"ನೋಡು ಪುಟ್ಟಾ..ಆಕಾಶದಲ್ಲಿ ಚಂದ್ರ ಕಾಣ್ತಾನೆ. ರಾತ್ರಿಗೆ ಅವನೇ ದೇವರು. ಅವನು ದೊಡ್ಡ ದೇವರು. ಅವನ ಸುತ್ತ ಇರುವುದು ನಕ್ಷತ್ರಗಳು, ಅದು ಚಿಕ್ಕ ದೇವರುಗಳು. ದೇವ್ರು ನೋಡುತ್ತಿರುವಾಗ ಊಟ ಮಾಡಿದ್ರೆ ಒಳ್ಳೆದಂತೆ. ದೇವ್ರು ಕೇಳಿದ್ದೆಲ್ಲವನ್ನೂ ಕೊಡ್ತಾನೆ" ಎನ್ನುತ್ತಾ ಅಮ್ಮ ತಮ್ಮನ ಬಾಯಿಗೆ ಅನ್ನ ತುರುಕಿಸುತ್ತಿದ್ದುದು ಹಾಗೇ ನೆನಪಲ್ಲಿ ಉಳಿದಿದೆ. ಬೆಳಗಾದರೆ ಸೂರ್ಯನಿಗೆ ನಮಸ್ಕರಿಸಬೇಕು..ಅವನು ಹಗಲಿನ ದೇವ್ರು ಎನ್ನುತ್ತಿದ್ದಳು. ದೇವಸ್ಥಾನಗಳಿಗೆ ಹೋದರೆ..ಮೂರ್ತಿಗಳನ್ನು ತೋರಿಸಿ, "ಇವ್ರು ಮಾತನಾಡದ ದೇವ್ರು, ಕೈಮುಗಿಯಬೇಕು..ಒಳ್ಳೆದಾಗ್ಲಿ ಅಂತ ಕೇಳಬೇಕು" ಎನ್ನುವಳು. ದೇವರಿಗೆ ಕೈಮುಗಿಯುವ ಭರದಲ್ಲಿ ನಾವು ನೆಲಕ್ಕೆ ಹಾಸಿದ ಸಗಣಿ-ಮಣ್ಣು ಎಲ್ಲವನ್ನೂ ಮೊಣಕಾಲಿನಲ್ಲಿ ಮೆತ್ತಿಕೊಳ್ಳುತ್ತಿದ್ದೆವು. ಕಲ್ಲು. ಮರಗಳು, ಹಾವುಗಳು, ದನಕರುಗಳು..ಎಲ್ಲವೂ ಅಮ್ಮನೆಂಬ ದೇವರಿಗೆ 'ದೇವರು'ಗಳು! ಶಾಲೆಯಲ್ಲಿ ಓದಿಸುವ ಮೇಷ್ಟ್ರು ಜನಗಣತಿ ಸಮಯದಲ್ಲಿ ಮನೆಗೆ ಬಂದರೆ ಅವರೂ 'ಮಹಾದೇವರು'. ಮನೆಗೆ ಬಂದ ಮೇಷ್ಟ್ರಿಗೆ ಕೈಮುಗಿಯಿರಿ ಅನ್ನೋಳು ಅಮ್ಮ. ಮನೆಗೆ ಹಿರಿಯರು ಬಂದರೆ ಅವರ ಕಾಲಿಗೆ ಅಡ್ಡಬೀಳಕೆ ಹೇಳೋಲು ಅಮ್ಮ. ಹೀಗೇ ಸಣ್ಣವರಿರುವಾಗ ಅಮ್ಮ ನಮ್ಮ ತಲೆಯೊಳಗೆ 'ತುಂಬಾ ದೇವರು'ಗಳನ್ನು ತಲೆಯಲ್ಲಿ ತುಂಬಿಸಿಬಿಟ್ಟಿದ್ದಳು. ಇಷ್ಟೆಲ್ಲಾ ದೇವರುಗಳಲ್ಲಿ ದೇವಸ್ಥಾನದಲ್ಲಿರುವ ಮೂರ್ತಿ ದೇವರು ಯಾಕೆ ಕಣ್ಣಿಗೆ ಕಾಣಲ್ಲ ಅಂದರೆ? ದಿನಾ ದೇವರಿಗೆ ಪೂಜಿಸಿ..ಎನ್ನುತ್ತಾ ಕನಸಕದಾಸರ ಕಥೆ ಆರಂಭಿಸುತ್ತಾಳೆ ಪ್ರೀತಿಯ ಅಮ್ಮ. ಹಾಗೇ ಪುಟ್ಟ ವಯಸ್ಸಿನಿಂದಲೂ ಸ್ನಾನ ಮಾಡಿ, ದೇವರಿಗೆ ದೀಪ ಹಚ್ಚಿ ಪ್ರಾರ್ಥಿಸಬೇಕು ಎನ್ನುವ ಅಮ್ಮ ಪರಿಪಾಠ ಈಗಲೂ ಮುಂದುವರೆದಿದೆ. ನಿತ್ಯ ದೇವರಿಗೆ ದೀಪ ಹಚ್ಚುವಾಗಲೂ ಅಮ್ಮ ಹೇಳಿದ್ದೆಲ್ಲಾ ನೆನಪಾಗುತ್ತೆ.
ಮೊನ್ನೆ ಶಿವರಾತ್ರಿ ದಿನ ನಮ್ಮ ಛಾಯಾಕನ್ನಡಿ ಬ್ಲಾಗ್ ಶಿವಣ್ಣ ದೇವಸ್ಥಾನಕ್ಕೆ ಹೋಗಿ ಬಂದು ನಂಗೆ ಪೋನು ಮಾಡಿದ್ದರು. ನಾನು, "ನಂಗೆ ದೇವರ ಬಳಿ ಏನು ಕೇಳಿಕೊಂಡೆ ಅಣ್ಣ?" ಎಂದಿದ್ದಕ್ಕೆ, ಅವರು "ನೋಡು ಮರೀ, ದೇವರು ಫ್ರೆಂಡ್ ಥರ..ಅವನ ಜೊತೆ ಏನೂ ಕೇಳಬಾರದು" ಎಂದುಬಿಟ್ಟರು! ನನ್ನ ತಲೆಯಲ್ಲಿ ವಿಚಿತ್ರ ತಲೆಹರಟೆಗಳು ಹೊಳೆಯತೊದಗಿದವು.
ದೇವ್ರು ಫ್ರೆಂಡ್ ಆದ್ರೆ....! ನಿಜವಾಗಲೂ ದೇವ್ರು ಫ್ರೆಂಡ್ ಆದ್ರೆ...!! ನನ್ನೆದುರು ಕುಳಿತು, "ನಿನ್ನ ದುಃಖವನ್ನೆಲ್ಲ ನನಗೆ ಕೊಡು, ಎನ್ನುತ್ತಲೇ ದುಃಖವನ್ನು ಸಹಿಸುವ ಶಕ್ತಿ ನೀಡುವ ಒಳ್ಳೆಯ ಗೆಳೆಯ ದೇವ್ರು ಆಗಿರ್ತಾ ಇದ್ರೆ..ನಂಗೆ 'ಒಳ್ಳೆಯ ಫ್ರೆಂಡ್ ಕೊಡೋ' ಎಂದು ದೇವರೆದುರು ಹಣತೆ ಹಚ್ಚಿ, ಆ ಮಂದ ಬೆಳಕಿನಲ್ಲಿ ನಿಂತು ಪ್ರಾರ್ಥಿಸೋ ಅಗತ್ಯವಿತ್ತಾ?!!" ....ದೇವರು ಮಾತನಾಡುತ್ತಿದ್ದರೆ...?! ಹೀಗೇ ಯೋಚನೆಗಳ ಸರಮಾಲೆ......
ಕಷ್ಟಗಳು ಎದುರಾದಾಗ..ದೇವರೆದುರು ನಿಂತು ಏಕಾಂಗಿಯಾಗಿ ಕಷ್ಟ ತೋಡಿಕೊಳ್ಳುವಾಗ..ನಮ್ಮ ಫ್ರೆಂಡ್ ಆಗಿ ನಮ್ಮ 'ಕಣ್ಣೀರು ಒರೆಸುವ ಕೈಗಳು' ಆತನಾಗಿದ್ದರೆ..ಎಷ್ಟು ಚೆನ್ನಾಗಿರ್ತಾ ಇತ್ತು ಅಲ್ವಾ? ಪ್ರತಿಯೊಂದು ಹೃದಯ ನೊಂದಾಗ..ದುಃಖ ಅರಿತುಕೊಳ್ಳುವ, ನಮ್ಮೊಂದಿಗೆ ಮಾತನಾಡುವ 'ಫ್ರೆಂಡು' ಆಗಿದ್ದರೆ...ನೋವು-ನಲಿವಿನ ತಿಕ್ಕಾಟ, ಬದುಕಿನ ಜಂಜಾಟಗಳಿಗೆ ಬಲಿಯಾಗಿ..ಬದುಕನ್ನೇ ಕಳೆದುಕೊಳ್ಳುವ ಕ್ಷಣದಲ್ಲಿ ನಮ್ಮನ್ನು ಅಪ್ಪಿ ಸಮಾಧಾನಪಡಿಸುವ ಫ್ರೆಂಡು ದೇವರಾಗಿದ್ದರೆ..ಬದುಕುವ ಪ್ರತಿಯೊಬ್ಬರಿಗೂ ಜೀವನ ಸುಂದರ ಅನಿಸ್ತಾ ಇತ್ತು ಅಲ್ವಾ?
ಅದೇಕೆ 'ಒಳ್ಳೆಯ ಫ್ರೆಂಡು' ಪ್ರತಿಯೊಬ್ಬರಲ್ಲೂ 'ಜೀವನಪ್ರೀತಿ 'ಹುಟ್ಟಿಸಲ್ಲ..ಗುರಿಸಾಧಿಸುವ ಛಲವನ್ನೇಕೆ ಬೆಳೆಸಲಿಲ್ಲ?ನಂಗೂ ಒಂಟಿಯಾಗಿದ್ದಾಗ..ಜೊತೆಗಾರರು ಬೇಕನ್ನಿಸುತ್ತೆ.,.ನೀನ್ಯಾಕೆ ಅದೆಷ್ಟೋ ಮಂದಿಯ ಒಂಟಿತನ ನೀಗಿಸುವ ಜೊತೆಗಾರನಾಗುವುದಿಲ್ಲ...?!
"ನಮ್ಮೆಲ್ಲಾ ದೌರ್ಬಲ್ಯ, ನ್ಯೂನತೆಗಳೊಂದಿಗೆ ನಮ್ಮನ್ನು ಪ್ರೀತಿಸುವವರು, ಆದರಿಸುವವರು ನಿಜವಾದ ಸ್ನೇಹಿತರು ಆಗಿರುತ್ತಾರೆ" ಅಂತಾರೆ ದೊಡ್ಡವರು., ಆದರೆ ನಾವು ಏನೋ ಸಣ್ಣ ತಪ್ಪು ಮಾಡಿ..ಕ್ಷಮಿಸು ಎಂದು ನಿನ್ನ ಮುಂದೆ ಗೋಳಾಡಿದ್ರೂ ನೀನ್ಯಾನೆ ಮೌನವಾಗಿರ್ತಿಯಾ? ಕನಿಷ್ಠ ನಮ್ಮನ್ನು ಸಮಾಧಾನ ಮಾಡಲ್ಲ? 'ಹಿಡಿಪ್ರೀತಿ' ತೋರಿಸಲ್ಲಾ..? ನಾವು ನಂಬಿದ ಆದರ್ಶಗಳೇ..ಕೆಲವೊಮ್ಮೆ ನಮ್ಮನ್ನು ಕೊಲ್ಲುವಾಗ ಫ್ರೆಂಡು ಆದವನು ನೀನ್ಯಾಕೆ ಸುಮ್ಮನಿರ್ತಿಯಾ? ಪರಿವರ್ತನಶೀಲವಾದ ಬದುಕಿನ ಸನ್ನಿವೇಶಗಳಿಗೆ ಸ್ಪಂದಿಸಿ, ಕಾಲದ ಸವಾಲುಗಳಿಗೆ ಉತ್ತರ ನೀಡಲಾಗದೆ ತಡಕಾಡುವ ನಿನಗೆ ಏನೂ ಅನಿಸಲ್ವಾ? ಅದೆಷ್ಟೋ ಹಸಿದ ಹೊಟ್ಟೆಗೆ 'ಅನ್ನ' ಯಾಕೆ ಆಗುತ್ತಿಲ್ಲ? ಅಳುವ ಕಂಗಳಿಗೆ 'ಕರ್ಚಿಪ್ ' ಯಾಕೆ ಆಗುತ್ತಿಲ್ಲ? ನಮ್ಮೊಂದಿಗೆ ಒಡನಾಡುವ, ಮಾತನಾಡುವ ಮೌನವನ್ನೂ ಮಾತಾಗಿಸುವ, ಗೆಳೆಯ ನೀನ್ಯಾಕೆ ಆಗಲಿಲ್ಲ..ಹೇಳು ನೀನು ಫ್ರೆಂಡ್ ಆಗಿದ್ದರೆ...ಒಂದೇ ಒಂದು ಬಾರಿ ನಿನ್ನ ಮಡಿಲಲ್ಲಿ ಮುಖ ಹುದುಗಿಸಿ ನನ್ನ 'ಹೃದಯ'ವನ್ನು ಹಂಚಿಕೊಳ್ಳಕೆ ಅವಕಾಶ ಯಾಕೆ ಕೊಡುತ್ತಿಲ್ಲ..!!!! ಎಂದು ದೇವರು ಮಾತನಾಡ್ತಾ ಇರುತ್ತಿದ್ದರೆ ಕೇಳುತ್ತಿದ್ದೆ..!
'ಅಕ್ಕಾ..' ಎಂದು ಬಾಗಿಲು ಬಡಿಯೋ ಸದ್ದು. ತಮ್ಮ ಆಫೀಸ್ನಿಂದ ಬಂದಿದ್ದ. ನನ್ನ ತಲೆಹರಟೆ ಯೋಚನೆಗಳಿಗೆ 'ಕಡಿವಾಣ' ಹಾಕಿದ್ದ.!
Subscribe to:
Post Comments (Atom)
15 comments:
ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ
ಎಲ್ಲಿದೆ ನಂದನ ಎಲ್ಲಿದೆ ಬಂಧನದ ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿ ಇದೆ ನಾಲಿಗೆಗೆ
- ಜಿ. ಎಸ್ . ಶಿವರುದ್ರಪ್ಪ
ಯಾಕೆ ಸುಮ್ನೆ ಒಳಗಿನ ತಿಳಿ ಕಲಕ್ತಿರಾ ??? :)
ಚಿತ್ರಾ,
"ನಾವು ಏನೋ ಸಣ್ಣ ತಪ್ಪು ಮಾಡಿ..ಕ್ಷಮಿಸು ಎಂದು ನಿನ್ನ ಮುಂದೆ ಗೋಳಾಡಿದ್ರೂ ನೀನ್ಯಾಕೆ ಮೌನವಾಗಿರ್ತಿಯಾ?" ಅ೦ದಿರಲ್ಲ. "ಮೌನಂ ಸಮ್ಮತಿ ಲಕ್ಷಣಂ" ಎ೦ದು ತಿಳಕೊಳ್ಳೊದು ಲೇಸು ಅಲ್ವೇ ? ದೇವರು ಫ್ರೆ೦ಡಾಗಿದ್ದರೆ, ಮಾತನಾಡುವ ಹಾಗಿದ್ದರೆ ನಮ್ಮ ರಾಜಕಾರಣಿಗಳು ಆತನಿಗೂ ಆಮಿಷ ತೋರಿಸಿ ತ೦ತಮ್ಮ ಕೆಲಸ ಸಲೀಸಾಗಿ ಮಾಡಿಸಿಕೊಳ್ತಿದ್ದರೋ ಏನೋ ? ವಿಚಾರಪೂರ್ಣ ಲೇಖನ.
ಚಿತ್ರ ಪುಟ್ಟಿ,
ನಿನ್ನ ಬರವಣಿಗೆಯಲ್ಲಿ ತಲೆಹರಟೆ ಯೋಚನೆಗಳು ಅನ್ನುತ್ತಲ್ಲೇ...ಒಂದು ಅದ್ಭುತ ಲೇಖನ ಬರೆದಿದ್ದೀಯಾ..
ದೇವರ ಬಗ್ಗೆ ನಿನಗಿರುವ ಗೊಂದಲವನ್ನೂ, ವಸ್ತುನಿಷ್ಟವಾಗಿ ನಿನಗೆ ಬಂದ ಯೋಚನೆಗಳು, ಜೀವನದಲ್ಲಿ ಅದ ಅನುಭವಗಳನ್ನು ಆಧಾರಿಸಿ ದೇವರ ಬಗೆಗಿನ ನಿನ್ನ ಕಲ್ಪನೆಯನ್ನು ಲೇಖನ ರೂಪದಲ್ಲಿಳಿಸಿದ್ದೀಯಾ....ಇದು ನಿನ್ನ ಸೊಗಸು ಕೂಡ...ಮತ್ತು ಮಿತಿಯೂ ಕೂಡ..
ಸೊಗಸೆಂದರೆ ನಿನಗಾದ ಅನುಭವಗಳು ಮತ್ತು ಭರವಣಿಗೆಯ ಹಿಡಿತದಿಂದಾಗಿ...ಅಪ್ತವಾಗಿ...ಮನಕಲಕುವಂತೆ ಬರೆಯುವುದು......ಮಿತಿಯ ಬಗ್ಗೆ ನಿನಗೆ ಮೇಲ್ ಮಾಡಿದ್ದೇನೆ....
ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ
ಎಲ್ಲಿದೆ ನಂದನ
ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು
ಕಲಕದೆ ಇದ್ದರೆ
ಅಮೃತದ ಸವಿ ಇದೆ ನಾಲಿಗೆಗೆ
ಜಿ. ಎಸ್. ಶಿವರುದ್ರಪ್ಪ. ಬರೆದ ಕವನವನ್ನು ಪೂರ್ತಿ ಓದಿ ಮನನ ಮಾಡಿಕೊಂಡರೆ ದೇವರ ಬಗೆಗಿನ ಚಿತ್ರ ನಿನಗೆ ಸಿಗಬಹುದು....
ಒಟ್ಟಾರೆ ಒಂದು ಪ್ರತಿಯೊಬ್ಬರೂ ತಮ್ಮ ಅನುಭವವನ್ನು ಒಮ್ಮೆ ಅವಲೋಕಿಸುವಂತೆ ಮಾಡುವ ಕಾಡುವ ಬರಹ ಅಂತ ಮಾತ್ರ ಹೇಳಬಲ್ಲೇ.....
ಚಿತ್ರಾ,
ದೇವರು ಎಲ್ಲೋ ಇರುವವನಲ್ಲ. ಅವನಿರುವುದು ನಮ್ಮೊಳಗೇ. ನಮ್ಮ ಅಂತರಾತ್ಮದೊಳಗೆ. ನಮ್ಮ ವಿಶ್ವಾಸದೊಳಗೆ. ನಮ್ಮ ಧೈರ್ಯ, ಆತ್ಮವಿಶ್ವಾಸ, ಛಲ, ಧೃತಿ, ಸ್ಮೃತಿಯೊಳಗೆ. ಯಾರೋ ಬಂದು ನಮ್ಮನ್ನು ಉದ್ಧರಿಸುವುದಿಲ್ಲ. ಮೊದಲಿಗೆ ನಮ್ಮನ್ನು ನಾವು ಎತ್ತಿಕೊಂಡು (ಅತೀವ ಭಾವುಕತೆಯಿಂದ) ಛಲ ದಿಂದ ಮುನ್ನೆಡೆವ ಸಂಕಲ್ಪಮಾಡಿ, ಬರುವ ಎಡರು ತೊಡರುಗಳನ್ನು ಎದುರಿಸಿ, ಅಂಜದೇ ಅಳುಕದೇ ನಸುನಗುತ್ತಾ ಮುನ್ನಡೆದರೆ ಸಾಕು. ನಿನಗೇ ಅರಿವಾಗುವುದು ಆತ ಎಲ್ಲಿರುವನು ಎಂದು. ಇದು ನನ್ನ ಸ್ವಂತ ಅನುಭವ. ಹಾಗಾಗಿ ಹೇಳುತ್ತಿರುವೆ. ನಮ್ಮನ್ನು ನಾವು ಕುಗ್ಗಿಸಿಕೊಂಡು ಇದೇ ನನ್ನ ಕರ್ಮ, ಪ್ರಾರಾಬ್ಧ. ಇಷ್ಟೂ ಕಷ್ಟಗಳೂ ನನಗೇ ಯಾಕೆ? ಎಂದೆಲ್ಲಾ ಕೊರಗುತ್ತಾ ಕುಗ್ಗುತ್ತಾ ಇದ್ದರೆ. ಕಲ್ಲಿನ ಮೂರ್ತಿಯೇ ಆಗುತ್ತಾನೆ ದೇವರು. ಆತ್ಮ ನಿರ್ವಿಕಾರ, ನಿರ್ಮೋಹವಾದುದು. ಅದನ್ನು ನಿನ್ನೊಳಗೇ ಇಟ್ಟ ದೇವರು ನಮ್ಮೊಳಗೇ ಇದ್ದಾನೆ. ಆ ಸಾಕಾರ ಮೂರ್ತಿಯನ್ನು ನಿರ್ಮಲ, ನಿಶ್ಚಲ ಮನಸಿನ ಮೂಲಕ ಹೇಗೇ ಬೇಕಾದರೂ ಕಲ್ಪಿಸಿಕೋ ಎಲ್ಲವೂ ತಿಳಿಯಾಗುವುದು.
ನಿನಗೆ ಒಳಿತಾಗಲಿ. ನಗುತ್ತಾ ಇರು ಸದಾ...:)
ಹೌದು...
ದೇವರು ನಿರಾಕಾರಿ.. ಆದರೆ ಬಹುರೂಪಿ...
ಅಂದು ನನಗೂ ನಮ್ಮಕ್ಕನಿಗೂ ದೊಡ್ಡ ಚರ್ಚೆ ಆಯಿತು...
ಅಕ್ಕನ ವಾದ "ದೇವರಿಗೆ ಯಾಕೆ ಭಯ ಪಡಬೇಕು... ಆತನನ್ನು ಪ್ರೀತಿಸಬೇಕು" ಎಂಬುದು...
ನನ್ನದು "ದೇವರ ಭಯವೇ ಜ್ಞಾನದ ಮೂಲ..."
ಕೊನೆಗೆ ನಾನಂದೆ.. ಒಂದು ವೇಳೆ ನಾನು ನಿಮ್ಮನ್ನು ಪ್ರೀತಿಸದಿರುತ್ತಿದ್ದರೆ.. ನಿಮಗೆ ಭಯ (respect) ಪಡುವ ಅವಶ್ಯಕತೆಯೇ ಇರಲಿಲ್ಲ...
ಅದೇ ರೀತಿ ನೀವು ನಿಮ್ಮ ಗಂಡನನ್ನು ಪ್ರೀತಿಸುತ್ತಿರದಿದ್ದರೆ ಅವರಿಗೆ ಭಯ (respect) ಪಡುವ ಅವಶ್ಯಕತೆಯೇನಿರುತ್ತಿತ್ತು...
ನಾನು ನಿಮ್ಮಲ್ಲಿ, ನೀವು ನಿಮ್ಮ ಗಂಡನಲ್ಲಿ ದೇವರನ್ನು ಕಾಣುತ್ತಿರುವಿರಿ...
ನಮ್ಮ ಆತ್ಮಸಮಾಧಾನಕ್ಕಗಿ, ನಮ್ಮೊಳಗಿನ ತುಮುಲವನ್ನು ಸಂತೈಸಲು ನಾವೇ ದೇವರನ್ನು ‘ಹುಟ್ಟುಹಾಕಿ ನಂಬಿಕೊಂಡು’ ಬಂದದ್ದು.
ಹಾಗಾಗಿ,
ದೇವರಲ್ಲಿ ಕೇಳುವುದೆಂದರೆ, ನಮ್ಮನ್ನು ನಾವೇ ಕೇಳಿದಂತೆ..
ಶಂಕರಾಚಾರ್ಯ, ನಾರಾಯಣಗುರು ಹೇಳಿದ್ದು ಇದನ್ನೇ ಅಲ್ಲವೇ.
ಎಲ್ಲಿ ಮಾನವೀಯತೆಗೆ ಜಾಗವಿದೆಯೋ ಅಲ್ಲೇ ದೇವರಿದ್ದಾನೆ. ಅವ/ಳು ನಿಮಗೂ ನಮಗೂ ಫ್ರೆಂಡ್ ಥರ..
ಚಿತ್ರಾ.
ಕಣ್ಣೊರೆಸುವ ಸ್ನೇಹಿತನಾಗಿ ದೇವರು ಬರಲಿಲ್ಲ...
ನನ್ನಮ್ಮ.. ಕೂಡ ನಿಮ್ಮಮ್ಮನ ಹಾಗೆ ಎಷ್ಟೋ ದೇವರುಗಳನ್ನು ತಲೆಯಲ್ಲಿ ತುಂಬಿದ್ದಾರೆ..
ಹಾಗೆ ಇನ್ನೊಂದು ಮಾತು ಕೂಡ ಮನನ ಮಾಡಿಸಿದ್ದಾರೆ..
" ಮಗನೇ... ನಾವು ಬೇರೆಯವರ ಕಣ್ಣೀರನ್ನು ಒರೆಸಿದರೆ..
ನಮ್ಮ ಕಣ್ಣೀರು ಒರೆಸಲು ಯಾರನ್ನಾದರೂ ಕಳಿಸುತ್ತಾನೆ....
ಇತರರ ಕಣ್ಣೀರು ನೋಡಿ ಸುಮ್ಮನಿರಬೇಡ.."
ಏನೂ ಓದಿರದ ಆ ಮುಗ್ಧ ಅಮ್ಮಂದಿರು ಎಂಥಹ
ಆಧ್ಯಾತ್ಮ ತಿಳಿದಿದ್ದಾರೆ...!
ಓದಿದವರೆಂದು ಬೀಗುವ ನಾವು..
ಕಷ್ಟ ಬಂದ ಕೂಡಲೆ ಕಂಗಾಲಾಗಿ ಬಿಡುತ್ತೇವೆ...
ಇನ್ನೂ ಬರೆಯ ಬೇಕೆನುಸುತ್ತದೆ..
ನನ್ನ ಬ್ಲಾಗಿನಲ್ಲೇ ಬರೆಯುವೆ...
ಸ್ಪೂರ್ತಿ ಕೊಟ್ಟಿದ್ದಕ್ಕೆ..
ನನ್ನ ಮನ ಕಲಕಿದ್ದಕ್ಕೆ..
ಧನ್ಯವಾದ ಹೇಳಲೇ ಬೇಕಾ...?
@ಸಂತೋಷ್ ಪ್ರತಿಕ್ರಿಯೆಗೆ ಧನ್ಯವಾದಗಳು. ಹಾಗೇ ನಿಮ್ಮ ಪ್ರತಿಕ್ರಿಯೆಗೆ ಶಿವಣ್ಣ ಬರೆದ ಪ್ರತಿಕ್ರಿಯೆಯಿಂದ ಇನ್ನಷ್ಟು ಉತ್ತರ ಸಿಗಬಹುದೇನೋ ಅಂದುಕೊಂಡಿದ್ದೀನಿ. ನಾನು ಬರೆದ ಬರಹಕ್ಕಿಂತಲೂ ಬಂದಿರುವ ಪ್ರತಿಕ್ರಿಯೆಗಳು ನನಗೆ ತುಂಬಾ ಖುಷಿಕೊಟ್ಟಿವೆ, ಕಲಿಸಿಕೊಟ್ಟಿವೆ.ಜ್ವರದಿಂದ ರಜಾಹಾಕಿ ಮನೆಯಲ್ಲಿ ಸುಮ್ಮನೆ ಮಲಗಿದ್ದವಳಿಗೆ ಏನೋ ಯೋಚನೆ ಬಂತು..ತಕ್ಷಣ ಬರೆದೆ. ಅದಕ್ಕೆ ಏನೋ ತಲೆಹರಟೆಗಳು..ಅಂದಿದ್ದೀನಿ ಮೊದಲಿಗೇ. ನನಗೆ ಮೊದಲು ಬರಹ ಬರೆಯುವಾಗಲೇ ಜಿಎಸ್ ಎಸ್ ಅವರ ಕವನ ನೆನಪಾಗಿದೆ..ಕುವೆಂಪು ಅವರ ಗುಡಿ ಚರ್ಚು ಮಸೀದಿಗಳ ಬಿಟ್ಟ ಹೊರಬನ್ನಿ..ಹಾಡು ನೆನಪಾಗಿತ್ತು. ನಾನೂ ಸಹ ಇದರಲ್ಲೇ ಹೆಚ್ಚು ನಂಬಿಕೆಯಿಟ್ಟವಳು.
@ಪರಾಂಜಪೆ..ನೀವಂದಿದ್ದು 100% ನಿಜ. ನಿಮ್ಮ ಮಾತು ನಗೂನು ತರಿಸಿತ್ತು. ಬರ್ತಾ ಇರಿ.
@ಪ್ರಕಾಶಣ್ಣ..ನಮ್ಮ ಪ್ರೀತಿಯ ಬಂಧುಗಳು, ಅಕ್ಕ, ತಂಗಿ, ತಾಯಿ ಎಲ್ಲರಲ್ಲೂ ನಾವು ದೇವರನ್ನು ಕಾಣಬಹುದು ಎನ್ನುವ ನಿನ್ನ ,ಮಾತಿಗೆ ನನ್ನದೂ ಸಾಥ್ ಇದೆ.
@ಹರೀಶ್ ಸರ್..ಶಿವಣ್ಣ ನಂಗೆ ಹೇಳಿರುವ ಮಾತನ್ನು ನೀವೂ ಹೇಳಿದ್ದೀರಿ..ಧನ್ಯವಾದಗಳು.
ಪ್ರೀತಿಯಿಂದ ಮತ್ತೊಮ್ಮೆ ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆಗಳು ಹೀಗೇ ಬರುತ್ತಲಿರಲಿ.
-ಚಿತ್ರಾ
@ಶಿವಣ್ಣ..ನಾನು ಅದ್ಭುತ ಲೇಖನ ಬರೆದಿಲ್ಲ. ನಿಮ್ಮ ಪ್ರತಿಕ್ರಿಯೆಗಳೇ ಅದ್ಭುತವಾಗಿವೆ.ದೇವರಿದ್ದಾನೋ/ ಇಲ್ಲವೋ ನಂಗೂ ಗೊತ್ತಿಲ್ಲ..ಆದರೆ ಎಲ್ಲೋ ಒಂದೆಡೆ ಪರಿವರ್ತನೀಯಶೀಲವಾದ ಬದುಕಿನಲ್ಲಿ ಕೆಲವೊಂದು ಸನ್ನಿವೇಶಗಳು ಇಂಥ ಗೊಂದಲವನ್ನು ಸೃಷ್ಟಿಸುತ್ತವೆ..ನಂಬಿಕೆ, ವಿಶ್ವಾಸಗಳೇ ಢಾಳಾಗಿ ಕಾಣುತ್ತವೆ. ನೀವಂದಂತೆ ಇದು ದೇವರ ಬಗೆಗಿನ ಕಲ್ಪನೆ..ಗೊಂದಲದಲ್ಲಿ ಬಿದ್ದಿರುವ ನಾನು 'ದೇವರು ನಮ್ಮೊಳಗೇ ಇದ್ದಾನೆ' ಎನ್ನುವ ಅದಮ್ಯ ವಿಶ್ವಾಸವನ್ನೂ ಮೀರಿ..ಬರೀ ಕಲ್ಪನೆಯಲ್ಲೇ ಬರಹದ ಹಾರ ಪೋಣಿಸಿದ್ದೇನೆ. ನಿಮ್ಮ ಪ್ರತಿಕ್ರಿಯೆ, ನೀವು ಮಾಡಿರುವ ಮೇಲ್ ಇನ್ನಷ್ಟು ವಿಚಾರಗಳನ್ನು ತಿಳಿಸಿಕೊಟ್ಟಿತ್ತು.
@ತೇಜಕ್ಕ..ಎಷ್ಟೊಂದು ಒಳ್ಳೆಯ ಮಾತುಗಳನ್ನು ಹೇಳಿದ್ದೀರಿ. ನಿಮ್ಮ ಪ್ರತಿಕ್ರಿಯೆಯೂ ತುಂಬಾ ವಿಚಾರಗಳನ್ನು ತಿಳಿಸಿಕೊಟ್ಟಿದೆ. ನಗುತ್ತಾ ಇರುವೆ ಸದಾ....
@ಪ್ರಕಾಶ್ ಸರ್.."ಏನೂ ಓದಿರದ ಆ ಮುಗ್ಧ ಅಮ್ಮಂದಿರು ಎಂಥಹ ಆಧ್ಯಾತ್ಮ ತಿಳಿದಿದ್ದಾರೆ...!" ಎಂಥಹ ಮಾತು. ದೇವರು ಸರ್ವವ್ಯಾಪಿ ಅಮ್ಮ ಹೇಳಿದ ಮಾತು ಸುಳ್ಳಲ್ಲ ಅಲ್ವಾ? ನಿಮ್ಮ ಪ್ರತಿಕ್ರಿಯೆ ಒದಿ ಕಣ್ಣುಗಳೂ ತೇವಗೊಂಡವು, ದುಃಖದಿಂದಲ್ಲ, ಖುಷಿಯಿಂದ! ನನ್ನ ಬರಹಕ್ಕೆ ಧನ್ಯವಾದ ಹೇಳಬೇಕಿಲ್ಲ..ನಿಮಗೆ ಅನಿಸಿದ್ದನ್ನು ಮತ್ತೆ ಬರೆಯಿರಿ. ಓದೋಕೆ ನಾ ಬರ್ತೀನಿ.
ಪ್ರೀತಿಯಿಂದ,
ಚಿತ್ರಾ
ನಿಜ.ಇವತ್ತಿಗೂ ನಮ್ಮಲ್ಲಿ ಅಷ್ಟಿಷ್ಟೇನಾದರೂ ಮುಗ್ಧತೆ ಉಳಿದಿದ್ದರೆ,ಇವತ್ತಿಗೂ ನಾವು ಕೊಂಚಮಟ್ಟಿಗಾದರೂ corrupt ಆಗದೇ ಬದುಕುತ್ತಿದ್ದೇವೆಂದರೆ-
ಅದಕ್ಕೆ ಬಾಲ್ಯದಲ್ಲಿ ಅಮ್ಮ ಹೇಳಿಕೊಟ್ಟ/ಹೆದರಿಸಿದ 'ದೇವರು' ಎಂಬ ಅಸ್ತಿತ್ವವೇ ಕಾರಣ!
ಇವತ್ತಿನ ಮಟ್ಟಿಗೆ ಹೇಳುವದಾದರೆ,ಅಮ್ಮನ 'ದೇವರು' ಇದ್ದಾನೆಯೇ ಇಲ್ಲವೋ ಗೊತ್ತಿಲ್ಲ:ಆದರೆ ಅಮ್ಮನ ಅಸ್ತಿತ್ವ,ಆಕೆಯ ನಂಬಿಕೆಗಳನ್ನು ಖಂಡಿತ ನಿರಾಕರಿಸಲಾರೆವು..
-ರಾಘವೇಂದ್ರ ಜೋಶಿ.
ಏನೂ ಬೇಡಾ...ಬೇಜಾರಾದಾಗ, ದುಃಖವಾದಾಗ ತಲೆಗೆ ಹೆಗಲು ಕೊಟ್ಟು,
ಆ ದುಃಖವನ್ನು ಮರೆಯುವಷ್ಟು ಅಳಲು ಅನುವು ಮಾಡಿಕೊಡೋನು ದೇವ್ರು ಅಂತೀನಿ.
ಯಾಕೆಂದ್ರೆ, ಆ ದೇವ್ರು ಇನ್ನೂ ಈ ರೀತಿಯಲ್ಲಿ ನಂಗೆ ಕಂಡಿಲ್ಲ..
ಕಣ್ಣಿಗೆ ಕಾನದವನೇ(ಳೇ) ದೇವ್ರು ಅಂತೀನಿ.
ಅದರೂ ಇದ್ದಕ್ಕಿದ್ದ ಹಾಗೆ ಎಲ್ರಿಗೂ ದೇವ್ರೋದಯ (????) ಆಗ್ತಾ ಇದ್ಯಲ್ಲಾ..ಹುಷಾರಾಗಿದೀರಾ ?
ಕಟ್ಟೆ ಶಂಕ್ರ
@ರಾಘವೇಂದ್ರ ಸರ್..ನೀವು ಹೇಳಿದ ಮಾತು ನೂರಕ್ಕೆ ನೂರು ನಿಜ. ನಿಮ್ಮ ಮಾತುಗಳು ತುಂಬಾ ಖುಷಿಕೊಟ್ಟವು. ಅದಕ್ಕೇ ದೇವರ ಅಸ್ತಿತ್ವದ ಬಗ್ಗೆ ನಮಗೆ ಹೇಳಿರುವ ಅಮ್ಮನೂ ದೇವರು ಅಲ್ಲವೇ?ಆಗಾಗ ಬರುತ್ತಿರಿ..ಬೆನ್ನು ತಟ್ಟುತ್ತಾ ಇರಿ..
@ಶಂಕ್ರಣ್ಣ..ನಮಸ್ಕಾರಣ್ಣ. 'ದೇವರ ಅಸ್ತಿತ್ವ' ಅವರವರ ಭಾವಕ್ಕೆ..ಭಕುತಿಗೆ ಬಿಡೋಣ. ನಾನು ಹುಷಾರಾಗೇ ಇರ್ತೀನಿ ಆಯಿತಾ..
-ಪ್ರೀತಿಯಿಂದ,
ಚಿತ್ರಾ
ದೇವರು- ಅವರವರ ಭಾವಕ್ಕೆ ಅವರವರ ಭಕುತಿಗೆ!
ಅದೆಲ್ಲಾ ಇರ್ಲಿ..ದೇವರನ್ನ ದೇವರತರ ಇರೋಕೂ ಬಿಡಲ್ವಲ್ಲ ನೀವು!!
ಒಳ್ಳೆ ಲೇಖನ.
"ದೇವ್ರು ಫ್ರೆಂಡ್ ಆದ್ರೆ....! ನಿಜವಾಗಲೂ ದೇವ್ರು ಫ್ರೆಂಡ್ ಆದ್ರೆ...!!" - these lines made me smile, just because I started treating him like one from a long time, which helped me to become a good friend of myself.
surely, if people start treating him like a friend, instead of magician, amount of tearful eyes will surely reduce.
ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.
ಶುಭವಾಗಲಿ,
- ಶಮ, ನಂದಿಬೆಟ್ಟ
Post a Comment