Wednesday, April 29, 2009

ಇಂದಲ್ಲ ನಾಳೆ ಹೊಸ ಭಾನು ತೆರೆದೀತು...!

ಅಂದು ಅಮ್ಮ ಬೆಳ್ಳಂಬೆಳಿಗ್ಗೆ ಬೈದುಬಿಟ್ರು. ಹೆತ್ತ ಮಗಳು ಬೆಂಗಳೂರಿನಲ್ಲಿ ದುಡಿಯಾಕೆ ಶುರುಮಾಡಿ ವರ್ಷಗಳು ಸರಿದ್ರೂ ಕಿವಿಯಲ್ಲಿ ಮಿನುಗೋ ಓಲೆಗಳಿಲ್ಲ ಅಂತ ಅಮ್ಮನ ಹುಸಿಮುನಿಸು. ಹ್ಞಾಂ..ಮೊನ್ನೆ ಮೊನ್ನೆ ನನ್ನ ಆತ್ಮೀಯ ಗೆಳೆಯನೊಬ್ಬ 'ಎಂಥ ಮಾರಾಯ್ತಿ..ನಾ ಹುಟ್ಟಿ 25 ವರ್ಷ ಆಯಿತು, ಕೆಲಸಕ್ಕೆ ಸೇರಿ ಎರಡು ವರ್ಷ ಆಯಿತು. ನನಗಾಗಿ ಮಣ್ಣಂಗಟ್ಟಿಯೂ ಮಾಡಿಟ್ಟಿಲ್ಲ. ಅಮ್ಮಂಗೇನೂ ಕೊಡಿಲ್ಲ ಚಿತ್ರಾ' ಅಂತ ಗಳಗಳನೆ ಅತ್ತು ವಾರವಿಡೀ ಅದನ್ನೇ ಯೋಚಿಸಿ ತಲೆಕೆಡಿಸಿಕೊಂಡಿದ್ದ. ಭಾವಗೀತೆಗಳ ಜೊತೆ ಮಾತನಾಡುವ ಆತನಿಗೆ ಭಾವಗೀತೆಗಳೂ ಮುದ ನೀಡಲಿಲ್ಲ. ತಲೆತುಂಬಾ ಆಕಾಶ ತಲೆಮೇಲೆ ಬಿದ್ದಂಗೆ ಚಡಪಸುತ್ತಿದ್ದ. ಬರೋ ಕ್ಷಣಗಳನ್ನು ಪ್ರೀತಿಯಿಂದ ಸ್ವಾಗತಿಸದೆ, ಇರೋ ಪುಟ್ಟ ಖುಷಿಯ ಕ್ಷಣವನ್ನು ಕಳೆದುಕೊಳ್ಳೋದಕ್ಕೆ ಇದೊಂದು ಪುಟ್ಟ ಉದಾಹರಣೆ ಅಲ್ವೇ? ಇಂಥ ಸಾವಿರಾರು ತುಣುಕುಗಳು ಒಂದರ ಮೇಲೊಂದರಂತೆ ನನ್ನ ಮನದ ಪರದೆ ಮೇಲೆ ಹಾದುಹೋಗುತ್ತಲೇ ಇರುತ್ತವೆ.

ಪ್ರೀತಿಸಿದ ಹುಡುಗ/ಹುಡುಗಿ ಕೈ ಕೊಟ್ಟು ಹೋದಾಗ ಕೊರಗಿ ಕೊರಗಿ ಕಣ್ಣೀರಾಗ್ತೀವಿ. ಜೀವನದ ಜಂಜಾಟಗಳಲ್ಲಿ ಬಳಲಿ ಬೆಂಡಾಗಿ ಕತ್ತಲ ಕೂಪದಲ್ಲೇ ಮಲಗಿಬಡ್ತೀವಿ. ಹೆತ್ತು-ಹೊತ್ತು ಬೆಳೆಸಿದ ಅಪ್ಪ-ಅಮ್ಮ ನಮಗಾಗಿ ಕಷ್ಟದ ಕೋಡಿಯಲ್ಲೇ ಕೈ ತೊಳೆಯುವಾಗ ನಾ ಬದುಕಿದ್ದು ಪ್ರಯೋಜನ ವಿಲ್ಲಾಂತ ನಿರಾಶಾರಾಗ್ತೀವಿ. ಜೀವನ ಪರ್ಯಂತ ಜೊತೆಗಿರ್ತೀನಿ..ನಿನ್ನ ನೋವು-ನಲಿವಿನಲ್ಲೂ ನನ್ನ ಕಣ್ಣು ಪಾಲು ಪಡೆಯುತ್ತೆ ಎಂದ ಚಡ್ಡಿ ದೋಸ್ತ ದೂರಾದಾಗ ನಾ ನಿನ್ನ ಬಿಟ್ಟು ಹೇಗಿರಲಿ? ಎನ್ನುತ್ತಾ ಕೊರಗಿ ಕೊರಗಿ ಸುಣ್ಣವಾಗ್ತೀವಿ. ಒಂಟಿತನವನ್ನು ನೆನೆನೆನೆದು ದಿಂಬು ಒದ್ದೆಯಾಗಿಸ್ತೀವಿ.

ಪರೀಕ್ಷೆಯಲ್ಲಿ ಫೇಲ್ ಆದಾಗ..ಇದೇ ನನ್ನ ಜೀವನದ ಕೊನೆಯ ಮೆಟ್ಟಿಲು ಎಂದುಕೊಳ್ತೀವಿ. ಪುಟ್ಟ ತಪ್ಪಿಗಾಗಿ ಬಾಸ್ ಬೈದಾಗ ಆ ಕುರಿತು ರಾತ್ರಿಯಿಡೀ ತಲೆಕೆಡಿಸಿಕೊಂಡು ತಲೆ ಹಾಳು ಮಾಡಿಕೊಳ್ತೀವಿ. ತಂಗಿ-ಅಕ್ಕಂದಿರ ಮದುವೆ ಆಗಿರದಿದ್ರೆ ಛೇ! ನನ್ನ ಜವಾಬ್ದಾರೀನ ನಿರ್ವಹಿಸಿಲ್ಲ ಅಂದುಕೊಂಡು ನಮ್ಮೊಳಗೇ ದುಃಖಿಸ್ತೀವಿ. ಬೆಂಗಳೂರಿಗೆ ಕಾಲಿಟ್ಟು ವರ್ಷ ಸರಿದರೂ ನಯಾಪೈಸೆ ಸಂಪಾದಿಸಿಲಲ್ಲ, ನಮ್ಮ ಗೆಳೆಯ ಓಡಾಡೋ ಹಾಗೇ ಕಾರಲ್ಲಿ ಓಡಾಡೋ ಕನಸು ಕೈಗೂಡಿಲ್ಲ ಎನ್ನುತ್ತಾ ನಮ್ಮ ಬಗ್ಗೆನೇ ಜಿಗುಪ್ಸೆ ನಮಗೆ.

ಪುಟ್ ಪಾತ್ ನಲ್ಲಿ ಕಂಕುಳಲ್ಲಿ ಮಗುವನ್ನಿಟ್ಟುಕೊಂಡು ಚಿಲ್ಲರೆ ಹಣಕ್ಕಾಗಿ ಕೈಯೊಡ್ಡಿ ನಿಲ್ಲುವ ಕನಸುಗಳೇ ಬತ್ತಿ ಹೋದ ಕಂಗಳ ಹೆಣ್ಣನ್ನು ಕಂಡಾಗ, ಸಿಗ್ನಲ್ ಆನ್ ಆದ್ರೂ ವೇಗದಿಂದ ಚಲಿಸುವ ವಾಹನಗಳ ಮಧ್ಯೆ ಅಡ್ಡಾದಿಡ್ಡಿಯಾಗಿ ಓಡುವ ಹುಚ್ಚನನ್ನು ಕಂಡಾಗ, ಬೀದಿ ಬದಿಯಲ್ಲಿ ಅಪಘಾತ ಆದ್ರೂ ತಿರುಗಿ ನೋಡದೆ ಹೋಗೋರನ್ನು ಕಂಡಾಗ, ಅಯ್ಯೋ ಇದೇನಪ್ಪಾ ಬದುಕು..ಬೆಂಗಲೂರೇ ಬೇಡ ಅನ್ನುವಷ್ಟು ಮನಸ್ಸು ಮುದುಡಿಬಿಡುತ್ತೆ. ಹೀಗೇ ಪುಟ್ಟ ಕ್ಷಣಗಳನ್ನು ಕಳೆದುಕೊಂಡು ನಿರಾಶೆಯ ನಿಶೆಯನ್ನು ಅಪ್ಪಿಕೊಂಡು ಜೀವನವಿಡೀ ನಾ ಉದ್ದಾರವಾಗೊಲ್ಲ ಅಂದುಕೊಂಡುಬಿಡ್ತೀವಿ.

ಹೌದು, ತುಂಬಾ ದಿನಗಳಾಯ್ತು ಬ್ಲಾಗ್ ಕಡೆ ತಲೆ ಹಾಕದೆ ಅಂತೇಳಿ ಯೋಚಿಸುತ್ತಿರುವಾಗಲೇ ನನಗೆ ಈ ವಿಷ್ಯ ಸಿಕ್ಕಿಬಿಡ್ತು. ಇದ್ದ ಕ್ಷಣವನ್ನು ಅನುಭವಿಸದೆ, ಇಲ್ಲದಕ್ಕೆ ಕೊರಗೋದನ್ನು ಬಹುಶಃ ನಾನೂ ಹಾಗೇ ಮಾಡ್ತಾ ಇರ್ತೀನಿ. ಪ್ರತಿಯೊಬ್ಬರ ಬದುಕಿನಲ್ಲಿ ಒಂದಲ್ಲ ಒಂದು ಕ್ಷಣದಲ್ಲಿ ನಿರಾಶೆಯ ಭಾವ ಹತ್ತಿಬಿಡುತ್ತೆ. ಆಂಗ್ಲ ಕವಿ ಡಗ್ನಸ್ ಮಲೋಕ್ ಮಾತು ಎಲ್ಲೋ ಓದಿದ್ದು ನೆನಪಾಗುತ್ತಿದೆ: ಬೆಟ್ಟದ ಮೇಲಿನ ದೇವದಾರು ಮರವಾಗಬೇಕಿಲ್ಲ, ಬೆಟ್ಟದ ತಪ್ಪಲಿನ ಸುಂದರವಾದ ಪೊದೆಯಾದರೂ ಬೆಳೆದಿದ್ದು ಸಾರ್ಥಕ. ಪೊದೆಯಾಗದಿದ್ದರೂ ಹುಲ್ಲಿನ ಗಿಡವಾಗು, ಬೆಳೆದ ದಾರಿಯಲ್ಲಿ ಅಲಂಕರವಾಗಬಹುದು" ಎಷ್ಟೊಂದು ಅರ್ಥಪೂರ್ಣವಾದ ಮಾತಲ್ವೇ?
ನಾಳಿನ ಕುರಿತಾಗಿ ಇಂದೇ ಕೊರಗಿ ಕೊರಗಿ ಸಾವಾಗುವ ಬಹಳಷ್ಟು 'ಬದುಕನ್ನು' ಕಂಡಾಗ ಯಾಕೋ ಗೋಪಾಲಕೃಷ್ಣ ಅಡಿಗರ 'ಮಹಾಪೂರ' ಕವನ ನೆನಪಾಗುತ್ತಿದೆ.

ಅದೇ ..........
ಅಮೃತವಾಹಿನಿಯೊಂದು ಹರಿಯುತಿದೆ ಮಾನವನ
ಎದೆಯಿಂದಲೆದೆಗೆ ಸತತ..
ಇಂದಲ್ಲ ನಾಳೆ ಹೊಸ ಭಾನು ತೆರೆದೀತು...
ಕರಗೀತು ಮುಗಿಲಾ ಬಳಗಾ..
ತುಂಬೀತು ಸೊಗೆಯ ಮಳೆ
ತುಂಬೀತು ಎದೆಯ ಹೊಳೆ
ತೊಳೆದೀತು ಒಳಗು ಹೊರಗಾ...!!

16 comments:

ಶಂಕರ ಪ್ರಸಾದ said...

ಬಹಳ ನಿಜ ಚಿತ್ರಾ..
ಕಂಡೂ ಕಾಣದ ವಿಷಯಗಳು, ಕಾಣದೆ ಹಿಂಸಿಸುವ ಯೋಚನೆಗಳು,
ಕಂಡರೂ ಕಾಣದಂಗೆ ನಿರ್ಲಕ್ಷಿಸುವ ಸಂಬಂಧಗಳು, ಸೂಜಿಯ ಮೊನೆಯಂತೆ ಚುಚ್ಚುವ ನೆನಪುಗಳು,
ನಿದ್ರೆ ಕಸಿಯುವ ದುಃಖಗಳು... ಇದೆ ಜೀವನ...
ಯೋಗಿ ಚಿಂತೆ ಯೋಗಿಗೆ, ಜೋಗಿ ಚಿಂತೆ ಜೋಗಿಗೆ.
ನಿನ್ನ ಬರಹಕ್ಕೆ ಇದು ಡೈರೆಕ್ಟಾಗಿ ಲಿಂಕ್ ಕೊಡದಿರಬಹುದು..ಆದ್ರೆ ಯಾಕೋ ಲೇಖನ ಓದಿದಾಗ, ಸಡನ್ನಾಗಿ ಮನಸ್ಸಿಗೆ ಬಂದಿದ್ದು ಈ ಪದಗಳು.
ಇದುವೇ ಜೀವನ, ಇದೆ ಜೀವನ.

ಕಟ್ಟೆ ಶಂಕ್ರ
(ಇದೇನಪ್ಪ ಸೋಮಾರಿ ಶಂಕ್ರ ಸಡನ್ನಾಗಿ ಸೆನ್ಸಿಬಲ್ ಆಗಿ ಮಾತಾಡ್ತಾ ಇದಾನೆ ಅನ್ಕೊಬೇಡ. ಸಂಟೈಮ್ಸ್ ನಾನ್ ಹಂಗೇನೆ)

LAxman said...

ಹಾಯ್ ಚಿತ್ರಾ
ಬಹಳ ದಿನದ ನಂತರ ಒಂದು ಒಳ್ಳೆಯ ಬರಹ.
ತುಂಬಾ ಮನ ಮುಟ್ಟುವಂತಿತ್ತು.
ಎಲ್ಲರ ಮನಸ್ಸಿನ ಮಾತುಗಳು ಬರಹವಾಗಿದೆ.
ನಾವು ವರ್ತಮಾನ ಮತ್ತು ಭವಿಷ್ಯದ ಬಗ್ಗೆ
ಯೋಚಿಸಿ ಮುಂದುವರೆಯೋಣ.
ಭೂತ ಕಾಲದ ಚಿಂತೆ ಬೇಡ ನಮಗೆ.

ಪ್ರೀತಿಯಿಂದ
ಲಕ್ಷ್ಮಣ

Divya Mallya - ದಿವ್ಯಾ ಮಲ್ಯ said...

ಚಿತ್ರಾರವರೆ,
ತುಂಬಾ ಹ್ರದಯಂಗಮವಾಗಿ ಬರೆದಿದ್ದೀರಾ...ಎಲ್ಲರ ಜೀವನದಲ್ಲೂ ಮೂಡುವ ನಿರಾಶಾ ಭಾವ...ಒಂದು ಗೆರೆ ಸಣ್ಣದು ಅನಿಸಬೇಕಾದರೆ ಅದಕ್ಕಿಂತ ದೊಡ್ಡ ಗೆರೆಯ ಜೊತೆ ಹೋಲಿಸಬೇಕಲ್ವಾ? ಖಂಡಿತ ನಾವೆಲ್ಲರೂ ನಿರೀಕ್ಷೆಯಲ್ಲಿರೋಣ..ಭೂಮಿ ತಿರುಗುತ್ತಿದೆ..ಹೊಸ ಭಾನು ಬಂದೆ ಬರುತ್ತದೆ!

sunaath said...

ಚಿತ್ರಾ,
ನನ್ನ ಮೇಲೆ ‘ಕಟ್ಟೆ’ಯ ಪ್ರಭಾವ ಬಹಳಾ ಅಗ್ತಿರೋ ಹಾಗೆ ಕಾಣತ್ತೆ. ಯಾಕಂದ್ರೆ ಶಂಕರ ಪ್ರಸಾದರಿಗೆ ಅನ್ನಿಸಿದ ತರಹಾನೇ
ನನಗೂ ಅನಿಸ್ತಾ ಇದೆ.
ಆದರೂ ಅಡಿಗರ ಸಂದೇಶವನ್ನ ನಾನೂ ಒಪ್ಕೋತೀನಿ.

ಕೃಪಾ said...

ಹಾಯ್ ಚಿತ್ರ....

ನನಗೆ ನಾನು ಚಿಕ್ಕಂದಿನಲ್ಲಿ ಕೇಳಿದ ಗಾದೆ ನೆನಪಾಗುತ್ತಿದೆ..... ಭಾಷೆ ಒರಟಾದರೂ....... ಸತ್ಯಕ್ಕೆ ಹತ್ತಿರವಾದುದು......

ನಮ್ಮ ಅಮ್ಮನ ಹೇಳ್ತಾ ಇದ್ರೂ " ನಾಯಿ ಬೊಗಳಿದರೆ ದೇವಲೋಕ ಹಾಳಾಗೊಲ್ಲ" ಎಂದು....

ನಿನ್ನಲ್ಲಿ ಆತ್ಮವಿಶ್ವಾಸ ಮತ್ತು ಆತ್ಮ ಸಾಕ್ಷಿ ಬಲ ಆಗಿರುವವರೆಗೂ ......ಏನೋ ನಿನ್ನನ್ನು ಕುಗ್ಗಿಸದು...

ಶುಭ ಹಾರೈಕೆಗಳೊಂದಿಗೆ.......

Guru's world said...

ಚಿತ್ರ
ಬರಹ ತುಂಬಾ ಚೆನ್ನಾಗಿದೆ ,, ಒಳ್ಳೆ ಅರ್ಥ ಇದೆ. ನೀವು ಇಲ್ಲಿ ಹೇಳೋಕ್ಕೆ ಹೊರಟಿರುವುದು ಕರೆಕ್ಟ್ ,, ನಮಗೆ ಏನ್ ಇರುತ್ತೋ ಅದರೆಲ್ಲೇ ತೃಪ್ತಿ ಪಡಬೇಕು...... ಸುಮ್ಮನೆ ಸಣ್ಣ ಸಣ್ಣ ವಿಚಾರಕ್ಕೆಲ್ಲ ತಲೆ ಕೆಡಿಸಿಕೊಂಡು ಕೂತರೆ ಕಷ್ಟ ...... ಆದರೆ ನಾವೇ ಹೇಳ್ತೇವೆ ಆದ್ರೆ ಮಾಡೋದೇ ಕಷ್ಟ... ಕಾರಣ,, ಮರ್ಕಟಕ ಎನ್ನುವ ಮಾನವನ ಮನಸ್ಸು...... ಎನ್ಮಾಡೋಕೆ ಆಗುತ್ತೆ ಮನಸ್ಸು ಹೇಳಿದ ಹಾಗೆ ಕೆಲಬೇಕಲ್ವ.......?
ಒಳ್ಳೆ ಲೇಖನ..

ಗುರು

ಬಾನಾಡಿ said...

ಬರಹ "ಕ್ಷಣಹೊತ್ತು ಅಣಿಮುತ್ತಿ"ನಂತಿದೆ.
ಒಲವಿನಿಂದ
ಬಾನಾಡಿ

ಮಲ್ಲಿಕಾರ್ಜುನ.ಡಿ.ಜಿ. said...

ಚಿಕ್ಕ ಚಿಕ್ಕ ಸಂತೋಷಗಳು, ಆಪ್ತರನ್ನು ಬೆನ್ತಟ್ಟುವುದು, ದುಃಖಕ್ಕೆ ಕಿವಿಯಾಗುವುದು... ಈ ಎಲ್ಲಾ ಗುಣಗಳು ಉಪದೇಶದಲ್ಲಿ ಮಾತ್ರವಿರದೆ ಆಚರಣೆಯಲ್ಲಿರಬೇಕು. ಚಿತ್ರಾಳ ಬ್ಲಾಗಲ್ಲಿ message ಇದೆ. ಧನ್ಯವಾದಗಳು.

PARAANJAPE K.N. said...

ಚಿತ್ರಾ,
ನಾವೆಲ್ಲಾ ನಾಳೆಯ ನಿರೀಕ್ಷೆಯಲ್ಲಿ ಬದುಕುತ್ತಿರುವ ಆಶಾಜೀವಿಗಳು. ನಾಳೆ ನಮಗೆ ಖ೦ಡಿತ ಒಳ್ಳೆಯದಾಗುತ್ತದೆ ಎ೦ದು ನ೦ಬಿ ಇಂದಿನ ನೋವನ್ನು ನು೦ಗುತ್ತ ನಗುತ್ತಿರುವವರು. ನೀನ೦ದಿದ್ದು ನಿಜ, ಆದರೆ ಎಷ್ಟೋ ಜನ ಹಿ೦ದಿನ ವೈಫಲ್ಯಕ್ಕೆ ಕೊರಗಿ ಇ೦ದಿನ ಅಲ್ಪ ಸುಖವನ್ನು ಕಳಕೊಳ್ಳುತ್ತಾರೆ. ಹಾಗಾಗಬಾರದು. ಚೆನ್ನಾಗಿದೆ ಬರಹ. ಬಹಳ ದಿನಗಳ ಮೇಲೆ ಶರಧಿಯಲ್ಲೊ೦ದು ಬರಹ ಕಾಣುವ೦ತಾಗಿದೆ. ಮು೦ದುವರಿಯಲಿ ತಡೆ ಇಲ್ಲದೆ.

ಅಂತರ್ವಾಣಿ said...

ಹೊಸ ಭಾನು (ಅವಕಾಶ) ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲೇ ಇರುತ್ತೇವೆ...

ಚೆನ್ನಾಗಿದೆ ಬರಹ.

ಹರೀಶ ಮಾಂಬಾಡಿ said...

ಮನ ಮುಟ್ಟುವಂತಿತ್ತು

ಶಿವಪ್ರಕಾಶ್ said...

ನಿಮ್ಮ ಈ ಲೇಖನ ಮನ ಕಲುಕುವಂತಿದೆ..
ನಿಮ್ಮ ಈ ಲೇಖನ ಓದುವಾಗ ಡಿ ವಿ ಜಿ ಈ ಸಾಲುಗಳು ನೆನಪಾದವು......
"ಹುಲ್ಲಾಗು ಬೆಟ್ಟದಲಿ
ಮನೆಗೆ ಮಲ್ಲಿಗೆ ಆಗು
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ
ಬೆಲ್ಲ ಸಕ್ಕರೆ ಆಗು ದೀನ ದುರ್ಬಲರಿಗೆ
ಎಲ್ಲರೊಳಗೆ ಒಂದಾಗು ಮಂಕುತಿಮ್ಮ"

Prabhuraj Moogi said...

ನಿನ್ನೆಯ ನಾನು, ಇಂದಿನ ನಾನು, ಇವೆರಡರ ನಡುವಿನ ವ್ಯತ್ಯಾಸದಲ್ಲಿ ಸ್ವಲ್ಪವಾದರೂ ಪ್ರಗತಿ ಸಾಧಿಸಿದ್ದೇವೆ ಎನಿಸಿದರೆ ಅದೇ ಸಂತೊಷದಲ್ಲಿ ನಾಳೆ ಇನ್ನಷ್ಟು ಮುಂದುವರೆಯಲು ಪ್ರಯತ್ನಿಸಬೇಕು ಅಷ್ಟೇ... ನಮ್ಮನ್ನು ನಾವು ಮೀರಲು ಪ್ರಯತ್ನಿಸಬೇಕೆ ಹೊರತು, ಮತ್ತೊಬ್ಬರಿಗೆ ಹೋಲಿಸಿಕೊಂಡು ಕರಬುವುದರಲ್ಲಿ ಏನು ಪ್ರಯೋಜನ ಅಲ್ವೇ... ಲೇಖನ ಚೆನ್ನಾಗಿದೆ...

shivu said...

ಚಿತ್ರಾ,

ಸತ್ಯಕ್ಕೆ ಹತ್ತಿರವಾದ ಬರವಣಿಗೆ....

ನನ್ನಣ್ಣನ ಮಗಳು ಹತ್ತನೇ ತರಗತಿಯಲ್ಲಿ ಡಿಸ್ಟಿಂಗ್ಷನ್ ನಲ್ಲಿ ಪಾಸಾದರೂ[ಅಂಕ ೫೩೪] ಅಂಕ ಕಡಿಮೆ ಎಂದು ಆಳುತ್ತಿದ್ದಳು...ಅವಳಿಗೆ ಹೀಗೆ ಸಾಂತ್ವನ ಹೇಳಬೇಕಾಯಿತು...

ತುಂಬಾ ಚೆನ್ನಾದ ಆತ್ಮವಿಶ್ವಾಸ ತುಂಬುವಂತಹ ಬರಹ...

ಧನ್ಯವಾದಗಳು..

ಏಕಾಂತ said...

Blog Banner neeve Design madidda..
Colorfullagide...

Chevar said...

ಮೊದಲ ಕೆಲವು ಸಾಲುಗಳು ತುಂಬಾ ಇಷ್ಟವಾದವು. ಮುಂದುವರಿಯಲಿ ಈ ಪಯಣ.