಾಗ ಆ ಬಸ್ಸನ್ನು ನಿಲ್ಲಿಸಲೇ ಇಲ್ಲ. ಆಟೋ ಹತ್ತಿ ಬಸ್ಸನ್ನು ಹಿಂಬಾಲಿಸಿದೆ. ಸಿಗ್ನಲ್ ನಲ್ಲಿ ಬಸ್ಸು ನಿಂತಿತ್ತು. ಅಟೋ ಬಿಟ್ಟು ಬಸ್ಸು ಹತ್ತಿದಾಗ ಚಾಲಕನ ಎದುರುಗಡೆ ನನ್ನ ಜನನಿ ನಗುತ್ತಿದ್ದಾಳೆ! ಸ್ವರ್ಗಕ್ಕೆ ಮೂರೇ ಗೇಣು...ಖುಷಿಯೋ ಖುಷಿ. ಆ ಖುಷಿಯಲ್ಲಿ ಚಾಲಕರತ್ರ ನನ್ನ ಪುಸ್ತಕ ಕೊಡ್ತೀರಾ ಅಂತ ಕೇಳೋಕು ಮರೆತುಹೋಗಿ ಸುಮ್ನೆ ನಿಂತುಕೊಂಡು ನೋಡ್ತಾನೆ ಇದ್ದೆ.

"ಏನಮ್ಮ ನೋಡ್ತಾ ಇದ್ದೀಯಾ?'

"ಅಂಕಲ್, ಆ ಪುಸ್ತಕ ಕೊಡ್ತೀರಾ?"

"ಯಾಕೆ ಅದು ನನ್ನ ಪುಸ್ತಕ ಕಣಮ್ಮಾ"

"ಇಲ್ಲ ಅಂಕಲ್, ನಿನ್ನೆ ನಾನು ಮರೆತುಬಿಟ್ಟುಹೋಗಿದ್ದೆ"

"ಇಲ್ಲಮ್ಮಾ..ಇದು ನನ್ನ ಮಗನ ನೋಟ್ ಬುಕ್. ಕೊಡಕ್ಕಾಗಲ್ಲ. ಅದ್ರಲ್ಲಿ ಒಳ್ಳೊಳ್ಳೆ ಕವನಗಳು, ಬಸವಣ್ಣನ ವಚನಗಳು, ಪ್ರೇಮಕವನಗಳು, ಮಂಕುತಿಮ್ಮನ ಕಗ್ಗದ ಸಾಲುಗಳಿವೆ. ನನ್ನ ಮಗ ಬರೆದಿಟ್ಟಿದ್ದು ಕೊಡಕ್ಕಾಗಲ್ಲ"

ನಂಗೆ ನಗು ಬಂದು, ಜೋರಾಗಿ ನಕ್ಕುಬಿಟ್ಟೆ.

"ನೋಡಮ್ಮಾ..ನಾನು ಈ ಪುಸ್ತಕ ಕೊಡಬೇಕಾದ್ರೆ ನಂಗೆ ನೀನು ಟಿಫನ್ ಕೊಡಿಸಬೇಕು. ಹಾಗಾದ್ರೆ ಮಾತ್ರ ಕೊಡ್ತೀನಿ" ಅಂದಾಗ

"ಆಯ್ತು ಅಂಕಲ್..ಹೊಟೇಲ್ ತಿಂಡಿ ಬೇಡ..ನಮ್ಮನೆಯಿಂದ ನೀರು ದೋಸೆ ಮಾಡಿ ತಂದುಕೊಡ್ತೀನಿ"

"ಮಂಗ್ಳೂರು ಹುಡುಗಿನಾ ನೀನು..ಆಯ್ತಮ್ಮ..ತಕೋ ನಿನ್ನ ಪುಸ್ತಕ. ನಾವೆಲ್ಲಾ ಓದಿ ಖುಷಿಪಟ್ವಿ. ತುಂಬಾ ಚೆನ್ನಾಗ್ ಬರೆದಿದ್ದೀಯಾ. ಗುಡ್" ಎಂದು ಬಸ್ಸಿನಲ್ಲಿದ್ದವರನ್ನೆಲ್ಲಾ ನಗೆಯ ಕಡಲಲ್ಲಿ ಮುಳುಗಿಸಿ ಆ ಪುಸ್ತಕ ನನ್ನ ಕೈಗಿತ್ತರು. ಅಷ್ಟೇ ಅಲ್ಲ, ಆ ನಿರ್ವಾಹಕ ಅಂಕಲ್ ಅದೇಂಗೆ ಬಾಯಿಪಾಠ ಮಾಡಿಕೊಂಡಿದ್ರೋ ..ಆ ಪುಸ್ತಕದಲ್ಲಿದ್ದ ಪ್ರೇಮ ಕವನದ ಕೆಲ ಸಾಲುಗಳನ್ನು ಮತ್ತೆ ಮತ್ತೆ ಹೇಳಿ ಬಸ್ಸಿನಲ್ಲಿದ್ದವರನ್ನೆಲ್ಲಾ ನಗಿಸುತ್ತಿದ್ರು. ಬೆಳಿಗ್ಗೆ ಶಿವಾಜಿನಗರದಿಂದ ಹೊರಡುವ ಶಿವಾಜಿನಗರ-ಕೋರಮಂಗಲ ಕೆಎ-01, ಎಫ್ ಎ-544 ನಂಬರ್ ಬಸ್ಸಿನ ಚಾಲಕ ಬಿಳಿ ಗಡ್ಡದ ಅಂಕಲ್ ಮತ್ತು ನಿರ್ವಾಹಕ ಅಂಕಲ್ ಕುರಿತು ಹೆಮ್ಮೆ ಅನಿಸ್ತು. ಥ್ಯಾಂಕ್ಯೂ ಅಂಕಲ್.....!! ನಿಜಕ್ಕೂ ನಾನೆಷ್ಟು ಖುಷಿಪಟ್ಟೆ ಗೊತ್ತಾ?

19 comments:

ದಿವ್ಯಾ ಮಲ್ಯ ಕಾಮತ್ said...

ಚಿತ್ರಾ..
ತುಂಬಾ ಚೆನ್ನಾಗಿದೆ ನಿಮ್ಮ ಗೆಳತಿ ವಾಪಾಸ್ ಸಿಕ್ಕಿದ ಕಥೆ :-) ನಿಜಕ್ಕೂ ಆಶ್ಚರ್ಯವಾಯಿತು; ಜೊತೆಗೆ ಖುಷಿ ಕೂಡ. ಇನ್ನೆಲ್ಲೂ ಕಳೆದುಕೊಳ್ಬೇಡಿ.... ಅಂದ ಹಾಗೆ ನೀರ್ ದೋಸೆ ನಂಗೂ ತುಂಬಾ ಇಷ್ಟ... ನಿಮ್ಮನೆಗೆ ಬರ್ತೇನೆ ತಿನ್ಲಿಕ್ಕೆ :-) ಮಾಡಿಕೊಡ್ತೀರಾ ತಾನೇ?
ಪ್ರೀತಿಯಿಂದ
ದಿವ್ಯಾ.

shivu.k said...

ಚಿತ್ರ ಪುಟ್ಟಿ.

ನನಗೂ ತುಂಬಾ ಖುಷಿಯಾಯ್ತು. ಕಳೆದುಹೋದದ್ದು ಸಿಕ್ಕಾಗ ಆಗುವ ಆನಂದವೇ..ಬೇರೆ...ಅದರಲ್ಲೂ ಡೈರಿ ಇತ್ಯಾದಿ ಮನಸ್ಸಿಗೆ ಹತ್ತಿರವಾಗಿರುವ ಮನದೊಳಗೆ ಹುದುಗಿರುವ ವಿಚಾರಗಳು ಕಳೆದುಹೋಗಬಾರದು...

ಆಹಾಂ! ನಿನ್ನ ಲೇಖನ ಓದುತ್ತಿದ್ದಂತೆ ನೆನಪಾಯಿತು. ನನ್ನದೊಂದು ಮೆಚ್ಚಿನ ಪುಸ್ತಕ "south indian butterflies" ಪ್ರಕಾಶ್ ಹೆಗಡೆಯವರ ಚಿಟ್ಟೆ ಲೇಖನಕ್ಕೆ ಕಾಮೆಂಟು ಹಾಕುವಾಗ ಹುಡುಕಿದೆ. ಸಿಗಲಿಲ್ಲ..ಮನೆಯಲ್ಲಿ ಎಲ್ಲೋ ಸೇರಿಕೊಂಡಿದೆ. ಹುಡುಕಬೇಕು. ನಿನಗೆ ಸಿಕ್ಕಂತೆ ನನಗೂ ಸಿಗುತ್ತೇ ಅನ್ನೋ ಭರವಸೆಯಿದೆ.

ಬರಹ ಎಂದಿನಂತೆ ತುಂಬಾ ಚೆನ್ನಾಗಿದೆ..

ಧನ್ಯವಾದಗಳು.

sunaath said...

ಚಿತ್ರಾ,
ಆ ಪ್ರೇಮಕವನಗಳನ್ನು ನಾವೂ ಇಲ್ಲಿ ಓದಬಹುದೆ?

PARAANJAPE K.N. said...

ನಿನ್ನ ಜೀವನಸ೦ಗಾತಿ "ಜನನಿ" ಯ ಅಗಲಿಕೆ, ನೀನು ಪಟ್ಟ ಪರಿತಾಪ, ಮತ್ತೆ "ಜನನಿ" ಸಿಕ್ಕ ಕ್ಷಣದಲ್ಲಾದ ಉತ್ಕಟ ಆನ೦ದ ನಿನ್ನ ಬರಹದಲ್ಲಿ ವ್ಯಕ್ತವಾಗಿದೆ. ಹುಷಾ ರಾಗಿರು, ಇನ್ನೊ೦ದ್ಸಲ ಕಳ್ಕೊ೦ಡ್ರೆ ಮತ್ತೆ ಸಿಗಲಾರದು. ನಾವು ತು೦ಬಾ ಹಚ್ಚಿಕೊ೦ಡ ವಸ್ತು ಯಾ ವ್ಯಕ್ತಿ ನಮ್ಮ ನಿಲುಕಿನಿ೦ದ ದೂರವಾಗಿದ್ದಲ್ಲಿ ಅಥವಾ ಕಳೆದೆ ಹೋಗಿದ್ದಲ್ಲಿ ಸಿಕ್ಕಾಗ ಆಗುವ ಖುಷಿ ಅವರ್ಣನೀಯ ಅಲ್ಲವೇ ? ಬಸ್ಸಿನ ಚಾಲಕ-ನಿರ್ವಾಹಕರಿಗೆ ನೀರುದೋಸೆ ಕೊಡಿಸುವ ಆಶ್ವಾ ಸನೆ ಕೊಟ್ಟಿದ್ದಿಯಲ್ಲ, ಅದನ್ನು ಈಡೇರಿ ಸುವೆಯಾ ಅಥವಾ ರಾಜಕಾರಣಿ ಥರ ಮರೆತು ಕೂರ್ತೀಯಾ ?

Guruprasad said...

ವೆರಿ ನೈಸ್....ಅಂತು ಮತ್ತೆ ಸಿಕ್ಕಿತಲ್ವ ನಿಮ್ಮ ಜನನಿ...... :-)
ಬೇಕಾಗಿರೋದು ಕಳೆದು ಹೋಗಿ... ಮತ್ತೆ ಸಿಕ್ಕಾಗ ಆಗುವ ಆನಂದ ಎಷ್ಟು ಚೆನ್ನಾಗಿ ಇರುತ್ತೆ ಅಲ್ವ......

Rajesh Manjunath - ರಾಜೇಶ್ ಮಂಜುನಾಥ್ said...

ಪುಣ್ಯಾ ಮಾಡಿರಬೇಕು ಬಿಡವ್ವ...

ಮಲ್ಲಿಕಾರ್ಜುನ.ಡಿ.ಜಿ. said...

ಚಿತ್ರಾ,
ನನಗೂ ಈ ರೀತಿ ಓದಿದ ಪುಸ್ತಕ ಇತ್ಯಾದಿಗಳಲ್ಲಿ ಇಷ್ಟವಾದ ಸಾಲುಗಳು, ಕವನಗಳು... ಇವನ್ನೆಲ್ಲಾ ಡೈರಿಯಲ್ಲಿ ಬರೆದಿಡುವ ಹವ್ಯಾಸವಿದೆ. ಈ ರೀತಿಯ ಹತ್ತಕ್ಕೂ ಹೆಚ್ಚು ಡೈರಿಗಳಿವೆ. ಇದು ನನ್ನ ಹುಚ್ಚು ಎಂದು ಯಾರಲ್ಲೂ ಹೇಳಿರಲಿಲ್ಲ. ತುಂಬ ಖುಷಿಯಾಯ್ತು . ಡೈರಿ ಕೊಟ್ಟವರ ಬಗ್ಗೆ ಮತ್ತು ಕಳೆದಾಗ ಆದ ಮನಸಿನ ನೋವು ಚೆನ್ನಾಗಿ ಬರೆದಿದ್ದೀರಿ.

ವಿ.ರಾ.ಹೆ. said...

abba! nangu onthara samadhana aaythu .. ufff.....

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ...

ತು೦ಬಾ ಚೆನ್ನಾಗಿದೆ ಬರಹ... ಅ೦ತೂ ಜನನಿ ಸಿಕ್ಕಳಲ್ಲ... ಅಷ್ಟು ಸಾಕು.... ಡೈರಿ ಬರೆಯಬೇಕು ಎ೦ಬ ಹೊಸ ಆಲೋಚನೆ ಬರುತ್ತಿದೆ:)

ಹರೀಶ ಮಾಂಬಾಡಿ said...

ಹೇಗೂ ಡೈರಿ ಕತೆ ಬಹಿರಂಗವಾಯ್ತಲ್ಲ? ಇನ್ನು ಒಂದೊಂದೇ ಬ್ಲಾಗ್ ನಲ್ಲಿ ಪ್ರಕಟಿಸಿಬಿಡಿ. ನಾವೆಲ್ಲಾ ಓದುತ್ತೇವೆ :)

Anveshi said...

ಜನನಿ ತಾನೆ ಮೊದಲ ಗುರುವು????

Jayaprakash said...

Akka...

nijavagiyu thumba chennagi barediddiya..Keep it up.. Best wishes to you..

Ninna Putta,
- J.P

ರಜನಿ ಹತ್ವಾರ್ said...

ಲೇಖನ ತುಂಬಾ ಚೆನ್ನಾಗಿದೆ, ಕಡೆಗೂ ಜನನಿ ನಿಮ್ಮ ಕೈ ಸೇರಿದ್ದು ತಿಳಿದು ಸಮಾಧಾನ ಆಯಿತು.
ಆ ಚಾಲಕರ ಹೆಸರನ್ನು ಹಾಕಿದಿದ್ರೆ ಇನ್ನು ಅರ್ಥಪೂರ್ಣ ಆಗ್ತಿತ್ತು ಅನ್ಸುತ್ತೆ...

Mohan Hegade said...

ನಿಮ್ಮ ಬರಹದ ಆರಂಭ ನೋಡಿ ಒಮ್ಮೆ ಆಶ್ಚರ್ಯ ಹಾಗು ಕುತಹಲದಿಂದ ಮುಂದೆ ಓದಿದಾಗ ತಿಳೀತು ಡೈರಿ ಹಗರಣ ಎಂದು. ತುಂಬಾ ಚೆನ್ನಾಗಿ ಬರೆದಿರುವಿರಿ, ಸತ್ಯ ಘಟನೆನೆ ಆದರೆ ಆಶ್ಚರ್ಯ ಪಡುವ ಅಂಶಗಳು ತುಂಬಾ ಇದೆ. ನಿಜರಿ ನಾನು ದಿನಾಲೂ ಡೈರಿ ಬರೆಯುವೆ ದಿನಚರಿಗಳನ್ನು ೫-೬ ವರ್ಷಗಳಿಂದ ಅಬ್ಯಾಸವಾಗಿದೆ ವಿಶೇಷ ವಿಷಯಗಳು ಇಲ್ಲದಿದ್ದರೂ ಬರೆಯುವ ಹವ್ಯಾಸ ಇದೆ. ಪ್ರಮುಖ ಅಂಶ ಎಂದರೆ ಮರುದಿನ ಅದೇ ಬಸ್ಸನಲ್ಲಿ ಸಿಕ್ಕಿತಲ್ಲ, ಅಲ್ಲದೆ ಚಾಲಕ ಮತ್ತು ನಿರ್ವಾಹಕ ಇಬ್ಬರು ಸಹಕರಿಸಿದ್ದಾರೆ ಅಂದರೆ ಮೆಚ್ಚ ಬೇಕಾದ್ದೇ.
ದನ್ಯರಿ.

Anonymous said...

ತು೦ಬಾ ಆಶ್ಚರ್ಯ ಆಗ್ತಿದೆ!
ತು೦ಬ ಚೆನ್ನಗಿ ಬರ್ದಿದೀರ ಕೂಡ.. ನನ್ಗೆ ನನ್ನದೇ ಎನೋ ಸಿಕ್ತೇನೋ ಅನ್ನೊಷ್ಟು ಖುಷಿ ಆಯ್ತು :)

Veena DhanuGowda said...

Hi,

swalp jasthinee adrushta irbeku kaledu kondanana matte padeyalike :)
u r lucky :)

Veena DhanuGowda said...

Hello,

Swalpa jaastine adrustamadidri anisuthe kalkondidana lifenali mathe padyoke.. U R LUCKY :)

ಚಿತ್ರಾ ಸಂತೋಷ್ said...

ನನ್ನ ಖುಷಿಗೆ ಸ್ಪಂದಿಸಿದ, ಪ್ರತಿಕ್ರಿಯಿಸಿದ ನಿಮಗೆಲ್ಲರಿಗೂ ಧನ್ಯವಾದಗಳು, ಬರ್ತಾ ಇರಿ.
-ಚಿತ್ರಾ

putta said...

ಚಿತ್ರಾ ಅವ್ರೆ
ನಿಮ್ಮ "ಜನನಿ" ಸಿಕ್ಕ ಪರಿ ತುಂಬಾ ಚೆನ್ನಾಗಿದೆ..
ತನ್ನದಲ್ಲದ ವಸ್ತುವನ್ನು ಜೋಪಾನ ವಾಗಿಟ್ಟ ಆ ಡ್ರೈವರ್ ಅಂಕಲ್ ನಿಜಕ್ಕೂ ಪ್ರಶಂಸನಿಯ.
ಅವರಿಗೆ ಕೊನೆಗೂ ನಿಮ್ಮ ಮನೆಯ ನಿರು ದೋಸೆ ಕೊಟ್ರ..??
ಕಳೆದು ಹೋದ ವಸ್ತು ಮತ್ತೆ ಸಿಕ್ಕಾಗ ಇರೋ ಆನಂದಾನೆ ಬೇರೆ..
ನಿಮ್ಮ ಲೇಖನಗಳು ಚೆನ್ನಾಗಿ ಮೂಡಿ ಬಂದಿವೆ. ಹೀಗೆ ಬರಿಯುತ್ತ ಇರಿ

ಇಂತಿ ಪುಟ್ಟಾ ..:)