Saturday, February 21, 2009

ಹೀಗೊಬ್ಬ ಜಾಹೀರಾತು ಹುಡುಗ..!!

ನನಗಾಗ ಬೆಂಗಳೂರು ಹೊಸತು. ಬಹುಮಡಿಯ ಕಟ್ಟಡಗಳು, ಟ್ರಾಫಿಕ್ ಜಾಮ್, ಸಿಗ್ನಲ್ಲುಗಳು, ಪಾರ್ಕ್ ತುಂಬಾ ಮುತ್ತಿಕೊಂಡಿರುವ ಹುಡುಗ-ಹುಡುಗಿಯರು, ಪಾರ್ಟ್ ಟೈಮ್ ಕೆಲಸಕ್ಕಾಗಿ ಅಲೆದಾಡುವವರು, ನಿತ್ಯ ಮನೆಬಾಗಿಲು ಹಾಕಿಕೊಂಡೇ ಮನೆಯೊಳಗೆ'ಬಂಧಿತ;'ರಾಗಿರುವ ಗೃಹಿಣಿಯರು, ಮುಖ ನೋಡಿದರೆ ಗಹಿಗಹಿಸಿ ನಗುವ ವಿಚಿತ್ರ ಮಾನವಜೀವಿಗಳು..ಇವೆಲ್ಲವನ್ನೂ ಅಚ್ಚರಿಯಿಂದ ನೋಡಿ, ಬೆಂಗಳೂರಿಗೊಂದು 'ಡೆಫಿನೆಶನ್' ಕಂಡುಕೊಳ್ಳುತ್ತಿದ್ದ ಸಮಯ. ಆಗತಾನೇ ಹೊಸದಿಗಂತ ಪತ್ರಿಕೆಯಲ್ಲಿ ಕೆಲಸ ಸಿಕ್ಕಿತ್ತು. ಬೆಂಗಳೂರು ಬಗ್ಗೆ ಎಂಥದ್ದೂ ಗೊತ್ತಿಲ್ಲ..ಕಣ್ಣಿಗೆ ಕಂಡಿದ್ದೇ ಬೆಂಗಳೂರು ನನ್ನ ಪಾಲಿಗೆ. ನಗರದ ಒಂದೊಂದು ಸಿಗ್ನಲ್ ದಾಟಲೂ..ಅರ್ಧ ಗಂಟೆ ತೆಗೆದುಕೊಳ್ಳುತ್ತಿದ್ದ ಹುಡುಗಿ ನಾನಾಗಿದ್ದೆ. ಅಂದು ಮೆಜೆಸ್ಟಿಕ್ ನಿಂದ 96 ನಂಬರಿನ ಬಸ್ಸು ಹತ್ತಿ ಮಲ್ಲೇಶ್ವರಕ್ಕೆ ಹೊರಟಿದ್ದೆ. ಬಸ್ಸು ಎಲ್ಲೆಲ್ಲೋ ಸುತ್ತುತ್ತಾ..ಅದೇನೋ 'ಭಾಷ್ಯಂ' ಸರ್ಕಲ್ ಗೆ ಬಂದುಬಿಡ್ತು. ಏನು ಮಾಡೋದು? ಆ ಭಾಷ್ಯಂ ಸರ್ಕಲ್ ಕೂಡ ನನಗೆ ಹೊಸತು. ವಾಪಾಸ್ ಮಲ್ಲೇಶ್ವರಕ್ಕೆ ಬರಲು ಬಸ್ಸು ಎಲ್ಲಿ ನಿಲ್ಲುತ್ತೆ ಗೊತ್ತಿರಲಿಲ್ಲ. ಅಷ್ಟೊತ್ತಿಗೆ ನನ್ನ ಗೊಂದಲವನ್ನು ಗಮನಿಸಿದ ಹುಡುಗನೊಬ್ಬ ಬಂದು 'ನಿಮಗೆ ಎಲ್ಲಿ ಹೋಗಬೇಕು?' ಅಂದ. ನಾನು "ನಂಗೆ ಮಲ್ಲೇಶ್ವರಕ್ಕೆ ಹೋಗಬೇಕು. ಬಸ್ಸು ತಪ್ಪಿ ಇಲ್ಲಿ ಬಂತು. ಬಸ್ ಸ್ಟಾಂಡ್ ಎಲ್ಲಿ ಗೊತ್ತಾಗ್ತಿಲ್ಲ..ಹೇಳ್ತೀರಾ?'ಅಂದೆ. ನಾನೂ ಆ ಕಡೆ ಬರ್ತೀನಿ ಅಂತ ನನ್ನ ಮಾತನಾಡಿಸಿದ. ನನಗೆ ಹೋದ ಜೀವ ಬಂದಂತಾಯಿತು..ನಾನೇನೋ ನಮ್ಮ ಹಳ್ಳೀಲಿ ಇರೋ 'ಪಕ್ಕದ್ಮನೆ' ಹುಡುಗನಂತೆ ಭಾವಿಸಿದ್ದೆ. ನನ್ನ ಪರಿಚಯ ಫೋನ್ ನಂಬರು ಕೇಳಿದ. ಆಫೀಸ್ ನಂಬರ್ ಕೊಟ್ಟೆ. ತಾನೊಬ್ಬ ಸಾಫ್ಟ್ ವೇರ್ ಉದ್ಯೋಗಿ...ನನ್ನ ಕಂಪನಿಯ ಜಾಹೀರಾತು ಕೊಡಲು ಇದ್ರೆ ನಿಮ್ಮನ್ನು ಸಂಪರ್ಕಿಸಬಹುದಾ? ಅಂದಿದ್ದ. ಓಕೆ ಅಂದೆ. ಮೊಬೈಲ್ ನಂಬರ್ ಕೇಳಿದ ..ನನ್ನ ಕಸೀನ್ ಬ್ರದರ್ ನಂಬರು ಕೊಟ್ಟೆ..! ಯಾಕಂದ್ರೆ ನನ್ನ ಕಸಿನ್, ಅಪರಿಚಿತ ಹುಡುಗ್ರು ಸಿಕ್ಕಿ ನಿನ್ನ ನಂಬರ್ ಕೇಳಿದ್ರೆ..ನನ್ನ ನಂಬರು ಕೊಡು..ತಪ್ಪಿಯೂ ನಿನ್ನ ನಂಬರ್ ಕೊಡಬೇಡ, ಹೆಸರೂ ಹೇಳಬೇಡ ಅಂದಿದ್ದ. ನಾನು ಹಾಗೇ ಮಾಡಿದ್ದೆ.

ಬಳಿಕ ಅಣ್ಣನ ಮೊಬೈಲಿಗೆ ಒಂದೇ ಸಮನೆ ಮೆಸೇಜ್ ಬರ್ತಾ ಇತ್ತು. ಪ್ರೀತಿ, ಪ್ರೇಮ, ಪ್ರಣಯದ ಸುತ್ತಾನೇ ಸುತ್ತೋ ಆ ಮೆಸೇಜುಗಳಿಗೆ ಅಣ್ಣನೇ ರಿಪ್ಲೆ ಮಾಡುತ್ತಿದ್ದ. ಅದೃಷ್ಟ ಎಂದರೆ ಒಂದೇ ಒಂದು ಸಲ ಆ ಮನುಷ್ಯ ಫೋನ್ ಮಾಡಲಿಲ್ಲ. ಎರಡು-ಮೂರು ತಿಂಗಳು ಮೆಸೇಜ್ ಗಳಲ್ಲೇ ಕಳೆದುಹೋಯಿತು. ಮತ್ತೆ ಬಂದೇಬಿಟ್ಟಿತು..ಫ್ರೆಬ್ರುವರಿ 13. ರಾತ್ರಿ 10 ಗಂಟೆಗೆ ಫೋನ್ ಮಾಡಿದ್ದ. ಅಣ್ಣ ರಿಸೀವ್ ಮಾಡಲಿಲ್ಲ. ಮತ್ತೆ ಮೆಸೇಜ್ ಅವನಿಂದ, "ನೀನು ಸಿಗೋದಾದ್ರೆ ನಾಳೆ ಬೆಳಿಗ್ಗೆ 10 ಗಂಟೆಗೆ ಮೆಜೆಸ್ಟಿಕ್ ನಲ್ಲಿರ್ತೀನಿ. ನಮ್ಮ ಕಂಪನಿಯ ಜಾಹೀರಾತು ಬಗ್ಗೆನೂ ಮಾತನಾಡಬೇಕು" ಅಂತ ಮೆಸೇಜ್ ಮಾಡಿದ್ದಕ್ಕೆ ಅಣ್ಣ 'ಓಕೆ' ಅಂದಿದ್ದ.

ಈ ಸಲ ಹೊಸದಿಗಂತಕ್ಕೆ ಸಕತ್ ಲಾಭ'..ಒಳ್ಳೆ ಜಾಹೀರಾತು ಬಂದಿದೆ ಅಂತ ಅಣ್ಣ ತಮಾಷೆ ಮಾಡ್ತಿದ್ದ. ಫೆ.14ರ ಬೆಳಿಗ್ಗೆ 8 ಗಂಟೆಗೆ ಆತನಿಂದ ಫೋನು. ಅಣ್ಣ ರಿಸೀವ್ ಮಾಡಿ, 'ಯಾರು ಬೇಕಿತ್ತು?' ಎಂದಾಗ 'ನಾನು ಸಿಂಧು ಜೊತೆ ಮಾತನಾಡಬೇಕಿತ್ತು(ನಾನು ಅವನತ್ರ ನನ್ನ ಹೆಸರು ಸಿಂಧು ಅಂದಿದ್ದೆ)' ಅಂದ. ಅದಕ್ಕೆ ಅಣ್ಣ "ಏನಪ್ಪಾ ಜಾಹೀರಾತು ಕೊಡಬೇಕಿತ್ತಾ? ಇಲ್ಲಿ ಸಿಂಧುನೂ ಇಲ್ಲ, ಬಿಂದುನೂ ಇಲ್ಲ.." ಎನ್ನುವಾಗಲೇ ಫೋನ್ ಕಟ್. ಮತ್ತೆಂದೂ ಆತನ ಮೆಸೇಜ್ ಬರಲೇ ಇಲ್ಲ!! ಈ ಘಟನೆ ನಡೆದಿದ್ದು 2007ರ ಫೆ.14ರಂದು.!! ಈ ಸಲದ ವಿಶೇಷ ಮುಂದಿನ ಬಾರಿ ಹೇಳ್ತೀನಿ..ನಿರೀಕ್ಷಿಸಿ..!!!!

28 comments:

Ittigecement said...

ಚಿತ್ರಾ...

ಅಳಿಸೋ ಹುಡುಗಿಗೆ "ನಗಿಸಲಿಕ್ಕೂ" ಬರುತ್ತದೆ..!

ನನ್ನ ಮನವಿ ಇಷ್ಟು ಬೇಗ ಪುರಸ್ಕರಿಸಿದ್ದಕ್ಕೆ ಧನ್ಯವಾದಗಳು...

ಆ ಹುಡುಗನಿಗೆ "ಟೋಪಿ" ಹಾಕಿ ಬಿಟ್ಟಿರಲ್ರಿ..!

(ಶಿವಣ್ಣ ತೆಗೆಸಿಕೊಟ್ರಾ?)

ಅವನ ಆತ್ಮಕ್ಕೆ ಎಷ್ಟು ನೋವಾಯಿತೋ ಏನೋ..?

ಚಂದದ ಬರಹಕ್ಕೆ

ಅಭಿನಂದನೆಗಳು...!

Prakash Shetty said...

ಪಾಪ ಹುಡುಗ...

****

ಹೇಯ್ ಇನ್ನೊಂದು ವಿಷ್ಯ ಗೊತ್ತಾ ‘ಹುಡ್ಗಿ’...

...ಈ ಹುಡುಗ್ರ ಕಾಟವನ್ನು ತಡೆಯಲು ಒಂದೆರಡು ಸಲಿ ಬೈದ್ರೆ ಸಾಕು...

ಆದ್ರೆ ಆ ಹುಡುಗೀರಿದ್ದಾರಲ್ಲ... ಯಪ್ಪಾ... ಬಲು ಕಷ್ಟ.. ಕಷ್ಟ... ಇಮೋಷನಲಿ ಬ್ಲಾಕ್ ಮೇಲ್ ಮಾಡ್ತಾರೆ ಗೊತ್ತಾ...

ಅವ್ರ ಕಾಟ ತಡೆಯಲೆಂದೇ ಕೆಲವು ಹುಡುಗ್ರು ಹಲವಾರು ಬಾರಿ ತಮ್ಮ ಮೊಬೈಲ್ ನಂಬರ್ ಯಾರಿಗೂ ಹೇಳದಂತೆ ಚೇಂಜ್ ಮಾಡಿ ಬಿಡ್ರಾರೆ...

ಚಿತ್ರಾ ಸಂತೋಷ್ said...

ಪ್ರಕಾಶ್ ಸರ್..ಮೊದಲಾಗಿ ಪ್ರತಿಕ್ರಿಯೆಗೆ ಧನ್ಯವಾದಗಳು.
ಹೌದು ನಿಮ್ಮ ಮನವಿ ಯಥಾವತ್ತಾಗಿ ಪಾಲಿಸಿದ್ದೀನಿ. ಅದಕ್ಕೆ ನೀವು ಚಾಕಲೇಟು ಕೊಡಿಸಬೇಕು. ಹುಡುಗನಿಗೆ ಟೋಪಿ ಹಾಕಿದ್ದೀನಿ..ಅದನ್ನು ಅಣ್ಣ ಹೇಳಿಕೊಟ್ಟಿದ್ದು!
ದುರಂತ ಅಂದ್ರೆ..ಫೋನಲ್ಲಿ ಅವನ ಧ್ವನಿ ಕೇಳೋ ಅವಕಾಶನೂ ಸಿಗಲಿಲ್ಲ. ನಿಮಗೆ ಇಲ್ಲೂ ಆತ್ಮದ್ದೇ ಚಿಂತೆನಾ?(:)

ಪ್ರಕಾಶಣ್ಣ..

ಯಾವ ಹುಡುಗಿ ಇಮೋಶನಲೀ ಬ್ಲಾಕ್ ಮೇಲ್ ಮಾಡಿದ್ದು? ಎಲ್ರೂ ಹಂಗೆ ಮಾಡಲ್ಲ. ಎಲ್ಲರನ್ನೂ ದೂರೋದೂ ಬೇಡ ಆಯಿತಾ? ನಾನು ಎಲ್ಲಾ ಹುಡುಗ್ರು ಹೀಗೇ ಕೀಟಲೆ ಮಾಡ್ತಾರೆ ಅಂದ್ನಾ? ಮತ್ತೆ ಹುಡುಗ್ರು ನಂಬರ್ ಚೇಂಜ್ ಮಾಡೋದು..ಪಕ್ಕಾ, ವರಿಜಿನಲ್ ಸುಳ್ಳು ಕಣಣ್ಣಾ..! ಮತ್ತೆ ಹುಡುಗ್ರು ಪಾಪ ಅಂದಿದ್ರಲ್ಲೂ '90%' ಸುಳ್ಳು ಇದೆ..ನೀ ಪಾಪ ಅಂತ ಎಲ್ರೂ ಪಾಪನಾ?! ನೀ ಸುಳ್ಳು ಸುಳ್ಳು ಹೇಳ್ತಿಯಾ..ನಿನ್ ಜೊತೆ ನಾ ಟೂ ಟೂ...!

ಶಿವಪ್ರಕಾಶ್ said...

ಸಿಂಧು ಅವರೇ,
ಕ್ಷಮಿಷಿ, ಚಿತ್ರ ಅವರೇ....
ಪಾಪ ಆ ಜೀವ ಎಷ್ಟು ನೊಂದಿತ್ತೋ... :D

PARAANJAPE K.N. said...

ಚಿತ್ರಾ,
ಪಾಪದ ಹುಡುಗನನ್ನು ಯಾಮಾರಿಸಿದರಲ್ಲ. ವಲೆ೦ಟೈನ್ಸ ಡೇ ಗೆ ಅದೇನು ಗಿಫ್ಟ್ ಹಿಡಕೊ೦ಡು ಕಾಯ್ತಿದ್ದನೋ ಏನೋ ?? ಹಳ್ಳಿ ಹುಡುಗಿನೇ ಇಷ್ಟು ಹುಶಾರಾದ್ರೆ ಇನ್ನು ಬೆ೦ಗ್ಳೂರಿನಲ್ಲೇ ಹುಟ್ಟಿ ಬೆಳೆದವರು ಇನ್ನೆ೦ಗಿರ್ಬಹುದು ??

shivu.k said...

ಪರ್ವಾಗಿಲ್ವೋ ಸಿಂಧು,

ಆಗಲೇ ದಡ್ಡಿ ಹುಡುಗಿ ಅಂದುಕೊಂಡೇ ಬೆಂಗಳೂರು ಹುಡುಗನಿಗೆ ಸರಿಯಾಗಿ ಟೋಪಿ ಹಾಕಿದ್ದೀಯಾ....

ಆದ್ರೆ ನನಗನ್ನಿಸುತ್ತೇ...ಇನ್ನು ಯಾವ್ಯಾವ ಹುಡುಗರಿಗೆ ಯಾವ ಯಾವ ಹೆಸರು ಕೊಟ್ಟಿದ್ದೀಯೋ ಅದೆಷ್ಟು ಏಮಾರಿಸಿದ್ದೀಯೋ ಗೊತ್ತಿಲ್ಲ....ನನ್ನೊಬ್ಬ ಗೆಳೆಯ ನಿನ್ನ ಬಗ್ಗೆ ತುಂಬಾ ಕುತೂಹಲ ತೋರಿಸ್ತಿದ್ದ....ನಾನವನಿಗೆ ಹೇಳಬೇಕು "ಹುಡ್ಗೀರಂದ್ರೆ ಡೇಂಜರಪ್ಪೋ, ಹುಷಾರಾಗಿರಪ್ಪೋ" ಅಂತ....

ತೇಜಸ್ವಿನಿ ಹೆಗಡೆ said...

ಚಿತ್ರಾ,

ಪಾಪ ಇಂಗು ತಿಂದ ಮಂಗನ ಹಾಗಾಗಿರಬಹುದು ಅವನ ಮುಖ ಆಗ :) ಪರ್ವಾಗಿಲ್ಲ ನೀನೂ ತುಂಬಾ ಹುಶಾರಿದ್ದೀಯಾ ಬಿಡು. ಎಷ್ಟೆಂದರೂ ದ.ಕ. ಜಿಲ್ಲೆಯ ಹುಡ್ಗಿಯಲ್ಲವಾ? ನಮ್ಮ ಊರಿನಕಡೆಯೇ ಆಯಿತಲ್ಲಾ :) :D

Laxman (ಲಕ್ಷ್ಮಣ ಬಿರಾದಾರ) said...

ಚಿತ್ರಾ.... ಹೇಗಿದ್ದೀರಿ? ನಿಮ್ಮ ಬರಹ ಮತ್ತು ಪ್ರತಿಕ್ರಿಯೆಗಳನ್ನ ಓದಿದೆ . ತುಂಬಾ ಚೆನ್ನಾಗಿದೆ ಬರಹ , ನಾನೆ ಬಸ್ ಮಿಸ್ ಮಾಡಿದ ಹಾಗೆ ಅನಿಸ್ತು. ನೀವು ನಂಬರ್ ಕೊಟ್ಟು ಇಷ್ಟೆಲ್ಲಾ ರಾದ್ದಂಥಕ್ಕೆ ಕಾರಣವಾಯ್ತು . ಹೋಗಲಿ ಬಿಡಿ ನಮಗೊಂದು ಚೆಂದದ ಬರಹ ಸಿಕ್ತಲ್ಲ. ನಮ್ಮ ಚಿತ್ರಾನೂ ಇಂಥ ಬರಹ ಚೆನ್ನಾಗಿ ಬರಿತಾಳೆ ಅನಿಸ್ತು .

Nagesh said...

chitra, awesome one! :)

ಅಂತರ್ವಾಣಿ said...

ಈ ತರ ಜಾಹಿರಾತುಗಳಿಗೆ ಸರಿಯಾದ ಮಾರ್ಗ ತೋರಿಸಿದ್ದೀರ.

ಪ್ರಕಾಶಣ್ಣ ಹಾಗು ಶಿವಣ್ಣ,
ಈ ತರ ಟೋಪಿಯನ್ನು "ಚಿತ್ರಾ ಟೋಪಿ" ಅಂತ ಕರಿಯೋಣ

damodara dondole said...

ok sokittu madam anubhava one thing namma hallili siguvantha athmiyaru illi sigodu sikkapatte kasta kanri

ಮಲ್ಲಿಕಾರ್ಜುನ.ಡಿ.ಜಿ. said...

ಇದು ನಿಜವಾಗ್ಲೂ ನಡೆದದ್ದಾ ಅಥವಾ ನಮ್ಮಂಥ ಬ್ಲಾಗಿಗರಿಗೆ ಪಟ್ಟಿ ಕಟ್ಟಿರೋದೊ?
ಅಮಾಯಕತನದ ಹಿಂದಿರೋ ಹುಷಾರಿತನಕ್ಕೆ ಮೆಚ್ಚುಗೆಗಳು.

ಹರೀಶ ಮಾಂಬಾಡಿ said...

ಅಯ್ಯೋ ಪಾಪ..:)

sunaath said...

ಈಗ ‘ರೋಮಾಂಚಕ ಅನುಭವ’ ಅನ್ನಿಸ್ತದೆ. ಆದರೆ, ಆ ಸಮಯದಲ್ಲಿ tension ಆಗ್ತಿರಬೇಕಲ್ವೆ?

Rajesh Manjunath - ರಾಜೇಶ್ ಮಂಜುನಾಥ್ said...

ಚಿತ್ರ,
ಎಲ್ಲಿದೆಯೋ ಆ ಮುಗ್ಧ ಹೃದಯ, ಅದೆಷ್ಟು ಓದ್ದಾಡಿತ್ತೋ ಅವತ್ತು, ಅದೆನೆನಿತ್ತೋ ಆ ಪುಣ್ಯಾತ್ಮನ ಜೋಳಿಗೆಯಲ್ಲಿ ಕೊಡಲಿಕ್ಕೆ...
ಪಾಪ ಅನ್ಸುತ್ತೆ ಹುಡುಗರ ಬಗ್ಗೆ ಯೋಚಿಸಿದರೆ :)

PaLa said...

:) ಸಕ್ಕತ್ತಾಗಿದೆ ನಿಂ ಕತೆ..
--
ಪಾಲ

ಚಿತ್ರಾ ಸಂತೋಷ್ said...

@ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ಆದರೆ ಬಹುತೇಕರಿಗೆ ಜಾಹೀರಾತು ಹುಡುಗನ ಬಗ್ಗೆ ಅನುಕಂಪವೇ ಮೂಡಿಬಂದಿದೆ. ಪಾಪ ಅನಿಸಿದೆ. ಆದರೆ, ಈ 'ಪಾಪ' ಕೇವಲ 60% ಮಾತ್ರ ಅಂತ ನನ್ನ ಅನಿಸಿಕೆ. ಇರಲಿ ಬಿಡಿ...ನೀವು ಹೇಗೆ ಹೇಳಿದ್ರೂ ಅದು ನಿಮ್ಮ ವೈಯಕ್ತಿಕ ಅಭಿಪ್ರಾಯ ಅಲ್ಲವೇ? ನಂಗೆ ಅದ್ರಲ್ಲಿ ತೀರ ಆಕ್ಷೇಪವೇನೂ ಇಲ್ಲ.

@ಶಿವಪ್ರಕಾಶ್... ಭಾರೀ ಅನುಕಂಪ ಇದ್ದಂಗಿದೆ..(:)

@ಪರಾಂಜಪೆ ಸರ್..ನೋಡಿ ನಾನಲ್ಲ ಯಾಮರಿಸಿದ್ದು..ನನ್ನಣ್ಣ!!

@ಶಿವಣ್ಣ...ಮತ್ತೆ ನಿಮಗೆ ಮಾತ್ರ 'ಟೋಪಿ' ಹಾಕಕೆ ಗೊತ್ತಾ? ನಂಗೂ ಗೊತ್ತು. ನಿಮ್ಮ ಕುತೂಹಲಭರಿತ ಗೆಳೆಯನಿಗೆ ಹಾಗೇ ಹೇಳಿಬಿಡಿ..ನಾನೂ ಡೇಂಜರ್ರು ಅಂತ..(:)

@ತೇಜಕ್ಕ..ಹೌದು, ದ.ಕ. ಹುಡುಗೀರು ಚುರುಕು ಇರ್ತಾರೆ.

@ಲಕ್ಷ್ಮಣ್ ಸರ್..ನಾನು ಸೂಪರ್ರು ಆಗಿದ್ದೀನಿ..ಆರಾಮು. ನಿಮ್ಮ ಮಾತುಗಳು ನನಗೆ ಪ್ರೋತ್ಸಾಹ, ಸ್ಫೂರ್ತಿ. ನಿಮ್ಮೆಲ್ಲರ ಪ್ರೀತಿಯ ಚಿತ್ರಾ ಆಗಿದ್ದೀನಿ ಅಲ್ವಾ? ಅದಕ್ಕಿಂತ ಖುಷಿ ಇನ್ನೇನಿದೆ?

ಹರೀಶ್ ಸರ್, ನಾಗೇಶ್, ಪಾಲಚಂದ್ರ..ಮತ್ತೆ ಬರ್ತೀರಲ್ಲಾ?

@ಜಯಶಂಕರ್..ಅವರ ಅಪ್ಪಣೆ ಮೇರೆಗೆ ಹೇಗೆ ಕರೀಬೇಕೋ ಹಾಗೆ ಕರೆಯಿರಿ. ಆದ್ರೆ ಶರಧಿನ ಮಿಸ್ ಮಾಡ್ಕೋಬೇಡಿ.

@ದಾಮೋದರ..ಹೇಗಿದ್ಯಾ? ಶರಧಿಗೆ ಭೇಟಿ ಕೊಟ್ಟಿದ್ದಕ್ಕೆ ವಂದನೆಗಳು. ಹಳ್ಳಿಯಲ್ಲಿರುವ ಪ್ರಾಮಾಣಿಕತೆ ಬೆಂಗಳೂರಲ್ಲೂ ನಾವು ನಿರೀಕ್ಷಿಸಿದರೆ ಅದು ನಮ್ಮ ಮೂರ್ಖತನವಾದೀತು ಅಲ್ವಾ?

@ಮಲ್ಲಿಯಣ್ಣ..ಅದೇಕೆ ಡೌಟು? ಈ ಬರಹ..ಹೊಸದಿಗಂತದಲ್ಲಿರುವಾಗಲೇ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಬ್ಲಾಗಿಗರು ಓದಿ ಖುಷಿಪಡಲಿ ಅಂತ ಮತ್ತೆ ಹಾಕಿದ್ದೀನಿ ಅಷ್ಟೆ. ಕಟ್ಟುಕತೆ ಹೇಳಲ್ಲ ನಾನು..!

@ಸುನಾಥ್ ಸರ್..ನನಗಿಂತ ನನ್ನಣ್ಣನೇ ಜಾಸ್ತಿ tension ಮಾಡಿಕೊಂಡಿದ್ದ..!

@ರಾಜೇಶ್..ನಿಮಗೆ ಪಾಪ ಅನಿಸುತ್ತಾ? ಇರಲಿ ಬಿಡಿ..ಮತ್ತೊಂದು ಮಜಾ ಕತೆ ಬರೆತೀನಿ..ಆವಾಗ ಯಾರು ಪಾಪ ಅನಿಸ್ತಾರೆ ನೋಡೋಣ..

"ನಿಮ್ಮ ಪ್ರೀತಿಗೆ ಅದರ ನೀತಿಗೆ ನೀಡಬಲ್ಲೆನೆ ಕಾಣಿಕೆ?..."
-ಪ್ರೀತಿಯಿಂದ,
ಚಿತ್ರಾ

ವಿ.ರಾ.ಹೆ. said...

ಮೊದಲು ಓದ್ತಾ ಇದ್ದ ಹಾಗೆ ಪಾಪ ಎಷ್ಟೊಂದು ಮುಗ್ದೆ ಅಂದುಕೊಂಡೆ, ಆಮೇಲೆ ಎಷ್ಟು ಕಿಲಾಡಿ ಅಂತ ಗೊತ್ತಾಯ್ತು :)
ಹುಡುಗರದ್ದು ಹಿಂಗೆ ಮಂಗ್ಯಾ ಬುದ್ಧಿ ಇದ್ದಿದ್ದೇ ಬಿಡಿ .

Anonymous said...

ಸಂದಿಗ್ಧ ಪರಿಸ್ಥಿತಿಯನ್ನ ಸಮರ್ಥವಾಗಿಯೇ ಎದುರಿಸಿದ್ದೀರಿ..
ಆಪ್ತವಾದ ಬರಹ!
-rj

ರಾಘವೇಂದ್ರ ಕೆಸವಿನಮನೆ. said...

Parvaagilwe!! software hudgange strong virus ne bittidiyaaa!!
buddivantara jilleli hutidku sarthaka aaytu bidu:) :)

Ragahavendra Kesavinamane

ಚಿತ್ರಾ ಸಂತೋಷ್ said...

@ವಿಕಾಸ್..ಪ್ರತಿಕ್ರಿಯೆಗೆ ಧನ್ಯವಾದಗಳು. ಹೌದು, ನಾನು ಸಕತ್ ಕಿಲಾಡಿಯಪ್ಪಾ..ಅದೂ ನಿಮ್ಮಂಥ ಹುಡುಗ್ರಿಗೆ!!!

@ರಾಘವೇಂದ್ರ ನಿಜವನ್ನೇ ಹೇಳಿದ್ಯಾ? ಹೌದು, ನಮ್ಮೂರು 'ಬುದ್ಧಿವಂತರ ಜಿಲ್ಲೆ'..(:)

@rj..ನಿಮ್ಮ ಪೂರ್ಣ ಹೆಸರು ಹೇಳ್ತಾ ಇದ್ರೆ ಚೆನ್ನಾಗಿರ್ತಾ ಇತ್ತು. ಪ್ರತಿಕ್ರಿಯೆಗೆ ಧನ್ಯವಾದಗಳು.

ಪ್ರೀತಿಯಿಂದ,
-ಚಿತ್ರಾ

VENU VINOD said...

ಛೇ ಛೇ ಅವನ ಹೃದಯ ಒಡೆದು ಬಿಟ್ರಿ...ಪಾಪ

VEERANNARAYANA said...

ಬೆಂಗಳೂರಿಗೆ ಬಂದ ಹೊಸತರಲ್ಲೇ ಆ ಥರ ಟೋಪಿ ಹಾಕಿಬಿಟ್ಟಿರಾ? ನಿಮ್ಮ ಗೆಳತಿ ಹೇಳಿದಂತೆ ದ.ಕ ಹುಡುಗೀರು ಬಲುಜೋರು...

Anonymous said...

ಬೆಂಗಳೂರಿಗೆ ಬಂದ ಹೊಸತರಲ್ಲೇ ಆ ಥರ ಟೋಕಿ ಹಾಕಿಬಿಟ್ಟಿರಾ? ನಿಮ್ಮ ಗೆಳತಿ ಹೇಳಿದಂತೆ ದ.ಕ ಹುಡುಗೀರಿ ಬಲು ಜೋರು...

ವಿ.ರಾ.ಹೆ. said...

@Chitra

ಈ ಬರಹ..ಹೊಸದಿಗಂತದಲ್ಲಿರುವಾಗಲೇ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಬ್ಲಾಗಿಗರು ಓದಿ ಖುಷಿಪಡಲಿ ಅಂತ ಮತ್ತೆ ಹಾಕಿದ್ದೀನಿ ಅಷ್ಟೆ. ಕಟ್ಟುಕತೆ ಹೇಳಲ್ಲ ನಾನು..!

ಪತ್ರಿಕೆಗಳಲ್ಲಿ ನಿಜಕತೆಗಳು ಮಾತ್ರ ಪ್ರಕಟ ಆಗ್ತವೆ ಅಂತ ಏನಿಲ್ಲ ಅಲ್ವಾ? :) ಅಲ್ಲ ಸುಮ್ನೆ ಹೇಳ್ದೆ ಅಷ್ಟೆ, ನಿಮ್ಮ ಕತೆ ನಿಜ ಅಂತ ಒಪ್ಪಿಕೊಳ್ತೀನಿ ಬಿಡಿ.

ಚಿತ್ರಾ ಸಂತೋಷ್ said...

@ವೇಣು ಸರ್..ಪ್ರತಿಕ್ರಿಯೆಗೆ ಧನ್ಯವಾದಗಳು. ಛೇ! ನಿಮಗೆಲ್ಲಾ ಈ 'ಹೃದಯ'ದ ಬಗ್ಗೆನೇ ಭಾರೀ ಅನುಕಂಪ ಮೂಡಿದೆಯಲ್ಲಾ....!!!!


@ನಾರಾಯಣ ಸರ್..ದ.ಕ. ಜಿಲ್ಲೆ ಹುಡುಗೀರು 'ಜೋರು' ಅಲ್ಲ, 'ಚುರುಕು' ಇದ್ದಾರೆ ಅಷ್ಟೇ..(:)

@ವಿಕಾಸ್..ಮಲ್ಲಿಯಣ್ಣನಿಗೆ ನಾನು ನೀಡಿರುವ ಉತ್ತರಕ್ಕೆ ನೀವು ಮತ್ತೊಂದು ರೌಂಡು ಉತ್ತರಿಸಿದ್ದಕ್ಕೆ ಧನ್ಯವಾದಗಳು. ನಾನು ನಿಜವನ್ನೇ ಹೇಳಿದ್ದೀನಿ ಮತ್ತು ನನ್ನ ಬರಹ ಈಗಾಗಲೇ ಪತ್ರಿಕೆಯಲ್ಲಿ ಪ್ರಕಟವಾಗಿತ್ತು ಎಂದು ಹೇಳುವುದಷ್ಟೇ. ನನ್ನ ಉತ್ತರದ ಉದ್ದೇಶ. ಸಾಂದರ್ಭಿಕವಾಗಿ ಹೇಳಿದ್ದೀನಿ ಅಷ್ಟೇ. ಪತ್ರಿಕೆಯಲ್ಲಿ ನಿಜವೇ ಪ್ರಕಟವಾಗ್ತವೆ ಅನ್ನೋದನ್ನು ಸಾಬೀತುಪಡಿಸಕೆ ನಾನು ಇಲ್ಲಿ ಹೊರಟಿಲ್ಲ!
ಪತ್ರಿಕೆಯಲ್ಲಿ ಪ್ರಕಟವಾಗಿರುವ ಬರಹಗಳು ನಿಜವೇ ಆಗಿರ್ತವೆಯೇ? ಅನ್ನೋ ಸಂಶಯಕ್ಕೆ ನಾನು ಉತ್ತರ ಹೇಳೋದಕ್ಕಿಂತ ಯಾರಾದ್ರೂ ಹಿರಿಯ ಪತ್ರಕರ್ತರಲ್ಲಿ ಕೇಳಿದ್ರೇ ಒಳ್ಳೆಯದು. ಯಾಕಂದ್ರೆ ನಾನು ಈಗ ತಾನೇ ಪತ್ರಿಕಾರಂಗಕ್ಕೆ ಕಾಲಿಟ್ಟ ಹುಡುಗಿ.
ನಾನು ಬ್ಲಾಗಿನಲ್ಲಿ ಬರೆದುದ್ದನ್ನು ನೀವು ಒಪ್ಪಿಕೊಳ್ಳಬೇಕು ಅನ್ನೋ ಆಶಯ ನನ್ನದಲ್ಲ. ನೀವು ಓದಬೇಕು..ಅನಿಸಿದ್ದನ್ನು ಹೇಳಬೇಕು. ಆವಾಗ ಅಲ್ಲಿ ನನ್ನ ಉತ್ತರಗಳಿಗೂ 'ಅವಕಾಶ'ಇದ್ರೆ ಹೇಳಬಲ್ಲೆ ಅಷ್ಟೇ.

-ಪ್ರೀತಿಯಿಂದ,
ಚಿತ್ರಾ

ಶ್ರೀನಿಧಿ.ಡಿ.ಎಸ್ said...

hehe:)

ಚಿತ್ರಾ ಸಂತೋಷ್ said...

@ಶ್ರೀನಿಧಿ ನಮಸ್ಕಾರ..ಅಪರೂಪಕ್ಕೆ ಬಂದು ಹಿಂಗೆ ನಕ್ಕಿದ್ದಕ್ಕೆ ಧನ್ಯವಾದಗಳು..(:)
-ಚಿತ್ರಾ