Friday, February 6, 2009

ನನ್ನ ಅಮ್ಮ 'ಅಜ್ಹಿ'ಯಾದಾಗ....!!

ಏಳು ವರುಷಗಳ ಹಿಂದೆ. ನನ್ನ ಅಮ್ಮನ ಕೂದಲು ಸ್ವಲ್ಪ ಸ್ವಲ್ಪ ಹಣ್ಣಾಗುತ್ತಿದ್ದ ಸಮಯ. ಕೂದಲು ಹಣ್ಣಾದರೂ, ಉತ್ಸಾಹವನೇನೂ ಬತ್ತಿರಲಿಲ್ಲ. ನಾನು ಹತ್ತನೇ ಕ್ಲಾಸು ಪಾಸು..ಆಮೇಲೆ ಉಜಿರೆಗೆ ಪಿಯುಗೆ ಸೇರಬೇಕು ಎಂಬುದು ಅಮ್ಮನ ಹಠ. ಆಯ್ತು ಅಮ್ಮ ಹೇಳಿದ ಮೇಲೆ ಮುಗೀತು..ಅದು ಲಕ್ಷ್ಮಣ ರೇಖೆನೂ ಹೌದು, ಸುಗ್ರೀವಾಜ್ಞೆನೂ ಹೌದು. ಕಾಲೇಜಿಗೆ ಪ್ರವೇಶ ಪ್ರಕ್ರಿಯೆ ಎಲ್ಲಾ ಮುಗೀತು. ಹಾಸ್ಟೇಲ್ ಗೆ ಸೇರಿದ್ದೂ ಆಯಿತು. ಅಮ್ಮ ಕಾಲೇಜು ಆರಂಭವಾಗೋಕೆ ಮೊದಲು ಧರ್ಮಸ್ಥಳ ದೇವಸ್ಥಾನಕ್ಕೆ ಹೋಗಿ ಬರೋಣ ಅಂದ್ರು. ಆಯ್ತಮ್ಮ..ಅಂದೆ. ಹಾಗೇ ನಾನು ಮತ್ತು ಅಮ್ಮ ಕಾಲೇಜು ಶುರುವಾಗೋಕೆ ಒಂದು ದಿನ ಮೊದಲು ದೇವಸ್ಥಾನಕ್ಕೆ ಹೋದೆವು. ಹೋಗಿದ್ದು ಸಂಜೆ. ಮತ್ತೆ ಬರಕ್ಕಾಗಲ್ಲ..ಅಲ್ಲೇ ರೂಮ್ ಮಾಡಿ ಇರೋಣ ಅಂದ್ರು ಅಮ್ಮ.
ಆಯ್ತು..ಯಾವುದೋ ರೂಮ್ ಗಳಿಲ್ಲ..ಎಲ್ಲಾ ಬುಕ್ ಆಗಿತ್ತು. ಎಂಥ ಮಾಡೋದು? ..ಬರೋದು ಕಷ್ಟದ ಮಾತು. ಅಲ್ಲಿನ ವೈಶಾಲಿ ವಸತಿಗೃಹದ ಮೇನೇಜರ್ ಹತ್ರ ಕೇಳಿದ್ರೂ..ಅಂಗಲಾಚಿದ್ರೂ ರೂಮ್ ಇಲ್ಲ. ಕೊನೆಗೆ ಆ ಮೇನೇಜರ್ ಯಾರಿಗೋ ಫೋನಾಯಿಸಿ, "ಯಾವುದೋ ಒಬ್ಬ ಹುಡುಗಿ ಮತ್ತು ಅಜ್ಜಿ ಬಂದಿದ್ದಾರೆ..ಏನಾದ್ರೂ ಮಾಡಿ ರೂಮ್ ಕೊಡ್ತೀನಿ. ಪಾಪ ದೂರದಿಂದ ಬಂದಿದ್ದಾರೆ.." ಅಂದು ನಮಗೆ ರೂಮ್ ಮಾಡಿಕೊಟ್ರು.

ಅದಾಯಿತಾ..ನನ್ ತಲೆ ಗಿರ್ ರ್ ಅನಿಸ್ತು..'ಅಯ್ಯೋ ಅಮ್ಮ ಅಜ್ಜಿ ಆಗಿಬಿಟ್ರಾ?' ..ನಿಜವಾಗಲೂ ನಾನು ಫುಲ್ ಅಪ್ ಸೆಟ್ ಆಗಿದ್ದೆ. ವಯಸ್ಸಾಗೋದೇನು ಮಹಾ? ನಾನೂ ನಾಳೆ ಸೊಸೆಯಾಗ್ತೀನಿ..ಅತ್ತೆಯಾಗ್ತೀನಿ..ಅಜ್ಜಿಯಾಗ್ತೀನಿ...ಅದ್ರೆಲ್ಲೇನಿದೆ..?! ಮನುಷ್ಯನಿಗೆ ವಯಸ್ಸಾಗದೇ ಮರಗಳಿಗೆ ವಯಸ್ಸಾಗೋದಾ..?! ಹೀಗಂತ ಈವಾಗ ಅಂದುಕೊಳ್ಳೋ ನಾನು ಆವಾಗ ಅಂದುಕೊಂಡಿರಲಿಲ್ಲ. ಯಾಕೆ ಹಾಗಾಯ್ತು ಆವಾಗ..ನಾನು ಯಾಕೆ ಅಷ್ಟೊಂದು ಯೋಚನೆಗಿಳಿದುಬಿಟ್ಟೆ..ಒಂದೂ ಗೊತ್ತಿಲ್ಲ... .

ಅಮ್ಮ..! ಅಂತ ಮನಸ್ಸು ಒಂದೇ ಸಮನೆ ಚೀರುತ್ತಿತ್ತು.

ದೇವಸ್ಥಾನಕ್ಕೆ ಬಂದಿದ್ದೀನಿ ಅನ್ನೋದನ್ನೂ ಮರೆತು. ಇದ್ದಕಿದ್ದಂತೆ ಅಳಕೆ ಶುರುಮಾಡಿದ್ದನ್ನು ನೋಡಿದ ಅಮ್ಮನೂ ಗಲಿಬಿಲಿ. ಅಮ್ಮನತ್ರ ಅದನ್ನು ಹೇಳಕ್ಕಾಗುತ್ತಾ?...ಎಂದಿಗೂ ಅಮ್ಮ ನನ್ ಕಣ್ಣಲ್ಲಿ ನೀರು ಕಂಡವರಲ್ಲ..ನಾ ಅತ್ರೆ ಅವ್ರೂ ನೀರಾಗಿಬಿಡ್ತಾರೆ..ಅದಕ್ಕೆ ಅಮ್ಮನೆದುರು ಇಂದಿಗೂ ನಾ ಅಳಲ್ಲ. ಅಮ್ಮ ಏನಾಯ್ತು ಅಂದಾಗ, "ಇಲ್ಲಮ್ಮ, ನಾಳೆಯಿಂದ ಕಾಲೇಜಿಗೆ ಬರಬೇಕಲ್ಲ..ನಿಮ್ ಬಿಟ್ಟು ಬರಬೇಕಲ್ಲಾ..ಅಂತ ಬೇಜಾರಾಗುತ್ತೆ" ಅಂದೆ.ಅಮ್ಮ ನಂಬಿದ್ದರು. ಅದಕ್ಕೆ, "ಎರಡು ದಿನಕ್ಕೊಮ್ಮೆ ಹಾಸ್ಟೇಲಿಗೆ ಬಂದು ನೋಡ್ಕೊಂಡು ಹೋಗ್ತೀನಿ ಅಂದ್ರು"...ಹಾಗೇ ಮಾಡಿದ್ರು ಕೂಡ.

ತಲೆಯೊಳಗೆ ಏನೇನೋ ಯೋಚನೆಗಳು..

ಅಮ್ಮ ಇಷ್ಟು ಬೇಗ ಅಜ್ಜಿಯಾದ್ರೆ...ನಾನಿನ್ನೂ ಎಸ್ ಎಸ್ ಎಲ್ ಸಿ ಮುಗಿಸಿದ್ದೀನಿ. ಹತ್ತನೆ ತರಗತಿ ತನಕ ಸ್ನಾನದಿಂದ ಹಿಡಿದು ತಲೆ ಬಾಚೋದು, ಹೂವು ಮುಡಿಸೋದು, ಹಣೆಗೆ ತಿಲಕವಿಡೋದು ಎಲ್ಲವನ್ನೂ ಅಮ್ಮನೇ ಮಾಡುತ್ತಿದ್ದರು. ನಂಗೆ ಹುಚ್ಚುಚ್ಚು ಹೆದರಿಕೆ, ಆತಂಕ. ಅಮ್ಮ ಅಜ್ಜಿಯಾದ್ರೆ..ನಮ್ಮ ನೋಡಿಕೊಳ್ಳೋರು ಯಾರು? ಅಮ್ಮನಿಗೆ ಹುಷಾರಿಲ್ಲದೆ ಆದ್ರೆ ನಾನು ಕಾಲೇಜು ಬಿಟ್ಟು ಮನೆಗೆ ಹೋಗಿ ಅಮ್ಮನ ನೋಡಿಕೊಳ್ಳಬೇಕಲ್ಲಾ. ..ಮತ್ತೆ ಕಾಲೇಜಿಗೆ ನನ್ನ ನೋಡಲು ಬರೋದು ಯಾರು? ನಮ್ಮನೆ, ಜಮೀನನ್ನು ನೋಡೋರು ಯಾರು..ಮಾರ್ಕ್ಸ್ ಕಾರ್ಡ್ಗೆ ಸಹಿ ಹಾಕೋದು ಯಾರು..? ನಂಗೆ ಉಜಿರೆ ಹೊಸದು..ಏನ್ ಮಾಡೋದು..ಒಂದು ವರುಷದಲ್ಲಿ ಅಮ್ಮ ಪೂರ್ತಿ ಅಜ್ಜಿಯಾಗಿ ಬಿಡ್ತಾರೆ. ಹಾಸ್ಟೇಲಿನಿಂದ ಊರಿಗೆ ಹೋದ್ರೆ..ರೊಟ್ಟಿ, ಬಗೆಬಗೆಯ ಸಾರು ಮಾಡಿಕೊಡೋರು ಯಾರು? ತಮ್ಮನಿಗೆ ಅಡುಗೆ ಮಾಡಿ ಕೊಡೋದು...ಜಮೀನಿಂದ ಹಿಡಿದು ಎಲ್ಲಾ ಕೋರ್ಟ್ -ಕಟ್ಟಳೆ ಅಂತ ಅಲೆದಾಡೋ ಅಮ್ಮನೇ ಅಜ್ಜಿಯಾದ್ರೆ..ನಮಗೆ ಕಾನೂನು ಬಗ್ಗೆ ಹೇಳಿಕೊಡೋರು ಯಾರು...ಹೀಗೇ ತಲೆಯೆಲ್ಲಾ ಹಾಳುಮಾಡಿಕೊಂಡಿದ್ದೆ. ನಿಜವಾಗಲೂ ನನ್ನಮ್ಮನಿಗೆ 'ವಯಸ್ಸಾಯ್ತು' ಅನ್ನೋದು ಗೊತ್ತಾಗಿದ್ದೇ ಆವಾಗ. ಈಗಲೂ 'ಅಮ್ಮ ಅಜ್ಜಿಯಾಗಿದ್ದನ್ನು' ನೆನೆಸಿಕೊಂಡಾಗ ತುಂಬಾ ಡಿಸ್ಟರ್ಬ್ ಆಗ್ತೀನಿ. ಈಗಲೂ ಅದೇಕೆ ಹಾಗೆ ಆಯ್ತು..ಅನ್ನೋದು ನಂಗೆ ಗೊತ್ತಾಗ್ತಿಲ್ಲ. ಅಮ್ಮ ಅಜ್ಜಿಯಾಗುವುದನ್ನು ನನ್ ಮನಸ್ಸು ಇಂದಿಗೂ ಒಪ್ತಾ ಇಲ್ಲ...

27 comments:

Anonymous said...

ಹೆಣ್ಣುಮಕ್ಕಳು ತಾಯಿಯೊಂದಿಗೆ ವಿಶೇಷವಾದ, ಗೂಢವಾದ ಬಂಧವನ್ನು ಹೊಂದಿರುತ್ತಾರೆ ಅಂತ ನನಗೆ ಅನ್ನಿಸಿದೆ. ಅಮ್ಮ, ತಂಗಿಯನ್ನು ನೋಡುವಾಗ ಅದು ಸರಿ ಅನ್ನಿಸಿದೆ. ಆದರೆ ನಮಗೆ ಗಂಡಸರಿಗೆ ಅದು ಸರಿಯಾಗಿ ಅರ್ಥವಾಗದ ಲೋಕವೇನೋ. ಇಲ್ಲಿನ ನಿಮ್ಮ ಅಳು ನಮಗೆ ಅರ್ಥವಾಗುವುದು ತುಸು ಕಷ್ಟ..

Anonymous said...

ನಿಮ್ಮ ಬರವಣಿಗೆ ಸುಂದರವಾಗುತ್ತಾ ಸಾಗುತ್ತಿದೆ..

ಚಿಕ್ಕ ಚಿಕ್ಕ ಘಟನೆಗಳನ್ನೆಲ್ಲ ಚಂದ ಹೇಳುತ್ತೀರಿ...

ವಿ.ರಾ.ಹೆ. said...

ಓಹ್! ಹೆಡ್ಡಿಂಗ್ ನೋಡಿ ನಾನು ಬೇರೆ ಏನೋ ತಿಳ್ಕೊಂಡು congrats ಹೇಳೋಣ ಅಂತ ಬಂದೆ. :) I am sorry :)

ಚಿತ್ರಾ ಸಂತೋಷ್ said...

@ರಾಘವೇಂದ್ರ ಸರ್..ಹೌದು, ಕೆಲವರಿಗೆ ಅರ್ಥವಾಗೋದೇ ಇಲ್ಲ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

@ವಿಕಾಸ್...ಮಾರಾಯ..ನಂಗೆ ನಿಜವಾಗಲೂ ಹೆಡ್ಡಿಂಗ್ ಹಾಕುವಾಗ ಗೊತ್ತೇ ಆಗಲಿಲ್ಲ..ನಿಮ್ ಪ್ರತಿಕ್ರಿಯೆ ನೋಡಿಯೂ ನಂಗೆ ಗೊತ್ತಾಗಲಿಲ್ಲ..ಕೊನೆಗೆ ನನ್ನ ಸಹದ್ಯೋಗಿಯೊಬ್ಬರು ಬಿಡಿಸಿ ಬಿಡಿಸಿ ಹೇಳಬೇಕಾಯಿತು ಬಿಡಿ...ಪ್ರತಿಕ್ರಿಯೆಗೆ ಧನ್ಯವಾದಗಳು. ಹೆಡ್ಡಿಂಗ್ ನೋಡಿ ಫಜೀತಿಯಾದ ನಿಮ್ಮಂತ ಕೆಲ ಗಿರಾಕಿಗಳು ಫೋನ್ ಮಾಡಿದ್ರು...(:)

-ಚಿತ್ರಾ

ಚಿತ್ರಾ said...

ಅಯ್ಯೋ ಚಿತ್ರಾ,

ನಾನೂ ಕೂಡ ಖುಷಿಯಾಗಿ ’ ಅಭಿನಂದನೆಗಳು ’ ಅಂತ ಹೇಳೋಕೆ ಬಂದೆ , ನೋಡಿದ್ರೆ ...... ಹಿ ಹಿ ಹಿ .
ಪರವಾಗಿಲ್ಲ ಬಿಡಿ.

ನಮ್ಮ ತೀರಾ ಹತ್ತಿರದವರು ಅಜ್ಜ/ಅಜ್ಜಿಯಾಗ್ತಿದಾರೆ ಅಂತ ಯೋಚಿಸಿದಾಗ ಏನೋ ಸಂಕಟವಾಗಿಬಿಡತ್ತಲ್ಲ? ನನ್ನ ಮಗಳು ೫-೬ ವರ್ಷದವಳಿದ್ದ್ದಾಗ, ಅವಳ ಅಜ್ಜ ’ ನಾನು ಮುದುಕನಾದೆ ಬಿಡು ಪುಟ್ಟಿ " ಅಂತ ಅಂದಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತಿದ್ದು ನಂಗೆ ಇನ್ನೂ ನೆನಪಿದೆ. ಮುದುಕರಾದವರೆಲ್ಲ ಬೇಗ ಸತ್ತುಹೋಗ್ತಾರೆ ಹಾಗಾಗಿ ತನ್ನ ಪ್ರೀತಿಯ ಅಜ್ಜ ಮುದುಕರಾಗಬಾರದು ಅನ್ನೋದು ಅವಳ ಸಂಕಟವಾಗಿತ್ತು.
ಅಕ್ಷರಗಳಲ್ಲಿ ನಿಮ್ಮ ನೋವನ್ನು ಮನತಟ್ಟುವಂತೆ ಹಿಡಿದಿಟ್ಟಿದ್ದೀರಾ. .

ಚಿತ್ರಾ ಸಂತೋಷ್ said...

ಚಿತ್ರಾ ಮೇಡಂ..ಎಲ್ಲರದು 'ಅಭಿನಂದನೆ' ಗೋಳಾಯ್ತಲ್ಲ ಮೇಡಂ..ನನ್ನ ಆಫೀಸಿನವ್ರು 'ಮಾರ್ಕೆಟಿಂಗ್ ಕಾರ್ಯತಂತ್ರ' ಅಂತ ತಮಾಷೆ ಮಾಡ್ತಾ ಇದ್ದಾರೆ..ಜನ ಕುತೂಹಲದಿಂದ ಓದಲಿ ಅಂತ ಈ ಥರ ಹೆಡ್ಡಿಂಗ್ ಕೊಟ್ಟಿದ್ದೀನಿ ಅಂತೆ.ಅಮ್ಮನಾಣೆ ಹೇಳ್ತೀನಿ..ನಂಗೆ ಹೆಡ್ಡಿಂಗ್ ಹಾಕುವಾಗ ಅದರಲ್ಲಿರುವ ಇನ್ನೊಂದು ಅರ್ಥ ತಲೆಗೇ ಹೋಗಿಲ್ಲ..ಹಾಗಾಗಿ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲ್ಲ..ನೀವು ಪ್ರೀತಿಯಿಂದ ಅಭಿನಂದನೆ ಹೇಳ್ತಾ ಇದ್ದೀರಲ್ಲಾ..ಹಾಗಾಗಿ ಜೋಪಾನವಾಗಿ ಇಟ್ಟುಕೊಳ್ತೀನಿ..ನಂಗೆ ಅಮ್ಮ ಅಜ್ಜಿಯಾಗಿದ್ದು ಈಗಲೂ ಮನಸ್ಸಿಗೆ ತುಂಬಾ ನೋವಾಗುತ್ತೆ..ಡಿಸ್ಟರ್ಬ್ ಆಗುತ್ತೆ..

-ಚಿತ್ರಾ

Santhosh Rao said...

ಬರಹದಲ್ಲಿ ಸೂಕ್ಷ್ಮತೆ ಇದೆ ..
ತುಂಬ ಚೆನ್ನಾಗಿ ಬರೆದಿದ್ದೀರ .

Prakash Shetty said...

ಎನಿವೇ..
ಕಂಗ್ರಾಟ್ಸ್ ಚಿತ್ರಾಂಟಿ.....

ನನ್ನಂಥ ಓದುಗರು ಹೆಡ್ಡಿಂಗಿನಿಂದಲೇ ಆಕರ್ಶಿತರಾಗುವುದು...

ಅಂಥಾದ್ರಲ್ಲಿ.. ಹೆಡ್ಡಿಂಗೇ ಮಾರ್ಕೆಟಿಂಗ್ ತಂತ್ರವಾದರೆ..

ನನ್ನಂಥ ಹುಡುಗ್ರು ತಾನಾಗಿಯೇ ಬಿದ್ದು ಬಿಡ್ತಾರೆ... ;)

ಚಿತ್ರಾ ಸಂತೋಷ್ said...

@ಸಂತೋಷ್ ವಂದನೆಗಳು.

@ಪ್ರಕಾಶಣ್ಣ..ಭಾಳ ತಮಾಷೆ ಮಾಡ್ತೀಯಾ? ನೋಡ್ಕೋತಿನಿ ನಿನ್ನ. ತಾನಾಗಿಯೇ ಜಾರಿ ಬೀಳಬೇಡ..ಜೋಪಾನ..ಬಿದ್ರೆ ಕಷ್ಟ.

-ಚಿತ್ರಾ

sunaath said...

ಚಿತ್ರಾ, this is life.
ತುಂಬಾ sentimental ಆಗೋದು ಬೇಡ.
ನಾನೊಮ್ಮೆ ನನ್ನ ಚಿಕ್ಕ ಮಗಳ ಜೊತೆಗೆ ರಸ್ತೆಯಲ್ಲಿ ಹೊರಟಾಗ, ನನ್ನ ಕಚೇರಿಯ ವ್ಯಕ್ತಿಯೊಬ್ಬರು, "ನಿಮ್ಮ ಮೊಮ್ಮಗಳಾ?" ಅಂತ
ಕೇಳಿದ್ದರು!

ಶ್ರೀನಿಧಿ.ಡಿ.ಎಸ್ said...

:)hehe,

ಮಲ್ಲಿಕಾರ್ಜುನ.ಡಿ.ಜಿ. said...

ನಾನು ಚಿಕ್ಕಮಗಳೂರಿನಲ್ಲಿ ಕಾಲೇಜ್ ಓದುವಾಗಲೇ ನನ್ನ ತಲೆ ಕೂದಲು ಬೆಳ್ಳಗಾಗಿತ್ತು. ನನ್ನ ಕೆಲ ಸ್ನೇಹಿತರು ಮುದುಕ ಎಂದು ತಮಾಷೆ ಮಾಡುತ್ತಿದ್ದರು. ನನಗದರ ಬಗ್ಗೆ ತಲೆಬಿಸಿಯಿಲ್ಲ!!
ಕೂದಲಿಲ್ಲದವರಿಗಿಂತ ಎಷ್ಟೋ ವಾಸಿ ಅಲ್ವಾ!! ನೀವು ನಿಮ್ಮ ತಾಯಿಗೆ ಬಣ್ಣಹಚ್ಚಿ ಎಂಗ್ ಮಾಡುವ ಆಲೋಚನೆ ಬರಲಿಲ್ವಾ. ನನ್ನ ತಂದೆನ ಒಮ್ಮೆ ನೋಡಬೇಕು ನೀವು ನನಗಿಂತ ಚೆಂದವಾಗಿರ್ತಾರೆ. ಅದು ಜೀವನಪ್ರೀತಿ.

PARAANJAPE K.N. said...

ಚಿತ್ರಾ,
ತಲೆಬರಹ ನೋಡಿ ನನಗೂ ಅದರ ದ್ವ೦ದಾರ್ಥ ಹೊಳಿಲೇ ಇಲ್ಲ ನೋಡಿ. ಈಗ ಬೇರೆಯವರ ಪ್ರತಿಕ್ರಿಯೆ ನೋಡಿದ ನ೦ತರ ಫ್ಲಾಶ್ ಆಯಿತು.ಚೆನ್ನಾಗಿ ಬರೆದಿದ್ದೀರಾ. ನೀವು ತು೦ಬಾ sentimental ಅನ್ಸುತ್ತೆ.

ಚಿತ್ರಾ ಸಂತೋಷ್ said...

@ಸುನಾಥ್..ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್..ತುಂಬಾ ಸೆಂಟಿಮೆಂಟಲ್ ಅಂತನೋ ಗೊತ್ತಿಲ್ಲ. ಅದೇಕೋ ಆ ವಿಷ್ಯ ತುಂಬಾ ಡಿಸ್ಟರ್ಬ್ ಮಾಡುತ್ತೆ.

@ಶ್ರೀನಿಧಿ..ನಿಮ್ ನಗುವಿಗೆ ನನ್ನದೂ ಸಾಥ್..(:)

@ಮಲ್ಲಿಯಣ್ಣ..ಅಯ್ಯೋ ಬಣ್ಣ-ಗಿಣ್ಣ ಹಚ್ಚಲ್ಲ ಕಣ್ರೀ..ಅದ್ಯಾಕೋ ಅಮ್ಮನಿಗೆ ಬಣ್ಣ ಹಚ್ಚೋದು..ಅಮ್ಮ ನ್ಯಾಚುರಲ್ ಆಗೇ ಇರಲಿ. ಅದೇ ಖುಷಿ..ಇನ್ನು ಪೂರ್ತಿ ಕೂದಲು ಬಿಳಿಯಾದರೆ ಬೆಳ್ಳಿಯಂತೆ ಮಿನುಗುತ್ತೆ.

@ಪರಾಂಜಪೆ ಸರ್..ತೀರ ಸೆಂಟಿಮೆಂಟಲ್ ಅಲ್ಲ, ಕೆಲವೊಂದು ವಿಚಾರಗಳೇ ಭಾವುಕರನ್ನಾಗಿ ಮಾಡಿಬಿಡುತ್ತವೆ...

-ಚಿತ್ರಾ

shivu.k said...

ಪುಟ್ಟಿ,

ನಾನು ಕೂಡ ೮ನೇ ತರಗತಿಯಲ್ಲಿ ಓದುತ್ತಿದ್ದಾಗ ನಾನು ಹುಟ್ಟಿ ಬೆಳೆದಿದ್ದ ಮನೆಯನ್ನು ಖಾಲಿ ಮಾಡಬೇಕು ಅಂತ ತಿಳಿದಾಗ...ಜಿಗುಪ್ಸೆ ಹೊಂದಿದವನಂತೆ ಒಂದು ವಾರ ಮಂಕಾಗಿಬಿಟ್ಟಿದ್ದೆ[ನಿನ್ನಂತೆ ಮನೆಯ ಬಗ್ಗೆ ಚಿಂತಿಸಿದ್ದೆ]....ನನ್ನಪ್ಪ ಅಮೇಲೆ ಖಾಲಿಮಾಡೋಲ್ಲ ಮಗನೇ ನಾವು ಇದೇ ಮನೆಯಲ್ಲಿ ಇರುತ್ತೀವಿ ಅಂದಾಗ ಗೆಲುವಾಗಿದ್ದೆ...ಈಗ ನಾವಿರುವ ಮನೆಯನ್ನು ಮುಂದಿನವಾರ ಖಾಲಿ ಮಾಡಿ ಬೇರೆ ಮನೆಗೆ ಹೋಗುತ್ತೇವೆ...ಈಗೇನು ಅನ್ನಿಸೊಲ್ಲ...

ನನ್ನ ತಾಯಿ ಮೊದಲಿಂದಲೂ ತುಂಬಾ ಚಟುವಟಿಕೆಯಿಂದಿರುತ್ತಾರೆ. ನನ್ನ ತಂದೆ ಇಲ್ಲವಾದ್ದರಿಂದ ಅವರ ತಲೆ ಬೆಳ್ಳಗಾಯಿತೇನೋ...ಅವರಿಗೆ ವಯಸ್ಸಾಗುತ್ತಿದೆಯೇನೋ ಅನ್ನುವ ಭ್ರಮೆಗೊಳಗಾಗುತ್ತೇನೆ... ಅಮ್ಮನಿಗೆ ವಯಸ್ಸಾಗಿ ಬಿಳಿಕೂದಲು ಬರುತ್ತಿದೆ ಅನಿಸಿದರೆ ನಾನು ಭಾವುಕನಾಗಿಬಿಡುತ್ತೇನೆ..ಏಕೋ ಗೊತ್ತಿಲ್ಲ....
ಕೆಲವೊಮ್ಮೆ ನಿನ್ನ ಬರವಣಿಗೆ ಮತ್ತು ವಿಚಾರಗಳು ತುಂಬಾ ಕಾಡುತ್ತವೆ....

KRISHNA said...

ಚಿತ್ರಾ ಮೇಡಂ,

ನಿಮ್ಮ ಬರಹ ಓದಿದ ತುಂಬ ಮಂದಿ ತಮ್ಮ ತಲೆಗೂದಲು ಬಿಳಿ ಆದ ಬಗ್ಗೆ ತಲೆಕೆಡಿಸಿಕೊಂಡ ಹಾಗಿದೆ. ಮತ್ತೆ ಬರಹಕ್ಕಿಂತ್ಲೂ ತಲೆಬರಹನೇ ತುಂಬ ಮಂದಿಯ ತಲೆ ತಿಂದ ಹಾಗಿದೆ ಅಲ್ವ? ಅದು ಆಕಸ್ಮಿಕ ಅಂದ್ಕೋತೇನೆ.

ಒಳ್ಳೆ ಬರಹ

ಅಂತರ್ವಾಣಿ said...

ಚಿತ್ರಾ,
ಎಲ್ಲರಿಗೂ ವಯಸ್ಸಾಗುತ್ತೆ. ಅದಕ್ಕೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ.

Ittigecement said...

ಚಿತ್ರಾ...

ನನಗೂ ಅಮ್ಮನಿಗೆ ವಯಸ್ಸಾಗಿದೆ ಅನ್ನುವದನ್ನು ಮನಸ್ಸು ಒಪ್ಪುವದೇ ಇಲ್ಲ..

ಅವಳ ನಗುವಿಗೆ..

ಮಮತೆಗೆ ಎಲ್ಲಿಯ ವಯಸ್ಸು..?

ನಿಮ್ಮ ಲೇಖನ ಓದಿ ನನಗೂ ಹೆದರಿಕೆ ತರಿಸಿ ಬಿಟ್ಟಿದ್ದಿರಲ್ಲ..!

ಅಮ್ಮನಿಗೂ ವಯಸ್ಸಾಯಿತಲ್ಲ...

ಹುಚ್ಚು ಹುಡುಗಿ...

ನೀನು ಅಳೋದಲ್ಲದೆ ..

ನನಗೂ ಅಳಿಸಿಬಿಟ್ಟಿಯಲ್ಲ...

Keshav.Kulkarni said...

ಚಿತ್ರಾ,
ಬದುಕಿನ ತಲ್ಲಣಗಳೇ ಹಾಗೆ, ಇದ್ದಕ್ಕಿದ್ದಂತೆ ಎಲ್ಲಿಂದಲೋ ಯಾವುದೋ ಸಮಯದಲ್ಲಿ ಯಾವುದೋ ರೂಪದಲ್ಲಿ ನಮ್ಮನ್ನು ಅಲ್ಲಾಡಿಸುತ್ತವೆ. ಕಾಲಾಯ ತಸ್ಮೈ ನಮಃ, ಕಾಲ ಕಳೆದಂತೆ ವಾಸ್ತವ ಅರಿವಿಗೆ ಬರುತ್ತದೆ. ವಯಸಾಗೋದು, ರೋಗಿಯಾಗೋದು, ಸಾಯೋದು...ಬುದ್ಧನಾಗದೇ ಇದರಿಂದ ಯಾರಿಗೂ ಮುಕ್ತಿಯಿಲ್ಲ, ಹಾಗೆ ನೋಡಿದರೆ ಬುದ್ಧತನ ಬರದಿದ್ದರೇನೆ ಬದುಕು ಸಹ್ಯವೇನೋ ಅಂತ ಅನಿಸುತ್ತೆ. ನಿಮ್ಮ ದಿಗಿಲು ಸಾರ್ವತ್ರಿಕ

ಚಿತ್ರಾ ಸಂತೋಷ್ said...

@ಕೃಷ್ಣ ಸರ್..ನಮಸ್ಕಾರ. ನಾನು ಈ ತಲೆಬರಹ ಇಷ್ಟೊಂದು ತಲೆಕಡಿಸುತ್ತೆ ಅಂದುಕೊಂಡಿರಲಿಲ್ಲ..ಒಳ್ಳೆಯದೇ ಆಯ್ತು..ಓದದವರನ್ನೂ ಓದಿಸಿಬಿಟ್ಟಿದೆ.

@ಶಿವಣ್ಣ ..ಹುಂ..ನಿಮ್ ಥರ ನಾನೂ ಹಾಗೇ ಆಗಿಬಿಡ್ತೀನಿ. ಪ್ರಕಾಶ್ ಸರ್ ಹೇಳಿದಂತೆ "ಅವಳ ನಗುವಿಗೆ, ಮಮತೆಗೆ ಎಲ್ಲಿಯ ವಯಸ್ಸು?" ಅಲ್ಲವೇ..ಅಮ್ಮನ ಪ್ರೀತಿಯ ಎದೆಯಾಳದಲ್ಲಿ ಹುದುಗಿಬಿಟ್ಟರೆ ವಯಸ್ಸಿನ ಪ್ರಶ್ನೆ ಕಾಡಲ್ಲ ಬಿಡಿ. ಆದರೂ ಭಾವುಕಜೀವಗಳಿಗೆ ಕಾಡೋದು ಸಹಜ.

@ಜಯಶಂಕರ್..ಥ್ಯಾಂಕ್ಯೂಊಊಊ

@ಪ್ರಕಾಶ್ ಸರ್..ಮನಸ್ಸನ್ನು ಕಾಡೋ ಬರಹಗಳು ಯಾವಾಗಲೂ ನಮ್ಮೊಳಗೇ ನೆಲೆಗೊಳ್ಲುತ್ತವಲ್ಲ ..ಅದಕ್ಕೆ ಇಂಥ ಬರಹಗಳನ್ನು ಬರೀತೀನಿ. ಹಿರಿಯರಾಗಿ ನಿಮ್ಮ ಪ್ರೀತಿ ಮಾತುಗಳೇ ನನಗೆ ಇನ್ನೂ ಹೆಚ್ಚು ಬರೆಯುವಂತೆ ಪ್ರೇರಪಿಸಲಿವೆ.

-ಪ್ರೀತಿಯಿಂದ,
ಚಿತ್ರಾ

PARAANJAPE K.N. said...

Chitra,
Congratulations. Your blog has crossed 10000 clicks. Just now
I observed it.

ಚಿತ್ರಾ ಸಂತೋಷ್ said...

@ಕೇಶವ ಕುಲಕರ್ನಿ ಸರ್ ..ನಿಮ್ಮ ಧೈರ್ಯದ ಮಾತುಗಳಿಗೆ ಧನ್ಯವಾದಗಳು ಸರ್...

@ಪರಾಂಜಪೆ ಸರ್..ಥ್ಯಾಂಕ್ಸ್ಉಉಉಉ

-ಚಿತ್ರಾ

ಹರೀಶ ಮಾಂಬಾಡಿ said...

ಚಿತ್ರಾ,
ಅದೆಷ್ಟೋ ಮಂದಿ ಇನ್ನೊಬ್ಬರ ವಯಸ್ಸಿನ ಬಗ್ಗೆ ತಲೆಕೆಡಿಸುತ್ತಾರೆ ಅಲ್ವಾ? ಇನ್ನೊಬ್ಬರು ನೋಡಲು ಚೆನ್ನಾಗಿದ್ದಾರ? ಆ ಹುಡ್ಗಿ-ಹುಡ್ಗ ಒಳ್ಳೇ ಪೇರಾ? ಅವನಿಗೆ/ಳಿಗೆ ವಯಸ್ಸೆಸ್ಟು? ಇಂಥ ಯೋಚನೆಗಳೇ.. ನಿಮ್ಮ ಅಮ್ಮನನ್ನು ಅಜ್ಜಿ ಅಂದದ್ದು ಹಾಗೊಂದು ವಿಶ್ಲೇಷಕ ಮನಸ್ಸು ಇರಬೇಕು....
ನಿಮ್ಮ ಸೂಕ್ಷ್ಮ ಸಂವೇದನೆಯ ಬರೆಹ ಚೆನ್ನಾಗಿದೆ.

Mohan Hegade said...

ಚಿತ್ರಾಜಿ,
ಅಮ್ಮ ಎನ್ನುವ ಅಕ್ಷರವೇ ಹಾಗೆ, ಮಕ್ಕಳಿರುವಾಗ ಆರೈಕೆಗಳು, ದೊಡ್ಡವರಾದಾಗ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾದಾಗ ಸಂತೋಷಪಡುವುದು ಇದೆ ಜೀವನವಾಗಿರುತ್ತೆ. ಅಮ್ಮ ಅಜ್ಜಿ ಆಕ್ತಿದ್ದಾಳೆ ಎನ್ನುವಾಗ ನಮ್ಮ ಜವಾಬ್ದಾರಿ ಹೆಚ್ಚಾಯಿತೆಂಬ ಅರ್ಥ. ಶೀರ್ಷಿಕೆ ನೋಡಿ ಓದಿದರೆ ನಗು ಬರುತ್ತೆ.

ಚಿತ್ರಾ ಸಂತೋಷ್ said...

@ಹರೀಶ್ ಸರ್...ಪ್ರತಿಕ್ರಿಯೆಗೆ ಧನ್ಯವಾದಗಳು.

@ಮೋಹನ್ ಸರ್..ಧನ್ಯವಾದಗಳು. ಬಹಳಷ್ಟು ಜನ ಬರಹಗಿಂತ ಶೀರ್ಷಿಕೆ ಬಗ್ಗೆನೇ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ..!!!

-ಚಿತ್ರಾ

ಆಲಾಪಿನಿ said...

ಹೂಂ.... ನನಗೂ ನಮ್ಮ ಅಮ್ಮನಿಗೆ ವಯಸ್ಸಾಯ್ತಾ ಅಂತ ಯೋಚನೆ ಮಾಡೋದಕ್ಕೆ ಹಚ್ಚಿಬಿಟ್ಟಿಯಲ್ಲೇ ಸುಬ್ಬಕ್ಕ?

ಚಿತ್ರಾ ಸಂತೋಷ್ said...

@ಅಮ್ಮಣ್ಣಿ..ಥ್ಯಾಂಕ್ಯೂಊಊ..ಆಗಾಗ ಬರುತ್ತಿರು.
-ಚಿತ್ರಾ